ಶುಕ್ರವಾರ, ಸೆಪ್ಟೆಂಬರ್ 17, 2021
22 °C

PV Web Exclusive: ಹಾಸ್ಯಚಕ್ರವರ್ತಿ ನರಸಿಂಹರಾಜು ಚಿತ್ರ ನೋಡಿದ್ದೀರಾ?

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಸಿನಿಮಾ ಜಗತ್ತಿನಲ್ಲಿ ಹಾಸ್ಯಕ್ಕೆ ಅಡಿಪಾಯ ಹಾಕಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಚಿತ್ರಕಲಾ ಕೃತಿಯೊಂದು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಮಂಡ್ಯದ ಸುಭಾಷ್‌ ನಗರ, ಆರ್‌ಪಿ ರಸ್ತೆಯ ಸರ್ಕಲ್‌ನಲ್ಲಿ ಕಟೌಟ್‌ ಮಾದರಿಯಲ್ಲಿ ಅಳವಡಿಸಲಾಗಿದ್ದ ಈ ಚಿತ್ರ ಹಲವು ವರ್ಷಗಳ ಕಾಲ ಜನರಿಗೆ ಮನರಂಜನೆ ನೀಡಿತ್ತು. ದಾರಿಯಲ್ಲಿ ಹೋಗುವವರೆಲ್ಲರೂ ನರಸಿಂಹರಾಜು ಅವರ ಅವತಾರ ಕಂಡು ನಗೆ ಬೀರಿ ಮುಂದೆ ಹೋಗುತ್ತಿದ್ದರು. ಬೈಕ್‌ ಸವಾರರು ಚಿತ್ರ ನೋಡುತ್ತಾ ಮುಂದಿನ ವಾಹನಗಳಿಗೆ ಮುತ್ತಿಕ್ಕಿದ ಉದಾಹರಣೆಗಳೂ ಇವೆ!

ಸೂಟು, ಬೂಟು ಧರಿಸಿದ್ದ ನರಸಿಂಹರಾಜು ಅವರು ಕಂಬವನ್ನೇರಿ ಕುಳಿತ ದೃಶ್ಯವನ್ನು ಬಣ್ಣಗಳಲ್ಲಿ ಒಡಮೂಡಿಸಲಾಗಿತ್ತು. ಸುಭಾಷ್‌ ನಗರದ ಆ ವೃತ್ತವನ್ನು ನರಸಿಂಹರಾಜು ಚಿತ್ರದಿಂದಲೇ ಗುರುತಿಸಲಾಗುತ್ತಿತ್ತು. ‘ನರಸಿಂಹರಾಜು ಚಿತ್ರದ ಬಳಿ ಬನ್ನಿ’ ಎಂದು ಜನರು ಜಾಗವನ್ನು ಗುರುತಿಸುತ್ತಿದ್ದರು. ಮಕ್ಕಳಿಗೆ ಈ ಚಿತ್ರ ಬಲು ಇಷ್ಟವಾಗಿತ್ತು, ಜನರು ಚಿತ್ರ ನೋಡುತ್ತಾ ನರಸಿಂಹರಾಜು ಅಭಿನಯಿಸಿರುವ ಚಿತ್ರಗಳ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದರು. ಪ್ರತಿಯೊಬ್ಬರೂ ತಲೆ ಎತ್ತಿ, ಕಣ್ಣರಳಿಸಿ, ಮುಖದ ಮೇಲೆ ನಗು ಅರಳಿಸಿಸುತ್ತಿದ್ದರು. ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿಗೆ ಬಂದು ಹಿರಿಯ ಕಲಾವಿದನ ಜನ್ಮದಿನ ಸಮಾರಂಭ ಆಯೋಜಿಸುತ್ತಿದ್ದರು. ಚಿತ್ರಕಲಾ ಕಲಾವಿದರಿಗೆ ಈ ಚಿತ್ರ ಸ್ಫೂರ್ತಿಯ ಚಿಲುಮೆಯಾಗಿತ್ತು. ಬೆಂಗಳೂರು, ಮೈಸೂರು ಜನರು ಕೂಡ ಈ ಚಿತ್ರಕ್ಕೆ ಸಾಕ್ಷಿಯಾಗಿದ್ದರು.


ಫ್ಲೆಕ್ಸ್‌ ಯುಗದಲ್ಲೂ ಬ್ಯಾನರ್‌ ಕಲೆ ಉಳಿಸಿಕೊಂಡಿರುವ ಮೋನ (ಮೋಹನ್‌– ನರಸಿಂಹಾಚಾರ್‌)

ಈತ್ರ ಬರೆದವರು ಯಾರು ಗೊತ್ತಾ? ಮಂಡ್ಯದಲ್ಲಿ ‘ಎರಡು ದೇಹ ಒಂದು ಜೀವ’ ಎಂದೇ ಪ್ರಸಿದ್ಧಿಪಡೆದಿರುವ, ‘ಮೋನ’ ಎಂದೇ ಗುರುತಿಸಿಕೊಂಡಿರುವ ‘ಮೋಹನ– ನರಸಿಂಹಾಚಾರ್‌’ ಕಲಾವಿದ ಜೋಡಿ ನರಸಿಂಹರಾಜು ಚಿತ್ರಕ್ಕೆ ಜೀವ ತುಂಬಿದ್ದರು. ಹಲವು ದಶಕಗಳ ಕಾಲ ಖ್ಯಾತನಾಮರ ಭಾವಚಿತ್ರ (ಪೋಟ್ರೇಟ್‌) ರೂಪಿಸುವಲ್ಲಿ ಮೋನ ಜೋಡಿ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿತ್ತು. ಕನ್ನಡ ಚಿತ್ರರಂಗದ ಹಲವು ಕಲಾವಿದರಿಗೆ ರೂಪ ಕೊಟ್ಟಿರುವ ಇವರಿಗೆ ನರಸಿಂಹರಾಜು ಚಿತ್ರ ಬಲು ದೊಡ್ಡ ಹೆಸರು ತಂದುಕೊಟ್ಟಿತ್ತು. ಈಗಲೂ ಮಂಡ್ಯದ ಹಲವು ಹಲವೆಡೆ ಅಂಗಡಿಗಳ ಮುಂದೆ, ಚಿತ್ರಮಂದಿರಗಳ ಮುಂದೆ ಈ ಭಾವಚಿತ್ರ ಹಾಕಿದ್ದಾರೆ.

ಮೋನ ಜೋಡಿ ಪ್ರತಿ ಆಯುಧಪೂಜೆ ದಿನ ಸುಭಾಷ್‌ ನಗರದ ಕಟೌಟ್‌ ಬದಲಾವಣೆ ಮಾಡುತ್ತಿದ್ದರು. ಹೊಸಹೊಸ ಕಲಾವಿದರ ಭಾವಚಿತ್ರ ಬರೆದು ತಮ್ಮ ‘ಮೋನ ಆರ್ಟ್ಸ್‌’ ಸಂಸ್ಥೆಯ ಪ್ರಚಾರ ಮಾಡುತ್ತಿದ್ದರು.

ಬೋರ್ಡ್‌, ಬ್ಯಾನರ್‌ ಬರಹ, ಹಸೆ ಕಲೆ, ಗೋಡೆ ಬರಹ, ಭಾವಚಿತ್ರ ರಚನೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಮೋಹನ– ನರಸಿಂಹಾಚಾರ್‌ ಜೋಡಿ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದ್ದರು. 35 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿರುವ ಈ ಜೋಡಿ ಕುಂಚದ ಸಹವಾಸದಿಂದ ‘ಎರಡು ದೇಹ ಒಂದು ಜೀವ’ದ ಬೆಸುಗೆಯಾಗಿದ್ದರು. ಮೃತಪಟ್ಟವರ ಭಾವಚಿತ್ರ ಬರವಣಿಗೆಯಲ್ಲಿ ಗಮನ ಸೆಳೆದಿದ್ದರು.


ಬಣ್ಣಗಳ ನಡುವೆ ಮೂಡಿಬಂದ ಪುಟ್ಟಣ್ಣ ಕಣಗಾಲ್‌

ಕುಂಚದಿಂದ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಲೇ ಖ್ಯಾತನಾಮ ಕಲಾವಿದರ ಚಿತ್ರ ಬರೆದು ಸಾಮಾನ್ಯ ಜನರಿಗೂ ಬಣ್ಣದ ಗೀಳು ಹತ್ತಿಸುತ್ತಿದ್ದರು. ಸುಭಾಷ್‌ನಗರದಲ್ಲಿ ಅವರು ಬರೆದ ಜಯಚಾಮರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಚಿತ್ರಗಳು ಭಕ್ತಿ ಭಾವ ಮೂಡಿಸಿದ್ದವು. ಹಲವರು ಕಟೌಟ್‌ಗೆ ಪೂಜೆ ಸಲ್ಲಿಸುತ್ತಿದ್ದರು. ಡಾ.ರಾಜ್‌ಕುಮಾರ್‌ ಅವರ ಚಿತ್ರ ಜನರಲ್ಲಿ ಭಾವನೆಗಳ ಅಲೆ ಅರಳಿಸಿತ್ತು. ಶಂಕರ್‌ನಾಗ್‌, ಕಲ್ಯಾಣ್‌ ಕುಮಾರ್‌, ಲೋಕೇಶ್‌, ಚಿ.ಉದಯಶಂಕರ್‌, ಪುಟ್ಟಣ ಕಣಗಾಲ್‌ ಮುಂತಾದವರ ಚಿತ್ರಗಳು ಪ್ರಸಿದ್ಧಿ ಪಡೆದಿದ್ದವು.


ಶಿವರಾಮ ಕಾರಂತರ ಚಿತ್ರ

ಕಾಡುಗಳ್ಳ ವೀರಪ್ಪನ್‌ ಡಾ.ರಾಜ್‌ಕುಮಾರ್‌ ಅವರನ್ನು ಅಪಹರಣ ಮಾಡಿದ್ದಾಗ ರಾಜ್‌ಕುಮಾರ್‌ ಅವರು ಅಯ್ಯಪ್ಪ ಸ್ವಾಮಿಯಾಗಿ ವೀರಪ್ಪನ್‌ನನ್ನು ಹುಲಿ ಮಾಡಿಕೊಂಡು ಬರುವ ದೃಶ್ಯದ ಚಿತ್ರ ಜನರ ಮನಸೂರೆಗೊಂಡಿತ್ತು. ಚಿತ್ರನಟರು ಮಾತ್ರವಲ್ಲದೇ ಮಂಡ್ಯದಲ್ಲಿ ‘ನಿತ್ಯ ಸಚಿವ’ ಎಂದೇ ಖ್ಯಾತಿ ಪಡೆದಿರುವ ಕೆ.ವಿ.ಶಂಕರಗೌಡ, ಶಿವರಾಮ ಕಾರಂತ, ಮದರ್‌ ತೆರೇಸಾ, ರಾಜಕುಮಾರಿ ಡಯಾನಾ ಅವರ ಚಿತ್ರಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು.

ಮೋನ ಜೋಡಿ ಚಿತ್ರಿಸಿರುವ ಸಂತರು, ಸ್ವಾಮೀಜಿಗಳ ಪೋಟ್ರೇಟ್‌ಗಳು ರಾಜ್ಯದ ಹಲವು ಮಠಗಳಲ್ಲಿವೆ. ಶಂಕರಾಚಾರ್ಯರು, ವಿವೇಕಾನಂದ, ಶಾರದಾದೇವಿ ಮುಂತಾದ ಚಿತ್ರಗಳು ಪ್ರಸಿದ್ಧಿ ಪಡೆದಿವೆ. ಅಂಗಡಿಗಳ ಫಲಕ ಬರವಣಿಗೆ ಜೊತೆಗೆ ಜಾಗೃತಿ ಬರಹ, ಅರಣ್ಯ ಇಲಾಖೆ ಸೇರಿ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಬರಹ, ಸಾರಿಗೆ ಇಲಾಖೆಯ ಕಿಲೋ ಮೀಟರ್‌ ಬರಹ ಇವರ ಕಾಯಕವಾಗಿತ್ತು.


ಜಯಚಾಮರಾಜೇಂದ್ರ ಒಡೆಯರ್‌ ಚಿತ್ರ

ಮೋನಾ ಅವರ ‘ಗಾಡಿ ಬರಹ’ ಮಂಡ್ಯ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿತ್ತು. ರೈತರು ತಮ್ಮ ಟೈರ್‌ಗಾಡಿಗಳಿಗೆ ಚಿತ್ರನಟರು, ರಾಷ್ಟ್ರನಾಯಕರು, ಅಧ್ಯಾತ್ಮ ಚಿಂತಕರ ಚಿತ್ರ ಬರೆಸುತ್ತಿದ್ದರು.


ಟೈರ್‌ ಗಾಡಿಯ ಮೇಲೆ ಚಿತ್ರ ನಟರ ಚಿತ್ರ

ಮೊದಲು ಮೋಹನ್‌ ಅವರು ಮಂಡ್ಯದ ಪೇಟೆಬೀದಿಯಲ್ಲಿದ್ದ ವಿವೇಕ್‌ ಆರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆರಗೋಡು ಸಮೀಪದ ಮರಲಿಂಗನದೊಡ್ಡಿ ಗ್ರಾಮಸ್ಥ ನರಸಿಂಹಚಾರ್‌ ಅವರು ವಿವೇಕ್‌ ಆರ್ಟ್ಸ್‌ಗೆ ಕೆಲಸ ಕೇಳಿಕೊಂಡು ತೆರಳಿದ್ದರು. ಇಬ್ಬರೂ ಕಲಾವಿದರು ವಿವೇಕ್‌ ಆರ್ಟ್ಸ್‌ ಸಂಸ್ಥೆಯಿಂದ ಜೋಡಿಯಾದರು. ನಂತರ ತಮ್ಮ ಹೆಸರಿನ ಮೊದಲ ಅಕ್ಷರ ಜೋಡಿಸಿಕೊಂಡು ‘ಮೋನ ಆರ್ಟ್ಸ್‌’ ಸಂಸ್ಥೆ ಕಟ್ಟಿದರು. ನರಸಿಂಹಚಾರ್‌ ಅವರು ಬೆಂಗಳೂರಿನ ಕೆನ್‌ ಚಿತ್ರಶಾಲೆಯಲ್ಲಿ ಡಿಪ್ಲೊಮಾ ಕೂಡ ಪಡೆದರು. ನಂತರ ಅವರು 2004ರಲ್ಲಿ ಸರ್ಕಾರಿ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡರು.

ಫ್ಲೆಕ್ಸ್‌ ಹಾವಳಿ: ಸದ್ಯ ಮುದ್ರಣ ಕ್ಷೇತ್ರದಲ್ಲಿ ಫ್ಲೆಕ್ಸ್‌ಗಳ ಹಾವಳಿ ಕಲಾವಿದರ ಬದುಕು ಕಿತ್ತುಕೊಂಡಿದೆ. ಬೋರ್ಡ್‌ ಬರಹವನ್ನೇ ನಂಬಿ ಬದುಕುತ್ತಿದ್ದ ಕಲಾವಿದರು ಈಗ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಆದರೆ ಮೋನ ಜೋಡಿ ಇಂದಿಗೂ ತಮ್ಮ ಕಲೆಯಿಂದ ವಿಮುಖವಾಗಿಲ್ಲ. ತಮ್ಮ ಕುಂಚ ನಂಬಿಯೇ ಬದುಕುತ್ತಿದ್ದಾರೆ. ಈಗಲೂ ಕೆಲವರು ಬ್ಯಾನರ್‌, ಬಣ್ಣದ ಬೋರ್ಡ್‌ ಬರೆಸುತ್ತಿದ್ದು ಆ ಮೂಲಕ ತಮ್ಮ ಮೋನಾ ಆರ್ಟ್ಸ್‌ ಸಂಸ್ಥೆ ಉಳಿಸಿಕೊಂಡಿದ್ದಾರೆ.

ಮೊದಲಿನ ರೀತಿಯಲ್ಲಿ ಈಗ ಕಟೌಟ್‌ ಚಿತ್ರ ಬರಹ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸುಭಾಷ್‌ನಗರದಲ್ಲಿ ದೊಡ್ಡ ಕಾಂಪ್ಲೆಕ್ಸ್‌ ಬಂದಿರುವ ಕಾರಣ ಅಲ್ಲಿ ಕಟೌಟ್‌ ಇನ್ನಿಲ್ಲವಾಗಿದೆ. ಆದರೆ ಅವರು ಹಿಂದೆಯೇ ಬರೆದಿದ್ದ ಕಲಾಕೃತಿಗಳು ಜನರ ನೆನಪಿನಲ್ಲಿ ಈಗಲೂ ಉಳಿದಿವೆ.

‘ನಾವು ಮೊದಲು ದಿನಕ್ಕೆ 40–50 ಬ್ಯಾನರ್‌ ಬರೆಯುತ್ತಿದ್ದೆವು. ಆದರೆ ಈಗ 4–5 ಬರೆಯುತ್ತಿದ್ದೇವೆ. ಫ್ಲೆಕ್ಸ್‌ ಅಳವಡಿಕೆ ನಿಷೇಧಿಸಿದ್ದರೂ ಜನರು ಈಗಲೂ ನಿಯಮ ಮೀರಿ ಫ್ಲೆಕ್ಸ್‌ಗಳನ್ನೇ ಬಳಸುತ್ತಿದ್ದಾರೆ. ಅಧಿಕಾರಿಗಳು ಕೋರ್ಟ್‌ ಹಾಗೂ ಸರ್ಕಾರದ ಆದೇಶಗಳನ್ನು ಅನುಷ್ಠಾನ ಮಾಡಿದರೆ ನಮ್ಮಂಥ ಕಲಾವಿದರ ಕೈಗೆ ಕೆಲಸ ಸಿಗುತ್ತದೆ’ ಎಂದು ಕಲಾವಿದ ಮೋಹನ್‌ ತಿಳಿಸಿದರು.

ಮೋಹನ್‌ ಅವಳಿ ಮಕ್ಕಳು ಕೂಡ ಕಲಾವಿದರೇ ಆಗಿದ್ದಾರೆ. ಪುತ್ರ ಲೋಹಿತ್‌ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂ.ಎಸ್‌ಸಿ ಪದವಿ ಪಡೆದಿದ್ದರೂ ಬಣ್ಣವನ್ನೇ ತಮ್ಮ ಬದುಕು ಮಾಡಿಕೊಂಡಿದ್ದಾರೆ. ನರಸಿಂಹಾಚಾರ್‌ ಅವರ ಪುತ್ರಿಯೊಬ್ಬರು ಚಿತ್ರಕಲಾ ಶಿಕ್ಷಕಿಯಾಗಿದ್ದಾರೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸತನದ ಚಿತ್ರಕಲೆ ರೂಢಿಸಿಕೊಳ್ಳಲು ಮೋನಾ ಮಕ್ಕಳು ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು