ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಿರಿ | ಕಥಾ ಕಣಜದ ‘ದಳವಾಯಿ’!

Last Updated 14 ಜನವರಿ 2023, 19:30 IST
ಅಕ್ಷರ ಗಾತ್ರ

ಎತ್ತಪ್ಪನ ಕಾವ್ಯ, ಜುಂಜಪ್ಪನ ಕಾವ್ಯ, ಚಿತ್ತಯ್ಯನ ಕಾವ್ಯದ ‘ನಿಧಿ’ ದಳವಾಯಿ ಚಿತ್ತಪ್ಪ. ವಯೋಸಹಜ ಕಾರಣದಿಂದ ಈಚಿನ ದಿನಗಳಲ್ಲಿ ಹೆಚ್ಚು ಮೌನಿಯಾಗಿದ್ದಾರೆ. ಈ ಜನಪದ ಸಿರಿಯನ್ನು ದಾಖಲಿಸುವ ಕೆಲಸ ಆಗುತ್ತಲೇ ಇಲ್ಲವಲ್ಲ?!

***

ಎಲೆಮರೆ ಕಾಯಿಯಂತೆ ಉಳಿದಿರುವ ಬಯಲುಸೀಮೆಯ ಜಾನಪದ ಗಾಯಕ, ಬಂಡ್ರಿಗೊಲ್ಲರ ಹಟ್ಟಿಯ ದಳವಾಯಿ ಚಿತ್ತಪ್ಪನವರ ದೇಹಕ್ಕೆ ವಯಸ್ಸಾಗಿದೆ. ಆದರೆ, ಅವರ ಕಂಠಸಿರಿಗೆ ಯಾವ ಮುಪ್ಪೂ ಆವರಿಸಿಲ್ಲ. ಕಥೆ ಹೇಳುವ ಶೈಲಿಗೆ ಸಹ ಆಯಾಸವಾಗಿಲ್ಲ. ಅವರ ಎದುರು ಕುಳಿತವರಿಗೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ.

ದಳವಾಯಿ ಚಿತ್ತಪ್ಪ, ವಿಜಯನಗರ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಗೊಲ್ಲರಹಟ್ಟಿಯವರು. ಅವರ ತಂದೆ ಮಾರನೋರ ದಳವಾಯಿ ದೊಡ್ಡಯ್ಯ. ದೊಡ್ಡಯ್ಯನವರಿಗೆ ಇಬ್ಬರು ಪತ್ನಿಯರು. ದೊಡ್ಡ ಈರಮ್ಮ ಮತ್ತು ಸಣ್ಣ ಈರಮ್ಮ. ಚಿತ್ತಪ್ಪನವರು ಸಣ್ಣ ಈರಮ್ಮನವರ ಮಗ. ಅವರಿಗೆ ಇಬ್ಬರು ತಂಗಿಯರೂ ಇದ್ದಾರೆ. ತಮ್ಮ ಇಪ್ಪತ್ತನೇ ವಯಸ್ಸಿಗೆ ತಾಯಿ ಕಳೆದುಕೊಂಡ ಚಿತ್ತಪ್ಪನವರನ್ನು ಸಾಕಿ ಸಲಹಿದ್ದು ಅವರ ದೊಡ್ಡಮ್ಮನೇ. ತಂದೆಯೂ ಬೇಗ ತೀರಿಕೊಂಡಿದ್ದರಿಂದ ಎಳವೆಯಲ್ಲೇ ಕುಟುಂಬದ ಹೊಣೆ ಇವರ ಹೆಗಲಿಗೆ ಬಿತ್ತು.

ದೇವರಿಗೆ ಜಾಡಿ ಹಾಸುವುದು, ಹಿರೇ ಜಾಡಿ ಹಾಸುವುದು ಇವರ ಕುಟುಂಬದ ಕೆಲಸ. ಬಂಡ್ರಿಗೊಲ್ಲರ ಹಟ್ಟಿಯಲ್ಲಿ ಈಗಲೂ ಇವರೇ ಜಾಡಿ ಹಾಸುತ್ತಾರೆ. ಐದು ಜನ ಗಂಡುಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳ ದೊಡ್ಡ ಸಂಸಾರ ಚಿತ್ತಪ್ಪನವರದು. ಕಾಡುಗೊಲ್ಲರ ಜಾನಪದ ಕಲೆಯನ್ನು ಕಾಪಿಟ್ಟುಕೊಂಡು ಬಂದವರಲ್ಲಿ ಇವರು ಹಿರೀಕರೇ.

ಚಿತ್ತಪ್ಪನವರಿಗೆ ಎತ್ತಪ್ಪನ ಕಾವ್ಯ, ಜುಂಜಪ್ಪನ ಕಾವ್ಯ, ಚಿತ್ತಯ್ಯನ ಕಾವ್ಯ, ಸಿದ್ದಯ್ಯ, ರಂಗಪ್ಪ ಹಾಗೂ ಗೌರಸಂದ್ರದ ಮಾರಕ್ಕನ ಪದಗಳನ್ನು ಕಲಿಸಿದವರು ದೊಡ್ಡ ಈರಮ್ಮನವರು. ‘ನನಗೆ ಹಾಡಲು ಕಲಿಸಿದ್ದು ನನ್ನ ದೊಡ್ಡಮ್ಮ, ತಾಯಿ ಇಲ್ಲದ ನಮ್ಮನ್ನು ಆಕೆ ತಾಯಿಯಂತೆ ಸಾಕಿದರು. ನಮ್ಮ ಸೋದರ ಮಾವಂದಿರಾದ ಈರಪ್ಪ, ದೊಡ್ಡೀರಪ್ಪ ಮತ್ತು ಬಾಲಪ್ಪ ಇವರೂ ನನಗೆ ಪದಗಳನ್ನು, ಸೋಬಾನೆ ಹಾಡುವುದನ್ನು ಕಲಿಸಿದರು. ಇವರೇ ನನ್ನ ಗುರುಗಳು’ ಎಂದು ಚಿತ್ತಪ್ಪನವರು ತಮ್ಮೊಳಗೆ ಒಬ್ಬ ಜಾನಪದ ಕಲಾವಿದನನ್ನು ಕಡೆದ ಶಿಲ್ಪಿಗಳನ್ನು ನೆನೆಯುತ್ತಾರೆ.

ದಳವಾಯಿ ಅವರು ನೋಡಲು ಎತ್ತರದ ಆಳು. ಅವರು ತೊಟ್ಟಿದ್ದ ಬಟ್ಟೆಯಂತೆಯೇ ಬೆಳ್ಳಗಿನ ಹುರಿಮೀಸೆ, ಎರಡೂ ಮುಂಗೈಯಲ್ಲಿ ಎದ್ದುಕಾಣುವ ಬೆಳ್ಳಿ ಕಡಗಗಳಿಂದ ಭೂಷಿತರಾದ ವ್ಯಕ್ತಿ ಅವರು. ಕಿವಿಯಲ್ಲಿ ಮಿಂಚುವ ಒಂಟಿ (ಕಿವಿಯೋಲೆ) ಬೇರೆ. ಅವರು ಕೈಯಲ್ಲಿ ಬಿದಿರು ಕೋಲು ಹಿಡಿದು ನಡೆದುಬರುತ್ತಿದ್ದರೆ, ಕಾಡುಗೊಲ್ಲರ ಪೂರ್ವಿಕರಂತೆಯೇ ಸತ್ಯಪಥದಲ್ಲಿ ಸಾಗುತ್ತಿರುವ ವಿನಮ್ರ ವ್ಯಕ್ತಿಯಂತೆ ಕಾಣುತ್ತಾರೆ.

ಸಂಡೂರು ಪರ್ವತ ಶ್ರೇಣಿಯ ತಪ್ಪಲಲ್ಲಿರುವ ಬಂಡ್ರಿಗೊಲ್ಲರ ಹಟ್ಟಿಯಲ್ಲಿ ಮಾರನೋರ ಗೊಲ್ಲರು, ಕಂಬೇರ ಗೊಲ್ಲರು, ಜೋಗೇರ ಗೊಲ್ಲರು, ಬೊಮ್ಮನೋರ ಗೊಲ್ಲರು ನೆಲೆಸಿದ್ದಾರೆ. ಕಾಡುಗೊಲ್ಲರು ಸಂಡೂರಿನ ಪರ್ವತ ಶ್ರೇಣಿಯನ್ನು ‘ಕರಿಮಲೆ’ ಎಂದೂ, ‘ಎತ್ತಪ್ಪನ ಹಾಸಿಗೆ’ ಎಂದೂ ಕರೆಯುತ್ತಾರೆ. ಈ ಪರ್ವತ ಶ್ರೇಣಿಯಲ್ಲಿಯೇ ಚಿತ್ತಯ್ಯ ಬೇಟೆಯಾಡಿದನೆಂದು ಹೇಳುವ ಅವರು, ಆತನ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಇದೇ ಬೆಟ್ಟಗಳ ಮೇಲೆ ಎತ್ತಪ್ಪ ತನ್ನ ಎತ್ತು, ದನಗಳನ್ನು ಮೇಯಿಸುತ್ತಿದ್ದ. ಸಂಜೆಯ ಹೊತ್ತಿಗೆ ಚದುರಿ ಹೋಗಿದ್ದ ಆವುಗಳನ್ನು ‘ಪೂಗೊಳವೆ’ (ಕೊಳಲು) ಊದಿ ಕರೆಯುತ್ತಿದ್ದ ಎಂದು ಹೇಳುತ್ತಾರೆ.

‘ನಗರ’ದಲ್ಲಿದ್ದ (ಸಂಡೂರಿನ ಪಕ್ಕದಲ್ಲಿರುವ ಈಗಿನ ಕೃಷ್ಣಾನಗರ) ಬೋರಿಯು ಎತ್ತಪ್ಪನಿಗೆ ಮರುಳಾಗಿ ಅವನ ಬೆನ್ನುಹತ್ತುತ್ತಾಳೆ. ಎಷ್ಟೇ ಪ್ರಯತ್ನ ಮಾಡಿದರೂ ಕೊನೆಗೆ ಎತ್ತಪ್ಪ ತನಗೆ ದಕ್ಕದಿದ್ದಾಗ ಅವಳನ್ನು ತನ್ನ ಬಂಟರಿಂದ ಇರಿದು ಕೊಲ್ಲುವಂತೆ ಮಾಡುತ್ತಾಳೆ. ಬೋರಿಯು ಹಾಕಿದ್ದ ಪಾರುಗಾವಲನ್ನು ಹೇಗೋ ದಾಟಿದ ಎತ್ತಪ್ಪನು, ತನ್ನ ಕರುಳು ಹೊರಬರದಂತೆ ಕಾಸಿದಟ್ಟಿ ಉಟ್ಟು ಅಲ್ಲಿಂದ ತಳುಕಿಗೆ ಬಂದು ಬೋರಿಗೆ ‘ಕರುವುಗಲ್ಲಾಗುವಂತೆ’ ಶಾಪವಿತ್ತು ದೇಹ ತ್ಯಜಿಸುತ್ತಾನೆ. ಎತ್ತಪ್ಪನನ್ನು ಕುರಿತು ಕಾಡುಗೊಲ್ಲರು ನಂಬಿರುವ ಐತಿಹ್ಯವಿದು.

ಚಳ್ಳಕೆರೆ ಸಮೀಪದ ತಳುಕಿನ ಗುಡ್ಡದಲ್ಲಿರುವ ಎತ್ತಪ್ಪನ ಸಮಾಧಿಯ ಮುಂದೆ ಈಗಲೂ ಕರುವುಗಲ್ಲಾಗಿ ಬೋರಿ ನಿಂತಿದ್ದಾಳಂತೆ. ಈ ಕಾರಣಕ್ಕಾಗಿಯೇ ಕರಿಮಲೆ ಮತ್ತು ತಳುಕಿನಗುಡ್ಡ ಕಾಡುಗೊಲ್ಲರಿಗೆ ಪವಿತ್ರ ತಾಣ. ಅದೊಂದು ಕಾಡುಗೊಲ್ಲರ ಸಾಂಸ್ಕೃತಿಕ ಅಸ್ಮಿತೆ. ಇದನ್ನೇ ದಳವಾಯಿ ಚಿತ್ತಪ್ಪನವರು ‘ಚಿತ್ತಯ್ಯನಂಥ ದೇವರಿಲ್ಲ; ಎತ್ತಪ್ಪನಂಥ ಗೌಡ ಯಾರೂ ಇಲ್ಲ’ ಎನ್ನುತ್ತಾರೆ. ಕರಿಮಲೆ ಭಾಗದ ಕಾಡುಗೊಲ್ಲರ ದೈನಂದಿನ ಬದುಕಿನಲ್ಲಿ, ಅವರ ನಂಬುಗೆಯಲ್ಲಿ ಚಿತ್ತಯ್ಯ ಮತ್ತು ಎತ್ತಪ್ಪನವರಿಗೇ ಮೊದಲ ಆದ್ಯತೆ.

ಚಿತ್ತಯ್ಯನ ಮದುವೆ ಪ್ರಸಂಗವನ್ನು ಹೇಳುವಾಗಲಂತೂ ಅವರ ಕೊರಳು ತಾರಕಕ್ಕೆ ಏರುತ್ತದೆ. ಗುಡ್ಡದ ಬೋರಿಯ ಬಂಟರು ಎತ್ತಪ್ಪನನ್ನು ಇರಿಯುವಾಗ, ಅವನನ್ನು ಕೋಟೆಯೊಳಗೆ ಬಂಧಿಸಿದ್ದಾಗ ಹಾಗೂ ತಳುಕಿನ ಗುಡ್ಡಕ್ಕೆ ಹೋಗಿ ದೇಹ ತ್ಯಜಿಸುವಾಗ ಚಿತ್ತಪ್ಪನವರ ಧ್ವನಿ ನೋವಿನಲ್ಲೇ ಮುಳುಗೆದ್ದು ಕಥೆ ದಾಟಿಸುತ್ತದೆ. ‘ಒಂದುನೂರು ಮೇಕೆ, ಎರಡುನೂರು ಕುರಿಗಳನ್ನು ಸಾಕಿದ್ದೆ’, ‘ಮಳೆ ಹೋದಾಗಲೆಲ್ಲಾ ಗಣೆ ಊದುತ್ತಾ ಕುಳಿತು ಒಬ್ಬನೇ ಹಾಡಿಕೊಳ್ಳುತ್ತಿದ್ದೆ’ ಎಂದೂ ಬಾಲ್ಯದ ನೆನಪಿಗೆ ಕ್ಷಣಹೊತ್ತು ಜಾರುತ್ತಾರೆ ದಳವಾಯಿ.

ದಳವಾಯಿ ಚಿತ್ತಪ್ಪ ಹಾಡುವ ಚಿತ್ತಯ್ಯನ ಮದುವೆ ಸಂದರ್ಭದ ಸೋಬಾನೆ ಮೈಮರೆಸುತ್ತದೆ. ‘ಹರಿಯೋ ನೀರಿನಾಗೆ ಹವಳದುಂಗುರ ಹಾಕಿ, ಎಳೆ ಬೆಳುದಿಂಗಳಲ್ಲಿ ಎರೆದಾರೆ ಧಾರೆಯಾ..’, ‘ನುಗ್ಗೆ ಮರದಡಿ ಬಗ್ಗಿ ಹೋದಾನು, ಬಾಳೆಗಿಡದ ಮರದಡಿ ಬಾಗಿಕೊಂಡು ಹೋದಾನು...’ ಈ ಸಾಲುಗಳನ್ನು ಹೇಳುವಾಗ ಅವರ ನುಡಿಗಳು ಸಂಗೀತದೊಂದಿಗೆ ಸಂಯೋಜಿತವಾಗಿ ಹದತಪ್ಪದಂತೆ ಕೇಳುಗರ ಕರ್ಣಗಳನ್ನು ತಣಿಸುತ್ತವೆ.

ಚಿತ್ತಪ್ಪನವರು ಶಾಲೆಯ ಮೆಟ್ಟಿಲು ತುಳಿದವರಲ್ಲ! ಆದರೆ, ಕಾಡುಗೊಲ್ಲರ ಸಮಗ್ರ ಕಾವ್ಯವೇ ಅವರ ಕಂಠದಲ್ಲಿದೆ. ಅವರ ಮಾತಿನಲ್ಲಿ ಇಡೀ ಕಾಡುಗೊಲ್ಲರು ಕಟ್ಟಿಕೊಂಡಿರುವ ಲೋಕದೃಷ್ಟಿ, ಲೌಕಿಕ ಬದುಕು, ಮೌಖಿಕ ಸಾಹಿತ್ಯ, ದೈವಸಂಬಂಧಿ ಆಚರಣೆ, ಕಾಡುಗೊಲ್ಲರ ಪಶುಪಾಲನೆ, ಕೃಷಿಜ್ಞಾನ ಎಲ್ಲವೂ ಕಣ್ಣಮುಂದೆ ಸುಳಿಯುತ್ತದೆ. ಅವರ ಕನ್ನಡ ಭಾಷಾ ಸಂಪತ್ತು ಕಾವ್ಯಾತ್ಮಕತೆ ಹಾಗೂ ಧ್ವನಿಪೂರ್ಣತೆಯಿಂದ ಕೂಡಿದೆ.

ಚಿತ್ತಪ್ಪನವರಲ್ಲಿ ಹುದುಗಿರುವ ಜಾನಪದ ಕತೆ, ಸೋಬಾನೆ ಪದಗಳನ್ನು ಸಂಗ್ರಹಿಸುವ ಕೆಲಸ ಆಗಬೇಕಿತ್ತು. ವಯೋಮಾನದ ಕಾರಣಕ್ಕೆ ಚಿತ್ತಪ್ಪನವರ ನೆನಪುಗಳು ಸ್ವಲ್ಪ ಸ್ವಲ್ಪವೇ ಮಾಸಲಾರಂಭಿಸಿವೆ. ಕತೆ, ಕಾವ್ಯಗಳ ಆದಿ, ಅಂತ್ಯಗಳು ಹಿಂದು ಮುಂದಾಗುತ್ತಿವೆ. ಅವರೀಗ ಹೆಚ್ಚು ಮೌನಿ. ಅವರು ಹೆಚ್ಚು ಹೆಚ್ಚು ಮೌನಕ್ಕೆ ಜಾರಿದಷ್ಟೂ ನಮ್ಮ ಜಾನಪದ ಅಷ್ಟಷ್ಟೇ ಸಾಂಸ್ಕೃತಿಕ ಸಂಪತ್ತನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT