ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾಂಟಮ್ ಸೈನ್ಸ್ ಮತ್ತು ಅದ್ವೈತ ದರ್ಶನದ ಸಮೀಕರಣ: ಪವನ್ ಕೆ. ವರ್ಮ ಪ್ರತಿಪಾದನೆ

ಜೈಪುರ ಸಾಹಿತ್ಯೋತ್ಸವ
Last Updated 26 ಜನವರಿ 2019, 13:08 IST
ಅಕ್ಷರ ಗಾತ್ರ

ಜೈಪುರ:‘ಹಿಂದುತ್ವದ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ. ಹಾಗಾಗಿ ಕೆಲವೇ ಕೆಲವರು ಹಿಂದುತ್ವದ ಬಗ್ಗೆ ತಾವು ಮಾತ್ರ ಮಾತನಾಡಬೇಕು ಎಂದು ಅಣತಿ ಮಾಡುತ್ತಿದ್ದಾರೆ. ಹಿಂದೂಗಳು ಏನು ಮಾಡಬೇಕು; ಏನು ಮಾಡಬಾರದು ಎಂದು ತೀರ್ಪು ನೀಡುತ್ತಿದ್ದಾರೆ. ಅವರನ್ನು ಎದುರಿಸಲಿಕ್ಕಾಗಿಯಾದರೂ ನಾವು ಹಿಂದೂ ಧರ್ಮದ ಮೂಲಚಿಂತನೆಗಳನ್ನು ಮನನ ಮಾಡಿಕೊಳ್ಳಬೇಕಿದೆ’ ಎಂದು ಲೇಖಕ, ಚಿಂತಕ ಪವನ್ ಕೆ. ವರ್ಮ ಹೇಳಿದರು.

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನ ಆದಿ ಶಂಕರಾಚಾರ್ಯರ ಸಾಧನೆ ಮತ್ತು ಚಿಂತನೆಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಒಬ್ಬ ದೇವರು, ಒಬ್ಬ ಪೋಪ್, ಒಂದು ಗ್ರಂಥದ ಆಧಾರದ ಮೇಲೆ ರೂಪುಗೊಂಡ ಧರ್ಮ ಇದಲ್ಲ. ಒಳಗೊಳ್ಳುವಿಕೆಯೇ ಹಿಂದುತ್ವದ ಮುಖ್ಯಗುಣ. ವೇದಗಳನ್ನು ನಿರಾಕರಿಸಿದ ಚಾರ್ವಾಕರಿಗೂ, ತಾಂತ್ರಿಕರಿಗೂ ಈ ಧರ್ಮದಲ್ಲಿ ಸ್ಥಾನ ಕೊಡಲಾಗಿದೆ’ ಎಂದರು.

‘ಭಾರತೀಯ ಸಂಸ್ಕೃತಿ ರೂಪಿಸಿದ ಅತ್ಯುತ್ಕೃಷ್ಟ ಮನಸ್ಸುಗಳಲ್ಲಿ ಶಂಕರರೂ ಒಬ್ಬರು’ ಎಂದು ಪ್ರತಿಪಾದಿಸಿದ ಅವರು, ‘ಶಂಕರರು ಬೌದ್ಧ ಧರ್ಮವನ್ನು ನಾಶಪಡಿಸಲು ಪ್ರಯತ್ನಿಸಿದ್ದರು ಎನ್ನುವುದು ಸುಳ್ಳು. ಬೌದ್ಧ ಧರ್ಮಕ್ಕೂ ಶಂಕರರ ಅದ್ವೈತ ಸಿದ್ಧಾಂತಕ್ಕೂ ಸಾಕಷ್ಟು ಸಾಮ್ಯತೆಗಳಿವೆ’ ಎಂದು ಹೇಳಿದರು.

‘ನಾವು ಭಾರತೀಯ ಚಿಂತನಮಾರ್ಗದ ವಿಕಾಸದ ಕುರಿತು ಅರಿತುಕೊಳ್ಳಬೇಕು. ಹಿಂದೆ ಮನೆ ಬಿಟ್ಟು ಕಾಡಿಗೆ ಹೋಗಿ ಸನ್ಯಾಸಿಗಳಾಗುತ್ತಿದ್ದದ್ದು ದೇವರನ್ನು ಒಲಿಸಿಕೊಳ್ಳಲಿಕ್ಕಲ್ಲ. ಈ ಜಗತ್ತಿನ–ಬದುಕಿನ ಆತ್ಯಂತಿಕ ಸತ್ಯವನ್ನು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ. ನಮ್ಮ ಹಲವು ಮೀಮಾಂಸೆಗಳ ಉದ್ದೇಶವೂ ಆತ್ಯಂತಿಕ ಸತ್ಯವನ್ನು ಹುಡುಕುವುದೇ ಹೊರತು ದೇವರನ್ನು ಕೇಂದ್ರವಾಗಿಸಿಕೊಂಡಿದ್ದಲ್ಲ’ ಎಂದು ವಿವರಿಸಿದರು.

ಕ್ವಾಂಟಮ್ ಸೈನ್ಸ್ ಮತ್ತು ಅದ್ವೈತ:

ಪವನ್ ಅವರ ಪ್ರಕಾರ ಕ್ವಾಂಟಮ್ ಸೈನ್ಸ್‌, ನ್ಯೂರಾಲಜಿ ಕ್ಷೇತ್ರಗಳಲ್ಲಿ ಇತ್ತಿಚೆಗೆ ನಡೆಯುತ್ತಿರುವ ಸಂಶೋಧನೆಗಳಿಗೂ ಶಂಕರರ ಅದ್ವೈತ ಸಿದ್ಧಾಂತಕ್ಕೂ ಸಾಮ್ಯತೆಗಳಿವೆ. ‘ಇಂದು ವಿಜ್ಞಾನ ಆವಿಷ್ಕರಿಸಿದ ಸಂಗತಿಗಳೆಲ್ಲ ಪುರಾಣಗಳಲ್ಲಿ ಮೊದಲೇ ಇತ್ತು ಎಂದು ಅಂಧವಾಗಿ ಪ್ರತಿಪಾದಿಸುವುದಕ್ಕೆ ನನ್ನ ಸಹಮತ ಇಲ್ಲ. ಆದರೆ ಭೌತವಿಜ್ಞಾನದ ಪ್ರಕಾರ ನಮ್ಮನ್ನು ಹೊರತುಪಡಿಸಿಯೂ ಈ ಬ್ರಹ್ಮಾಂಡದಲ್ಲಿ ಹಲವು ಗ್ರಹಗಳಿವೆ, ಗೆಲಾಕ್ಸಿಗಳಿವೆ. ಅವುಗಳ ಪರಿಮಾಣ ಅಗಾಧ ಎಂದು ವಿಜ್ಞಾನ ಹೇಳುತ್ತವೆ. ಶಂಕರರೂ ಬ್ರಹ್ಮ ಪರಿಕಲ್ಪನೆಯ ಕುರಿತು ಹೇಳುವಾಗ ‘ಅನಂತ’ ಎಂದು ಕರೆದರು. ಹೀಗೆ ಜಗತ್ತಿನ ಉಗಮಕ್ಕೆ ಸಂಬಂಧಿಸಿದ ವಿಜ್ಞಾನದ ಹಲವು ಸಂಶೋಧನೆಗಳಿಗೂ ಶಂಕರರ ಸಿದ್ಧಾಂತಕ್ಕೂ ಸಾಮ್ಯತೆಗಳು ಕಾಣಿಸುತ್ತವೆ’ ಎಂಬುದು ಅವರ ವಿವರಣೆ.

ಜಾತಿಪದ್ದತಿ ಪ್ರತಿಪಾದಿಸಿಲ್ಲ:

ಜಾತಿಪದ್ಧತಿಯ ಬಗ್ಗೆ ಶಂಕರಾಚಾರ್ಯರ ನಿಲುವನ್ನು ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘ಅವರು ಅಧ್ಯಾತ್ಮಮಾರ್ಗಿಗಳಾಗಿದ್ದರೇ ವಿನಾ ಸಮಾಜ ಸುಧಾರಕರಲ್ಲ. ಬ್ರಹ್ಮ ಸತ್ಯ; ಉಳಿದಿದ್ದೆಲ್ಲ ಮಿಥ್ಯೆ ಎಂದವರು ಪ್ರತಿಪಾದಿಸಿದರು. ಹಾಗೆಂದ ಮೇಲೆ ಜಾತಿಪದ್ಧತಿಗೆ ಸ್ಥಾನವೆಲ್ಲಿರುತ್ತದೆ?’ ಎಂದು ಪ್ರಶ್ನಿಸಿದರಲ್ಲದೇ ‘ಶಂಕರರು ಚಾಂಡಾಲನೊಬ್ಬನನ್ನು ತನ್ನ ಗುರು ಎಂದು ಸ್ವೀಕರಿಸಿದ್ದರು’ ಎಂದೂ ಹೇಳಿದರು.

‘ಶಂಕರಾಚಾರ್ಯ ಮತ್ತು ಮಂಡನ ಮಿಶ್ರ ಅವರ ನಡುವೆ ನಡೆದಿರುವ ವಾದ, ನಮ್ಮ ಸಂಸ್ಕೃತಿಯ ಸಭ್ಯ ಸಂವಾದಕ್ಕೊಂದು ಅತ್ಯುತ್ತಮ ಉದಾಹರಣೆ. ಆಗ ಯಾವ ಸೋಷಿಯಲ್ ಮೀಡಿಯಾ ಕೂಡ ಇರಲಿಲ್ಲ. ಹಲವು ದಿನಗಳ ಕಾಲ ನಡೆದ ಈ ವಾಗ್ವಾದದ ಬಗ್ಗೆ ಬಾಯಿಮಾತಿನ ಮೂಲಕವೇ ಜನರು ತಿಳಿದುಕೊಳ್ಳುತ್ತಿದ್ದರು. ಮಂಡನ ಮಿಶ್ರಾ ಅವರ ಪತ್ನಿ ಉಭಯ ಭಾರತಿ ಈ ಸಂವಾದದ ತೀರ್ಪುಗಾರರಾಗಿದ್ದರು. ಅವರ ಬಗ್ಗೆ ಶಂಕರಾಚಾರ್ಯರು ಪೂರ್ತಿ ನಂಬಿಕೆ ಇರಿಸಿದ್ದರು. ಅದ್ವೈತ ಸಿದ್ಧಾಂತದಲ್ಲಿಯೂ ಮಹಿಳೆಯರಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಶಂಕರರು ಸ್ಥಾಪಿಸಿದ ಎಲ್ಲ ಮಠಗಳಲ್ಲಿಯೂ ಶಕ್ತಿಪೀಠ ಇರುವುದೇ ಇದಕ್ಕೆ ನಿದರ್ಶನ’ ಎಂದು ಪವನ್ ಹೇಳಿದರು.

ಆಚರಣೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ‘ಶಂಕರರು ಮೋಕ್ಷದ ಮಾರ್ಗವನ್ನು ಪರ ಮತ್ತು ಅಪರ ವಿದ್ಯೆ ಎಂದು ಎರಡು ವಿಧದಲ್ಲಿ ವಿಂಗಡಿಸಿದ್ದರು. ಪರದ ಹಂತದಲ್ಲಿ ಎಲ್ಲ ರೀತಿಯ ಮಂತ್ರ, ಹೋಮ, ಧಾರ್ಮಿಕ ಆಚರಣೆಗಳನ್ನು ತಿರಸ್ಕರಿಸಿದ್ದಾರೆ. ಆದರೆ ಅಪರ ಹಂತದಲ್ಲಿ ಪೂಜೆ, ಆಚರಣೆಗಳಿಗೆ ಅವಕಾಶ ಇದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT