ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ: ಬಡವಾದ ಬಡಗು

Last Updated 1 ಮೇ 2021, 19:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೆ ನಿಧನರಾದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಎಂ.ಎ. ಹೆಗಡೆ ಅವರು ಬಹುಶ್ರುತ ವಿದ್ವಾಂಸರಾಗಿದ್ದರು. ಕೆರೆಮನೆ ಮೇಳದಲ್ಲಿ ಯಕ್ಷಗಾನದ ಪಟ್ಟುಗಳನ್ನು ಕಲಿತ ಅವರು, ಸಮರ್ಥ ಅರ್ಥಧಾರಿಯಾಗಿ ಗುರುತಿಸಿಕೊಂಡವರು. ಸಂಸ್ಕೃತ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದವರು. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಅವರ ಶಿಷ್ಯರೊಬ್ಬರು ಗುರುವಿನೊಂದಿಗೆ ನಡೆಸಿದ ಒಂದು ಆತ್ಮೀಯ ಅನುಸಂಧಾನ ಇಲ್ಲಿದೆ...

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನಿನಲ್ಲಿ ವಿಶ್ವನಾಥ ಭಟ್ಟರ ‘ಸದ್ಗತಿ’ ಪುಸ್ತಕ ಬಿಡುಗಡೆ ಸಮಾರಂಭ. ಪ್ರೊ.ಎಂ.ಎ.ಹೆಗಡೆ ಅವರ ಅಧ್ಯಕ್ಷತೆ. ನಾನು ಒಬ್ಬ ಅತಿಥಿ. ನಾನು ಮಾತನಾಡುವಾಗ ‘ಎಂ.ಎ.ಹೆಗಡೆ ಅವರು ನನಗೆ ಗುರುಗಳು. ಎರಡು ವರ್ಷ ಅವರು ನನಗೆ ಸಂಸ್ಕೃತ ಕಲಿಸಿದ್ದಾರೆ. ಆದರೆ ನನಗೆ ಸಂಸ್ಕೃತ ಬರಲೇ ಇಲ್ಲ’ ಎಂದೆ. ತಕ್ಷಣವೇ ಎದ್ದು ನಿಂತ ಹೆಗಡೆ ‘ಅದರಲ್ಲಿ ನನ್ನ ತಪ್ಪು ಏನೂ ಇಲ್ಲ’ ಎಂದರು.

ಇನ್ನೊಮ್ಮೆ ಶಿರಸಿಯಲ್ಲಿ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ. ಭಾಗವತರೊಬ್ಬರು ಲವಕುಶ ಕಾಳಗದ ‘ಚೆಲುವರನು ನೋಡಿದರೆ’ ಪದ್ಯವನ್ನು ತಮ್ಮದೇ ಶೈಲಿಯಲ್ಲಿ ಹಾಡಿದರು. ಅದು ಹೆಗಡೆ ಅವರಿಗೆ ಇಷ್ಟವಾಗಲಿಲ್ಲ. ಪ್ರೇಕ್ಷಕರ ಮಧ್ಯದಲ್ಲಿ ಕುಳಿತಿದ್ದ ಅವರು ಎದ್ದು ನಿಂತು ‘ಈ ಪದ್ಯ ಹೀಗೆ ಹಾಡುವುದಲ್ಲ. ಶ್ರೀರಾಮ ಮಕ್ಕಳನ್ನು ನೋಡಿ ಖುಷಿಯಾಗಿ ಹಾಡುವ ಹಾಡು ಅದು. ಲವ ಕುಶರನ್ನು ನೋಡಿದರೆ ಯಾರಿಗಾದರೂ ಸಂತೋಷವಾಗುತ್ತದೆ. ನೀವು ಹೀಗೆ ವಿಷಾದದಿಂದ ಹಾಡು ಹೇಳಿದರೆ ಹೇಗೆ?’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ನಮ್ಮನ್ನು ಅಗಲಿದ ವಿದ್ವಾಂಸ, ಚಿಂತಕ, ಯಕ್ಷಗಾನ ಕವಿ, ಅರ್ಥಧಾರಿ ಪ್ರೊ.ಎಂ.ಎ.ಹೆಗಡೆ ಇದ್ದಿದ್ದೇ ಹಾಗೆ. ತಮಗೆ ಸರಿ ಇಲ್ಲ ಎನ್ನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಹೇಳುತ್ತಿದ್ದರು. ಹೊಸ ಹೊಸ ಚಿಂತನೆಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಹೊಸಬರ ಸಮರ್ಥನೆಗೆ ತಾವು ಶ್ರಮವಹಿಸಿ ಅಧ್ಯಯನ ಮಾಡಿ ಬೆಂಬಲಿಸುತ್ತಿದ್ದರು. ಎಂ.ಎ.ಹೆಗಡೆ ಅವರಿಗಿಂತ ದೊಡ್ಡ ವಿದ್ವಾಂಸರು ಇರಬಹುದು. ಅವರಿಗಿಂತ ಅದ್ಭುತ ಅರ್ಥಧಾರಿಗಳೂ ಇರಬಹುದು. ಅತ್ಯುತ್ತಮ ಪ್ರಸಂಗ ಕರ್ತರೂ ಸಿಗಬಹುದು. ಆದರೆ ‘ನಾನು ಇದ್ದೇನೆ. ನೀನು ಮುಂದುವರಿ’ ಎಂದು ಪ್ರೋತ್ಸಾಹಿಸುವ ಮತ್ತೊಬ್ಬ ಯಕ್ಷಗಾನ ವಿದ್ವಾಂಸ ಸಿಗುವುದು ವರ್ತಮಾನದಲ್ಲಿ ಕಷ್ಟ. ಬಡಗುತಿಟ್ಟಿನ ಯಕ್ಷಗಾನ ಪ್ರೊ.ಎಂ.ಎ.ಹೆಗಡೆ ಅವರನ್ನು ಕಳೆದುಕೊಂಡು ಸದ್ಯಕ್ಕಂತೂ ಬಡವಾಗಿದೆ.

ಯಕ್ಷಗಾನದ ಬಗ್ಗೆ ಅವರದ್ದು ಹೊಸ ದೃಷ್ಟಿಕೋನ. ಹೊಸ ಪ್ರಸಂಗಗಳು ಬಂದಿವೆ, ಸಂಪ್ರದಾಯ ಬದಲಾಗಿದೆ ಎಂದು ಹಲವರು ಕೊರಗುತ್ತಿರುವಾಗಲೇ ಎಂ.ಎ.ಹೆಗಡೆ ಹೊಸತನ ಬರಬೇಕು ಎಂದು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದರು. ಸಂಪ್ರದಾಯ ಬದಲಾಗಬೇಕು. ಆದರೆ ಅದರಲ್ಲಿ ಔಚಿತ್ಯದ ಪ್ರಜ್ಞೆ ಇರಬೇಕು ಎಂದು ಅವರು ಬಯಸುತ್ತಿದ್ದರು. ಯಕ್ಷಗಾನ ಕುಣಿತದಲ್ಲಿ ಕಸರತ್ತು ಪ್ರದರ್ಶನಕ್ಕೆ ಅವರ ವಿರೋಧ ಇರಲಿಲ್ಲ. ಆದರೆ ಯಾವ ಪಾತ್ರಕ್ಕೆ ಕಸರತ್ತು ಬೇಕು, ಯಾವುದಕ್ಕೆ ಬೇಡ ಎನ್ನುವ ವಿವೇಚನೆ ಕಲಾವಿದನಿಗೆ ಇರಬೇಕು ಎನ್ನುವುದು ಅವರ ಸ್ಪಷ್ಟ ಅಭಿಮತವಾಗಿತ್ತು. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಹೊಸ ಹೊಸ ನೃತ್ಯಗಳನ್ನು ಪ್ರದರ್ಶಿಸಿದರು. ಜನರು ಅದನ್ನು ಮೆಚ್ಚಿದರು. ಅದೇ ರೀತಿ ಕಣ್ಣಿಮನೆ ಗಣಪತಿ ಕಿರೀಟವನ್ನು ನೆಲಕ್ಕೆ ಮುಟ್ಟಿಸಿ ಕುಣಿಯುತ್ತಿದ್ದರು. ಅಭಿಮನ್ಯು, ವೃಷಸೇನ ಮುಂತಾದ ಪಾತ್ರಗಳಿಗೆ ಇದು ಓಕೆ. ಅದೇ ಕರ್ಣ, ಅರ್ಜುನ ಮುಂತಾದ ಪಾತ್ರಗಳಿಗೆ ಸಲ್ಲ ಎನ್ನುತ್ತಿದ್ದರು ಅವರು.

ಕೆರೆಮನೆ ಶಿವರಾಮ ಹೆಗಡೆ ಪಾತ್ರವನ್ನು ನೋಡಿದವರು ಇವರಿಗಿಂತ ಮೂಡ್ಕಣಿ ನಾರಾಯಣ ಹೆಗಡೆ ಚೆನ್ನಾಗಿ ಮಾಡುತ್ತಿದ್ದರು ಎಂದು ಹೇಳುವುದು, ಕೆರೆಮನೆ ಶಂಭು ಹೆಗಡೆ ಪಾತ್ರವನ್ನು ನೋಡಿ ಶಿವರಾಮ ಹೆಗಡೆ ಚೆನ್ನಾಗಿ ಮಾಡುತ್ತಿದ್ದರು ಎಂದು ವಾದಿಸುವುದು, ಕೊಂಡದಕುಳಿ ರಾಮಚಂದ್ರ ಹೆಗಡೆ ಪಾತ್ರವನ್ನು ನೋಡಿ ಶಂಭು ಹೆಗಡೆಯೇ ಅತ್ಯುತ್ತಮ ಎಂದು ವಿಮರ್ಶೆ ಮಾಡುವುದನ್ನು ಅವರು ಒಪ್ಪುತ್ತಿರಲಿಲ್ಲ. ಯಾಕೆ ಹೀಗೆ ವಿಮರ್ಶೆ ಮಾಡುತ್ತಾರೆ ಎನ್ನುವುದಕ್ಕೂ ಅವರ ಬಳಿ ಉತ್ತರ ಇತ್ತು. ‘ನಾವು ಚಿಕ್ಕವರಿದ್ದಾಗ ದೊಡ್ಡವರ ಪಾತ್ರವನ್ನು ನೋಡಿ ನಮ್ಮ ಮನದಲ್ಲಿ ಒಂದು ಆಕೃತಿಯನ್ನು ಸೃಷ್ಟಿ ಮಾಡಿಕೊಂಡಿರುತ್ತೇವೆ. ನಮಗೆ ಅದೇ ಯಾವಾಗಲೂ ಚಲೋ ಅನ್ನಿಸುತ್ತದೆ. ಅದಕ್ಕೆ ಅವರು ಚೆನ್ನಾಗಿ ಮಾಡುತ್ತಿದ್ದರು, ಈಗಿನವರು ಆ ಮಟ್ಟಕ್ಕೆ ಬೆಳೆದಿಲ್ಲ ಎಂದು ಹೇಳುತ್ತೇವೆಯೇ ವಿನಾ ಈಗಿನ ಕಲಾವಿದರು ಕಡಿಮೆ ಎಂದಲ್ಲ’ ಎನ್ನುವುದು ಅವರ ಸಮಜಾಯಿಷಿ.

ಎಲ್ಲ ಕಲೆಗಳೂ ಶಾಸ್ತ್ರೀಯವೂ ಹೌದು, ಜಾನಪದವೂ ಹೌದು. ಕಲೆ ಬೆಳೆಯುವುದಕ್ಕೆ ಈ ಗುಣ ಅಗತ್ಯ. ಹಿಂದಿನದು ಚೆನ್ನಾಗಿದೆ, ಈಗಿನದು ಎಲ್ಲ ಹಾಳು ಎನ್ನುವುದು ತಪ್ಪು. ಕಾಲ ಕಾಲಕ್ಕೆ ಕಲೆ ಬದಲಾಗುತ್ತದೆ ಮತ್ತು ಹಾಗೆ ಬದಲಾಗುವುದರಿಂದಲೇ ಉಳಿಯುತ್ತದೆ ಎಂದು ಹೇಳುತ್ತಿದ್ದ ಅವರು ‘ಪ್ರೇಕ್ಷಕರಿಗೆ ಏನು ಬೇಕು ಎಂದು ಕಲಾವಿದರೇ ಚಿಂತಿಸಬೇಕು. ಯಾವ ಪ್ರೇಕ್ಷಕನೂ ನನಗೆ ಇದು ಕೊಡಿ, ಅದು ಕೊಡಿ ಎಂದು ಕೇಳುವುದಿಲ್ಲ. ಪೌರಾಣಿಕ ಪ್ರಸಂಗಗಳಿಂದ ನಮಗೆ ಬೋರಾಗಿದೆ, ಸಾಮಾಜಿಕ ಕಥೆಗಳನ್ನು ಕೊಡಿ ಎಂದು ಯಾವ ಪ್ರೇಕ್ಷಕ ಕೇಳಿದ್ದ? ಕವಿಗಳು ಕಲಾವಿದರು ಸೇರಿ ಹೊಸ ಪ್ರಸಂಗ ಸಿದ್ಧಮಾಡಿ ಬಡಿಸಿದರು. ಜನ ಕೆಲವನ್ನು ಒಪ್ಪಿಕೊಂಡರು. ಕೆಲವನ್ನು ಬಿಟ್ಟರು. ಇಷ್ಟ ಎಂದು ದಿನಾಲೂ ಒಂದೇ ತರಹ ಅಡುಗೆ ಮಾಡಿದರೆ ಅದು ಹಳಸಿ ಹೋಗುತ್ತದೆ. ಹಳಸಿದ ಮೇಲೆ ಹೊಸತು ಬರುತ್ತದೆ. ಅದು ಪ್ರಕೃತಿ ನಿಯಮ ಎನ್ನುವುದು ಅವರ ನಂಬಿಕೆ.

ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ, ಶಿವಾನಂದ ಅವರ ಪುತ್ರ ಶ್ರೀಧರ ಜೊತೆಗೆ ಕೆಲಸ ಮಾಡಿದ ಎಂ.ಎ.ಹೆಗಡೆ ಕೆರೆಮನೆ ಮೇಳದಲ್ಲಿಯೇ ಯಕ್ಷಗಾನದ ಪಟ್ಟುಗಳನ್ನು ಕಲಿತವರು. ಅದಕ್ಕೆ ನಿಷ್ಠರಾಗಿದ್ದವರು. ಕಾಲೇಜು ಪ್ರಾಧ್ಯಾಪಕರಾಗಿದ್ದರೂ ಯಕ್ಷಗಾನ ಲೋಕದಲ್ಲಿ ಮಿಂಚಿದವರು. ತಾಳಮದ್ದಲೆಯಲ್ಲಿಯೂ ಸಮರ್ಥ ಅರ್ಥಧಾರಿ ಎಂದು ಗುರುತಿಸಿಕೊಂಡವರು. ವಾಸುದೇವ ಸಾಮಗರ ಸಂಯಮಂ ಕೂಟದಲ್ಲಿ ಸಂಚರಿಸಿದವರು. ತಾಳಮದ್ದಲೆ ಎನ್ನುವುದು ಭಾವನಾತ್ಮಕತೆ ಮತ್ತು ವೈಚಾರಿಕತೆಯ ಹದವಾದ ಸಮ್ಮಿಶ್ರಣದಿಂದ ಪಾಕವಾದಾಗ ಮಾತ್ರ ರುಚಿಸುತ್ತದೆ ಎಂದು ಅವರು ಹೇಳುತ್ತಿದ್ದರು. ತಾಳಮದ್ದಲೆಯಲ್ಲಿ ವಿದ್ವತ್ ಪ್ರದರ್ಶನ ತಪ್ಪಲ್ಲ. ಆದರೆ ಯಾವ ಪಾತ್ರಕ್ಕೆ ವಿದ್ವತ್ ಬೇಕು ಎನ್ನುವುದು ತಿಳಿದಿರಬೇಕು ಎನ್ನುವುದು ಅವರ ವಾದ. ಸಂಸ್ಕೃತ ಶ್ಲೋಕಗಳನ್ನು ಉದಾಹರಿಸುವ ಬಗ್ಗೆಯೂ ಅವರ ತಕರಾರು ಇರಲಿಲ್ಲ. ಆದರೆ ಸಂಸ್ಕೃತ ಶ್ಲೋಕ ಹೇಳಿದರೆ ಅದರ ಅರ್ಥವನ್ನೂ ಹೇಳಬೇಕು ಎಂದು ಅವರು ವಿನಂತಿಸುತ್ತಿದ್ದರು. ತಾಳಮದ್ದಲೆ ನಾದದ ಆವರಣದಲ್ಲೇ ಇರಬೇಕು. ದೀರ್ಘ ಮಾತಾಗಲೀ, ದೀರ್ಘ ಹಿಮ್ಮೇಳವಾಗಲೀ ಅಪೇಕ್ಷಣೀಯ ಅಲ್ಲ. ಪಾತ್ರೋಚಿತ ಭಾಷೆ ಬಳಸಿ ಪ್ರದರ್ಶನಕ್ಕೆ ನ್ಯಾಯ ಸಲ್ಲಿಸುವುದೇ ಮುಖ್ಯವಾಗಬೇಕು ಎಂದು ಅವರು ವಾದಿಸುತ್ತಿದ್ದರು.

ಪ್ರಾಂಶುಪಾಲರಾಗಿ ಯಶಸ್ವಿಯಾಗಿದ್ದ ಅವರು ಯಕ್ಷಗಾನ ಅಕಾಡೆಮಿಯಲ್ಲಿಯೂ ಯಶಸ್ಸಿನ ದಾರಿಯಲ್ಲಿಯೇ ಇದ್ದರು. ಸಮಗ್ರ ಯಕ್ಷಗಾನ ಸಾಹಿತ್ಯ ಚರಿತ್ರೆ, ಕಲಾವಿದರ ಮಾಹಿತಿ ಕೋಶ ಮುಂತಾದ ಯೋಜನೆಗಳನ್ನು ಸಿದ್ಧಪಡಿಸಿದ್ದರು. ಕೋವಿಡ್ ಕಾಲದಲ್ಲಿ ಅಂತರ್ಜಾಲದಲ್ಲಿ ಹೊಸ ಹೊಸ ಪ್ರಯೋಗ ಮಾಡಿದ್ದರು.

ವಿಮರ್ಶೆ ಸರಿ ಇಲ್ಲ ಎಂದು ಹೇಳುವವರಿಗೆ ಅವರು ಹೇಳುತ್ತಿದ್ದ ಮಾತು ‘ವಿಮರ್ಶೆ ಬೇಡ ಎಂದರೆ ಚಪ್ಪಾಳೆಗೂ ಖುಷಿಯಾಗಬೇಡಿ’ ಎಂದು. ‘ಯಕ್ಷಗಾನ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?’ ಎಂದು ಯಾರಾದರೂ ಕೇಳಿದರೆ ಥಟ್ಟನೆ ಅವರು ‘ಯಕ್ಷಗಾನಕ್ಕೆ ಕೊಡುಗೆ ಕೊಡಲು ನಾನು ಯಾರು? ಕೊಡುಗೆ ಕೊಟ್ಟಿದ್ದೇನೆ ಎನ್ನುವುದು ಅಹಂಕಾರ. ಯಕ್ಷಗಾನವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಯಕ್ಷಗಾನ ನನಗೆ ಬೇಕಾದಷ್ಟು ಕೊಟ್ಟಿದೆ. ಯಕ್ಷಗಾನಕ್ಕೆ ಕೊಡುಗೆ ಕೊಡುತ್ತೇನೆ, ಅದನ್ನು ಉಳಿಸುತ್ತೇನೆ ಎನ್ನುವುದೆಲ್ಲಾ ಸುಳ್ಳು. ಯಕ್ಷಗಾನಕ್ಕೆ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಇದೆ. ಬಹಳ ಕಾಲದಿಂದ ಉಳಿದಿದೆ. ಮುಂದೆಯೂ ಉಳಿಯುತ್ತದೆ’ ಎಂದು ಹೇಳುತ್ತಿದ್ದರು. ಹೀಗೆ ಅವರು ಇದ್ದಿದ್ದೇ ಹಾಗೆ. ಅನಿಸಿದ್ದನ್ನು ಹೇಳುತ್ತಾ ಬದುಕಿದರು.

ಅವರು ನಿಧನರಾಗುವುದಕ್ಕೆ ಒಂದು ಗಂಟೆ ಮೊದಲು ನನಗೆ ದೂರವಾಣಿ ಕರೆ ಮಾಡಿದ್ದರು. ‘ನನಗೊಂದು ರೂಂ ಬೇಕು’ ಎಂದರು. ‘ನಿಮಗೆ ಎಂಥಾ ರೂಂ ಬೇಕು’ ಎಂದು ಕೇಳಿದೆ. ‘ನನಗೆ ಕೋವಿಡ್ ಆಗಿದೆ’ ಎಂದರು. ‘ತಕ್ಷಣವೇ ರೂಂ ವ್ಯವಸ್ಥೆ ಮಾಡುವೆ’ ಎಂದೆ. ಅದರಂತೆ ಅವರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಹೋಗುವುದಕ್ಕೆ ಮೊದಲೇ ಕೊನೆಯುಸಿರೆಳೆದರು. ಅದರಲ್ಲಿಯೂ ಒಂದು ಪಾಠ. ‘ರೂಂ ಕೊಡಿಸುವ ಶಕ್ತಿ ನಿನಗೆ ಇಲ್ಲ. ಆ ಅಹಂಕಾರ ಬೇಡ. ಯಾರಿಗೆ ಯಾವ ರೂಂ ಕೊಡಿಸಬೇಕು ಎನ್ನುವುದನ್ನು ನಿರ್ಧರಿಸುವ ಶಕ್ತಿ ಬೇರೆಯೇ ಇದೆ’ ಎಂಬ ಸಂದೇಶ ನನಗೆ ಕೊಟ್ಟಹಾಗೆ ಆಯ್ತು. ಅದಕ್ಕೆ ಅವರು ಗುರು. ನಾನು ಶಿಷ್ಯ.

ಪ್ರೊ.ಎಂ.ಎ.ಹೆಗಡೆ
ಪ್ರೊ.ಎಂ.ಎ.ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT