ಮಂಗಳವಾರ, ಡಿಸೆಂಬರ್ 1, 2020
26 °C
ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರ

ನ.18: ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಯಕ್ಷಗಾನ, ಪ್ರಜಾವಾಣಿಯಲ್ಲಿ ಲೈವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

4 ಶತಮಾನಗಳ ಹಿಂದೆ ಆಂಗ್ಲ ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್ ರಚಿಸಿದ್ದ ಮತ್ತು ಜಗತ್ಪ್ರಸಿದ್ಧಿ ಪಡೆದ ದುರಂತ ನಾಟಕ 'ದಿ ಟ್ರಾಜಿಡಿ ಆಫ್ ಮ್ಯಾಕ್‌ಬೆತ್', ಸಾಮಾನ್ಯವಾಗಿ 'ಮ್ಯಾಕ್‌ಬೆತ್' ಎಂದೇ ಪ್ರಚಲಿತ. ಇದು ನ.18, ಬುಧವಾರ ಯಕ್ಷಗಾನ ರೂಪದಲ್ಲಿ ಪ್ರದರ್ಶನವಾಗಲಿದೆ.

ತುಮಕೂರಿನ ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಬುಧವಾರ ಸಂಜೆ 4 ಗಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಮತ್ತು ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಮ್ಯಾಕ್‌ಬೆತ್ ಆಧಾರಿತ ವಿಶಿಷ್ಟ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಮ್ಯಾಕ್‌ಬೆತ್ ನಾಟಕವನ್ನು ಕನ್ನಡಕ್ಕೆ ಡಿ.ವಿ.ಜಿ. ಅನುವಾದಿಸಿದ್ದಾರೆ. 70ರ ದಶಕದಲ್ಲಿ ಅದರ ಆಧಾರದಲ್ಲಿ ಯಕ್ಷಗಾನ ಪ್ರಸಂಗವನ್ನು ರಚಿಸಿದವರು ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್. 1977ರಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿಗಳು ಈ ಪ್ರಸಂಗವನ್ನು ಪ್ರದರ್ಶಿಸಿದ್ದರು. ಅಂದಿನ ಪ್ರದರ್ಶನದಲ್ಲಿ ದಂಬೆ ಈಶ್ವರ ಶಾಸ್ತ್ರಿ ಹಾಗೂ ಕುಂಬ್ಳೆ ಗೋಪಾಲ ರಾವ್ ಭಾಗವಹಿಸಿದ್ದು, ಅವರ ಮೂಲಕ ಈ ಪ್ರಸಂಗದ ಹಸ್ತಪ್ರತಿ ದೊರಕಿದೆ.

ಕಟೀಲು ಮೇಳದ ಭಾಗವತರಾದ ಪುತ್ತೂರು ರಮೇಶ್ ಭಟ್ ಅವರ ಬಳಗವು ಮ್ಯಾಕ್‌ಬೆತ್ ಯಕ್ಷಗಾನವನ್ನು ನಡೆಸಿಕೊಡಲಿದ್ದು, ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕಿ ಆರತಿ ಪಟ್ರಮೆ ಅವರು ತಂಡಕ್ಕೆ ತರಬೇತಿ ನೀಡಿದ್ದಾರೆ.

ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆಯಲ್ಲಿ ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು, ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳದಲ್ಲಿ ಶ್ರೀಕೃಷ್ಣ ಜೆ.ರಾವ್ ಭಾಗವಹಿಸಲಿದ್ದಾರೆ.

ಮುಮ್ಮೇಳದಲ್ಲಿ ಮ್ಯಾಕ್‌ಬೆತ್ ಆಗಿ ಆರತಿ ಪಟ್ರಮೆ, ಸತೀ ಮ್ಯಾಕ್‌ಬೆತ್ ಆಗಿ ಮನೋಜ್ ಭಟ್, ಬ್ಯಾಂಕೋ - ಶಶಾಂಕ ಅರ್ನಾಡಿ, ಮ್ಯಾಕ್‌ಡಫ್ - ಸಿಬಂತಿ ಪದ್ಮನಾಭ, ಡಂಕನ್ - ವೈಷ್ಣವಿ ಜೆ.ರಾವ್, ಯಕ್ಷಿಣಿಯರಾಗಿ ಲಹರಿ ಮತ್ತು ಜನ್ಯ, ಮಾಲ್ಕಂ - ಧನುಷ್ ಓಂಕಾರ್, ಡೊನಾಲ್ಬೈನ್ ಆಗಿ ಸಾತ್ವಿಕ್ ನಾರಾಯಣ ಭಟ್ ಅವರು ಅಭಿನಯಿಸಲಿದ್ದಾರೆ.

ಇದು ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ಸಂಜೆ 6 ಗಂಟೆಗೆ ನೇರಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು