ಮಂಗಳವಾರ, ಸೆಪ್ಟೆಂಬರ್ 21, 2021
26 °C

ಬಾಯಿ, ಕಾಲಿಂದಲೇ ಚಿತ್ರಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೌತ್ ಆ್ಯಂಡ್ ಫುಟ್ ಪೇಟಿಂಗ್ ಆರ್ಟಿಸ್ಟ್ಸ್ ಅಸೋಸಿಯೇಷನ್(ಎಂಎಫ್‌ಪಿಎ) ಚಿತ್ರಕಲಾ ಪರಿಷತ್ತಿನಲ್ಲಿ ಅಂಗವಿಕಲರು ಬಾಯಿ ಹಾಗೂ ಪಾದದ ನೆರವಿನಿಂದ ಚಿತ್ರ ಬಿಡಿಸುವ ಕಾರ್ಯಕ್ರಮ ಮತ್ತು ಪ್ರದರ್ಶನ ಹಮ್ಮಿಕೊಂಡಿದೆ.

ಅಂಗವಿಕಲ ಚಿತ್ರಕಲಾವಿದರಿಗೆ ವೇದಿಕೆ ಸೃಷ್ಟಿಸುವ ಮೂಲಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಎಂಎಫ್‌ಪಿಎ ಈ ಕಾರ್ಯಕ್ರಮ ಆಯೋಜಿಸಿದೆ. 

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಫೆ.22ರಂದು ಸಂಜೆ 4ರಿಂದ 7ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ದೇಶದ ಸುಮಾರು 20 ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 40 ಕಲಾಕೃತಿ ಪ್ರದರ್ಶಿಸಲಾಗುತ್ತಿದೆ.

ಮೌತ್ ಆ್ಯಂಡ್ ಫುಟ್‌ ಅಂಗವಿಕಲ ಚಿತ್ರಕಲಾವಿದರು ಸ್ಥಳದಲ್ಲೇ ಚಿತ್ರ ಬಿಡಿಸಿ, ಅದರ ಬಗ್ಗೆ ವಿವರಣೆ, ನಿರೂಪಣೆ ಮಾಡಲಿರುವುದು ಕಾರ್ಯಕ್ರಮದ ಆಕರ್ಷಣೆ.

ಪ್ರದರ್ಶನದಲ್ಲಿ ಎಮ್‍ಎಫ್‍ಪಿಎ ಚಿತ್ರಕಲಾವಿದರಾದ ಪುಣೆಯ ಮೃದುಲ್‌ ಘೋಷ್‌, ಕೇರಳದ ತೋಡುಪೋಳದ ಜಿಲ್‍ಮೋಲ್ ಮ್ಯಾರಿಯೆಟ್ ಥಾಮಸ್, ತಮಿಳುನಾಡಿನ ಜನಾರ್ದನ ಕೇಶವನ್‌, ಮುಂಬೈನ ಬಂದೇನವಾಜ್ ನದಾಫ್, ಬೆಂಗಳೂರಿನ ರಾಮಕೃಷ್ಣನ್‌, ಕೇರಳದ ಗಣೇಶ್‌ಕುಮಾರ್‌ ಮೊದಲಾದವರು ಭಾಗವಹಿಸಲಿದ್ದಾರೆ.

ಸ್ಥಳ– ಕರ್ನಾಟಕ ಚಿತ್ರಕಲಾ ಪರಿಪತ್, ಕುಮಾರಕೃಪಾ ರಸ್ತೆ, ಲಲಿತ್ ಹೋಟೆಲ್ ಸಮೀಪ, ಕುಮಾರಕೃಪಾ ಈಸ್ಟ್ 

ಸಮಯ–  ಫೆ.22ರ ಶನಿವಾರ ಸಂಜೆ 4

ಪ್ರವೇಶ ಉಚಿತ.

***

ಭಾಗವಹಿಸುವ ಕಲಾವಿದರು

ಜಿಲ್‍ಮೋಲ್ ಮ್ಯಾರಿಯೆಟ್ ಥಾಮಸ್ 

ಕೇರಳದ ತೋಡುಪೊಳದಲ್ಲಿ ಜನಿಸಿರುವ ಜಿಲುಮೋಲ್ ಅವರಿಗೆ ಹುಟ್ಟಿನಿಂದಲೇ ಕೈಗಳಿಲ್ಲ. ಆದರೆ, ಕಾಲ್ಬೆರಳಿನ ಮೂಲಕ ಅವರು ಚಿತ್ರಕಲೆಯ ಜಾದೂವನ್ನೇ ಸೃಷ್ಟಿಸಬಲ್ಲರು. ಬರೆಯುವುದು, ಚಿತ್ರ ಬಿಡಿಸುವುದು ಸೇರಿದಂತೆ ತಮ್ಮ ಕಾಲಿನ ಮೂಲಕ ಎಲ್ಲ ಕೆಲಸಗಳನ್ನು ಅವರು ಮಾಡಬಲ್ಲರು. ಅವರು ಆಟ್ರ್ಸ್ (ಆ್ಯನಿಮೇಷನ್ ಆ್ಯಂಡ್ ಗ್ರಾಫಿಕ್ ಡಿಸೈನ್) ವಿಭಾಗದಲ್ಲಿ ಪದವಿ ಶಿಕ್ಷಣವನ್ನೂ ಮುಗಿಸಿದ್ದಾರೆ.

ಜನಾರ್ದನ್‌ ಕೇಶವನ್ 

2000ನೇ ಮಾರ್ಚ್ 4ರಂದು ನಾಲ್ಕು ವರ್ಷದ ಜನಾರ್ದನ್‌ ಆಡುತ್ತಿದ್ದಾಗ ಕಬ್ಬಿಣದ ತುಂಡೊಂದನ್ನು ಎತ್ತುವಾಗ ಅದು ಮನೆಯ ಮೇಲಿಂದ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ಲೈನ್‍ಗೆ ತಲುಗಿತ್ತು. ಅಪಘಾತದಲ್ಲಿ ಅವರ ಬಲಕೈಯನ್ನು ಭುಜದಿಂದಲೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಯಿತು. ಮೊಣ ಕೈವರೆಗೆ ಎಡಗೈಯನ್ನು ತೆಗೆದರೆ, ಮಂಡಿಯವರೆಗೆ ಬಲಗಾಲನ್ನು ಕತ್ತರಿಸಲಾಯಿತು. ಪೋಷಕರು ಹಾಗೂ ವೈದ್ಯರ ನೆರವಿನ ಮೂಲಕ ಬಾಯಲ್ಲಿ ಬ್ರೆಶ್ ಹಿಡಿದು ಚಿತ್ರ ಬಿಡಿಸಲು ಆರಂಭಿಸಿದರು. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ‘ಬೆಸ್ಟ್ ಕ್ರಿಯೇಟಿವ್ ಚೈಲ್ಡ್’ ಹಾಗೂ ‘ಬಾಲಶ್ರೀ ಪ್ರಶಸ್ತಿ’ ನೀಡಿ ಪುರಸ್ಕರಿಸಿದ್ದಾರೆ.

ಬಂದೇನವಾಜ್ ನದಾಫ್ 

ಹುಟ್ಟಿನಿಂದಲೇ ದೇಹದಲ್ಲಿ ಹಲವು ಅಂಗಗಳನ್ನು ಬಂದೇನವಾಜ್ ನದಾಫ್ ಅವರಿಗೆ ಇರಲಿಲ್ಲ. ಸಣ್ಣಕಾಲುಗಳು, ಎಡಗೈ ಇಲ್ಲವೇ ಇಲ್ಲ. ಇಂಥ ನದಾಫ್ ಅವರು ಚಿತ್ರಕಲೆಯ ಮೂಲಕ ಅಸಾಧ್ಯವಾದುದನ್ನುಸೃಷ್ಟಿಸಿದ್ದಾರೆ. ಬಂದೇನವಾಜ್ ಬಹುಮುಖ ಪ್ರತಿಭೆ. ಒಳ್ಳೆಯ ಈಜುಪಟು, ಬಾಣಸಿಗ, ತಂಬೂರಿಯನ್ನು ಬಾರಿಸಬಲ್ಲರು ಹಾಗೂ ಅತ್ಯುತ್ತಮ ಸಂಗೀತಗಾರ, ಕರಾಟೆಯಲ್ಲಿ ಯೆಲ್ಲೊ ಬೆಲ್ಟ್ ಹಾಗೂ ಅತ್ಯುತ್ತಮ ಪಾದ ಚಿತ್ರಗಾರ. ಅಂಗವಿಕಲರ ಮಿನಿ ಒಲಿಂಪಿಕ್ಸ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು