ಬುಧವಾರ, ಆಗಸ್ಟ್ 4, 2021
26 °C

ಕ್ರಿಪ್ಟೊಸ್ ಎಂಬ ಗೂಢ ಕಲಾಕೃತಿ!

ವಿದ್ಯಾ ವಿ. ಹಾಲಭಾವಿ Updated:

ಅಕ್ಷರ ಗಾತ್ರ : | |

Prajavani

ವರ್ಜೀನಿಯಾದ ಲ್ಯಾಂಗ್ಲಿಯಲ್ಲಿರುವ ಕೇಂದ್ರೀಯ ಗುಪ್ತಚರ ಏಜೆನ್ಸಿಯ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಪ್ರಧಾನ ಕಚೇರಿ ಪ್ರಾಂಗಣದ ವಾಯವ್ಯ ಮೂಲೆಯಲ್ಲಿ ಗೂಢ ಕಲಾಕೃತಿಯೊಂದಿದೆ. ಇತರೇ ಸಾಮಾನ್ಯ ಕೆತ್ತನೆ ಶಿಲ್ಪಗಳಿಗಿಂತ ಇದು ತುಸು ಭಿನ್ನವಾಗಿದ್ದು ಕ್ರಿಪ್ಟೊಗ್ರಾಫಿಕ್ ಪಜಿಲ್ ಅನ್ನು ಹೊಂದಿದೆ! ಇದು ಬರೀ ಹವ್ಯಾಸಿ ಮತ್ತು ವೃತ್ತಿಪರ ಕ್ರಿಪ್ಟೊಗ್ರಾಫರ್‌ಗಳನ್ನು ಮಾತ್ರವಲ್ಲದೆ ಗೂಢಚರ್ಯೆ ಏಜೆನ್ಸಿಯ ತಜ್ಞರನ್ನೂ ಕೆಣಕುತ್ತಿದೆ. ಈ ಕಲಾಕೃತಿಯನ್ನು ‘ಕ್ರಿಪ್ಟೊಸ್’ ಎಂದು ಕರೆಯಲಾಗುತ್ತದೆ.

ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಕ್ರಿಪ್ಟೊಸ್ ಎಂದರೆ ‘ಗುಪ್ತ’ ಎಂದರ್ಥ. ಜಿಮ್ ಸ್ಯಾನ್ಬಾರ್ನ್ ಎಂಬ ಅಮೆರಿಕದ ಶಿಲ್ಪಿಯು 1990ರಲ್ಲಿ ರಚಿಸಿದ ಕಲಾಕೃತಿಯಿದು.

‘ಗುಪ್ತಚರ ಸಂಗ್ರಹ’ (ಇಂಟೆಲಿಜೆನ್ಸ್ ಗ್ಯಾದರಿಂಗ್) ಎನ್ನುವ ಥೀಮ್ ಹೊಂದಿರುವ ಈ ವಿಶಿಷ್ಟ ಕಲಾಕೃತಿಯು ‘ಎಸ್’ ಆಕಾರದಲ್ಲಿದ್ದು, ನಾಲ್ಕು ತಾಮ್ರದ ದೊಡ್ಡ ಫಲಕಗಳನ್ನು ಹೊಂದಿದೆ. ಸುತ್ತಲೂ ಕಲ್ಲಾಗಿರುವಂತಹ (ಪೆಟ್ರಿಫೈಡ್) ಮರದ ತುಂಡು, ಕೆಂಪು ಮತ್ತು ಹಸಿರು ಗ್ರಾನೈಟ್, ಬಿಳಿ ಸ್ಪಟಿಕ ಶಿಲೆ ಮತ್ತು ನೀರಿನ ಕೊಳವಿದೆ. ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಲ್ಯಾಟಿನ್ ವರ್ಣಮಾಲೆಯ 26 ಅಕ್ಷರಗಳನ್ನು ತಾಮ್ರದ ಫಲಕದಲ್ಲಿ ಕೆತ್ತಲಾಗಿದೆ. ಮುಖ್ಯ ಕಲಾಕೃತಿಯಲ್ಲಿ ನಾಲ್ಕು ಗೂಢಾರ್ಥವುಳ್ಳ ಒಗಟಿನಂತಹ ಸಂದೇಶಗಳಿವೆ.

ಕಲಾಕೃತಿಯನ್ನು ಅನಾವರಣಗೊಳಿಸಿದ ಒಂದೆರಡು ವರ್ಷಗಳಲ್ಲಿಯೇ ಇದರಲ್ಲಿರುವ ಮೊದಲ ಮೂರು ಸಮಸ್ಯಾತ್ಮಕ ಸಂದೇಶಗಳನ್ನು ಪರಿಹರಿಸಲಾಗಿದೆ. ಆದರೆ, ನಾಲ್ಕನೆಯ ಸಂದೇಶವು ವಿಶ್ವದ ಅತ್ಯಂತ ಪ್ರಸಿದ್ಧ ಬಗೆಹರಿಸಲಾಗದಿರುವ ಸಂಕೇತ(ಕೋಡ್)ಗಳಲ್ಲಿ ಒಂದೆನಿಸಿಕೊಂಡಿದೆ.

ಮೊದಲನೇ ಸಂದೇಶವು ಸ್ವತಃ ಸ್ಯಾನ್ಬಾರ್ನ್ ರಚಿಸಿರುವ ಒಂದು ಕಾವ್ಯಾತ್ಮಕ ನುಡಿಗಟ್ಟು. ಎರಡನೆಯ ಸಂದೇಶವು ಸಮಾಧಿಯಾಗಿರುವ ಯಾವುದನ್ನೋ ಸೂಚಿಸುತ್ತದೆ. ಮೂರನೆಯ ಸಂದೇಶವು ಪುರಾತತ್ವ ಶಾಸ್ತ್ರಜ್ಞ ಹೂವರ್ಡ್ ಕಾರ್ಟರ್ ಅವರ ದಿನಚರಿಯಿಂದ ಆಯ್ದು ತೆಗೆದಿರುವ ಭಾಗವಾಗಿದೆ. ಇದು 1922ರಲ್ಲಿ ಟುಟಾಮ್‍ಖಾನ್‍ನ ಗೋರಿ ತೆರೆಯುವುದನ್ನು ವಿವರಿಸುತ್ತದೆ. ಒಗಟಿನಂತಿರುವ ಕೋಡ್‍ಗಳನ್ನು ಮತ್ತಷ್ಟು ಕಠಿಣಗೊಳಿಸುವ ಉದ್ದೇಶದಿಂದಲೇ ಸಂದೇಶಗಳಲ್ಲಿ ಕೆಲವೊಂದು ಪದಗಳ ಸ್ಪೆಲ್ಲಿಂಗ್ ಅನ್ನು ತಪ್ಪಾಗಿ ನೀಡಲಾಗಿದೆ.

ಈ ಕಲಾಕೃತಿಯು ಅನೇಕ ಲಿಪಿಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದೆ. ಹವ್ಯಾಸಿ ಹಾಗೂ ವೃತ್ತಿಪರ ಲಿಪಿಶಾಸ್ತ್ರಜ್ಞರು ನಾಲ್ಕನೇ ಭಾಗವನ್ನು ಅರ್ಥೈಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುವವರೂ ಈ ಗುಪ್ತ ಸಂಕೇತದ ಡಿಕೋಡ್‌ಗೆ ತಿಣುಕಾಡುತ್ತಿದ್ದಾರೆ. ನಾಲ್ಕನೇ ಸೈಫೆರ್, ಮೂರಕ್ಕಿಂತ ಚಿಕ್ಕದಾಗಿದ್ದು ಕೇವಲ 97 ಅಕ್ಷರಗಳನ್ನು ಹೊಂದಿದೆ.

ಮೊದಲ ಮೂರು ವಿಭಾಗಗಳು ಕೊನೆಯ 97 ಅಕ್ಷರಗಳನ್ನು ಪರಿಹರಿಸುವ ಸುಳಿವುಗಳನ್ನು ಹೊಂದಿವೆ ಎಂದು ಸ್ಯಾನ್ಬಾರ್ನ್ ಹೇಳಿದರೂ ಆ ಒಗಟಿನಂತಹ ಸಮಸ್ಯೆಗೆ ಉತ್ತರ ಕಂಡುಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. 2010ರಲ್ಲಿ ಸ್ಯಾನ್ಬಾರ್ನ್‌ ಒಂದು ಸುಳಿವು ನೀಡಿದ. ಕೊನೆಯ 97 ಅಕ್ಷರಗಳನ್ನು ಡೀಕ್ರಿಪ್ಟ್ ಮಾಡಿದಾಗ ‘ಬರ್ಲಿನ್’ ಎನ್ನುವ ಆರು ಅಕ್ಷರಗಳ ಪದ ಬರುತ್ತದೆ ಎನ್ನುವ ಮಹತ್ವದ ಸುಳಿವದು. ಆದರೂ ಯಾರಿಗೂ ಆ ಸಂದೇಶದಲ್ಲಿರುವ ರಹಸ್ಯ ಕಂಡುಹಿಡಿಯಲು ಈವರೆಗೆ ಸಾಧ್ಯವಾಗಿಲ್ಲ.

ನಾಲ್ಕು ವರ್ಷಗಳ ನಂತರ ಸ್ಯಾನ್ಬಾರ್ನ್ ಎರಡನೆಯ ಸುಳಿವು ನೀಡಿ ಮುಂದಿನ ಪದ ‘ಗಡಿಯಾರ’ ಎಂದು ತಿಳಿಸಿದ. ಸಂದೇಶವು ‘ಬರ್ಲಿನ್ ಕ್ಲಾಕ್’ನಲ್ಲಿ ಕೊನೆಗೊಳ್ಳುತ್ತದೆ ಎನ್ನುವುದು ಇದರರ್ಥ. ಈ ಸುಳಿವು ದೊರೆತ ನಂತರ ಅನೇಕ ಕೋಡ್ ಪತ್ತೇದಾರರು ಒಗಟನ್ನು ಹೊಂದಿರುವ ಈ ಸಂದೇಶವನ್ನು ಅರ್ಥೈಸಿಕೊಳ್ಳಲು ಪ್ರಯತ್ನ ಮಾಡಿದರು.

ಕ್ರಿಪ್ಟೊಸ್‍ನ ಅಗ್ರಗಣ್ಯ ತಜ್ಞ ಎಲೋಂಕಾ ಡುನಿನ್ ನೇತೃತ್ವದಡಿ ಜನಪ್ರಿಯ ಕ್ರಿಪ್ಟೊಸ್ ಯಹೂ ಗ್ರೂಪ್‌‌ನ ಸದಸ್ಯರು ಅದನ್ನು ಪರಿಹರಿಸಲು ತಿಂಗಳುಗಟ್ಟಲೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಾಲ್ಕನೆಯ ಸಂದೇಶವನ್ನು ಪರಿಹರಿಸಲು ‘ನೀವು ನಿರ್ದಿಷ್ಟ ಗಡಿಯಾರವನ್ನು ಪರಿಶೀಲಿಸುವುದು ಉತ್ತಮ’ ಎಂದು ಹೇಳಿರುವ ಸ್ಯಾನ್ಬಾರ್ನ್ ‘ಬರ್ಲಿನ್‍ನಲ್ಲಿ ಅನೇಕ ಆಸಕ್ತಿದಾಯಕ ಗಡಿಯಾರಗಳಿವೆ’ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸ್ಯಾನ್ಬಾರ್ನ್ ಉಲ್ಲೇಖಿಸಿದ್ದು ‘ಬರ್ಲಿನ್ ಉಹ್ರ್’ ಅಥವಾ ‘ಬರ್ಲಿನ್ ಗಡಿಯಾರ’ ಎಂದು ಕರೆಯಲ್ಪಡುವ ಪ್ರಸಿದ್ಧವಾದ ಸಾರ್ವಜನಿಕ ಗಡಿಯಾರ. ಬರ್ಲಿನ್ ಗಡಿಯಾರವು ಒಂದು ಒಗಟು ಆಗಿದ್ದು ಅದು ಬಣ್ಣದ ದೀಪಗಳ ಮೂಲಕ ಸಮಯವನ್ನು ಹೇಳುತ್ತದೆ. ವೀಕ್ಷಕರು ಸಂಕೀರ್ಣ ಯೋಜನೆಯ ಆಧಾರದ ಮೇಲೆ ಸಮಯವನ್ನು ಲೆಕ್ಕ ಹಾಕಬೇಕು. 

ಮೇಲಿನ ಸಾಲಿನಲ್ಲಿರುವ ನಾಲ್ಕು ಕೆಂಪುದೀಪಗಳು ತಲಾ ಐದು ಗಂಟೆಗಳನ್ನು ಸೂಚಿಸುತ್ತದೆ. ಎರಡನೇ ಸಾಲಿನಲ್ಲಿರುವ ನಾಲ್ಕು ಕೆಂಪುದೀಪಗಳು ತಲಾ ಒಂದು ಗಂಟೆಯನ್ನು ಸೂಚಿಸುತ್ತದೆ. ಮೂರನೆಯ ಸಾಲಿನಲ್ಲಿ ಹನ್ನೊಂದು ಹಳದಿ ಮತ್ತು ಕೆಂಪುಬಣ್ಣದ ಕ್ಷೇತ್ರ (ಫೀಲ್ಡ್)ಗಳಿವೆ. ಇವು ತಲಾ ಐದು ಪೂರ್ಣ ನಿಮಿಷಗಳನ್ನು ಸೂಚಿಸುತ್ತವೆ. ಕೆಳಗಿನ ಸಾಲಿನಲ್ಲಿ ನಾಲ್ಕು ಹಳದಿ ಕ್ಷೇತ್ರಗಳಿವೆ. ಪ್ರತಿಯೊಂದು ಹಳದಿ ಕ್ಷೇತ್ರವು ತಲಾ ಒಂದು ನಿಮಿಷವನ್ನು ಸೂಚಿಸುತ್ತದೆ. ಮೇಲ್ಭಾಗದಲ್ಲಿ ದುಂಡನೆಯ ಮಿಟುಕಿಸುವ ಹಳದಿ ದೀಪವು ಸೆಕೆಂಡ್ ಅನ್ನು ಸೂಚಿಸುತ್ತದೆ. ಸಮಯವನ್ನು ಹೇಳಬೇಕೆಂದರೆ ನೀವು ಗಂಟೆ ಮತ್ತು ನಿಮಿಷಗಳನ್ನು ಪ್ರತ್ಯೇಕವಾಗಿ ಸೇರಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು