ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರ ಚಾಣುಕ್ಯುಡು ಎನ್‌ಟಿಆರ್‌

Last Updated 23 ಮೇ 2020, 20:00 IST
ಅಕ್ಷರ ಗಾತ್ರ

ನಂದಮೂರಿ ತಾರಕ ರಾಮರಾವುಗಾರು ವಿಶ್ವವಿಖ್ಯಾತ ನಟ, ಚಿತ್ರಕಥಾ ಲೇಖಕ, ನಿರ್ಮಾಪಕ, ನಿರ್ದೇಶಕ, ಮುತ್ಸದ್ದಿ ರಾಜಕಾರಣಿ ಹೀಗೆ ಹಲವು ಪ್ರಥಮಗಳ ರೂವಾರಿ. ಎನ್‌ಟಿಆರ್ ಅವರ ಅವಿರ್ಭಾವಕ್ಕೆ ಮುಖ್ಯಭೂಮಿಕೆ ಒದಗಿಸಿದ್ದು ಕೃಷ್ಣಾ ಜಿಲ್ಲೆಯ ಗುಡಿವಾಡ ಪರಿಸರದ ನಿಮ್ಮಕೂರು. ಅಲ್ಲಿನ ಲಕ್ಷ್ಮಯ್ಯ ಚೌಧರಿ, ವೆಂಕಟರಾಮಮ್ಮ ದಂಪತಿಯ ಉದರದಲ್ಲಿ ನಮ್ಮ ಕಥಾನಾಯಕುಡು (1923ರ ಮೇ 28ರಂದು, ಸೋಮವಾರ ಸಂಜೆ 4 ಗಂಟೆ 32 ನಿಮಿಷ, ಅಂದರೆ ರುಧಿರೋದ್ಗಾರಿ ಸಂವತ್ಸರ ವೈಶಾಖ ಮಾಸ ಸ್ವಾತಿ ನಕ್ಷತ್ರ, ತುಲಾ ರಾಶಿ) ಜನಿಸಿದರು.

ಚಿಕ್ಕಪ್ಪ ರಾಮಯ್ಯ ಇವರಿಗೆ ‘ತಾರಕ ರಾಮರಾವು’ ಎಂದು ನಾಮಕರಣ ಮಾಡಿದರು. ಸಂತಾನ ವಂಚಿತರಿದ್ದ ಅವರು ಅಣ್ಣನ ಮಗನ ಪಾಲನೆ, ಪೋಷಣೆಯ ಹೊಣೆವಹಿಸಿಕೊಂಡರು. ಚಿಕ್ಕಪ್ಪನಿಗೆ ರಂಗಭೂಮಿಯ ಹುಚ್ಚು. ಇವರೇ ರಾಮರಾಯರ ಬಾಲ್ಯವನ್ನು ಶೈಕ್ಷಣಿಕವಾಗಿ ರೂಪಿಸಿದರು. ವ್ಯಕ್ತಿತ್ವವನ್ನು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ತಿದ್ದಿದರು. ಗುಂಟೂರಿನ ಮಿಷನರಿ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಣ ಕೊಡಿಸಿದರು.

ಕೃಷಿ ಕೈ ಕೊಟ್ಟ ಕಾರಣಕ್ಕೆ ಚೌಧರಿ ಕುಟುಂಬ ವಿಜಯವಾಡಕ್ಕೆ ವಲಸೆ ಬಂತು. ಕಂಡಕ್ಟರ್ ಆಗಿದ್ದ ತಂದೆ ಚೌಧರಿ ಬಸ್ಸಿನಿಂದ ಕಾಲು ಮುರಿದುಕೊಂಡರು. ರಾಮರಾವು ಕಾಲೇಜು ವ್ಯಾಸಂಗ ಬದಿಗಿರಿಸಿ ದುಡಿದು ಸಂಪಾದಿಸಲು ನಿರ್ಧರಿಸಿದರು. ಇದು ಚಿಕ್ಕಪ್ಪಗೆ ಹಿಡಿಸಲಿಲ್ಲ. ಅವರು ಇವರನ್ನು ಪುನಃ ಕಾಲೇಜಿಗೆ ಸೇರಿಸಿದರು.

ರಾಮರಾಯರ ಕಾಲೇಜು ದಿವಸಗಳು ಕುತೂಹಲಕರ. ಪ್ರಿನ್ಸಿಪಾಲರ ಸಲಹೆ ಮೀರಿ ಮೀಸೆ ತೆಗೆಯದೆ ಬಾಲನಾಗಮ್ಮ ಪಾತ್ರ ಅಭಿನಯಿಸಿ ‘ಮೀಸೆ ನಾಗಮ್ಮ’ ಎಂಬ ಬಿರುದಿಗೆ ಪಾತ್ರರಾಗುವರು. ಇನ್ನೊಮ್ಮೆ ಗಾಂಧಿ ವೇಷ ಧರಿಸಿ ನೆಹರೂರನ್ನು ದಿಗ್ಭ್ರಮೆಗೊಳಿಸಿದರು. ಅವರ ಅಭಿನಯ ಮೆಚ್ಚಿ ಚಾಚಾ ದೆಹಲಿಗೆ ಆಗಮಿಸಿ ಪುರಸ್ಕಾರ ಸ್ವೀಕರಿಸಲು ಸೂಚಿಸಿದರು.

ರಾಮರಾವು ಅವರಲ್ಲಿ ಹಲವು ಸೃಜನಶೀಲ ಗುಣಗಳು ಮೇಳೈಸಿದ್ದವು. ಹಾಡುಗಾರರಾಗಿದ್ದಂತೆಯೇ ಒಳ್ಳೆಯ ಚಿತ್ರಕಲಾವಿದರೂ ಆಗಿದ್ದರು. ಸುಭಾಷ್‍ಚಂದ್ರ ಬೋಸ್‍ ಅವರ ಚಿತ್ರ ರಚಿಸಿಕೊಟ್ಟು ಆ ಸ್ವಾತಂತ್ರ್ಯ ಸೇನಾನಿಯ ಮೆಚ್ಚುಗೆಗೆ ಪಾತ್ರರಾದರು. ಮುಂದೆ ಹೆಸರಾಂತ ಕಲಾವಿದರೆಂದು ಹೆಸರು ಮಾಡಿದ ಜಗ್ಗಯ್ಯ, ನಾಗಭೂಷಣಂ, ಮುಕ್ಕಾಮುಲ ಇವರ ಗೆಳೆಯರು. ಇವರೆಲ್ಲರೂ ಸೇರಿ ನಾಟಕ ಸಂಘ ಸ್ಥಾಪಿಸಿದರು. ದೇಶಭಕ್ತಿ ಪ್ರಚೋದಿಸುವ ನಾಟಕಗಳನ್ನು ಪ್ರದರ್ಶಿಸಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು.

ರಾವು ರಂಗಭೂಮಿ ಚಟುವಟಿಕೆಯ ಜೊತೆಗೆ ನೌಕರಿ ಹುಡುಕುವುದನ್ನು ಮರೆತಿರಲಿಲ್ಲ. ಮದ್ರಾಸ್‌ನಲ್ಲಿದ್ದ ಎನ್.ಜಿ. ರಂಗಾ ಬುದ್ಧಿವಾದ ಹೇಳದಿದ್ದಲ್ಲಿ ಇವರು ಪೊಲೀಸ್‌ ಅಧಿಕಾರಿಯಾಗಿರುತ್ತಿದ್ದರು. ಮುಂದೆ ಮದ್ರಾಸ್ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಸಬ್ ರಿಜಿಸ್ಟ್ರಾರ್ ಹುದ್ದೆಗೆ ಆಯ್ಕೆಯಾಗಿ ಪ್ರತ್ತಿಪಾಡು ಪಟ್ಟಣದಲ್ಲಿ ಸೇವೆ ಸಲ್ಲಿಸಿದರು(ಅದೇ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಒಂದೆರಡು ವಾರ ಉಪ ನೋಂದಣಿ ಅಧಿಕಾರಿಯಾಗಿದ್ದರಂತೆ).

ರಾಯರು ಪ್ರಪ್ರಥಮವಾಗಿ ಕ್ಯಾಮೆರಾ ಎದುರಿಸಿದ್ದು, ಪ್ರಸಾದ್‍ ಅವರ ‘ಮನದೇಶಂ’ (1949) ಚಿತ್ರಕ್ಕೆ. ಆದರೆ, ಸುಬ್ಬಾರಾವ್‍ ಅವರ ‘ಪಲ್ಲೆಟೂಳ್ಳ ಪಿಲ್ಲ’ (1950) ಮೊದಲು ತೆರೆ ಕಂಡಿತು.ಭಾರತೀಯ ಚಿತ್ರರಂಗದಲ್ಲಿ ಹೊಸಶಕೆ ಆರಂಭಿಸಿದ್ದು, ‘ಪಾತಾಳ ಭೈರವಿ’! ಈ ಜಾನಪದ ಫ್ಯಾಂಟಸಿ ಚಿತ್ರ ಇವರ ಭವಿಷ್ಯವನ್ನು ಉಜ್ವಲಗೊಳಿಸಿತು. ಎನ್‍ಟಿಆರ್ ಮತ್ತು ಭಾನುಮತಿ ಅಭಿನಯದ ‘ಮಲ್ಲೀಶ್ವರಿ’ (1951) ಹಲವು ಚಿತ್ರಮಂದಿರಗಳಲ್ಲಿ ದ್ವಿಶತದಿನೋತ್ಸವ ಆಚರಿಸಿತು. ಹಲವು ವಿದೇಶಿ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಂಸೆಗೆ ಪಾತ್ರವಾಯಿತು. ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಹಂಪಿಯ ಸುಂದರ ಪರಿಸರದಲ್ಲಿ.

ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳನ್ನು ಬಾಲ್ಯದಲ್ಲಿ ಆಸ್ವಾದಿಸಿ ಪ್ರಭಾವಿತರಾದವರು ರಾಮರಾವು. ಅವರೊಳಗಿನ ಕೃಷ್ಣನನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ‘ಮಾಯಾಬಜಾರ್’! ಮೂರೂವರೆ ತಾಸಿನ ಚಿತ್ರ. ಸುಮಾರು 25 ಕೇಂದ್ರಗಳಲ್ಲಿ 25 ವಾರಗಳ ಕಾಲ ಪ್ರೇಕ್ಷಕರನ್ನು ರಂಜಿಸಿತು. ರಾಮರಾವು ಅಂದರೆ ಶ್ರೀಕೃಷ್ಣ, ಶ್ರೀಕೃಷ್ಣನೆಂದರೆ ರಾಮರಾವು. ತಿರುಪತಿಗೆ ಹೋದ ಯಾತ್ರಾರ್ಥಿಗಳು ಮದ್ರಾಸಿಗೆ ಹೋಗಿ ಅಭಿನವ ಕೃಷ್ಣ ಎನ್‍ಟಿಆರ್‌ ಅವರ ದರ್ಶನ ಪಡೆದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಮರಳುತ್ತಿದ್ದರಂತೆ!

ಎನ್‍ಟಿಆರ್ ಹಾಡು, ಫೈಟಿಂಗ್ ಎಲ್ಲವನ್ನೂ ಕಲಿತಿದ್ದರು. ಚಾರ್ಲಿ ಚಾಪ್ಲಿನರ ಹಾಗೆ ಚಿತ್ರ ನಿರ್ಮಾಣದ ಪ್ರತಿ ವಿಭಾಗದಲ್ಲೂ ಪರಿಣತಿ ಸಾಧಿಸಿದರು. ‘ನರ್ತನಶಾಲ’ ಚಿತ್ರಕ್ಕೆಂದೇ ಪ್ರಸಿದ್ಧ ನೃತ್ಯಪಟು ವೆಂಪಟಿ ಸತ್ಯಂ ಅವರ ಬಳಿ ನೃತ್ಯಾಭ್ಯಾಸ ಮಾಡಿದರು. ರಾಮಕೃಷ್ಣ ಸ್ಟುಡಿಯೊ ನಿರ್ಮಾಣದ ಕಡೆ ಒಲವು ತೋರಿದರು. ಶಕುನಿಯ ಜೀವನ ಆಧರಿಸಿದ ‘ಶ್ರೀಕೃಷ್ಣಪಾಂಡವೀಯಂ’ ಚಿತ್ರವನ್ನು ತಾವೇ ನಿರ್ದೇಶಿಸಿದರು. ದುರ್ಯೋಧನ ಹಾಗೂ ಶ್ರೀಕೃಷ್ಣನ ಪಾತ್ರಗಳಲ್ಲಿ ಎನ್‍ಟಿಆರ್ ಅವರನ್ನು ನೋಡುವುದೇ ರೋಮಾಂಚಕಾರಿ ಅನುಭವ. ಇದರಲ್ಲಿ ಕನ್ನಡದ ಉದಯಕುಮಾರ್ ಸೇರಿದಂತೆ ದಕ್ಷಿಣ ಚಿತ್ರರಂಗದ ಖ್ಯಾತನಾಮರು ಅಭಿನಯಿಸಿದ್ದಾರೆ.

ರಾಮರಾವು ರಾಮಕೃಷ್ಣ ಸ್ಟುಡಿಯೊ ಸ್ಥಾಪಿಸಿದರು. ತಮ್ಮ ಕನಸಿನ ಕೂಸು ‘ದಾನವೀರ ಶೂರ ಕರ್ಣ’ ಚಿತ್ರ ನಿರ್ಮಾಣ ಆರಂಭಿಸಿದರು. ಸಮಕಾಲೀನ ನಟ ಕೃಷ್ಣನ ‘ಕುರುಕ್ಷೇತ್ರ’ ಚಿತ್ರ ಬಿಡುಗಡೆಗೂ ಮುನ್ನ, ಅಂದರೆ ಅದ್ದೂರಿ ತಾರಾಗಣದ ಈ ಚಿತ್ರವನ್ನು ಕೇವಲ ನಲವತ್ತೆರಡು ದಿವಸಗಳಲ್ಲಿ ಪೂರ್ಣಗೊಳಿಸಿ ಬಿಡುಗಡೆ (1977) ಮಾಡಿದರು. ಆ ಚಿತ್ರದಲ್ಲಿ ದುರ್ಯೋಧನ, ಕೃಷ್ಣ ಮತ್ತು ಕರ್ಣನ ಪಾತ್ರಗಳಲ್ಲಿ ಅಭಿನಯಿಸಿ ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದರು. ಆ ಚಿತ್ರ ನಿರ್ಮಾಣದ ಒಟ್ಟು ವೆಚ್ಚ ಕೇವಲ ₹ 10 ಲಕ್ಷ. ಆದರೆ, ಅದರ ಗಳಿಕೆ ₹ 34 ಕೋಟಿ ದಾಟಿತು. ನಾಲ್ಕೂವರೆ ತಾಸು ಅವಧಿಯ ಚಿತ್ರವನ್ನು ನೋಡಿದ ಆಸ್ಟ್ರೇಲಿಯಾದ ಚಿತ್ರ ವಿಮರ್ಶಕ ‘ಎನ್‍ಟಿಆರ್ ವಿಶ್ವವಿಖ್ಯಾತ ನಟಸಾರ್ವಭೌಮ’ ಎಂದು ಶ್ಲಾಘಿಸಿದ.

ಊಟಿಯಲ್ಲಿ ‘ಸರ್ಧಾರ್ ಪಾಪಾರಾಯುಡು’ ಚಿತ್ರೀಕರಣದ ಸಮಯದಲ್ಲಿ ಪತ್ರಕರ್ತ ಕೇಳಿದ ಪ್ರಶ್ನೆ –‘ಇನ್ನಾರು ತಿಂಗಳಲ್ಲಿ ಅರವತ್ತು ಪೂರೈಸಲಿರುವ ನಿಮ್ಮ ಮುಂದಿನ ಗುರಿ ಏನು?’ ಆಗ ಜಾಗೃತವಾದದ್ದು ತೆಲುಗರ ರಾಜಕೀಯ ಪ್ರಜ್ಞೆ. ಎನ್‌ಟಿಆರ್‌ ತೆಲುಗು ದೇಶಂ ಪ್ರಾದೇಶಿಕ ಪಕ್ಷ ಘೋಷಿಸಿದರು.ಪೌರಾಣಿಕ ಸಿನಿಮಾ ಭಾಷೆಯನ್ನು ರಾಜಕಾರಣದ ಭಾಷೆಯನ್ನಾಗಿ ಪರಿವರ್ತಿಸಿದರು. ಚೈತನ್ಯರಥದ ಖುರಪಟದ ದೂಳಿನಲ್ಲಿ ಚುನಾವಣೆ ನಡೆಯಿತು. ತೆಲುಗು ದೇಶಂನ 200ಕ್ಕೂ ಅಧಿಕ ಅಭ್ಯರ್ಥಿಗಳು ಗೆದ್ದು ಬಂದರು. 1984ರ ಸೆಪ್ಟೆಂಬರ್‌ನಲ್ಲಿ ಕಥಾನಾಯುಕುಡು ರಾಜ್ಯದ ಮುಖ್ಯಮಂತ್ರಿ ಸಿಂಹವಿಷ್ಠರವನ್ನು ಅಲಂಕರಿಸಿದರು.

ಅವರ ಆಡಳಿತಾವಧಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಕುಲಕರ್ಣಿ, ಶಾನಭೋಗ, ಗೌಡಿಕೆಯ ಪಾಳ್ಳೆಗಾರಿಕೆ ವ್ಯವಸ್ಥೆಯ ಕಪಿಮುಷ್ಠಿಯಿಂದ ಗ್ರಾಮೀಣ ಪ್ರಪಂಚವನ್ನು ಪಾರು ಮಾಡಿದರು. ಸರ್ಕಾರಿ ನೌಕರರ ವಯಸ್ಸನ್ನು ಕಡಿಮೆ ಮಾಡಿ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಕಾಯ್ದೆ ತಂದರು. ನಿಮ್ನ ಕುಲಸಂಜಾತರೂ ಅರ್ಚಕ ವೃತ್ತಿಗೆ ಅರ್ಹರು ಎಂದು ಘೋಷಿಸಿದ ವಿಚಾರವಾದಿ. ನಕ್ಸಲರು ಸಹ ದೇಶಭಕ್ತರು ಎಂದು ಸಾರ್ವಜನಿಕವಾಗಿ ಹೇಳಿದ ಧೈರ್ಯಶಾಲಿ. ಮೇಲ್ಮನೆ ಹಾಗೂ ವಿವಿಧ ಅಕಾಡೆಮಿಗಳನ್ನು ರದ್ದುಗೊಳಿಸಿದ ಸುಧಾರಣಾವಾದಿ. ಹತ್ತಾರು ವಿರೋಧ ಪಕ್ಷಗಳನ್ನು ಸಂಘಟಿಸಿ ವಿಶ್ವನಾಥ ಪ್ರತಾಪ ಸಿಂಗ್ ಅವರನ್ನು ದೇಶದ ಪ್ರಧಾನಿಯನ್ನಾಗಿಸಿದ ಮುತ್ಸದ್ದಿ. ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಕ್ರಾಂತಿಕಾರಿ.

ಹುಸೇನ್‍ಸಾಗರದಲ್ಲಿ 18 ಮೀಟರ್‌ ಎತ್ತರದ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಿದ, ಕೆರೆ ಏರಿಯುದ್ದಕ್ಕೂ ತೆಲುಗು ಸಾಂಸ್ಕೃತಿಕ ರೂವಾರಿಗಳ ವಿಗ್ರಹಗಳನ್ನು ಸ್ಥಾಪಿಸಿದ ತೆಲುಗು ಸುಯೋಧನುಡು ಅವರು. ತಮ್ಮ ಗೈರುಹಾಜರಿಯಲ್ಲಿ ಸಹೋದ್ಯೋಗಿ ನಾದೇಂಡ್ಲ ಭಾಸ್ಕರರಾವು ಸಿಂಹಾಸನ ಕಬ್ಜಾ ಮಾಡಿದಾಗ ವಿಚಲಿತರಾಗದೆ ಪಕ್ಷ ಸಂಘಟಿಸಿ ಪುನಃ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಅಪರ ಚಾಣಾಕ್ಯುಡು.

ಧರ್ಮಪತ್ನಿ ಬಸವತಾರಕಂ ಜೊತೆ ನಾಲ್ಕೂವರೆ ದಶಕದ ಸುದೀರ್ಘ ದಾಂಪತ್ಯದ ಫಲಶ್ರುತಿ ಹನ್ನೊಂದು ಮಕ್ಕಳ ಉಮ್ಮಡಿ ಕುಟುಂಭಿಕುಡು ಈ ತೆನಾಲಿ ರಾಮುಡುದ್ದು.ಪತ್ನಿ ಬಸವತಾರಕಂ ನಿಧನರಾದ ಬಳಿಕ ನಂದಮೂರಿ ಮಾನಸಿಕವಾಗಿ ಕುಂದಿದರು. ಲಕ್ಷ್ಮಿ ಪಾರ್ವತಿ ಅವರನ್ನು ಮರುವಿವಾಹವಾಗಿ ಕರುಳಕುಡಿಗಳ, ಸಹವರ್ತಿಗಳ ಕೆಂಗಣ್ಣಿಗೆ ಗುರಿಯಾದರು. ಕುಟುಂಬದ ಸದಸ್ಯರ ಅವಹೇಳನ ಅವರ ಸಾಮರ್ಥ್ಯವನ್ನು ಕುಗ್ಗಿಸಿತು. ಜಾಮಾತೊ ಅಕ್ಷರಶಃ ದಶಮ ಗ್ರಹವಾಗಿ ಅವರ ಹೃದಯವನ್ನು ದುರ್ಬಲಗೊಳಿಸಿದ. ಅಭಿನವ ರಾಮುಡು, ತೆಲುಗರ ಅಭಿಮಾನ ದೇವತೆ ತಮ್ಮ ಎಪ್ಪತ್ತೆರಡನೆ ವಯಸ್ಸಿನಲ್ಲಿ ಭೌತಿಕವಾಗಿ ನಿರ್ಗಮಿಸಿದರು. ಹೃದಯಸ್ತಂಭನ! ಅದು ಒಂದು ನೆಪ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT