ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಉಪವಾಸವೂ ಗೋಧಿಯ ಮಣ್ಣಿಯೂ

Last Updated 18 ಮೇ 2019, 19:31 IST
ಅಕ್ಷರ ಗಾತ್ರ

ರಂಜಾನ್ ಎಂದರೆ ಮುಸ್ಲಿಂ ಮಹಿಳೆಯರ ಪಾಲಿಗೆ ಏನು? ಸ್ವಗತದ ರೂಪದಲ್ಲಿರುವ ಈ ನವಿರು ಬರಹ ಉಪವಾಸ ಮಾಸದ ಬಹುಮುಖಿ ಸಂಸ್ಕೃತಿಯನ್ನು ಮಲ್ಲಿಗೆಯ ಮಾಲೆಯಂತೆ ಕಟ್ಟಿಕೊಡುತ್ತದೆ...

***

ಮಧ್ಯಾಹ್ನಕ್ಕೆಲ್ಲ ಉಪವಾಸ ತೊರೆಯಬೇಕು ಎನ್ನುವ ಷರತ್ತಿನ ಮೇಲೆ ನನ್ನನ್ನು ಸಹರಿಗೆ ಎಬ್ಬಿಸುತ್ತಿದ್ದ ಅಜ್ಜಿ. ಕಾಡುಮೇಡು ಸುತ್ತಿ ಬಂದು ಮಧ್ಯಾಹ್ನ ಕಳೆದರೂ ಉಪವಾಸ ಬಿಡದೇ ಇದ್ದಾಗ ಒಡ್ಡುತ್ತಿದ್ದ ಆಮಿಷ ಗೋಧಿಯ ಮಣ್ಣಿ ತಯಾರಿಸುತ್ತಿದ್ದ ತಳ ಹಿಡಿದ ಪಾತ್ರೆ. ದ್ರಾಕ್ಷಿ, ಗೋಡಂಬಿ ಉದುರಿಸಿ ಅಷ್ಟು ಚಂದಗೆ ತಟ್ಟೆಯಲ್ಲಿ ಸುರುವಿಟ್ಟ ಮಣ್ಣಿಗಿಂತಲೂ ಹೆಚ್ಚು ನಮ್ಮನ್ನು ಆಕರ್ಷಿಸುತ್ತಿದ್ದುದು ಪಾತ್ರೆಯ ತಳದಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುತ್ತಿದ್ದ ಮಣ್ಣಿ. ಅದನ್ನು ತಿಂದು ತೆಂಗಿನಕಾಯಿಯ ನೀರು ಕುಡಿದರೆ ಮಧ್ಯಾಹ್ನಕ್ಕೇ ಅವತ್ತಿನ ಉಪವಾಸ ಸಂಪನ್ನ. ಆದರೆ, ನಾಲಗೆಯಿಂದ ಹೊಟ್ಟೆಗಿಳಿದು ಐದು ನಿಮಿಷವಾಗುವಷ್ಟರಲ್ಲಿ ಆಸೆಗೆ ಬಿದ್ದು ಉಪವಾಸ ತೊರೆದೆನಲ್ಲಾ ಎನ್ನುವ ಸಣ್ಣ ಪಶ್ಚಾತ್ತಾಪ ಮತ್ತು ತೊರೆಸಿದರಲ್ಲಾ ಎಂದು ಅಜ್ಜಿಯ ಮೇಲೆ ವಿಪರೀತ ಕೋಪ.

ದೊಡ್ಡವರಿಗೆಲ್ಲಾ ಒಂದಿಡೀ ತಿಂಗಳ ಉಪವಾಸವಾದರೆ ಮಕ್ಕಳಿಗೆ ಭಾನುವಾರದ ಉಪವಾಸ. ಅದೊಂಥರಾ ಪಾಪ, ಪುಣ್ಯಗಳ ಲೆಕ್ಕಾಚಾರ ಪಕ್ಕಾ ಇದ್ದ ಕಾಲ. ವರ್ಷವಿಡೀ ಹೊಟ್ಟೆನೋವು, ತಲೆನೋವು ಅಂತ ಕಾಣದ ರೋಗದ ಹೆಸರು ಹೇಳಿಕೊಂಡು ಶಾಲೆಯಲ್ಲಿ ಕಾಪಿ ಬರೆಯುತ್ತಿದ್ದುದನ್ನು ತಪ್ಪಿಸಿಕೊಳ್ಳುತ್ತಿದ್ದ ನಮಗೆ ರಂಜಾನಿನಲ್ಲಿ ಮಾತ್ರ ಸುಳ್ಳು ಹೇಳಲು ವಿಪರೀತ ಭಯ. ಕಾರಣ ಒಂದು ಸುಳ್ಳಿಗೆ ಎಪ್ಪತ್ತರಷ್ಟು ಸುಳ್ಳಿನ ಪಾಪ ಸುತ್ತಿಕೊಳ್ಳುತ್ತದೆ ಎನ್ನುವುದನ್ನು ಬಲವಾಗಿ ನಂಬಿದ್ದೆವು.

ಅಂಥದ್ದೊಂದು ನೈತಿಕ ಪ್ರಜ್ಞೆ ನಮ್ಮೊಳಗೆ ಮೂಡಲು ಕಾರಣಕರ್ತರಾಗುತ್ತಿದ್ದುದು ಮಾತ್ರ ಮನೆಯ ಹೆಂಗಸರು. ಮಾತಿನಲ್ಲಿ, ಕೃತಿಯಲ್ಲಿ ಎಂದೂ ಅಳತೆ ತಪ್ಪದ ಅವರೊಳಗಿನ ಆ ಪ್ರಜ್ಞೆಯನ್ನು ಸದ್ದಿಲ್ಲದೆ ನಮ್ಮೊಳಗೆ ದಾಟಿಸಿ ಬಿಡುತ್ತಿದ್ದರು. ಬರಾಅತ್‌ನ ಮರುದಿನ ಪ್ರಾರಂಭವಾಗುತ್ತಿದ್ದ ಆಮೂಲಾಗ್ರ ಕ್ಲೀನಿಂಗ್, ಅಂಗಳ, ಅಟ್ಟ, ಮನೆಯ ಮೂಲೆ ಮೂಲೆ, ದೂಳು ಹಿಡಿದಿರುವ ಫ್ಯಾನ್, ಕಪಾಟಿನಲ್ಲಿ ಪೇರಿಸಿಟ್ಟ ಪುಸ್ತಕ ಅಂತ ಎಲ್ಲವನ್ನೂ ಒಳಗೊಳ್ಳುತ್ತಿತ್ತು.

ಅಜ್ಜಿಗೋ, ಅಮ್ಮನಿಗೋ, ಅತ್ತೆಗೋ ಮದುವೆಯಲ್ಲಿ ಸಿಕ್ಕ ಪುಟ್ಟಪುಟ್ಟ ಉಡುಗೊರೆಗಳು ಒಮ್ಮೆ ಕಪಾಟಿನಿಂದ ಹೊರಬಂದು, ಅದರ ಹಿನ್ನೆಲೆಯಲ್ಲಿನ ಕಥೆ ಹೇಳಿಸಿಕೊಂಡು, ಸ್ವಚ್ಛವಾಗಿ ಮತ್ತೆ ಕಪಾಟು ಸೇರಿಕೊಳ್ಳುತ್ತಿದ್ದರೆ ನಮಗೆಲ್ಲಾ ಅವನ್ನು ಮುಟ್ಟುವ, ಆಘ್ರಾಣಿಸಿಕೊಳ್ಳುವ, ಮತ್ತೆ ಮತ್ತೆ ಅದೇ ಕಥೆಯನ್ನು ಕೇಳಿಸಿಕೊಳ್ಳುವ ಸಂಭ್ರಮ. ಈ ರಂಜಾನಿನಲ್ಲಿ ಕೂತು ಆ ದಿನಗಳ ಬಗ್ಗೆ ಯೋಚಿಸಿದರೆ, ಸ್ವಚ್ಛತೆಯ ನೆಪದಲ್ಲಿ ಆ ಎಲ್ಲಾ ಉಡುಗೊರೆಗಳ ಹಿಂದಿನ ನೆನಹುಗಳನ್ನು ಅಮ್ಮಂದಿರು ಎದೆಯೊಳಗಿಳಿಸಿಕೊಳ್ಳುತ್ತಿದ್ದರೇನೋ ಅನಿಸುತ್ತದೆ.

ಉಡುಗೊರೆಗಳಷ್ಟೇ ಅಲ್ಲದೆ ಮಕ್ಕಳಿಗೆ ಶಾಲೆಯಲ್ಲಿ, ಮದ್ರಸಾದಲ್ಲಿ ಮೊದ ಮೊದಲು ಸಿಕ್ಕಿದ ಬಹುಮಾನಗಳೂ ಅಲ್ಲಿ ಬೆಚ್ಚಗಿರುತ್ತಿದ್ದವು. ಮೊನ್ನೆಯೂ ಅಮ್ಮ ರಂಜಾನಿನ ವಿಶೇಷ ಕ್ಲೀನಿಂಗ್ ಮಾಡಿದವತ್ತು ಕರೆ ಮಾಡಿ ‘ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಬಾರಿ ನಿನಗೆ ಸಿಕ್ಕ ಪ್ಲೇಟಿನ ಬದಿಯಲ್ಲಿ ತುಕ್ಕು ಹಿಡಿದಂತಾಗಿದೆ. ಈಗ ಬಿಸಿ ನೀರಲ್ಲಿ ನೆನೆಸಿಟ್ಟಿದ್ದೇನೆ. ಸ್ವಲ್ಪ ಗಟ್ಟಿಯಾಗಿ ತಿಕ್ಕಿದರೆ ಹೋದೀತೇನೋ’ ಅಂದಿದ್ದರು. ನಾನು ಸುಮ್ಮನೆ ಕಣ್ಣರಳಿಸಿದ್ದೆ. ಅಲ್ಲೇ ಹೊರಳಿದರೆ, ಕೈ ಜಾರಿ ಬಿದ್ದು ಒಡೆದು ಚೆಲ್ಲಾಪಿಲ್ಲಿಯಾಗಿದ್ದ, ಹಿಂದಿನ ದಿನವಷ್ಟೇ ತಂದ ಗಾಜಿನ ಬಟ್ಟಲು ನನ್ನ ಒಡಕಲು ಬಿಂಬವನ್ನು ತೋರುತ್ತಿತ್ತು.

ರಂಜಾನ್ ಎಂದರೆ ಆರಾಧನೆ, ರಂಜಾನ್ ಎಂದರೆ ದಾನ, ರಂಜಾನ್ ಎಂದರೆ ಕುರ್'ಆನ್ ಪಾರಾಯಣ ಎಂಬಷ್ಟೇ ಸತ್ಯ ಅದೊಂದು ಸಂಭ್ರಮ, ಒಂದಿಡೀ ತಿಂಗಳ ಆತ್ಮಸಾಫಲ್ಯ. ಅದೊಂಥರಾ ಕ್ಷಮಾ ಪರ್ವ. ನೆರೆಹೊರೆಯವರಲ್ಲಿ, ಬೀಗರಲ್ಲಿ, ದಿನಾ ಮನೆಗೆ ಬಂದು ಹೋಗುವವರಲ್ಲಿ, ಕೊನೆಗೆ ಮನೆ ಕೆಲಸಕ್ಕೆ ಬರುವವರಲ್ಲೂ ಒಂದಿಡೀ ವರ್ಷ ನಮ್ಮಿಂದಾದ ತಪ್ಪುಗಳಿಗೆ ಕ್ಷಮೆ ಕೇಳುವ, ಅವರಿವರನ್ನು ಉದಾರವಾಗಿ, ಸಣ್ಣದೊಂದು ಕಲ್ಮಶವೂ ಇಲ್ಲದಂತೆ ಕ್ಷಮಿಸುವ, ಕ್ಷಮೆಯ ಮೂಲಕವೇ ಹೊಸ ಬದುಕನ್ನು ಅಪ್ಪಿಕೊಳ್ಳುವ ಮಾಸ. ಹಲವು ಜಗಳ ಕೊನೆಯಾಗುವುದು, ಮುನಿಸು ಕರಗುವುದು, ಕಲಹ ಇತ್ಯರ್ಥವಾಗುವುದೂ ರಂಜಾನಿನಲ್ಲೇ.

ರಂಜಾನಿನ ಮಧ್ಯಾಹ್ನ ಸಾರಿಗೆ ಒಗ್ಗರಣೆ ಬಳಸದ ಭವಾನಿಯಕ್ಕ. ಒಂದು ಲೀಟರ್ ಹಾಲನ್ನು ಮಾಮೂಲಿಗಿಂತ ಎರಡು ರೂಪಾಯಿ ಕಡಿಮೆಯಲ್ಲಿ ಮಾರಾಟ ಮಾಡುವ ಗೆಳತಿಯ ಅಮ್ಮ. ಮಸೀದಿಯ ಮೈಕ್ ಕೆಟ್ಟು ಹೋದಾಗೆಲ್ಲಾ ಬಾಂಗ್ ಆಗುತ್ತಿದ್ದಂತೆ ‘ಬಾಂಗ್ ಆಗ್ತಿದೆ ಬ್ಯಾರ್ದಿ’ ಎಂದು ಕೂಗಿ ಹೇಳುತ್ತಿದ್ದ ಅಮ್ಮನ ಗೆಳತಿ, ಮಗ್ರಿಬ್ (ಮುಸ್ಸಂಜೆಯ) ಬಾಂಗ್ ಕೂಗಲು ಮೈಕ್ ಸರಿ ಮಾಡುತ್ತಿದ್ದಂತೆ ಮಂದ ಸ್ವರದಲ್ಲಿ ಮಾತಾಡಲು ಗಿರಾಕಿಗಳನ್ನು ವಿನಂತಿಸುತ್ತಿದ್ದ ವೈನ್‌ಶಾಪ್‌ನ ಹುಡುಗ ಹರ್ಷ... ಎಲ್ಲಾ ಉಪವಾಸ ಆಚರಿಸದೇ ಉಪವಾಸ ಧಾರಣೆ ಮಾಡುತ್ತಿದ್ದವರು. ಬಹುಶಃ ಆತ್ಮಶುದ್ಧಿಗಾಗಿ ಉಪವಾಸ, ನಮ್ಮೊಳಗಿನ ಕೆಡುಕಿನೊಂದಿಗಿನ ಸಂಘರ್ಷಕ್ಕಾಗಿ ಉಪವಾಸ ಎನ್ನುವ ಕಲ್ಪನೆಯೆಲ್ಲಾ ಸಾಕಾರವಾಗುವುದು ಈ ಉಪವಾಸಿಗರಲ್ಲದ ಉಪವಾಸಿಗರಲ್ಲೇ.

ಈಗೀಗ ಪ್ರಾಥಮಿಕ ಶಾಲೆಗೆ ಹೋಗುವ ಪುಟ್ಟ ಮಕ್ಕಳೂ ಹಟ ಹಿಡಿದು ಉಪವಾಸ ಮಾಡುತ್ತಾರೆ. ಈಗಿನ ಅಮ್ಮಂದಿರೂ, ಅಜ್ಜಿಯಂದಿರೂ ಮಕ್ಕಳನ್ನು ಹಿಂದಿನಂತೆ ತಡೆಯುವುದೂ ಇಲ್ಲ. ಅಭ್ಯಾಸವಾಗಲಿ ಎಂದೋ, ಹಸಿವಿನ ಬೆಲೆ ಅರ್ಥವಾಗಲಿ ಎಂದೋ ಧಾರಾಳವಾಗಿ ಅನುಮತಿ ನೀಡುತ್ತಾರೆ. ಆದರೆ, ಆ ಮಕ್ಕಳ ಉಪವಾಸದ ಚಂದ ಇರುವುದು ಅವರ ಮುಗ್ಧಾತಿಮುಗ್ಧ ಪ್ರಶ್ನೆಗಳಲ್ಲಿ ಮತ್ತು ಅವರಿಗೆ ಕಾಡುವ ಅನುಮಾನಗಳಲ್ಲಿ. ಅಮ್ಮಂದಿರು ನಮಾಜಿನ ಚಾಪೆ ಬಿಡಿಸುತ್ತಿದ್ದಂತೆ ಓಡಿ ಬರುವ ಮಕ್ಕಳು ಅವರೊಂದಿಗೆ ನಮಾಜಿಗೆ ನಿಂತುಕೊಳ್ಳುವುದನ್ನು ನೋಡುವುದೇ, ಅವರ ಪುಟ್ಟ ಬಾಯಿಯಲ್ಲಿ ಕುರ್’ಆನ್ ವಚನಗಳನ್ನು ಕೇಳುವುದೇ ಒಂದು ಚಂದದ ಅನುಭೂತಿ.

ದಿನವಿಡೀ ಉಪವಾಸವಿದ್ದು ಮಗ್ರಿಬ್ ಬಾಂಗ್‌ನ ಹೊತ್ತಲ್ಲಿ ಕೈಯಲ್ಲಿ ಕರ್ಜೂರ ಹಿಡಿದು ಬಾಂಗ್‌ಗಾಗಿ ಮಕ್ಕಳು ಕಾಯುತ್ತಿರುವಾಗ ಅಮ್ಮಂದಿರ ಕಣ್ಣಲ್ಲಿ ಸಾರ್ಥಕ್ಯದ ಬೆಳಕೊಂದು ಜಿಗ್ಗನೆ ಹೊತ್ತಿಕೊಳ್ಳುತ್ತದೆ. ಇನ್ನು ಇಫ್ತಾರ್‌ಗೆ ಮಕ್ಕಳ ಜೊತೆಗೆ ಅವರ ಗೆಳೆಯ ಗೆಳತಿಯರಿದ್ದರಂತೂ ಮಲಕ್‌ಗಳು(ದೇವದೂತರು) ಆಕಾಶ ಲೋಕದಿಂದ ಭೂಮಿಗಿಳಿದು ಬಂದು ಮಕ್ಕಳ ಜೊತೆಗೂಡಿ ಉಪವಾಸ ತೊರೆಯುತ್ತಿದ್ದಾರೇನೋ ಅನ್ನುವ ಭಾವವೊಂದು ಸುಮ್ಮನೆ ಹಾದು ಹೋಗುತ್ತದೆ.

ಅಲ್ಲಿ ಇಲ್ಲಿ ಚದುರಿರುವ, ಕೆಲಸಕ್ಕೆಂದೋ ಓದಲೆಂದೋ ದೂರ ಇರುವ, ದಿನಕ್ಕೆ ಒಂದು ಬಾರಿಯೂ ಒಟ್ಟಿಗೆ ಕೂತು ಉಣ್ಣದ ಕುಟುಂಬ ಸಹರಿಗೂ, ಇಫ್ತಾರಿಗೂ ಒಟ್ಟಾಗುವ ಖುಷಿ ಅಮ್ಮಂದಿರಿಗೆ. ಸರಳ ಸಹರಿ, ಆರೋಗ್ಯ ಪೂರ್ಣ ಇಫ್ತಾರ್. ಕರ್ಜೂರ, ಹಣ್ಣು, ಮಣ್ಣಿ, ತೆಂಗಿನಕಾಯಿಯ ಗಂಜಿ, ರೊಟ್ಟಿ, ಮೀನಿನ ಸಾರು ಬಹುತೇಕ ಎಲ್ಲಾ ಮನೆಯ ಇಫ್ತಾರ್ ಮೆನು. ಕರಿದ ತಿಂಡಿಗಳು ಆಗ ಊಟದ ಟೇಬಲ್ ಬಿಡಿ, ಅಡುಗೆ ಮನೆಯ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ.

ಆವತ್ತಿನ ಉಪವಾಸಕ್ಕೂ ಇವತ್ತಿನ ಉಪವಾಸಕ್ಕೂ ಇರುವ ವ್ಯತ್ಯಾಸವೇ ಅದು. ದೇಹಾರೋಗ್ಯ ಕಾಪಾಡುತ್ತಿದ್ದ ಆಹಾರಗಳು ಹಿನ್ನೆಲೆಗೆ ಸರಿದು ಕರಿದ ತಿಂಡಿಗಳು, ವಿಪರೀತ ಕೊಬ್ಬಿನ ಆಹಾರಗಳು ಇಫ್ತಾರಿನ ಟೇಬಲ್ ಮೇಲಿರುವುದು ಸ್ವಪ್ರತಿಷ್ಠೆಯ, ಮೇಲರಿಮೆ ವಿಷಯವಾದಂತೆ ಮನೆಯ ಹೆಂಗಸರು ಅಡುಗೆ ಮನೆಯಲ್ಲೇ ವ್ಯಸ್ತರಾಗಬೇಕಾಯಿತು. ನಮಾಜಿಗೂ, ಇತರ ಆರಾಧನೆಗೂ ಸಮಯ ಹೊಂದಿಸುವುದೇ ಸವಾಲಿನ ಕೆಲಸವಾಯಿತು. ಈಗೀಗ ಮತ್ತೆ ಜಾಣ ಹೆಣ್ಣುಮಕ್ಕಳು ಅಡುಗೆ ಮನೆಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಆರಾಧನೆಗಳಿಗೆ ಕೊಡುತ್ತಿದ್ದಾರೆ.

ಅದರಲ್ಲೂ ಉರಿಬಿಸಿಲಿನ ಈ ಬಾರಿಯ ರಂಜಾನ್ ಹಲವು ಪಾಠ ಕಲಿಸಿದೆ. ಬಾಯಿ ರುಚಿಗೆಂದು ತಿನ್ನುವ ಹೆಚ್ಚು ಮಸಾಲೆ ಪದಾರ್ಥಗಳಿರುವ, ಕೊಬ್ಬಿನಾಂಶ ಇರುವ ತಿನಿಸುಗಳು ಉಪವಾಸವನ್ನು ಕಠಿಣಗೊಳಿಸುತ್ತವೆ ಎನ್ನುವುದು ನಿಧಾನವಾಗಿ ಎಲ್ಲರಿಗೂ ಅರ್ಥವಾಗುತ್ತಿದೆ. ಬಿಸಿಲಿದ್ದರೂ, ಮಳೆಯಿದ್ದರೂ, ಚಳಿಯಿದ್ದರೂ ಹಿಂದೆಲ್ಲಾ ಅಷ್ಟು ಸಲೀಸಾಗಿ ಹೇಗೆ ಉಪವಾಸ ಆಚರಿಸುತ್ತಿದ್ದರು ಎಂಬ ಅಚ್ಚರಿಯೀಗ ಹಿಂದಿನವರ ಜೀವನಕ್ರಮ, ಆಹಾರ ಪದ್ಧತಿಯೇ ಕಾರಣವೆಂಬ ಅರಿವಾಗಿ ಬದಲಾಗಿದೆ. ಮೊನ್ನೆ ಬಿಸಿಲಿನ ಝಳಕ್ಕೋ ಅಥವಾ ಪಕ್ಕದ ಮನೆಯ ಮಕ್ಕಳು ಉಪವಾಸ ಹಿಡಿಯುತ್ತೇವೆ ಎಂದು ಹಟ ಹಿಡಿಯುತ್ತಿದ್ದದ್ದಕ್ಕೋ ಗೊತ್ತಿಲ್ಲ. ಅಜ್ಜಿ, ಅವರ ಮಣ್ಣಿ, ಕಾಳಜಿ ಎಲ್ಲ ಒಮ್ಮೆಲೆ ನೆನಪಾಗಿ ಯಾವ ಬೋಧಿವೃಕ್ಷವೂ ಇಲ್ಲದೆ ಜ್ಞಾನೋದಯವಾದಂತಾಯಿತು. ಅಮ್ಮನಿಗೆ ಕರೆ ಮಾಡಿ ಗೋಧಿ ಮಣ್ಣಿ ಹೇಗೆ ಮಾಡುವುದೆಂದು ಕೇಳಿದೆ. ರೆಸಿಪಿ ಹೇಳಿದ ಅಮ್ಮ ಕೊನೆಯಲ್ಲಿ, ‘ನೀನು ಎಷ್ಟು ತಿಪ್ಪರಲಾಗ ಹಾಕಿದರೂ ಅಜ್ಜಿಯ ಮಣ್ಣಿಯ ಟೇಸ್ಟ್ ಬಾರದು. ಒಂದಿಡೀ ರಾತ್ರಿ ನೆನೆಸಿಟ್ಟು ಮರುದಿನ ಮಧ್ಯಾಹ್ನಕ್ಕೂ ಮುನ್ನ ಕೈಯಲ್ಲಿ ಕಡೆದು, ಒಂದು ಗಂಟೆಯ ಕಾಲ ಒಲೆಯ ಮುಂದೆ ಕೂತು ಅದನ್ನು ತಿರುವಿ ಹಾಕುತ್ತಿರಬೇಕು. ಎರಡೇ ನಿಮಿಷದಲ್ಲಿ ರೆಡಿಯಾಗುತ್ತದೆ ಎಂದು ನಂಬಿಸಿರುವ ಮ್ಯಾಗಿಯನ್ನೂ ಒಂದೂವರೆ ನಿಮಿಷದಲ್ಲಿ ಬೇಯಿಸಲು ಯತ್ನಿಸುವ ನಿಮಗೆಲ್ಲಾ ಅಷ್ಟೊಂದು ತಾಳ್ಮೆ, ಅಡುಗೆಯೂ ಒಂದು ತಾಧ್ಯಾತ್ಮ ಅನ್ನುವ ಭಾವ ಎಲ್ಲಿಂದ ಬರಬೇಕು?’ ಎಂದರು. ನಾನು ಕೇಳಿಸಿಕೊಳ್ಳುತ್ತಿದ್ದೆ, ಸುಮ್ಮನೇ...

ಹೀಗಿದೆ ಉಪವಾಸ

* ಬೆಳಿಗ್ಗೆ ಅರುಣೋದಯಕ್ಕೆ ಮುನ್ನ ಎದ್ದು ಸಹರಿ (ಉಪಹಾರ, ಊಟ) ಮಾಡಬೇಕು

* ಸೂರ್ಯಾಸ್ತದವರೆಗೆ ಏನೂ ತಿನ್ನುವಂತಿಲ್ಲ. ನೀರೂ ಕುಡಿಯುವಂತಿಲ್ಲ.ಸೂರ್ಯಾಸ್ತದ ತಕ್ಷಣ ಆಹಾರ (ಇಫ್ತಾರ್) ಸೇವಿಸಬೇಕು

* ಹೊಟ್ಟೆ ಮಾತ್ರವಲ್ಲ, ಪಂಚೇಂದ್ರಿಯಗಳ ಉಪವಾಸ

* ತೀರಾ ವಯಸ್ಸಾದವರು, ರೋಗಿಗಳು, ಬಾಣಂತಿಯರು, ಎಳೆಯ ಮಕ್ಕಳಿಗೆ ಉಪವಾಸದಿಂದ ವಿನಾಯ್ತಿ ಇದೆ

* ಆರೋಗ್ಯವಂತರು ತಾತ್ಕಾಲಿಕ ಅನಾರೋಗ್ಯದಿಂದ ಉಪವಾಸ ಹಿಡಿಯಲಾಗದಿದ್ದರೆ, ಗುಣವಾದ ಬಳಿಕ ಆ ದಿನಗಳ ಉಪವಾಸ ಹಿಡಿಯಬೇಕು. ಜೊತೆಗೆ ಅನ್ನದಾನ, ವಸ್ತ್ರದಾನದ ಪರಿಹಾರ ಕೊಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT