ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಂಕೋಶ ಎಂಬ ಆನ್‌ಲೈನ್‌ ವೇದಿಕೆ

Last Updated 16 ಜೂನ್ 2020, 12:50 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ನೃತ್ಯ, ರಂಗಭೂಮಿ, ಸಂಗೀತ.. ಸೇರಿದಂತೆವಿವಿಧ ಕಲಾಪ್ರಕಾರಗಳನ್ನು ಅವಲಂಬಿಸಿದವರು ಕೆಲಸವಿಲ್ಲದೇ ಮನೆಯಲ್ಲಿ ಕೂರುವಂತಾಗಿದೆ. ಕಲಾಪ್ರದರ್ಶನದ ಮೇಲೆ ಅವಲಂಬಿತರಾಗಿದ್ದವರಿಗೆ ನಿತ್ಯದ ಜೀವನವೂ ಕಷ್ಟವಾಗಿದೆ. ಈಗಾಗಲೇ ಮೂರು ತಿಂಗಳು ಲಾಕ್‌ಡೌನ್‌ ಕಳೆದಿದ್ದು, ಇನ್ನುದೀಪಾವಳಿವರೆಗೂ ಸಭಾಂಗಣಗಳ ಬಾಗಿಲು ತೆರೆಯುವ ಲಕ್ಷಣ ಕಾಣಿಸುತ್ತಿಲ್ಲ. ಒಂದು ವೇಳೆ ನಾಟಕ, ನೃತ್ಯಪ್ರದರ್ಶನಗಳು ನಡೆದರೂ, ಪ್ರೇಕ್ಷಕರು ಬರುತ್ತಾರೆಯೇ ಎಂಬ ಪ್ರಶ್ನೆಯೂ ಕಲಾವಿದರನ್ನು ಕಾಡುತ್ತಿದೆ.

ಸಂಕಷ್ಟದಲ್ಲಿರುವ ಇಂಥ ಕಲಾವಿದರಿಗೆ ನೆರವಾಗುವುದಕ್ಕಾಗಿನಗರದ ಪ್ರಭಾತ್‌ ಆಡಿಟೋರಿಯಂನವರು ಕಲಾಪ್ರದರ್ಶನ ಹಾಗೂ ಕಲಾವಿದರಿಗೆ ಆರ್ಥಿಕವಾಗಿ ಸಹಾಯ ಮಾಡಲು ‘ಸಭಾಂಕೋಶ’ ಎಂಬ ಆನ್‌ಲೈನ್ ವೇದಿಕೆಯನ್ನು ಆರಂಭಿಸಿದೆ. ಇದು ಆ್ಯಪ್ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ವೀಕ್ಷಕರು ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ನೆಚ್ಚಿನ ನಾಟಕ ಅಥವಾ ಸಂಗೀತಗಾರರ ಷೋಗಳನ್ನು ನೇರಪ್ರಸಾರದಲ್ಲಿ ನೋಡಿ ಆನಂದಿಸಬಹುದು.

ಪ್ರಭಾತ್‌ ಕಲಾಪೂರ್ಣಿಮದಲ್ಲಿ ಕಲಾವಿದರಿಂದ ಕಾರ್ಯಕ್ರಮ

ಎನ್‌.ಆರ್‌. ಕಾಲೊನಿಯ ಪ್ರಭಾತ್‌ ಆಡಿಟೋರಿಯಂನ ವೇದಿಕೆಯಲ್ಲಿ ರಂಗತಂಡ, ನೃತ್ಯ ಸಂಸ್ಥೆ, ಸಂಗೀತ ಅಥವಾ ಸಾಂಸ್ಕೃತಿಕ ತಂಡವು ತಮ್ಮ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ಪ್ರೇಕ್ಷಕರು ಭಾಗವಹಿಸುವಂತಿಲ್ಲ. ಬರೀ10 ಜನ ಕಲಾವಿದರ ತಂಡ ಕಾರ್ಯಕ್ರಮ ನೀಡುತ್ತಾರೆ. ಅದನ್ನು ಲೈವ್‌ ಪ್ರಸಾರ ಮಾಡಲಾಗುತ್ತದೆ. ಮನೆಯಲ್ಲಿಯೇ ಜನರು ವೀಕ್ಷಿಸಬಹುದು.

‘ಕಾರ್ಯಕ್ರಮ ನೀಡುವತಂಡಗಳು ತಮ್ಮ ಕಾರ್ಯಕ್ರಮದ ಬಗ್ಗೆ ಪ್ರಭಾತ್‌ ಆಡಿಟೋರಿಯಂಗೆ ಇಮೇಲ್‌ ಮೂಲಕ ದಿನ, ಸಮಯ ನಿಗದಿಪಡಿಸಿಕೊಳ್ಳಬೇಕು.ಸಭಾಂಕೋಶದಲ್ಲಿ ನೃತ್ಯ, ಸ್ಟ್ಯಾಂಡ್‌ ಅಪ್‌ ಕಾಮಿಡಿಗಳನ್ನು ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನೇರಪ್ರಸಾರ ಮಾಡಲಾಗುತ್ತದೆ.

‘ಲೈವ್‌ ಆಗಿ ನೋಡಿದಾಗಲೇ ನಾಟಕ, ನೃತ್ಯಕ್ಕೆ ಶೋಭೆ. ಅಲ್ಲಿ ತಪ್ಪುಗಳು ನಡೆದರೂ ಕಲಾವಿದರಾದ ನಾವು ಅದನ್ನು ಎಂಜಾಯ್‌ ಮಾಡುತ್ತೇವೆ. ಹಾಗೇ ಮುಂದಿನ ಬಾರಿ ವೇದಿಕೆಯಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಕಲಾವಿದರ ನಟನೆಯನ್ನು ಜೀವಂತವಾಗಿಡುವುದು ಅದೇ. ಹಾಗಾಗಿ ಇಲ್ಲಿ ರೆಕಾರ್ಡೆಡ್‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ’ ಎನ್ನುತ್ತಾರೆ ಪ್ರಭಾತ್‌ ಆಡಿಟೋರಿಯಂನ ನಿರ್ದೇಶಕಿ ವರ್ಷಿಣಿ ವಿಜಯನ್‌.

ಪ್ರೇಕ್ಷಕರಿಗೆ ಟಿಕೆಟ್‌

ಸಭಾಂಕೋಶ ಆ್ಯಪ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳ ವಿವರ, ದಿನಾಂಕ, ಸಮಯ ನಿಗದಿ ಮಾಡಲಾಗಿರುತ್ತದೆ. ಇದರಲ್ಲಿ ಆಯಾಯ ಕಾರ್ಯಕ್ರಮದ ಪ್ರವೇಶ ದರವೂ ಇರುತ್ತದೆ. ಆ ಮೊತ್ತವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಿ ಕಾರ್ಯಕ್ರಮ ವೀಕ್ಷಿಸಬಹುದು. ಪ್ರತಿ ಕಾರ್ಯಕ್ರಮಕ್ಕೆ ಆಯಾಯ ತಂಡವು ಮೊತ್ತ ನಿಗದಿ ಮಾಡಿರುತ್ತದೆ. ಅಲ್ಲಿ ತಿಳಿಸಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ನೋಡಬಹುದು. ಸಂಗೀತ ಕಛೇರಿ, ನಾಟಕ ಪ್ರದರ್ಶನ, ಸ್ಟ್ಯಾಂಡ್‌ ಅಪ್‌ ಕಾಮಿಡಿ, ಮಕ್ಕಳ ನಾಟಕ, ಭರತನಾಟ್ಯ ಸೇರಿದಂತೆ ಯಾರಿಗೆ ಏನು ಇಷ್ಟವೋ ಆ ಕಾರ್ಯಕ್ರಮಗಳನ್ನು ನೋಡಬಹುದು.ಈ ಸಂಗ್ರಹವಾದ ಒಟ್ಟು ಮೊತ್ತದಲ್ಲಿ ಒಂದು ಪಾಲು ಸಭಾಂಕೋಶ ಪ್ರಭಾತ್‌ ಆಡಿಟೋರಿಯಂಗೆ ಸಲ್ಲುತ್ತದೆ. ಒಂದು ವೇಳೆ ಕಾರ್ಯಕ್ರಮವನ್ನು ತಪ್ಪಿಸಿಕೊಂಡಲ್ಲಿ ಅದು ರೆಕಾರ್ಡ್‌ ಆಗಿರುವುದಿಲ್ಲ. ಪುನಂ ಆ ತಂಡದ ಷೋ ಇದ್ದಲ್ಲಿ ಮೊತ್ತ ಪಾವತಿಸಿ ನೋಡಬೇಕಾಗುತ್ತದೆ.

ಯಾವ ಯಾವ ಕಾರ್ಯಕ್ರಮಗಳನ್ನು ನೋಡಬಹುದು?

ಈಗಾಗಲೇ ಆ್ಯಪ್‌ನಲ್ಲಿ ಒಂದು ತಿಂಗಳ ಕಾಲದ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಆ್ಯಪ್‌ ಕಾರ್ಯನಿರ್ವಹಣೆಗೆ ಸಿದ್ಧವಾಗಿದೆ. ಜೂನ್‌ 20ರಿಂದ ಇದು ಕಾರ್ಯನಿರ್ವಹಿಸಲಿದೆ. ನಟ ರಿಷಭ್‌ ಶೆಟ್ಟಿಯವರು ಈ ಆ್ಯಪ್‌ಗೆ ಚಾಲನೆ ನೀಡಲಿದ್ದಾರೆ. ಮೊದಲ ಕಾರ್ಯಕ್ರಮವಾಗಿ ಎಸ್‌.ಎನ್‌. ಸೇತುರಾಮ್‌ ಅವರ ‘ಉಚ್ಛಿಷ್ಠ’ ನಾಟಕ ಪ್ರದರ್ಶನವಾಗಲಿದೆ.

ವೀಮೂವ್‌ ಥಿಯೇಟರ್‌, ರಶ್ಮಿ ರವಿಕುಮಾರ್‌ ನಿರ್ದೇಶನದ ನಾಟಕ, ಎಸ್‌. ಎನ್‌. ಸೇತುರಾಮ್‌ ಅವರ ಎರಡು ನಾಟಕಗಳು, ಕಿರಣ್‌ ವಟಿ ನಿರ್ದೇಶನದ 'ಶ್ರದ್ಧಾ ಮತ್ತು ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಗಳು' ನಾಟಕ ಸೇರಿದಂತೆ ನಾಟಕಗಳನ್ನು ವೀಕ್ಷಿಸಬಹುದು. ಎಲ್ಲಾ ಕಾರ್ಯಕ್ರಮಗಳ ಮಾಹಿತಿ, ವಿವರ, ಸಾರಾಂಶ ಆ್ಯಪ್‌ನಲ್ಲಿ ಲಭ್ಯ. ಈಆ್ಯಪ್‌ ಆ್ಯಂಡ್ರಾಯ್ಡ್‌ ಹಾಗೂ ಆ್ಯಪ್‌ ಸ್ಟೋರ್‌ಗಳಲ್ಲೂ ಲಭ್ಯ.

ಸಭಾಂಕೋಶ ಕುರಿತು

ರಂಗಚಟುವಟಿಕೆಗಳು ಇಲ್ಲದೇ ಎಲ್ಲಾ ಸಭಾಂಗಣಗಳು ಖಾಲಿ ಹೊಡೆಯುತ್ತಿವೆ. ಕಲಾವಿದರು ಭವಿಷ್ಯದ ಆಲೋಚನೆ ಮಾಡುತ್ತಿ ದ್ದಾರೆ. ನಾವು ಪ್ರಭಾತ್‌ ಆಡಿಟೋರಿಯಂ ಆನ್‌ಲೈನ್‌ ಬುಕ್‌ ಮಾಡಲು ಬಯಸುವವರಿಗಾಗಿ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲು ಯೋಚಿಸುತ್ತಿದ್ದೆವು. ಆಗ ಕೊರೊನಾದಿಂದ ಲಾಕ್‌ಡೌನ್‌ ಆರಂಭವಾಯಿತು. ಲಾಕ್‌ಡೌನ್‌ ವಿಸ್ತರಣೆ ಆಗುತ್ತಾ ಹೋಯಿತು. ಆಗ ಕಲಾವಿದರಿಗಾಗಿ ಇಂತಹ ಆ್ಯಪ್‌ ಅಗತ್ಯವಿದೆ ಎನಿಸಿತು ಎಂದು ಆ್ಯಪ್ ಆರಂಭದ ಹಿಂದಿನ ಉದ್ದೇಶ ವಿವರಿಸಿದರು ಪ್ರಭಾತ್ ಆಡಿಟೋರಿಯಂನ ನಿರ್ದೇಶಕಿ ವರ್ಷಿಣಿ ವಿಜಯ್‌.

‘ಬೆಂಗಳೂರಿನಲ್ಲಿರುವ ಅನೇಕ ರಂಗತಂಡ, ರಂಗಕರ್ಮಿಗಳು ನಾಟಕವನ್ನೇ ಅವಲಂಬಿಸಿದ್ದಾರೆ. ಮೂರು ತಿಂಗಳು ಉದ್ಯೋಗ ಇಲ್ಲದಿದ್ದರೆ ಕಷ್ಟ. ಲಾಕ್‌ಡೌನ್‌ ಅವಧಿಯಲ್ಲಿ ಕೆಲ ನೃತ್ಯ ಸಂಸ್ಥೆ, ನಾಟಕ ತಂಡಗಳು ಲೈವ್‌ ಪ್ರದರ್ಶನಗಳನ್ನು ನೀಡಿವೆ. ಆದರೆ ಅವೆಲ್ಲ ಉಚಿತ ಕಾರ್ಯಕ್ರಮಗಳಾಗಿದ್ದವು. ಇದರಿಂದ ಕಲಾವಿದರಿಗೆ ಆರ್ಥಿಕವಾಗಿ ಸಹಾಯವಾಗಲಿಲ್ಲ.ಇದಲ್ಲದೇ ಕೆಲವೊಂದು ವಿಶೇಷ ದಿನಗಳಂದು ಎಲ್ಲರೂ ಒಟ್ಟೊಟ್ಟಿಗೆ ಲೈವ್‌ ಕಾರ್ಯಕ್ರಮ ನೀಡುತ್ತಿದ್ದರು. ಯಾರು, ಯಾವ ಕಾರ್ಯಕ್ರಮ ನೀಡುತ್ತಿದ್ದಾರೆ? ಯಾವ ಕಾರ್ಯಕ್ರಮ ನೋಡಬೇಕು ಎಂಬುದು ಪ್ರೇಕ್ಷಕನಿಗೆ ಗೊಂದಲ. ಆದರೆ, ಸಭಾಂಕೋಶದಲ್ಲಿ ಪ್ರತಿ ಕಾರ್ಯಕ್ರಮವನ್ನೂ ಮುಂಚಿತವಾಗಿಯೇ ನಿಗದಿ ಮಾಡಲಾಗಿರುತ್ತದೆ‘ ಎಂದು ಅವರು ಹೇಳುತ್ತಾರೆ.

ಇನ್ನು ನಾಟಕ, ನೃತ್ಯ ಅಂದಾಗ ಬರೀ ವೇದಿಕೆ ಮೇಲೆ ಕಾಣುವ ಕಲಾವಿದರಷ್ಟೇ ಅಲ್ಲ, ತೆರೆಯ ಹಿಂದೆ ಕೆಲಸ ಮಾಡುವಮೇಕಪ್‌ ಕಲಾವಿದರು, ಸೌಂಡ್‌ ಆರ್ಟಿಸ್ಟ್‌, ಬೆಳಕು ಹೀಗೆ ನಾನಾ ಜನರು ಇದ್ದಾರೆ. ಎಲ್ಲರ ಜೀವನೋಪಾಯವೂ ಅದೇ ಆಗಿರುತ್ತದೆ. ಪರಿಸ್ಥಿತಿ ಹೀಗಿದ್ದಾಗ, ಒಂದು ತಂಡ ನಾಟಕ ಅಥವಾ ನೃತ್ಯರೂಪಕವನ್ನು ಉಚಿತವಾಗಿ ಪದೇ ಪದೇ ಪ್ರದರ್ಶನ ಮಾಡಿದರೆ ಅದನ್ನೇ ನಂಬಿಕೊಂಡವರ ಗತಿಯೇನು? ಎಂದು ಅನಿಸಿತು. ಹಾಗೇ ಯೋಚನೆ ಮಾಡಿದಾಗ ಹೊಳೆದದ್ದು ಸಭಾಂಕೋಶ‘ ಎಂದು ವರ್ಷಿಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT