ಶುಕ್ರವಾರ, ಫೆಬ್ರವರಿ 28, 2020
19 °C

ಸಾಹಿತ್ಯವು ಸಾಮಾನ್ಯರ ಸಖ ಆಗಿದೆಯೆ?

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

prajavani

ಸುಮಾರು ಐವತ್ತು ವರ್ಷಗಳ ಕೆಳಗೆ ಮೈಸೂರು ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವ್ಯವಸಾಯ ಮಾಡಲು ಹೋದ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಿಗೆ ತಾವು ನಿತ್ಯ ಒಡನಾಡುತ್ತಿದ್ದ ಅನಕ್ಷರಸ್ಥರನ್ನು ನೋಡನೋಡುತ್ತಾ, ‘ನಾನು ಯಾರಿಗೆ ಬರೆಯಬೇಕು?’ ಎಂಬ ಪ್ರಶ್ನೆ ಎದುರಾಯಿತು. ಆಗ ಅವರು ತಾವು ಆವರೆಗೆ ಬಳಸುತ್ತಿದ್ದ ಕನ್ನಡವನ್ನೇ ಸರಳಗೊಳಿಸಿಕೊಂಡು ಕಥೆಗಳನ್ನು ಬರೆದರು. ಮುಂದೊಮ್ಮೆ ತಮ್ಮ ಕಾದಂಬರಿಯ ಪಾತ್ರಗಳಾದ ಪ್ಯಾರ, ಬಿರಿಯಾನಿ ಕರಿಯಪ್ಪ ಕೂಡ ತಮ್ಮ ಕಾದಂಬರಿ ಓದುವಂತೆ ಬರೆಯಬೇಕಲ್ಲವೆ ಎನ್ನಿಸಿದಾಗ ಅವರ ಕಥಾಬರವಣಿಗೆ ಇನ್ನಷ್ಟು ನೇರವಾಯಿತು.

ಇದಕ್ಕೂ ಮೊದಲು ಕನ್ನಡ ಪ್ರಗತಿಶೀಲ ಸಾಹಿತ್ಯ ಸಾಮಾನ್ಯ ಜನರ ಕಷ್ಟವನ್ನು ಕಾದಂಬರಿಗಳ ಕೇಂದ್ರಕ್ಕೆ ತರುವುದನ್ನು ಕುರಿತ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಮುಂದೆ ದಲಿತ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯ ಚಳವಳಿಗಳು ಸಾಹಿತ್ಯ ಸಾಮಾನ್ಯರ ದನಿಯನ್ನು, ದುಮ್ಮಾನಗಳನ್ನು ಬಿಂಬಿಸಬೇಕೆಂಬ ಚರ್ಚೆ ಶುರು ಮಾಡಿದಾಗ ‘ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ’ ಎಂಬ ಮಹತ್ವದ ಚರ್ಚೆ ನಡೆಯಿತು.

ಲಂಕೇಶರು ಪತ್ರಿಕೋದ್ಯಮಕ್ಕೆ ಬಂದ ಮೇಲೆ ಸಾಮಾನ್ಯ ಓದುಗರ ಪ್ರಶ್ನೆ ಎದುರಾದಾಗ, ಅವರು ಗಾಂಧೀಜಿಯ ಗದ್ಯದಿಂದ ಕೂಡ ಹೆಚ್ಚು ಜನರನ್ನು ತಲುಪಬಲ್ಲ ನೇರ, ಕ್ಷಿಪ್ರ ಗದ್ಯವನ್ನು ರೂಢಿಸಿಕೊಂಡರು. ‘ಲಂಕೇಶ್ ಪತ್ರಿಕೆ’ ಸಾಮಾನ್ಯರ ದೃಷ್ಟಿಯಿಂದ ರಾಜಕೀಯ, ಧರ್ಮ, ಸಮಾಜಗಳನ್ನು ಪರೀಕ್ಷಿಸುವ ಬರವಣಿಗೆಯನ್ನು ರೂಪಿಸಲೆತ್ನಿಸಿತು. ಆಧುನಿಕ ಕರ್ನಾಟಕದಲ್ಲಿ ನಡೆದ ಇಂಥ ಅನೇಕ ಬೆಳವಣಿಗೆಗಳಿಂದಾಗಿ ನವೋದಯ ಕಾಲದಿಂದಲೂ ಸಾಮಾನ್ಯರ ಆಸೆ, ನಿರಾಸೆ, ನಿಲುವು, ಬಿಕ್ಕಟ್ಟುಗಳನ್ನು ಮಂಡಿಸುವ ಸಾವಿರಾರು ಕೃತಿಗಳು ಸೃಷ್ಟಿಯಾಗಿವೆ.

ಇದಕ್ಕೂ ಮೊದಲು ಹನ್ನೆರಡನೇ ಶತಮಾನದಲ್ಲಿ ಜನರ ಆಡುಮಾತು ಹಾಗೂ ಜನರ ನೋಟಗಳು ಸಾಹಿತ್ಯ ರಚನೆಯ ಭಾಗವಾದವು. ಹಲವು ಬಗೆಯ ಜಾತಿಗಳು ಹಾಗೂ ಕಸುಬುಗಳ ಹಿನ್ನೆಲೆಯಿಂದ ಬಂದ ಗಂಡು–ಹೆಣ್ಣುಗಳು ವಚನಗಳನ್ನು ನುಡಿಯಲು, ಬರೆಯಲು ಶುರು ಮಾಡಿದ್ದು ಕೂಡ ಇದಕ್ಕೆ ಕಾರಣ. ಬಹುಜನ ಸಮುದಾಯ ಸಾಹಿತ್ಯ ಪರಿಸರಕ್ಕೆ ಬಂದಾಗ ಸಾಹಿತ್ಯ ರಚನೆಗಳಿಗೆ ಬರುವ ವಿಶಾಲ ವ್ಯಾಪ್ತಿ, ಭಾಷೆಗೆ ಒದಗುವ ಸರಳತೆ ಹಾಗೂ ವೈವಿಧ್ಯ ವಚನ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ಯಾರು ಬೇಕಾದರೂ ಬಳಸಬಲ್ಲ ಸರಳ ಚೌಕಟ್ಟನ್ನು ಆದ್ಯ ವಚನಕಾರರು ಸೃಷ್ಟಿಸಿಕೊಟ್ಟಿದ್ದು ಇದಕ್ಕೆ ಪೂರಕವಾಗಿತ್ತು. ಇದಕ್ಕೂ ಮೊದಲೇ ಜನಪದ ಸಾಹಿತಿಗಳು, ಮುಖ್ಯವಾಗಿ ಹೆಂಗಸರು, ದನಿಯಿಲ್ಲದವರ ದನಿಯಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದರು.

ವಚನ ಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳು ಸಂಸ್ಕೃತದ ಹೊರೆಯಿಂದ ಬಿಡಿಸಿಕೊಂಡ ಕನ್ನಡದಲ್ಲಿ ಮೂಡಿದ್ದರಿಂದ ಸಾಮಾನ್ಯರ ನುಡಿ, ನಿಲುವು, ನೋಟಗಳು ಇಲ್ಲಿ ದಾಖಲಾದವು. ವಚನಕಾರ ನಗೆಯ ಮಾರಿತಂದೆ, ಸಂಸ್ಕೃತವನ್ನು ಬಳಸಿ ಸತ್ಯವನ್ನು ಮರೆಮಾಚುವ ಬರವಣಿಗೆಯನ್ನು ನೇರವಾಗಿಯೇ ಟೀಕಿಸುತ್ತಾನೆ: ‘ವಾಗೈದ್ವೈತವ ಕಲಿತು, ಸಂಸ್ಕೃತದ ಮಾತಿನ ಪಸರವ ಇಕ್ಕಿಕೊಂಡು, ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವವನಂತೆ ಅದೇತರ ನುಡಿ ಮಾತಿನ ಮರೆ?’ ಎನ್ನುತ್ತಾನೆ. ಇಂತಹ ನಿಲುವಿನ ಜೊತೆಗೇ ವೇದಶಾಸ್ತ್ರಪುರಾಣಗಳ ಲೋಕವನ್ನೇ ತಿರಸ್ಕರಿಸಿ ಜನಸಾಮಾನ್ಯರ ಧರ್ಮ, ನೋಟಗಳನ್ನು ಬಿಂಬಿಸಿದ್ದರಿಂದ ಕೂಡ ವಚನ ಸಾಹಿತ್ಯ ಸಾಮಾನ್ಯರಿಗೆ ಬಾಯಿ ಕೊಟ್ಟಿತು ಹಾಗೂ ಅವರನ್ನು ಬಿಂಬಿಸಿತು. ಜೊತೆಗೆ, ಪ್ರಾಚೀನ ಕಾಲದಿಂದಲೂ ರಂಗಭೂಮಿ, ಗಾಯನ, ಪ್ರದರ್ಶಕ ಕಲೆಗಳು ಓದು ಬಾರದವರಿಗೂ ಸಾಹಿತ್ಯವನ್ನು ತಲುಪಿಸಲು ಯತ್ನಿಸಿವೆ.

ಆದರೆ, ಹತ್ತೊಂಬತ್ತನೇ ಶತಮಾನದಿಂದೀಚೆಗೆ, ಸಾಹಿತ್ಯ ಸಾಮಾನ್ಯರನ್ನು ಬಿಂಬಿಸಬೇಕು, ಸಾಮಾನ್ಯರಿಗೆ ಹತ್ತಿರವಾಗಬೇಕು ಎಂಬ ಪ್ರಶ್ನೆ ಇನ್ನಷ್ಟು ಸ್ಪಷ್ಟವಾಗಿ ಲೋಕದಾದ್ಯಂತ ಹಲವು ಬಗೆಯ ತಾತ್ವಿಕ ನೆಲೆಗಳಲ್ಲಿ ಚರ್ಚಿತವಾಗತೊಡಗಿವೆ. ಮಾರ್ಕ್ಸ್‌ವಾದದ ಪ್ರಭಾವದಿಂದ ಈ ಪ್ರಶ್ನೆಗಳಿಗೆ ಖಚಿತ ಚೌಕಟ್ಟುಗಳು ಬಂದಿವೆ. ಸಾಹಿತ್ಯ ದುಡಿಯುವ ವರ್ಗದ ಪರವಾಗಿರಬೇಕು ಎಂಬ ಪ್ರಣಾಳಿಕೆಗಳೇ ಹುಟ್ಟಿವೆ.

ಆದರೆ, ಸಾಹಿತ್ಯ ಜನರ ಸಂಗಾತಿಯಾಗುವುದೆಂದರೆ ಜನರಿಗೆ ರೈಲು ಹತ್ತಿಸುವುದಲ್ಲ; ಕಥೆಯಲ್ಲೋ, ಕಾದಂಬರಿಯಲ್ಲೋ, ಕೃತಕವಾದ ಕೊನೆಯನ್ನು ಸೃಷ್ಟಿಸಿ ಸಾಮಾನ್ಯರು ಗೆಲ್ಲುವಂತೆ ಮಾಡಿ ಹುಸಿ ಸಮಾಧಾನ ಪಡೆಯುವುದಾಗಲೀ, ನೀಡುವುದಾಗಲೀ ಅಲ್ಲ. ಇಂಥ ದುರ್ಬಲ ಬರವಣಿಗೆ ಕಾಲದ ಓಟದಲ್ಲಿ ನಿಲ್ಲುವುದಿಲ್ಲವೆಂಬುದಕ್ಕೆ ನಮ್ಮ ಕಣ್ಣೆದುರೇ ಬಿದ್ದು ಹೋದ ನೂರಾರು ಪುಸ್ತಕಗಳು ಸಾಕ್ಷಿಯಾಗಿವೆ. ಜನರ ಪರವಾಗಿ ಬರೆಯುವ ಕೆಲಸದಲ್ಲಿ ಜನರನ್ನು ತಿದ್ದುವ ಕೆಲಸವೂ ಸೇರಿದೆ. ಕಾಮನ್‌ಸೆನ್ಸ್‌ ಅಂದರೆ ‘ಪೂರ್ವಗ್ರಹ’ ಎಂಬ ಅರ್ಥವೂ ಇದೆ ಎನ್ನುತ್ತಾನೆ ಲೆನಿನ್. ಬಗೆಬಗೆಯ ಪೂರ್ವಗ್ರಹಗಳಿಂದ ಜನರನ್ನು ಹೊರತರುವುದು ಕೂಡ ಸಾಹಿತ್ಯದ ಜವಾಬ್ದಾರಿಯೇ. ಈ ಮೂಲಕ ಉತ್ತಮ ಸಾಹಿತ್ಯ ಪರಿಸರ ಸಾಮಾನ್ಯ ಓದುಗರನ್ನು ಜ್ಞಾನಿಗಳಾದ ಓದುಗರನ್ನಾಗಿ, ನಂತರ ಲೇಖಕರನ್ನಾಗಿ ಮಾಡುತ್ತಿರುತ್ತದೆ.

ಆದ್ದರಿಂದಲೇ ಇವತ್ತು ‘ಸಾಹಿತ್ಯ’ ಅಂದರೆ ಕೇವಲ ಕಥೆ, ಪದ್ಯ, ಕಾದಂಬರಿ ಮಾತ್ರ ಅಲ್ಲ; ಎಲ್ಲ ಬಗೆಯ ಬರವಣಿಗೆಯೂ ಸಾಹಿತ್ಯವೇ. ಸಾಮಾನ್ಯ ಜನರನ್ನು ಬಿಂಬಿಸುವುದು ಎಂದರೆ ಅವರ ದೃಷ್ಟಿಕೋನದಿಂದ ಚರಿತ್ರೆಯನ್ನು, ಘಟನಾವಳಿಗಳನ್ನು ನೋಡುವುದು ಹಾಗೂ ಆ ಬಗ್ಗೆ ಜನರಿಗೆ ಅರಿವು ನೀಡುವುದು ಎಂಬ ಅರ್ಥವೂ ಈಗ ಇದೆ. ರಷ್ಯಾದ ಗಾರ್ಕಿಯ ‘ಮದರ್’ ಅಥವಾ ನಿರಂಜನರ ‘ಚಿರಸ್ಮರಣೆ’ ಕಾದಂಬರಿಗಳೆರಡೂ ಜನಸಾಮಾನ್ಯರ ದೃಷ್ಟಿಕೋನದಿಂದ ವರ್ಗ ಸಂಘರ್ಷವನ್ನು ನೋಡುತ್ತವೆ; ಅದೇ ರೀತಿ ಈ ಕಾಲದ ಸಬಾಲ್ಟರ್ನ್ ಅಧ್ಯಯನಗಳು, ಹೊಣೆಯುಳ್ಳ ಪತ್ರಿಕೋದ್ಯಮ ಕೂಡ ಈ ಕೆಲಸ ಮಾಡುತ್ತಿವೆ. ಅದಕ್ಕೂ ಮೊದಲೇ ಜೋತಿಬಾ ಫುಲೆ, ಅಂಬೇಡ್ಕರ್ ಅವರ ಬರವಣಿಗೆಗಳು ಆ ಕೆಲಸವನ್ನು ಮಾಡಿವೆ; ಈಗಲೂ ಮಾಡುತ್ತಿವೆ.

ಈ ಎಲ್ಲ ಬರವಣಿಗೆಗಳೂ ಸೇರಿ ಪ್ರಬಲ ಜಾತಿಗಳು, ಆಳುವ ವರ್ಗಗಳು ಹೇಳುತ್ತಾ ಬಂದಿರುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯನ್ನು, ಸತ್ಯಗಳನ್ನು ನಮ್ಮೆದುರು ಮಂಡಿಸುತ್ತವೆ. ಇವೆಲ್ಲದರ ಫಲವಾಗಿ ಸಾಮಾನ್ಯರ ಪರವಾದ ಚಿಂತನೆಗಳು, ಯೋಜನೆಗಳು ನಾಯಕರಲ್ಲಿ, ಸರ್ಕಾರ ನಡೆಸುವವರಲ್ಲಿ ಮೂಡತೊಡಗುತ್ತವೆ. ಕರ್ನಾಟಕದ ಶ್ರೇಷ್ಠ ನಾಯಕರಾದ ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಬಿ. ಬಸವಲಿಂಗಪ್ಪನವರಿಗೆ ಇದ್ದ ಜನಪರ ಕಾಳಜಿಗಳಲ್ಲಿ ಸಾಹಿತ್ಯ, ವೈಚಾರಿಕ ಬರಹಗಳ ಕೊಡುಗೆಯೂ ಇದೆ. ಬಡ ಮಹಿಳೆಯರ ಪರವಾದ ಅನೇಕ ಯೋಜನೆಗಳ ಹಿಂದೆ ಸ್ತ್ರೀವಾದಿ ಚಿಂತನೆಯ ಬರಹಗಳ ಕೊಡುಗೆಯೂ ಪ್ರಧಾನವಾಗಿದೆ.

ಇಷ್ಟೆಲ್ಲ ಇದ್ದರೂ, ಯಾವ ಗಂಭೀರ ಲೇಖಕ, ಲೇಖಕಿಯೂ ಸದಾ ಸಾಮಾನ್ಯ ಓದುಗರನ್ನು ತಲೆಯಲ್ಲಿಟ್ಟುಕೊಂಡು ಬರೆಯಲಾರರು. ಆದರೆ, ಆ ಕುರಿತ ಕಾಳಜಿ ಹಾಗೂ ಜವಾಬ್ದಾರಿ ಅವರ ಬರವಣಿಗೆಯ ಹಿನ್ನೆಲೆಯಲ್ಲಿ ಇರಲೇಬೇಕು. ಇವತ್ತಿನ ಅತಿ ಸ್ವಕೇಂದ್ರಿತ ಜಾಲತಾಣಗಳ ಲೇಖಕ, ಲೇಖಕಿಯರಲ್ಲಿ ಸಾಮಾನ್ಯ ಜನರ ಪ್ರಶ್ನೆಗಳಿಗೆ ಸ್ಥಾನವಿದೆಯೇ ಎಂದರೆ, ‘ಇಲ್ಲ’ ಎನ್ನುವವರೇ ಹೆಚ್ಚು. ಆದರೆ, ಜಾಲತಾಣಗಳಲ್ಲಿ ಕೂಡ ಮೇಲೆ ಹೇಳಿದ ಎಲ್ಲ ಕಾಳಜಿಗಳನ್ನು ಹಂಚಿಕೊಳ್ಳುವ ತರುಣ, ತರುಣಿಯರಿದ್ದಾರೆ. ಪೌರತ್ವ ಕಾಯ್ದೆಯ ದೋಷಗಳನ್ನು ಎತ್ತಿ ತೋರಿಸುತ್ತಿರುವವರು, ಕೋಮುವಾದ, ಜಾತೀಯತೆಗಳನ್ನು ದಿಟ್ಟವಾಗಿ ಮುಖಾಮುಖಿಯಾಗುವವರು ಕೂಡ ಈ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವನ್ನೇ ಮಾಡುತ್ತಿರುವ ಬ್ಲಾಗ್‌ಗಳಿವೆ. ಆದರೆ ‘ಜನಪ್ರಿಯ’ ಎನ್ನಲಾಗುವ ‘ಜನಬಳಕೆಯ ಸಂಸ್ಕೃತಿ’ಯನ್ನು ಪ್ರಭಾವಿಸುವ ರಾಜಕೀಯ ಲೋಕ, ಧಾರ್ಮಿಕ ಲೋಕ ಹಾಗೂ ತೆರೆ ಲೋಕ- ಈ ಮೂರೂ ಲೋಕಗಳು ಒಟ್ಟಾರೆಯಾಗಿ ಸಾಮಾನ್ಯ ಜನರನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಿವೆ: ರಾಜಕೀಯ ನಾಯಕರಿಗೆ ಸಾಮಾನ್ಯ ಮಹಿಳೆ ಎಂದರೆ ಒಂದು ಓಟು ಮಾತ್ರ. ಧಾರ್ಮಿಕ ಲೋಕದವರಿಗೆ ಸಾಮಾನ್ಯ ಮನುಷ್ಯ ತಮ್ಮನ್ನು ಹಿಂಬಾಲಿಸುವ ಕುರಿ ಮಾತ್ರ. ಜನಪ್ರಿಯ ಸಿನಿಮಾ ಹಾಗೂ ಟೆಲಿಲೋಕಕ್ಕೆ ಸಾಮಾನ್ಯ ಗಂಡಸು ಹಾಗೂ ಹೆಂಗಸು ಎಂದರೆ ಕೇವಲ ಗ್ರಾಹಕರು, ಅಷ್ಟೆ.

ಇಂಥ ಸಿನಿಕ ಹಾಗೂ ಕ್ರೂರ ಸಂದರ್ಭದಲ್ಲಿ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಾ ಕಾಲದೂಡುವ ಸಾಹಿತ್ಯ ಸಮ್ಮೇಳನಗಳಿಗೆ, ಸಾಮಾನ್ಯರನ್ನು ಕುರಿತ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಬೌದ್ಧಿಕ ಸಿದ್ಧತೆಯಾಗಲೀ, ಕಾಳಜಿಯಾಗಲೀ ಇದೆಯೆಂದು ಯಾರಾದರೂ ನಂಬುವವರಿದ್ದಾರೆಯೇ! ಕರ್ನಾಟಕದಲ್ಲಿ ಕಾಲಕಾಲಕ್ಕೆ ಪ್ರಗತಿಶೀಲ-ಬಂಡಾಯ-ದಲಿತ ಸಾಹಿತ್ಯಗಳ ಸಮ್ಮೇಳನಗಳು ರೂಪಿಸಿದ ಪ್ರಶ್ನೆಗಳು, ಚರ್ಚೆಗಳು ಹತ್ತಾರು ವರ್ಷ ಕಾಲ ಸಾಮಾನ್ಯರ ಕನಸುಗಳನ್ನು, ದೃಷ್ಟಿಕೋನವನ್ನು ಪ್ರತಿನಿಧಿಸಿವೆ; ಸಾವಿರಾರು ಸಾಹಿತ್ಯ ಕೃತಿಗಳ ಸೃಷ್ಟಿಗೆ ಪ್ರೇರಣೆಯಾಗಿವೆ; ಲಕ್ಷಾಂತರ ಸೂಕ್ಷ್ಮ ಓದುಗರನ್ನು ಸೃಷ್ಟಿಸಿವೆ. ಆದರೆ, ಕನ್ನಡ ಭಾಷೆ ಅಥವಾ ಕನ್ನಡ ಸಾಹಿತ್ಯ ಕುರಿತಂತೆ ಕೂಡ ಒಂದು ಮಹತ್ವದ ಚರ್ಚೆಯನ್ನೂ ಈಚಿನ ದಶಕಗಳ ಕನ್ನಡ ಸಾಹಿತ್ಯ ಪರಿಷತ್ತಿನ ಯಾವ ಸಾಹಿತ್ಯ ಸಮ್ಮೇಳನವೂ ಏಕೆ ಎತ್ತಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಕೆಲವು ವರ್ಷಗಳ ಕೆಳಗೆ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರು ಮುಖ್ಯಮಂತ್ರಿಯ ಎದುರಿಗೇ ಆಡಿದ ನಿಷ್ಠುರವಾದ ಮಾತುಗಳನ್ನು ಆಡಬಲ್ಲ ಛಾತಿ ಅನಂತರದಲ್ಲಿ ಬಂದ ಪರಿಷತ್ತಿನ ಯಾವ ಅಧ್ಯಕ್ಷರಲ್ಲೂ ಕಾಣಲಿಲ್ಲ. ಈಚೆಗೆ ನಡೆದ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ಕಲ್ಕುಳಿ ವಿಠ್ಠಲ ಹೆಗ್ಡೆಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಇಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡವಳಿಕೆಯಿಂದ ಇಡೀ ಕನ್ನಡ ಸಾಹಿತ್ಯಲೋಕವೇ ತಲೆ ತಗ್ಗಿಸುವಂತಾಯಿತು.

ಪರಿಷತ್ತಿನಂಥ ಸ್ವಾಯತ್ತ ಸಂಸ್ಥೆಯ ಜಿಲ್ಲಾ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಸಂಸ್ಕೃತಿ ಸಚಿವರು ಮೂಗು ತೂರಿಸಬಾರದೆಂದು ಒಂದು ಹೇಳಿಕೆ ನೀಡುವ ಧೈರ್ಯವನ್ನೂ ಅಧ್ಯಕ್ಷರು ತೋರದಿದ್ದುದರಿಂದ ಸಾಹಿತ್ಯ ಪರಿಷತ್ತಿನ ಅಷ್ಟಿಷ್ಟು ಘನತೆಯೂ ಕುಸಿದುಹೋಯಿತು. ಹೊಸ ತಲೆಮಾರುಗಳಿಗೆ ಬೇಕಾದ ಹೊಸ ಬೌದ್ಧಿಕ ವಾತಾವರಣವನ್ನು ಸೃಷ್ಟಿಸಲಾಗದ, ಕೊನೆಯ ಪಕ್ಷ ಸ್ವಾಭಿಮಾನವೂ ಇಲ್ಲದ ಇಂಥ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಗಂಭೀರ ಪ್ರಶ್ನೆಗಳನ್ನಾಗಲೀ, ಸಾಮಾನ್ಯರ ಕಷ್ಟಗಳನ್ನಾಗಲೀ, ಕನ್ನಡ ಭಾಷೆಯ ಆತಂಕಗಳನ್ನಾಗಲೀ ಗಂಭೀರ ಬೌದ್ಧಿಕ ನೆಲೆಯಲ್ಲಿ ಚರ್ಚಿಸುತ್ತವೆಂದು ನಿರೀಕ್ಷಿಸುವುದು ಕಷ್ಟ.

ಇಂಥ ನಿರ್ಜೀವ ಸಂಸ್ಥೆಗಳ ಸಮ್ಮೇಳನಗಳಿಗೆ ಸಾವಿರಾರು ಜನ ಸಾಮಾನ್ಯ ಓದುಗರು, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ಸಾಹದಿಂದ ಬಂದು ಸೇರುತ್ತಾರೆ. ಅವರಲ್ಲಿ ಕೆಲವು ಸಾವಿರ ಜನವಾದರೂ ಸಾಹಿತ್ಯದೆಡೆಗೆ, ಪುಸ್ತಕಗಳ ಕಡೆಗೆ ವಾಲುವ ಸೂಕ್ಷ್ಮ ಓದುಗರಾಗುವ, ಲೇಖಕರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ, ಇಂಥ ಗ್ರಹಿಕೆಗಳೇ ಇಲ್ಲದೆ, ಹೇಗೋ ಸಮ್ಮೇಳನ ನಡೆದರೆ ಸಾಕು ಎಂಬ ಅಲ್ಪತೃಪ್ತಿಯಲ್ಲಿ ಈ ಸಮ್ಮೇಳನಗಳು ನಡೆಯುವಂತೆ ಕಾಣುತ್ತವೆ. ಹೊಸ ಹೊಸ ಸವಾಲುಗಳು, ಹೊಸ ಹೊಸ ಓದುಗರು ಸೃಷ್ಟಿಯಾದಂತೆ ಹೊಸ ಚರ್ಚೆಗಳನ್ನು ಹುಟ್ಟು ಹಾಕಬೇಕು; ಹೊಸ ಸಂವೇದನೆಯನ್ನು, ಆರೋಗ್ಯಕರ ಜನಾಭಿಪ್ರಾಯವನ್ನು ರೂಪಿಸಬೇಕು ಎಂಬ ಪ್ರಾಮಾಣಿಕ ಕಾಳಜಿ ಇಂಥ ಸಂಸ್ಥೆಗಳಲ್ಲಿ ಮೂಡಿದರೆ ಮಾತ್ರ ಇವು ಸಾಮಾನ್ಯರನ್ನು ಪ್ರತಿನಿಧಿಸಬಲ್ಲವು.

ಯಾಕೆಂದರೆ, ಸಾರ್ವಜನಿಕ ಭಾಷೆ ಅತಿ ದುರ್ಬಳಕೆಯಾಗುತ್ತಿರುವ ಈ ಕಾಲದಲ್ಲೂ ಭಾಷೆಯನ್ನು, ಭಾವನೆಗಳನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯ ಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತಾಡುವ ಅವಕಾಶ ಇನ್ನೂ ಉಳಿದಿದೆ. ಗಾಂಧೀಜಿ ಹತ್ಯೆಯಾದ ದಿನವಾದ 1948ರ ಜನವರಿ 30ರ ಬೆಳಗಿನ ಜಾವ ಗಾಂಧೀಜಿ ಮತ್ತವರ ಸಂಗಡಿಗರು ಮಾಡಿದ ಬೆಳಗಿನ ಪ್ರಾರ್ಥನೆಯಲ್ಲಿ ಈ ಬೇಡಿಕೆಯಿತ್ತು: ‘ಓ ಕರುಣಾಮಯಿ ದೇವರೇ! ನಾನು ಸ್ವರ್ಗವನ್ನಾಗಲೀ, ರಾಜ್ಯವನ್ನಾಗಲೀ ನನ್ನ ಸ್ವಂತದ ಬಿಡುಗಡೆಯನ್ನಾಗಲೀ ಬೇಡೆನು; ಯಾತನೆಪಡುತ್ತಿರುವ ಎಲ್ಲ ದುಃಖಿಗಳ ನೋವಿಗೆ ಕೊನೆ ಹಾಡು ಎಂದಷ್ಟೇ ಬೇಡುವೆನು.’

ಇದಕ್ಕೂ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ತಮ್ಮ ಸಾರ್ವಜನಿಕ ಜವಾಬ್ದಾರಿ ಕುರಿತಂತೆ ಕೊಂಚ ಗೊಂದಲದಲ್ಲಿದ್ದಾಗ ಗಾಂಧೀಜಿ ಕೊಟ್ಟ ಉತ್ತರ ಇದು: ‘ನೀನು ನೋಡಿರುವ ಕಡುಬಡವನನ್ನು, ಅತ್ಯಂತ ದುರ್ಬಲ ಮನುಷ್ಯನನ್ನು ನೆನಸಿಕೋ; ಆಮೇಲೆ ನಿನ್ನನ್ನು ನೀನೇ ಕೇಳಿಕೋ: ನೀನು ಈಗ ಇಡಬೇಕೆಂದಿರುವ ಹೆಜ್ಜೆಯಿಂದ ಅವನಿಗೆ ಏನಾದರೂ ಉಪಯೋಗವಿದೆಯೇ? ಅವನು ಅದರಿಂದ ಏನನ್ನಾದರೂ ಪಡೆಯಬಲ್ಲನೆ? ಆ ಹೆಜ್ಜೆ ಅವನಲ್ಲಿ ತನ್ನ ಬದುಕಿನ ಮೇಲೆ ಹಾಗೂ ತನ್ನ ವಿಧಿಯ ಮೇಲೆ ನಿಯಂತ್ರಣ ಸಾಧಿಸುವಂಥ ಶಕ್ತಿ ತುಂಬಬಲ್ಲದೆ? ಅಂದರೆ ನೀನು ಇಡಬೇಕೆಂದಿರುವ ಹೆಜ್ಜೆ ಹಸಿದವರಿಗೆ ಹಾಗೂ ಚೈತನ್ಯ ಬತ್ತಿದ ಕೋಟ್ಯಂತರ ಜನರಿಗೆ ಸ್ವರಾಜ್ಯವನ್ನು ತಂದುಕೊಡಬಲ್ಲದೆ?’

ಇಂಥ ಮಹಾನ್ ಆಶಯದ ಜೊತೆಗೇ ಅಂಬೇಡ್ಕರ್ ಅವರು ಎಲ್ಲ ಸಾಮಾನ್ಯರಿಗೂ ತೆರೆದ ಬಿಡುಗಡೆಗಳ ಹಾದಿಯ ವೈಜ್ಞಾನಿಕ, ವೈಚಾರಿಕ ಮಾರ್ಗವನ್ನು ಬೆಸೆದು ಚಿಂತಿಸುವ, ಬರೆಯುವ ಕೆಲಸವನ್ನು ಸಾಹಿತ್ಯಲೋಕ ಸದಾ ಕೈಗೆತ್ತಿಕೊಳ್ಳುತ್ತಿರಬೇಕು. ಇವೆಲ್ಲದರ ಜೊತೆ ಬುದ್ಧನ ದುಃಖದ ವಿಶಾಲ ಕಲ್ಪನೆ ಬೆರೆತಾಗ ಮಾತ್ರ ಸಾಹಿತ್ಯ ಸಾಮಾನ್ಯ ಜನರ ನಿಜವಾದ ಸಖನಾಗುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು