ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ತ ಪ್ರಜ್ಞೆಯ ಉತ್ಖನನದೊಳಗೆ...

Last Updated 1 ಜನವರಿ 2022, 19:31 IST
ಅಕ್ಷರ ಗಾತ್ರ

ಜನಸಾಮಾನ್ಯರ ಮನದೊಳಗಿರುವ ತಾಕಲಾಟಗಳು ಇಲ್ಲಿ ನವ್ಯ ಕಲಾರೂಪಕವಾಗಿ ಗೋಚರಿಸುತ್ತವೆ. ರೇಖಾಚಿತ್ರಗಳ ಜತೆಗೆ ಬಹುಮಾಧ್ಯಮದ ಬಳಕೆಯೂ ಇಲ್ಲಿದೆ. ರಹಸ್ಯವನ್ನು ಉತ್ಖನನ ಮಾಡುವಂಥ ಚಿ.ಸು.ಕೃಷ್ಣಸೆಟ್ಟಿ ಅವರ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತವೆ.

ನಾಣ್ಯವೊಂದಕ್ಕೆ ಎರಡು ಮುಖಗಳಿರುವಂತೆ ಮನುಷ್ಯನೊಳಗಿರುವ ದ್ವಿಮುಖಗಳ ಅನಾವರಣಕ್ಕೆ ಕಾಲವೊಂದು ವೇದಿಕೆ. ಕೋವಿಡ್ ಕಾಲ ಮನುಷ್ಯನ ಹೊರ–ಒಳಗಣ ಅನಾವರಣಕ್ಕೆ ಅಂಥದ್ದೊಂದು ವೇದಿಕೆ ಕಲ್ಪಿಸಿದೆ. ಈ ದುರಿತ ಕಾಲದೊಳಗಿನ ವಿಕಾರತೆಗಳನ್ನಿಟ್ಟುಕೊಂಡು ಕಲಾವಿದ ಚಿ.ಸು. ಕೃಷ್ಣಸೆಟ್ಟಿ ಅವರು ರಚಿಸಿರುವ ಕಲಾಕೃತಿಗಳು ಮನುಷ್ಯನ ಸುಪ್ತಪ್ರಜ್ಞೆಯ ಉತ್ಖನನದೊಳಗಿನ ಪ್ರತಿಬಿಂಬಗಳಾಗಿವೆ.

ಬೆಂಗಳೂರಿನ ಬನಶಂಕರಿಯ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಡಿ. 20ರಿಂದ ಆರಂಭವಾಗಿರುವ ಕೃಷ್ಣಸೆಟ್ಟಿ ಅವರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನವು ಹಲವು ಕಾರಣಗಳಿಂದಾಗಿ ಕಲಾಸಕ್ತರ ಮನಸೆಳೆಯುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಚನೆಯಾಗಿರುವ ಈ ಕಲಾಕೃತಿಗಳಲ್ಲಿ ಮನುಷ್ಯನ ಕರಾಳ ವ್ಯಕ್ತಿತ್ವದ ಅನಾವರಣವಾಗಿದೆ. ವಿಶ್ವದ ಪ್ರಾಥಮಿಕ ತತ್ತ್ವಗಳಾದ ಮೀನು ಮತ್ತು ನೀರಿನ ರೂಪಕಗಳ ಮೂಲಕ ಪ್ರಸ್ತುತ ಸಾಮಾಜಿಕ, ರಾಜಕೀಯ ಸಂಗತಿಗಳು ಸೇರಿದಂತೆ ಸುತ್ತಮುತ್ತಲಿನ ಸಮಕಾಲೀನ ಸಂಗತಿಗಳ ಸೂಕ್ಷ್ಮ ವಿಶ್ಲೇಷಣೆ ಇಲ್ಲಿದೆ. ಇಲ್ಲಿನ ಕಲಾಕೃತಿಗಳಲ್ಲಿ ಕೆಲವು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಂಡಿರುವುದು ವಿಶೇಷ.

-ಕೃಷ್ಣಸೆಟ್ಟಿ ಅವರ ಕಲಾಕೃತಿ
-ಕೃಷ್ಣಸೆಟ್ಟಿ ಅವರ ಕಲಾಕೃತಿ

‘ಕಲಾಕೃತಿಗಳ ರಚನೆ ಕೆಲವರಿಗೆ ಪ್ರಜ್ಞಾಪೂರ್ವಕವಾದ ರಚನೆಯಾಗಿದ್ದರೆ ಮತ್ತೆ ಕೆಲವರಿಗೆ ಅಪ್ರಜ್ಞಾಪೂರ್ವಕವಾದ ರಚನೆ. ಇಲ್ಲಿರುವ ಯಾವುದೇ ಕಲಾಕೃತಿಯನ್ನು ನಾನು ಪ್ರಜ್ಞಾಪೂರ್ವಕವಾಗಿ ರಚಿಸಿಲ್ಲ. ಇವು ಒಂದು ರೀತಿಯಲ್ಲಿ ಮನುಷ್ಯನ ಸುಪ್ತಪ್ರಜ್ಞೆಯ ಉತ್ಖನನದ ಮಾದರಿಯವು. ನಮ್ಮ ಮನಸಿನೊಳಗೆ ಅಡಗಿರುವ ವಿಕೃತಿಗಳು ಇಲ್ಲಿನ ಕಲಾಕೃತಿಗಳ ಮೂಲಕ ಹೊರಗೆ ಬಂದಿವೆ. ಹಾಗಾಗಿಯೇ ಇಲ್ಲಿ ದಟ್ಟ ವರ್ಣಗಳನ್ನು ಬಳಸಿಲ್ಲ. ಕರಾಳತೆಯ ಪ್ರತೀಕವಾದ ಕಪ್ಪು, ಬೂದು ಬಣ್ಣಗಳ ಬಳಕೆಯೇ ಸಹಜವಾಗಿ ಮೇಲುಗೈ ಸಾಧಿಸಿವೆ. ಸುತ್ತಮುತ್ತಲಿನ ವಿದ್ಯಮಾನಕ್ಕೆ ಇಲ್ಲಿನ ಕಲಾಕೃತಿಗಳು ಸ್ಪಂದಿಸಿವೆ’ ಎಂದು ವಿಶ್ಲೇಷಿಸುತ್ತಾರೆ ಕಲಾವಿದ ಕೃಷ್ಣಸೆಟ್ಟಿ.

70ಕ್ಕೂ ಹೆಚ್ಚಿನ ಕಲಾಕೃತಿಗಳಲ್ಲಿ ದಟ್ಟವರ್ಣಗಳ ಬಳಕೆ ಅತ್ಯಪರೂಪ. ಮನುಷ್ಯನ ಅಂತರಂಗದ ಅಕರಾಳ–ವಿಕರಾಳವು ಇಲ್ಲಿ ಬೂದು, ಕಪ್ಪು, ಕೆಂಪು ಬಣ್ಣಗಳಲ್ಲಿ ದಟ್ಟೈಸಿದೆ. ರೂಪಕಗಳಾಗಿ ಬಳಕೆಯಾಗಿರುವ ಮೀನು, ಹಾವು, ನೀರು, ನಡೆದಾಡುವ ವೃಕ್ಷ, ಹಸ್ತ, ಕುರ್ಚಿ ಇವೆಲ್ಲವೂ ಪ್ರಸ್ತುತ ಸಮಾಜದ ಆಗುಹೋಗುಗಳ ಪ್ರತಿಬಿಂಬಗಳಾಗಿವೆ. ಶೀರ್ಷಿಕೆರಹಿತವಾಗಿರುವ ಕಲಾಕೃತಿಗಳು ನೋಡುಗರಿಗೆ ತಮ್ಮದೇ ಸ್ವಂತ ಕಥೆಗಳನ್ನು ಕಟ್ಟಿಕೊಳ್ಳಲು, ಕಲಾಕೃತಿಯ ಅಂತರಂಗವನ್ನು ಅರಿಯಲು ಒರೆ ಹಚ್ಚುತ್ತವೆ. ಬೂದು ಬಣ್ಣದೊಳಗೆ ಅಡಗಿರುವ ಕೆಂಡದಂತ ಸತ್ಯವನ್ನು ಅರಿಯಲು ಇಲ್ಲಿ ಯಾವುದೇ ನಿರ್ದಿಷ್ಟ ಕಟ್ಟುಪಾಡುಗಳಾಗಲೀ, ನಿರ್ದೇಶನವಾಗಲೀ ಇಲ್ಲ. ಹಾಗಾಗಿ, ಕಲಾಕೃತಿಯಷ್ಟೇ ಸ್ವತಂತ್ರ ಅವಕಾಶ ನೋಡುಗರದ್ದೂ ಆಗಿದೆ. ಅಂತೆಯೇ ಕೃತಿಯೊಂದಕ್ಕೆ ನಿರ್ದಿಷ್ಟ ವಿಸ್ತರಣೆಯ ಚೌಕಟ್ಟಿನ ಹಂಗೂ ಇಲ್ಲಿಲ್ಲ. ವೀಕ್ಷಕರ ಭಾವಲೋಕದೊಳಗೆ ಅನಿರ್ದಿಷ್ಟ ವಿಸ್ತರಣೆಯ ಸಾಧ್ಯತೆಗೂ ಇಲ್ಲಿನ ಕಲಾಕೃತಿಗಳು ನಿಲುಕುವಂಥವು.

-ಕೃಷ್ಣಸೆಟ್ಟಿ ಅವರ ಕಲಾಕೃತಿ
-ಕೃಷ್ಣಸೆಟ್ಟಿ ಅವರ ಕಲಾಕೃತಿ

ಮೂರು ವರ್ಷಗಳ ಅವಧಿಯಲ್ಲಿ ಸಮಾಜದೊಳಗಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳು ಜನಸಾಮಾನ್ಯನ ಮೇಲೆ ಬೀರಿರುವ ಸಂಗತಿಗಳು ಇಲ್ಲಿ ಸುಪ್ತಪ್ರಜ್ಞೆಯ ರೂಪದಲ್ಲಿ ಹರಳುಗಟ್ಟಿವೆ. ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ, ಅಧಿಕಾರದ ಲಾಲಸೆ, ರಾಜಕಾರಣ, ಹೆಣ್ಣು– ಗಂಡಿನ ನಡುವಣ ಸ್ವಾತಂತ್ರ್ಯ, ಸುಪ್ತವಾಗಿ ಅಡಗಿರುವ ಲೈಂಗಿಕ ಅಭೀಪ್ಸೆಗಳ ಅಭಿವ್ಯಕ್ತಿ, ಮನುಷ್ಯ ಮತ್ತು ಸಾಮಾಜಿಕ ಮಾಧ್ಯಮಗಳ ನಡುವಣ ಸಂಬಂಧವು ಇಲ್ಲಿನ ಚಿತ್ರಚೌಕಟ್ಟಿನೊಳಗೆ ಅಡಗಿವೆ. ಕೆಲ ಕೃತಿಗಳು ಮೂರ್ತವಾಗಿದ್ದರೆ ಮತ್ತೆ ಕೆಲವು ಅಮೂರ್ತವಾಗಿದ್ದು, ಅವುಗಳಲ್ಲಿ ಅಡಗಿರಬಹುದಾದ ರಹಸ್ಯವನ್ನರಿಯಲು ನೋಡುಗರನ್ನು ಕುತೂಹಲದ ಕೇಂದ್ರಬಿಂದುವಿಗೆ ಕರೆದೊಯ್ಯುತ್ತವೆ. ಶಾಯಿ, ಪೆನ್ಸಿಲ್, ಕಲರ್ ಪೆನ್ಸಿಲ್, ಅಲ್ಲಲ್ಲಿ ಆ್ಯಕ್ರಿಲಿಕ್ ಹೀಗೆ ಭಿನ್ನ ಮಾಧ್ಯಮದ ಬಳಕೆಯೂ ಕಲಾಸಕ್ತರ ಗಮನ ಸೆಳೆಯುತ್ತದೆ.

‘ಇಲ್ಲಿನ ಕಲಾಕೃತಿಗಳು ನೋಡುಗನನ್ನು ಕಟ್ಟಿ ಹಾಕುವುದಿಲ್ಲ. ನೀವು ಕಲಾಕೃತಿಯೊಳಗೆ ಎಲ್ಲಿ ಬೇಕಾದರೂ ಹಾರಿ, ಇಡೀ ವಿಶ್ವದ ರೂಪವನ್ನು ನೋಡಬಹುದು. ವಿಕೃತಿ ಸೌಂದರ್ಯ ಮೀಮಾಂಸೆಗೆ ಇಲ್ಲಿನ ಕಲಾಕೃತಿಗಳು ಉದಾಹರಣೆಗಳಾಗಬಲ್ಲವು. ಆದಿಮ ಪ್ರಜ್ಞೆಯೂ ಇಲ್ಲಿದೆ. ಪ್ರಭಾವದ ಆತಂಕವನ್ನು ಮೀರಿ ತಮ್ಮದೇ ಆದ ಅನನ್ಯತೆಯನ್ನು ಕೃಷ್ಣಸೆಟ್ಟಿ ಅವರು ಕಂಡುಕೊಂಡಿದ್ದಾರೆ’ ಎಂದು ವಿಶ್ಲೇಷಿಸುತ್ತಾರೆ ಹಿರಿಯ ಕಲಾ ವಿಮರ್ಶಕ ಕೆ.ವಿ. ಸುಬ್ರಹ್ಮಣ್ಯಂ.

ವರ್ಷಾಂತ್ಯ ಮತ್ತು ವರ್ಷಾರಂಭದ ನಡುವಣದ ದಿನಗಳಲ್ಲಿ ಪ್ರದರ್ಶನಗೊಂಡಿರುವ ಈ ಕಲಾಕೃತಿಗಳು ಮನುಷ್ಯನ ಕರಾಳತೆಯನ್ನು ಬಿಂಬಿಸುತ್ತಲೇ, ಅದರಿಂದ ಕಳಚಿಕೊಳ್ಳುವ ಸಕಾರಾತ್ಮಕ ಅಶಯವನ್ನೂ ಒಳಗೊಂಡಿವೆ. ಮೇರು ಕಲಾವಿದರೊಬ್ಬರ ಒಳಮನಸಿನ ತುಡಿತಗಳಲ್ಲಿ ಸಾಮಾನ್ಯ ಮನುಷ್ಯನ ಅಂತರಂಗವು ಇಲ್ಲಿ ಗೋಚರಿಸುತ್ತದೆ. ಮಹತ್ವಾಕಾಂಕ್ಷೆಯತ್ತ ಚಿತ್ತ ಮೇಳೈಸುವ ಮನುಷ್ಯ, ತನ್ನೊಳಗಿನ ಅಹಂ ಕಳೆದುಕೊಂಡು ವಿನಯವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವನ್ನೂ ಇಲ್ಲಿನ ಕಲಾಕೃತಿಗಳು ಮನಗಾಣಿಸುತ್ತವೆ.

ಕಲಾ ಪ್ರದರ್ಶನವು ಬೆಂಗಳೂರಿನ ಬನಶಂಕರಿ 6ನೇ ಹಂತದ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ಕಲಾ ಗ್ಯಾಲರಿಯೊಳಗೆ ಜ. 8ರವರೆಗೆ ನಡೆಯಲಿದೆ. ಮಾಹಿತಿಗೆ ಮೊ.: 9845084557, 6364917676.

-ಚಿ.ಸು.ಕೃಷ್ಣಸೆಟ್ಟಿ
-ಚಿ.ಸು.ಕೃಷ್ಣಸೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT