ಶನಿವಾರ, ಡಿಸೆಂಬರ್ 5, 2020
21 °C

PV Web Exclusive | ಯಕ್ಷಗಾನ ಮತ್ತು ಕನ್ನಡ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಈಗ ಯಕ್ಷಗಾನದಲ್ಲಿ ಕನ್ನಡತನವೆಂಬುದು ಪ್ರಾದೇಶಿಕತೆ, ಅದರೊಟ್ಟಿಗಿನ ಸಂಸ್ಕೃತಿ, ವೈಯಕ್ತಿಕ ಅಧ್ಯಯನ, ಓದುಗಳಿಂದ ಹಿರಿಯರು ರೂಢಿಸಿಕೊಂಡಿದ್ದ ‘ಹಲವು ರಂಗಭಾಷೆ‘ಗಳಿಂದ ದೂರವಾಗಿ ವೈವಿಧ್ಯವಿಲ್ಲದ ‘ಸಾಮಾನ್ಯೀಕರಣ’ (generalization) ಎಂಬಲ್ಲಿಗೆ ಬಂದು ನಿಂತಿದೆ.

---

ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಮತ್ತದೇ ಕನ್ನಡ ಧ್ವಜ, ಶಾಲು ಹಾಕಿಕೊಂಡು ಕನ್ನಡ ಮಾತನಾಡಿ ಎನ್ನುವ ಉಪದೇಶಗಳ, ಕೆಲವೊಮ್ಮೆ ಆದೇಶಗಳ ಸುರಿಮಳೆ ಸುರಿಯಲಿದೆ. ಕೇವಲ ಕನ್ನಡ ಪದಗಳ ಬಳಕೆ ಅಷ್ಟೆ ಕನ್ನಡ ಉಳಿವಿಗೆ ದಾರಿಯೇ? ಕನ್ನಡತನ ಅಥವಾ ಕನ್ನಡ ಆಲೋಚನೆ ಬೇಡವೇ?– ಎನ್ನುವುದು ನಮ್ಮ ಮುಂದಿನ ಪ್ರಶ್ನೆಯಾಗಬೇಕು. ಕನ್ನಡ ಎಂದರೆ, ನಮ್ಮ ಪಕ್ಕದವರೊಂದಿಗೆ ಸಂವಹಿಸುವ ‘ಸಾಮಾನ್ಯ’ ಭಾಷೆ ಮಾತ್ರವೇ, ಆಡಳಿತದಲ್ಲಿ ಪ್ರಯೋಗ ಮಾಡುವ ಭಾಷೆ ಮಾತ್ರವೇ, ಸಾಹಿತ್ಯದಲ್ಲಿ ಬಳಸುವ ಶಿಷ್ಠ ಭಾಷೆ ಮಾತ್ರವೇ, ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಭಾಷೆ ಮಾತ್ರ ಕನ್ನಡವೇ? ಏನು ಹಾಗಿದ್ದರೆ.

ಈ ಎಲ್ಲ ತೆರನಾದ ಕನ್ನಡವೂ ಉಳಿಯಬೇಕು. ಈ ಎಲ್ಲ ತೆರನಾದ ಭಾಷೆ ಜತೆಗಿನ ಸಂಸ್ಕೃತಿಯೂ ಉಳಿಯಬೇಕು. ತುಂಬಾ ಸಂಕೀರ್ಣವಾದ ಮತ್ತು ಚರ್ಚಾ ವಿಷಯ ಇದು. ಹಾಗೆ ನೋಡಿದರೆ ‘ಕನ್ನಡತನ’  ಉಳಿದಿದೆ ಎಂದರೆ, ಅದು ನಮ್ಮ ಕಲೆ, ಸಾಹಿತ್ಯ, ನಮ್ಮ ಜಾನಪದದಿಂದ ಮಾತ್ರ. ಇದು ಯಕ್ಷಗಾನದಿಂದಲೂ ಸಾಧ್ಯವಾಗಿದೆ. ಹಲವು ನೆಲೆಯಲ್ಲಿ ತನ್ನ ಶಾಸ್ತ್ರೀಯ ಚೌಕಟ್ಟು ಮೀರಿಯೂ, ಆಧುನಿಕಗೊಂಡರೂ ಯಕ್ಷಗಾನ ತನ್ನ ಕನ್ನಡತನವನ್ನು ಉಳಿಸಿಕೊಂಡು ಬಂದಿದೆ ಎನ್ನುವ ಒಂದು ಸಾಮಾನ್ಯ ಹೇಳಿಕೆ ನೀಡಬಹುದಷ್ಟೆ.

ಇಲ್ಲೂ ಸಮಸ್ಯೆಗಳಿವೆ. ಇದನ್ನು ಸಮಸ್ಯೆ ಎನ್ನಬೇಕೋ ಅಥವಾ ವಾಸ್ತವ ಅಷ್ಟೆ ಎಂದು ಸುಮ್ಮನಾಗಬೇಕೋ ಅದು, ಚರ್ಚೆಯ ವಿಷಯ. ಕಾಲಾಂತರದಲ್ಲಿ ಈ ಯಕ್ಷಗಾನವು ಪ್ರಚಲಿತ ನಂಬಿಕೆಯಂತೆ ಕನ್ನಡತನವನ್ನು ಉಳಿಸಿಕೊಂಡಿದೆಯೇ ಅಥವಾ ಮೊದಲಿಂದಲೂ ಈ ರೀತಿಯ ಚೌಕಟ್ಟು ಇತ್ತೆ ಎನ್ನುವುದೆಲ್ಲವನ್ನೂ ಯೋಚಿಸಬೇಕು.

‘ಯಕ್ಷಗಾನದಲ್ಲಿ ಕನ್ನಡ ಬಳಕೆ ಎನ್ನುವುದು ಅದರ, ಗುಣವೂ ಹೌದು. ಅದರೊಟ್ಟಿಗೆ ಅದರ ಮಿತಿಯೂ ಹೌದು’ – ಇದು ಚಿಂತಕ ಸಾಗರದ ಡಾ. ಜಿ.ಎಸ್‌. ಭಟ್ಟ ಅವರ ನೇರ ನುಡಿ. ಅವರೇ ವಿವರಿಸುವಂತೆ, ‘ಕನ್ನಡ ಮಾತನಾಡಬೇಕು ಎನ್ನುವುದು ಗುಣ ಹೌದು; ಯಕ್ಷಗಾನದ ರೀತಿಯೇ ಹಾಗೆ. ಹಾಗಾದರೆ, ಇದು ಮಿತಿ ಹೇಗಾದೀತು ಎಂದರೆ, ಎಷ್ಟೊ ಬಾರಿ ಪಾತ್ರಧಾರಿ ಏನನ್ನು ಹೇಳಬೇಕು ಎಂದುಕೊಳ್ಳುವನೋ ಅದನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಹೇಳಲಾರ. ಎಷ್ಟೋ ಬಾರಿ ಸಮಕಾಲೀನ ವಿಷಯವನ್ನು ಪೌರಾಣಿಕ ಪ್ರಸಂಗಗಳಲ್ಲಿ ಹೇಳಬೇಕು ಎನಿಸಿದರೂ, ಅದಕ್ಕೆ ಸರಿಹೊಂದುವ ಭಾಷೆ ಸಿಗಲಾರದು. ಈ ಮಿತಿ ಇದ್ದರೂ, ಚಾಣಾಕ್ಷ್ಯತನದಿಂದ ಅದನ್ನು ದಾಟಿಸುವ ಕಲಾವಿದರು ಇದ್ದಾರೆ’ ಎನ್ನುತ್ತಾರೆ ಅವರು.

ಇನ್ನೊಂದು ಬಹಳ ಮುಖ್ಯ ಅಂಶವನ್ನು ಅವರು ನಮ್ಮ ಮುಂದಿಡುತ್ತಾರೆ. ‘ಯಕ್ಷಗಾನದಲ್ಲಿ ಯಾವುದಾದರೂ ಭಾರತೀಯ ಭಾಷೆ ಬಳಸಬಹುದು. ಇಂತಹ ಅನುಕೂಲತೆ ಇಲ್ಲಿದೆ. ಹಾಗೆ ನೋಡಿದರೆ, ಯಕ್ಷಗಾನದಲ್ಲಿ ನಾವೇನು ಶುದ್ಧ ಕನ್ನಡವನ್ನು ಬಳಸುವುದಿಲ್ಲವಲ್ಲ. ಸಂಸ್ಕೃತ ಬಳಸುತ್ತೇವೆ, ಹಲವು ಪ್ರಾದೇಶಿಕ ಭಾಷಾ ಪ್ರಯೋಗವೂ ಇದೆ. ‘ಶರ ಸೇತುಬಂಧ’ ಪ್ರಸಂಗದಲ್ಲಿ, ಒಬ್ಬ ಪಾತ್ರಧಾರಿ ಹೇಳುತ್ತಾನೆ, ‘ನೀನು ಬಿಲ್ಲು ಬಾಣಗಳಿಂದ ಸೇತುವೆ ಕಟ್ಟಿದೆ, ನಾನು ’ಬಿಲ್ಲಿ’ನಿಂದ ಸೇತುವೆ ಕಟ್ಟುತ್ತಿದ್ದೇನೆ’ ಎಂದು. ಇಲ್ಲಿ ‘ಬಿಲ್ಲು’ ಎಂದರೆ, ಇಂಗ್ಲಿಷ್‌ ಪದ; ಅರ್ಥ ರಶೀದಿ. ಇದನ್ನು ತಪ್ಪು ಎನ್ನಲಿಕ್ಕೆ ಆದೀತೆ? ಕನ್ನಡೀಕರಿಸಿಕೊಂಡ ಇಂಗ್ಲಿಷ್‌ ಪದ ಪ್ರಯೋಗ ಇದು.’

ರಾಜ ಪಾತ್ರಗಳಿಗಿಂತ, ಹಾಸ್ಯ ಪಾತ್ರಗಳಿಗೆ ಭಾಷೆ ಪ್ರಯೋಗದಲ್ಲಿ ಹೆಚ್ಚು ಸ್ವಾತಂತ್ರ್ಯ ಇದೆ. ಅವರಿಗೆ ಇಂಗ್ಲಿಷ್‌ ಒಂದೇ ವರ್ಜ್ಯ. ಮಿಕ್ಕ ಬೇರೆ ಯಾವ ಭಾರತೀಯ ಭಾಷಾ ಪ್ರಯೋಗವನ್ನೂ ಅವರು ಪ್ರಯೋಗಿಸಬಹುದು ಎನ್ನುತ್ತಾರೆ ಡಾ. ಜಿ.ಎಸ್‌. ಭಟ್ಟ.

ರಂಗದ ಮೇಲೆ ಪಾತ್ರ ಕಟ್ಟುವುದು ಎನ್ನುವುದು ಸುಲಭದ ಮಾತಲ್ಲ. ಪಾತ್ರ ಪೋಷಣೆಯಲ್ಲಿ ಕುಣಿತ ಹೇಗೆ ಪ್ರಾಮುಖ್ಯವೋ ಭಾಷೆ, ಮಾತುಗಾರಿಕೆ (ವಾಚಿಕ) ಕೂಡ ಮುಖ್ಯ. ಇದರ ಸಿದ್ಧಿ ಹೇಗೆ. ಕಲಾವಿದನ ಓದು (ಶಿಕ್ಷಣ; ಈಗ ಒಬ್ಬ ಕನ್ನಡ ಎಂ.ಎ ಮುಗಿಸಿಕೊಂಡು ಬಂದವ ಪಾತ್ರ ಮಾಡಿದರೆ, ಆತನ ವಾಕ್ಯ ರಚನೆ, ಪದ ಬಳಕೆ ಇವುಗಳ ಪ್ರಯೋಗವೇ ಬೇರೆಯದ್ದಾಗಿರುತ್ತದೆ), ಸಾಹಿತ್ಯ ಓದು, ಪ್ರಸಂಗದ ಓದು, ಅಧ್ಯಯನ, ಆತನ ಅಭಿರುಚಿ ಎಲ್ಲವೂ ಪಾತ್ರ ಪೋಷಣೆಗೆ ಮುಖ್ಯವಾಗುತ್ತದೆ.

ಈ ಎಲ್ಲದರ ಜತೆಗೆ, ಪಾತ್ರ ಕಟ್ಟುವಲ್ಲಿ ಇನ್ನೊಂದು ಆಯಾಮವೂ ಇದೆ. ಪಾತ್ರಧಾರಿಯ ಭಾಷಾ ಪ್ರಯೋಗದ (ವಾಚಿಕ) ಮೇಲೆ, ಆತನ ಮನೆ ಭಾಷೆ, ಪ್ರದೇಶ, ಆತನ ಪರಿಸರ, ಅಲ್ಲಿನ ನುಡಿಗಟ್ಟು, ಸಾಮಾಜಿಕ ಹಿನ್ನೆಲೆ, ಪದ ಪ್ರಯೋಗ–ಹೀಗೆ ನಾನಾ ಸೂಕ್ಷ್ಮ ಅಂಶಗಳೂ ಅದರಲ್ಲಿ ಸೇರಿರುತ್ತವೆ. ಯಕ್ಷಗಾನದಲ್ಲಿ ಆಗಿ ಹೋದ, ಎಷ್ಟೊ ಪ್ರಸಿದ್ಧ, ಹಿರಿಯ ಕಲಾವಿದರು ಈ ಎಲ್ಲದನ್ನೂ ಒಳಗೊಂಡ ಅವರದ್ದೇ ಆದ ‘ರಂಗಭಾಷೆ’ವೊಂದನ್ನು ರೂಪಿಸಿಕೊಂಡಿರುತ್ತಿದ್ದರು. ಆದ್ದರಿಂದಲೇ ಒಬ್ಬರಿಂದ ಒಬ್ಬರು ವಿಭಿನ್ನವಾಗಿ ಯೋಚಿಸುವುದಕ್ಕೆ, ಪಾತ್ರ ಕಟ್ಟುವುದಕ್ಕೆ ಸಾಧ್ಯವಾಯಿತು.

ಆದರೆ, ಈಗ ಯಕ್ಷಗಾನದಲ್ಲಿ ಈ ರೀತಿಯ ರಂಗಭಾಷೆಯ ಕೊರತೆ ಇದೆ ಎನ್ನುತ್ತಾರೆ ಯಕ್ಷಪ್ರೇಮಿಗಳು. ಕಲಾವಿದರಲ್ಲಿ ಅಧ್ಯಯನದ ಕೊರತೆಯೂ ಎದ್ದು ಕಾಣುತ್ತಿದೆ. ಸಾಹಿತ್ಯ ಅಧ್ಯಯನ ಆಮೇಲಿನ ಮಾತು, ಪ್ರಸಂಗವನ್ನೂ ಸರಿಯಾಗಿ ಅಧ್ಯಯನ ಮಾಡುವುದಿಲ್ಲ ಎಂದು ಬೇಸರಿಸುತ್ತಾರೆ ಕೆಲವು ಹಿರಿಯ ಕಲಾವಿದರು.

‘ನಮ್ಮ ಊರಿನಲ್ಲಿ ಬಹಳ ವರ್ಷಗಳ ಹಿಂದೆ ಕೆರೆಮನೆ ಮಹಾಬಲ ಹೆಗಡೆ ಅವರ ಆಟ ಇತ್ತು. ಅವರದೇ ಮುಖ್ಯಭೂಮಿಕೆಯ ಪ್ರಸಿದ್ಧ ಪ್ರಸಂಗ ಇತ್ತು. ಪರಿಚಿತರಾದ ಅವರನ್ನು ಮಾತನಾಡಿಸಲು ಬಣ್ಣದ ಮನೆಗೆ ಹೋದೆ. ಅವರ ಹತ್ತಿರ ಹೋದರೆ, ಅವರು ಪ್ರಸಂಗದ ಪುಸ್ತಕ ಹಿಡಿದು ಕೂತಿದ್ದರು. ನನಗೆ ಆಶ್ಚರ್ಯವಾಯಿತು. ಕಾರಣ, ಅವರು ಲಾಗಾಯ್ತಿನಿಂದ ಮಾಡಿಕೊಂಡು ಬಂದ ಪಾತ್ರ ಅದಾಗಿತ್ತು. ಇಡೀ ಪ್ರಸಂಗ ಅವರ ಬಾಯಲ್ಲೇ ಇದೆ. ಆದರೂ, ಯಾಕೆ ಹೀಗೆ ಪುಸ್ತಕ ಹಿಡಿದು ಕೂತಿದ್ದಾರೆ ಎಂದುಕೊಂಡು ಅವರ ಬಳಿ ಹೋಗಿ, ಈ ಜಿಜ್ಞಾಸೆಯನ್ನು ಮುಂದಿಟ್ಟೆ. ಅವರು ಹೇಳಿದ್ದು, ‘ಏನಾದ್ರೂ ಒಂದು ಹೊಸ ಹೊಳವು ಹುಟ್ಟುತ್ತಾ ಅಂತ ಪುಸ್ತಕ ಹಿಡಿದಿದ್ದೇನೆ’ ಎಂದರು! ಈಗಿನ ಕಲಾವಿದರಲ್ಲಿ ಈ ಗುಣವನ್ನು ನೋಡುವುದಕ್ಕೆ ಸಾಧ್ಯವಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಯಕ್ಷಗಾನದ ಹಿರಿಯ ಕಲಾವಿದ ತುಮರಿಯ ಎ.ಆರ್. ಕೃಷ್ಣಮೂರ್ತಿ.

ಯಕ್ಷಗಾನ ಜಾಗತಿಕವಾಗಬೇಕು, ಆಧುನಿಕವಾಗಬೇಕು ಎಂದು ಬಯಸುವ ಆಧುನಿಕ ಪ್ರೇಕ್ಷಕರ ಅಭಿಪ್ರಾಯಕ್ಕೆ ತಕ್ಕಂತೆ ಯಕ್ಷಗಾನದ ಸ್ವರೂಪವೂ ಬದಲಾಗತೊಡಗಿದೆ. ಕುಣಿತ, ಪದ್ಯ, ಅಭಿನಯ, ಮಾತುಗಾರಿಕೆ, ಚಂಡೆ –ಮದ್ದಲೆಯ ಹದವಾದ ಮೇಳೈಸುವಿಕೆಯೇ ಉತ್ತಮ ಪ್ರದರ್ಶನಕ್ಕೆ ಕಾರಣವಾಗುತ್ತದೆ. ಆದರೆ, ಯಕ್ಷಗಾನದ ಇತಿಹಾಸವನ್ನು ನೋಡಿದರೆ, ಒಮ್ಮೆ ಪದ್ಯ, ಇನ್ನೊಮ್ಮೆ ಕೇವಲ ಮಾತುಗಾರಿಕೆ– ಹೀಗೆ ಒಂದೊಂದು ವಿಜೃಂಬಿಸಿ ಬೇರೆಯದು ಹಿಂದೆ ಸರಿದಿದ್ದವು. ಈಗ ಕುಣಿತ ಮುಂಚೂಣಿಯಲ್ಲಿದೆಯಷ್ಟೆ.

ಈಗ ಯಕ್ಷಗಾನದಲ್ಲಿ ಕನ್ನಡತನವೆಂಬುದು, ಪ್ರಾದೇಶಿಕತೆ, ಅದರೊಟ್ಟಿಗಿನ ಸಂಸ್ಕೃತಿ, ವೈಯಕ್ತಿಕ ಅಧ್ಯಯನ, ಓದಿನಿಂದ ಹಿರಿಯರು ರೂಢಿಸಿಕೊಂಡಿದ್ದ ‘ಹಲವು ರಂಗಭಾಷೆ’ಗಳಿಂದ ದೂರವಾಗಿ ವೈವಿಧ್ಯವಿಲ್ಲದೇ ‘ಸಾಮಾನ್ಯೀಕರಣ’ (generalization) ಎಂಬಲ್ಲಿಗೆ ಬಂದು ನಿಂತಿದೆ. ‘ಹಲವು’ ಎನ್ನುವುದು ಈಗ ‘ಒಂದು’ ಆಗಿದೆ. ಮೊದಲೇ ಹೇಳಿದ ಹಾಗೆ, ಜಾಗತೀಕರಣಕ್ಕೆ ಒಗ್ಗಿಕೊಳ್ಳುವ ಭರದಲ್ಲಿ ಘನವಾಗಿದ್ದದ್ದು ದ್ರವವಾಗಿದೆ. ಇದು ತಪ್ಪೋ, ಸರಿಯೋ ಚರ್ಚೆಯ ವಿಷಯ. ಆದರೆ, ಇದು ಸದ್ಯದ ಸ್ಥಿತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು