ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಹರಿಲೀಲಾ 75: ಮದ್ದಳೆ-ಭಾಗವತಿಕೆಯ ದಾಂಪತ್ಯ

Last Updated 6 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು?

ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?

ಇದು ಪೂಜ್ಯ ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳು.

ಅವರು ಇದನ್ನು ಬರೆದದ್ದು ಬೇರೆ ಕಲ್ಪನೆಯಿಂದಾದರೂ ಇದು ದಾಂಪತ್ಯ ಜೀವನಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಪರಸ್ಪರ ಭಿತ್ತಿಯೂ ಚಿತ್ರವೂ ಆಗುತ್ತಾ ಒಬ್ಬರನ್ನು ಇನ್ನೊಬ್ಬರು ಆಧರಿಸುತ್ತಾ ಆದರಿಸುತ್ತಾ ಬದುಕು ಸಾರ್ಥಕಗೊಳಿಸುವುದೇ ನಿಜವಾದ ದಾಂಪತ್ಯ.

ಜೀವನವೇ ಒಂದು ಕಲೆ. ಅಲ್ಲೂ ಪರಿಪೂರ್ಣರಾಗಿ, ಜೊತೆಗೆ ಶ್ರೇಷ್ಠ ಕಲೆಯಾದ ಯಕ್ಷಗಾನದಲ್ಲೂ ಪ್ರಸಿದ್ಧಿ ಪಡೆದು ಕಲಾಯಾನದಲ್ಲಿ ಸಾರ್ಥಕ್ಯವನ್ನು ಪಡೆದವರೇ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ದಂಪತಿ. ಯಕ್ಷಗಾನ ಲೋಕ ಕಂಡ ಹಿಮ್ಮೇಳದ ಈ ಎರಡು ಮೇರು ಶಿಖರಗಳು ಒಂದಾಗಿ ಈಗ ಐದು ದಶಕಗಳೇ ಸಂದಿವೆ. ಈ ಸುದೀರ್ಘ ಒಡನಾಟದ ಫಲವಾಗಿ ಲೀಲಾ ಅವರ ಹಾಡುಗಳಿಗೆ ಹರಿನಾರಾಯಣರ ಮದ್ದಳೆಯಂತೂ ಅನ್ಯೋನ್ಯವಾಗಿ ಅನನ್ಯ ಶ್ರವಣ ಸೌಖ್ಯವನ್ನು ನೀಡುತ್ತದೆ.

ಇಬ್ಬರೂ ಬಡತನದ ಬವಣೆಯನ್ನೇ ಕಂಡವರು ಉಂಡವರು. ಯಕ್ಷಗಾನ ಕಲಾಯಾನದಲ್ಲಿ ಜೊತೆಯಾದವರು. ಬಡತನದಿಂದಾಗಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸದಿದ್ದರೂ, ಕಲಾಮಾತೆ ಇಬ್ಬರನ್ನೂ ಕೈಹಿಡಿದು ಮುನ್ನಡೆಸಿದ್ದೇ ಒಂದು ವಿಶಿಷ್ಟ ಕಥೆ. ವಿದ್ಯಾಭ್ಯಾಸ ಮಾಡುವ ಹೊತ್ತಿಗೆ ತಮ್ಮ ಬಂಧು, ಅರ್ಥಧಾರಿ ಎನ್.ಆರ್.ಚಂದ್ರರ ಮನೆಯಲ್ಲಿದ್ದ ಹರಿನಾರಾಯಣರು, ತಮಗರಿವಿಲ್ಲದಂತೆಯೇ ಯಕ್ಷಗಾನ ಲೋಕದತ್ತ ಸೆಳೆಯಲ್ಪಟ್ಟವರು. ಆ ಕಾಲದ ಯಕ್ಷಗಾನ ನಾಟಕ ಸಂಘಗಳ ತಾಳಮದ್ದಳೆಗಳಲ್ಲಿ ಬೆಳಗಿನ ತನಕ ಹಾರ್ಮೋನಿಯಂ ಬಾರಿಸುತ್ತಾ, ಭಾಗವತಿಕೆ ಕೇಳುತ್ತಾ, ಚೆಂಡೆ ಮದ್ದಳೆ ವಾದನವನ್ನು ಗಮನಿಸುತ್ತಿದ್ದ ಅವರು, ಆರನೇ ತರಗತಿಯಲ್ಲೇ ಶಾಲಾ ವಿದ್ಯಾಭ್ಯಾಸಕ್ಕೆ ಮುಕ್ತಾಯ ಹಾಡುವ ಅನಿವಾರ್ಯತೆಗೆ ಸಿಲುಕಿದರು.

ಮುಂದೆ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದಲ್ಲಿದ್ದು, ನಾಲ್ಕು ವರ್ಷ ಮಂತ್ರವನ್ನೂ ಕಲಿತರು. ಆದರೆ ಮನಸ್ಸು ಯಕ್ಷಗಾನದ ಕಡೆ ಸೆಳೆಯುತ್ತಿತ್ತು. ಕಲ್ಲುಗುಡ್ಡೆ ಪುರುಷಯ್ಯ ಆಚಾರ್ಯರಲ್ಲಿ ಮದ್ದಳೆ ವಾದನ ಕಲಿತು ಪರಿಸರದಲ್ಲಿ ನಡೆಯುವ ಕೂಟಗಳಲ್ಲಿ ಭಾಗವಹಿಸುತ್ತಾ ಇದ್ದಾಗ ಶೀನಪ್ಪ ಭಂಡಾರಿಗಳ ಆದಿಸುಬ್ರಹ್ಮಣ್ಯ ಮೇಳದಲ್ಲಿ ಅವಕಾಶ ದೊರೆಯಿತು. ಆ ಬಳಿಕ ಕುಂಡಾವು, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ಮಾಡಿ ಮುಂದೆ ಕೂಡ್ಲು ಮೇಳದಲ್ಲಿದ್ದರು.

ಇತ್ತಲಿಂತಿರುವಾಗ...

ಕಾಸರಗೋಡು ತಾಲ್ಲೂಕಿನ ಆದೂರು ಕಡುಮನೆಯಲ್ಲಿ ಜನಿಸಿ ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ನತದೃಷ್ಟೆಯಾಗಿ ಸೋದರಮಾವನ ಮನೆಯಾದ ಮಧೂರು ಪಡುಕಕ್ಕೆಪ್ಪಾಡಿಯಲ್ಲಿ ಬೆಳೆಯುತ್ತಿದ್ದ ಶ್ರೀಗಂಗಾ ಎಂಬ ಹುಡುಗಿಯೂ ಬಡತನದಿಂದಾಗಿ ಶಾಲೆಗೆ ಹೋಗಲಾಗದೆ ಪರಿತಪಿಸುತ್ತಿದ್ದರು. ಕಲಿಯಲೇಬೇಕೆಂಬ ತುಡಿತ ಹೆಚ್ಚಾಗಿದ್ದೇ, ಮನೆಯಲ್ಲಿ ಬಂಧುಗಳ ನೆರವಿನಿಂದ ಹಿಂದಿ ಕಲಿತು ಹಿಂದಿ ವಿಶಾರದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು. ನೆರೆಮನೆಯ ಮಧೂರು ಪದ್ಮನಾಭ ಸರಳಾಯರಲ್ಲಿ ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮಗಳನ್ನು ನೀಡುವ ಹೊತ್ತಿಗೇ, ಮೇಳ ತಿರುಗಾಟದಲ್ಲಿ ಮಧೂರಿಗೆ ಬರುತ್ತಿದ್ದ ಹರಿನಾರಾಯಣರ ಮನ ಮನೆ ಬೆಳಗುವ ಯೋಗ ಕೂಡಿಬಂತು.

ಕಡಬದ ಬೈಪಾಡಿ ಬೀಡುಮನೆಗೆ ಸೊಸೆಯಾಗಿ ಬಂದ ಶ್ರೀಗಂಗಾ, ಈಗ ಲೀಲಾ ಬೈಪಾಡಿತ್ತಾಯರಾಗಿ ಬದಲಾದರು. ಇವರಿಗೆ ಆ ಪರಿಸರದಲ್ಲಿ ಸಂಗೀತ ಕ್ಷೇತ್ರದಲ್ಲಿ ಬೆಳೆಯುವ ಅವಕಾಶವಿರಲಿಲ್ಲ. ಗೃಹಿಣಿಯಾಗಿ ಮನೆಕೆಲಸವನ್ನು ಮಾಡುತ್ತಾ ಪತಿಯ ಜೊತೆಗಿದ್ದರು. ಆದರೆ ಹರಿನಾರಾಯಣ ಬೈಪಾಡಿತ್ತಾಯರಿಗೇ ಅತೃಪ್ತಿ! ಮಡದಿಗೆ ಕಲಿತ ವಿದ್ಯೆಯನ್ನು ಪ್ರದರ್ಶಿಸುವ ಅವಕಾಶ ಇಲ್ಲದೇ ಹೋಯಿತಲ್ಲ? ಅದೇ ಸಂದರ್ಭದಲ್ಲಿ, ಪರಿಸರದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಗಳಿಗೆ ಭಾಗವತರ ಕೊರತೆ ಇತ್ತು. ಇದನ್ನು ಗಮನಿಸಿದ ಪತಿ ಪತ್ನಿಗೇ ಭಾಗವತಿಕೆಯ ಪಾಠವನ್ನು ಆರಂಭಿಸಿದರು. ಸಂಗೀತ ಕಲಿತ ಪತ್ನಿ ಶ್ರದ್ಧೆಯಿಂದ ಭಾಗವತಿಕೆಯನ್ನೂ ಅಭ್ಯಸಿಸಿ ಒಂದೇ ವರ್ಷದಲ್ಲಿ ಪ್ರದರ್ಶನಕ್ಕೆ ಭಾಗವತಿಕೆ ಮಾಡುವಷ್ಟು ಸಿದ್ಧರಾದರು.

ಗಂಡು ಕಲೆಯಲ್ಲಿ ಹೆಣ್ಣು ದನಿ

ಮುಂದೆ ನಡೆದದ್ದು ಇತಿಹಾಸ. ಯಕ್ಷಗಾನ ನೋಡುವುದೇ ಮಹಾಪಾಪ ಎಂಬ ನಂಬಿಕೆಯೂ ಇದ್ದ ಆ ಕಾಲದಲ್ಲಿ, ಗಂಡು ಕಲೆಯಲ್ಲಿ ಮಹಿಳೆಯೊಬ್ಬರು ಭಾಗವತಿಕೆ ಮಾಡುವುದಂತೂ ಅಚ್ಚರಿ ಮತ್ತು ವಿಶೇಷ, ಕೆಲವರಿಗೆ ಆಘಾತ. ಸುತ್ತಮುತ್ತಲಿನ ಪರಿಸರದಲ್ಲಿ ಗಂಡನ ಮದ್ದಳೆ ಜೊತೆಗೆ ಭಾಗವತಿಕೆ ಮಾಡುತ್ತಾ ಲೀಲಾ ಬೈಪಾಡಿತ್ತಾಯರು ಪ್ರಸಿದ್ಧಿಗೆ ಬರಲಾರಂಭಿಸಿದರು. ಇತ್ತ ಚಿತ್ರರಂಗದಲ್ಲಿ ನಟಿ ಲೀಲಾವತಿ ಕೂಡ ಹೆಸರು ಮಾಡುತ್ತಿದ್ದರು. ಅಭಿಮಾನಿಗಳು ಈ ಕ್ರಾಂತಿ ಮಾಡಿದ ಮಹಿಳೆಯ ಹೆಸರನ್ನು ಪರಸ್ಪರ ಬೆಸೆದರು, ತತ್ಪರಿಣಾಮವಾಗಿ ಲೀಲಾ ಆಗಿದ್ದವರು ಅಭಿಮಾನಿಗಳ ಬಾಯಲ್ಲಿ ಲೀಲಾವತಿ ಬೈಪಾಡಿತ್ತಾಯರೆನಿಸಿದರು. ಆ ಹೆಸರೇ ಸ್ಥಾಯಿಯಾಯಿತು.

ಮದುವೆಯಾಗಿ ಮಕ್ಕಳಾದ ಬಳಿಕ ಯಕ್ಷಗಾನ ರಂಗಕ್ಕೆ ಬಂದ ಲೀಲಾ, ಸಾಂಸಾರಿಕ ಜೀವನದ ಜೊತೆಗೇ ಆದಿಸುಬ್ರಹ್ಮಣ್ಯ, ಪುತ್ತೂರು ಮೇಳಗಳಲ್ಲಿ ವಿಶೇಷ ಆಕರ್ಷಣೆಯಾಗಿ, ಗಂಡುಮೆಟ್ಟಿನ ಕಲೆಯಾದ ಯಕ್ಷಗಾನ ರಂಗದಲ್ಲಿ ಆರಂಭಿಕ ಹೆಜ್ಜೆ ಇಟ್ಟು, ನಂತರ ಅಳದಂಗಡಿ (ಅರುವ), ಕುಂಬಳೆ, ಬಪ್ಪನಾಡು, ತಲಕಳ ಮೇಳಗಳಲ್ಲಿ ಪೂರ್ಣಕಾಲಿಕ ಭಾಗವತರಾಗಿ ಯಕ್ಷರಂಗದಲ್ಲಿ ಮಹಿಳಾ ಕ್ರಾಂತಿಗೆ ಕಾರಣರಾದರು.

ಯಕ್ಷಗಾನ ರಂಗದ ಪ್ರಾತಃಸ್ಮರಣೀಯರಾದ ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಕುದ್ರೆಕೂಡ್ಲು ರಾಮ ಭಟ್ ಮುಂತಾದ ಹಿಮ್ಮೇಳದ ಶ್ರೇಷ್ಠರ ಒಡನಾಟವು ಇಬ್ಬರ ಯಕ್ಷಗಾನೀಯ ಜೀವನವನ್ನು ತಿದ್ದುತ್ತಾ ಅರಳಿಸಿತು. ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಪೆರ್ಲ ಕೃಷ್ಣ ಭಟ್, ಪುತ್ತೂರು ನಾರಾಯಣ ಹೆಗ್ಡೆ ಮುಂತಾದ ಕೀರ್ತಿಶೇಷರೊಂದಿಗೂ, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಕೆ.ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್ ಮುಂತಾದ ಕಲಾವಿದ ಶ್ರೇಷ್ಠರೊಂದಿಗೂ ರಂಗದಲ್ಲಿ ದುಡಿದರು. ಒಬ್ಬರನ್ನು ಬಿಟ್ಟು ಒಬ್ಬರಿಲ್ಲದಂತೆ ಯಕ್ಷಗಾನ ಕಾರ್ಯಕ್ರಮಗಳಲ್ಲೆಲ್ಲಾ ಪತಿ-ಪತ್ನಿ ಇಬ್ಬರೂ ಜೊತೆಯಾಗಿಯೇ ಭಾಗವಹಿಸಿದ ಪರಿಣಾಮವೇ, ಲೀಲಾವತಿ ಬೈಪಾಡಿತ್ತಾಯರ ಗಾಯನಕ್ಕೆ ಪತಿಯ ಮದ್ದಳೆ ವಾದನದ ಸಾಂಗತ್ಯ. ಗಾನವೈಭವಗಳಲ್ಲೇ ಆಗಲಿ, ಅವರೆಂದಿಗೂ ಚಪ್ಪಾಳೆಗಾಗಿ ಯಕ್ಷಗಾನೀಯತೆಯನ್ನು ಬಿಟ್ಟುಕೊಟ್ಟದ್ದಿಲ್ಲ ಎಂಬುದು ಸಾಧನೆಯೇ.

ಮಹಿಳೆಯಾಗಿ ರಾತ್ರಿಯಿಡೀ ಯಕ್ಷಗಾನ ಪ್ರಸಂಗವನ್ನು ದಿಗ್ದರ್ಶಿಸಿದ ಲೀಲಾ ಅವರ ಕಲಾಯಾನವೇನೂ ಸುಲಲಿತವಾಗಿರಲಿಲ್ಲ. ಮುಳ್ಳುಗಳೇ ಇದ್ದವು. ರಾತ್ರಿ ಯಕ್ಷಗಾನಕ್ಕೆ ಹೋಗುವ ಕಾರಣಕ್ಕೆ ಸಮಾಜ ಅವರ ಪ್ರವೇಶವನ್ನು ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಈ ವಿರೋಧವು ಕುತೂಹಲವಾಗಿ, ಕುತೂಹಲವು ನಿಧಾನಕ್ಕೆ ಮೆಚ್ಚುಗೆಯಾಗಿ ಪರಿವರ್ತಿತವಾಯಿತು. ಹೆಣ್ಣು ಧ್ವನಿಯನ್ನು ವೀರರಸ ಪ್ರಧಾನದ ಯಕ್ಷಗಾನದ ಅಭಿಮಾನಿಗಳೂ ಒಪ್ಪಿಕೊಳ್ಳಲಾರಂಭಿಸಿದರು. ರಂಗದಲ್ಲಿ ‘ಮಹಿಳೆಯ ಹಾಡಿಗೆ ಕುಣಿಯಬೇಕೇ’ ಎಂಬ ಕೆಲ ಕಲಾವಿದರ ತಾತ್ಸಾರ ಭಾವವೂ ಲೀಲಾವತಿಯವರ ಪ್ರತಿಭೆಯ ಪ್ರಖರತೆಗೆ ಕರಗಿಹೋದವು. ವ್ಯವಸಾಯಿ (ಡೇರೆ) ಮೇಳಗಳಲ್ಲಿ ಇವರ ಹಾಡುಗಾರಿಕೆಗಾಗಿ ಟೆಂಟ್ ಬಿಚ್ಚಿಸುವಷ್ಟು ಪ್ರೇಕ್ಷಕರು ಹರಿದುಬರಲಾರಂಭಿಸಿದರು. ಯಕ್ಷಗಾನವೂ ಇವರನ್ನು ಒಪ್ಪಿತು, ಯಕ್ಷಗಾನಾಭಿಮಾನಿಗಳಲ್ಲೂ ಸ್ವೀಕೃತರಾದರು.

ಒಂದೇ ಮನೆಯ ಇಬ್ಬರಿಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿರುವುದೊಂದು ಚರಿತ್ರೆಯೇ. ಐದು ದಶಕಕ್ಕೂ ಮಿಗಿಲಾಗಿ ಯಕ್ಷಗಾನ ಕ್ಷೇತ್ರದಲ್ಲಿರುವ ಈ ದಂಪತಿ, ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಶಕದ ಕಾಲ ಯಕ್ಷಗಾನ ಹಿಮ್ಮೇಳ ಗುರುಗಳಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದರು. ಪ್ರಸ್ತುತ ಕೊಳಂಬೆ ಗ್ರಾಮದ ತಲಕಳದಲ್ಲಿ ವಾಸವಾಗಿರುವ ಇವರು ಈಗಲೂ ತಮ್ಮ ಮನೆಯನ್ನೇ ಗುರುಕುಲವನ್ನಾಗಿಸಿ, ಬಂದ ಶಿಷ್ಯಂದಿರಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ತಮ್ಮ ಕಲಾಪಯಣದಲ್ಲಿ ಸಾರ್ಥಕತೆಯನ್ನು ಪಡೆದಂತೆ ಇವರು ಸಂತೃಪ್ತ ಸಂಸಾರಿಗಳೂ ಹೌದು. ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳ ತುಂಬು ಕುಟುಂಬ ಇವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT