ಶುಕ್ರವಾರ, ಅಕ್ಟೋಬರ್ 22, 2021
21 °C

ಪದ್ಯಾಣ ಗಣಪತಿ ಭಟ್ ನಿಧನಕ್ಕೆ ಸಿಎಂ ಬೊಮ್ಮಾಯಿ, ಲಿಂಬಾವಳಿ ಸೇರಿ ಹಲವರಿಂದ ಸಂತಾಪ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ (66) ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಓದಿ: 

‘ಯಕ್ಷಗಾನ ಕಲಾ ಕ್ಷೇತ್ರದಲ್ಲಿ ತಮ್ಮ ಕಂಚಿನ ಕಂಠದಿಂದ ಜನಮೆಚ್ಚಿದ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರ ಅಗಲಿಕೆಯಿಂದ ಸಾಂಸ್ಕೃತಿಕ ರಂಗಕ್ಕೆ ಭರಿಸಲಾರದ ನಷ್ಟವಾಗಿದೆ. ನಾಲ್ಕು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪದ್ಯಾಣ ಗಣಪತಿ ಭಟ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೇಸ್‌ಬುಕ್ ಹಾಗೂ ಟ್ವಿಟರ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಯಕ್ಷಗಾನ ಭಾಗವತಿಕೆಯ ಗಾನಗಂಧರ್ವ ಎಂದು ಹೆಸರಾಗಿದ್ದ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ಇಹಲೋಕ ತ್ಯಜಿಸಿದ್ದು, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಯಕ್ಷಗಾನ ಕಲಾ ಜಗತ್ತಿಗೆ ಅವರ ಕೊಡುಗೆ ಅಪಾರ. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಅದ್ಭುತ ಪ್ರತಿಭೆಯ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರೂ ಆಗಿರುವ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

‘ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾಗಿದ್ದ ಪದ್ಯಾಣ ಗಣಪತಿ ಭಟ್ಟರು ಇನ್ನಿಲ್ಲವೆಂಬ ವಾರ್ತೆ ಮನಸ್ಸಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಗುರುಮುಖೇನ ಕಲಿತ ವಿದ್ಯೆಯನ್ನು ಗಟ್ಟಿಯಾಗಿ ಆಧರಿಸಿ ಯಕ್ಷಗಾನದ ಪರಂಪರೆಯನ್ನು ಒಂದು ತಲೆಮಾರಿನುದ್ದಕ್ಕೂ ಸಾಕಿ ಬೆಳೆಸಿ ಮುಂದುವರಿಸಿ ಕೊಟ್ಟ ಕೀರ್ತಿ ಅವರದು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿನ್ನು ಕರುಣಿಸಲೆಂದು ಪ್ರಾರ್ಥನೆ. ಅವರ ಪತ್ನಿ, ಮಕ್ಕಳು, ಸಹೋದರರು ಮತ್ತು ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ’ ಎಂದು ಶಿಕ್ಷಣ ತಜ್ಞ ಚಂದ್ರಶೇಖರ ದಾಮ್ಲೆ ಫೇಸ್‌ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

 

ಪತ್ರಕರ್ತರಾದ ಶಿವ ಸುಬ್ರಹ್ಮಣ್ಯ, ನಾ.ಕಾರಂತ ಪೆರಾಜೆ ಸೇರಿದಂತೆ ಇನ್ನೂ ಅನೇಕರು ಗಣಪತಿ ಭಟ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು