ಸೋಮವಾರ, ಅಕ್ಟೋಬರ್ 26, 2020
21 °C

ಬಲ್ಲಿರೇನಯ್ಯ? ಇಳೆಯಣ್ಣನಿಗೀಗ ಮೂವತ್ತು ವರ್ಷ

ಸಿಬಂತಿ ಪದ್ಮನಾಭ ಕೆ.ವಿ. Updated:

ಅಕ್ಷರ ಗಾತ್ರ : | |

Prajavani

ಏನೂ ಗೊತ್ತಿಲ್ಲದವರ ಪ್ರತಿನಿಧಿ ಇವನು. ಆದರೆ ಇವನಿಗೆ ಎಲ್ಲವೂ ಗೊತ್ತಿದೆ. ಇವನು ವಿದ್ಯೆ ಎಷ್ಟು ಮುಖ್ಯವೆಂದು ಸಾರುತ್ತಾನೆ. ಮೂಢನಂಬಿಕೆಗಳಿಂದ ಹೊರಬನ್ನಿರೆಂದು ಬೇಡಿಕೊಳ್ಳುತ್ತಾನೆ. ಮಿತಸಂತಾನ ಒಳ್ಳೆಯದೆಂದು ಪ್ರತಿಪಾದಿಸುತ್ತಾನೆ. ಕುಡಿತ-ಜೂಜು ಬಿಡಿರೆಂದು ಒತ್ತಾಯಿಸುತ್ತಾನೆ. ಕಡ್ಡಾಯ ಮತದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ, ಏಡ್ಸ್‌ನ್ನು ಓಡಿಸಿ, ಪರಿಸರ ರಕ್ಷಿಸಿ, ಜೀವವೈವಿಧ್ಯ ಕಾಪಾಡಿ ಎಂದೆಲ್ಲ ಜನರ ಮನವೊಲಿಸುತ್ತಾನೆ. ಅಂತಿಂಥ ವ್ಯಕ್ತಿಯಲ್ಲ, ಈತ ಇಳೆಯಣ್ಣ.

ಇವನು ಹುಟ್ಟಿದ್ದು 1990ರ ಅಕ್ಟೋಬರ್ 2ರಂದು. ಹುಟ್ಟಿದಲ್ಲಿಂದಲೇ ಇವನ ತಿರುಗಾಟ ಶುರು. ಹಳ್ಳಿ ಪಟ್ಟಣ ಎನ್ನದೆ ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿದ್ದಾನೆ. ಸಂದೇಶಗಳನ್ನು ಸಾರಿದ್ದಾನೆ. ಜನರ ಮನಸ್ಸನ್ನು ತಲುಪಲು ಪ್ರಯತ್ನಿಸಿದ್ದಾನೆ. ಹುಟ್ಟಿದಾಗಲೇ ಇವನು ಮಧ್ಯವಯಸ್ಕ ಆಗಿದ್ದರಿಂದ ಇವನಿಗೀಗ ಮೂವತ್ತು ಆಯಿತು ಎಂದರೆ ಜನರು ಒಪ್ಪವುದು ಕಷ್ಟ.

ಇದು ಇಳೆಯಣ್ಣನ ಕಥೆ. ಕಲೆಯ ಮೂಲಕ ಜನರನ್ನು ಹೇಗೆ ಮುಟ್ಟಬಹುದು, ತಟ್ಟಬಹುದು ಎಂಬ ಯೋಚನೆಯ ಕೂಸು ಈ ಇಳೆಯಣ್ಣ. ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಮೊದಲು ಜನರ ಮನಸ್ಸಿನಲ್ಲಿ ಅಂತಹ ಅದು ಆರಂಭವಾಗಬೇಕು; ಹೊಸ ವಿಚಾರಗಳಿಗೆ ಅವರು ತೆರೆದುಕೊಳ್ಳಬೇಕು. ಅವರ ಮನಸ್ಸಿಗೆ ಹತ್ತಿರವಾದ ಕಲೆಗಳನ್ನೇ ಮಾಧ್ಯಮವಾಗಿಸಿದರೆ ಈ ಕೆಲಸ ಸುಲಭ ಎಂಬ ಚಿಂತನೆ ಈ ಇಳೆಯಣ್ಣನ ಹಿಂದೆ ಇದೆ. ಈ ರೀತಿ ಯೋಚಿಸುತ್ತಿದ್ದವರನ್ನು ಪ್ರಯೋಗಶೀಲತೆಗೆ ಹೆಸರಾಗಿದ್ದ ಯಕ್ಷಗಾನ ಆಕರ್ಷಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. 1990ರ ದಶಕದಲ್ಲಿ ಸಕ್ರಿಯವಾಗಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನದ ಪ್ರಚಾರದಲ್ಲಿ ಯಕ್ಷಗಾನ ವಹಿಸಿದ ಪಾತ್ರ ದೊಡ್ಡದು. ಯೋಜನೆಯ ಉದ್ದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆ ಕಾಲದಲ್ಲಿ ರಚನೆಯಾದ ಪ್ರಸಂಗಗಳು 25ಕ್ಕಿಂತಲೂ ಹೆಚ್ಚು. ಮಂಗಳೂರಿನ ಕಲಾಗಂಗೋತ್ರಿಯ ನೇತೃತ್ವದಲ್ಲಿ ಸಾಕ್ಷರತಾ ಯಕ್ಷಗಾನಗಳ ಹತ್ತಾರು ಪ್ರದರ್ಶನಗಳು ನಡೆದರೆ, ಬೆಂಗಳೂರಿನ ‘ಯಕ್ಷದೇಗುಲ’ವು ‘ಇಳೆಯಣ್ಣನ ಕಥೆ’ ಅಥವಾ ‘ಅಕ್ಷರ ವಿಜಯ’ ಎಂಬ ಪ್ರಸಂಗದೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿತು.

‘ಇಳೆಯಣ್ಣನ ಕಥೆ’ಯ ಮೊದಲ ಪ್ರದರ್ಶನವಾದದ್ದು 1990ರ ಗಾಂಧೀಜಯಂತಿಯಂದು. ಭಾರತ ಜ್ಞಾನ ವಿಜ್ಞಾನ ಸಮಿತಿಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಲಾಜಾಥಾಕ್ಕೆ ಹೊಸ ಮೆರುಗು ನೀಡಿದ್ದು ಈ ಯಕ್ಷಗಾನ. ಆರಂಭದಲ್ಲಿ ಸಾಕ್ಷರತಾ ಆಂದೋಲನದ ಪ್ರಚಾರವೇ ಇದರ ಪ್ರಮುಖ ವಸ್ತುವಾಗಿದ್ದರೂ ಮುಂದೆ ಅನೇಕ ಸಂದೇಶಗಳ ಪ್ರಸಾರಕ್ಕೆ ಬಳಕೆಯಾಯಿತು.
ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ, ದುಶ್ಚಟಗಳ ಬಗ್ಗೆ ಎಚ್ಚರ, ಏಡ್ಸ್ ಜಾಗೃತಿ, ಪೌಷ್ಟಿಕ ಆಹಾರ, ಸಣ್ಣ ಕುಟುಂಬ, ವರದಕ್ಷಿಣೆ ವಿರೋಧ, ಮತದಾನಕ್ಕೆ ಪ್ರೇರಣೆ ಇತ್ಯಾದಿಗಳಿಂದ ತೊಡಗಿ ಆಯಾ ಸಂದರ್ಭ ಬಯಸುವ ಯಾವುದೇ ವಿಚಾರಗಳನ್ನೂ ಜನರಿಗೆ ತಲುಪಿಸುವ ಸಾಧ್ಯತೆಯನ್ನು ‘ಇಳೆಯಣ್ಣನ ಕಥೆ’ ತೋರಿಸಿಕೊಟ್ಟಿತು.

ಇದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿಯವರ ಪರಿಕಲ್ಪನೆ. ಹಿಂದಿಯ ‘ಏಕ್ ಚಿಟ್ಟಿ’ ಎಂಬ ಕಿರುನಾಟಕವೇ ಇದಕ್ಕೆ ಪ್ರೇರಣೆ. ಇಳೆಯಣ್ಣನೆಂಬ ವ್ಯಕ್ತಿ ಅನಕ್ಷರತೆಯೇ ಕಾರಣವಾಗಿ ತನ್ನ ಜೀವನದಲ್ಲಿ ಅನುಭವಿಸುವ ಪಡಿಪಾಟಲು ಈ ಯಕ್ಷಗಾನದ ಹೂರಣ. ಇಲ್ಲಿ ನಿರಕ್ಷರ ರಕ್ಕಸನೊಂದಿಗಿನ ಯುದ್ಧದಲ್ಲಿ ಅಕ್ಷರದೇವ ಗೆಲ್ಲುತ್ತಾನೆ. ‘ಸಾಮಾಜಿಕ ತುರ್ತೊಂದರ ಸಂದರ್ಭದಲ್ಲಿ ಹುಟ್ಟಿಕೊಂಡ ಯಕ್ಷರೂಪಕ ಇಳೆಯಣ್ಣನ ಕಥೆ. ರಂಗಭೂಮಿ ಹಿನ್ನೆಯಿಂದ ಬಂದ ನಾನು ಸಂದೇಶವೊಂದನ್ನು ಯಕ್ಷಗಾನದ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವುದು ಸಾಧ್ಯವೇ ಎಂದು ಯೋಚಿಸಿದೆ. ಗುಂಡ್ಮಿ ರಘುರಾಂರಂತಹ ಪ್ರತಿಭಾವಂತರ ಸಹಕಾರ ದೊರೆಯಿತು. ಇಳೆಯಣ್ಣನ ಕಥೆಯ ಅಷ್ಟೂ ಸಾಧ್ಯತೆಗಳನ್ನು ಸಮರ್ಥವಾಗಿ ಪ್ರಯೋಗಕ್ಕೆ ತಂದದ್ದು ಯಕ್ಷದೇಗುಲ‘ ಎಂದು ನೆನಪಿಸಿಕೊಳ್ಳುತ್ತಾರೆ ನಾಯರಿ.

ಯಕ್ಷದೇಗುಲದ ನೇತೃತ್ವ ವಹಿಸಿಕೊಂಡಿದ್ದವರು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಉಡುಪಿ ಮೂಲದ ಕೆ. ಮೋಹನ್. 'ಕಲೆಗಾಗಿ ಕಲೆಯೋ, ಸಮಾಜಕ್ಕಾಗಿ ಕಲೆಯೋ ಎಂಬ ಚರ್ಚೆ ಆಗಲೂ ಇತ್ತು, ಈಗಲೂ ಇದೆ. ಆದರೆ ಕಲೆಯೊಂದನ್ನು ಅದರ ಚೌಕಟ್ಟಿನಲ್ಲಿಯೇ ಸಮಾಜದ ಒಳಿತಿಗಾಗಿ ಬಳಸಬಹುದು ಎಂಬುದು ನಮ್ಮ ಸ್ಪಷ್ಟ ನಂಬಿಕೆಯಾಗಿತ್ತು. ಕೇಂದ್ರ ಸಂಗೀತ ಮತ್ತು ನಾಟಕ ವಿಭಾಗ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆರೋಗ್ಯ ಇಲಾಖೆಗಳ ಬೆಂಬಲದಿಂದ ಇಳೆಯಣ್ಣನ ಕಥೆಯ ಪ್ರದರ್ಶನಗಳು ನಡೆಯುತ್ತಾ ಹೋದವು. ಇದುವರೆಗೆ 2000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದೇವೆ' ಎನ್ನುತ್ತಾರೆ ಮೋಹನ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು