ಮಂಗಳವಾರ, ಮೇ 17, 2022
26 °C

ಬಹುಮುಖ ವ್ಯಕ್ತಿತ್ವದ ಜಸ್ಟಿಸ್‌ ರಾಮಾ ಜೋಯಿಸ್‌

ನ್ಯಾಯಮೂರ್ತಿ ಎನ್.ಕುಮಾರ್ Updated:

ಅಕ್ಷರ ಗಾತ್ರ : | |

Prajavani

ನ್ಯಾಯಮೂರ್ತಿ ರಾಮಾ ಜೋಯಿಸ್ ಅವರದು ಬಹುಮುಖ ವ್ಯಕ್ತಿತ್ವ. ಸ್ವಯಂಸೇವಕರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ, ಬರಹಗಾರರಾಗಿ, ಕನ್ನಡ ಪರ ಹೋರಾಟಗಾರರಾಗಿ ಮತ್ತು ರಾಜಕೀಯ ಮುತ್ಸದ್ದಿಯಾಗಿ ಅವರು ಮಾಡಿರುವ ಕೆಲಸ ಈ ದೇಶಕ್ಕೆ ಅಪಾರ.

ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ನಾನು ವಕೀಲನಾಗಿ ವೃತ್ತಿ ಜೀವನ ಪ್ರಾರಂಭ ಮಾಡಿದ ಸಮಯ. ಆಗ ರಾಮಾ ಜೋಯಿಸ್ ಅವರು ಕಾನೂನು ವೃತ್ತಿಜೀವನದ ಉತ್ತುಂಗದಲ್ಲಿದ್ದರು.

ತುರ್ತು ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮಧು ದಂಡವತೆ, ಶ್ಯಾಮಾನಂದನ್ ಮಿಶ್ರಾ  ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿದ್ದರು. ಅವರ ಬಂಧನವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಾಮಾ ಜೋಯಿಸರು ವಕಾಲತ್ತು ವಹಿಸಿದ್ದರು. ಇಂತಹ ಒಂದು ಸುವರ್ಣ ಅವಕಾಶ ಒಬ್ಬ ವಕೀಲನ ಜೀವನದಲ್ಲಿ ಸಿಗುವುದು ಬಹಳ ಅಪರೂಪ. ಇದು ಅವರ ವೃತ್ತಿ ಜೀವನದ ಮರೆಯಲಾರದ ಕ್ಷಣ. ಇಂತಹ ಅವಕಾಶದ ಸದುಪಯೋಗ ಪಡಿಸಿಕೊಳಲು ಧೈರ್ಯ ಮತ್ತು ಕಾನೂನಿನ ಆಳವಾದ ಜ್ಞಾನ ಎರಡು ಬಹಳ ಅವಶ್ಯ. ರಾಮಾ ಜೋಯಿಸರಲ್ಲಿ ಈ ಎರಡೂ ಗುಣಗಳ ಸಮ್ಮಿಲನ ಅಪಾರವಾಗಿತ್ತು. ಆದರೆ ಅವರ ಕರ್ತವ್ಯ ನಿಷ್ಠೆಗೆ  ಅವರು ಬಾರಿ ದೊಡ್ಡ ದಂಡವನ್ನು ತೆರಬೇಕಾಯಿತು. ಅಂದಿನ ಸರ್ಕಾರ ಅವರನ್ನು ಈ ಕಾರ್ಯಕ್ಕಾಗಿ ಮಿಸಾ ಕಾಯ್ದೆ ಅಡಿಯಲ್ಲಿ ಬಂಧನದಲ್ಲಿ ಇಟ್ಟಿತು. ಆ ಕಾರಣಕ್ಕಾಗಿ ಅಂದು ಅವರು ಬರಿ ವಕೀಲರ ಸಮುದಾಯಕ್ಕಲ್ಲ, ಕನ್ನಡಿಗರ ಕಣ್ಮಣಿಯಾದರು.

ತುರ್ತು ಪರಿಸ್ಥಿತಿ ಮುಗಿದು ನಂತರದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಧೂಳೀಪಟವಾದ  ಮೇಲೆ, ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು. ಅವರ ಎಲ್ಲ ಕಕ್ಷಿಗಾರರು ಆ ಸರ್ಕಾರದ ಮಂತ್ರಿಗಳಾದರು. ರಾಮಾಜೋಯಿಸರನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಅವರು ನ್ಯಾಯಮೂರ್ತಿಯಾಗಿ ಬಹಳ ಉತ್ತಮ, ನಿರ್ಭಯ ತೀರ್ಪುಗಳನ್ನು ಕೊಟ್ಟು  ಜನಮೆಚ್ಚುಗೆಗೆ ಪಾತ್ರರಾದರು. ಅವರ ಒಂದು ತೀರ್ಪಿನಿಂದ, ಅಂದರೆ ARRAC BOTTLING (ಸಾರಾಯಿ ಬಾಟ್ಲಿಂಗ್ ಹಗರಣ) ಮೊಕದ್ದಮೆಯಲ್ಲಿ ಅಂದಿನ ಜನಪ್ರಿಯ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ಕೊಡಬೇಕಾಯಿತು, ಕೊಟ್ಟರು. ಬಳಿಕ ಈ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್‌ ಎತ್ತಿ  ಹಿಡಿಯಿತು.

ಸೇವಾ ಕಾನೂನು ತಜ್ಞರಾಗಿದ್ದ ಜೋಯಿಸ್‌‌, ಸೇವಾ ಕಾನೂನಿನಲ್ಲಿ ನೀಡಿರುವ ತೀರ್ಪುಗಳು ಇಂದಿಗೂ
ಸಹ ಹೊಸ ಪೀಳಿಗೆಯ ನ್ಯಾಯಾಧೀಶರುಗಳಿಗೆ, ವಕೀಲರಿಗೆ ಮಾರ್ಗದರ್ಶಕವಾಗಿದೆ.

ಅವರು ಸಂಸ್ಕೃತ ಭಾಷೆಯಲ್ಲಿ ಬಹಳ ಆಳವಾದ ಜ್ಞಾನ ಹೊಂದಿದ್ದರು.  ಹೀಗಾಗಿ, ಭಾರತೀಯ ಪುರಾತನ ನ್ಯಾಯಶಾಸ್ತ್ರ ಅಭ್ಯಸಿಸಿ, ನಮ್ಮ ಪೀಳಿಗೆಯ ಅನುಕೂಲಕಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ "Legal and Constitutional History of India", “Seeds of modern public law in ancient Indian  jurisprudence”,   “historic legal battle”, “dharma-the global ethic” etc. ಧರ್ಮ ಮತ್ತು ಮನು ಸ್ಮೃತಿಯ ಬಗ್ಗೆ ಅವರ ನಿಲುವು ಬಹಳ ಉಪಯುಕ್ತ. ಮನುಸ್ಮೃತಿಯ ಬಗ್ಗೆ ಇರುವಂತಹ ತಪ್ಪು ತಿಳಿವಳಿಕೆಗಳನ್ನು ನಿವಾರಿಸುವ ಒಂದು ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಿತಾಕ್ಷರ, ವಿಜ್ಞಾನೇಶ್ವರರ ಕಾರ್ಯಕ್ಷೇತ್ರವಾದ ಕಲಬುರ್ಗಿ ಜಿಲ್ಲೆಯ ಮರತೂರಿನಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಜಗತ್ತಿಗೆ ವಿಜ್ಞಾನೇಶ್ವರರ ಕಾರ್ಯವನ್ನು ಪರಿಚಯಿಸಿದ ಹೆಗ್ಗಳಿಕೆ ಅವರದು.

ಸೇವೆಯಿಂದ ನಿವೃತ್ತರಾದ ಮೇಲೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ರಾಮ ಜನ್ಮಭೂಮಿ ಹೋರಾಟದಲ್ಲೂ ನ್ಯಾಯಾಂಗ ಸ್ತರದಲ್ಲಿ ತಮ್ಮ ಸಕ್ರಿಯ ಯೋಗದಾನ ನೀಡಿದರು. ಕನ್ನಡ ಸಾಹಿತಿಗಳ ಒಡನಾಟದಲ್ಲಿ, ಎಲ್ಲ ರಂಗಗಳಲ್ಲೂ ಕನ್ನಡ ಭಾಷೆಯ ಅನುಷ್ಠಾನಕ್ಕಾಗಿ ಹೋರಾಟದಲ್ಲಿ ಕೈ ಜೋಡಿಸಿದರು.

ಪಂಜಾಬ್-ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ, ಜಾರ್ಖಂಡ್ ಮತ್ತು ಬಿಹಾರ  ರಾಜ್ಯಗಳ ರಾಜ್ಯಪಾಲರಾಗಿಯೂ, ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.  ರಾಮಾ ಜೋಯಿಸರು ಇಷ್ಟೆಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಅದು ಅವರ ವ್ಯಕ್ತಿತ್ವದ ಮೇಲೆ ಆಗಲಿ ಅಥವಾ ಅವರ ನಿತ್ಯ ಜೀವನದ ಮೇಲಾಗಲಿ ಯಾವುದೇ ತರಹದ ಪ್ರಭಾವವನ್ನು ಬೀರಲಿಲ್ಲ. ಅವರು ಎಂದಿಗೂ ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದರು. ಸ್ವಜನ ಪಕ್ಷಪಾತ, ಅಧಿಕಾರದ ದುರುಪಯೋಗ ಮತ್ತು ಭ್ರಷ್ಟಾಚಾರ ಇಂದಿನ ಅಧಿಕಾರಸ್ಥರಲ್ಲಿ ಸಾಮಾನ್ಯವಾಗಿರುವ ಪರಿಸರದಲ್ಲಿ, ಇದೆಲ್ಲದ್ದಕ್ಕೂ ಹೊರತಾಗಿ ಸ್ಪಟಿಕದಂತೆ ಅವರು ಕಂಗೊಳಿಸುತ್ತಿದ್ದರು. ಇಂದು ಅಂತಹ ಶ್ರೇಷ್ಠ ವ್ಯಕ್ತಿಗಳ ಅವಶ್ಯಕತೆ ಸಮಾಜಕ್ಕೆ ಬಹಳವಾಗಿ ಬೇಕಾಗಿದೆ. ಅಂತಹವರ ಬಣ ಬರುವ ದಿನಗಳಲ್ಲಿ ಹೆಚ್ಚಾಗಿ ಬೆಳೆಯಲಿ.

(ಲೇಖಕರು– ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು