ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಶತಮಾನದ ಮಾದರಿ ಹೆಣ್ಣು’ ಆರತಿ ಅವರ ಸೇವಾ ಮನೋಭಾವಕ್ಕೆ ಹ್ಯಾಟ್ಸಾಫ್

ಪ್ರಚಾರವನ್ನೇ ಬಯಸದೆ ಎಷ್ಟೆಲ್ಲಾ ಕೆಲಸ ಮಾಡ್ತಾರೆ
Last Updated 23 ಡಿಸೆಂಬರ್ 2018, 8:51 IST
ಅಕ್ಷರ ಗಾತ್ರ

ಚಾಮರಾಜನಗರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಲೇಖಕ ಮತ್ತು ಕಲಾವಿದಗಿರಿಧರ ಕಾರ್ಕಳ ಈ ಬರಹದಲ್ಲಿಚಿತ್ರನಟಿ ಆರತಿ ಅವರಸೇವಾಕಾರ್ಯ ಮತ್ತು ವ್ಯಕ್ತಿತ್ವದ ಹಿರಿಮೆಯನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

***

ಒಂದು ಕಾಲದಲ್ಲಿ ಅತ್ಯುತ್ತಮ ನಟಿಯಾಗಿ 125ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ, ಇದ್ದಕ್ಕಿದ್ದಂತೇ 1986ರಲ್ಲೇ ಬಣ್ಣದ ಬದುಕಿಗೆ ವಿದಾಯ ಹೇಳಿ, ನಿಜ ಬದುಕಿನಲ್ಲಿ ಸಾಮಾಜಿಕ ಕಳಕಳಿಯಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸಂಪಾದಿಸಿದ್ದೆಲ್ಲವನ್ನೂ ಬಡವರ ಕಣ್ಣೀರೊರೆಸಲು ವಿನಿಯೋಗಿಸುತ್ತಿರುವ ಶ್ರೇಷ್ಠ ನಟಿ, ಅಭಿನೇತ್ರಿ ಆರತಿಯವರ ಸಾರ್ಥಕ ಬದುಕಿನ ಕತೆಯನ್ನು ಈಚೆಗೆ ಟೀವಿಯಲ್ಲಿ ನೋಡಿದೆ.

ನಾಯಕಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ, ಸಿನಿಮಾದ ಆಕರ್ಷಕ ಬಣ್ಣದ ಲೋಕಕ್ಕೆ ವಿದಾಯ ಹೇಳುವುದು ಸುಲಭದ ಮಾತಲ್ಲ. ಪ್ರೀತಿಸಿ ಕೈ ಹಿಡಿದ ಪುಟ್ಟಣ್ಣ ಕಣಗಾಲರೂ ದೂರವಾಗಿದ್ದರು. ಮಗಳು ಯಶಸ್ವಿನಿಯನ್ನು ಆಯಾಳ ಕೈಗೊಪ್ಪಿಸಿ ದಿನಗಟ್ಟಲೆ ಶೂಟಿಂಗಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು.

ಆದರೆ ಅದೊಂದು ದಿನ ತಡರಾತ್ರಿ ಶೂಟಿಂಗ್ ಮುಗಿಸಿ ಬಂದಾಗ, ಮಗಳ ಒಂಟಿತನದ ಆಕ್ರಂದನ ಅದೆಷ್ಟು ತೀವ್ರವಾಗಿ ಆ ತಾಯಿಯ ಕರುಳನ್ನು ಇರಿಯಿತೆಂದರೆ, ಆ ಕ್ಷಣದಲ್ಲಿ ಮಗಳ ತಲೆ ಮೇಲೆ ಕೈಯಿಟ್ಟು ಇನ್ನೆಂದೂ ಬಣ್ಣ ಹಚ್ಚುವುದಿಲ್ಲವೆಂದು ಪ್ರಮಾಣ ಮಾಡಿದರು.
ಪಡೆದಿದ್ದಅಡ್ವಾನ್ಸ್ ಹಣವನ್ನೂ ನಿರ್ಮಾಪಕರಿಗೆ ಹಿಂತಿರುಗಿಸಿದರು.

ಬಣ್ಣದ ಬದುಕಿಂದ ದೂರವಾಗಿ ಸರಳ ಬದುಕನ್ನಪ್ಪಿಕೊಂಡು ಅಜ್ಞಾತವಾಗಿರಬಯಸಿದ ಆರತಿ ಸುಮ್ಮನೇ ಕೂರಲಿಲ್ಲ. ತಾನು ದುಡಿದ ಅಷ್ಟೂ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದರು. ಅದೇ ಸಮಯದಲ್ಲಿ ಪರಿಚಯವಾದ ಸೇವಾ ಮನೋಭಾವದ ಹಾರ್ಡ್‌ವೇರ್ ಎಂಜಿನಿಯರ್ ಚಂದ್ರಶೇಖರ ದೇಸಾಯಿ ಗೌಡರನ್ನು ಮದುವೆಯಾಗಿ ಅಮೇರಿಕಾದಲ್ಲಿದ್ದುಕೊಂಡೇ ತನ್ನ ಸಾಮಾಜಿಕ ಸೇವಾ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು.

ಬೆಂಗಳೂರಿನಲ್ಲಿದ್ದ ತನ್ನ ಪ್ರೀತಿಯ ಬಂಗಲೆ ‘ಬೆಳ್ಳಿತೆರೆ’ಯನ್ನುಮಾರಿದಾಗಬಂದ ₹15 ಕೋಟಿಯನ್ನು ಸಮಾಜಸೇವೆಗೆ ವಿನಿಯೋಗಿಸಿದರು. ಆರತಿಯವರಿಗೆ ಸಮಾಜಸೇವೆಗೆ ಪ್ರೇರಣೆ ನೀಡಿದ್ದು ಚಾಮರಾಜನಗರದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮಗ ಜಿ.ಎಸ್.ಜಯದೇವ ನಡೆಸುತ್ತಿರುವ ‘ದೀನಬಂಧು’ಮಕ್ಕಳ ಮನೆ. ಆ ಅನಾಥಾಶ್ರಮಕ್ಕೆ ವಿಶಾಲ ಹಾಸ್ಟೆಲ್ ಕಟ್ಟಡ ಕಟ್ಟಿಸಿ ಕೊಟ್ಟಿದ್ದಲ್ಲದೆ, ₹2 ಕೋಟಿ ಠೇವಣಿಯಿರಿಸಿ ಅದರ ಬಡ್ಡಿಯನ್ನು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ವಿನಿಯೋಗಿಸುತ್ತಿದ್ದಾರೆ. 40ಶಾಲೆಗಳನ್ನು ದತ್ತು ಪಡೆದು, ಅಷ್ಟೂ ಶಾಲೆಗಳ ಬಡ ಮಕ್ಕಳ ಖರ್ಚುವೆಚ್ಚ ಭರಿಸುತ್ತಿದ್ದಾರೆ.

ಆರತಿ-ಚಂದ್ರಶೇಖರ ದಂಪತಿಗಳ ಸೇವಾ ಕಾರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗೆ ಶೌಚಾಲಯ, ಆಸ್ಪತ್ರೆ, ಶಾಲೆ, ಹೆಣ್ಣುಮಕ್ಕಳಿಗೆ ಸ್ವಉದ್ಯೋಗ ತರಬೇತಿಯಂಥಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಚಿತ್ರರಂಗದಲ್ಲಿದ್ದಾಗಿನ ಅವರ ಸಹಜ ವೈವಾಹಿಕ, ಪ್ರೇಮಕತೆಗಳು ಏನಾದರೂ ಇರಲಿ. ನನಗೆ ಅಚ್ಚರಿಯೆನಿಸುವುದು ಅದಲ್ಲ.
ಇಷ್ಟೆಲ್ಲ ಕೋಟಿಗಟ್ಟಲೆ ಮೊತ್ತವನ್ನು ನಿಸ್ವಾರ್ಥ ಭಾವದಿಂದ ಸಾಮಾಜಿಕ ಸೇವೆಗಾಗಿ ವಿನಿಯೋಗಿಸುತ್ತಿದ್ದರೂ, ಯಾರ ಕಣ್ಣಿಗೂ ಬೀಳದೆ, ಸಾರ್ವಜನಿಕರು, ಪತ್ರಿಕೆಯವರು, ಕೊನೆಗೆ ತನ್ನನ್ನು ಬೆಳೆಸಿದ ಚಿತ್ರಂಗದವರಿಂದಲೂ ದೂರವಾಗಿ ಅಜ್ಞಾತರಾಗಿಯೇ ಉಳಿಯಬೇಕೆನ್ನುವ ಅವರ ದಿವ್ಯ ನಿರ್ಲಿಪ್ತ ಮನೋಭಾವ.

ಬಹುಶಃ ‘ದೀನಬಂಧು’ ಮನೆಯ ಜಯದೇವ ಅವರು ಇಲ್ಲದಿದ್ದರೆ ಆರತಿಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲವೇನೋ. ಹತ್ತು ವರ್ಷಗಳ ಹಿಂದೆ ನಾನು ಚಾಮರಾಜನಗರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕನಾಗಿದ್ದಾಗ ಜಯದೇವಅವರ ದೀನಬಂಧು ಮಕ್ಕಳ ಮನೆಯ ಜೊತೆ ನಿಕಟವಾಗಿದ್ದೆ. ಆಗ ಒಮ್ಮೆ ಜಯದೇವಅವರು ಆರತಿಯವರ ಸೇವಾ ಕಾರ್ಯದ ಬಗ್ಗೆ ಹೇಳಿದ್ದರು. ಮುಂದಿನ ಸಲ ಆರತಿಯವರು ಬಂದಾಗ ನಾನು ಭೇಟಿ ಮಾಡಬಹುದಾ ಅಂತ ಕೇಳಿದಾಗ ಆರತಿಯವರು ಯಾರನ್ನೂ ಭೇಟಿಯಾಗಲು ಇಷ್ಟ ಪಡುವುದಿಲ್ಲ ಎಂದರು.ಆದರೆ ಆಗಲೂ ನನಗೆ ಆರತಿಯವರ ವೈಯಕ್ತಿಕ ಬದುಕಿನ ಬಗೆಗಾಗಲಿ, ಸೇವಾಗಾತ್ರ ಇಷ್ಟೊಂದು ದೊಡ್ಡದಿದೆಯೆಂದಾಗಲಿ ಗೊತ್ತಿರಲಿಲ್ಲ.

‘ಟಿವಿ9‘ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಹೇಳಿದಂತೆ, ಕೆಲವು ವರ್ಷಗಳ ಹಿಂದೆ ಎಸ್.ಜಿ.ತುಂಗರೇಣುಕಾಅನ್ನುವ ಹಿರಿಯ ಪತ್ರಕರ್ತೆಯಿಂದಾಗಿ ಆರತಿಯವರ ಕುರಿತು ಮಾಹಿತಿ ದೊರೆಯುವಂತಾಯಿತು. ರೇಣುಕಾಅವರಿಗೂ ಆರತಿಯವರ ಭೇಟಿ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಜಯದೇವರ ಮೂಲಕ ಭೇಟಿಗೆ ಪ್ರಯತ್ನಿಸಿದರೂ ಆರತಿಯವರು ಭೇಟಿ ನಿರಾಕರಿಸಿದರು. ಕೊನೆಗೂ ಜಯದೇವರ ಒತ್ತಾಯಕ್ಕೆ ಮಣಿದು ಭೇಟಿಗೆ ಅವಕಾಶ ದೊರೆಯಿತು.ಬಹುಶಃ ಆ ಭೇಟಿಯಿಂದಾಗಿ ಆರತಿಯವರ ಅತ್ಯಂತ ಸರಳಬದುಕಿನ, ಆದರೆ ಸಮಾಜ ಸೇವೆಯ ಶ್ರೀಮಂತಿಕೆಯ ವಿವರಗಳು ಲಭ್ಯವಾದವು.ಅನಂತರವೂ ಅವರು ಯಾರಿಗೂ ಸಂದರ್ಶನ ಭೇಟಿಗೆ ಅವಕಾಶ ನೀಡಲಿಲ್ಲ.

ಇವತ್ತು ಕೋಟಿಗಟ್ಟಲೆ ದಾನ ಮಾಡುವ ಅನೇಕ ಸಂಸ್ಥೆಗಳು,ಶ್ರೀಮಂತ ವ್ಯಕ್ತಿಗಳು ಚಿತ್ರರಂಗದ ವರು ನೂರಾರು ಮಂದಿ ಇರಬಹುದು.ಆದರೆ ಎಲ್ಲ ಬಗೆಯ ಪ್ರಚಾರದಿಂದಲೂ ದೂರವಿದ್ದು, ತಾನು ಸಮಾಜದಿಂದ ಪಡೆದದ್ದೆಲ್ಲವನ್ನೂ ಮತ್ತೆ ಸಮಾಜಕ್ಕೆ ಮರಳಿಸುವ ಸರಳ, ನಿಸ್ಪೃಹ ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡ ಆರತಿಯವರಂತಹ ಜನರು ಹೆಚ್ಚು ಸಿಗುವುದಿಲ್ಲ.ಚಂದ್ರಶೇಖರರ ಹೆಸರಾದರೂ ಅವರ ಟ್ರಸ್ಟಿನಲ್ಲಿದೆ. ಆರತಿಯವರ ಹೆಸರು ಎಲ್ಲೂ ಕಾಣಿಸುವುದಿಲ್ಲ.

ನಿಜಕ್ಕೂ ಆರತಿಯವರು‘ಈ ಶತಮಾನದ ಮಾದರಿ ಹೆಣ್ಣು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT