ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಭವಿಷ್ಯ | 2019ರ ದೀಪಾವಳಿಯಿಂದ 2020ರ ದೀಪಾವಳಿವರೆಗೆ

Last Updated 30 ಅಕ್ಟೋಬರ್ 2019, 9:56 IST
ಅಕ್ಷರ ಗಾತ್ರ

2019ರ ದೀಪಾವಳಿಯಿಂದ 2020ರ ದೀಪಾವಳಿವರೆಗೆ ಎಲ್ಲ ರಾಶಿಗಳ ಫಲಾಫಲಗಳು ಹೇಗಿವೆ? ಯಾವರಾಶಿಯವರು ಈ ವರ್ಷ ಎಚ್ಚರದಿಂದಿರಬೇಕು? ದೋಷ ಪರಿಹಾರಕ್ಕೆ ಏನು ಮಾಡಬೇಕು? ಎಲ್ಲ ವಿಚಾರಗಳನ್ನು ಈ ವರ್ಷದ ಭವಿಷ್ಯದಲ್ಲಿ ವಿವರಿಸಿದ್ದಾರೆ ಮಧುಕೇಶ್ವರ ಜೋಶಿಯವರು.

**
ಮೇಷ
ಈ ರಾಶಿಯ ಮಹಾಶಯರದು ಅಗ್ನಿತತ್ವ ಹಾಗೂ ಚಂಚಲ ಸ್ವಭಾವ. ಈ ರಾಶಿಯವರಿಗೆ ಎಂಟನೆಯ ಗುರು ಭಾಗ್ಯದಲ್ಲಿ ಶನಿ ಕೇತು ಇರುವುದರಿಂದ ಆರಂಭದಲ್ಲಿ ಗುರು ಬಲ ಇಲ್ಲ. ಭಾಗ್ಯದಲ್ಲಿ ಶನಿ ಕೇತು ಯುತಿಯಿಂದ (ಸಂಬಂಧದಿಂದ)ಮಂದಭಾಗ್ಯ. ಮೊದಲು ಕಷ್ಟಗಳನ್ನು ಅನುಭವಿಸಿದರೂ ನವೆಂಬರ್ 5ರ ನಂತರ ಭಾಗ್ಯದಲ್ಲಿ ಬರುವ ಗುರು ಎಲ್ಲ ಕಷ್ಟಕಾರ್ಪಣ್ಯಗಳನ್ನು ಕಳೆಯಲಿದ್ದು, ಭಾಗ್ಯಶಾಲಿಗಳಾಗುವ ಯೋಗ. ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಸ್ವಲ್ಪ ತೊಂದರೆ ನಂತರ ಉನ್ನತ ವ್ಯಾಸಂಗದ ಅವಕಾಶ. ಸರ್ಕಾರಿ ಉದ್ಯೋಗ ಪ್ರಾಪ್ತಿ. ಸ್ತ್ರೀಯರಿಗೆ ವಿವಾಹ ಭಾಗ್ಯ. ಮನೆಯಲ್ಲಿ ಮಂಗಳಕಾರ್ಯಗಳಿಂದ ಸಂತೋಷದಾಯಕ.

ಹಿರಿಯರಿಗೆ ತೀರ್ಥಯಾತ್ರೆ, ದೇವರ ದರ್ಶನ, ಸಾಧು ಸತ್ಪುರುಷರ ದರ್ಶನ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೊಸ ವಾಹನ ಖರೀದಿ, ನೂತನ ಕಟ್ಟಡ ನಿರ್ಮಾಣ, ಗೃಹ ಪ್ರವೇಶದ ಯೋಗ. ರಾಜಕೀಯದಲ್ಲಿ ಇರುವವರಿಗೆ ಏಪ್ರಿಲ್, ಮೇ ತಿಂಗಳಲ್ಲಿ ಅಧಿಕಾರ ಪ್ರಾಪ್ತಿ. ಉದ್ಯೋಗದಲ್ಲಿರುವವರಿಗೆ ಕೆಲಸದ ಹೆಚ್ಚಳದಿಂದ ಶ್ರಮ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ಪರಸ್ಪರ ಭಿನ್ನಾಭಿಪ್ರಾಯ, ಸ್ಥಾನ ಬದಲಾವಣೆ. ಮನೆಯಲ್ಲಿ ಆಸ್ತಿ ವಿಷಯವಾಗಿ ಅಣ್ಣ ತಮ್ಮಂದಿರಲ್ಲಿ ಕಲಹ. ಜುಲೈ, ಆಗಸ್ಟ್ ತಿಂಗಳಲ್ಲಿ ಆರೋಗ್ಯದಲ್ಲಿ ತೊಂದರೆ, ಜ್ವರಬಾಧೆ. ಮಕ್ಕಳಿಂದ ದುಃಖ. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ದ್ವಿತೀಯಾರ್ಧದಲ್ಲಿ ಕೌಟುಂಬಿಕ ಕಲಹ. ಹಲ್ಲಿನ ತೊಂದರೆ. ಅಷ್ಟಮದ ಕೇತುವಿನಿಂದ ಮೃತ್ಯುಭಯ.

ಪರಿಹಾರ: ಗುರು ಜಪ‍, ಗುರು ಶಾಂತಿ, ಗಣಪತಿ ಆರಾಧನೆ ಮಾಡಿ, ನವಗ್ರಹದ ಧಾನ್ಯ ದಾನ ಮಾಡಿ.

ವೃಷಭ
ಈ ರಾಶಿಯವರಿಗೆ ಆರಂಭದಲ್ಲಿ ಆರೋಗ್ಯದ ತೊಂದರೆ. ಕುಟುಂಬದಲ್ಲಿ ಕಲಹ. ದಂತರೋಗ. ಅಷ್ಟಮಸ್ಥಾನದಲ್ಲಿ ಗುರು ಶನಿ ಕೇತು ಯುತಿಯಿಂದಾಗಿ ಗುರುಬಲವಿಲ್ಲ. ಸರ್ಕಾರಿ ಉದ್ಯೋಗದವರಿಗೆ ಉದ್ಯೋಗದಲ್ಲಿ ಕಿರಿಕಿರಿ. ಸ್ಥಾನಪಲ್ಲಟ ಸಂಭವ. ಹೊಸ ಹೆಜ್ಜೆ ಇಡುವ ಮುನ್ನ ಯೋಚಿಸುವುದು ಅಗತ್ಯ. ಅಷ್ಟಮ ಶನಿಯಿಂದ ಭಾಗ್ಯ ಕ್ಷೀಣ. ಹಣ ಕಳೆದುಕೊಳ್ಳುವ, ಮೋಸ ಹೋಗುವ ಸಂಭವ. ವಿವಾಹ ಮತ್ತು ಆಸ್ತಿ ವಿಷಯದಲ್ಲಿ ಎಚ್ಚರ ವಹಿಸುವುದು ಅಗತ್ಯ. ಸಂಸಾರದಲ್ಲಿ ಪರಸ್ಪರ ಭಿನ್ನಾಭಿಪ್ರಾಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ಹೊಸ ವಾಹನ, ಮನೆ, ಆಸ್ತಿ ಖರೀದಿ ಬೇಡ.

ವಾಹನದಿಂದ ಆಗಬಹುದಾದ ಅಪಘಾತದ ಕುರಿತು ಜಾಗೃತಿ ಅಗತ್ಯ. ಮಕರ ಸಂಕ್ರಾಂತಿ ನಂತರ ಅಷ್ಟಮದ ಗುರು ಮಂಗಳ ಮುಂದುವರೆಯಲಿದ್ದು ಭಾಗ್ಯದಲ್ಲಿ ಶನಿ ಪ್ರವೇಶ ಮಾಡುವುದರಿಂದ ಚೇತರಿಕೆ. ಇಚ್ಛಿತ ಕಾರ್ಯಗಳು ನೇರವೇರುವ ಯೋಗ. ಮನೆಯಲ್ಲಿ ಹಿರಿಯರ ಜೊತೆ ಭಿನ್ನಾಭಿಪ್ರಾಯ ಬೇಡ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಗುವ ಯೋಗ. ದಕ್ಷಿಣದ ಕಡೆ ಯಾತ್ರೆ. ದೇವರ ದರ್ಶನದಿಂದ ಸಮಾಧಾನ. 2020 ಮಾರ್ಚ್ ನಂತರ ಭಾಗ್ಯ ಸ್ಥಾನದಲ್ಲಿ ಶನಿ ಗುರು ಯುತಿಯಾಗಿ ರಾಶಿಗೆ ಶುಕ್ರ ಪ‍್ರವೇಶವಾಗುವುದರಿಂದ ಮನೆಯಲ್ಲಿ ಮಂಗಳ ಕಾರ್ಯ. ಮಕ್ಕಳಿಗೆ ಉಪನಯನ, ವಿವಾಹ ಯೋಗ. ಹೊಸ ವಾಹನ ಖರೀದಿ. ಬಹಳ ದಿವಸದ ಹಣ ಹಿಂತಿರುಗುವಿಕೆ. ಅಧಿಕಾರಿಗಳಿಗೆ ಸ್ಥಾನ ಪ್ರಾಪ್ತಿ. ಜವಾಬ್ದಾರಿ ಹೆಚ್ಚಳ. ವ್ಯಾಪಾರಸ್ಥರಿಗೆ, ಸ್ವಂತ ಉದ್ಯೋಗ ಮಾಡುವವರಿಗೆ ಆರಂಭದಲ್ಲಿ ತೊಂದರೆಯಾದರೂ ಮಕರ ಸಂಕ್ರಾಂತಿ ನಂತರ ವ್ಯಾಪಾರ ಬಹಳ ಲಾಭಕರ. ಜುಲೈ, ಆಗಸ್ಟ್ ನಂತರ ಗುರು ಶನಿ ವಕ್ರಿಯಾಗಿದ್ದು, ಈ ವರ್ಷ ಸುಖ ದುಃಖ ಸಮ–ಸಮ.

ಪರಿಹಾರ: ಕಂಬಳಿ, ಕಬ್ಬಿಣ, ಎಣ್ಣೆ ದಾನದ ಮೂಲಕ ಶನಿದೇವರ ಶಾಂತಿ ಮಾಡಿ. ಗುರು ಜಪ, ಗುರು ಚರಿತ್ರೆ ಪಾರಾಯಣ ಮಾಡಿ.

ಮಿಥುನ
ಇದು ದ್ವಿಸ್ವಭಾವದ ರಾಶಿ. ಮನಸ್ಸು ಸ್ಥಿರ ಮತ್ತು ಚಂಚಲ. ಮಿಥುನ ರಾಶಿಯಲ್ಲಿ ರಾಹು ಸಪ್ತಮ ಭಾವದಲ್ಲಿದ್ದು, ಗುರು, ಶನಿ, ಕೇತು ಯುತಿ. ಗುರುಬಲ ಇದ್ದರೂ ಬಲಕ್ಕಾಗಿ ಕಾಯಬೇಕು. ದೀಪಾವಳಿಯಿಂದ ಶುಭ. ಚರ್ಮರೋಗದ ಕುರಿತು ಎಚ್ಚರ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಮಂದಗತಿ. ಸಿವಿಲ್, ಮೆಕ್ಯಾನಿಕಲ್ ಹಾಗೂ ಆಯುರ್ವೇದ ವಿದ್ಯಾರ್ಥಿಗಳಿಗೆ ನಿರಾತಂಕ. ಸ್ತ್ರೀಯರಿಗೆ ವಿವಾಹ ಭಾಗ್ಯ. ಮನೆಯಲ್ಲಿ ಮಂಗಳ ಕಾರ್ಯ. ಸರ್ಕಾರಿ ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಸ್ಥಾನಪಲ್ಲಟ ಹಾಗೂ ವಿ.ಆರ್.ಎಸ್. ಪಡೆಯಬೇಕಾಗುವ ಭೀತಿ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬುಧ, ಮಂಗಳ ಯುತಿಯಿಂದ ಅಸತ್ಯ ಕಥನ. ರಕ್ತದಿಂದ ತೊಂದರೆ, ಕೃತ್ರಿಮ ದೋಷ. ಪಂಚಗ್ರಹ ಯುತಿ ಶುಭಾಶುಭ ಫಲ. ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಷಯದಲ್ಲಿ ಭಿನ್ನಾಭಿಪ್ರಾಯ.

ಅಸಮಾಧಾನವನ್ನು ಸೋತು ಗೆಲ್ಲುವ ಜಾಣ್ಮೆ ಅಗತ್ಯ. ರಾಶಿಯ ಅಧಿಪತಿ ಬುಧನು ಕುಮಾರ. ಹೀಗಾಗಿ ಹಿರಿಯರು ಹೇಳಿದಂತೆ ನಡೆಯುವುದು ಒಳ್ಳೆಯ ವಿಚಾರ. ದೂರ ಪ್ರಯಾಣ ಬೇಡ. ಫೆಬ್ರುವರಿ ನಂತರ ಅಷ್ಟಮ ಶನಿ. ಆರಂಭದಲ್ಲಿ ವಾತ ಸಂಬಂಧ ರೋಗ. ಮೊಣಕಾಲಿನ ತೊಂದರೆಗೆ ಶಸ್ತ್ರಚಿಕಿತ್ಸೆ. ಅನವಶ್ಯಕ ಧನ ನಾಶ. ಮಂದ ಭಾಗ್ಯ. ಮಕ್ಕಳ ನಡುವೆ ಮನಸ್ತಾಪ. ಯುಗಾದಿ ಮುಂದೆ ಗುರು, ಶನಿ, ಕುಜ ಯುತಿಯಿದ್ದು, ಗುರುಬಲ ಧನಬಲ ಜನಬಲ ಗೌಣ. ವ್ಯಾಪಾರಸ್ಥರಿಗೆ, ವಕೀಲರಿಗೆ, ವೈದ್ಯರಿಗೆ, ವಿತ್ತಕೋಶಕ್ಕೆ ಹಣ ತುಂಬಬೇಕಾದ ಅನಿವಾರ್ಯ ಸೃಷ್ಟಿ.

ಪರಿಹಾರ: ಸುಬ್ರಹ್ಮಣ್ಯ ಜಪ ಶಾಂತಿ, ಆಶ್ಲೇಷ ಬಲಿ, ಗುರು, ಶನಿ ಶಾಂತಿ ಜಪ ಮಾಡಿ. ದಾನಾದಿಗಳನ್ನು ಮಾಡಿ.

ಕರ್ಕಾಟಕ
ಈ ರಾಶಿಯವರದು ಚಂಚಲ ಸ್ವಭಾವ ಮತ್ತು ಜಲತತ್ವ. ಈ ರಾಶಿಯವರಿಗೆ ಆರನೇ ಗುರು, ಶನಿ, ಕೇತು ಯುತಿ ಇರುವುದರಿಂದ ಗುರುಬಲವಿಲ್ಲ. ಶನಿಯಿಂದ ರಾಜ್ಯ ಪ್ರದಾನ. ಸರ್ಕಾರಕ್ಕೆ ಹಣ ತುಂಬುವ ಯೋಗ. ಆರಂಭದಲ್ಲಿ ಅಧೈರ್ಯ. ಅಸತ್ಯ ಕಥನ. ಮನೆಯಲ್ಲಿ ಸ್ವಯಂಕೃತ ಅಶಾಂತಿ. ವಾಹನದಿಂದ ತೊಂದರೆ. ಜ್ವರಬಾಧೆ. ವ್ಯಯದ ರಾಹುವಿನಿಂದ ಅಧರ್ಮಾಚರಣೆ. ದೇವರ ಮೇಲೆ ನಂಬಿಕೆ ಕಡಿಮೆ. ಉದರ ವ್ಯಾಧಿ ಮುಂತಾದ ರೋಗ ಉಂಟಾಗುವಿಕೆ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಗುರುಬಲವಿಲ್ಲ. ಪರಿಶ್ರಮದಿಂದ ವಿದ್ಯಾಭ್ಯಾಸ. ವಕೀಲ, ಎಂಜಿನಿಯರ್, ಡಾಕ್ಟರ್ ಆಗಬಯಸುವವರಿಗೆ ಒಳ್ಳೆಯ ವಿದ್ಯಾಭ್ಯಾಸವಾಗಿ ಸ್ಥಾನಮಾನ ದೊರೆಯುವುದಲ್ಲದೆ ಸರ್ಕಾರಿ ಉದ್ಯೋಗ ಪ್ರಾಪ್ತಿ. ಯುಗಾದಿ ನಂತರ ಉಪನಯನಕ್ಕೆ, ವಿವಾಹಕ್ಕೆ ಗುರುಬಲ ಬಂದು ಮನೆಯಲ್ಲಿ ಮಂಗಳಕಾರ್ಯ, ಸಂತೋಷದಾಯಕ. ಏಪ್ರಿಲ್ ತಿಂಗಳಲ್ಲಿ ರಾಜಯೋಗ. ಇಚ್ಛೆಗಳ ಈಡೇರಿಕೆ.

ಗೃಹ ನಿರ್ಮಾಣ ಆರಂಭ, ಹೊಸ ವಾಹನ ಖರೀದಿ, ಗೃಹ ಪ್ರವೇಶ, ಆಸ್ತಿ ಯಾವುದೇ ಕಷ್ಟವಿಲ್ಲದೆ ಲಭ್ಯ. ಜೂನ್, ಜುಲೈ ತಿಂಗಳಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಚರ್ಮವ್ಯಾಧಿ ಭಯ. ತಂದೆ, ಮಗನಿಗೆ ಭಿನ್ನಾಭಿಪ್ರಾಯ. ಸಂಸಾರದಲ್ಲಿ ಒಡಕು. ಸಾಲಬಾಧೆ ಹೆಚ್ಚಳ. ವ್ಯವಹಾರ ವ್ಯಾಪಾರಸ್ಥರಿಗೆ ಆರಂಭದಲ್ಲಿ ತೊಂದರೆ ಕಂಡರೂ ಯುಗಾದಿ ನಂತರ ವ್ಯಾಪಾರ ಅಭಿವೃದ್ಧಿ. ಹೊಸ ಯೋಜನೆ ಪ್ರಾಪ್ತಿ.

ಪರಿಹಾರ: ಕೆಲಸ ಕಾರ್ಯ ಕಲಾಪಗಳನ್ನು ಸಮಾಧಾನದಿಂದ ಮಾಡಿ. ಈ ವರ್ಷ ಗುರು ಶನಿ ಶಾಂತಿ ಜಪ, ದಾನಾದಿಗಳನ್ನು ಮಾಡಿ.

ಸಿಂಹ
ಈ ರಾಶಿಯವರದು ಆಗ್ನಿತತ್ವ, ಸ್ಥಿರ ಸ್ವಭಾವ. ಏಕಾಂತವಾಸದ ಇಚ್ಛೆ. ಈ ರಾಶಿಗೆ ಐದನೇ ಗುರು, ಶನಿ, ಕೇತು ಯುತಿ ಇದ್ದು ಜನವರಿ 20ರ ತನಕ ಶನಿಯ ಕಾಟ. ಗುರು ಧನುರಾಶಿಯಲ್ಲಿದ್ದು ಶನಿಯ ದೃಷ್ಟಿ 3, 7, 10ನೇ ಸ್ಥಾನಕ್ಕೆ ಬೀಳುವುದರಿಂದ ವ್ಯವಹಾರದಲ್ಲಿ ಅಡೆತಡೆ. ಧನವ್ಯಯದ ಆತಂಕ. ಗುರುಬಲ ಇರುವುದರಿಂದ ಹಿರಿಯರ, ಸಾಧು, ಸತ್ಪುರುಷರ, ಗುರುಗಳ ಆಶೀರ್ವಾದ ಪ್ರಾಪ್ತಿ. ಪಂಚಮದ ಕೇತು ಕೆಟ್ಟ ವಿಚಾರಕಾರಕ. ಆರಂಭದಲ್ಲಿ ಸುಖಸ್ಥಾನದಲ್ಲಿ ಗೋಚರ, ಶುಕ್ರ ಇರುವುದರಿಂದ ವಾಹನ ಭಾಗ್ಯ, ಬಂಧು ಬಳಗದಿಂದ ಹೆಚ್ಚು ಸುಖ. ಸಂಸಾರ ಸುಖ. ಸಮಾಧಾನಕರ ಉದ್ಯೋಗದಲ್ಲಿ ಸ್ಥಿರತೆ. ಅಧಿಕಾರ ಪ್ರಾಪ್ತಿ. ಖಾಸಗಿ ಉದ್ಯೋಗದವರಿಗೆ ಸ್ಥಾನ ಪಲ್ಲಟ ಹೊಂದಿ ನೆಮ್ಮದಿ. ಗುರುಬಲದಿಂದ ಮನೆಯಲ್ಲಿ ವಿವಾಹ, ಮಂಗಳ ಕಾರ್ಯ. ಗುರು, ಧನು ರಾಶಿಯಲ್ಲಿ ಇರುವಾಗ ಸರ್ಕಾರಿ ಉದ್ಯೋಗ, ಬೋಧನೆ ವೃತ್ತಿ ಅವಕಾಶ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರಂಭದಲ್ಲಿ ಚೆನ್ನಾಗಿದ್ದು 2020 ಯುಗಾದಿ ನಂತರ ಮಂದಗತಿ. ಆಯುರ್ವೇದ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಈ ವರ್ಷ ಶುಭ. ಮಾರ್ಚ್, ಏಪ್ರಿಲ್ ನಂತರ ವಾಹನದಿಂದಾಗುವ ತೊಂದರೆಯಿಂದ ಶಸ್ತ್ರಚಿಕಿತ್ಸೆ ಸಾಧ್ಯತೆ. ದೂರ ಪ್ರಯಾಣ ಬೇಡ. ಏಪ್ರಿಲ್‌ ತಿಂಗಳ ಬಳಿಕಗುರುಬಲ ಇಲ್ಲ.

ಪರಿಹಾರ: ಮುಖ್ಯವಾಗಿ ಗುರುಗಳ ಸೇವೆ, ಕುಲದೇವತಾ ದರ್ಶನ ಮಾಡಿ. ವ್ಯಾಪಾರಸ್ಥರು ಆರಂಭದಲ್ಲಿ ಸಮಾಧಾನದಿಂದ ಇರಿ. ಶನಿ ದೇವರ ಸಂಬಂಧವಾಗಿ ಕಂಬಳಿ, ಎಣ್ಣೆ, ಕಬ್ಬಿಣ ದಾನ, ರುದ್ರಾಭಿಷೇಕ, ಗುರು ಸೇವೆ ಮಾಡಿ. ಗುರುಚರಿತ್ರೆ ಪಾರಾಯಣ ಮಾಡಿ.

ಕನ್ಯಾ
ಇದು ಸಹ ದ್ವಿಸ್ವಭಾವದ ರಾಶಿ. ಈ ವರ್ಷ ಚತುರ್ಥ ಗುರು, ಶನಿ, ಕೇತು ಯುತಿ ಇರುವುದರಿಂದ ಸುಖ–ದುಃಖಗಳು ಸಮ. ಆಲಸ್ಯತನದ ಪರಮಾವಧಿ. ಕೇತುಗ್ರಹದಿಂದ ಚಿಂತೆ ಹೆಚ್ಚಳ. ಬುಧ ಮಂಗಳ ಯುತಿಯಿಂದ ಕಠೋರ ವಚನ. ಕುಟುಂಬದಲ್ಲಿ ಕಲಹ. ಅಸತ್ಯ ಕಥನ. ಕಿವಿಯ ತೊಂದರೆ. ಮಕರ ಸಂಕ್ರಾಂತಿ ನಂತರ ಪಂಚಮದಲ್ಲಿ ಶನಿ. ದಾಂಪತ್ಯದಲ್ಲಿ ಪರಸ್ಪರ ಭಿನ್ನಾಭಿಪ್ರಾಯ. ಲಾಭ ಕಡಿಮೆ. ಹಣ ದುರ್ಬಳಕೆ. ವಾಯು ವಿಕಾರ, ನರ ದೌರ್ಬಲ್ಯ, ಉದರ ವ್ಯಾಧಿ. ಉದ್ಯೋಗದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿದರೂ ಸ್ಥಾನಪಲ್ಲಟ. ಉದ್ಯೋಗ ಕಳೆದುಕೊಳ್ಳುವಿಕೆ. ಮನೆಯಲ್ಲಿ ಅನಾರೋಗ್ಯ. ದೇವರ ಮೇಲೆ ನಂಬಿಕೆ ಇಲ್ಲದಂತಾಗುವ ಈ ವರ್ಷ, ಹೊಸಜಾಗ ಮನೆ, ವಾಹನ ಖರೀದಿ ಬೇಡ. ಎಷ್ಟೇ ಪರಿಶ್ರಮಪಟ್ಟರೂ ಸರ್ಕಾರಿ ಉದ್ಯೋಗ ಸಿಗುವುದು ಬಹಳ ಕಷ್ಟ.

ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ಮಾರ್ಚ್ ನಂತರ ಉಪನಯನ, ವಿವಾಹಕ್ಕೆ ಗುರುಬಲ. ಮನೆಯಲ್ಲಿ ಮಂಗಳಕಾರ್ಯ. ಕುಲದೇವರ ದರ್ಶನದಿಂದ ಶುಭ. ವ್ಯಾಪಾರಿಗಳಿಗೆ, ವೈದ್ಯರಿಗೆ, ವಕೀಲರಿಗೆ ಕೆಲಸ ಜಾಸ್ತಿ, ಹಣ ಕಡಿಮೆ. ಏಪ್ರಿಲ್, ಮೇ ನಂತರ ಭಾಗ್ಯದಲ್ಲಿ ರವಿ, ಬುಧ, ಶುಕ್ರ ಯುತಿಯಿದ್ದು ಹೊಸ ವಾಹನ ಖರೀದಿ. ಆಕಸ್ಮಿಕ ಧನ ಲಾಭ. ದೂರ ದೇಶ ಪ್ರಯಾಣ.

ಪರಿಹಾರ: ಹಿರಿಯರಿಗೆ ತುಲಾಭಾರ, ದಾನ, ಗಣಪತಿ, ಗುರುಗಳ ಆರಾಧನೆ ಮಾಡಿ. ದುರ್ಗಾಸಪ್ತಶತಿ ಪಾರಾಯಣ ಶಾಂತ್ಯಾದಿಗಳನ್ನು ಮಾಡಿ.

ತುಲಾ
ಈ ರಾಶಿಯವರಿಗೆ ದೀಪಾವಳಿಯು ಶುಭ. ರಾಶಿಯಲ್ಲಿ ರವಿ, ಮಂಗಳ, ಬುಧ ಯುತಿ ಇರುವುದರಿಂದ ಜ್ವರಬಾಧೆ. ರಕ್ತದಿಂದಾಗುವ ತೊಂದರೆ. ಅನಾರೋಗ್ಯದಿಂದ ಅಧಿಕಾರ ಕಳೆದುಕೊಳ್ಳುವಿಕೆ. ಅಸತ್ಯ ಕಥನ ಹೇಳುವುದರಿಂದ ತೊಂದರೆ ಉಂಟಾಗುವ ಸಂಭವ. ಗುರುಬಲ ಸಾಧಾರಣ. ಗುರುಪೂಜೆಯಿಂದ ಶುಭ. ಅಕಸ್ಮಾತ್ ಧನಲಾಭ ಯೋಗ. ದ್ವಿತೀಯದ ರವಿ ದಂತರೋಗವನ್ನುಂಟು ಮಾಡುವ ಸಂಭವ. ಸಂಸಾರ ತಾಪತ್ರಯ ಮುಂದುವರೆಯಲಿದ್ದು ಭಿನ್ನಾಭಿಪ್ರಾಯ ವೈಮನಸ್ಸು ಉಂಟಾಗುವಿಕೆ. ಮಕರ ಸಂಕ್ರಾಂತಿ ನಂತರ ಶನಿ ಮಕರದಲ್ಲಿ ಸ್ವಕ್ಷೇತ್ರ ಬರುವುದರಿಂದ ಹಿರಿಯರಿಗೆ ಆಲಸ್ಯತನ.

ವಾತದಿಂದಾಗುವ ತೊಂದರೆ. ಸುಖ ಇಲ್ಲದಂತೆ ಕಾಣುವುದು. ಹಿರಿಯರ ಹಳೆಯ ಆಸ್ತಿ ದೊರಕುವ ಯೋಗ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಧಾರಣವಾಗಿದ್ದು ಎಂಜಿನಿಯರಿಂಗ್, ಆಯುರ್ವೇದ ವಿದ್ಯಾರ್ಥಿಗಳಿಗೆ ಶುಭ. ಸರ್ಕಾರಿ ಉದ್ಯೋಗ ಕಷ್ಟಕರ. ಮೇ ನಂತರ 2020 ಭಾಗ್ಯದಲ್ಲಿ ರವಿ ಬುಧ ಶುಕ್ರ ಯುತಿ ಇರುವುದರಿಂದ ದೂರ ದೇಶ ಪ್ರಯಾಣ, ಹೊಸ ವಾಹನ, ಗೃಹ‍ಪ್ರವೇಶ, ಮನೆಯಲ್ಲಿ ಉಪನಯನ ಮುಂತಾದ ಮಂಗಳ ಕಾರ್ಯಗಳು ಸಂತೋಷದಾಯಕ. ಆದರೆ ಗುರು ಶನಿ ಚತುರ್ಥದಲ್ಲಿದ್ದು ಕಫದಿಂದಾಗುವ ಹೃದಯ ಕಾಯಿಲೆ, ಜಲಭೀತಿಯಿಂದ ಎಚ್ಚರ. ವ್ಯವಹಾರಸ್ಥರಿಗೆ, ವಕೀಲರಿಗೆ, ವೈದ್ಯರಿಗೆ ಆರಂಭದಲ್ಲಿ ಸಾಧಾರಣ. 2020 ಮೇ ನಂತರ ಶುಭ.

ಪರಿಹಾರ: ಗಣಹವನ, ದೇವಿ ಆರಾಧನೆ ತಿಂಗಳಿಗೆ ಒಂದು ಸಲ ಕುಲದೇವರ ಆರಾಧನೆ ಮಾಡಿ.

ವೃಶ್ಚಿಕ
ಈ ರಾಶಿಯಲ್ಲಿ ಗುರು ಬುಧ ಸಂಚರಿಸುವಾಗ ಸುಖ, ಭೋಗಗಳ ಯೋಗ. ಆದರೆ ಸಾಡೇಸಾತಿ ಮುಂದುವರೆದು 2020 ಜನವರಿ ತಿಂಗಳಲ್ಲಿ ಮುಕ್ತಿ. ದ್ವಿತೀಯದ ಶನಿ ಕೇತುವಿನಿಂದ ದುಂದುವೆಚ್ಚ. ಕುಟುಂಬದಲ್ಲಿ ಅಸಮಾಧಾನ. ದಂತರೋಗ, ಹೃದಯ ಸಂಬಂಧಿ ಕಾಯಿಲೆ ಬಗೆಗೆ ಜಾಗೃತಿ. ನವೆಂಬರ್ 2ರ ನಂತರ ಗುರು ಶನಿ ಕೇತು ಯುತಿ ಬಹಳ ತೊಂದರೆದಾಯಕ. ರಾಶಿಗೆ ರವಿ ಪ್ರವೇಶದಿಂದ ಮಕ್ಕಳಿಗೆ ಜ್ವರಬಾಧೆ, ವಿದ್ಯಾರ್ಥಿಗಳಿಗೆ ಸಾಧಾರಣ ಗುರು ಬಲ. ಅಭ್ಯಾಸ ಮಂದಗತಿ. ಸ್ತ್ರೀಯರಿಗೆ ವಿವಾಹ ವಿಳಂಬ. ಪ್ರೇಮ ವಿವಾಹ ರದ್ದಾಗುವ ಸಂಭವ. ಪೊಲೀಸ್, ಅರಣ್ಯ ಇಲಾಖೆ ಸೈನಿಕರಿಗೆ ಅಧಿಕಾರ ಪ್ರಾಪ್ತಿಯಾಗಿ ಸ್ಥಾನಪಲ್ಲಟ. ಸರ್ಕಾರಿ ಉದ್ಯೋಗದವರಿಗೆ ಆರಂಭದಲ್ಲಿ ಶುಭ ಕಂಡರೂ ನಂತರ ಕಿರಿಕಿರಿ.

ಹೊಲ, ಆಸ್ತಿ ಖರೀದಿ ಹಾಗೂ ಹಳೆಯ ಮನೆ, ವಾಹನ ನೂತನವಾಗಿರುವಂಥ ಯಾವ ವಸ್ತುವನ್ನೂ ಖರೀದಿಸಲು ಕಷ್ಟ. ಅಷ್ಟಮ ರಾಹುವಿನಿಂದ ಮೂಲವ್ಯಾಧಿಯಂತಹ ರೋಗಗಳಿಂದ ತೊಂದರೆ. ಮಕರ ಸಂಕ್ರಾಂತಿಗೆ ಸಾಡೇಸಾತಿ ಶನಿ ಬಿಡುವುದರಿಂದ ಎಲ್ಲ ಕಾರ್ಯಗಳಲ್ಲಿ ಶುಭ. ಮಕ್ಕಳಿಂದ ಕೀರ್ತಿ. ಮನೆಯಲ್ಲಿ ಮಂಗಳಕಾರ್ಯಗಳು ಸಂತೋಷದಾಯಕ. ಚತುರ್ಥ ಶನಿಯಿಂದ ಉದ್ಯೋಗ. ಮನೆ ಮುಂತಾದವುಗಳಿಂದ ಸ್ಥಾನಪಲ್ಲಟ ಸಂಭವ.

ಪರಿಹಾರ: ಗಣಪತಿ ಆರಾಧನೆ, ದೇವಿ ಪುರಾಣ, ಹುರುಳಿ ಧಾನ್ಯದಾನ, ಕಡಲೆದಾನ ಜಪ ತಪಾದಿಗಳನ್ನು ಮಾಡಿ.

ಧನು
ಈ ರಾಶಿಯವರಿಗೆ 12ನೇ ಗುರು ಇರುವುದರಿಂದ ಸತ್ಕಾರ್ಯಕ್ಕೆ ಹಣ ಹೆಚ್ಚು ಖರ್ಚಾಗುವಿಕೆ. ಧನು ರಾಶಿಯಲ್ಲಿ ಶನಿ ಸಾಡೇಸಾತಿ ಇದ್ದು ಐದು ವರ್ಷಗಳು ಪೂರ್ಣ. ಆದರೆ ರಾಶಿಯಲ್ಲಿ ಮೂರು ಭಾಗ ಮಾಡಿದರೆ ಮೊದಲನೆಯ ಎರಡೂವರೆ ವರ್ಷ ತಲೆಯಿಂದ ಹೃದಯದವರೆಗೆ, ಎರಡನೆ ಎರಡೂವರೆ ವರ್ಷ ಹೃದಯದಿಂದ ಕಟಿಯವರೆಗೆ, ಮೂರನೆಯ ಎರಡೂವರೆ ವರ್ಷ ಕಟಿಯಿಂದ ಕಾಲಿನವರೆಗೆ ತೊಂದರೆದಾಯಕ. ಮೂಲ ಜಾತಕದಲ್ಲಿ ಶನಿಯು ಬಲಿಷ್ಠನಾಗಿ ಮಕರ ಕುಂಭ ತುಲಾ ರಾಶಿಗಳಲ್ಲಿದ್ದರೆ ಸಾಡೇಸಾತಿಯಲ್ಲಿ ಶುಭ ಫಲ, ಇಲ್ಲವಾದರೆ ದುಃಖ. ರಾಶಿಯಲ್ಲಿಯ ಕೇತುವಿನಿಂದ ಭಯ ಮತ್ತು ಚಿಂತೆ.

ನವೆಂಬರ್‌ 2ರ ನಂತರ ಗುರು ಸ್ವಕ್ಷೇತ್ರ ಧನು ರಾಶಿಗೆ ಬಂದು ಎಲ್ಲ ಕಷ್ಟ ಕಾರ್ಪಣ್ಯಗಳು ದೂರ. ಭಯ ಬೇಡ. ರೈಲ್ವೆ, ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ನೌಕರಿ ಸಿಗುವ ಯೋಗ. ಮನೆ, ವಾಹನ, ಆಸ್ತಿ ತೆಗೆದುಕೊಳ್ಳುವುದರಿಂದ ಸಾಲದ ಬಾಧೆ ಹೆಚ್ಚಳ. ವಿಚಾರ ಮಾಡಿ ಮುನ್ನುಗ್ಗುವುದು ಒಳಿತು. ಸುಖಾಸುಮ್ಮನೆ ಉದ್ಯೋಗ ಕಳೆದುಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಆರಂಭದಲ್ಲಿ ತೊಂದರೆ. ನಂತರ ಪ್ರಗತಿ. ಸ್ತ್ರೀಯರಿಗೆ ವಿವಾದ. ಬರುವ ಯುಗಾದಿ ನಂತರ ಮನೆಯಲ್ಲಿ ಮಂಗಳ ಕಾರ್ಯ. ವ್ಯಾಪಾರಸ್ಥರಿಗೆ ಸ್ವಲ್ಪ ತೊಂದರೆದಾಯಕ. ಬಹಳ ಎಚ್ಚರ. ವೈದ್ಯರಿಗೆ, ವಕೀಲರಿಗೆ ಶುಭ.

ಪರಿಹಾರ: ಹನುಮಾನ್ ಚಾಲೀಸ್‌ ಪಠಣ, ರುದ್ರದೇವರ ದರ್ಶನ, ಶನಿಶಾಂತಿ ಜಪ ದಾನಾದಿಗಳನ್ನು ಮಾಡಿ.

ಮಕರ
ಈ ರಾಶಿಯವರ ಸಾಡೇಸಾತಿ ಆರಂಭವಾಗಿದ್ದು ಎರಡೂವರೆ ವರ್ಷ ಪೂರ್ಣ. ಈ ಸಾಡೆಸಾತಿ 12ನೇ ಶನಿಯಿಂದ ಸಾಲದಬಾಧೆ ಹೆಚ್ಚಳ. ಎಷ್ಟೇ ಪ್ರಯತ್ನಪಟ್ಟರೂ ಧನಲಾಭವಿಲ್ಲ. ದುರ್ಬಳಕೆಯೇ ಜಾಸ್ತಿ. ಅಧರ್ಮಾಚರಣೆ. ಅಭಕ್ಷ್ಯ ಭಕ್ಷಣ. ಅಪೇಯ ಪಾನ ಹೆಚ್ಚಳ. ಗುರು ಲಾಭದಲ್ಲಿ ಇರುವುದರಿಂದ ಎಲ್ಲ ಕಾರ್ಯಕ್ರಮಗಳಿಗೆ ರಕ್ಷೆ. ನವೆಂಬರ್ 2ರ ನಂತರ ಗುರುಬಲವಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರ. ಉದ್ಯೋಗದಲ್ಲಿ ಬದಲಾವಣೆ. ಕಿರಿಯರಿಗೆ ಅನಾರೋಗ್ಯ. ಹಿರಿಯರಿಗೆ ನರದೌರ್ಬಲ್ಯ, ವೃದ್ಧರಿಗೆ ಮೃತ್ಯು ಭಯ. ಯುಗಾದಿ ನಂತರ ಗುರು ಶನಿ ಕುಜ ಯುತಿ ಇರುವುದರಿಂದ ಒಳ್ಳೆಯ ಸ್ಥಾನಮಾನ ಸಿಗುವ ಸಾಧ್ಯತೆ ಹಾಗೂ ಅಧಿಕಾರಿಗಳಿಂದ ಪ್ರಶಸ್ತಿ ಸಿಕ್ಕು ಉನ್ನತ ಅಧಿಕಾರಿಯಾಗುವ ಯೋಗವಿದೆ.

ಪೊಲೀಸ್, ವೈದ್ಯರಿಗೆ ಅರಣ್ಯ ಅಧಿಕಾರಿಗಳಿಗೂ ಒಳಿತು. ಈ ವರ್ಷ ಯಾವುದೇ ಮನೆ, ಆಸ್ತಿ, ವಾಹನ ಖರೀದಿ ಮಾಡುವಾಗ ಎಚ್ಚರ. ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಗುರುಬಲವಿದ್ದರೂ ಅಭ್ಯಾಸದಲ್ಲಿ ಬಹಳ ಪರಿಶ್ರಮ. ವ್ಯಯದ ಶನಿಯಿಂದ ಆಲಸ್ಯತನ. ವೇಳೆಯನ್ನು ಸುಮ್ಮನೆ ಕಳೆಯುವ ಸಂದರ್ಭ ಒದಗುವ ಸಂಭವ. ವಿವಾಹ, ಉಪನಯನಕ್ಕೆ ಗುರುಬಲವಿಲ್ಲ. ಯುಗಾದಿ ನಂತರ ಮನೆಯಲ್ಲಿ ಮಂಗಳ ಕಾರ್ಯ. ವ್ಯಾಪಾಸ್ಥರಿಗೆ ಈ ವರ್ಷ ಸಾಧಾರಣವಾಗಿದ್ದು ಯುಗಾದಿ ನಂತರ ಒಳ್ಳೆಯ ವ್ಯಾಪಾರದಿಂದ ಹಣ ಸಂಗ್ರಹ.

ಪರಿಹಾರ: ಶನಿ ಶಾಂತಿ ದುರ್ಗಾರಾಧನೆ ಜಪ, ದಾನಾದಿಗಳನ್ನು ಮಾಡಿ.

ಕುಂಭ
ಈ ರಾಶಿಯ ಮಹಾಶಯರಿಗೆ 11ನೇ ಶನಿ. ಸಂಪತ್ ಪ್ರದಾತ ಶನಿ ಎಂಬಂತೆ ಹಣ, ಸಂಪತ್ತು ಕೊಡುವ ಕರ್ಮಸ್ಥಾನ. 10ನೇ ಗುರು ಒಳ್ಳೆಯ ಶುಭದಾಯಕ. ಈ ವರ್ಷ ದೀಪಾವಳಿ ಅತ್ಯಂತ ಶುಭದಾಯಕ. ಆರಂಭದಲ್ಲಿ ಸ್ವಂತ ಮನೆ, ಆಸ್ತಿ, ವಾಹನ ಸುಖ ಪುತ್ರಜನ್ಮ ಸಂಸಾರ ಸುಖ. ನವೆಂಬರ್ 2ರ ನಂತರ ಗುರುಗ್ರಹ ಕೂಡ 11ನೆಯವನಾಗಿದ್ದು ಶುಭದಾಯಕ. ಮಕ್ಕಳಿಂದ ಯಶಸ್ಸು, ಕೀರ್ತಿ. ಮನೆಯಲ್ಲಿ ಮಂಗಳ ಕಾರ್ಯ. ಕುಲದೇವತಾ ದರ್ಶನದಿಂದ ಎಲ್ಲ ಕಾರ್ಯಗಳು ಮಂಗಳಕರ. ಸರ್ಕಾರಿ ನೌಕರಿ ಲಭ್ಯ. ಯುಗಾದಿ ನಂತರ 12ನೇ ಗುರು ಶನಿ ಕುಜ ಯುತಿ. ಮನೆಯಲ್ಲಿ ಹಿರಿಯರಿಗೆ ಆರೋಗ್ಯದಲ್ಲಿ ತೊಂದರೆ. ಸಾಡೇಸಾತಿ ಆರಂಭವಾದಂತೆ ಗೋಚರ. ದುಂದುವೆಚ್ಚ. ಆಕಸ್ಮಿಕ ಶಸ್ತ್ರಚಿಕಿತ್ಸೆ.

ಉದ್ಯೋಗದಿಂದ ಸ್ಥಾನಪಲ್ಲಟ, ಮೇಲಧಿಕಾರಿಗಳಿಂದ ಭಯ. ಸಾಲದ ಬಾಧೆ. ಆಗಸ್ಟ್ ನಂತರ ವಕ್ರೀಯವಾಗಿ ಗುರು ಶನಿ ಲಾಭದಲ್ಲಿ ಬಂದು ಎಲ್ಲ ಸಮಸ್ಯೆಗಳಿಗೆ ಪರಿಹಾರ. ವಿದ್ಯಾರ್ಥಿಗಳಿಗೆ ಈ ವರ್ಷ ಆರಂಭದಲ್ಲಿ ಯಾವ ದೋಷಗಳಿಲ್ಲದೆ, ವಿದ್ಯಾಭ್ಯಾಸ ಉತ್ತಮ ಪ್ರಗತಿ. ಹೊಲ ಆಸ್ತಿ ಸ್ವಂತ ಉದ್ಯೋಗ ವ್ಯಾಪಾರಿಗಳಿಗೆ, ಲೇವಾದೇವಿ ಮಾಡುವವರಿಗೆ ಒಳ್ಳೆಯ ಧನಬಲ ‍ಪ್ರಾಪ್ತಿ.

ಪರಿಹಾರ: ಶನಿಶಾಂತಿ, ಗುರುಶಾಂತಿ, ಜಪ ತಪ ದಾನಾದಿಗಳನ್ನು ಮಾಡಿ.

ಮೀನ
ಈ ರಾಶಿಯವರಿಗೆ ಭಾಗ್ಯಸ್ಥಾನದಲ್ಲಿ ಗುರು ಬಲಿಷ್ಠವಾಗಿ ಇರುವುದರಿಂದ ಭಾಗ್ಯವಂತರು. ಮನೆಯಲ್ಲಿ ಮಂಗಳ ಕಾರ್ಯ. ತೀರ್ಥಕ್ಷೇತ್ರ ಯಾತ್ರೆ, ಹೊಸ ಮನೆ, ವಾಹನ ಖರೀದಿ. ಗುರುವಿನ ಅನುಗ್ರಹ. ಸರ್ಕಾರಿ ಉದ್ಯೋಗ ಪ್ರಾಪ್ತಿ. ದಶಮದ ಶನಿ ಕೇತು ಯುತಿ. ಶ್ರಮವಾಗಿ ದುಡಿದು ಮೇಲಿಂದ ಮೇಲೆ ಉದ್ಯೋಗವನ್ನು ಬದಲಾಯಿಸುವ ಸಂಭವ. ನವೆಂಬರ್ 2ರ ನಂತರ ಗುರು ಹತ್ತನೆಯವನಾಗಿ ಗುರು ಶನಿ ಕೇತು ಯುತಿಯಿಂದ ಮಂದ ಭಾಗ್ಯ. ಆಲಸ್ಯತನದಿಂದ ಕೆಲಸ ಮುಂದುವರಿಕೆ. ಅಕ್ಟೋಬರ್ ನಂತರ ರವಿ ಮಂಗಳ ಬುಧ ಯುತಿ. ರಕ್ತದಿಂದಾಗುವ ತೊಂದರೆ. ಉದರ ವ್ಯಾಧಿ. ಜ್ವರ ಬಾಧೆ. ಭಯ ಜಾಸ್ತಿ. ಸ್ನಾಯು ಸೆಳೆತದಿಂದ ಬಳಲುವಿಕೆ. ಯುಗಾದಿ ನಂತರ ಗುರು ಮಾರ್ಗಿಯಾಗಿ ಶನಿ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಎಲ್ಲ ಕಾರ್ಯಗಳು ಲಾಭಪ್ರದ. ಏಪ್ರಿಲ್, ಮೇ ತಿಂಗಳಲ್ಲಿ ದಂತರೋಗ.

ಕಣ್ಣಿನ ತೊಂದರೆ ಶತ್ರುಗಳಿಂದ ಪೀಡೆ. ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗುವ ಸಂಭವ. ಜುಲೈ ನಂತರ ಹಿರಿಯರಿಗೆ ಅನಾರೋಗ್ಯ. ಚರ್ಮವ್ಯಾಧಿ ಬಗ್ಗೆ ಎಚ್ಚರ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಯಾವ ತೊಂದರೆ ಇಲ್ಲ. ವೈದ್ಯರಿಗೆ, ವಕೀಲರಿಗೆ ಈ ವರ್ಷ ದೀಪಾವಳಿಯು ಲಾಭಪ್ರದ. ಸ್ವಂತ ವ್ಯಾಪಾರ ಮಾಡುವವರಿಗೆ ಆರಂಭದಲ್ಲಿ ಲಾಭ, ಮಧ್ಯದಲ್ಲಿ ಕಷ್ಟಕರ, ಅಂತ್ಯದಲ್ಲಿ ಒಳ್ಳೆಯ ವ್ಯಾಪಾರದಿಂದ ಧನ ಸಂಗ್ರಹ.

ಪರಿಹಾರ: ಗುರು ಶಾಂತಿ, ರಾಹು ಪ್ರೀತಕರ ದಾನ. ರವಿವಾರ ಉಪವಾಸ ಮತ್ತು ಧಾನ್ಯ ದಾನಗಳನ್ನು ಮಾಡಿ.

ಮಧುಕೇಶ್ವರ ಜೋಶಿ
ಮಧುಕೇಶ್ವರ ಜೋಶಿ

ಮಧುಕೇಶ್ವರ ಜೋಶಿ ಮೊ. ಸಂಖ್ಯೆ: 9448031601

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT