ಗುರುವಾರ , ಜುಲೈ 7, 2022
23 °C

ಭುವಿಯ ಕಿಚ್ಚು ಮುಗಿಲ ಮಿಂಚು: ಕವಿ ಸಿದ್ದಲಿಂಗಯ್ಯ ಕುರಿತ ಲೇಖನ

ಎನ್.ಎಸ್. ಶಂಕರ್ Updated:

ಅಕ್ಷರ ಗಾತ್ರ : | |

Prajavani

ಕವಿ ಸಿದ್ದಲಿಂಗಯ್ಯ ಅವರಿಗೆ ಇದೀಗ ಪದ್ಮಶ್ರೀ ಪುರಸ್ಕಾರ ಸಂದಿದೆ. ಮೆದು ಮಾತಿನ ವಾಮನಮೂರ್ತಿಯ ವ್ಯಕ್ತಿತ್ವದ ಅವಲೋಕನ ಇಲ್ಲಿದೆ

***

ಸಿದ್ದಲಿಂಗಯ್ಯನವರನ್ನು ನಾನು ಮುಖತಃ ಕಾಣುವ ಮುನ್ನವೇ ಅವರ ಹಾಡುಗಳನ್ನು ಕೇಳಿದ್ದೆ- ಬಹುಶಃ ಗೆಳೆಯ ಜನ್ನಿ (ಜನಾರ್ದನ್) ಕಂಠದಲ್ಲಿ. ಕೇಳಿದ ಕೂಡಲೇ ನನ್ನ ತಲೆಮಾರಿನ ಅಸಂಖ್ಯಾತ ‘ಕ್ರಾಂತಿಪೀಡಿತ ಆತ್ಮಗಳ’ ಹಾಗೆಯೇ ನಾನೂ ಆ ಹಾಡುಗಳ ಸಮ್ಮೋಹನಕ್ಕೆ ಒಳಗಾದೆ. ‘ಗುಡಿಸಲುಗಳು ಗುಡುಗುತಿವೆ, ಬಂಗಲೆಗಳು ನಡುಗುತಿವೆ’ ಎಂದರೆ, ಅಥವಾ ‘ನಿನ್ನೆ ದಿನ ನನ್ನ ಜನ, ಬೆಟ್ಟದಂತೆ ಬಂದರು...’ ಎಂದರೆ ನಾವೂ ಅಕ್ಷರಶಃ ರೋಮಾಂಚನದಿಂದ ನಡುಗುತ್ತಿದ್ದೆವು!

ಇಂಥ ರೋಮಾಂಚನದಲ್ಲಿ ಕಂಪಿಸುತ್ತಿದ್ದಾಗಲೇ ಯಾರೋ ಒಮ್ಮೆ ಕವಿಗಳನ್ನು ಮೊದಲ ಬಾರಿ ಪರಿಚಯ ಮಾಡಿಸಿದರು (ಯಾರು, ಯಾವ ಸಂದರ್ಭದಲ್ಲಿ- ಈಗ ನೆನಪಾಗುತ್ತಿಲ್ಲ. ಅಂತೂ 80ರ ದಶಕದ ಆರಂಭದಲ್ಲಿ). ಭೇಟಿ ಮಾಡಿದಾಗ, ನಿಜವಾಗಲೂ ಇವರೇ ಸಿದ್ದಲಿಂಗಯ್ಯನವರಾ? ಅಥವಾ ನನ್ನ ಗೆಳೆಯರು ಯಾರನ್ನೋ ತೋರಿಸಿ ಕಥೆ ಕಟ್ಟಿ ಮಜಾ ತಗೋತಾ ಇದ್ದಾರಾ ಅನ್ನುವ ಗಾಢ ಅನುಮಾನ ಹುಟ್ಟಿತ್ತು! ಕವಿಗಳ ಆಕಾರ ಹಾಗಿತ್ತು. ಆ ಹಾಡುಗಳ ರೋಷಾವೇಶ, ‘ಇಕ್ರಲಾ ವದೀರ್ಲಾ...’ ಅನ್ನುವ ಕೆಚ್ಚನ್ನು ಕಂಡವರಿಗೆ ಸಿದ್ದಲಿಂಗಯ್ಯನವರ ನಿಜ ಸ್ವರೂಪ anti climax!

ಇದು ನನ್ನೊಬ್ಬನ ಅನುಭವವೂ ಅಲ್ಲ. ಸಿದ್ದಲಿಂಗಯ್ಯ ಹಿಂದೊಮ್ಮೆ ‘ದಲಿತರಿಗೆ ಪ್ರತ್ಯೇಕ ರಾಜ್ಯ ಕೊಡಿ’ ಅಂತ ಆಗ್ರಹ ಮಾಡಿದಾಗ, ದೇವನೂರ ಮಹಾದೇವ ಕೂಡ ‘ಯಾರಪ್ಪ ಈ ಮಹಾನುಭಾವ’ ಅಂತ ಇವರನ್ನು ನೋಡಲು ಕಾದಿದ್ದರಂತೆ. ನೋಡಿ ಅವರಿಗೂ ಇದೇ ಬಗೆಯ ಅಚ್ಚರಿ ಉಂಟಾಗಿತ್ತಂತೆ! ಯಾಕೆಂದರೆ ನಮ್ಮ ಕಲ್ಪನೆಯಲ್ಲಿ ಸಿದ್ದಲಿಂಗಯ್ಯ ಎಂದರೆ ಅವರ ಹಾಡಿನಲ್ಲಿ ಬರುವ ‘ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳ’ ಒಡೆಯನೇ ಆಗಿರಬೇಕಿತ್ತು. ಇಲ್ಲಿ ನೋಡಿದರೆ ತಿಳಿಹಾಸ್ಯದ ಮೆದು ಮಾತಿನ ವಾಮನಮೂರ್ತಿ!

ಸಿದ್ದಲಿಂಗಯ್ಯನವರ ಬಾಹ್ಯ ಸ್ವರೂಪ ನೋಡಿ ಆಶ್ಚರ್ಯವಾಗುವುದಿರಲಿ, ‘ಹೊಲೆಮಾದಿಗರ ಹಾಡು’ ಸಂಕಲನದ ಹಾಡುಗಳನ್ನು ಅವರು ಬರೆದಿದ್ದು ಪಿಯುಸಿಯಲ್ಲಿದ್ದಾಗ (1970ರಲ್ಲಿ) ಎಂಬುದು ಇನ್ನೂ ಆಶ್ಚರ್ಯಕರವಾಗಿದೆ. ಆಗಿನ್ನೂ, 70ರ ದಶಕದ ತಳಮಳ ಸುಪ್ತವಾಗಿಯೇ ಇದ್ದು ಸ್ಫೋಟಿಸುವ ಗಳಿಗೆಗಾಗಿ ಕಾದಿತ್ತು. ನಾಡಿನ ಸಾಂಸ್ಕೃತಿಕ ಚಹರೆಯನ್ನು ಒಮ್ಮಿಂದೊಮ್ಮೆಲೇ ಬದಲಿಸಿದ ಕಲಮಲದ ಯಾವ ಸೊಲ್ಲೂ ಇರಲಿಲ್ಲ. ಅಂದರೆ ಸಮಾಜವಾದಿ ಯುವಜನ ಸಭಾ, ಜಾತಿವಿನಾಶ ಚಳವಳಿ, ಅಬ್ರಾಹ್ಮಣ ಬರಹಗಾರ ಕಲಾವಿದರ ಒಕ್ಕೂಟ, ಬೂಸಾ ಚಳವಳಿ- ಈ ಯಾವುದರ ಸೂಚನೆಯೂ ಇರಲಿಲ್ಲ. ದೇಶಕ್ಕೆ ಎಮರ್ಜೆನ್ಸಿಯ ಅನುಭವವೂ ಸಿಕ್ಕಿರಲಿಲ್ಲ. ಅಷ್ಟಾದರೂ, ಸಿದ್ದಲಿಂಗಯ್ಯ ಎಂಬ ಆ ಎಳೆ ತರುಣನ ಅಂತರಾತ್ಮದಲ್ಲಿ ಕ್ರಾಂತಿ ಭುಗಿಲೇಳಲು ಪ್ರೇರಣೆ ಸಿಕ್ಕಿದ್ದು ಎಲ್ಲಿಂದ? ಸ್ಮಶಾನದಲ್ಲಿ ಕೂತ ಈ ಪುಟ್ಟ ಆಕೃತಿ, ಕೆಂಡದುಂಡೆಗಳಂಥ ಹಾಡುಗಳನ್ನು ಬರೆದಿದ್ದು-ಕನ್ನಡದ ಇತಿಹಾಸವನ್ನೇ ಬದಲಿಸುವಂಥ ಕಾವ್ಯ ಕ್ರಾಂತಿ ಸಾಧಿಸಿದ್ದು ಹೇಗೆ?

ಅವರ ಆತ್ಮಕಥೆ ‘ಊರುಕೇರಿ’ಯಲ್ಲಿ ಇದಕ್ಕೆ ಏನಾದರೂ ಸುಳಿವು ಸಿಕ್ಕೀತೇ ಎಂದು ನೋಡಿದರೆ ಅಲ್ಲಿ ಏನೂ ಇಲ್ಲ. ಹಾಗೆ ನೋಡಿದರೆ ‘ಊರುಕೇರಿ’ಯನ್ನು ಮೊದಲ ಬಾರಿ ಓದಿದಾಗಲೇ ನನಗೆ ನಿರಾಸೆಯಾಗಿತ್ತು. ಯಾವ ಯಾವ ಇಟ್ಟಿಗೆಗಳನ್ನು ಎಲ್ಲೆಲ್ಲಿಂದ ತಂದು ಸಿದ್ದಲಿಂಗಯ್ಯನವರ ವ್ಯಕ್ತಿತ್ವದ ಕಟ್ಟಡ ಆಕಾರ ಪಡೆಯಿತು ಎಂಬ ಲವಲೇಶ ಸೂಚನೆಯೂ ಅಲ್ಲಿ ದೊರೆಯುವುದಿಲ್ಲ. ಇನ್ನು ಇವರ ದಲಿತ ಅನುಭವ ಲೋಕ ಕೂಡ ತೆಳು ಹಾಸ್ಯದ ಸಕ್ಕರೆ ಲೇಪ ಪಡೆದು ಒಂದಾದ ಮೇಲೊಂದು ಸ್ವಾರಸ್ಯದ ಪ್ರಸಂಗಗಳಾಗಿ ಪರ್ಯವಸಾನವಾಗಿವೆಯೇ ಹೊರತು, ನಮ್ಮ ಸಾಮಾಜಿಕ ಸಂದರ್ಭದ ಕನ್ನಡಿಯಾಗಿ ಅಲ್ಲ. ವಿಮರ್ಶಕ ಡಿ.ಆರ್. ನಾಗರಾಜರೇನೋ ‘ಊರುಕೇರಿ’ಯಲ್ಲಿ ‘ಬಡವರ ನಗುವಿನ ಶಕ್ತಿ’ ಕಂಡು ಸಂಭ್ರಮಿಸಿದರೂ, ನನಗೇನೋ ಆ ನಗುವಿನ ಶಕ್ತಿಗೂ ಅಲ್ಲಿ ಪುರಾವೆ ಕಾಣಲಿಲ್ಲ! ಡಿಆರ್, ತಮ್ಮ ಪೂರ್ವನಿಶ್ಚಿತ ಥಿಯರಿಯನ್ನು ನಿರೂಪಿಸಲು ಸಿದ್ದಲಿಂಗಯ್ಯನವರ ಕೃತಿಯನ್ನು ನೆಪವಾಗಿ ಬಳಸಿದಂತಿತ್ತು! ‘ದಲಿತನ ಸಿಟ್ಟಿನಿಂದ ಲೋಕ ಒಡೆದು ಹೋಗುವುದು ಕೊಂಚ ಅನುಮಾನದ ಸಂಗತಿ. ಆದರೆ, ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ’ ಎನ್ನುವ ಡಿಆರ್ ಹೇಳಿಕೆ ‘ಊರುಕೇರಿ’ಗೆ ಅನ್ವಯಿಸುವ ಮಾತಲ್ಲ! ಯಾಕೆಂದರೆ ಇಂದಿಗೂ, (ಮುಂದೆ ಬಹುಕಾಲವೂ) ಸಿದ್ದಲಿಂಗಯ್ಯನವರ ಕ್ರಾಂತಿ ಗೀತೆಗಳು ಹೋರಾಟಗಾರರನ್ನು ಬಡಿದೆಬ್ಬಿಸುತ್ತ ಲೋಕವನ್ನು ಬೆಚ್ಚಿ ಬೀಳಿಸಿವೆಯೇ ಹೊರತು ಅವರ ತೆಳು ಹಾಸ್ಯದ ಗದ್ಯವಲ್ಲ.

ಈ ತಲೆಮಾರಿನ ಅನೇಕರು ಭರತ್ ಜುಂಜನ್‍ವಾಲಾ ಹೆಸರನ್ನು ಕೇಳಿರಲಾರರು. ಭರತ್ ವಿದೇಶದಲ್ಲಿ ಓದಿ ಬಂದು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟಿನಲ್ಲಿ ಪ್ರೊಫೆಸರ್ ಆಗಿದ್ದವರು. ವಿಶೇಷವೆಂದರೆ ಅವರು ಬಡತನದ ವಿವರಗಳ ಸಾಕ್ಷಾತ್ ಗ್ರಹಿಕೆಗಾಗಿ ಸ್ವತಃ ಸ್ಲಂನಲ್ಲಿ ವಾಸವಾಗಿದ್ದರು. ಅವರೊಮ್ಮೆ ಕನ್ನಡದ ಕೆಲವು ಕಿರಿಯ ಬರಹಗಾರರನ್ನು ತಮಿಳುನಾಡಿನ ಹಳ್ಳಿಯೊಂದಕ್ಕೆ ಕರೆದೊಯ್ದು ಅಲ್ಲಿನ ದಲಿತರ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಿದ್ದರು. ಆ ಲೇಖಕರ ತಂಡದಲ್ಲಿ ಸಿದ್ದಲಿಂಗಯ್ಯ, ಡಿಆರ್ ಸಹ ಇದ್ದರು. ಅಲ್ಲಿನ ದಲಿತರ ಅನುಭವಗಳನ್ನು ಕೇಳಿದಾಗ ಉಕ್ಕೇರಿದ ಅಸಹಾಯಕ ಆಕ್ರೋಶವೇ ತಮ್ಮ ಹಾಡುಗಳಾಗಿ ಹೊಮ್ಮಿದವೆಂದು ಸಿದ್ದಲಿಂಗಯ್ಯನವರೇ ಹೇಳಿಕೊಂಡಿದ್ದಾಗಿ ನಟರಾಜ ಹುಳಿಯಾರ್ ಈಚೆಗೆ ಬರೆದ ಶ್ರದ್ಧಾಂಜಲಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು. ಹೋಗಲಿ, ಕೊನೆ ಪಕ್ಷ ಅದರ ವಿವರಗಳಾದರೂ ಊರುಕೇರಿಯಲ್ಲಿ ಸಿಗಬಹುದೇ ಎಂದು ಹುಡುಕಿದರೆ, ಅಲ್ಲಿ ಅದರ ಪ್ರಸ್ತಾಪವೂ ಇಲ್ಲ!

ಇಂಥ ಬೋಳು ಆತ್ಮಕಥನದಿಂದ ನಾವು ಸಿದ್ದಲಿಂಗಯ್ಯನವರ ಬಗೆಗೋ, ಅಥವಾ ನಮ್ಮ ಸಾಮಾಜಿಕ ಸಂದರ್ಭದ ಬಗೆಗೋ ತಿಳಿದುಕೊಳ್ಳುವುದು ಹೇಗೆ? ಆತ್ಮಕಥನ- ಅದರಲ್ಲೂ ದಲಿತ ಆತ್ಮಕಥನವೆಂದರೆ ಭಾರತದ ಎದೆಗೆ ಬರೆ ಇಟ್ಟಂತಿರಬೇಕು ಎನ್ನುವುದು ನನ್ನ ನಿರೀಕ್ಷೆ. ಬರೆಯ ಗಾಯ ಮಾಯ್ದರೂ ಅದರ ಗುರುತು ಶಾಶ್ವತವಾಗಿ ಉಳಿದಿರಬೇಕು. ಆದರೆ ಸಿದ್ದಲಿಂಗಯ್ಯ ಆ ಜವಾಬ್ದಾರಿಯಿಂದಲೇ ತಪ್ಪಿಸಿಕೊಂಡು ಎಲ್ಲರಿಗೂ ಪ್ರಿಯರಾಗುವ ಹಾದಿ ಹಿಡಿದರೇ ಎಂಬ ಪ್ರಶ್ನೆ ಮೊದಲ ಬಾರಿ ಊರುಕೇರಿ ಓದಿದಾಗಲೇ ಎದ್ದಿತ್ತು. ಮುಂದಕ್ಕೆ ಅವರ ರಾಜಕೀಯ ಹಾದಿ ಗಮನಿಸುತ್ತ ಹೋದವರಿಗೆ ಅದೇ ಮೂಲ ಅನುಮಾನ ಮತ್ತಷ್ಟು ಗಟ್ಟಿಯಾಗಿದ್ದೇನೂ ಅಚ್ಚರಿಯ ಸಂಗತಿಯಲ್ಲ.

ಸಿದ್ದಲಿಂಗಯ್ಯ, ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಎರಡು ಬಾರಿ ಎಮ್ಮೆಲ್ಸಿ ಆದರು. ಆಗಲೇ ಒಂದಷ್ಟು ಗೆಳೆಯರಿಗೆ, ‘ಇವರೇಕೆ ಅಧಿಕಾರದ ಹಿಂದೆ ಹೋದರು’ ಎಂದು ಇರಿಸುಮುರಿಸಾಗಿದ್ದು ನಿಜ. ಮತ್ತೂ ಮುಂದಕ್ಕೆ ಅವರು ಹಲವರು ಅಧಿಕಾರ ಸ್ಥಾನಗಳನ್ನು ಒಂದಾದ ಮೇಲೊಂದು ಅಲಂಕರಿಸುತ್ತ ಹೋದರು. ಅದೂ ಹೋಗಲಿ ಎಂದರೆ ಕೊನೆಗೆ ಸೀದಾ ಬಿಜೆಪಿಯ ಆಲಿಂಗನದಲ್ಲಿ ಮೈಮರೆತು ಕೂತುಬಿಟ್ಟರು.

ವರ್ಷಗಳ ಹಿಂದೆ ನಾನು ದೊಡ್ಡಬಳ್ಳಾಪುರಕ್ಕೆ ಯಾವುದೋ ಸಮಾರಂಭಕ್ಕೆ ಹೋಗಿ ವಾಪಸು ಬರುತ್ತಿರುವಾಗ ನನ್ನೊಟ್ಟಿಗೇ ಇದ್ದ ‘ಪ್ರಗತಿಪರ’ ಗೆಳೆಯರು ಉದ್ದಕ್ಕೂ ಒಂದೇ ಸಮ ಸಿದ್ದಲಿಂಗಯ್ಯನವರ ವಿರುದ್ಧ ಟೀಕಾಪ್ರಹಾರವನ್ನೇ ನಡೆಸುತ್ತ ಬಂದರು; ಅವರು ಅವಕಾಶವಾದಿ, ಚಳವಳಿಗೆ ದ್ರೋಹ ಬಗೆದವರು, ಇತ್ಯಾದಿ, ಇತ್ಯಾದಿ.

ನಿಜ, ಸಿದ್ದಲಿಂಗಯ್ಯನವರು ಹಿಡಿದ ಹಾದಿ ನನ್ನಂಥ ಎಲ್ಲರನ್ನೂ ನಿರಾಸೆಗೊಳಿಸಿದ್ದು ಹೌದು. ಅವರು ಯಡಿಯೂರಪ್ಪನವರನ್ನು ಬಸವಣ್ಣನಿಗೆ ಹೋಲಿಸಿದ್ದು, ಮನುಸ್ಮೃತಿಯಲ್ಲೂ ಒಳ್ಳೆಯದಿದೆ ಎಂದು ಪ್ರತಿಪಾದಿಸಿದ್ದು- ಇಂಥ ಅಪದ್ಧಗಳನ್ನು ಜೀರ್ಣಿಸಿಕೊಳ್ಳುವುದು ಹೇಗೆ? ಕವಿ ಸಿದ್ದಲಿಂಗಯ್ಯನವರ ಬೆನ್ನಿಗೆ ಸ್ವತಃ ಸಿದ್ದಲಿಂಗಯ್ಯನವರೇ ಚೂರಿ ಹಾಕಿದ ಆಘಾತಕಾರಿ ಪ್ರಸಂಗವದು. ಒಡಲಿನ ಕೆಂಡವನ್ನೇ ಕಾವ್ಯ ಮಾಡಿದ ಈ ಕವಿಯ ಇಂಥ ತಾತ್ವಿಕ ಅವನತಿ ಹೃದಯವಿದ್ರಾವಕವಾಗಿ ಕಂಡಿದ್ದೂ ನಿಜ.

ಅಷ್ಟಾದರೂ ಕೆಲವು ಗೆಳೆಯರು- ಉದಾಹರಣೆಗೆ ಶಿವಾಜಿ ಗಣೇಶನ್- ಸಿದ್ದಲಿಂಗಯ್ಯನವರ ಸಮರ್ಥನೆಯನ್ನೂ ಮಾಡುತ್ತ ಬಂದಿದ್ದಾರೆ. ‘ಸಿದ್ದಲಿಂಗಯ್ಯ ಎಂದೂ ಭ್ರಷ್ಟರಾಗಲಿಲ್ಲ, ಅವರು ಹಣ ಮಾಡಲಿಲ್ಲ’ ಎಂಬ ಸಮಜಾಯಿಷಿ ಕೊಟ್ಟಿದ್ದಾರೆ. ಆದರೆ ಇಲ್ಲಿ ಯಾರೂ ದುಡ್ಡಿನ ಪ್ರಶ್ನೆ ಎತ್ತಿಲ್ಲ ಎಂಬುದನ್ನು ಅವರೇಕೆ ಅರಿಯುತ್ತಿಲ್ಲವೋ?! ಸಿದ್ದಲಿಂಗಯ್ಯ ಎಲ್ಲಿದ್ದರೂ ದಲಿತರ ಹಿತ ಎಂದೂ ಮರೆಯಲಿಲ್ಲ ಎಂಬುದು ಶಿವಾಜಿಯವರ ವಿವರಣೆ. ಆದರೆ ಅನೇಕ ಸಂದರ್ಭಗಳಲ್ಲಿ ನಾವು ಎಲ್ಲಿ ನಿಂತಿದ್ದೇವೆ ಎಂಬುದೇ ಮುಖ್ಯವಾಗುವುದಿಲ್ಲವೇ? ಹಿಟ್ಲರನು ಜರ್ಮನಿಯಲ್ಲಿ ಯಹೂದ್ಯರ ನರಮೇಧ ನಡೆಸುತ್ತಿದ್ದಾಗ ಅವನ ಜೊತೆ ಕಾಣಿಸಿಕೊಂಡವರು ‘ಇಲ್ಲ, ನಾವು ಅವನ ಜೊತೆಯೇ ಇದ್ದರೂ ಯಹೂದ್ಯರ ಪರವಾಗಿ ವಾದ ಮಾಡುತ್ತಿದ್ದೆವು’ ಎಂದರೆ ಎಂಥ ನಗೆಪಾಟಲಿನ ಸಮರ್ಥನೆಯಾಗಿ ಕಾಣಬಹುದು? ಇಂಥ ಆತ್ಮಸಮರ್ಥನೆಯನ್ನು ಚರಿತ್ರೆ ಒಪ್ಪುವುದೇ? ಇನ್ನು ‘ಬಿಜೆಪಿಯ ನಂಬರ್ ಟೂ’ ಅಮಿತ್ ಶಾ, ಸಿದ್ದಲಿಂಗಯ್ಯನವರ ಮನೆಗೇ ಬಂದು ಹೋದ ಮೇಲಂತೂ ಕವಿಗಳ ‘ಅಂದರಿಕಿ ಮಂಚಿವಾಡು ಅನುಕೂಲ ಸಿದ್ಧಾಂತ’ದ ವಿಷಯದಲ್ಲಿ ಯಾರಿಗೂ ಗೊಂದಲಗಳಿರಬಾರದು.

ಇಷ್ಟು ಹೇಳಿದ ಮೇಲೂ, ನಮ್ಮ ಗೆಳೆಯರಷ್ಟು ಕಠೋರವಾಗಿ ಸಿದ್ದಲಿಂಗಯ್ಯನವರನ್ನು ಆಕ್ಷೇಪಿಸಲು ನನಗೆ ಎಂದಿಗೂ ಮನಸ್ಸು ಬರುವುದಿಲ್ಲ. ಯಾಕೆಂದರೆ ದಲಿತ ಚಳವಳಿಗೆ ಮತ್ತು ಕನ್ನಡ ಕಾವ್ಯ ಪರಂಪರೆಗೆ ಅವರು ಕೊಟ್ಟ ಕೊಡುಗೆ ನನ್ನ ಕಣ್ಣಿನಿಂದ ಮರೆಯಾಗುವುದೇ ಇಲ್ಲ.

ಸಿದ್ದಲಿಂಗಯ್ಯ ಕನ್ನಡ ಕಾವ್ಯದ ನುಡಿಗಟ್ಟನ್ನೇ ಬದಲಿಸಿದರು ಎಂಬ ಮಾತನ್ನು ಎಷ್ಟೋ ಮಂದಿ ಹೇಳಿದ್ದಾರೆ. ಆರಂಭದಲ್ಲಿ ಇಡೀ ಸಾರಸ್ವತ ಲೋಕ ಆಗ ಹೇಗೆ ತಬ್ಬಿಬ್ಬಾಯಿತು ಎನ್ನಲು ಇಲ್ಲಿ ಒಂದು ಪ್ರಸಂಗ ಹೇಳಬಹುದು: ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಸಂಕಲನ ಹೊರತರುವ ಹೊಸ್ತಿಲಲ್ಲಿ ಕಿ.ರಂ. ನಾಗರಾಜ್, ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ (ಬಹುಶಃ ಡಿಆರ್ ಅವರೂ ಇದ್ದರು ಅನಿಸುತ್ತದೆ) ಲಂಕೇಶರ ಬಳಿ ಹೋಗಿ ಆ ಸಂಕಲನಕ್ಕೆ ಮುನ್ನುಡಿ ಬರೆದುಕೊಡುವಂತೆ ಕೇಳಿದರು. ಆದರೆ ಅದನ್ನು ಓದಿದ ಲಂಕೇಶರು, ‘ಇದು ಕಾವ್ಯವಲ್ಲ, ಹಾಗಾಗಿ ನಾನು ಮುನ್ನುಡಿ ಬರೆಯುವುದಿಲ್ಲ’ ಎಂದರಂತೆ! ಅಂದರೆ ಲಂಕೇಶರಂಥ ಮೇಧಾವಿಗೂ ಒಬ್ಬ ಜನಕವಿಯ ಹುಟ್ಟನ್ನು ಕಾಣುವ ಕಣ್ಣು ಲಭಿಸಿರಲಿಲ್ಲ.

ಆದರೆ ಸಿದ್ದಲಿಂಗಯ್ಯ ಇತಿಹಾಸ ಸೃಷ್ಟಿಸಿದರು. ಕನ್ನಡದಲ್ಲಿ ಕುವೆಂಪು ನಂತರ ಸಾವಿರಾರು ಜನರ ಕೊರಳ ಹಾಡಾಗಿ ಹೊಮ್ಮಿದ್ದು ಸಿದ್ದಲಿಂಗಯ್ಯನವರ ರಚನೆಗಳೇ. ಸಿದ್ದಲಿಂಗಯ್ಯನವರ ಶೈಲಿ ಅನುಕರಿಸಿದವರು ನೂರಾರು ಮಂದಿ ಇದ್ದಾರೆ. ಆದರೆ ಅವರ ಹಾಗೆ ಯುಗದ ಯಾತನೆಗೆ ಬಾಯಿ ಕೊಟ್ಟ ಕವಿಗಳು ತೀರಾ ಕಮ್ಮಿ. ಭುವಿಯ ಕಿಚ್ಚು, ಮುಗಿಲ ಮಿಂಚು ಒಂದುಗೂಡಿ ಕಾವ್ಯವಾಗಿ ಹರಿದಂತೆ ಸಿದ್ದಲಿಂಗಯ್ಯನವರ ಪ್ರತಿಭೆ.

1999- 2000ದ ಸಮಯದಲ್ಲಿ ನಾನೊಮ್ಮೆ ದೂರದರ್ಶನಕ್ಕಾಗಿ ಮಾಡಿದ ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯನವರಿಂದಲೇ ಅವರ ಸುಪ್ರಸಿದ್ಧ ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಪದ್ಯ ಓದಿಸಿದ್ದೆ. ಅದರ ರೆಕಾರ್ಡಿಂಗ್ ಈಗಲೂ ದೂರದರ್ಶನದ ಆರ್ಕೈವ್‍ಗಳಲ್ಲಿ ಇರಬಹುದು. ಸ್ವಾತಂತ್ರ್ಯ ಎಂಬ ಮಾತು ಬಂದಾಗಲೆಲ್ಲ ನನಗೆ ತಪ್ಪದೆ ಅವರ ಈ ಪದ್ಯ ನೆನಪಿಗೆ ಬರುತ್ತದೆ.

ಮನಸ್ಸು ಕೃತಜ್ಞತೆಯಿಂದ ತಲೆ ಬಾಗುತ್ತದೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು