ಸೋಮವಾರ, ಮಾರ್ಚ್ 30, 2020
19 °C

ಆಕರ್ಷಣೆಯೇ ಪ್ರೀತಿಯಲ್ಲ ಆರಂಭ ಮಾತ್ರ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ಪದವಿ ಎರಡನೇ ವರ್ಷದಲ್ಲಿದ್ದೇನೆ. ಹುಡುಗನೊಬ್ಬ ಇಷ್ಟವಾಗಿದ್ದಾನೆ. ಇಬ್ಬರೂ ಮಾತನಾಡುತ್ತೇವೆ ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಯಾವಾಗಲೂ ಅವನ ಕುರಿತೇ ಯೋಚನೆ ಮಾಡುತ್ತಿರುತ್ತೇನೆ. ಕನಸಿನಲ್ಲೂ ಬಂದಿದ್ದಾನೆ. ಪ್ರೀತಿಯನ್ನು ಹೇಳಿಕೊಂಡರೆ ಅವನ ಸ್ನೇಹವನ್ನು ಕಳೆದುಕೊಳ್ಳುವ ಭಯ. ಇದು ಪ್ರೀತಿಯೇ ಅಥವಾ ಕ್ರಷ್ (ಆಕರ್ಷಣೆ) ಮಾತ್ರವೇ?
-ಹೆಸರು, ಊರು ಬೇಡ

ಆಕರ್ಷಣೆ ಕೀಳು, ಪ್ರೀತಿ ಉತ್ತಮವಾದದ್ದು ಎನ್ನುವುದನ್ನು ನಿಮ್ಮ ಪತ್ರ ಹೇಳುವಂತಿದೆ. ಆಕರ್ಷಣೆಯೇ ಪ್ರೀತಿಯಲ್ಲದೆ ಇರಬಹುದು. ಹಾಗಿದ್ದರೆ ಪ್ರೀತಿ ಶುರುವಾಗುವುದು ಹೇಗೆ? ಆಕರ್ಷಣೆಯಿಂದಲೇ ಅಲ್ಲವೇ? ಇಂತಹ ಆಕರ್ಷಣೆ ಹದಿವಯಸ್ಸಿನಲ್ಲಿ ಮೂಡುವುದು ಪ್ರಕೃತಿಯ ನಿಯಮ. ಅದನ್ನು ಕೀಳಾಗಿಸಿಕೊಂಡು ಪಾಪಪ್ರಜ್ಞೆಯನ್ನು ಅನುಭವಿಸುತ್ತಿದ್ದೀರಿ. ಆಕರ್ಷಣೆ ಪ್ರೀತಿಯಾಗಿ ಪರಿವರ್ತನೆಯಾಗಬಲ್ಲದೇ ಎಂದು ತಿಳಿದುಕೊಳ್ಳಬೇಕಾದರೆ ಹುಡುಗನ ಜೊತೆ ಮಾತನಾಡಬೇಕಲ್ಲವೇ? ಹುಡುಗನಿಂದ ತಿರಸ್ಕೃತಳಾಗುವ ಭಯ ನಿಮ್ಮ ಪ್ರಯತ್ನಕ್ಕೆ ಅಡ್ಡ ಬರುತ್ತಿದೆಯಲ್ಲವೇ?

ಒಂದೊಮ್ಮೆ ಇದು ಪ್ರೀತಿಯೇ ಆಗಿದ್ದರೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನಿಮಗೆಲ್ಲಿದೆ? ಆರ್ಥಿಕವಾಗಿ ಸ್ವತಂತ್ರರಾದಾಗ ನಿಮ್ಮ ನಿರ್ಧಾರಗಳನ್ನು ಜಾರಿಗೊಳಿಸಬಹುದಲ್ಲವೇ? ಸದ್ಯಕ್ಕೆ ಆಕರ್ಷಣೆಯನ್ನು ಸಹಜವೆಂದು ಒಪ್ಪಿಕೊಂಡು ಏಕಾಂತದಲ್ಲಿ ಆನಂದಿಸುತ್ತಾ ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಹೇಗಿರುತ್ತದೆ?

**

ನಾನು ಸರ್ಕಾರಿ ಕೆಲಸ ಪಡೆಯಲು ಒಂದು ವರ್ಷದಿಂದ ಪ್ರಯತ್ನಿಸುತ್ತಾ ಕೆಲವು ಪರೀಕ್ಷೆಗಳಲ್ಲಿ ವಿಫಲನಾಗಿದ್ದೇನೆ. ಇದರಿಂದಾಗಿ ಮನೆಯವರು, ಸಂಬಂಧಿಕರು ನನ್ನನ್ನು ಕೀಳಾಗಿ ನೋಡುತ್ತಾರೆ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಟೀಕಿಸುತ್ತಾ ಸರಿಯಾಗಿ ಮಾತನಾಡಿಸದೆ ಅಸಡ್ಡೆಯಿಂದ ನೋಡುವುದರಿಂದ ಬೇಸರವಾಗಿ ಓದಲು ಆಸಕ್ತಿಯಿರುವುದಿಲ್ಲ. ಬೇರೆ ಕೆಲಸಕ್ಕಾಗಿ ಅಲೆಯುತ್ತಿದ್ದೇನೆ. ಸರ್ಕಾರಿ ಕೆಲಸ ಪಡೆದು ಬಡಮಕ್ಕಳಿಗೆ ನೆರವಾಗುವ ಆಸೆಯಿದೆ. ಈಗ ನಾನೇನು ಮಾಡಲಿ?
-ಚಂದನ, ಹಾಸನ

ಸ್ವಾವಲಂಬಿಯಾಗುವ ಮತ್ತು ಬಡಮಕ್ಕಳಿಗೆ ಸಹಾಯ ಮಾಡುವ ನಿಮ್ಮ ಉದ್ದೇಶ ಮೆಚ್ಚುವಂತಹದ್ದು. ಪತ್ರದಲ್ಲಿ ಬೇರೆಯವರು ನಿಮ್ಮನ್ನು ಕೀಳಾಗಿ ನೋಡುತ್ತಾರೆ ಎನ್ನುವ ನೋವಿನ ಭಾವವಿದೆ. ಆದರೆ ನಿಮ್ಮ ಬಗ್ಗೆ ನಿಮಗೇನೆನ್ನಿಸುತ್ತದೆ ಎನ್ನುವುದನ್ನು ಯೋಚಿಸಿದ್ದೀರಾ? ನಿಮ್ಮ ಸೋಲಿಗೆ ಬೇರೆಯವರಲ್ಲಿ ಕಾರಣ ಹುಡುಕುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಲ್ಲವೇ? ಇತರರ ಮಾತು, ವರ್ತನೆಗಳ ಮೇಲೆ ನಿಮಗೆ ಹಿಡಿತವೆಲ್ಲಿದೆ? ಸೋಲಿಗೆ ನಿಮ್ಮೊಳಗೆ ಮಾತ್ರ ಕಾರಣ ಹುಡುಕಿಕೊಂಡು ಅವುಗಳನ್ನು ಸರಿಪಡಿಸುವುದು ಹೇಗೆ ಎಂದು ಚಿಂತಿಸಿ.

ಸದ್ಯಕ್ಕೆ ನಿಮ್ಮ ಯಶಸ್ಸಿನ ಸೂತ್ರ ಹೀಗಿದೆ: ಎಲ್ಲರೂ ನನ್ನನ್ನ ಗೌರವಿಸುವುದು- ನಾನು ಸಂತೋಷದಿಂದ ಪ್ರಯತ್ನಿಸುವುದು-ಸಫಲಳಾಗುವುದು. ಇದನ್ನು ನಿಧಾನವಾಗಿ ಹೀಗೆ ಬದಲಾಯಿಸಿ: ನನ್ನ ಸೋಲಿಗೆ ನಾನೇ ಕಾರಣ- ಕಾರಣವನ್ನು ಹುಡುಕಿಕೊಂಡು ಸರಿಪಡಿಸಿಕೊಳ್ಳುವುದು- ಹತಾಶಳಾಗದೆ ಪ್ರಯತ್ನಿಸುವುದು-ಯಶಸ್ವಿಯಾಗುವುದು.

**

26 ವರ್ಷದ ಮಗಳು ಬಿಇ ಮುಗಿಸಿ ಉಪಾಧ್ಯಾಯಿನಿಯಾಗಿದ್ದಾಳೆ. ಒಂಬತ್ತು ವರ್ಷಗಳಿಂದ ಮನೋವೈದ್ಯರಿಂದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ಇದರಿಂದ ಅವಳ ತೂಕ ಹೆಚ್ಚಾಗಿ ಬೇಸರದಲ್ಲಿದ್ದಾಳೆ. ಮದುವೆ ಮಾಡಲು ತೊಂದರೆಯಾಗಬಹುದು. ಮನೆಗೆಲಸ ಮಾಡುತ್ತಾಳೆ. ವೈದ್ಯರು ಮಾತ್ರೆ ಮುಂದುವರಿಸಲು ಹೇಳಿದ್ದಾರೆ. ಅವಳಿಗೆ ಮಾತ್ರೆಗಳ ಅಗತ್ಯವಿದೆಯೇ?
-
ಹೆಸರು, ಊರು ಬೇಡ

ವೈದ್ಯರ ಸಲಹೆಯ ಬಗ್ಗೆ ಈ ಅಂಕಣದಲ್ಲಿ ಹೇಳುವುದು ಸೂಕ್ತವಲ್ಲ. ತೀವ್ರವಾದ ಮಾನಸಿಕ ಏರುಪೇರುಗಳಿದ್ದಾಗ ತಾತ್ಕಾಲಿಕವಾಗಿ ಮಾತ್ರೆಗಳ ಅಗತ್ಯ ಬೀಳಬಹುದು. ಆದರೆ ಅವುಗಳನ್ನು ದೀರ್ಘಕಾಲ ತೆಗೆದುಕೊಂಡರೆ ಅಡ್ಡಪರಿಣಾಮಗಳಿರುತ್ತವೆ. ಮಗಳು ಈಗಾಗಲೇ ಸ್ವತಂತ್ರವಾಗಿ ಬದುಕುತ್ತಿರುವಾಗ ಮಾತ್ರೆಗಳನ್ನು ಅವಲಂಬಿಸುವ ಅಗತ್ಯವಿಲ್ಲ. ಅವುಗಳನ್ನು ಹಂತಹಂತವಾಗಿ ಕಡಿಮೆ ಮಾಡಲು ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸೆಯ ಅಗತ್ಯವಿದೆ. ತಜ್ಞರಿಂದ ಸಹಾಯ ಪಡೆದರೆ ಆರು ತಿಂಗಳಿನಲ್ಲಿ ಮಾತ್ರೆಗಳನ್ನು ಸಾಕಷ್ಟು ಕಡಿಮೆ ಮಾಡಿಕೊಂಡು ಅವಳು ಎಲ್ಲರಂತೆ ದಾಂಪತ್ಯಜೀವನ ನಡೆಸಬಹುದು.

ನಾನು ಎಂ.ಕಾಂ ಓದುತ್ತಿದ್ದೇನೆ. ತರಗತಿಯಲ್ಲಿ ನನ್ನೊಬ್ಬನ ಹೊರತಾಗಿ ಎಲ್ಲರೂ ಹುಡುಗಿಯರು. ಮೊದಲಿನಿಂದ ಸಹಶಿಕ್ಷಣವಿರುವ (ಕೋಎಜುಕೇಶನ್) ಶಾಲೆಗಳಲ್ಲಿ ಓದಿದ್ದರೂ ಹುಡುಗಿಯರ ಹತ್ತಿರ ಮಾತನಾಡಲು ಸಂಕೋಚ. ಬೇರೆ ಕಾಲೇಜಿಗೆ ಸೇರಲು ಸಮಯವಿರಲಿಲ್ಲ. ಏನಾದರೂ ಪರಿಹಾರ ಸೂಚಿಸಿ.
-
ಹೆಸರು, ಊರು ಇಲ್ಲ

ಹುಡುಗಿಯರ ಜೊತೆಗೆ ಮಾತನಾಡಲು ನಿಮಗಿರುವ ಹಿಂಜರಿಕೆಯನ್ನು ಮೀರಲಾಗದೆ ಬೇರೆ ಕಾಲೇಜಿಗೆ ಸೇರಬೇಕಾಗಿತ್ತು ಎಂದು ಯೋಚಿಸುತ್ತಿದ್ದೀರಲ್ಲವೇ? ಬದಲಾಗಿ ಸಿಕ್ಕ ಸುವರ್ಣಾವಕಾಶವನ್ನು ಬಳಸಿಕೊಂಡು ಹುಡುಗಿಯರ ಜೊತೆ ಸಹಜವಾಗಿ ಬೆರೆಯಲು ಕಲಿತರೆ ಹೇಗಿರುತ್ತದೆ?

ನಿಮ್ಮ ಹಿಂಜರಿಕೆ ಎಲ್ಲಿಂದ ಬರುತ್ತಿದೆ ಎಂದು ಯೋಚಿಸಿದ್ದೀರಾ? ಹುಡುಗಿಯರ ಎದುರು ಕೀಳಾಗುವ ಭಯವೇ ಹಿಂಜರಿಕೆಯಾಗಿದೆ. ಈ ಭಯದಿಂದ ಹೊರಬರಲು ಕನ್ನಡಿಯೆದುರು ನಿಂತು ಹುಡುಗಿಯರನ್ನು ಕಲ್ಪಿಸಿಕೊಂಡು ಮಾತನಾಡಿ. ನಿಮ್ಮ ದೇಹ ತೋರಿಸುವ ಎದೆಬಡಿತ, ಬೆವರು ಇತ್ಯಾದಿ ಭಯದ ಸೂಚನೆಗಳನ್ನು ಗಮನಿಸುತ್ತಾ ನಿಧಾನವಾಗಿ ಉಸಿರಾಡಿ ದೇಹವನ್ನು ಹಿಡಿತಕ್ಕೆ ತನ್ನಿ. ಈ ಪ್ರಯೋಗವನ್ನು ಸಾಕಷ್ಟು ಬಾರಿ ಆಳವಾಗಿ ಅನುಭವಿಸುತ್ತಾ ಮಾಡಿ. ನಂತರ ಕಾಲೇಜಿನಲ್ಲಿ ಹುಡುಗಿಯರೊಡನೆ ಬೆರೆಯುತ್ತಾ ಹೋಗಿ. ಆರಂಭದಲ್ಲಿ ಮುಜುಗರವಾದರೂ ನಿಧಾನವಾಗಿ ಎಲ್ಲವೂ ಸಹಜವಾಗುತ್ತದೆ. ಕೆಲವೊಮ್ಮೆ ತಪ್ಪು ಮಾತನಾಡಿದರೂ ಅದರಿಂದ ನಿಮ್ಮ ಪೂರ್ಣ ವ್ಯಕ್ತಿತ್ವ ಕೀಳಾಗುವುದಿಲ್ಲ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

(ವಿ. ಸೂ.– ಕೆಲವರು ಪತ್ರವನ್ನು ಪ್ರಕಟಿಸಿದೆ ತಮಗೆ ನೇರವಾಗಿ ಉತ್ತರಿಸಬೇಕೆಂದು ಕೇಳಿದ್ದಾರೆ. ಇದಕ್ಕೆ ಅವಕಾಶವಿಲ್ಲ. ನಿಮ್ಮ ಹೆಸರು ಮತ್ತಿತರ ಗುರುತನ್ನು ಗೌಪ್ಯವಾಗಿಟ್ಟು ಉತ್ತರವನ್ನು ಪಡೆದುಕೊಳ್ಳಲು ಮಾತ್ರ ಅಂಕಣ ಸೀಮಿತವಾಗಿದೆ.)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು