ಶನಿವಾರ, ಜೂನ್ 6, 2020
27 °C

ವಿಮಾನದಲ್ಲಿ ಆಟೊಪೈಲಟ್ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನುಷ್ಯ ಬಾನಿನಲ್ಲಿ ಹಾರುವುದನ್ನು ಕಲಿತು ಒಂದು ಶತಮಾನ ಮಾತ್ರ ಸಂದಿದೆ. ಈ ಅವಧಿಯಲ್ಲಿ ವಿಜ್ಞಾನಿಗಳು ವಿಮಾನದಲ್ಲಿ ಬಳಕೆಯಾಗುವ ತಂತ್ರಜ್ಞಾನದಲ್ಲಿ ಹತ್ತು ಹಲವು ಸುಧಾರಣೆಗಳನ್ನು ತಂದಿದ್ದಾರೆ. ಅವುಗಳಲ್ಲಿ ಒಂದು ಆಟೊಪೈಲಟ್ ಸಾಧನದ ಬಳಕೆ. ಇಂದಿನ ಕಾಲದ ವಿಮಾನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡುವುದು ಪೈಲಟ್‌ ಅಲ್ಲ; ಬದಲಿಗೆ ಆಟೊಪೈಲಟ್‌ ಆ ಕೆಲಸ ಮಾಡುತ್ತದೆ.

ವಿಮಾನವು ರನ್‌ವೇನಿಂದ ಟೇಕ್‌ಆಫ್‌ ಆಗಿ ತನಗೆ ನಿಗದಿಪಡಿಸಿದ ಎತ್ತರವನ್ನು ತಲುಪಿದ ನಂತರ, ಪೈಲಟ್‌ಗಳು ಆಟೊಪೈಲಟ್‌ ಗುಂಡಿಯನ್ನು ಅದುಮಿ ಕುಳಿತುಕೊಳ್ಳುತ್ತಾರೆ. ಮುಂದಿನ ಕೆಲಸಗಳನ್ನು ಆಟೊಪೈಲಟ್‌ ಅದೆಷ್ಟರಮಟ್ಟಿಗೆ ನೋಡಿಕೊಳ್ಳುತ್ತದೆ ಅಂದರೆ, ಪೈಲಟ್‌ಗಳು ಒಂದು ಕೈಯಲ್ಲಿ ಆರಾಮವಾಗಿ ಕಾಫಿ ಕುಡಿಯುತ್ತ, ಇನ್ನೊಂದು ಕೈಯನ್ನು ತಲೆಯ ಹಿಂದೆ ದಿಂಬಿನಂತೆ ಇರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ! ಹಾಗಂತ, ಆಟೊಪೈಲಟ್‌ ಇದ್ದರೆ ಸಾಕು, ವಿಮಾನಕ್ಕೆ ಪೈಲಟ್ ಅವಶ್ಯಕತೆಯೇ ಇಲ್ಲ ಎಂದು ಭಾವಿಸುವುದು ಬೇಡ. ಆಟೊಪೈಲಟ್‌ ವ್ಯವಸ್ಥೆಯನ್ನು ಸರಿಯಾಗಿ ನಿಯಂತ್ರಿಸಲು ಪೈಲಟ್ ಬೇಕಾಗುತ್ತಾನೆ!

ಆಟೊಪೈಲಟ್ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ಪೈಲಟ್‌, ವಿಮಾನ ಹಾರಾಟದ ಸಂದರ್ಭದಲ್ಲಿ ತೀರಾ ಹೆಚ್ಚಿನ ನಿಗಾ ಇರಿಸಬೇಕಾಗುತ್ತಿತ್ತು. ವಿಮಾನಗಳು ದೂರದ ದೇಶಗಳತ್ತ ಹಾರಾಟ ಆರಂಭಿಸಿದಂತೆ, ಪ್ರಯಾಣದ ಅವಧಿ ಹೆಚ್ಚಾಗತೊಡಗಿತು. ಹೆಚ್ಚಿನ ಅವಧಿಯವರೆಗೆ ಗಮನವಿಟ್ಟು ವಿಮಾನ ಹಾರಿಸುವುದು ಪೈಲಟ್‌ಗಳಿಗೆ ತ್ರಾಸದಾಯಕ ಆಗತೊಡಗಿತು. ಆಟೊಪೈಲಟ್‌ ವ್ಯವಸ್ಥೆಯ ಉಗಮವು ಈ ತೊಂದರೆಯನ್ನು ಕಡಿಮೆ ಮಾಡಿತು.

ಮೊದಲ ಆಟೊಪೈಲಟ್ ವ್ಯವಸ್ಥೆಯನ್ನು ಅಭಿವೃದ್ಧಿಪ‍ಡಿಸಿದ್ದು ಸ್ಪೆರ್‍ರಿ ಕಾರ್ಪೊರೇಷನ್‌. ಇದು ಆಗಿದ್ದು 1912ರಲ್ಲಿ. ಇದು ಪೈಲಟ್‌ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಿತು. 1914ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಇದನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಆಗ ಲಾರೆನ್ಸ್ ಸ್ಪೆರ್‍ರಿ ಎನ್ನುವವರು ಈ ಆಟೊಪೈಲಟ್‌ ವ್ಯವಸ್ಥೆ ಅಳವಡಿಸಿದ್ದ ವಿಮಾನವನ್ನು ಹಾರಿಸಿ ತೋರಿಸಿದರು.

ಎಲ್ಮರ್ ಸ್ಪೆರ್‍ರಿ (ಲಾರೆನ್ಸ್‌ನ ಮಗ) ಮತ್ತು ಕ್ಯಾಪ್ಟನ್ ಶಿರಾಸ್ ಎನ್ನುವವರು ಇದೇ ಆಟೊಪೈಲಟ್ ವ್ಯವಸ್ಥೆಯ ಸುಧಾರಣೆಯ ಕೆಲಸ ಮುಂದುವರಿಸಿದರು. 1930ರಲ್ಲಿ ಹೆಚ್ಚು ವಿಶ್ವಾಸಾರ್ಹವಾದ ಆಟೊಪೈಲಟ್‌ ಅಭಿವೃದ್ಧಿಪಡಿಸಿ, ಪರೀಕ್ಷಿಸಿದ್ದರು.

ಆಧುನಿಕ ಆಟೊಪೈಲಟ್‌ ವ್ಯವಸ್ಥೆ ಅಂದರೆ ಕಂಪ್ಯೂಟರ್‌ ಬಳಸಿ ವಿಮಾನ ಹಾರಿಸಿದಂತೆ ಎನ್ನುತ್ತಾರೆ ತಜ್ಞರು. ವಿಮಾನದ ಟೇಕಾಫ್‌ ಹಾಗೂ ಲ್ಯಾಂಡಿಂಗ್ ನಡುವಿನ ಬಹುತೇಕ ಕೆಲಸಗಳನ್ನು ಈ ವ್ಯವಸ್ಥೆ ತಾನಾಗಿಯೇ ಮಾಡಬಲ್ಲದು.

ವಿಮಾನದ ಟೇಕಾಫ್‌ಗೂ ಮೊದಲು ಪೈಲಟ್‌ಗಳು ವಿಮಾನ ಎಲ್ಲಿಂದ ಎಲ್ಲಿಗೆ ತೆರಳಬೇಕು ಎಂಬುದನ್ನು ಆಟೊ‍ಪೈಲಟ್‌ ವ್ಯವಸ್ಥೆಗೆ ತಿಳಿಸುತ್ತಾರೆ. ರನ್‌ವೇನಲ್ಲಿ ವಿಮಾನ ಹೋಗುವುದನ್ನು, ವಿಮಾನ ನಿಲ್ದಾಣದಲ್ಲೇ ಅತ್ತಿಂದಿತ್ತ ಹೋಗುವುದನ್ನು ಆಟೊಪೈಲಟ್‌ ನಿಭಾಯಿಸಲಾರದು. ಆದರೆ, ಟೇಕಾಫ್‌ ಆದ ನಂತರದ ಬಹುತೇಕ ಕೆಲಸಗಳನ್ನು ಈ ವ್ಯವಸ್ಥೆಯೇ ನೋಡಿಕೊಳ್ಳುತ್ತದೆ. ಕೆಲವು ಆಟೊಪೈಲಟ್‌ಗಳು ಲ್ಯಾಂಡಿಂಗ್‌ ಕೆಲಸವನ್ನೂ ತಾವೇ ನಿಭಾಯಿಸುತ್ತವಂತೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು