ಭಾನುವಾರ, ನವೆಂಬರ್ 29, 2020
19 °C
ಸಕಲ ಜೀವರಾಶಿಗಳಿಗೆ ಒಳಿತು ಬಯಸುವ ಹಬ್ಬ

Pv Web Exclusive: ಬಂಜಾರರ ದವಾಳಿ ಅರ್ಥಾತ್ ದೀಪಾವಳಿ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಸಿಂಧೂ ನಾಗರಿಕತೆಯ ಮೂಲದವರೆನ್ನಲಾಗುವ ಬಂಜಾರ (ಲಂಬಾಣಿ) ಸಮುದಾಯ ತನ್ನ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳಿಂದ ಗಮನ ಸೆಳೆಯುವ ಸಮುದಾಯ. ಇತಿಹಾಸದ ಜಾಡನ್ನು ಹಿಡಿದು ಹೊರಟರೆ ಈ ಸಮುದಾಯದ ಕುರುಹುಗಳು ಹರಪ್ಪ–ಮೊಹೆಂಜೊದಾರೊ ನಾಗರಿಕತೆಗೆ ಹೋಲಿಕೆಯಾಗುತ್ತದೆ ಎನ್ನುತ್ತಾರೆ ಇತಿಹಾಸ ತಜ್ಞರು.

ಕೃಷಿ, ಪಶುಪಾಲನೆ, ಬೇಟೆ, ದವಸ–ಧಾನ್ಯಗಳ ವ್ಯಾಪಾರ ಬಂಜಾರ ಸಮುದಾಯದ ಮುಖ್ಯ ಕಸುಬು ಆಗಿತ್ತು. ತಮ್ಮ ವಿಶಿಷ್ಟ ಭಾಷೆ, ವರ್ಣರಂಜಿತ ಉಡುಪು, ವಿಶೇಷ ರೀತಿಯ ಆಹಾರ ಪದ್ದತಿ, ತಾಂಡಾಗಳಲ್ಲಿನ ವಾಸ, ನ್ಯಾಯಪದ್ಧತಿ ಈ ಸಮುದಾಯದ ವಿಶೇಷ ಸಂಗತಿಗಳು.

ದವಾಳಿ ಅರ್ಥಾತ್ ದೀಪಾವಳಿ ಬಂಜಾರ ಸಮುದಾಯದ ಪಾಲಿಗೆ ಅತಿದೊಡ್ಡ ಹಬ್ಬ. ಪ್ರಕೃತಿ ಜತೆಗಿನ ಪ್ರೀತಿ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಜಾನುವಾರುಗಳೆಡೆಗಿನ ಪ್ರೇಮ ಹಾಗೂ ಸಕಲರಿಗೂ ಲೇಸು ಬಯಸುವ ಗುಣ ಇವರು ಆಚರಿಸುವ ದವಾಳಿಯ ವೈಶಿಷ್ಟ್ಯ.

ದವಾಳಿ ಆರಂಭವಾಗುವುದು ಹೀಗೆ


ಲಂಬಾಣಿ ತಾಂಡಾವೊಂದರಲ್ಲಿ ‘ಮೇರಾ’ ಕಾರ್ಯಕ್ರಮದ ಸಂಭ್ರಮದಲ್ಲಿ ಬಂಜಾರ ಯುವತಿಯರು

ದವಾಳಿ ಹಬ್ಬಕ್ಕೂ ಒಂದು ತಿಂಗಳ ಮುಂಚಿನಿಂದಲೇ ತಾಂಡಾಗಳಲ್ಲಿ ಸಿದ್ಧತೆಗಳು ಶುರುವಾಗುತ್ತವೆ. ಇದರಲ್ಲಿ ಯುವತಿಯರ ತಿಂಗಳ ಕುಣಿತ, ಕಾಳಿ ಆಮಾಸ್, ಕಾಳಿ ಆಮಾಸ್ ಪಂಚಾಯತ್, ಮೇರಾ, ಸಳೊಯಿ ಆಹಾರ ಹಂಚಿಕೊಂಡು ತಿನ್ನುವುದು, ಯುವತಿಯರ ಮೇರಾ, ಹಿರಿಯರಿಗೆ ಧಬಕಾರ್, ಫುಲ್ ತೊಡೇನ್, ಘುಲರ್... ಹೀಗೆ  ವಿವಿಧ ರೀತಿಯ ಆಚರಣೆಗಳಿರುತ್ತವೆ.

ಯುವತಿಯರ ತಿಂಗಳ ಕುಣಿತ

ದವಾಳಿ ಹಬ್ಬಕ್ಕೂ ಒಂದು ತಿಂಗಳ ಮುಂಚಿತವಾಗಿ ತಾಂಡಾದ ಪ್ರತಿ ಮನೆಯ ಯುವತಿಯರು ಸೇವಾಲಾಲ್ ದೇವಳ (ದೇಗುಲ) ಎದುರು ಪ್ರತಿ ರಾತ್ರಿ ಒಂದೆಡೆ ಸೇರುತ್ತಾರೆ. ಮಧ್ಯರಾತ್ರಿಯವರೆಗೂ ಸಾಮೂಹಿಕ ಹಾಡು, ನೃತ್ಯ  ನಡೆಯುತ್ತದೆ. ಇದೊಂದು ರೀತಿಯಲ್ಲಿ ಸಾಂಸ್ಕೃತಿಕ ಶಿಬಿರದ ಮಾದರಿಯಂತೆ. ಇಲ್ಲಿ ಕುಣಿತ–ಹಾಡು ಬಾರದವರೂ ನಿಧಾನವಾಗಿ ಹಾಡು–ಹೆಜ್ಜೆಯ ಲಯಕ್ಕೆ ಹೊಂದಿಕೊಂಡು ಕಲಿಕೆ ಶುರು ಮಾಡುತ್ತಾರೆ. ಇದು ಲಂಬಾಣಿಗರ ವಿಶೇಷ.

ಯುವತಿಯರ ಮಾರ್ಗದರ್ಶನಕ್ಕಾಗಿ ತಾಯಂದಿರು, ತಾಂಡಾದ ಹಿರಿಯ ಮಹಿಳೆಯರು ಕೂಡ ಹಾಡು–ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ದೇವಳದ ಮತ್ತೊಂದು ಕಡೆ ಯುವಕರೂ ಸೇರುತ್ತಾರೆ. ಹಾಡು–ಕುಣಿತದಲ್ಲಿ ತೊಡಗುವ ಯುವಕ–ಯುವತಿಯರು ಪರಸ್ಪರ ಮೆಚ್ಚಿ ಹಲವು ಮದುವೆ ಸಂಬಂಧಗಳು ಇಲ್ಲಿಯೇ ಕುದುರುವುದುಂಟು.

ಕಾಳಿ ಅಮಾಸ್

ದೀಪಾವಳಿ ಅಮಾವಾಸ್ಯೆಯ ದಿನ ಬಂಜಾರರು ಸಾಮೂಹಿಕವಾಗಿ ಬೇಟೆಯಾಡುವುದು ವಾಡಿಕೆ. ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ಮಾಂಸಾಹಾರದ ಊಟವೆಂದರೆ ಬಂಜಾರರಿಗೆ ಬಲು ಪ್ರೀತಿ.

ಬೇಟೆ ಈ ಸಮುದಾಯಕ್ಕೆ ಶೌರ್ಯದ ಪ್ರತೀಕ. ದವಾಳಿಯಂದು ಬೇಟೆ ಯಶಸ್ವಿಯಾದರೆ ವರ್ಷಪೂರ್ತಿ ಒಳ್ಳೆಯ ಬೇಟೆಯಾಗುವುದೆಂಬ ನಂಬಿಕೆ ಈ ಸಮುದಾಯದ್ದು. ಬೇಟೆಯಲ್ಲಿ ದೊರೆತ ಪ್ರಾಣಿಯನ್ನು ಕೊಯ್ದು ತಾಂಡಾದ ಪ್ರತಿ ಮನೆಗೂ ಸಮಪಾಲು ಹಾಕುತ್ತಾರೆ. ಇತ್ತೀಚೆಗೆ ಬಹುತೇಕ ತಾಂಡಾಗಳಲ್ಲಿ ಬೇಟೆಯಾಡುವುದು ನಿಂತಿದೆ. ಹಾಗಾಗಿ, ಬೇಟೆಗೆ ಬದಲಾಗಿ ಮನೆಗಳಿಂದ ತಲಾ ಇಂತಿಷ್ಟು ಹಣ ಸಂಗ್ರಹಿಸಿ ಕುರಿಗಳನ್ನು ಖರೀದಿಸಿ ತಂದು ಅದರ ಮಾಂಸವನ್ನು ಸಮಪಾಲು ಮಾಡುತ್ತಾರೆ. ಕುರಿಯ ಪ್ರತಿ ಅಂಗದ ತುಂಡೂ ಪ್ರತಿ ಮನೆಗೆ ತಲುಪುವಂತೆ ಪಾಲು ಹಾಕುತ್ತಾರೆ. ಈ ಮೂಲಕ ಎಲ್ಲರೂ ಸಮಾನರು ಎನ್ನುವ ಸಮಾನತೆಯ ಗುಣವನ್ನು ಪ್ರತಿಪಾದಿಸುತ್ತಾರೆ.

ಕಾಳಿ ಅಮಾಸ್ ಪಂಚಾಯತ್

ಬಂಜಾರರ ನ್ಯಾಯ ಪದ್ಧತಿ ವಿಶಿಷ್ಟವಾಗಿದೆ. ನಾಯಕ್, ಡಾವೊ, ಕಾರಬಾರಿ, ನಸಾಬಿ, ಹಸಾಬಿಗಳ ಪ್ರಾತಿನಿಧಿಕ ಪಂಚಾಯತ್ ವ್ಯವಸ್ಥೆ ಇವರಲ್ಲಿ ಆದಿಕಾಲದಿಂದಲೂ ಇದೆ. ತಾಂಡಾಗಳಲ್ಲಿ ಗಲಾಟೆಗಳಾದರೆ ಇಲ್ಲಿನ ಪಂಚಾಯತ್ ವ್ಯವಸ್ಥೆಯಲ್ಲಿ ನ್ಯಾಯ ಪ್ರಕ್ರಿಯೆ ನಡೆಯುತ್ತದೆ.

ಜಗಳ ಮಾಡಿಕೊಂಡವರು ಕಾಳಿ ಅಮಾಸ್ ದಿನದಂದು ನ್ಯಾಯ ಪಂಚಾಯತ್‌ ಬಳಿ ನ್ಯಾಯ ಕೇಳಲು ಬರುತ್ತಾರೆ. ಪಂಚಾಯತ್‌ನವರು ನ್ಯಾಯ ತೀರ್ಮಾನಿಸಿ ಎರಡೂ ಕಡೆಯವರನ್ನು ರಾಜಿ ಮಾಡಿಸುತ್ತಾರೆ. ನಂತರ ಕುರಿಯ ಮಾಂಸ–ರಕ್ತದಿಂದ ಮಾಡಿದ ಸಳೊಯಿ ಮತ್ತು ಕಾನಾಬಾಜ್ (ಕುರಿಯ ದವಡೆಯ ಮೇಲ್ಮೈ ಮಾಂಸ) ಖಾದ್ಯವನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಾರೆ. ಮುಂದೆ ಇಂಥ ತಪ್ಪು ಮಾಡಲಾರೆವು ಎಂದು ಪ್ರಮಾಣ ಮಾಡುತ್ತಾರೆ. ಹೀಗೆ ಪರಸ್ಪರ ಪ್ರೀತಿ, ಗೌರವ ಚಿಗುರಲು ದೀಪಾವಳಿ ಹಬ್ಬದಲ್ಲಿ ನಡೆಯುವ ಕಾಳಿ ಅಮಾಸ್ ಪಂಚಾಯತ್ ವೇದಿಕೆಯಾಗುತ್ತದೆ.

ಯುವತಿಯರ ಮೇರಾ (ಶುಭಾಶಯ)

ತಿಂಗಳ ಪೂರ್ತಿ ಹಾಡು, ಕುಣಿತದ ಮೂಲಕ ಅಪ್ತರಾಗುವ ತಾಂಡಾದ ಯುವತಿಯರು ದೀಪಾವಳಿ ದಿನದಂದು ರಾತ್ರಿ ಊಟದ ನಂತರ ಸಾಲುಸಾಲು ಕಲ್ಲಿನ ಪಣತಿಯ ದೀಪ ಹಿಡಿದು ಮಟ್ಟೊ (ದೇವಾಲಯ) ಎದುರು ಜಮಾ ಆಗುತ್ತಾರೆ.

ಅಲ್ಲಿಂದ ಹಾಡುಗಳ ಮೂಲಕ ತಾಂಡಾದ ನಾಯೇಕ್ (ನಾಯಕ) ಮನೆಗೆ ಹೋಗಿ ಮನೆ ಮಂದಿಗಳನ್ನೆಲ್ಲಾ ಹೆಸರಿಸಿ ಮೇರಾ (ಶುಭಾಶಯ) ಹೇಳುತ್ತಾರೆ. ಉದಾ, ನಾಯಕ ತೊನ ಮೇರಾ, ಕಾಕಾ ತೊನ ಮೇರಾ, ದಾದಿ ತೋನ ಮೇರಾ, ಛೋಟು ತೊನ ಮೇರಾ. ಅಂದರೆ ‘ನಾಯಕ ನಿಮಗೆ ಒಳಿತಾಗಲಿ' ಎಂದು ಹೆಸರು ಹೇಳಿ ಶುಭಾಶಯ ಕೋರುತ್ತಾರೆ.

ಹೀಗೆ ರಾತ್ರಿಯಿಡೀ ತಾಂಡಾದ ಪ್ರತಿ ಮನೆಗಳಿಗೆ ಹೋಗಿ ಶುಭಾಶಯ ಕೋರಿ ಬರುತ್ತಾರೆ. ಯುವತಿಯರ ಖುಷಿಗಾಗಿ ಕೆಲವರು ಒಂದಷ್ಟು ಹಣ ಕೂಡ ನೀಡುತ್ತಾರೆ. ಎಲ್ಲಾ ಮನೆಗಳ ಮುಗಿಸಿ ಮತ್ತೆ ಮಟ್ಟೊ (ದೇವಾಲಯ) ಬಳಿ ಬಂದು ಹಾಡು ಹೇಳಿ ‘ಮೇರಾ’ ಕಾರ್ಯಕ್ರಮ ಮುಕ್ತಾಯಗೊಳಿಸುತ್ತಾರೆ.

ತಾಂಡಾದಲ್ಲಿನ ಯುವತಿಯರ ನಡುವೆ ಸಾಂಘಿಕ ಜೀವನ, ಸಾಮರಸ್ಯ ಮತ್ತು ಪರಸ್ಪರ ಹೊಂದಾಣಿಕೆ, ಸಹಾಯ ಮಾಡುವ ಗುಣವನ್ನು ರೂಪಿಸುವುದು ‘ಮೇರಾ’ ಕಾರ್ಯಕ್ರಮದ ಹಿಂದಿನ ಉದ್ದೇಶ ಎನ್ನುತ್ತಾರೆ ಲಂಬಾಣಿ ಸಮುದಾಯ ಹಿರಿಯರು.

ಹಿರಿಯರಿಗೆ ದಬಕಾರ್ (ಸ್ಮರಣೆ, ಧೂಪ ಹಾಕುವುದು)


ಪ್ರಕೃತಿ ಆರಾಧನೆಗಾಗಿ ಕಲ್ಲುಗಳ ಪೂಜೆ

ದವಾಳಿ ಹಬ್ಬದಲ್ಲಿ ಲಂಬಾಣಿಗರು ಮೃತ ಹಿರಿಯರನ್ನು ಸ್ಮರಿಸಿ ಪೂಜಿಸುವ ಆಚರಣೆಗೆ ‘ದಬಕಾರ್’ ಅನ್ನಲಾಗುತ್ತದೆ. ಸಿಂಧೂ ನಾಗರಿಕತೆಯ ದಾದ ಮೋಲ ಮತ್ತು ರಾದಿ ದಾದಿ ಲಂಬಾಣಿಗರ ಮೂಲ ಹಿರೀಕರು ಎನ್ನುವ ಇತಿಹಾಸವಿದೆ. ಅವರಿಂದ ಪ್ರಾರಂಭವಾಗಿ ಇತ್ತಿಚೀನವರೆಗೆ ಮೃತರಾದ ಎಲ್ಲರನ್ನೂ ಸ್ಮರಿಸುತ್ತಾ ಬಂಜಾರರು ಹಾಡು ಹಾಡುತ್ತಾರೆ. ಮನೆಯ ಒಲೆಯನ್ನು ಪೂಜಿಸುತ್ತಾರೆ. ಒಲೆಯ ಕೆಂಡದ ಹೊಗೆಯಲ್ಲಿಯೇ ಹಿರಿಯರಿಗಾಗಿ ಸಿಹಿ ಖಾದ್ಯ ಮತ್ತು ತುಪ್ಪದ ಎಡೆ ಇಡುತ್ತಾರೆ. ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇದು ತಾಂಡಾದ ಪ್ರತಿ ಮನೆಗಳಲ್ಲೂ ನಡೆಯುವ ಆಚರಣೆ. ಗುಂಪುಗುಂಪಾಗಿ ಸಂಬಂಧಿಗಳು ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಒಬ್ಬರ ಮನೆಗೆ ಮತ್ತೊಬ್ಬರು ಜತೆಗೂಡಿ ಹೋಗುತ್ತಾರೆ.

ಹಿರಿಯರಿಗೆ ಎಡೆ ಹಾಕುವಾಗ..

ಭಾಂಗ್ಯ ಭೂಕ್ಯಾ
ಖೆವ್ಡ್ಯಾ ಮೆವ್ಡ್ಯಾ
ಜೆನ್ನಿರೊ ಝರ್ಕೊ
ಲೂಣಿರೊ ಲಚ್ಕೊ
ಕೆಳ್ಳ್ಕೊಡಾರಿ ಹಾರೆ
ಪಿಲ್ಪಿಲಾರಿ ಹಾರೆ
ಡೂಂಗರೆ ಖೊಳಾತಿ
ತಡ್ಕಿ ಭಡ್ಕಿ

ಹೀಗೆ ಜಾನುವಾರುಗಳು, ಪರಿಸರ, ಮಕ್ಕಳು ಕೂಡ ಆರೋಗ್ಯವಾಗಿರಲೆಂದು ಹಾರೈಸಿ ಸಾಮೂಹಿಕವಾಗಿ ಪ್ರತಿ ಮನೆಯ ಒಲೆಗಳ ಎದುರು ಹಾಡುತ್ತಾರೆ.

ಪ್ರಕೃತಿಯ ಆರಾಧನೆ

ಭೂಮಿ, ಗಾಳಿ, ನೀರು, ಮಳೆ, ಸೂರ್ಯ, ಚಂದ್ರ, ಬೆಂಕಿ, ಇವುಗಳನ್ನು ಲಂಬಾಣಿಗರು ತಂದೆ, ತಾಯಿಯಂತೆ ಅರಾಧಿಸುತ್ತಾರೆ. ಪೂಜಿಸುತ್ತಾರೆ. ಕಾಲಕಾಲಕ್ಕೆ ಇವುಗಳು ಸಮಚಿತ್ತದಂತೆ ಇರುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿ, ವಿನಂತಿಸುತ್ತಾರೆ. ಹಾಗಾಗಿ ಈ ದವಾಳಿಯಂದು ಏಳು ಚಿಕ್ಕಚಿಕ್ಕ ಉದ್ದನೆಯ ಕಲ್ಲುಗಳಿಗೆ ಕೆಂಪು ಮಣ್ಣಿನ ಬಣ್ಣ ಬಳಿದು ಪ್ರಾತಿನಿಧಿಕವಾಗಿ ಅವುಗಳನ್ನು ಪ್ರಕೃತಿಯಾಗಿ ಪೂಜಿಸುತ್ತಾರೆ. ಇದು ಬಹುತೇಕ ಮನೆಗಳ ಹೊರಗೆ ಇಟ್ಟು ಆಚರಿಸುತ್ತಾರೆ. ‘ಕಿಡಿ ಮುಂಗಿನ ಸಾಯಿವೇಸ್’ ಅಂದರೆ ‘ಸಕಲ ಜೀವರಾಶಿಗಳಿಗೆ ಲೇಸಾಗಲಿ’ ಎಂದು ಪ್ರಾರ್ಥನೆ ಮಾಡುತ್ತಾರೆ. ಈ ಮೂಲಕ ನಿಸರ್ಗದ ಮೇಲಿನ ತಮ್ಮ ಗಾಢಪ್ರೀತಿಯನ್ನು ಅಭಿವ್ಯಕ್ತಿಗೊಳಿಸುತ್ತಾರೆ.

ಮೊದಲು ತಾಂಡಾಗಳಲ್ಲಿ ಇರುತ್ತಿದ್ದ ಆಚರಣೆಗಳು ಇತ್ತೀಚೆಗೆ ಬದಲಾವಣೆ ಕಂಡಿವೆ. ತಾಂಡಾದ ಹೊರಗಿನ ಅನ್ಯರ ಪ್ರಭಾವದ ಕಾರಣದಿಂದಾಗಿ ಕೆಲವು ತಾಂಡಾಗಳಲ್ಲಿ ಹಿರಿಯರ ಸ್ಮರಣೆ ನಡೆಯುವ ದಿನದ ರಾತ್ರಿ ಕೆಲವರು ಫೋಟೊ, ನೋಟುಗಳನ್ನಿಟ್ಟು ದೇವರಪೂಜೆ ಮಾಡುವುದು ಶುರುವಾಗಿದೆ.

ಫೂಲ್ ತೋಡೆನ್

ಹಿರಿಯರಿಗೆ ಧಬಕಾರ್ ಹಾಕಿದ ನಂತರ ಲಂಬಾಣಿ ಸಾಂಪ್ರದಾಯಿಕ ಪೋಷಾಕಿನಲ್ಲಿ ತಾಂಡಾದ ಯುವತಿಯರು ಮತ್ತು ತಾಯಂದಿರು ಮತ್ತೆ ದೇವಸ್ಥಾನದ ಎದುರು ಹಾಡು, ಕುಣಿತ ಪ್ರಾರಂಭಿಸುತ್ತಾರೆ. ನಂತರ ಯುವತಿಯರು ಬಿದಿರಿನ ಬುಟ್ಟಿಗಳ ಸಮೇತ ಊರಾಚೆಯ ಕಾಡು ಪ್ರದೇಶಕ್ಕೆ ಹೊರಡುತ್ತಾರೆ. ದಾರಿಯುದ್ದಕ್ಕೂ ಹಾಡು–ಕುಣಿತದ ಸಾಥ್ ಇರುತ್ತದೆ. ಕಾಡಿನಲ್ಲಿರುವ ವಿಶೇಷ ಹೂಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲೂ ಬಂದರಕಿ, ಗಲಬಾಜ್ ಎನ್ನುವ ಹೂಗಳ ಜತೆಗೆ ಇತರ ಹೂಗಳನ್ನೂ ಕಿತ್ತು ತರುತ್ತಾರೆ. ಹಿಂದಿನದ ದಿನದ ರಾತ್ರಿ ಮೇರಾ (ಶುಭಾಶಯ ಕಾರ್ಯಕ್ರಮ) ಮಾಡಿದಾಗ ಸಂಗ್ರಹವಾಗಿದ್ದ ಹಣದಲ್ಲಿ ಖರೀದಿಸಿ, ಕಾಡಿನಲ್ಲಿಯೇ ಒಂದೆಡೆ ಕುಳಿತು ಯುವತಿಯರು ತಿಂಡಿ–ತಿನಿಸುಗಳನ್ನು ಹಂಚಿಕೊಂಡು ತಿಂದು ತಾಂಡಾಕ್ಕೆ ಮರಳುತ್ತಾರೆ. ಕಾಡಿನಿಂದ ತಂದ ಹೂಗಳನ್ನೂ ಹಂಚಿಕೊಳ್ಳುವ ಯುವತಿಯರು ಗುಂಪು ಗುಂಪಾಗಿ ತಾಂಡಾದ ಪ್ರತಿ ಮನೆಗೆ ತೆರಳುತ್ತಾರೆ. ಅಲ್ಲಿ ಸೆಗಣಿಯ ಉಂಡೆ ಮಾಡಿ ಅದಕ್ಕೆ ಹೂವಿನ ಅಲಂಕಾರ ಮಾಡುತ್ತಾರೆ. ಮನೆಯ ಬಾಗಿಲು, ಪಶುಗಳಿರುವ ಗೊದಲಿ (ಕೊಟ್ಟಿಗೆ) ಹಟ್ಟಿಗಳಲ್ಲಿ ಅಲಂಕರಿಸಿದ ಸೆಗಣಿಯ ಉಂಡೆ ಇಟ್ಟು, ಪಶುಗಳಿಗೆ ಶುಭವಾಗಲಿ’ ಎಂದು ಹಾರೈಸಿ, ಪೂಜಿಸುತ್ತಾರೆ.

ನವಧಾನ್ಯಗಳ ತೀಜ್ (ಪೈರು)

ದೀಪಾವಳಿ ಇನ್ನೂ ಒಂಬತ್ತು ದಿನಗಳಿರುವ ಮುನ್ನವೇ ಮೈನೆರೆಯದ ಪುಟ್ಟ ಹೆಣ್ಣಮಕ್ಕಳು ಬಿದಿರಿನ ಬುಟ್ಟಿ ಅಥವಾ ಹೊಸ ಪಾತ್ರೆಗಳಲ್ಲಿ ಮಣ್ಣು ಮತ್ತು ಗೊಬ್ಬರ ಹಾಕಿ ಅದರಲ್ಲಿ ಗೋಧಿ ಸೇರಿದಂತೆ ನವಧಾನ್ಯಗಳನ್ನು ಬಿತ್ತನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಗೋಧಿ ಹುಲ್ಲು ಸಮೃದ್ಧವಾಗಿ ಮೊಳಕೆಯೊಡೆದರೆ ಯುವತಿಯರ ಮನದ ಇಚ್ಛೆ ಫಲಿಸುತ್ತದೆ ಎಂಬುದು ಒಂದು ನಂಬಿಕೆಯಾದರೆ, ಗೋಧಿ ಹುಲ್ಲಿನ ಮೊಳಕೆಯೊಡೆದ ಆಧಾರದ ಮೇಲೆ ಆ ವರ್ಷದ ಫಸಲು ಹೇಗೆ ಬರುತ್ತದೆ ಎನ್ನುವ ಲೆಕ್ಕಾಚಾರ ಮತ್ತೊಂದು ನಂಬಿಕೆ.

9ನೇ ದಿನಕ್ಕೆ ನವಧಾನ್ಯಗಳ ಪೈರು (ತೀಜ್ ) ಮತ್ತು ಮಣ್ಣಿನ ಹಣತೆ ಹಚ್ಚಿ ತಟ್ಟೆಯಲ್ಲಿ ಇಟ್ಟು ಸೇವಾಲಾಲ್ ದೇವಾಲಯಕ್ಕೆ ಹೋಗಿ, ನಂತರ ಎಲ್ಲರ ಮನೆಗಳಿಗೆ ತೆರಳಿ ಶುಭಾಶಯ ಕೋರುತ್ತಾರೆ.

ಗೋಧಿ–ಬೆಲ್ಲದ ಘುಲರ್

ಗೋಧಿಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ‘ಘುಲರ್’ ಎನ್ನುವ ತಿನಿಸನ್ನು ಎಲ್ಲರಿಗೂ ಹಂಚಿ ನಂತರ ಯುವತಿಯರು ಸಾಮೂಹಿಕ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

‘ಸಳೊಯಿ’ ಎನ್ನುವ ವಿಶಿಷ್ಟ ಖಾದ್ಯ

ಸಳೊಯಿ ಎನ್ನುವುದು ಲಂಬಾಣಿ ಸಮುದಾಯದ ವಿಶಿಷ್ಟ ಮಾಂಸಾಹಾರ. ದೀಪಾವಳಿಯಂದು ದೇವಸ್ಥಾನದ ಎದುರು ಕುರಿಯ ಮಾಂಸದಿಂದ ಸಳೊಯಿ ಮಾಡಿ, ಅದನ್ನು ತಾಂಡಾದ ಜನರೆಲ್ಲ ಹಂಚಿಕೊಂಡು ತಿನ್ನುವುದು ವಾಡಿಕೆ.

ದೀಪಾವಳಿಯ ಅಮಾವಾಸ್ಯೆ ದಿನ ತಾಂಡಾಗಳ ಪ್ರತಿ ಮನೆಯಲ್ಲೂ ಮಾಂಸದ ಅಡುಗೆ ಘಮಗುಡುತ್ತಿರುತ್ತದೆ. ಅಂದು ಬಂಧುಗಳು ಪರಸ್ಪರರ ಮನೆಗಳಿಗೆ ತೆರಳಿ, ಊಟ ಮಾಡಿ ಆನಂದಪಟ್ಟು ಸಂಭ್ರಮಿಸುತ್ತಾರೆ.

ಬಂಜಾರರ ದವಾಳಿ, ಈಗಾಗಲೇ ನಮ್ಮಿಂದ ಮರೆಯಾಗಿರುವ ಹಿರಿಯರನ್ನು ನೆನೆದು ಪೂಜಿಸುವ ಹಬ್ಬ. ಪಶುಪಾಲನೆ, ಹೈನುಗಾರಿಕೆ ಕೃಷಿಯನ್ನು ಉತ್ತೇಜಿಸಲು ಬೇಡುವ ಹಬ್ಬ. ಬಂಧುಗಳ ಮಧ್ಯೆ ಮತ್ತಷ್ಟು ಪ್ರೀತಿ, ಗೌರವ, ಸಹಬಾಳ್ವೆ ಬಲಗೊಳ್ಳಲಿ ಎಂದು ಹಾರೈಸುವ ಹಬ್ಬ. ಆಹಾರವನ್ನು ಹಂಚಿ ತಿನ್ನುವ ಗುಣಗಳನ್ನು ನಾಡಿಗೆ ಸಾರುವ, ಭೂ ಮಂಡಲದ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಹಬ್ಬ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು