ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವಾಂಗ್: ಕೊನೆಯ ಶಾಂಗ್ರಿ-ಲಾ

Last Updated 17 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಪದೇ ಪದೇ ಗಡಿ ತಂಟೆ ತೆಗೆಯುವ ಚೀನಾ ಇದೀಗ ತವಾಂಗ್‌ ಪ್ರದೇಶದಲ್ಲಿ ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿದೆ. ಹಿಮಾಚ್ಛಾದಿತ ನೀಲಿ ಶಿಖರಗಳ ನಡುವಿನ ಈ ಪಟ್ಟಣ ಭಾರತದ ಹೆಮ್ಮೆಯ ತಾಣ. ಹಿಮಾಲಯದ ಈ ಮುದ್ದಿನ ಮಗಳು ಹೇಗಿದ್ದಾಳೆ ಗೊತ್ತೆ? ತವಾಂಗ್‌ನಲ್ಲಿ ಒಮ್ಮೆ ಸುತ್ತಾಡಿದರೆ ಚೀನಾಕ್ಕೆ ಏಕೆ ಈ ಊರಿನ ಮೇಲೆ ಕಣ್ಣು ಎನ್ನುವುದು ಗೊತ್ತಾಗುತ್ತದೆ...

ಹಿಮಾಲಯ ಪರ್ವತಗಳ ಮಧ್ಯೆ ಚೀನಾ ಗಡಿಯಲ್ಲಿರುವ ತವಾಂಗ್ ಪಟ್ಟಣ ಪ್ರಾಚೀನ ಬೌದ್ಧಾಶ್ರಮಗಳ ಒಂದು ಸುಂದರ ನಗರ. ಪಶ್ಚಿಮಕ್ಕೆ ಭೂತಾನ್, ಉತ್ತರಕ್ಕೆ ಚೀನಾ (1959ರವರೆಗೂ ಟಿಬೆಟ್) ಪೂರ್ವಕ್ಕೆ ಮ್ಯಾನ್ಮಾರ್ ದೇಶಗಳು ಈ ಪಟ್ಟಣವನ್ನು ಸುತ್ತುವರಿದಿವೆ. ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹರಡಿಕೊಂಡಿರುವ ಈ ಪಟ್ಟಣದ ಸುತ್ತಲೂ ಸದಾ ಹಿಮಾಚ್ಛಾದಿತ ನೀಲಿ ಶಿಖರಗಳು ಮುತ್ತಿಗೆ ಹಾಕಿರುತ್ತವೆ.

ಬಹಳ ವರ್ಷಗಳಿಂದಲೂ ತವಾಂಗ್ ನೋಡುವ ಹಂಬಲವಿದ್ದ ನಾನು, ಶಿಲ್ಲಾಂಗ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ದಿನ ಹಳೆ ಫಿಝ್ಝೊ ಎಂಜಿನ್ ಜೀಪ್‍ನಲ್ಲಿ ಸಹೋದ್ಯೋಗಿಯೊಬ್ಬರ ಜೊತೆಗೆ ಹೊರಟುಬಿಟ್ಟೆ. ಗುವಾಹಟಿಯಿಂದ ತವಾಂಗ್‍ಗೆ ಹೆಲಿಕಾಪ್ಟರ್ ಸಂಪರ್ಕವಿದ್ದರೂ ರಸ್ತೆಯ ಮೂಲಕ ಹಿಮಾಲಯ ಪರ್ವತಗಳ ಸೊಬಗನ್ನು ಸವಿಯಬೇಕಾಗಿತ್ತು. ತವಾಂಗ್‍ಗೆ ಹೋಗುವ ರಸ್ತೆಯನ್ನು ತೆರೆಯುವುದೇ ವರ್ಷಕ್ಕೆ 3–4 ತಿಂಗಳು ಮಾತ್ರ. ಉಳಿದ ಎಂಟು ತಿಂಗಳು ಮಳೆ ಮತ್ತು ಹಿಮಪಾತದ ಕಾರಣದಿಂದಾಗಿ ರಸ್ತೆಯನ್ನು ಮುಚ್ಚಿರಲಾಗುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್‍ನಿಂದ ಗುವಾಹಟಿ ಮೂಲಕ ನಮ್ಮ ಯಾನ. ಬ್ರಹ್ಮಪುತ್ರ ನದಿಯನ್ನು ದಾಟಿ 650 ಕಿ.ಮೀ. ದೂರದ ಭಯಂಕರ-ಬೀಭತ್ಸ ಮತ್ತು ದುರ್ಗಮ ಪರ್ವತಗಳ ರಸ್ತೆಯಲ್ಲಿ ಎರಡು ದಿನ ಪ್ರಯಾಣ ಮಾಡಿ, ಕತ್ತಲಲ್ಲಿ ತವಾಂಗ್ ತಲುಪಿದೆವು. ಬೆಳಗಿನ ಜಾವ, ಮದ್ದಳೆ ಸದ್ದು ಮಧುರವಾಗಿ ಕೇಳಿಸತೊಡಗಿತು. ಕನಸೋ ನನಸೋ ಸ್ವಲ್ಪ ಹೊತ್ತು ಗೊತ್ತಾಗಲಿಲ್ಲ. ಆದರೆ, ಕಿವಿಗಳಿಗೆ ಮಧುರವಾದ ಮದ್ದಳೆ ಸದ್ದು ಕೇಳಿಸುತ್ತಿತ್ತು. ಕಣ್ಣುಬಿಚ್ಚಿ ಕಿಟಕಿಗಳ ಕಡೆಗೆ ನೋಡಿದಾಗ ಬೆಳಕು ಮೂಡಿತ್ತು. ಗೋಡೆಯಲ್ಲಿದ್ದ ಗಡಿಯಾರ ಇನ್ನೂ 4:15 ಗಂಟೆ ತೋರಿಸುತ್ತಿತ್ತು. ಅರುಣ ಕಿರಣಗಳು ಮೊದಲಿಗೆ ಬೀಳುವುದು ಈಶಾನ್ಯ ಭಾರತದ ಅರುಣಾಚಲ ಪರ್ವತಗಳ ಮೇಲೆ.

ಬೇಗನೇ ಬಿಸಿನೀರು ಸ್ನಾನ ಮಾಡಿ ತವಾಂಗ್ ಬೌದ್ಧಾಶ್ರಮ ತಲುಪಿದೆವು. ಕೆಳಗೆ ಇಳಿಜಾರಿನಲ್ಲಿ ನಾಲ್ಕಾರು ಕಣಿವೆಗಳ ಮೇಲೆಲ್ಲ ಬೋಗುಣಿ ಆಕಾರದಲ್ಲಿ ಹರಡಿಕೊಂಡಿದ್ದ ತವಾಂಗ್ ಪಟ್ಟಣದ ಸುತ್ತಲೂ ಎತ್ತರೆತ್ತರ ನೀಲಿ-ಹಸಿರುಮಿಶ್ರಿತ ಪರ್ವತಶ್ರೇಣಿಗಳು. ತವಾಂಗ್ ಪಟ್ಟಣದ ಸುತ್ತಲಿನ ಪ್ರದೇಶ ಬೃಹತ್‌ ಗಾತ್ರದ ಕಮಲದಂತೆ ರೂಪುಗೊಂಡಿದ್ದು, ಸುತ್ತಲೂ ಹಿಮಾಚ್ಛಾದಿತ ಪರ್ವತಗಳು ದೃಷ್ಟಿ ಹಾಯುವಷ್ಟು ದೂರ ಹಾಸಿಕೊಂಡಿದ್ದವು.

ಇದೆಲ್ಲವನ್ನು ಎಷ್ಟೋ ವರ್ಷಗಳ ಹಿಂದೆ ನೋಡಿದ್ದ, ಬುಡಕಟ್ಟುಗಳ ಕಥೆಗಾರ ಡಾ. ವೆರಿಯರ್ ಎಲ್ವಿನ್ ‘ನೇಫಾದಲ್ಲಿ (ನಾರ್ಥ್‌ ಈಸ್ಟರ್ನ್ ಫ್ರಾಂಟಿಯರ್) ಸ್ವರ್ಗವೆಂದರೆ ತವಾಂಗ್’ ಎಂದು ಉದ್ಗರಿಸಿದ್ದ. ಇದನ್ನು The hidden paradise of last Shangri-La ಎಂದೂ ಕರೆಯುತ್ತಾರೆ. ಹಿಮಾಲಯದ ಮಡಿಲಲ್ಲಿರುವ ತವಾಂಗ್ ಮತ್ತು ಅದರ ಸುತ್ತಮುತ್ತಲಿರುವ ಪುರಾತನ ದೇವಾಲಯಗಳು, ಸ್ತೂಪಗಳು, ನದಿ ಸರೋವರಗಳು, ಹಿಮಾಚ್ಛಾದಿತ ಪರ್ವತಮಾಲೆಗಳು ನೋಡುಗರ ಮನಸೂರೆಗೊಳ್ಳುತ್ತವೆ. ಬೇಸಿಗೆ ಕಾಲದಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಹೂವಿನ ಹಾಸಿಗೆ ಕಂಗೊಳಿಸುತ್ತದೆ.

ಏಳನೇ ಶತಮಾನದಲ್ಲಿ ಈ ಪ್ರದೇಶವನ್ನು ಕಾಲಾವಾಗ್ಪೂ ಎಂಬ ರಾಜ ಆಳುತ್ತಿದ್ದನೆಂದು ‘ಕೊಂಡೊ ಡ್ರೊವಾ ಸಂಗ್ಮೊ’ನ ಆತ್ಮಚರಿತ್ರೆಯಲ್ಲಿ ದಾಖಲಾಗಿದೆ. ತವಾಂಗ್ ಆಶ್ರಮ ಇರುವ ಗುಡ್ಡದ ಎದುರಿಗಿರುವ ತಪ್ಪಲಿನಲ್ಲಿ ದಮ್ಸೆ ಲೊಡೆ ಎಂಬ ಋಷಿ ತನ್ನ ಪತ್ನಿ ದಮ್ಸೆ ಜೆಮೆಳ ಜೊತೆಗೆ ವಾಸಿಸುತ್ತಿದ್ದನಂತೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ತವಾಂಗ್ ಎಂದು ಖ್ಯಾತಿ ಪಡೆದು ಪ್ರಖ್ಯಾತ ಬೌದ್ಧರ ಯಾತ್ರಾ ಸ್ಥಳವಾಯಿತು. ಇದನ್ನು ‘ಗೋಲ್ಡನ್ ನಾಮ್ಗಿಲ್ ಲಾಟ್ಸೆ’ ಎಂದೂ ಕರೆಯುತ್ತಾರೆ. ಐದು ಶತಮಾನಗಳಷ್ಟು ಪುರಾತನವಾದ ಇಲ್ಲಿನ ಆಶ್ರಮ 17 ಗೋಂಪಾಗಳನ್ನು ನಡೆಸುತ್ತದೆ.

ತವಾಂಗ್‍ನ ‘ಗೋಲ್ಡನ್ ಲಾಟ್ಸೆ’ ಹೆಸರಿನ ಈ ಉಜ್ವಲ ಭವನದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಯುವಕ ಯುವತಿಯರಿಗೆ ಬೌದ್ಧ ಚರಿತ್ರೆ, ಸಂಸ್ಕೃತಿ ಮತ್ತು ಬದುಕನ್ನು ಕಲಿಸುತ್ತಾರೆ. ಈ ಬೌದ್ಧಾಶ್ರಮ ಗೆಲ್ಲೂಪ ಗುಂಪಿಗೆ ಸೇರಿದ ಮಹಾಯಾನ ಜನರ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಬೌದ್ಧ ವಾರ್ಷಿಕದ 11ನೇ ತಿಂಗಳಲ್ಲಿ (ಡಿಸೆಂಬರ್-ಜನವರಿ) ‘ಟೊಂಗ್ವೆ’ ಜಾತ್ರೆ ನಡೆಯುತ್ತದೆ. ಇಲ್ಲಿ ಬೌದ್ಧ ಗ್ರಂಥಾಲಯ, ಶಾಲೆ, ವಿಶಾಲ ಪ್ರಾರ್ಥನಾ ಭವನ, ವಸ್ತುಸಂಗ್ರಹಾಲಯ ಮತ್ತು ಗೋಡೆಗಳ ಮೇಲೆಲ್ಲ ಬಣ್ಣಬಣ್ಣದ ಅಪರೂಪದ ಚಿತ್ರಕಲೆಯನ್ನು ಬಿಡಿಸಲಾಗಿದೆ.

ಈ ಭವನವನ್ನು ಟಿಬೆಟ್‍ನ ಲಾಸಾದಲ್ಲಿರುವ ಬೌದ್ಧ ಭವನದಂತೆ ನಿರ್ಮಿಸಲಾಗಿದ್ದು, ಮೂರು ಅಂತಸ್ತುಗಳ ಈ ಭವನದಲ್ಲಿ 600 ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ತಂಗುವ ವ್ಯವಸ್ಥೆ ಇದೆ. ಈ ಹೊಸ ಭವನವನ್ನು ನಿರ್ಮಿಸಿದ ಮೇಲೆ ಮೆರೆ ಲಾಮಾ ಖುದ್ದಾಗಿ ದಲೈಲಾಮಾರನ್ನು ಸಂಧಿಸಿ ತವಾಂಗ್‍ಗೆ ಬಂದು ಆಶೀರ್ವಾದ ಮಾಡಲು ಆಹ್ವಾನಿಸಿದನಂತೆ. ಆದರೆ ದಲೈಲಾಮಾ ತವಾಂಗ್‍ಗೆ ಬರಲು ಒಪ್ಪದಿದ್ದರಿಂದ (ಬಹುಶಃ ಚೀನಾಗೆ ಹೆದರಿ) ಹಿಂದಕ್ಕೆ ಬಂದ ಮೆರೆ ಲಾಮಾ ತನ್ನ ರಕ್ತದಿಂದ ಚಂದ್ರಿಕೆಯಲ್ಲಿ ಒಂದು ಒಕ್ಕಣೆ ಬರೆದು ಅದನ್ನು ಉಣ್ಣೆ ಬಟ್ಟೆಯಲ್ಲಿ ಸುತ್ತಿ ಭವನದ ಮುಖ್ಯ ಗೋಪುರದಲ್ಲಿ ಇಟ್ಟಿರುವುದಾಗಿ ಹೇಳಲಾಗುತ್ತದೆ. ದಲೈಲಾಮಾ ಈ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲ ಚೀನಾ ಆಕ್ಷೇಪ ತೆಗೆಯುತ್ತಲೇ ಇರುತ್ತದೆ.

ಬೌದ್ಧಾಶ್ರಮದ ಸಣ್ಣ ಬಾಗಿಲಿನ ಮೂಲಕ ಒಳಕ್ಕೆ ಪ್ರವೇಶಿಸಿದ್ದೆ. ಒಳಗೆ ವಿಶಾಲ ಮತ್ತು ಎತ್ತರವಾದ ಸಭಾಂಗಣದಲ್ಲಿ ಸಾಲಾಗಿ ದೀಪಗಳು ಉರಿಯುತ್ತಿದ್ದವು. ಬೌದ್ಧ ಧರ್ಮವನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಇಡೀ ಸಭಾಂಗಣದ ಗೋಡೆ, ಕಂಬಗಳ ಮೇಲೆಲ್ಲ ಚಿತ್ರಿಸಲಾಗಿದೆ. ಎದುರಿಗೆ 50 ಅಡಿಗಳಷ್ಟು ಎತ್ತರದ, ಕುಳಿತಿರುವ ಬೌದ್ಧನ ಸೌಮ್ಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಮುಂದೆ ಕುಳಿತು ಪ್ರಾರ್ಥನೆ ಮಾಡಲು ಸಾಲುಸಾಲು ಬಿಳಿ ಗದ್ದಿಗಳನ್ನು ಹಾಕಲಾಗಿದೆ. ನಾವು ಸ್ವಲ್ಪ ಹೊತ್ತು ಕುಳಿತು ಪ್ರಾರ್ಥನೆ ಮಾಡಿ ಬುದ್ಧನನ್ನು ಕಣ್ಣುಗಳ ತುಂಬಾ ತುಂಬಿಕೊಂಡು ಹೊರಕ್ಕೆ ಬಂದೆವು.

ಈ ಆಶ್ರಮ ಪ್ರಪಂಚದಲ್ಲಿಯೇ ಒಂದು ಅದ್ಭುತ ಸುಂದರ ಬೌದ್ಧ ಆಶ್ರಮವಾಗಿದ್ದು ಜಗತ್ತಿನಾದ್ಯಂತ ಜನ ಬಂದು ವೀಕ್ಷಿಸಿ ಹೋಗುತ್ತಾರೆ. ಇಲ್ಲಿನ ಮೊಂಪಾಗಳು (ಅರುಣಾಚಲ ಪ್ರದೇಶದ ಒಂದು ಜನಾಂಗ) ಟಿಬೆಟ್‍ನ ಮಹಾಯಾನ ಬೌದ್ಧ ಪಂಥವನ್ನು ಅಪ್ಪಿಕೊಂಡಿದ್ದು ಮೂಲವಾಗಿ ಅದು ಜೆನ್ ಪಂಥಕ್ಕೆ ಸೇರಿದ್ದಾಗಿದೆ. ಜೆನ್ ಪಂಥ, ಟಿಬೆಟ್ ಮೂಲಜನರ ಧರ್ಮವಾಗಿದ್ದು, ನಿಸರ್ಗದ ಹಲವು ದೇವತೆಗಳ ಸಂಗಮವಾಗಿದೆ. ಆನಂತರ ನಿಧಾನವಾಗಿ ಈ ಪ್ರದೇಶವನ್ನೆಲ್ಲ ಬೌದ್ಧ ಧರ್ಮ ಆವರಿಸಿಕೊಂಡಿತು.

ಹಳೆಯ ಬಾನ್ ಪದ್ಧತಿಯಾದ ಪ್ರಾಣಿ ಬಲಿ ಕೆಲವು ಕಡೆ ಈಗಲೂ ವಿರಳವಾಗಿ ನಡೆಯುತ್ತದೆ. ನಾವು ತವಾಂಗ್‍ಗೆ ಹೋಗುವಾಗ ಪಟ್ಟಪಾಡು ಒಂದು ಒಳ್ಳೆ ರೋಚಕ ಕಥೆ. ಅದರಲ್ಲೂ ದಾರಿಯಲ್ಲಿ ಬರುವ ದುರ್ಗಮ ‘ಸಿಲಾ ಪಾಸ್’ (ಎತ್ತರದ ಶಿಖರ) ದಾಟುವಾಗ ನಮ್ಮ ಡೀಸೆಲ್ ವಾಹನ ಎಲ್ಲಿ ಹೆಪ್ಪುಗಟ್ಟಿ ನಿಂತುಬಿಡುತ್ತದೋ ಎಂಬ ಭೀತಿಗೆ ಒಳಗಾಗಿದ್ದೆವು. ಹೋಗುತ್ತಿದ್ದ ದಾರಿಯಲ್ಲಿ ಬೆಟ್ಟಗಳಿಂದ ರಸ್ತೆಗೆ ಉರುಳಿಬರುತ್ತಿದ್ದ ರಾಶಿರಾಶಿ ಕಲ್ಲುಮಣ್ಣು ನೋಡಿ, ಯಾತಕ್ಕಾದರೂ ಈ ಸಾಹಸಕ್ಕೆ ಇಳಿದೆನೋ ಎಂದು ನನ್ನ ಹೃದಯ ಪ್ರಯಾಣದ ಉದ್ದಕ್ಕೂ ಹೊಡೆದುಕೊಳ್ಳುತ್ತಿತ್ತು. ದಾರಿಯಲ್ಲಿ ಬೇರೆ ಇಬ್ಬರು ಕುಡುಕರು ಎದುರಾಗಿ ಕತ್ತಿಗಳೊಂದಿಗೆ ನಮ್ಮನ್ನು ಅಟ್ಟಾಡಿಸಿಕೊಂಡು ಬಂದಿದ್ದರು. ಅವರಿಂದ ತಪ್ಪಿಸಿಕೊಂಡು ಓಡಿಹೋಗಿದ್ದೆವು.

ಕೊನೆಗೆ ಹೇಗೋ ಹಿಮಾಲಯ ಇಳಿದುಬಂದು ಒಂದು ಗ್ಯಾರೇಜ್‍ನಲ್ಲಿ ಸಣ್ಣ ರಿಪೇರಿಗಾಗಿ ನಮ್ಮ ಜೀಪ್ ನಿಲ್ಲಿಸಿದ್ದೆವು. ಅಲ್ಲೇ ತನ್ನ ಹೊಸ ಸಫಾರಿ ಗಾಡಿಯೊಂದಿಗೆ ಒಬ್ಬ ಬೌದ್ಧ ಸನ್ಯಾಸಿ, ದೃಢಕಾಯದ ಯುವಕ ವಾಹನದ ಚಕ್ರಗಳಿಗೆ ಗಾಳಿ ಹಾಕಿಸುತ್ತಿದ್ದ. ಮಾತುಕತೆ ನಡುವೆ ಆತ ತವಾಂಗ್‌ಗೆ ಹೋಗುವುದಾಗಿ ತಿಳಿಸಿದ.

ನಾವು ತವಾಂಗ್‍ನಿಂದ ಈಗತಾನೇ ಹಿಂದಿರುಗಿ ಬಂದೆವು ಎಂದು ಹೇಳಿದೆವು. ಆತ ‘ಹೇಗೆ?’ ಎಂದ. ನಾವು ನಮ್ಮ ವಾಹನ ತೋರಿಸಿದೆವು. ಆತ ನಮ್ಮಿಬ್ಬರನ್ನು ಮೇಲಿಂದ ಕೆಳಕ್ಕೆ ನೋಡಿ ಆಶ್ಚರ್ಯಚಕಿತನಾಗಿ ‘ಈ ವಾಹನದಲ್ಲಿ ಹೋಗಿಬಂದಿರ? ನಿಮ್ಮ ಅದೃಷ್ಟ ಚೆನ್ನಾಗಿತ್ತು ಬಿಡಿ’ ಎಂದ. ಆತನ ಮಾತು ಕೇಳಿದ ನನಗೆ ನಿಜವಾಗಿಯೂ ಗಾಬರಿಯಾಗಿತ್ತು.

ಬೌದ್ಧಧರ್ಮ ಮೂಲವಾಗಿ ಭಾರತದಲ್ಲಿ ಹುಟ್ಟಿದರೂ ಅದು ಭಾರತದಿಂದ ಚೀನಾಕ್ಕೆ ಹೋಗಿ ಅಲ್ಲಿಂದ ಬರ್ಮಾ-ಟಿಬೆಟ್ ಮೂಲಕ ಮತ್ತೆ ಅರುಣಾಚಲ ಪ್ರದೇಶ ತಲುಪಿದೆ ಎಂದು ಹೇಳಲಾಗುತ್ತದೆ. ಇಂತಹ ಸುಂದರ ತವಾಂಗ್‌ಗಾಗಿ ಚೀನಾ ಹಂಬಲಿಸಿ ನಿಂತಿರುವ ಕಾರಣ ನಿಮಗೀಗ ಗೊತ್ತಾಗಿರಬೇಕಲ್ಲವೇ?‌

ತವಾಂಗ್‌ ಬೆನ್ನುಬಿದ್ದ ಚೀನಾ
ಚೀನಾ ಸೈನಿಕರು ಆಗಾಗ ಭಾರತೀಯ ಗಡಿಯನ್ನು ಪ್ರವೇಶಿಸಿ ಭಾರತೀಯ ಸೈನ್ಯದ ಜೊತೆಗೆ ಘರ್ಷಣೆಗೆ ಇಳಿಯುವುದು ಮಾಮೂಲಿಯಾಗಿದೆ. 2020ರಲ್ಲಿ ಲಡಾಕ್‍ನ ಗಾಲ್ವನ್ ಪ್ರದೇಶದಲ್ಲಿ ಚೀನಾ ಸೈನಿಕರು ಅತಿಕ್ರಮಣ ನಡೆಸಿದ್ದರು. ಇದೇ 9-10ರಂದು ತವಾಂಗ್ ಹತ್ತಿರ ಮತ್ತೆ ಅತಿಕ್ರಮಣ ನಡೆಸಿ ಘರ್ಷಣೆಗೆ ಇಳಿದರು. ಶೂನ್ಯ ಡಿಗ್ರಿ ತಾಪಮಾನದಲ್ಲಿ ಹಗಲು-ರಾತ್ರಿ ದೇಶವನ್ನು ಕಾವಲು ಕಾಯುವ ಯೋಧರರ ಬಗ್ಗೆ ಒಂದು ಕಡೆ ದುಃಖವಾದರೆ, ಮತ್ತೊಂದು ಕಡೆ ಹೆಮ್ಮೆ ಎನಿಸುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಇಂಥ ವಾತಾವರಣದಲ್ಲಿ ಕೆಲಸ ಮಾಡುವುದೆಂದರೆ ಅದೊಂದು ನರಕಯಾತನೆಯೇ ಸರಿ.

1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ 1960ರ ದಶಕದಲ್ಲಿ ಇನ್ನೂ ಮಂಪರಿನಲ್ಲೇ ಉಳಿದುಕೊಂಡಿತ್ತು. ಪ್ರಪಂಚದ ಚಾವಣಿ ಎಂದು ಹೆಸರಾದ, ಹಿಮಾಚ್ಛಾದಿತ ನೀರಿನ ಸಂಪನ್ಮೂಲ ಹೊಂದಿರುವ ಟಿಬೆಟ್ ದೇಶವನ್ನು ಆಗ ಚೀನಾ ದಿಢೀರನೆ ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತು.

1959ರಲ್ಲಿ ಟಿಬೆಟ್‍ನ ಬೌದ್ಧ ಗುರು ದಲೈಲಾಮಾ ಭಾರತಕ್ಕೆ ಓಡಿಬಂದರು. ನೆಹರೂ, ಅವರಿಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯ ಕೊಟ್ಟಿದ್ದರಿಂದ ಚೀನಾಕ್ಕೆ ಮತ್ತಷ್ಟು ಕೋಪ ಬಂತು. ಅಂದಿನಿಂದ ಇಂದಿನವರೆಗೂ ಚೀನಾವು ಅರುಣಾಚಲ ಪ್ರದೇಶದ ವಿಷಯವಾಗಿ ಕಾಲು ಕೆದರಿಕೊಂಡು ಬರುತ್ತಲೇ ಇದೆ.

1962ರ ಅಕ್ಟೋಬರ್‌ನಿಂದ ನವೆಂಬರ್‌ವರೆಗೂ ಹಿಮಾಲಯದ ಕಣಿವೆಗಳಲ್ಲಿ ಭಾರತ- ಚೀನಾ ಯುದ್ಧ ನಡೆಯಿತು. ಯುದ್ಧ ನಡೆದ ಸ್ಥಳಗಳು, ಪಾಳುಬಿದ್ದ ಬಂಕರುಗಳು, ಯುದ್ಧದಲ್ಲಿ ಉಪಯೋಗಿಸಿದ ಮದ್ದುಗುಂಡು ಮತ್ತು ಭಾರತೀಯ ಯೋಧರ ಯುದ್ಧ ಸ್ಮಾರಕಗಳು ತವಾಂಗ್ ಸುತ್ತಮುತ್ತಲೂ ಹತ್ತಾರು ಕಡೆ ಹರಡಿಕೊಂಡಿವೆ. ಇದನ್ನೆಲ್ಲ ನೋಡಿದಾಗ ಮನಸ್ಸಿಗೆ ಖೇದವಾಗುತ್ತದೆ.

ಅರುಣಾಚಲ ಪ್ರದೇಶ, ಅದೂ ಮುಖ್ಯವಾಗಿ ತವಾಂಗ್ ಭೂಭಾಗ, ತನಗೆ ಸೇರಿದ್ದು ಎಂದು ಚೀನಾ ಪದೇ ಪದೇ ಹೇಳಿಕೊಳ್ಳುತ್ತಾ ಭಾರತದ ಗಡಿಯೊಳಕ್ಕೆ ಬಂದು ಘರ್ಷಣೆಗೆ ನಿಲ್ಲುತ್ತದೆ. ತವಾಂಗ್ ಪ್ರಾಂತ್ಯವು ಯುದ್ಧ ವ್ಯೂಹಾತ್ಮಕ ಸ್ಥಳವಾಗಿರುವುದು ಮತ್ತು ಅದು ಹಿಮಾಲಯದ ಮುದ್ದಿನ ಮಗಳಾಗಿರುವುದು ಇದಕ್ಕೆ ಕಾರಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT