ಭಾನುವಾರ, ಆಗಸ್ಟ್ 14, 2022
25 °C

ಸಿ.ಡಿ.ನರಸಿಂಹಯ್ಯ: ಧ್ವನ್ಯಾಲೋಕದ ಧ್ವನಿ

ಎಂ.ಎಸ್. ರಘುನಾಥ್ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಇಂಗ್ಲಿಷ್‌ ಸಾಹಿತ್ಯಕ್ಕೆ ಜಾಗತಿಕ ಮಾನ್ಯತೆ ಸಿಗುವಲ್ಲಿ ಶ್ರಮಿಸಿದ ಪ್ರಮುಖರಲ್ಲಿ ಸಿಡಿಎನ್‌ ಕೂಡ ಒಬ್ಬರು. ಅವರು ನಿರ್ಮಿಸಿದ ಧ್ವನ್ಯಾಲೋಕ ಪೂರ್ವ–ಪಶ್ಚಿಮ ಸಾಹಿತ್ಯದ ಸಂಗಮ ಸ್ಥಳ. ಇಂಗ್ಲಿಷ್‌ ಸಾಹಿತ್ಯದ ಈ ಮೇರು ಜನಿಸಿ ನೂರು ವಸಂತಗಳು ಸಂದುಹೋದ ಈ ಸಂದರ್ಭದಲ್ಲಿ ಅವರ ಬದುಕು–ಬರಹಗಳ ಕುರಿತು ಒಂದು ಪುಟ್ಟ ಮೆಲುಕು...

***

ಸುಮಾರು ನಲವತ್ತು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಹೈ ಕಮಿಷನರ್ ಅವರು ಮೈಸೂರು ಭೇಟಿ ನಿಮಿತ್ತ ಅಲ್ಲಿನ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್‌ನಲ್ಲಿ ಕಾಲಿಡುತ್ತಿದ್ದಂತೆ, ಸ್ವಾಗತಿಸಲು ಬಂದ ಅಧಿಕಾರಿಯೊಬ್ಬರನ್ನು ಅವರು ಮೊದಲು ಕೇಳಿದ ಪ್ರಶ್ನೆಯೆಂದರೆ, ಪ್ರೊಫೆಸರ್ ಸಿ.ಡಿ.ನರಸಿಂಹಯ್ಯ ಅವರು ಸದ್ಯ ಊರಿನಲ್ಲಿದ್ದಾರೆಯೇ? ಅವರೊಂದಿಗೆ  ಭೇಟಿಯನ್ನು ಏರ್ಪಡಿಸಬೇಕಲ್ಲ ಎಂದು. ಸುತ್ತಮುತ್ತ ಇದ್ದವರಿಗೆ ಈ ಅತಿಥಿ ಹೆಸರಿಸುತ್ತಿರುವವರು ಯಾರು ಎಂಬ ಕುತೂಹಲ. ಕೊನೆಗೆ ಅವರಿಗೆ ಅರ್ಥವಾಗದೆ ಇದ್ದಾಗ, ತಾವೇ ಆ ಬಗ್ಗೆ ವಿಚಾರಿಸಿ, ನರಸಿಂಹಯ್ಯನವರು ಊರಿನಲ್ಲಿಲ್ಲ, ಮುಂದಿನ ವಾರ ಬರುತ್ತಾರಂತೆ ಎಂದು ಹೇಳಿದಾಗ, ಅವರಿಗೆ ಸ್ವಲ್ಪಮಟ್ಟಿಗೆ ನಿರಾಸೆಯಾಯಿತಂತೆ. 

ಹೈ ಕಮಿಷನರ್ ಅವರು ನರಸಿಂಹಯ್ಯನವರ ಬಗ್ಗೆ ವಿಚಾರಿಸಲು ಕಾರಣ, ಅವರು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರಲ್ಲದೆ ‘ಫ್ಲವರಿಂಗ್ ಆಫ್ ಆಸ್ಟ್ರೇಲಿಯನ್ ಲಿಟರೇಚರ್’ ಎಂಬ ಕೃತಿಯನ್ನು ಪ್ರಕಟಿಸಿದ್ದರು. ಅವರ ಖ್ಯಾತಿ ಅಮೆರಿಕ, ಆಸ್ಟ್ರೇಲಿಯಾದಲ್ಲೆಲ್ಲ ಹರಡಿತ್ತು.

ನರಸಿಂಹಯ್ಯನವರು  ಹುಟ್ಟಿದ್ದು 1921ರ ಮೇ 21ರಂದು. ತಾಯಿ ಹೇಳುತ್ತಿದ್ದ ಜನಪದ ಹಾಡುಗಳು ಹಾಗೂ ಕತೆಗಳನ್ನು ಕೇಳಿಯೇ ಅವರು ಬೆಳೆದಿದ್ದು. ಮೈಸೂರಿನ ಮಹಾರಾಜ ಕಾಲೇಜಿನ  ಈ ಪ್ರತಿಭಾವಂತ ವಿದ್ಯಾರ್ಥಿಗೆ, ಅಲ್ಲಿನ ಪ್ರಾಧ್ಯಾಪಕರಾಗಿದ್ದ ಈಗಲ್ಟನ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟರು.  ಕೇಂಬ್ರಿಡ್ಜ್‌ನಲ್ಲಿ ನರಸಿಂಹಯ್ಯನವರಿಗೆ ಅವರ  ಶಿಕ್ಷಣದ  ಉಸ್ತುವಾರಿಯನ್ನು ಉದ್ದಾಮ ವಿಮರ್ಶಕ ಎಫ್.ಆರ್.ಲೀವಿಸ್‌ಗೆ ವಹಿಸಲಾಯಿತು. ಲೀವಿಸ್‌ ಮಾದರಿ ವಿಮರ್ಶೆಯೇ ಅವರ ಸಾಹಿತ್ಯದ ಉಸಿರಾಯಿತು. ಸುಮಾರು ನಾಲ್ಕು ದಶಕಗಳವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಶೈಕ್ಷಣಿಕ ವಲಯದಲ್ಲಿ ಆತ್ಮೀಯವಾಗಿ ಸಿಡಿಎನ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಕ್ಲೋಸ್‌ಪೇಟ್ ದಾಸಪ್ಪ ನರಸಿಂಹಯ್ಯನವರು  ತಮ್ಮ ವಿದ್ವತ್ಪೂರ್ಣ ಬರಹಗಳು ಹಾಗೂ ಭಾಷಣಗಳ ಮೂಲಕ  ಭಾರತ ಮಾತ್ರವಲ್ಲ, ತೃತೀಯ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿಯೂ ಹೆಸರುವಾಸಿಯಾಗಿದ್ದರು. ಅವುಗಳಲ್ಲಿ  ಕೆಲವು ಕಡೆ  ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ಹಾಗೆ ನೋಡಿದರೆ, ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ,  ದೆಹಲಿಯಲ್ಲಿ ಇದ್ದು  ನೆಹರೂ ಅವರ ಪತ್ರಗಳನ್ನು ಸಂಪಾದಿಸಿ ಕೊಡುವಂತೆ ಸಿಡಿಎನ್‌ ಅವರನ್ನು ಆಹ್ವಾನಿಸಿದ್ದರಂತೆ.  ಆದರೆ, ಸಿಡಿಎನ್  ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಅವರು ಇಷ್ಟಪಟ್ಟಿದ್ದರೆ, ಇಂದಿರಾ ಗಾಂಧಿಯವರ ಪ್ರಭಾವದಿಂದ, ಬೇರೊಂದು ಉನ್ನತ ಹುದ್ದೆಯನ್ನು  ಪಡೆದುಕೊಳ್ಳಬಹುದಿತ್ತು. ಆದರೂ ಸಿಡಿಎನ್ ಅವರು ಮೈಸೂರಿನಲ್ಲಿಯೇ ಇರಲು ಇಷ್ಟಪಟ್ಟರು. ಶೈಕ್ಷಣಿಕ ವಾತಾವರಣದಲ್ಲೇ ಇದ್ದು ಬೋಧನೆ ಹಾಗೂ ಸಂಶೋಧನೆಗೆ ಒಲವು ತೋರಿದರು.

ಪ್ರಿನ್ಸ್‌ಟನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ಅಲ್ಲಿ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ಭೇಟಿ  ಮಾಡಲು ಸಿಡಿಎನ್ ಹೋಗುತ್ತಿದ್ದರಂತೆ. ಪುರಾತನ ಗ್ರಂಥಗಳ ವಿವೇಕವನ್ನು ಪುನಶ್ಚೇತನಗೊಳಿಸುವಂತೆ ಹೇಳಿದ ಅವರ ಮಾತುಗಳಿಂದ ಪ್ರೇರಣೆ ಪಡೆದು ಭಾರತೀಯ ದರ್ಶನ, ಸಾಹಿತ್ಯಗಳ ಪುನರ್‌ ಅಧ್ಯಯನ ಹಾಗೂ ಪುನರ್ ಮೌಲ್ಯಮಾಪನ ಮಾಡಬೇಕೆಂಬ ಮಹೋದ್ದೇಶದಿಂದ ಭಾರತಕ್ಕೆ ಹಿಂದಿರುಗಿದರು. 

ಸಿಡಿಎನ್ ಅವರ ಪ್ರಮುಖ ಶೈಕ್ಷಣಿಕ ಸಾಧನೆಯೆಂದರೆ, ಭಾರತೀಯ ಇಂಗ್ಲಿಷ್ ಲೇಖಕರ ಬರಹಗಳು, ಕಾಮನ್‌ವೆಲ್ತ್ ರಾಷ್ಟ್ರಗಳ ಸಾಹಿತ್ಯಕ್ಕೆ ಸರಿಸಾಟಿಯಾದವು ಎಂಬುದನ್ನು ವಿಮರ್ಶೆಯ ಮೂಲಕ  ಸಾಬೀತುಪಡಿಸಿದುದು. 

ಅಂತೆಯೇ ನೆಹರೂ, ರಾಜಾರಾವ್, ಆರ್‌.ಕೆ. ನಾರಾಯಣ್, ಮುಲ್ಕ್‌ರಾಜ್ ಆನಂದ್, ಅರಬಿಂದೋ ಮುಂತಾದವರ ಸಾಹಿತ್ಯಕ್ಕೊಂದು ಘನತೆ, ಗೌರವವನ್ನು ತಂದುಕೊಟ್ಟವರು ಅವರು. ಭಾರತೀಯ ಸಾಹಿತ್ಯದಲ್ಲಿ ಭಾರತೀಯ ಸಂವೇದನೆ ಎಷ್ಟು ಮಹತ್ವದ್ದು ಎಂಬುದನ್ನೂ ಪ್ರಚುರಪಡಿಸಿದರು. ಅವರ ಪ್ರಯತ್ನದ ಫಲವಾಗಿ ಈಗ, ಭಾರತೀಯ ಇಂಗ್ಲಿಷ್ ಬರಹವೆನ್ನುವುದು, ತೃತೀಯ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಒಂದು ಅಧ್ಯಯನ ವಿಷಯವಾಗಿದೆ.

ಸಿಡಿಎನ್ ಅವರ ಪಾಲಿಗೆ ವಿಮರ್ಶೆಯ ಕಾರ್ಯವೆಂದರೆ, ವಿಷದಪಡಿಸುವಿಕೆ ಹಾಗೂ ವಿಕಸನ. ಅವರ ಮಾನವತಾ ಸಂಸ್ಕೃತಿ, ಅವರನ್ನು ವಸಾಹತುಶಾಹಿ ವಿರೋಧಿಯನ್ನಾಗಿಸಿತು. ಸಂಸ್ಕೃತಿ ಮತ್ತು ವಿಮರ್ಶೆ ಎರಡೂ ಅವರ ಪಾಲಿಗೆ ಒಂದೇ ನಡಿಗೆಯದಾಗಿವೆ. ಅವರು ಹೇಳುವಂತೆ ‘ಸಂಸ್ಕೃತಿ ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಅನುಭವವನ್ನು ಆವಾಹಿಸಿಕೊಂಡಿ
ರುತ್ತದೆ. ಸಾಹಿತ್ಯ ಎನ್ನುವುದು ಮೂಲಭೂತವಾಗಿ ಒಂದು ಸಾಂಸ್ಕೃತಿಕ ಅನ್ವೇಷಣೆ. ಸಾಹಿತ್ಯ ಮತ್ತು ಸಂಸ್ಕೃತಿಗಳು ಆಂತರಿಕ ಬದಲಾವಣೆಗೊಳ್ಳುವಂತಹವು.’

ನಮ್ಮ ಸಾಹಿತ್ಯದಲ್ಲಿ ನವ್ಯತೆ ಹಾಗೂ ನವ್ಯ ಮನೋಧರ್ಮ ಉಂಟಾಗಲು ಸಿಡಿಎನ್ ಪರೋಕ್ಷವಾಗಿ ಕಾರಣ ಎಂದು ಹೇಳಬಹುದು. ಅವರಂತೂ ಇಂಗ್ಲಿಷ್ ನವ್ಯ ಕಾವ್ಯ ಪ್ರವರ್ತಕ ಟಿ.ಎಸ್. ಎಲಿಯಟ್‌ನ ಆರಾಧಕರಾಗಿದ್ದರು. ಎಲಿಯಟ್‌ನ ‘ಕ್ರೈಟೀರಿಯನ್’ ಎಂಬ ಪತ್ರಿಕೆಯಂತೆ, ಸಿಡಿಎನ್ ‘ಲಿಟರರಿ ಕ್ರೈಟೀರಿಯನ್’ ಎಂಬ ಸಾಹಿತ್ಯದ ಮ್ಯಾಗಜಿನ್‌ಅನ್ನು ಆರಂಭಿಸಿದರು. ಕಳೆದ ಐವತ್ತು ವರ್ಷಗಳಿಂದ ಅದು ನಿರಂತರವಾಗಿ ನಡೆದು ಬರುತ್ತಿದೆ. ಸಿಡಿಎನ್ ಅವರ ಎಲಿಯಟ್‌ನ ಕಾವ್ಯದ ಬೋಧನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಅವರ ಬಹುತೇಕ ವಿದ್ಯಾರ್ಥಿಗಳು, ಅಭಿಮಾನಿಗಳು ಕನ್ನಡದಲ್ಲಿಯೂ, ನವ್ಯ ಸಾಹಿತ್ಯ, ಸಿದ್ಧಾಂತವನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾದರೆನ್ನಬಹುದು. 

ಸಿಡಿಎನ್ ಅವರ ಜೀವನದ ಪ್ರಮುಖ ಘಟ್ಟವೆಂದರೆ, ಅವರ ವಾನಪ್ರಸ್ಥಾಶ್ರಮದಲ್ಲಿ, ಅಂದರೆ ಸೇವಾ ನಿವೃತ್ತಿಯ ನಂತರ ಸ್ಥಾಪಿಸಿದ ಧ್ವನ್ಯಾಲೋಕ. ಅದನ್ನು ಹೆಸರಿಸದೇ ಅವರ ಕೊಡುಗೆಯನ್ನು ವಿಶ್ಲೇಷಿಸುವುದು ಅಪೂರ್ಣವಾಗುತ್ತದೆ. ಈ ಸಂಸ್ಥೆ, ಮೈಸೂರಿನ ಸಾಂಸ್ಕೃತಿಕ ಸೆಲೆಯಾಗಿ ಬೇರೂರಿದೆ. ಅಲ್ಲಿನ ಬೋಗಾದಿ ರಸ್ತೆಯಲ್ಲಿ, ಮೂರ್ನಾಲ್ಕು ಎಕರೆ ಪ್ರದೇಶದಲ್ಲಿ ಶುದ್ಧರೂಪದ ಹಸಿರು ಪ್ರಕೃತಿಯ ಮಡಿಲಲ್ಲಿ  ಮುಳುಗಿದೆ. ಪೂರ್ವ, ಪಶ್ಚಿಮ ಸಿದ್ಧಾಂತಗಳಲ್ಲಿ ಅತ್ಯುತ್ತಮವಾದುದರ ಸ್ವೀಕಾರಕ್ಕೆ  ಸದಾ ತುಡಿಯುತ್ತಿದ್ದ  ಸಿಡಿಎನ್, ಈ ಸಂಸ್ಥೆಗೆ ಸಮಂಜಸವಾದ ಹೆಸರನ್ನೇ ಕೊಟ್ಟಿದ್ದಾರೆ. ಈವರೆಗೆ, 120ಕ್ಕೂ ಹೆಚ್ಚು ಸಾಹಿತ್ಯದ ಸೆಮಿನಾರ್‌ಗಳನ್ನು ನಡೆಸಲಾಗಿದೆ. ಹಿರಿಯ ಕಿರಿಯ ವಿದ್ವಾಂಸರುಗಳೆಲ್ಲ ಅವುಗಳಲ್ಲಿ ಭಾಗವಹಿಸಿದ್ದಾರೆ.

ಧ್ವನ್ಯಾಲೋಕಕ್ಕೆ ಭೇಟಿ ನೀಡಿರುವ ಗಣ್ಯ ಲೇಖಕರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಲಿಯಂ ಗೋಲ್ಡಿಂಗ್, ನೈಜೀರಿಯಾದ ಚಿನುವ ಅಚಿಬೆ, ಆಸ್ಟ್ರೇಲಿಯಾ ಲೇಖಕರಾದ ಲೇ ಮರೇ, ರಾಡ್ನಿ ಹಾಲ್, ಭಾರತೀಯ ಲೇಖಕರಾದ ರಾಜಾರಾವ್, ಆರ್.ಕೆ. ನಾರಾಯಣ್, ಜಯಂತ ಮಹಾಪಾತ್ರ, ಶಿವರಾಮ ಕಾರಂತ, ಎ.ಕೆ. ರಾಮಾನುಜನ್, ಅಯ್ಯಪ್ಪ ಪಣಿಕ್ಕರ್, ಕಮಲಾ ದಾಸ್, ಕರಣ್ ಸಿಂಗ್,  ರಸ್ಕಿನ್ ಬಾಂಡ್ ಪ್ರಮುಖರು. ಅಲ್ಲಿರುವ ಮುಕ್ತ ರಂಗಮಂದಿರಕ್ಕೆ, ಅದನ್ನು ಉದ್ಘಾಟಿಸಿದ ರಾಜೀವ್ ಗಾಂಧಿಯವರ ಹೆಸರನ್ನು ಇಡಲಾಗಿದೆ. ಇಂಗ್ಲಿಷ್ ಸಾಹಿತ್ಯ ಕುರಿತ ಸೆಮಿನಾರ್‌ಗಳಷ್ಟೇ ಅಲ್ಲ, ಬೇಂದ್ರೆಯವರ ಜನ್ಮಶತಮಾನೋತ್ಸವದಲ್ಲಿ, ಅವರ ಸಾಹಿತ್ಯ ಕುರಿತು ಸೆಮಿನಾರ್ ನಡೆದಿದೆ. ದಕ್ಷಿಣ ಭಾರತದ ಭಾಷೆಗಳ ಆಯ್ದ ಸಾಹಿತ್ಯ ಕೃತಿಗಳ ಇಂಗ್ಲಿಷ್ ಅನುವಾದಕ್ಕೆ ಸಂಬಂಧಿಸಿದಂತೆ ಪ್ರತಿವರ್ಷವೂ ಕಮ್ಮಟ ನಡೆಸಿ ಅಲ್ಲಿ ಪ್ರಸ್ತುತಪಡಿಸಲಾಗುವ ಅನುವಾದವನ್ನು ‘ಸಾರಸ’ ಎಂಬ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಸಾವಿರಾರು ಪುಸ್ತಕಗಳು ಹಾಗೂ ಆಕರ ಗ್ರಂಥಗಳನ್ನು ಒಳಗೊಂಡ ಈ ಸಂಸ್ಥೆ  ಮೌಲಿಕವಾದ ಸಾಹಿತ್ಯಿಕ ಆಸ್ತಿಯೆನ್ನಬಹುದು. ಇದು ಓರ್ವ ಅಭಿಮಾನಿ ಕರೆದಿರುವಂತೆ, ಸಾಹಿತ್ಯ ಅಧ್ಯಯನದ ಆಶ್ರಮ, ಆಧ್ಯಾತ್ಮಿಕ ಕಾರಂಜಿ, ಎರಡೂ ಹೌದು.

ಧ್ವನ್ಯಾಲೋಕಕ್ಕೆ ನಲವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, ಆ ಸಂಸ್ಥೆಯನ್ನು  ಸಮರ್ಪಕವಾಗಿ ಬಳಸಿಕೊಳ್ಳುವ, ಅದರಿಂದ ತಮ್ಮ ಸಾಹಿತ್ಯದ ಸಂವೇದನೆಯನ್ನು  ಬೆಳೆಸಿಕೊಳ್ಳುವ ಹೊಣೆಗಾರಿಕೆ ಯುವ ಮನಸ್ಸುಗಳ ಮೇಲಿದೆ. ಅದೇ ಸಿಡಿಎನ್ ಅವರಿಗೆ ಸಲ್ಲಿಸಬಹುದಾದ ಗುರು ಕಾಣಿಕೆ. v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು