ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂಯಿಂಗ್‌ ಗಮ್‌ ವೃತ್ತಾಂತ

Last Updated 14 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನಿಜ ಹೇಳಬೇಕೆಂದರೆ ಲೋಲಾಳಿಗೆ ಅವತ್ತು ವಸಡು ನೋವು. ಆಗಷ್ಟೇ ಉಪಹಾರಕ್ಕೆಂದು ಸುಟ್ಟ ಬಾತುಕೋಳಿಯ ಜೊತೆಗೆ ತನ್ನಿಷ್ಟದ ಗಜ್ಜಿಗೆ ಬೀಜಗಳನ್ನು ತಿಂದು ಡೆನ್ಮಾರ್ಕ್‌ನ ದ್ವೀಪವಾದ ಸಿಲ್ಥಾಲ್ಮನ ಲೋಲ್ಯಾಂಡ ಪ್ರದೇಶದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಳು. ನೀಲಿ ಕಣ್ಣುಗಳು, ಗಾಢ ಕಂದುಬಣ್ಣದ ಕೂದಲಿನ ಜೊತೆಗೆ ಕೊಂಚ ಕಪ್ಪುಬಣ್ಣದ ತ್ವಚೆಯ ಲೋಲಾ ನಿಜಕ್ಕೂ ಸೌಂದರ್ಯದ ಖನಿ.

ಬೇಡರ ಕುಟುಂಬದ ಈ ಪೋರಿಗೆ ಮರದ ತೊಗಟೆಯಲ್ಲಿ ಸ್ರವಿಸುವ ಅಂಟನ್ನು ತೆಗೆದು ಚೂಯಿಂಗ್‌ ಗಮ್ ತರ ಜಗಿಯುವ ಚಟ. ಆ ದಿನವೂ ಅಷ್ಟೇ ಊಟದ ನಂತರ ಕಾಡಿನಲ್ಲಿ ಸುತ್ತಾಡುವಾಗ ಮರದ ತೊಗಟೆಯಿಂದ ಅಂಟನ್ನು ಎಳೆದು ಬಾಯಿಕ್ಕಿಟ್ಟುಕೊಂಡಳು. ಗಂಟೆಗಟ್ಟಲೆ ಅದನ್ನು ಜಗಿದು ಮತ್ತೆ ಅಲ್ಲೇ ತನ್ನ ಹಾದಿಯಲ್ಲಿ ತುಪಕ್ಕನೆ ಉಗಿದಳು. ಲೋಲಾಳಿಗೆ ಮುಂದೇನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಆಕೆ ತಿಂದುಗಿದ ಅಂಟು ಮಾತ್ರ ಇತಿಹಾಸ ಸೃಷ್ಟಿಸಿತೆಂಬುದು ಮಾತ್ರ ಖರೆ. ಅದೂ ಬರೋಬ್ಬರಿ 5,700 ವರ್ಷಗಳ ನಂತರ.

ಎಲ್ಲೋ ಉತ್ಖನನ ಮಾಡಿದಾಗಲೋ ಅಥವಾ ಇನ್ಯಾವುದೋ ಸಂಶೋಧನೆಯ ಸಮಯದಲ್ಲೋ ಸಿಗುವ ಮಾನವನ ಅಥವಾ ಪ್ರಾಣಿಯೊಂದರ ದೇಹದ ಭಾಗವನ್ನಿಟ್ಟುಕೊಂಡು ಅದರ ಡಿಎನ್ಎ ಪರೀಕ್ಷೆ ಮಾಡಿ ಜನ್ಮಜಾತಕ ಜಾಲಾಡುವುದು ವಿಜ್ಞಾನಿಗಳಿಗೆ ಸಲೀಸು. ಆದರೆ, ಅಂಗಾಂಗಗಳ ಹೊರತಾಗಿ ತಿಂದುಗಿದ ಸಾವಿರಾರು ವರ್ಷಗಳ ಹಳೆಯ ತ್ಯಾಜ್ಯದ ಮೇಲಿನ ಹಲ್ಲಿನ ಗುರುತು ಮತ್ತು ಎಂಜಲಿನ ಕುರುಹುಗಳನ್ನು ಆಧರಿಸಿ ಅದರ ಹಿಂದಿದ್ದ ಮಾನವನ ಹಿನ್ನೆಲೆಯನ್ನು ಪತ್ತೆಹಚ್ಚಿರುವ ಈ ಪ್ರಥಮವೊಂದು ವಿಸ್ಮಯ.

ಕೋಪನ್‌ಹೇಗನ್‌ನ ವಿಶ್ವವಿದ್ಯಾಲಯದ ತಂಡವೊಂದು ಡೆನ್ಮಾರ್ಕ್‌ ದೇಶದ ಬಾಲ್ಟಿಕ ಸಾಗರದ ದ್ವೀಪ ಸಿಲ್ಥಾಲ್ಮನ ಲೋಲ್ಯಾಂಡ ಪ್ರದೇಶದಲ್ಲಿ ಉತ್ಖನನ ನಡೆಸುತ್ತಿದ್ದಾಗ ಶಿಲಾಯುಗದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಮರದ ಅಂಟಿನ ಉಂಡೆಗಳು ಸಿಕ್ಕಿದವು. ಆ ಕಾಲದಲ್ಲಿ ಈ ಗೋಂದನ್ನು ಚೂಯಿಂಗ್ ಗಮ್‌ನಂತೆ ಜಗಿಯಲು, ವಸ್ತುಗಳನ್ನು ಅಂಟಿಸಲು ಬಳಸಲಾಗುತ್ತಿತ್ತು ಎಂಬುದಕ್ಕೆ ಹಲವು ಪುರಾವೆಗಳಿವೆ. ಹೀಗೆ ಸಿಕ್ಕ ಉಂಡೆಯೊಂದರ ಮೇಲೆ ಮಾನವನ ಹಲ್ಲಿನ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಆ ತಂಡ ಹಲವು ವರ್ಷಗಳ ಕಾಲ ನಡೆಸಿದ ಅಧ್ಯಯನದ ಪರಿಣಾಮ ಹುಟ್ಟಿದ್ದೇ ಈ ಲೋಲಾಳ
ಕಥೆ.

ಆ ಶಿಲಾಯುಗದ ಚೂಯಿಂಗ್‌ ಗಮ್ ಮೇಲೆ ನಡೆಸಿದ ಪ್ರಯೋಗಗಳು ಅದನ್ನು ತಿಂದೆಸೆದ ವ್ಯಕ್ತಿಯ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದವು. ಕ್ರಿ.ಪೂ. 3700ರಲ್ಲಿ ಬದುಕಿದ್ದ ಆ ಹುಡುಗಿಯ ವಯಸ್ಸು, ಆಕೆಯ ಮೈ ಕೂದಲಿನ ಬಣ್ಣ, ಈ ಚೂಯಿಂಗ್‌ ಗಮ್ ಎಸೆಯುವ ಪೂರ್ವದಲ್ಲಿ ಆಕೆ ತಿಂದಿದ್ದ ಆಹಾರ, ಆಕೆಯ ಬಾಯಲ್ಲಿದ್ದ ಕ್ರಿಮಿಗಳು, ಆಕೆಗೆ ಬಂದಿರಬಹುದಾದ ರೋಗ... ಹೀಗೆ ಒಂದೊಂದು ಗುಣಲಕ್ಷಣಗಳನ್ನು ಪತ್ತೆಹಚ್ಚಿದಂತೆ ಈ ಸುಳಿವುಗಳನ್ನು ಆಧರಿಸಿ ಆಕೆಯ ಒಂದು ಚಿತ್ರವನ್ನೂ ರಚಿಸಲಾಯಿತು. ಈ ಚೂಯಿಂಗ್‌ ಗಮ್ ಲೋಲ್ಯಾಂಡನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ತಂಡವು ಆ ಹುಡುಗಿಗೆ ಲೋಲಾ ಎಂದು ನಾಮಕರಣ ಮಾಡಿತು.

ತಾಜ್ಯದಿಂದ ಅದನ್ನು ಸೇವಿಸಿದ್ದ ಮಾನವನ ಸೂಕ್ಷ್ಮ ಮಾಹಿತಿಯನ್ನು ಕಂಡುಹಿಡಿದ ಈ ಜೈವಿಕ ಸಂಶೋಧನೆಯು ಈ ಕ್ಷೇತ್ರವನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ಯುತ್ತದೆಯೆಂದೇ ಜಾಗತಿಕವಾಗಿ ವಿಶ್ಲೇಷಿಸಲಾಗುತ್ತಿದೆ.

ಇದೀಗ ಲೋಲಾಳ ಪುರಾತನ ಕಾಲದ ಚೂಯಿಂಗ್ ಗಮ್ ಅನ್ನು ಹಾವರ್ಡ್‌ ವಸ್ತುಸಂಗ್ರಹಾಲಯದಲ್ಲಿ ಜೋಪಾನವಾಗಿ ಕಾಯ್ದಿರಿಸಲಾಗಿದೆ. ಆ ಅಂಟಿನ ಮೇಲಿನ ಗುರುತುಗಳು ಮಾನವನ ವಿಕಾಸದ ಬಗ್ಗೆ ಹಲವು ಹೊಸ ಮಾಹಿತಿಗಳನ್ನು ನೀಡಿದೆ. ಈ ಸಂಶೋಧನೆಯಲ್ಲಿ ಪತ್ತೆಯಾದಂತೆ ಆಕೆಗೆ ಹಾಲಿನ ಅಲರ್ಜಿಯಿತ್ತು. ಅಂದರೆ ಈ ಮೊದಲು ಅಂದಾಜಿಸಿದಂತೆ ವಿಕಾಸದ ಪಥದಲ್ಲಿ ಮಾನವ ಬೇಟೆಯಿಂದ ಕೃಷಿಯತ್ತ ಮುಖ ಮಾಡಿದ ನಂತರ ಹೈನುಗಾರಿಕೆಯ ಉಗಮವಾಗಿ ಕ್ರಮೇಣ ಆತ ಹೈನು ಉತ್ಪನ್ನಗಳನ್ನು ಜೀರ್ಣಿಸಬಲ್ಲ ಕ್ಷಮತೆಯನ್ನು ಬೆಳೆಸಿಕೊಂಡ. ಅಂದರೆ ಲೋಲಾಳ ಸಮಯದಲ್ಲಿ ಆಗಿನ್ನೂ ಕೃಷಿಯು ಆ ಪ್ರದೇಶದಲ್ಲಿ ನಡೆಯುತ್ತಿದ್ದ ಸಾಧ್ಯತೆ ಕಡಿಮೆಯೇ.

ಮಣ್ಣಿನಲ್ಲಿ ಹುದುಗಿದ್ದ ಅವಶೇಷಗಳ ನಡುವೆ ಲೋಲಾಳ ಕಥೆಯನ್ನು ಚೂಯಿಂಗ್‌ ಗಮ್ ಇಷ್ಟು ವರ್ಷ ಬಚ್ಚಿಟ್ಟಿದ್ದುಕೊಂಡಿದ್ದು ಆಶ್ಚರ್ಯವೇ ಸರಿ. ಈ ಶೋಧನೆ ಮುಂದಿನ ದಿನಗಳಲ್ಲಿ ಮಾನವನ ವಿಕಾಸದ ಬಗ್ಗೆ ಇನ್ನಷ್ಟು ಕರಾರುವಕ್ಕಾದ ಮಾಹಿತಿಯನ್ನು ಹೊರತರುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT