ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರೌಢಶಾಲೆಯ ಸುದ್ದಿ: ನಮ್ದೇ ಟಿ.ವಿ, ನಾವೇ ಆ್ಯಂಕರ್ಸು!

Last Updated 12 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನಂಜನಗೂಡು ತಾಲ್ಲೂಕು ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸುದ್ದಿಯನ್ನು ತಾವೇ ವರದಿ ಮಾಡಿ, ತಾವೇ ಆ್ಯಂಕರ್ಸ್‌ ಆಗಿ, ತಮ್ಮದೇ ಟಿ.ವಿ. ಚಾನೆಲ್‌ ನಡೆಸುತ್ತಾರೆ ಗೊತ್ತೆ?

***

ಆಗಷ್ಟೇ ಮಳ ಹನಿ ಹನಿ ಹೆಗ್ಗಡಹಳ್ಳಿಗ ಹೂದು ಮಳ್ಗಾಲ ಬತ್ತದ ಅಂತ ಹೇಳಿತ್ತು. ಅದೇ ಟೀಮಿಗ ಇಸ್ಕೂಲು ರೀಓಪನ್ ಆಗಿ ಹೊಸ ಐಕ ಬರಾಕ ಸುರು ಮಾಡಿದ್ವು. ಹಳೇ ಐಕ್ಳು ನಾವು ಒಂಜಿನ ಇಸ್ಕೂಲ ಮನ ಹಿಂದ್ಕ ಕಾಲಿ ಬಿದ್ಕಂಡಿದ್ದ ಜಾಗವ ಕ್ಲೀನ್ ಮಾಡಾಕ ಅಂತ ಯುದ್ಧಕ್ಕ ಹೋಗೋರಂಗ ಎಲ್ಕೋಟು, ಹಾರ, ಪಿಕಾಸಿ, ಕಡ್ಕತ್ತಿ, ಪೊರಕೆ ಇಂತವುಗಳನ್ನ ತಡಕಾಡಿ ತಂದು ರಂಗಕ್ಕೆ ಇಳಿದ್ಬುಟ್ವ…

ಇಂತಾ ಬ್ಯುಟಿಪುಲ್ ಚಣವ ಸೆರೆ ಹಿಡಿದು ಉಳಿಸ್ಕಬೇಕು ಅಂದ್ಕಂಡು ಪೋಟ ತೆಗಿಯೋದು, ವಿಡಿಯೊ ಮಾಡೋದು ಎಲ್ಲ ಕೆಲಸ ನಡಿತಾ ಇರುವಾಗ್ಲಿಯಾ ಆಗ್ತಿತ್ತು. ತೆಗ್ದಿರೋ ಪೋಟ ವಿಡಿಯೊ ಮಡಿಕಂಡು ಏನ್ ಮಾಡೋದು ನಾಕ್ಜನಕ ಹಂಚಬೇಕು. ಹಂಗಾರ ಏನ್ ಮಾಡೋದು?

ಅಷ್ಟೊತ್ಗ ಬಂದಿರೋದು ನೋಡಿ ಟಿ.ವಿ. ಐಡಿಯಾ. ಐಕ್ಳು ಮಾಡಿರೋ ಕೆಲ್ಸದ ವಿಡಿಯೊಕ್ಕ ಟಿ.ವಿ. ತರವಾಗಿನ ಫ್ರೇಮು ಮಡ್ಗಿ ಇಸ್ಕೂಲ ಐಕ್ಳ ವಾಟ್ಸಾಪ್ ಗ್ರೂಪಲ್ಲಿ ತೂದು ಎಸ್ದುಬುಟ್ಟೆ. ತಗಾ, ಅದ್ರ ನಾಳಕ ಇಸ್ಕೂಲ್ಮನಾಲಿ ಒಂದೇ ಪ್ರಶ್ನ ‘ಯಾವ್ ಟಿವಿಲಿ ಬಂದಿತ್ತು ಸಾ?’, ‘ಯಾವ್ ಟಿವಿಲಿ ಬಂದಿತ್ತು ಸಾ?’ ಅಂತ. ನಮ್ದೇ ಟಿ.ವಿ. ಅಂತ ಅಂದ್ನ, ಹ್ಯಾಗ್ ಮಾಡಿದ್ದು ಅಂತ ಐಕ್ಳಿಗ ಹೇಳಿದ್ನಾ ‘ವಾ..’ ಅಂದ್ರು. ಆಗ್ಲಿಯಾ ನಮ್ ಸ್ಕೂಲ್ದು ಟಿ.ವಿ. ಮಾಡಿದ್ರ ಹ್ಯಾಂಗ? ಅಂದಿ. ಅದಕ್ಕ ಕೆಲವರು ಮಾಡಿದ್ರ ಎಲ್ಲಿ ಬರ್ತದ? ಯಾರ್ ನೋಡ್ತರ? ಅಂದ್ರು. ಯೂಟ್ಯೂಬ್ಲಿ ಬರ್ತದ. ಯಾರಾರ ನೋಡ್ಲಿ, ಯಾರ್ ನೋಡ್ದಿದ್ರ ನಾವೇ ನೋಡೋಣ. ನಾವ್ ಮಾಡಿರೋದಕ್ಕ ದಾಖಲೆ ಇರ್ತದ ಅಂದ್ಕಂಡು ‘ನಮ್ ಸ್ಕೂಲ್ ಟಿ.ವಿ’ ಯೂಟ್ಯೂಬ್ ಚಾನಲ್ ಜುಲೈ 9ರಂದು ಆರಂಭವಾಗಿ ಮೊದಲ ಕಂತು ಪ್ರಸಾರ ಆಯ್ತದ. ಇದ್ಕ ‘ನಮ್ ಸ್ಕೂಲ್ ಟಿ.ವಿ’ ಅಂತ ಹೆಸರಿಟ್ಟಿದ್ದು 10ನೇ ಕ್ಲಾಸು ಕುಸುಮ.

ಯಾರ್ ನೋಡ್ತರ ಅಂದ್ಕಂಡಿದ್ದೋ…. ಆದ್ರ ನೋಡ್ದವ್ರು ವಸಿ ಜನ್ವಾ!! ನಮ್ ನಂಜನಗೂಡು ಬಿಇಓ ಸಿ.ಎನ್. ರಾಜು ಸರ್ ಸ್ಯಾನೆ ಕುಸಿಪಟ್ರು. ಮುಂದ್ಕ ಅವ್ರು ಎಲ್ಲಾ ಎಪಿಸೋಡ್ನೂವಿ ನೋಡ್ಬುಟ್ಟು ಬ್ಯಾರೆಯವ್ರಿಗ ಹಂಚಿದ್ರು. ಹಂಗೆ ನಾಡಿನ ನೂರಾರು ಜನ ಹಿರಿಯರು ಫೋನ್ ಮಾಡವ್ರ, ಮೆಸೇಜ್ ಮಾಡವ್ರ ಮತ್ತ ನಮ್ ಚಾನಲಿಗ ಸಬ್‌ಸ್ಕ್ರೈಬ್ ಮಾಡವ್ರ.

ನಮ್ ಸ್ಕೂಲ್ ಟಿ.ವಿ. ಎರಡ್ನೇ ಎಪಿಸೋಡಲ್ಲಿ ಜೇಮ್ಸ್ ವೆಬ್‌ ಟೆಲಿಸ್ಕೋಪ್ ಬಗ್ಗ ಕಾರ್ಯಕ್ರಮ ಮಾಡಿದ್ವಿ. ಅದ್ನ ನೋಡಿ ನಾಗೇಶ್ ಹೆಗಡೆ ಸರ್ ಚೋಚುಗ ಪಟ್ಕಂಡ್ರು ‘ನಾನು ಪ್ರಜಾವಾಣಿಗ ಟೆಲಿಸ್ಕೋಪ್ ಬಗ್ಗ ಬರ್ದಿದೀನಿ, ಅದು ಪ್ರಿಂಟ್ ಆಗಿ ನನ್ ಕಯ್ಗ ಬರೋ ಮೊದ್ಲು ಹೆಗ್ಡಳ್ಳಿ ಐಕ್ಳು ಟೆಲಿಸ್ಕೋಪ್ ಬಗ್ಗ ಸ್ಯಾನೆ ಚಂದವಾಗಿ ಕಾರ್ಯಕ್ರಮ ಮಾಡಿದ್ರಲ್ಲ!’ ಅಂತ ಬರ್ದು ಕಳ್ಸವ್ರ. ಇದಲ್ವಾ ನಮ್ಗ ಕುಸಿ?

ಹೊಸ ಹೊಸ ವಾರ ಬಂದಂಗ ಹೊಸ ಎಪಿಸೋಡಿಗ ಹೊಸ ಆ್ಯಂಕರ್ಸು ಬಂದು ಸುದ್ದಿ ಓದಾಕ ಕುಂತ್ರು. ಕೆಲವ್ರಿಗ ಈ ವಾರ ತನಗ ಸಿಕ್ಕಿಲ್ಲ ಅಂದ್ಕಂಡು ಬೇಜಾರಾಗಿದ್ದು ನಡ್ದದ. ಜಿನ ಜಿನ ನಮ್ ಸ್ಕೂಲ್ ಟಿ.ವಿ. ನೋಡೋರು ಹೆಚ್ಗಂಡ್ರು. ಅದ್ನ ನೋಡಿ ಬ್ಯಾರೆ ಇಸ್ಕೂಲ ಮಾಸ್ಟ್ರುಗಳು ಚನ್ನಾಗದ ನಮ್ಗೂ ವಸಿ ಹೇಳ್ಕೊಡಿ ಹ್ಯಾಂಗ ಮಾಡೋದು ಇದ್ನ ಅಂತ ಕೇಂಡ್ರು. ಇತ್ತಗ ಕೆಲವ್ರು ಹಿರಿಯರು ಹೀಂಗ ಮಾಡಿ ಚನ್ನಾಗಾಯ್ತದ ಅಂತ ಸಲಹೆ ಕೊಟ್ರು. ಅವುಗಳನ್ನ ಕೇಳ್ಕಂಡು ನಮ್ ಟಿ.ವಿ. ಜಿನ ಜಿನ ಹೊಸದಾಯ್ತ ಅದ. ನಮ್ ಸ್ಕೂಲ್ ಟಿ.ವಿ. ನೋಡ್ಕಂಡು ಎರಡ್ಮೂರು ಇಸ್ಕೂಲವ್ರು ಟಿ.ವಿ. ಸುರು ಮಾಡರ. ಒಂದು ವಾರ ಹೊಸ ಎಪಿಸೋಡು ಅಪ್ಲೋಡ್ ಮಾಡಿಲ್ಲ ಅಂದ್ರ ‘ಯಾಕ್ ಈ ವಾರ ಬಂದಿಲ್ಲ?’ ಅಂದ್ಕಂಡು ಫೋನ್ ಮಾಡಿ ಕೇಳ್ತರ. ಇದಲ್ವಾ ನಮ್ಗ ಕುಶಿ.

ನಮ್ ಇಸ್ಕೂಲ ಕೈತೋಟದ ಕೆಲ್ಸ ಮಾಡ್ವಾಗ ತಮಾಸಿಗ ಅಂತ ಸುರು ಮಾಡಿದ್ದ ಈ ಟಿ.ವಿ. ಇಂದ್ಗ ಅರ್ವತ್ತು ಸಾವ್ರಕ್ಕೂ ಹೆಚ್ಚು ವೀವ್ಸ್ ಕಂಡದ. ಆರ್ನೂರಕ್ಕೂ ಹೆಚ್ಚು ಸಬ್‌ಸ್ಕ್ರೈಬ್ ಆಗದ. ಶನಿವಾರ ಜಿನ ಬ್ಯಾಗ್ನೆ ಇಸ್ಕೂಲು ಬುಡ್ತದಲ್ಲ ಅವಾಗ ನಾವು ಟಿ.ವಿ.ಗ ರೆಕಾರ್ಡಿಂಗ್ ಮಾಡ್ಕತೀವಿ. ಭಾನ್ವಾರ ಜಿನ ಬೆಳ್ಗನಾಗ ಹೊಸ ಎಪಿಸೋಡು ಅಪ್ಲೋಡ್ ಆಯ್ತದ. ನಮ್ ಸ್ಕೂಲ್ ಟಿ.ವಿ.ನ ಯಾರ್ ನೋಡ್ತರ ಅಂತಿದ್ರು ನಮ್ ಐಕ. ಐದು ತಿಂಗ ಕಳ್ದದ. ಕನ್ನಡ ನಾಡು ನಮ್ ಟಿ.ವಿ. ನೋಡ್ತದ ಅಂಬೋದೇ ನಮ್ ಸಂಭ್ರಮ. ನೀವು ನೋಡಿ, ನಿಮ್ ಇಸ್ಕೂಲಲ್ಲಿ ನಿಮ್ದೇ ಟಿ.ವಿ. ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT