ಭಾನುವಾರ, ಜೂನ್ 20, 2021
29 °C

ಮಹಾಶಿವ ನಡೆದುಬಂದ ದಾರಿ

ವಿ.ಚಂದ್ರಶೇಖರ ನಂಗಲಿ Updated:

ಅಕ್ಷರ ಗಾತ್ರ : | |

ಹರಪ್ಪಾ ಸಂಸ್ಕೃತಿಯ ಅವಶೇಷಗಳಿಂದ ಹಿಡಿದು ಕುವೆಂಪು ಅವರ ಅದ್ರಿಶಿವ/ ಜಲಗಾರ ಶಿವ ಮತ್ತು ಕವಿಬೇಂದ್ರೆಯವರ ಶ್ರಾವಣಮಾಸ ಶಿವನವರೆಗೆ ವಿವಿಧ ಉಲ್ಲೇಖಗಳನ್ನು ಗಮನಿಸಿದರೆ ಸೃಷ್ಟಿಕ್ರಿಯೆ, ಸೃಷ್ಟಿಶಕ್ತಿ , ನಿಸರ್ಗಚೈತನ್ಯ ವನ್ನೇ 'ಶಿವ'ಎಂದು ಕರೆದಿರುವುದು ಸುಸ್ಪಷ್ಟವಾಗಿದೆ. ಇದನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಣೆ ಮಾಡುವುದು ಈ ಟಿಪ್ಪಣಿಯ ಉದ್ದೇಶ. ಇದನ್ನು ಮಹಾಶಿವರಾತ್ರಿಯ ಸ್ಮರಣೆಗೆ ಅರ್ಪಿಸಲಾಗಿದೆ. ಓಂ ನಮಃ ಶಿವಾಯ ! 

ಹರಪ್ಪಾ ಸಂಸ್ಕೃತಿಯ ಮುದ್ರಿಕೆಗಳು

ಪ್ರಪಂಚದ ಅತ್ಯಂತ ಪ್ರಾಚೀನವಾದ ನದಿ ದಂಡೆಯ ನಾಗರಿಕತೆಗಳ ಪೈಕಿ , ಹರಪ್ಪಾ ಮೊಹೆಂಜದಾರೊ ಅಗೆತಗಳಲ್ಲಿ ಲಭ್ಯವಾದ ಸುಟ್ಟಜೇಡಿಮಣ್ಣಿನ ಸೀಲು ಅಥವಾ ಮುದ್ರಿಕೆಗಳಲ್ಲಿ 'ಪಶುಪತಿ' ಬಹು ಮುಖ್ಯವಾದುವು. ಪಶುಪತಿ ಎಂದರೆ 'ಲಾರ್ಡ್ ಆಫ್ ಅನಿಮಲ್ಸ್' ಎಂದರ್ಥ. "ಪಶುವಾನು ಪಶುಪತಿ ನೀನು" ಎಂಬ ಬಸವಣ್ಣನ ವಚನವೂ ಇದೇ ಅರ್ಥದಲ್ಲಿದೆ.

ಶಿಶ್ನ+ಯೋನಿ ಸಮನ್ವಯ ಲಿಂಗಂ

ಪಶುಪತಿಯ ಕಲ್ಪನೆಗೂ ಮುಂಚೆ ಆದಿ ಮಾನವರ ಕಾಲದಲ್ಲಿ ಸೃಷ್ಟಿಕ್ರಿಯಾಕಾರಕ ಯೋನಿ ಮತ್ತು ಲಿಂಗಪೂಜಾಪದ್ಧತಿ ಇತ್ತು . ಇದನ್ನು ಸಂಸ್ಕೃತಿಶಾಸ್ತ್ರಜ್ಞರು ಫಲವಂತಿಕೆ ಆರಾಧನೆ ಎಂದಿದ್ದಾರೆ. ಇಂದು ಲಜ್ಜಾಗೌರಿ ಎಂದು ಕರೆಯಲ್ಪಡುವ ಯೋನಿಪ್ರಧಾನ
ಪೂಜೆಯಾಗಲೀ, ಊರ್ಧ್ವರೇತೇಶ್ವರ ಎಂದು ಕರೆಯಲ್ಪಡುವ ಶಿಶ್ನಪ್ರಧಾನ ಪೂಜೆಯಾಗಲೀ - ಇವು ಫಲವಂತಿಕೆಯ ಆಚರಣೆ ಅಥವಾ ಹಬ್ಬಗಳು. ಮಾನವ ಸಂತಾನ ಸೃಷ್ಟಿಕ್ರಿಯೆ ನಿಸರ್ಗಸಹಜವಾದ ಸಂಗತಿ! ಸತ್ಯಂ ಶಿವಂ ಸುಂದರಂ!

ನಿಸರ್ಗಸಹಜ ಉದ್ಭವ ಲಿಂಗಗಳು

ಲೈಂಗಿಕ ಕ್ರಿಯಾಕಾರಕ ಯೋನಿ ಮತ್ತು ಶಿಶ್ನ ಪವಿತ್ರವೆಂಬ ಭಾವನೆ ಬೇರೂರಿದಾಗ ‘ಯದ್ ಭಾವಂ ತದ್ ಭವತೀ’ ಎಂಬಂತೆ ಮನುಷ್ಯರು ಸಮಸ್ತ ಸೃಷ್ಟಿಯಲ್ಲಿ , ಸೃಷ್ಟಿಜೀವಿಗಳ ಚಟುವಟಿಕೆಯಲ್ಲಿ ಅದನ್ನೇ ಕಂಡರು. ಸುಣ್ಣದ ಶಿಲೆಯ ಬೆಟ್ಟದ ಗುಹೆಗಳಲ್ಲಿ ಮತ್ತು ಹಿಮಾಲಯ ಪರ್ವತದ ಗುಹೆಗಳಲ್ಲಿ 'ಸ್ವಯಂಭು'ವಾಗಿ ಮೂಡುವ ನೆಲತೊಂಗಲು ಮತ್ತು ತೂಗುತೊಂಗಲು ವಿನ್ಯಾಸಗಳಲ್ಲಿ ಶಿವಸಂಸ್ಕೃತಿಯನ್ನು ಮನಗಂಡರು. ದಾಂಡೇಲಿಯ ಕವಳಾ ಮತ್ತು ಉಳವಿಯ ಗುಹಾಸರಣಿಗಳು , ಹಿಮಾಲಯ ಪರ್ವತದ ಅಮರನಾಥ ಗುಹೆ 'ನಿಸರ್ಗದಲ್ಲಿ ಶಿವಸಂಸ್ಕೃತಿಯ ಕಾಣ್ಕೆ'ಗೆ ನಿದರ್ಶನ. ಇವುಗಳ ಜೊತೆಗೆ ಕಣ್ಣಿಗೆ ಬಿದ್ದ ನಿಸರ್ಗಶಿಲೆ, ಸಾಲಿಗ್ರಾಮ, ದುಂಡುಮೊಲೆ, ನಾಗಲಿಂಗ ಪುಷ್ಪ , ಆಡಿನ ಪಿಚಿಕೆ, ಗುಂಡನೆಯ ಅಣಬೆ ಮುಂತಾದ ಎಲ್ಲವನ್ನು 'ಲಿಂಗರೂಪಿ ಶಿವತತ್ವ'ವೆಂದೇ ತಿಳಿದರು. ಆದಿವಾಸಿ ಬುಡಕಟ್ಟು ಜನರಲ್ಲಿ 'ಆಳಂಬಿ (=ಅಣಬೆ) ನೂರಾಳೊಡೆಯ' ಎಂದರೆ ಶಿವನೆಂದೇ ಅರ್ಥವೆಂದು ಗೆಳೆಯ ಲಕ್ಷ್ಮೀಪತಿ ಕೋಲಾರ ಬರೆದಿದ್ದಾರೆ.

ಮಾನವರೂಪಾಂತರ ಶಿವ ಶಿವಾಣಿ (Anthropomorphic Shiva Parvathi)

‘ತತ್ವವಿಚಾರ ತಲೆಗೆ ಹೋಗುವುದಿಲ್ಲ ; ರೂಪಕಲ್ಪನೆ ಕಣ್ಣಿಗೆ ಇಳಿಯುತ್ತದೆ’ ಎಂಬ ಮಾತು ತುಂಬಾ ಸತ್ಯ.ಮೇಲ್ಕಂಡ ಶಿವತತ್ವ ವಿಚಾರಪ್ರಸಾರಕ್ಕೆ ಶಿವ ಶಿವಾಣಿಯರ ಪುರಾಣ ಕಥಾಲೋಕವೇ ತೆರೆಯಿತು. ಶಿವಪುರಾಣದ ಕತೆಗಳನ್ನು ಶಿವರಾಮಕಾರಂತ ಅವರು ಬರೆದಿರುವ 'ನಮ್ಮ ಅಳತೆಯನ್ನು ಮೀರಲಾರದ ದೇವರು' ಲೇಖನಗವಾಕ್ಷದ ಮೂಲಕ ಅರ್ಥಮಾಡಿಕೊಳ್ಳಬೇಕು. Mythology ಗೂ Sociology ಗೂ ಇರುವ ಸಂಬಂಧವನ್ನು ಜನ್ಯ ಜನಕ ಭಾವದಲ್ಲಿ ಗ್ರಹಿಸಬೇಕು. ಶಿವಪಾರಮ್ಯ ಮತ್ತು ವಿಷ್ಣುಪಾರಮ್ಯ ಪ್ರತಿಪಾದನೆಯ ಅಂಗವಾಗಿ ಶಿವಪುರಾಣ/ವಿಷ್ಣುಪುರಾಣ ಮಧ್ಯೆ ತೀವ್ರಸ್ಪರ್ಧೆಯೇ ಹುಟ್ಟಿತು. ಆದರೆ ಶಿವ ಶಿವಾಣಿಯ ರೂಪಕಲ್ಪನೆಯಲ್ಲಿ ನಿಸರ್ಗೀಕರಣದ ಆಹಾರ್ಯ ಇರುವುದನ್ನು ಮರೆಯಬಾರದು.

ಶರಣ ಶಿವತತ್ವ ವಿಚಾರ

 ಹನ್ನೆರಡನೆಯ ಶತಮಾನದ 'ಕಲ್ಯಾಣದ ಶರಣರು' ಕನ್ನಡ ಜನಪದರ ಪಾಲಿಗೆ ತಾಯಿತತ್ವದ ಪ್ರತೀಕವಾದರು. ಲಿಂಗ ಸೋಂಕು ಮತ್ತು ಮಾನವನಿರ್ಮಿತವಾದ ರೂಪದ ಕೋಟಲೆಗೊಳಗಾಗದ ಶರಣರು ನಿಸರ್ಗದ ಚೈತನ್ಯಶಕ್ತಿಯನ್ನೇ 'ಶಿವ' ನೆಂದು ಮನಗಂಡರು. ಶಿವಪುರಾಣದಲ್ಲಿರುವ ಶಿವನ ಸಹಸ್ರನಾಮಗಳಿಗೆ ಎಳ್ಳುನೀರು ಬಿಟ್ಟು , ನವಪದ ನಿರ್ಮಾಣಗಳಾದ - ಕೂಡಲಸಂಗಮದೇವ, ಗುಹೇಶ್ವರ, ಚೆನ್ನಮಲ್ಲಿಕಾರ್ಜುನ, ಯೋಗಿನಾಥ ಇತ್ಯಾದಿ ಅಂಕಿತನಾಮಗಳನ್ನು ಇಟ್ಟರು. 

ಅಂಬಿಗರ ಚೌಡಯ್ಯನು ಪುರಾಣ ಶಿವನ ಕಲ್ಪನೆಯನ್ನೇ ನಿರಾಕರಿಸಿ ‘ಹೆಸರಾವುದೂ ಇಲ್ಲ’ ವೆಂದು ತನ್ನ ಸ್ವಂತ ಹೆಸರನ್ನೇ ಅಂಕಿತ ಮಾಡಿಕೊಂಡನು. ಕಾಡಿನೊಳಗಾದ ಶಂಕರಪ್ರಿಯ, ತೆಲುಗೇಶ್ವರ, ಜಾಂಬೇಶ್ವರ, ಆತುರವೈರಿ ಮಾರೇಶ್ವರ ಮುಂತಾದ ಅಂಕಿತಗಳು ಕ್ರಾಂತಿಕಾರಕ ಶಿವತತ್ವದ ಅಭಿವ್ಯಕ್ತಿಗಳೇ ಆಗಿವೆ.

ಶರಣಸಂಸ್ಕೃತಿ ಕಾವ್ಯಶಿವ ತತ್ವ 

ಪ್ರಭುದೇವರ ರಗಳೆಯನ್ನು ಬರೆದ ಹರಿಹರನು ಕಾಮಲತೆಯ ಮರಣಪೀಡಿತ ಅಲ್ಲಮಪ್ರಭು ನೆಲವನ್ನು ಕೆರೆಯುತ್ತಿದ್ದಾಗ,ಭೂಗತ ದೇವಾಲಯದ ಗೋಪುರಕಲಶ ಕಂಡು ‘ಮುಕ್ತ್ಯಂಗನೆಯ ಕುಚದಕುಡಿ’ಯ ರೀತಿಯಲ್ಲಿತ್ತೆಂದು ವರ್ಣಿಸಿದ್ದಾನೆ. ಕಣ್ಣಪ್ಪ ದೇವರ ರಗಳೆಯಲ್ಲಿ ಶಿವಾಲಯದ ಅರ್ಚಕನಿಗಿಂತ ಬೇರೆಯಾದ ರೀತಿಯಲ್ಲಿ ರೂಢಿಗೆಟ್ಟ ಶಿವಭಕ್ತಿಯನ್ನು ನಿರೂಪಣೆ ಮಾಡಿರುವ ಹರಿಹರನು ಕಣ್ಣಪ್ಪನ ಭಕ್ತಿ ವರ್ಣಿಸುವಾಗ ಶಿವನಿಗೆ ‘ಹಸಿದಯ್ಯ’ನೆಂದು ಹೆಸರಿಟ್ಟಿದ್ದಾನೆ. ಹಸಿದವನೇ ಶಿವನೆಂಬ ಹರಿಹರನ ಕಾಣ್ಕೆ ಇಲ್ಲಿದೆ. 
ರಾಘವಾಂಕ ವಿರಚಿತ ‘ಸಿದ್ಧರಾಮಚರಿತೆ’ಯಲ್ಲಿ ಭೂತದಯಾಪರನಾದ ಸಿದ್ಧರಾಮ ಸಾಕ್ಷಾತ್ ಶಿವನಂತೆ ಚಿತ್ರಣಗೊಂಡಿದ್ದು ‘ಶಿವಸಿದ್ಧರಾಮ’ನೆಂಬ ಅಭೇದಕಲ್ಪನೆ ಇದೆ. ಇದೇ ಹಾದಿಯಲ್ಲಿ ನಡೆದ ಚಾಮರಸನು 'ಪ್ರಭುಲಿಂಗ'ವೆಂಬ ಅಭೇದಕಲ್ಪನೆಯಿಂದ 'ಪ್ರಭುಲಿಂಗಲೀಲೆ' ಯನ್ನು ರಚಿಸಿದ್ದಾನೆ. ಸಂತ ಶಿಶುನಾಳ ಶರೀಫರು ತಮ್ಮ ತತ್ವಪದ ಹಾಡುತ್ತಾ "ಅಲ್ಲಾಮಲಿಂಗ"ವೆಂದು ಹೇಳಿ ‘ಈಶ್ವರ ಅಲ್ಲಾ ತೇರೇ ನಾಮ್’- ತತ್ವವನ್ನು ಎತ್ತಿಹಿಡಿದಿದ್ದಾರೆ.

ಆಧುನಿಕ ಸಾಹಿತ್ಯ ಶಿವ ತತ್ವ :

‘ಮಲೆಯನಾಡೆನಗೆ ತಾಯಿಮನೆ, ಕಾಡು ದೇವರಬೀಡು, ಗಿರಿಯಮುಡಿ ಶಿವನ ಗುಡಿ, ಬನವೆಣ್ಣೇ ಮೊದಲಿನಾ ಮನದನ್ನೆ’ ಎಂದು ಗಿರಿಶಿವನ ಕಲ್ಪನೆಯನ್ನು ಕೊಟ್ಟ ಕುವೆಂಪು ಅವರು ‘ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ’ ಎಂದು ಹೇಳಿದ್ದಾರೆ. ಜಲಗಾರ ನಾಟಕದಲ್ಲಿ ಶಿವನನ್ನು 'ಜಗದ ಜಲಗಾರ' ಮಾಡುವುದರ ಮೂಲಕ ನಮಗೆ 'ಅಸ್ಪೃಶ್ಯ ಶಿವ'ನ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ. 'ದೇವರು ರುಜುಮಾಡಿದನು' ಕವಿತೆಯಲ್ಲಿ ನಿಸರ್ಗದ ಚೈತನ್ಯಶಕ್ತಿಯೇ ದೇವರು ಮಾಡಿದ ಪ್ರತ್ಯಕ್ಷ ರುಜುವೆಂದು ರುಜುವಾತು ಮಾಡಿದ್ದಾರೆ. 
ಕವಿ ಬೇಂದ್ರೆಯವರು ತಮ್ಮ ಶ್ರಾವಣದ ಹಾಡುಗಳಲ್ಲಿ ಶಿವನ ಸಾಕ್ಷಾತ್ಕಾರ ದರ್ಶನ ಮೂಡಿಸಿದ್ದಾರೆ:

‘ಆಕಾಶ ಅನಸತದ ಮಹಾಲಿಂಗ 
ನೆಲ ಅಗಲ ಪೀಠದ್ಹಾಂಗ 
ಗುಡ್ಡ ಗುಡ್ಡ ಸ್ಥಾವರಲಿಂಗ 
ಅವಕ ಅಭ್ಯಂಗ ಎರಿತಾವನ್ನೋ ಹಾಂಗ
ಸುತ್ತೆಲ್ಲಾ ಮೋಡ ಕೂಡ್ಯಾವ ನೋಡಾ’...

ಈ ಶ್ರಾವಣ ಶಿವಲಿಂಗದ ಕಲ್ಪನೆಯಲ್ಲಿ ಮಳೆಗಾಲವೇ ಶಿವತತ್ವವಾಗಿ ಮೂಡಿದೆ. ಯಾವ ದೇವರು ಹೇಗಾದರೂ ಇರಲಿ, ಶಿವನು ಮಾತ್ರ 'ನಿಸರ್ಗದೇವರು' ಎಂಬ ತತ್ವ ಮರೆಯದಿರೋಣ. ಇದೇ ಸತ್ಯಂ ಶಿವಂ ಸುಂದರಂ! 

(ಲೇಖಕರು ಮಾಲೂರು ತಾಲೂಕು ಲಕ್ಕೂರು ಗ್ರಾಮದಲ್ಲಿ ಮಹಾಶಿವರಾತ್ರಿ ಉತ್ಸವ ಉದ್ಘಾಟನೆ ಮಾಡಿದ ಸಂದರ್ಭದಲ್ಲಿನ ಭಾಷಣವನ್ನು ಆಧರಿಸಿದ ಕಿರು ಲೇಖನ ಇದಾಗಿದೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು