ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಂದೂರಿನ ಕಿನ್ನರಲೋಕ

Last Updated 29 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಪಿರಿಯಾಪಟ್ಟಣದ ಗ್ರಾಮಾಂತರ ಪ್ರದೇಶದಲ್ಲಿ ಅಂಗವೈಕಲ್ಯದಿಂದ, ಖಿನ್ನತೆಯಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ‘ಅನಾಹತ’ ಕೇಂದ್ರ ಹೊಸ ಬಾಳನ್ನು ಕೊಟ್ಟಿದೆ. ಮೌನದ ಚಿಪ್ಪಿನೊಳಗೆ ಜಾರಿ, ಕತ್ತಲಲ್ಲಿ ಕಳೆದುಹೋಗಿದ್ದ ಬಾಲ್ಯವೀಗ ನವೋತ್ಸಾಹದಿಂದ ಪುಟಿದೆದ್ದಿದೆ. ಗುಬ್ಬಚ್ಚಿಗಳ ಚಿಂವ್‌ಗುಡುವ ಸದ್ದಿನೊಂದಿಗೆ ಮಕ್ಕಳ ಕಲರವದ ಜುಗಲ್‌ಬಂದಿಯೂ ಕೇಳಿಬರುತ್ತಿದೆ...

‘ಇದೇ 30ರಂದು ನನ್ನ ಮದುವೆ. ಆದರೆ, ನನಗೆ ಈಗಾಗಲೇ 500 ಮಕ್ಕಳು’ ಎಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ರಾವಂದೂರಿನ ‘ಅನಾಹತ’ ಕೇಂದ್ರದ ಮುಖ್ಯಸ್ಥ ಕಿರಣ್‌ಕುಮಾರ್‌, ಒಮ್ಮೆ ಜೋರಾಗಿ ನಕ್ಕುಬಿಟ್ಟರು. ಅವರೊಂದಿಗೆ ಮಾತನಾಡುತ್ತಲೇ ಕೇಂದ್ರದ ಆವರಣದಲ್ಲಿ ಕಣ್ಣಾಡಿಸಿದರೆ, ಮಗುವೊಂದು ಮರಳಿನಲ್ಲಿ ಸೊಂಟದವರೆಗೆ ಹೂತಿದ್ದರೂ ನಗುತ್ತಾ ನಿಂತಿತ್ತು. ಕೆಸರಿನಲ್ಲಿ ಕಾಲು ಎಳೆದು ಹಾಕುತ್ತಿದ್ದ ಮತ್ತೊಂದು ಮಗುವಿನ ಮುಖದಲ್ಲೂ ಮಂದಹಾಸ ತುಂಬಿತ್ತು.

‘ರಾಜ್ಯದಲ್ಲಿ ಹೆಚ್ಚು ತಂಬಾಕು ಬೆಳೆಯುವ ಪ್ರದೇಶ ನಮ್ಮದು. ತಂಬಾಕು ಬೆಳೆಯುವುದಕ್ಕೂ (ತಿನ್ನುವುದಕ್ಕಲ್ಲ!) ಸಮುದಾಯದ ಆರೋಗ್ಯಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ತಜ್ಞರೇ ಅಧ್ಯಯನ ನಡೆಸಿ ಹೇಳಬೇಕು. ಆದರೆ, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಬುದ್ಧಿಮಾಂದ್ಯ ಹಾಗೂ ಅಂಗವಿಕಲ ಮಕ್ಕಳ ಸಂಖ್ಯೆ ಹೆಚ್ಚಾಗಿದೆ’ ಎಂದು ಕಿರಣ್‌ ಹೇಳಿದರು.

ಪಿರಿಯಾಪಟ್ಟಣದ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಮಕ್ಕಳು ಜನಿಸಿದರೆ ‘ದೇವರು ಅವರ ಹಣೆಬರಹದಲ್ಲಿ ಬರೆದಿದ್ದೇ ಇಷ್ಟು’ ಎಂದು ಪಾಲಕರು ಸುಮ್ಮನಿರುತ್ತಿದ್ದುದೇ ಹೆಚ್ಚು. ದೈಹಿಕ ಊನತೆಯನ್ನು ಸರಿಪಡಿಸಲು ಫಿಸಿಯೊಥೆರಪಿಗಾಗಿ ಮೇಲಿಂದ ಮೇಲೆ ಮೈಸೂರಿಗೆ ಕರೆದೊಯ್ಯುವಷ್ಟು ಉಳ್ಳವರೂ ಅವರಲ್ಲ. ಹೀಗಾಗಿ, ಸರಿಪಡಿಸಬಹುದಾದ ಆರೋಗ್ಯ ಸಮಸ್ಯೆಯೊಂದು ಹಳ್ಳಿಗಳ ಮನೆಗಳಲ್ಲಿ ಹಾಸಿ, ಹೊದ್ದು ಮಲಗಿತ್ತು.

ನಾವು ಯೋಗ ಮಾಡುವುದು ಹೀಗೆ ನೋಡಿ...

ಯೋಗ ಶಿಕ್ಷಕರಾದ ಕಿರಣ್‌, ಹೀಗೇ ಊರೂರನ್ನು ಸುತ್ತುವಾಗ ಪ್ರತೀ ಹಳ್ಳಿಯಲ್ಲೂ ಕಾಣಸಿಗುತ್ತಿದ್ದ ಇಂತಹ ಮಕ್ಕಳು ಅವರ ಗಮನವನ್ನು ಸೆಳೆದರು. ‘ಇಷ್ಟೊಂದು ಮಕ್ಕಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರಿಗೆ ನಾನು ಏನಾದರೂ ಮಾಡಬೇಕು’ ಎಂಬ ಯೋಚನೆ ಅವರಲ್ಲಿ ಮೊಳಕೆ ಒಡೆದದ್ದೇ ತಡ, ರಾವಂದೂರಿನ ಕೆರೆ ಪಕ್ಕದ ಭೂಮಿಯಲ್ಲಿ ‘ಅನಾಹತ’ ಕೇಂದ್ರದ ಸ್ಥಾಪನೆಗೆ ನಾಂದಿಯಾಯಿತು.

‘ಪಾಲಕರು ದುಡಿಯಲು ಹೋದಾಗ ವಿಶೇಷ ಆರೈಕೆ ಬೇಕಾದ ಎಷ್ಟೋ ಮಕ್ಕಳು ಮನೆಯಲ್ಲಿ ಹಾಗೇ ಮಲಗಿರುತ್ತಿದ್ದರು. ಅವರ ಮುಖದಲ್ಲಿ ಮಂದಹಾಸದ ಸುಳಿವೇ ಇರುತ್ತಿರಲಿಲ್ಲ. ಆ ಮಕ್ಕಳನ್ನು ಖಿನ್ನತೆ ಆವರಿಸಿದ್ದೂ ಎದ್ದುಕಂಡಿತು. ಮನೆಯ ಕತ್ತಲಿನ ವಾತಾವರಣದಿಂದ ಅವರನ್ನು ಬಯಲಿಗೆ ತರುವುದು ಅಗತ್ಯವಾಗಿತ್ತು. ಮೊದಲು ಆ ಕೆಲಸವನ್ನು ಮಾಡಿದೆ. ಕೆರೆಯ ಪಕ್ಕದ ಈ ಹಸಿರು ತುಂಬಿದ ಬಯಲಿಗೆ ಅವರನ್ನು ಕರೆತಂದೆ’ ಎಂದು ಕಿರಣ್‌, ಆರಂಭದ ದಿನಗಳನ್ನು ಮೆಲುಕು ಹಾಕಿದರು.

ಪಾಲಕರನ್ನು ಒಪ್ಪಿಸಿ ‘ಅನಾಹತ’ ಕೇಂದ್ರಕ್ಕೆ ಮಕ್ಕಳನ್ನು ಕರೆತರುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಮನೆಯಲ್ಲಿ ಹಾಗೇ ಮಲಗಿರಲು ಬಿಟ್ಟು ಅವರ ಭವಿಷ್ಯವನ್ನು ಅಂಧಕಾರದಲ್ಲಿ ನೂಕುತ್ತಿದ್ದರೂ ಈ ಕೇಂದ್ರಕ್ಕೆ ಕಳುಹಿಸಿದರೆ ಏನು ಅನಾಹುತ ಸಂಭವಿಸಿ ಬಿಡುವುದೋ ಎಂಬ ಆತಂಕ ಅವರಲ್ಲಿತ್ತು. ಪಾಲಕರ ಮನಸ್ಸು ಒಲಿಸಲು ‘ಅನಾಹತ’ ಕೇಂದ್ರದ ಕಾರ್ಯಕರ್ತರು ದೊಡ್ಡ ಯತ್ನವನ್ನೇ ನಡೆಸಬೇಕಾಯಿತು. ಈ ಕೇಂದ್ರಕ್ಕೆ ಯಾವುದೇ ನೆರವಿನ ಮೂಲವಿಲ್ಲ. ಹೀಗಾಗಿ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ, ಬೆಳಗಿನಿಂದ ಸಂಜೆಯವರೆಗೆ ಮಕ್ಕಳನ್ನು ಇಟ್ಟುಕೊಂಡು ಅವರ ಹೃದಯದಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತಿ, ಮುಖದಲ್ಲೊಂದು ನಗು ಅರಳಿಸಿ ಕಳಿಸಲಾಗುತ್ತದೆ. ಮಕ್ಕಳಿಗೆ ತೀರಾ ಅಗತ್ಯವಾದ ಮಾನವೀಯ ಸ್ಪರ್ಶ ಇಲ್ಲಿ ಸಿಗುತ್ತದೆ.

ಮಕ್ಕಳಲ್ಲಿ ಆವರಿಸಿದ ಖಿನ್ನತೆಯನ್ನು ಹೋಗಲಾಡಿಸಲು ಆಪ್ತ ಸಮಾಲೋಚಕರು ಅವರೊಂದಿಗೆ ಮಗುವಾಗಿ ಆಟಕ್ಕೆ ಇಳಿಯುತ್ತಾರೆ. ಮಿದುಳಿಗೆ ಕಸರತ್ತು ನೀಡುವಂತಹ ಚಟುವಟಿಕೆಗಳಲ್ಲೂ ಅವರನ್ನು ತೊಡಗಿಸುತ್ತಾರೆ. ಹುಡುಗಿಯೊಬ್ಬಳಿಗೆ ಬಟ್ಟೆ ಮೇಲೆ ಚಿತ್ರ ಹಾಕುವುದನ್ನು ಹೇಳಿಕೊಟ್ಟಾಗ, ಅವಳು ಬಲುಬೇಗ ಕಲಿತಿದ್ದಲ್ಲದೆ ಹೊಸ ಹೊಸ ವಿನ್ಯಾಸವನ್ನೂ ಸೃಷ್ಟಿಸಿದ್ದಳು. ಮಾತೇ ಬಾರದಿದ್ದ ಮಗು ‘ಅನಾಹತ’ದ ಸತತ ಪ್ರಯತ್ನದಿಂದ ‘ಅಮ್ಮ’ ಎಂದು ಕರೆದಿದ್ದು ಹಸಿರಿನ ಅಂಗಳದ ತುಂಬಾ ಆ ಧ್ವನಿ ತುಂಬಿದೆ. ನಡೆಯಲು ಆಗದಿದ್ದ ಮತ್ತೊಂದು ಮಗು ಈಗ ಸರಿಯಾಗಿ ನಡೆದಾಡುವುದಲ್ಲದೇ ವಾಲಿಬಾಲ್‌ ಆಟವನ್ನೂ ಆಡುತ್ತಿದೆ. ಇಂತಹ ಹಲವು ಯಶಸ್ಸಿನ ಕಥೆಗಳಿಂದ ಈ ಕೇಂದ್ರ ಪುಳಕ ಅನುಭವಿಸುತ್ತಿದೆ. ಬೇಕರಿ ತಿನಿಸುಗಳನ್ನು ಸಿದ್ಧಪಡಿಸುವ, ಕಲಾಕೃತಿಗಳನ್ನು ತಯಾರಿಸುವ ಪಾಠವೂ ಇಲ್ಲಿ ನಡೆಯುತ್ತದೆ. ಆಗಾಗ ನಾಟಕಗಳನ್ನು ಸಹ ಇಲ್ಲಿನ ಮಕ್ಕಳು ಆಡುತ್ತಾರೆ. ಅದಕ್ಕೆ ತಿಂಗಳಪರ್ಯಂತ ತಾಲೀಮು ನಡೆಯುತ್ತದೆ. ಆಡಿ ದಣಿದ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಪೌಷ್ಟಿಕ ಊಟವನ್ನು ಕೊಡಲಾಗುತ್ತದೆ.

ಕೇಂದ್ರದ ಮಕ್ಕಳಿಗೆ ಕಿರಣ್‌ಕುಮಾರ್‌ ಅವರಿಂದ ಬೇಕರಿ ತಿನುಸುಗಳ ತಯಾರಿಕೆ ಪಾಠ

ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು, ಅದರಲ್ಲೂ ಮುಖ್ಯವಾಗಿ ತೆವಳುವವರು ಎದ್ದು ಕೂರುವಂತೆ, ಎದ್ದು ಕೂತವರು ನಡೆದಾಡುವಂತೆ ವಿವಿಧ ಥೆರಪಿಗಳನ್ನು ನೀಡಲಾಗುತ್ತದೆ. ಸ್ಯಾಂಡ್‌ ಥೆರಪಿ, ಮಡ್‌ ಥೆರಪಿ ಇಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಚಿಕಿತ್ಸಾ ವಿಧಾನಗಳು. ಯೋಗಾಸನಗಳನ್ನೂ ಹೇಳಿಕೊಡಲಾಗುತ್ತದೆ. ಅಶ್ವಗಂಧದಂತಹ ಗಿಡಮೂಲಿಕೆಗಳನ್ನು ಬಳಸಿ, ನರಗಳಿಗೆ ಶಕ್ತಿ ತುಂಬುವಂತಹ ಟಾನಿಕ್‌ ನೀಡಲಾಗುತ್ತದೆ. ಕುಳಿತಲ್ಲಿಯೇ ಕುಳಿತಿರುತ್ತಿದ್ದ ಎಷ್ಟೋ ಮಕ್ಕಳು ಈಗ ಹೆಜ್ಜೆ ಹಾಕುವುದನ್ನು ಕಲಿತಿವೆ.

‘ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಐದರಿಂದ ಏಳು ವರ್ಷಗಳ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಬೌದ್ಧಿಕ ಹಾಗೂ ದೈಹಿಕ ವಿಕಾಸ ಸರಿಯಾಗಿ, ಅಂತಹ ಮಕ್ಕಳು ಮುಖ್ಯವಾಹಿನಿಗೆ ಮರಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದಲೇ ನಾವು ಅಂಥವರನ್ನು ಪತ್ತೆಮಾಡಿ ಆರೈಕೆ ಮಾಡುವ ಕೆಲಸದಲ್ಲಿ ತೊಡಗಿದ್ದೇವೆ’ ಎಂದರು ಕಿರಣ್‌. ಹೊರಗಿನವರಿಗೆ ಯೋಗ ತರಬೇತಿಯನ್ನೂ ನೀಡುವ ಅವರು, ಅದರಲ್ಲಿ ಬರುವ ವರಮಾನವನ್ನು ಸಹ ಕೇಂದ್ರದ ಚಟುವಟಿಕೆಗಳಿಗಾಗಿ ವ್ಯಯಿಸುತ್ತಾರೆ.

ಔಷಧೀಯ ಗಿಡಮರಗಳು, ಹಸಿರು ಸೂಸುವ ಹುಲ್ಲುಹಾಸು, ಆಟದ ಮೈದಾನ, ಹಕ್ಕಿಗಳ ಚಿಲಿಪಿಲಿ ನಡುವಿನ ಆ ವಾತಾವರಣವೇ ಮಕ್ಕಳಲ್ಲಿ ಒಂದು ನವೋಲ್ಲಾಸವನ್ನು ತುಂಬುತ್ತದೆ. ಮಕ್ಕಳ ಹಾಡಿಗೆ ಗುಬ್ಬಚ್ಚಿಗಳ ಚಿಂವ್‌ಗುಡುವ ಜುಗಲ್‌ಬಂದಿಯೂ ನಡೆಯುತ್ತದೆ. ಅವರಿಗೆ ಖುಷಿ ಕೊಡುವ ಆಟದಲ್ಲಿ ತೊಡಗಿಸುವ ಮೂಲಕ ಜೀವನೋತ್ಸಾಹ ಪುಟಿದೇಳುವಂತೆ ಮಾಡಲಾಗುತ್ತದೆ. ಜಲ ಚಿಕಿತ್ಸೆಗೆ ಅಗತ್ಯವಾದ ಈಜುಕೊಳವೂ ಇಲ್ಲಿದೆ. ಪಾದಗಳಿಗೆ ಆ್ಯಕುಪಂಕ್ಚರ್‌ ಚಿಕಿತ್ಸೆ ನೀಡುವ ಮಾರ್ಗವನ್ನೂ ನಿರ್ಮಿಸಲಾಗಿದೆ.

ಕೊರೊನಾ ನಂತರದ ಕಾಲಘಟ್ಟದಲ್ಲಿ ಕಿರಣ್‌ ಅವರ ಬಳಿಗೆ ಯೋಗ ತರಬೇತಿಗಾಗಿ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹೀಗಾಗಿ ಕೇಂದ್ರದ ಚಟುವಟಿಕೆಗಳಿಗೆ ಹಣಕಾಸಿನ ಸಮಸ್ಯೆ ಸಣ್ಣದಾಗಿ ಕಾಡುತ್ತಿದೆ. ಬಡತನದಲ್ಲೇ ಬೆಳೆದ ಕಿರಣ್‌, ಹೂವು ಮಾರುತ್ತಲೇ ಬದುಕು ಕಟ್ಟಿಕೊಂಡವರು. ಆತಿಥ್ಯ ಕ್ಷೇತ್ರದಲ್ಲಿ ದುಡಿಯುತ್ತಿದ್ದಾಗ ಅಮೆಜಾನ್‌ ಕಾಡಿನ ಸಂಶೋಧಕರೊಬ್ಬರ ಪರಿಚಯವಾಗಿ ಅಲ್ಲಿನ ಕಾಡಿನಲ್ಲೂ ತಿಂಗಳುಗಟ್ಟಲೆ ಸುತ್ತಿದವರು. ಯುರೋಪಿನಲ್ಲೂ ಕೆಲಕಾಲ ದುಡಿದವರು. ತಮ್ಮ ದುಡಿಮೆಯ ಬಹುಪಾಲು ವರಮಾನವನ್ನು ಈ ಕೇಂದ್ರಕ್ಕಾಗಿಯೇ ಸುರಿದವರು.

ಬೇರೆ ಜಿಲ್ಲೆಗಳಿಂದಲೂ ಮಕ್ಕಳನ್ನು ಇಲ್ಲಿಗೆ ಕರೆತರಬಹುದೇ ಎಂಬ ಪ್ರಶ್ನೆ ಹಾಕಿದಾಗ, ‘ಖಂಡಿತವಾಗಿಯೂ ಬರಬಹುದು. ಪಾಲಕರು ಮಗುವಿನೊಂದಿಗೆ ಬಂದು ನಾಲ್ಕಾರು ದಿನ ಇದ್ದು ಹೋಗಬಹುದು. ಅದಕ್ಕಾಗಿಯೇ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿದ್ದೇವೆ. ಯಾವುದಕ್ಕೂ ನಾವು ಶುಲ್ಕ ನಿಗದಿ ಮಾಡಿಲ್ಲ. ಅನುಕೂಲ ಇದ್ದವರು ಕೊಡಬಹುದು’ ಎಂದು ಅವರು ಉತ್ತರಿಸಿದರು. ಅಂದಹಾಗೆ, ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಾವ ಮಗುವಿಗೂ –ಬಹುತೇಕ ಎಲ್ಲರೂ ಬಡವರ ಮಕ್ಕಳೇ ಆಗಿದ್ದಾರೆ– ಕೇಂದ್ರದಿಂದ ಶುಲ್ಕವನ್ನು ಪಡೆಯಲಾಗುತ್ತಿಲ್ಲ. ಯಾರಾದರೂ ತಿಳಿದುಕೊಟ್ಟರೆ ಆ ಮೊತ್ತವನ್ನು ಕೇಂದ್ರದ ಚಟುವಟಿಕೆಗಳಿಗಾಗಿಯೇ ಬಳಸಲಾಗುತ್ತಿದೆ.

ಕೇಂದ್ರಕ್ಕೆ ಬರುವ ಪ್ರತೀ ಮಗುವಿನ ಮುಖದಲ್ಲಿ ಪುಟ್ಟದೊಂದು ಮಂದಹಾಸ ಅರಳಿದರೂ ಸಾಕು, ನನ್ನ ಜನ್ಮ ಸಾರ್ಥಕ ಎಂದು ಕಿರಣ್‌ ಹೇಳುವಾಗ, ಅವರ ಕಣ್ಣುಗಳಲ್ಲಿ ಹೊಳಪು ತುಂಬಿರುವುದು ಎದ್ದುಕಾಣುತ್ತದೆ.

ಕೇಂದ್ರದ ಕುರಿತು ಹೆಚ್ಚಿನ ಮಾಹಿತಿಗೆ: 8197799572

ಪೂರಕ ಮಾಹಿತಿ: ಎಚ್‌.ಎಸ್.ಸಚ್ಚಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT