ಸೋಮವಾರ, ಆಗಸ್ಟ್ 8, 2022
24 °C

ಸೋತೆ ಎನಬೇಡ!

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಒಂದಾನೊಂದು ಕಾಲದಲ್ಲಿ ಮಕ್ಕಳ ಅಂಕಪಟ್ಟಿಯಲ್ಲಿ ಅನುತ್ತೀರ್ಣರಾದ ವಿಷಯಗಳ ಪಕ್ಕ ‘ಫೇಲ್’ ಎಂದು ನಮೂದಿಸಲಾಗುತ್ತಿತ್ತು; ಅದೂ ಕೆಂಪು ಶಾಯಿಯಲ್ಲಿ. ಅದನ್ನು ಪಡೆದುಕೊಳ್ಳುವಾಗಲೇ ಅನೇಕ ಕೈಗಳು ನಡುಗುತ್ತಿದ್ದವು. ಇತ್ತೀಚೆಗೆ ಈ ಪದ್ಧತಿ ಬದಲಾಗಿದೆ. ಕೆಂಪುಶಾಯಿಯ ಬಳಕೆ ನಿಂತಿದೆ, ಜೊತೆಗೆ ‘ರಿ–ಅಪಿಯರ್‌’ ಎಂದು ನಮೂದಿಸಲಾಗುತ್ತಿದೆ. ಇದರಿಂದ ಏನು ಮಹಾ ಬದಲಾವಣೆ ಆಯಿತು ಎಂದು ಕುಹಕವಾಡುವವರಿಗೆ ನನ್ನ ಬಳಿ ಉತ್ತರವಿಲ್ಲ. ಆದರೆ ಈ ಬದಲಾವಣೆಯ ಫಲಾನುಭವಿಗಳನ್ನು ಕಂಡಾಗ ನನಗೆ ಸಂತೋಷವಾಗುತ್ತದೆ. ಮಾನಸಿಕ ನೆಲೆಯಲ್ಲಿ ಇದೊಂದು ಸಕಾರಾತ್ಮಕವಾದ ಪರಿಣಾಮ ಬೀರುವಂತಹ ವಿಚಾರ. ಈ ವಿಚಾರ ಕೇವಲ ವಿಷಯಗಳ ಪರೀಕ್ಷೆಗೆ ಅಥವಾ ಕಲಿಕೆಗೆ ಸಂಬಂಧಿಸಿದ್ದಲ್ಲ, ಇದು ನಿತ್ಯಜೀವನದ ಎಲ್ಲ ಕ್ಷೇತ್ರಗಳಿಗೂ ಅನ್ವಯ.

ಬದುಕಿನಲ್ಲಿ ಏರಿಳಿತ ಸಹಜ. ಸಾವು ಕೂಡ ಸಹಜವೇ. ನಕ್ಕ ದಿನಗಳೆಷ್ಟೋ ಅಳುವ ದಿನಗಳೂ ಅಷ್ಟೇ. ಹಾಗೆಂದ ಮಾತ್ರಕ್ಕೆ ಜೀವನೋತ್ಸಾಹವನ್ನು ಕಳೆದುಕೊಳ್ಳಬೇಕಿಲ್ಲ. ಕ್ಯಾನ್ಸರ್‌ನಂಥ ಕಾಯಿಲೆಗಳನ್ನು ಎದುರಿಸಿ ಗೆದ್ದವರಿದ್ದಾರೆ. ಕಷ್ಟ-ನಷ್ಟಗಳನ್ನು ಮೀರಿ ನಿಂತವರಿದ್ದಾರೆ. ಕಾಯಿಲೆಯಿಂದ ಸಾಯುವುದಕ್ಕಿಂತ ಅದರ ಭಯದಿಂದಲೇ ಹೆಚ್ಚು ಜನರು ಸಾಯುತ್ತಾರೆ ಎಂಬುದು ಹಳೆಯ ಜೋಕ್.‌ ಇದು ನಿಜವೂ ಎನಿಸುತ್ತದೆ.

ಉದಾಹರಣೆಗೆ ಒಂದು ಆತಂಕದ ವಿಷಯ ಕೇಳಿದಾಗ ಉಸಿರಾಟವೂ ಮೊದಲುಗೊಂಡಂತೆ ದೇಹದ, ಆರೋಗ್ಯದ ಎಲ್ಲ ಸೂಚಕಗಳೂ ಬದಲಾಗುತ್ತವೆ. ನೆನ್ನೆ ಮೊನ್ನೆ ನಮ್ಮನ್ನು ಕಾಡಿದ ಕೋವಿಡ್‌ ವಿಷಯದಲ್ಲೂ ಅಷ್ಟೆ. ಎಷ್ಟೋ ಜನ ತಮಗೆ ಕೊರೊನಾ ಪಾಸಿಟಿವ್‌ ಎಂದು ತಿಳಿದ ಕೂಡಲೇ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಇದು ಆತಂಕದಿಂದ ಆದದ್ದೇ ಹೊರತು ಅಷ್ಟೊಂದು ತೀವ್ರಗತಿಯ ಬದಲಾವಣೆ ಕ್ಷಣಮಾತ್ರದಲ್ಲಿ ಆಗುವುದಿಲ್ಲ. ಇನ್ನು ಕೆಲವರಿದ್ದಾರೆ ಕೊರೊನಾ ಕಾರಣದಿಂದ ಕ್ವಾರಂಟೈನ್‌ಗೆ ಒಳಪಟ್ಟವರು, ಇವರು ಗೋಳಾಡುತ್ತಲೇ ಹದಿನಾಲ್ಕು ದಿನಗಳನ್ನು ಅದು ವನವಾಸವೋ ಎಂಬಂತೆ ಕಳೆದಿದ್ದಾರೆ. ಮತ್ತೆ ಕೆಲವರು ಆ ದಿನಗಳನ್ನು ಬಹಳ ರಚನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದವರಲ್ಲಿ ಸಿಡುಕುತ್ತ ಬೇಸರದಿಂದ ಇದ್ದವರು ಹಲವರಾದರೆ ಈ ಅವಧಿಯನ್ನು ಕಲಿಕೆಗೆ ಬಳಸಿಕೊಂಡವರು ಕೆಲವರು. ಈ ಒಂದೂವರೆ ತಿಂಗಳಲ್ಲಿ ಹೊಸ ಭಾಷೆ ಕಲಿತವರಿದ್ದಾರೆ, ಹೊಸದೊಂದು ಯೋಜನೆ ಸಿದ್ಧಪಡಿಸಿದವರಿದ್ದಾರೆ; ಇಂಟರ್‌ನೆಟ್‌ ಆಧಾರಿತ ತರಗತಿಗಳನ್ನು ನಡೆಸಿ ಲಕ್ಷಗಟ್ಟಲೆ ಸಂಪಾದಿಸಿದವರೂ ಇದ್ದಾರೆ.

ನನ್ನ ಗೆಳೆಯನೊಬ್ಬ ಪ್ರಖ್ಯಾತ ಕಂಪನಿಯ ಮ್ಯಾನೇಜರ್‌ ಹುದ್ದೆಯಲ್ಲಿದ್ದ. ವೀಣೆ ನುಡಿಸುವುದು ಅವನ ಹವ್ಯಾಸ, ಕಾಲೇಜು ದಿನಗಳಿಂದಲೂ. ಉದ್ಯೋಗದಲ್ಲಿದ್ದುಕೊಂಡೇ ವೀಣೆಯ ಪರೀಕ್ಷೆಗಳನ್ನು ಕಟ್ಟಿ ತೇರ್ಗಡೆಯಾಗುತ್ತ ಅದರಲ್ಲಿ ವಿದ್ವಾನ್‌ ಕೂಡ ಆದ. ಬಳಿಕ ಪಾಠ ಮಾಡಲಾರಂಭಿಸಿದ. ವಿದೇಶಗಳಲ್ಲಿಯೂ ಅವನ ಶಿಷ್ಯರು ವೃದ್ಧಿಸಿದರು. ಐದು ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜಿನಾಮೆ ನೀಡಿ ಪೂರ್ಣಾವಧಿ ವೀಣಾ ಗುರುವಾದ. ಆಗೆಲ್ಲ ಅವನು ಆನ್‌ಲೈನ್‌ ತರಗತಿ ನಡೆಸುತ್ತೇನೆ ಎಂದಾಗ ನಾವು ಅಚ್ಚರಿಪಡುತ್ತಿದ್ದೆವು. ಈಗ ಅವನಿಂದಲೇ ಕೆಲವು ಸೂಕ್ಷ್ಮಗಳನ್ನು ಕಲಿತು ನಮ್ಮ ಪಾಠಗಳನ್ನು ನಡೆಸುತ್ತಿದ್ದೇವೆ. ಇಲ್ಲಿ ಗಮನಿಸಬೇಕಾದ್ದು, ಏನೋ ಸವಾಲು ಬಂತೆಂದು ಬೇಸರಪಡದೆ ಹೊಸ ರೀತಿಯ ಬದುಕಿಗೆ ನಮ್ಮನ್ನು ತೆರೆದುಕೊಳ್ಳಬೇಕಾದ ಉತ್ಸಾಹ. ಜಗತ್ತಿನ ಹೊಸ ಅನ್ವೇಷಣೆಗಳೆಲ್ಲ ಸಮಕಾಲೀನ ಸವಾಲಿಗೆ, ಆ ಒತ್ತಡಕ್ಕೆ ವಿಕಾಸಗೊಂಡಂತಹವೇ. ಅಣುಬಾಂಬಿನಿಂದ ಹಿಡಿದು ಇತ್ತೀಚಿನ ಕೊರೊನಾ ಲಸಿಕೆಯವರೆಗೆ ವಿಜ್ಞಾನದ ಕೊಡುಗೆಗಳೆಲ್ಲ ಒತ್ತಡದ ಕುಲುಮೆಯಲ್ಲಿ ಬೆಂದವೇ ಆಗಿವೆ. ಜಗತ್ತಿನ ಇಂಧನ ಮುಗಿಯಬಹುದೆನ್ನುವ ಆತಂಕ ಎದುರಾದಾಗ ಸೌರಶಕ್ತಿಯ ಬಳಕೆಯನ್ನು ಕಂಡುಹಿಡಿಯಲಾಯಿತು. ಪೆಟ್ರೋಲಿನ ದಾಸ್ತಾನು ಖಾಲಿಯಾಗುವ ಭಯದಲ್ಲಿ ಎಲೆಕ್ಟ್ರಿಕ್‌ ಕಾರು ರೋಡಿಗಿಳಿಯಿತು. ಕೊರೊನಾ ಸಹ ನಮ್ಮೊಳಗಿನ ಹೊಸ ಚೈತನ್ಯವನ್ನು ಶಕ್ತಿಯನ್ನು ಹೊರಸೆಳೆಯಿತು. ಭಾರತ ಕೂಡ ತನ್ನದೇ ಲಸಿಕೆಗಳನ್ನು ಸಿದ್ಧಪಡಿಸಿದ್ದು ಕಡಿಮೆ ಸಾಧನೆಯಲ್ಲ.

ಸೋಲೊಪ್ಪುವುದು ಸುಲಭಮಾರ್ಗ. ನಮ್ಮ ಮನಸ್ಸು ಕೂಡ ಹೆಚ್ಚಾಗಿ ಅದನ್ನೇ ಆಯ್ಕೆ ಮಾಡಿಕೊಂಡುಬಿಡುತ್ತದೆ. ಕೊನೆಗೆ ಅದು ಅಭ್ಯಾಸವೂ ಆಗಿಬಿಡುತ್ತದೆ. ಆದರೆ ಗೆಲುವನ್ನು ಕೂಡ  ನಮ್ಮ ಅಭ್ಯಾಸವನ್ನಾಗಿ ಮಾಡಿಕೊಳ್ಳಬಹುದು. ಬದುಕಿನ ಸೊಗವಿರುವುದು, ವೈಭವವಿರುವುದು ಅದರ ತೋರಾಣಿಕೆಯಲ್ಲಲ್ಲ, ಅದನ್ನು ಆಸ್ವಾದಿಸುವ ಕ್ರಮದಲ್ಲಿ. ಡಿವಿಜಿಯವರ ಜ್ಞಾಪಕಚಿತ್ರಶಾಲೆಯ ಒಂದೆಡೆಯಲ್ಲಿ ಅವರು ವೃದ್ಧ ಭಿಕ್ಷುಕ ದಂಪತಿಗಳ ದಿನಚರಿಯ ಸೊಗಸನ್ನು ಕಟ್ಟಿಕೊಟ್ಟಿದ್ದಾರೆ. ಆ ರಮ್ಯತೆಯನ್ನು ಭಾವಿಸುವಾಗ ಬದುಕಿನ ಶ್ರೀಮಂತಿಕೆ ಅನಾವರಣಗೊಳ್ಳುತ್ತದೆ. ಸೋತೆ ಎಂದುಕೊಂಡ ಕ್ಷಣದಲ್ಲಿಯೇ ಸೋಲು ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದುದರಿಂದ ಗೆಲುವನ್ನು ಕುರಿತು ಧ್ಯಾನಿಸಬೇಕು. ಆಗ ನಮ್ಮ ಮನಸ್ಸೇ ನಮಗೆ ಗೆಲುವಿನ ದಾರಿಯನ್ನು ತೋರುತ್ತದೆ. ನಮ್ಮ ಮನಸ್ಸು ಏನನ್ನು ಭಾವಿಸುತ್ತದೋ ಅದೇ ನಾವಾಗುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು