ಮಂಗಳವಾರ, ಆಗಸ್ಟ್ 3, 2021
27 °C

ಆ ಪುಸ್ತಕದಿಂದ ಇ–ಪುಸ್ತಕದತ್ತ...

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

2018ರ ವಿಶ್ವ ಪುಸ್ತಕ ದಿನದ ಹೊತ್ತಿನಲ್ಲಿ ಕನ್ನಡ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದ್ದ ಪತ್ರಿಕಾ ವರದಿಯೊಂದರ ಪ್ರಕಾರ, ಕನ್ನಡ ಪುಸ್ತಕಗಳ ಓದುಗರು ಆಧುನಿಕ ಗಾಜೆಟ್‌ಗಳನ್ನು ಬಳಸಿ ಇ–ಪುಸ್ತಕ ಓದುವುದನ್ನು ಇಷ್ಟಪಡುವುದು ತೀರಾ ಸೀಮಿತ ಪ್ರಮಾಣದಲ್ಲಿ ಇತ್ತು.

ಆದರೆ, ಕೊರೊನಾ ವೈರಾಣು ತಂದಿತ್ತ ಲಾಕ್‌ಡೌನ್‌, ಆ ಅವಧಿಯಲ್ಲಿ ಮನೆಯಲ್ಲೇ ಕುಳಿತುಕೊಂಡಿರಬೇಕಾಗಿದ್ದ ಅನಿವಾರ್ಯತೆ ಹಾಗೂ ಓದುವ ಪ್ರೀತಿಯು ಕನ್ನಡದಲ್ಲಿ ಇ–ಪುಸ್ತಕಗಳ ಮಾರಾಟಕ್ಕೆ ಇಂಬು ನೀಡಿರುವುದು ಕಾಣುತ್ತಿದೆ. ಮುದ್ರಿತ ಪುಸ್ತಕಗಳ ಅಂಗಡಿಗಳು ಲಾಕ್‌ಡೌನ್‌ ಕಾರಣದಿಂದ ಬಾಗಿಲು ಮುಚ್ಚಿದ್ದು ಮತ್ತು ಮುದ್ರಿತ ಪುಸ್ತಕಗಳನ್ನು ಆನ್ಲೈನ್‌ ಮೂಲಕ ತರಿಸಿಕೊಳ್ಳುವುದಕ್ಕೂ ನಿರ್ಬಂಧ ಇದ್ದಿದ್ದು ಓದುಗರು ಇ–ಪುಸ್ತಕಗಳತ್ತ ನೋಟ ಹರಿಸುವಂತೆ ಮಾಡಿದವು.

ಕನ್ನಡದ ಹೆಸರಾಂತ ಪ್ರಕಾಶನ ಸಂಸ್ಥೆಗಳು ಕೂಡ ಈಗ ಇ–ಪುಸ್ತಕ ಸಿದ್ಧಪಡಿಸುವತ್ತ ಆಸಕ್ತಿ ತಳೆದಿವೆ. ಹೊಸ ಓದುಗ ವರ್ಗವೊಂದು ಸೃಷ್ಟಿಯಾಗುವ ಹೊಳಹು ದೊರೆತಿದೆ. ಒಳ್ಳೆಯ ಪ್ರಕಾಶಕರು ಸಿಗದೆ, ತೆರೆಮರೆಯ ಕಾಯಿಯಂತೆ ಇದ್ದ ಕೆಲವು ಲೇಖಕರು ಇ–ಪುಸ್ತಕಗಳಿಂದಾಗಿ ಹೆಸರು ಸಂಪಾದಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಇ–ಪುಸ್ತಕಗಳನ್ನು ನೀಡುತ್ತಿರುವ ವೇದಿಕೆಗಳು ಪ್ರಮುಖವಾಗಿ ಮೂರು: ಗೂಗಲ್‌ ಪ್ಲೇಬುಕ್ಸ್‌, ಮೈಲ್ಯಾಂಗ್‌ ಬುಕ್ಸ್ ಮತ್ತು ವಿವಿಡ್ ಲಿಪಿ. ‘ಸದ್ಯಕ್ಕೆ ಈ ಮೂರು ವೇದಿಕೆಗಳು ಕನ್ನಡದಲ್ಲಿ ಇ–ಪುಸ್ತಕಗಳನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ವೇದಿಕೆಗಳ ಸಂಖ್ಯೆ ಹೆಚ್ಚಬಹುದು. ಇ–ಪುಸ್ತಕಗಳು ದೀರ್ಘಾವಧಿಯಲ್ಲಿ ಕನ್ನಡದಲ್ಲಿ ಹೊಸ ಓದುಗ ವರ್ಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಕನ್ನಡದ ಮಾರುಕಟ್ಟೆಯಲ್ಲಿ ಅದಕ್ಕೆ ಅವಕಾಶವೂ ಇದೆ’ ಎನ್ನುತ್ತಾರೆ ಮೈಲ್ಯಾಂಗ್‌ ಬುಕ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ, ಸಹ–ಸಂಸ್ಥಾಪಕ ವಸಂತ ಶೆಟ್ಟಿ.

ಅಂಕಿತ ಪುಸ್ತಕ ಪ್ರಕಾಶನದ ಮುಖ್ಯಸ್ಥ ಪ್ರಕಾಶ್‌ ಕಂಬತ್ತಳ್ಳಿ ಅವರು ನೀಡುವ ಮಾಹಿತಿ ಅನ್ವಯ ಕನ್ನಡದ ಮುದ್ರಿತ ಪುಸ್ತಕೋದ್ಯಮದ ವಾರ್ಷಿಕ ವಹಿವಾಟು ಅಂದಾಜು ₹ 50ರಿಂದ ₹ 60 ಕೋಟಿ. ಈ ಮೊತ್ತಕ್ಕೆ ಹೋಲಿಕೆ ಮಾಡಿ ನೋಡಿದರೆ, ಕನ್ನಡದ ಇ–ಪುಸ್ತಕಗಳ ವಹಿವಾಟು ಇನ್ನೂ ಶೈಶವಾವಸ್ಥೆಯಲ್ಲಿ ಇದೆ. ‘ಹಾಗಾಗಿಯೇ, ಇ–ಪುಸ್ತಕಗಳಿಗೆ ಸಂಬಂಧಿಸಿದ ವಹಿವಾಟನ್ನು ಈ ಹಂತದಲ್ಲಿ ಉದ್ಯಮ ಎಂದು ಕರೆಯಲಾಗದು’ ಎನ್ನುತ್ತಾರೆ ವಸಂತ್.

ಆದರೆ, ಕನ್ನಡದ ಇ–ಪುಸ್ತಕಗಳ ವಹಿವಾಟು ಮುಂದೊಂದು ದಿನ ಉದ್ಯಮದ ಸ್ವರೂಪ ಪಡೆದುಕೊಳ್ಳುವ ಹಾಗೂ ವಹಿವಾಟಿನ ಮೊತ್ತ ಹೆಚ್ಚುವ ಸಾಧ್ಯತೆಯನ್ನು ಛಂದ ಪುಸ್ತಕದ ಮುಖ್ಯಸ್ಥ ವಸುಧೇಂದ್ರ ವಿವರಿಸುತ್ತಾರೆ. ‘ಛಂದ ಪುಸ್ತಕದ ಅಷ್ಟೂ ಪುಸ್ತಕಗಳು ಗೂಗಲ್‌ ಪ್ಲೇಬುಕ್ಸ್‌ ವೇದಿಕೆಯಲ್ಲಿ ಲಭ್ಯವಿವೆ. ಮುಂದಿನ ದಿನಗಳಲ್ಲಿ ಎಲ್ಲ ಪ್ರಕಾಶಕರೂ ಡಿಜಿಟಲ್ ವೇದಿಕೆಗಳತ್ತ ಬರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಗೂಗಲ್‌ ಪ್ಲೇಬುಕ್ಸ್‌ ವೇದಿಕೆಯು ಪ್ರಕಾಶಕರಿಗೆ ಒಳ್ಳೆಯ ಅವಕಾಶಗಳನ್ನು ನೀಡಿದೆ. ಇಲ್ಲಿ ಪುಸ್ತಕಗಳ ಮಾರಾಟದಿಂದ ಬಂದ ಹಣದಲ್ಲಿ ಪ್ರಕಾಶಕರಿಗೆ ಶೇಕಡ 52ರಷ್ಟು, ಪ್ಲೇಬುಕ್ಸ್‌ನವರಿಗೆ ಶೇ 48ರಷ್ಟು ಹಂಚಿಕೆಯಾಗುತ್ತದೆ. ಈ ವೇದಿಕೆಯ ಮೂಲಕ ಜನ ಪುಸ್ತಕಗಳನ್ನು ಕೊಂಡು ಓದುತ್ತಿದ್ದಾರೆ. ಇಲ್ಲಿ ಹಣ ಇದೆ’ ಎಂದು ವಸುಧೇಂದ್ರ ಹೇಳಿದರು.

ಲಾಕ್‌ಡೌನ್‌ ಅವಧಿಯಲ್ಲಿ ಛಂದ ಪುಸ್ತಕ ಮಾರಾಟ ಮಾಡಿದ ಪುಸ್ತಕಗಳ ಪೈಕಿ ಶೇಕಡ 70ರಷ್ಟು ಇ–ಪುಸ್ತಕಗಳಾಗಿದ್ದವು! ಮುಂದೊಂದು ದಿನ, ಕನ್ನಡದಲ್ಲಿ ಮಾರಾಟವಾಗುವ ಒಟ್ಟು ಪುಸ್ತಕಗಳಲ್ಲಿ ಶೇಕಡ 50ರಷ್ಟು ಇ–ಪುಸ್ತಕಗಳಾಗಿರಲಿವೆ, ಇನ್ನುಳಿದ ಶೇಕಡ 50ರಷ್ಟು ಮುದ್ರಿತ ಪುಸ್ತಕಗಳಾಗಿರಲಿವೆ ಎಂಬುದು ವಸುಧೇಂದ್ರ ಅವರ ಅಂದಾಜು. ಹಾಗೆ ಆದಾಗ, ಕನಿಷ್ಠ ₹ 20 ಕೋಟಿಯಿಂದ ₹ 30 ಕೋಟಿಯಷ್ಟು ವಹಿವಾಟು ಇ–ಪುಸ್ತಕ ವೇದಿಕೆಗಳ ಮೂಲಕವೇ ನಡೆಯಬಹುದು!

ಆದರೆ, ಈ ಲೆಕ್ಕಾಚಾರವನ್ನು ಅಲ್ಲಗಳೆಯುವ ವಸಂತ ಶೆಟ್ಟಿ, ಬ್ರಿಟನ್ನಿನ ಉದಾಹರಣೆಯನ್ನು ನೀಡುತ್ತಾರೆ. ‘ಬ್ರಿಟನ್ನಿನ ಪುಸ್ತಕ ಮಾರುಕಟ್ಟೆಯನ್ನು ಅತ್ಯಂತ ಪ್ರಬುದ್ಧ ಮಾರುಕಟ್ಟೆ ಎಂದು ಗುರುತಿಸಲಾಗುತ್ತದೆ. ಅಲ್ಲಿ ಮಾರಾಟವಾಗುವ ಒಟ್ಟು ಪುಸ್ತಕಗಳಲ್ಲಿ ಮುದ್ರಿತ ಪುಸ್ತಕಗಳ ಪ್ರಮಾಣ ಶೇಕಡ 75ರಷ್ಟಿದೆ, ಇ–ಪುಸ್ತಕಗಳ ಮಾರಾಟ ಶೇ 25ರಷ್ಟು ಮಾತ್ರ. ಅಲ್ಲಿ ಮುದ್ರಿತ ಪುಸ್ತಕಗಳ ಅಸ್ತಿತ್ವಕ್ಕೆ ಧಕ್ಕೆ ಆಗಿಲ್ಲ, ಕನ್ನಡದಲ್ಲಿ ಕೂಡ ಧಕ್ಕೆ ಆಗುವುದಿಲ್ಲ’ ಎಂದು ವಸಂತ ಹೇಳುತ್ತಾರೆ.

ಹೊಸ ಓದುಗರು: ಇ–ಪುಸ್ತಕಗಳು ಕನ್ನಡದಲ್ಲಿ ಹೊಸ ಓದುಗರನ್ನು ಹುಟ್ಟುಹಾಕಿರುವುದನ್ನು ಪ್ರಕಾಶಕರು ಗುರುತಿಸಿದ್ದಾರೆ. ‘ಇ–ಪುಸ್ತಕ ಖರೀದಿಸುತ್ತಿರುವವರು ಹೊಸ ಓದುಗರು. ಒಂದು ಇ–ಪುಸ್ತಕ ಖರೀದಿಸಿದವರು ಬೇರೆ ಬೇರೆ ಇ–ಪುಸ್ತಕಗಳನ್ನು ಅರಸಿ ಮತ್ತೆ ಮತ್ತೆ ಬರುತ್ತಿದ್ದಾರೆ. ಹಾಗಾಗಿ ಅವರು ಇಂತಹ ಪುಸ್ತಕಗಳನ್ನು ಇಷ್ಟಪಡುತ್ತಿದ್ದಾರೆ ಎನ್ನಲು ಅಡ್ಡಿಯಿಲ್ಲ. ಇದು ಓದುಗರ ಹೊಸ ನೆಲೆಯನ್ನು ಸೃಷ್ಟಿಸುತ್ತಿದೆ, ಪ್ರಕಾಶಕರಿಗೆ ಹೊಸ ಆದಾಯ ಮೂಲವಾಗುತ್ತಿದೆ’ ಎಂದು ಪ್ರಕಾಶಕರೊಬ್ಬರು ಹೇಳಿದರು.

‘ಮೊಬೈಲ್‌ ಮೂಲಕ ಇ–ಪುಸ್ತಕ ಓದುವುದು ಕಷ್ಟವಾಗಬಹುದು. ಆದರೆ, ಟ್ಯಾಬ್‌ ಮೂಲಕ ಓದುವುದು ಸುಲಭ. ಪಟ್ಟಣಗಳಿಂದ ತೀರಾ ದೂರದಲ್ಲಿ ಇರುವ ಜನ ಹೆಚ್ಚಿನ ಪ್ರಮಾಣದಲ್ಲಿ ಇ–ಪುಸ್ತಕ ಖರೀದಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮುದ್ರಿತ ಪುಸ್ತಕಗಳು ಇದುವರೆಗೆ ತಲುಪದೆ ಇದ್ದ ಸ್ಥಳಗಳನ್ನು ತಲುಪುವ ಅವಕಾಶವನ್ನು ಇ–ಪುಸ್ತಕಗಳು ನೀಡಿವೆ’ ಎಂದು ತಿಳಿಸಿದರು ವಸುಧೇಂದ್ರ. ಅಂದರೆ, ಹೊಸ ಓದುಗ ವರ್ಗವೊಂದು ಸೃಷ್ಟಿಯಾಗುತ್ತಿರುವ ಖಚಿತ ಸೂಚನೆಯನ್ನು ಅವರು ನೀಡಿದರು.

ಇ–ಪುಸ್ತಕಗಳನ್ನು ಖರೀದಿಸುತ್ತಿರುವವರು ಯಾವ ವಯೋಮಾನದವರು ಎಂಬುದರ ಅಂಕಿ–ಅಂಶ ಕೂಡ ಕುತೂಹಲಕರ. ‘ಇಂತಹ ಪುಸ್ತಕ ಖರೀದಿಸುತ್ತಿರುವವರಲ್ಲಿ 15 ರಿಂದ 40 ವರ್ಷ ವಯಸ್ಸಿನವರ ಪ್ರಮಾಣ ಹೆಚ್ಚಿದೆ. ಅದರಲ್ಲೂ, 25ರಿಂದ 40 ವರ್ಷ ವಯಸ್ಸಿನವರ ಪ್ರಮಾಣ ಶೇಕಡ 80ರಷ್ಟಿದೆ. 45 ವರ್ಷ ದಾಟಿದವರು ಮಾತ್ರ ಕನ್ನಡ ಪುಸ್ತಕ ಓದುವುದು, ಯುವಕರು ಕನ್ನಡ ಪುಸ್ತಕ ಓದುವುದಿಲ್ಲ ಎಂಬ ಮಾತು ಸುಳ್ಳು ಎಂಬುದನ್ನು ಈ ಅಂಕಿ–ಅಂಶಗಳೇ ಹೇಳುತ್ತವೆ’ ಎಂದು ಪ್ರಕಾಶನ ಸಂಸ್ಥೆಯೊಂದರ ಪ್ರತಿನಿಧಿಯೊಬ್ಬರು ತಿಳಿಸಿದರು.

ಹಿಂದಿನ ನೆನಪು: ಇ–ಪುಸ್ತಕಗಳನ್ನು ನೀಡುವ ಕೆಲವು ವೇದಿಕೆಗಳು ಈ ಹಿಂದೆ ಓದುಗರನ್ನು ಫಜೀತಿಗೆ ಸಿಲುಕಿಸಿದ್ದೂ ಇದೆ. ತಮ್ಮದೇ ಆದ ಡಿಜಿಟಲ್ ವೇದಿಕೆಯನ್ನು ತೆರೆದು, ಅದರ ಮೂಲಕ ಒಂದಿಷ್ಟು ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಿ, ಕೊನೆಗೊಂದು ದಿನ ವೆಬ್ ಲೋಕದಿಂದ ಮಾಯವಾದ ವೇದಿಕೆಗಳೂ ಇವೆ. ಇಂಥವು ಓದುಗರ ವಿಶ್ವಾಸಕ್ಕೆ ಎರವಾಗುವಂಥವು.

‘ಸ್ಪಷ್ಟ ಸ್ವರೂಪವಿಲ್ಲ’: ಇ–ಪುಸ್ತಕಗಳು ಕನ್ನಡದಲ್ಲಿ ಇನ್ನೂ ಸ್ಪಷ್ಟ ಸ್ವರೂಪ ಪಡೆದುಕೊಂಡಿಲ್ಲ. ಇಲ್ಲಿ ಎಲ್ಲರೂ ತಮಗೆ ತೋಚಿದ ರೀತಿಯಲ್ಲಿ ಪುಸ್ತಕ ಹೊರತರುತ್ತಿದ್ದಾರೆ. ಕೆಲವು ಇ–ಪುಸ್ತಕ ಪ್ರಕಾಶಕರು ಓದುಗರಿಗೆ ಶೇಕಡ 20ರಷ್ಟು ರಿಯಾಯಿತಿ ನೀಡುವುದಾಗಿ ಹೇಳುತ್ತಿದ್ದಾರೆ. ಯಾವ ಆಧಾರದಲ್ಲಿ ಅಷ್ಟು ರಿಯಾಯಿತಿ ನೀಡುತ್ತಿದ್ದಾರೆ? ಇ–ಪುಸ್ತಕಗಳ ವಿಚಾರದಲ್ಲಿ ಒಂದು ನಿಯಮಾವಳಿ ಬೇಕು ಎಂದು ಅಭಿನವ ಪ್ರಕಾಶನದ ನ. ರವಿಕುಮಾರ ಹೇಳುತ್ತಾರೆ.

ಇ–ಪುಸ್ತಕ ಮಾಡಲು ಒಳ್ಳೆಯ ಯೂನಿಕೋಡ್‌ ಫಾಂಟ್‌ ಲಭ್ಯವಿಲ್ಲ. ಮುಂದೆ ಕೂಡ ಇ–ಪುಸ್ತಕ ಎಂಬುದು ಮುಖ್ಯವಾಹಿನಿಯ ಪುಸ್ತಕ ಆಗಲಿಕ್ಕಿಲ್ಲ ಎನ್ನುವುದು ರವಿಕುಮಾರ ಅವರ ಅಭಿಪ್ರಾಯ. ಆದರೆ, ಅವರು ಕೂಡ ಮುಂಬರುವ ತಿಂಗಳುಗಳಲ್ಲಿ ತಮ್ಮ ಪ್ರಕಾಶನದ ಇ–ಪುಸ್ತಕಗಳನ್ನು ಹೊರತರುವ ಆಲೋಚನೆಯಲ್ಲಿದ್ದಾರೆ.

ಬರಹಗಾರರಿಗೆ ನೆರವು: ಇ–ಪುಸ್ತಕ ಪ್ರಕಾಶನವು ಹೊಸ ಬರಹಗಾರರಿಗೆ ನೆರವು ನೀಡಿದೆ ಎಂಬುದು ಗುರುತಿಸಬೇಕಾದ ವಿಚಾರ. ‘ಹೊಸ ಬರಹಗಾರ ಒಳ್ಳೆಯ ಪ್ರಕಾಶನ ಸಂಸ್ಥೆಯಿಂದ ತನ್ನ ಪುಸ್ತಕ ಪ್ರಕಟಿಸುವುದು ಸುಲಭದ ಕೆಲಸ ಆಗಿರಲಿಲ್ಲ. ಚಿಕ್ಕ ಪ್ರಕಾಶನ ಸಂಸ್ಥೆಗಳ ಮೂಲಕ ಪುಸ್ತಕ ಪ್ರಕಟಿಸಿದರೆ ಓದುಗರನ್ನು ತಲುಪಲು ಆಗುತ್ತಿರಲಿಲ್ಲ. ಆದರೆ, ಈಗ ಇ–ಪುಸ್ತಕಗಳ ಮೂಲಕ ಹೊಸ ಬರಹಗರಾರರು ಕೂಡ ಎಲ್ಲ ಪ‍್ರದೇಶಗಳಲ್ಲಿ ಹಂಚಿಹೋಗಿರುವ ಓದುಗರನ್ನು ತಲುಪಬಹುದು’ ಎಂದು ಯುವ ಲೇಖಕರೊಬ್ಬರು ಹೇಳಿದರು.

ಇ–ಪುಸ್ತಕಗಳ ಜಗತ್ತು ಬರೆಯುವ ಹಾಗೂ ಪುಸ್ತಕ ಪ್ರಕಾಶನದ ಪ್ರಕ್ರಿಯೆಯನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವ ಸಾಧ್ಯತೆ ಕೂಡ ನಿಚ್ಚಳವಾಗಿ ಕಾಣಿಸುತ್ತಿದೆ. ಹೊಸ ಬರಹಗಾರರು ತಾವೇ ಇ–ಪುಸ್ತಕ ಸಿದ್ಧಪಡಿಸಬಹುದು. ಅದಕ್ಕೆ ಅಗತ್ಯವಿರುವ ತಾಂತ್ರಿಕ ಪರಿಕರಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಇ–ಪುಸ್ತಕಗಳನ್ನು ಸಿದ್ಧಪಡಿಸುವ ವೆಚ್ಚ ಗಣನೀಯವಾಗಿ ಕಡಿಮೆ ಇರುವ ಕಾರಣ, ಇದು ಲೇಖಕರಿಗೆ ಹೊರೆಯಾಗುವುದಿಲ್ಲ. ಇಂತಹ ಪುಸ್ತಕಗಳನ್ನು ಇ–ವೇದಿಕೆಗಳವರೆಗೆ ತಂದರೆ, ಮುಂದೆ ಓದುಗ ಅವುಗಳ ಜೊತೆ ನೇರವಾಗಿ ಸಂವಾದ ನಡೆಸುತ್ತಾನೆ.

ಇ–ಪುಸ್ತಕ ವೇದಿಕೆಗಳು ಹೊಸ ಬರಹಗಾರರಿಗೆ ಸ್ಫೂರ್ತಿ ನೀಡುವ ಮಾಧ್ಯಮವಾಗಿಯೂ ಕೆಲಸ ಮಾಡುತ್ತಿವೆ. ಹೊಸಬರ ಪುಸ್ತಕಗಳನ್ನು ಪ್ರಕಟಿಸಿ, ಅವು ಓದುಗರಿಗೆ ಸಿಗುವಂತೆ ಮಾಡುತ್ತಿವೆ. ‘ಓದುಗರಿಂದ ಬರುವ ಮೆಚ್ಚುಗೆಯ ಮಾತುಗಳೇ ಮುಂದೆ ಇನ್ನೊಂದು ಪುಸ್ತಕ ಬರೆಯಲು ಪ್ರೇರಣೆಯಾಗುತ್ತವೆ’ ಎಂಬುದು ಲೇಖಕರೊಬ್ಬರ ಮಾತು. ಹೊಸಬರು ಹೊಸ ಆಲೋಚನೆಯೊಂದಿಗೆ ಹೊಸದನ್ನು ಬರೆದಾಗಲೇ, ಕನ್ನಡ ಇನ್ನಷ್ಟು ಸಮೃದ್ಧವಾಗುವುದು. ಅಲ್ಲವೇ?

ಲಾಕ್‌ಡೌನ್‌ ಪರಿಣಾಮವಾಗಿ...

ಹೆಗ್ಗೋಡಿನ ಅಕ್ಷರ ಪ್ರಕಾಶನದವರು ಗೂಗಲ್‌ ಪ್ಲೇಬುಕ್ಸ್‌ ಮೂಲಕ ಈಗ ಮೊದಲ ಕಂತಿನಲ್ಲಿ 25 ಇ–ಪುಸ್ತಕಗಳನ್ನು ಓದುಗರ ಮುಂದಿರಿಸಿದ್ದಾರೆ. ಆದರೆ, ಇ–ಪುಸ್ತಕ ಸಿದ್ಧಪಡಿಸುವ ಪ್ರಯತ್ನವನ್ನು ಇವರು ಮೂರು ವರ್ಷಗಳ ಹಿಂದೆಯೇ ಮಾಡಿದ್ದರು. ಆಗ ಕಿಂಡಲ್‌ ಮೂಲಕ ಇ–ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ಮುಂದಾಗಿದ್ದರು. ‘ಸದ್ಯಕ್ಕೆ ಕನ್ನಡ ಭಾಷೆಗೆ ಬೆಂಬಲ ಇಲ್ಲ’ ಎಂದು ಆಗ ಕಿಂಡಲ್‌ ಹೇಳಿತ್ತು. ಹಾಗಾಗಿ ಅಕ್ಷರ ಪ್ರಕಾಶನದವರು ಇ–ಪುಸ್ತಕ ಮಾಡುವ ಪ್ರಯತ್ನ ಕೈಬಿಟ್ಟಿದ್ದರು. ‘ನಮ್ಮ ಓದುಗರಲ್ಲಿ ಕೆಲವರು ಆನ್‌ಲೈನ್‌ ಮೂಲಕ ಹಣ ಪಾವತಿಗೂ ಆಗ ಹಿಂಜರಿಯುತ್ತಿದ್ದ ಕಾರಣ, ಇ–ಪುಸ್ತಕ ಯೋಜನೆಗೆ ಹೆಚ್ಚು ಒತ್ತು ನೀಡಿರಲಿಲ್ಲ’ ಎಂದರು ಪ್ರಕಾಶನದ ಇ–ಪುಸ್ತಕಗಳ ಜವಾಬ್ದಾರಿ ಹೊತ್ತಿರುವ ಕೆ.ವಿ. ಶಿಶಿರ.

‘ಭಾರತದ ಹೊರಗಡೆ ಇರುವ ಓದುಗರಿಗೆ ಮುದ್ರಿತ ಪುಸ್ತಕಗಳನ್ನು ಕಳುಹಿಸುವುದು ದುಬಾರಿಯ ಕೆಲಸ. ಲಾಕ್‌ಡೌನ್‌ ಅವಧಿಯಲ್ಲಿ ಮುದ್ರಿತ ಪುಸ್ತಕಗಳ ಮಾರಾಟ ಕಡಿಮೆಯಾಗಿತ್ತು. ಲಾಕ್‌ಡೌನ್‌ ಆಗಿಲ್ಲದೆ ಇದ್ದಿದ್ದರೆ ಇ–ಪುಸ್ತಕಗಳ ಯೋಜನೆ ಇನ್ನೊಂದಿಷ್ಟು ಅವಧಿಗೆ ಮುಂದಕ್ಕೆ ಹೋಗುತ್ತಿತ್ತೇನೋ...’ ಎಂದು ಶಿಶಿರ ಹೇಳಿದರು. ಪ್ರತಿ ಹದಿನೈದು ದಿನಕ್ಕೆ ಐದರಿಂದ ಹತ್ತು ಪುಸ್ತಕಗಳನ್ನು ಇ–ಪುಸ್ತಕ ವೇದಿಕೆಗೆ ತರುವ ಗುರಿಯನ್ನು ಶಿಶಿರ ಹೊಂದಿದ್ದಾರೆ.

ಕಿಂಡಲ್‌ನಲ್ಲಿ ಖಾಲಿ; ಪ್ಲೇಬುಕ್ಸ್‌ನಲ್ಲಿ ಭರ್ತಿ

ಇ–ಪುಸ್ತಕಗಳ ದೈತ್ಯ ಭಂಡಾರದಂತಿರುವ ಅಮೆಜಾನ್‌ ಕಿಂಡಲ್‌ನಲ್ಲಿ ಕನ್ನಡದ ಪುಸ್ತಕಗಳ ಲಭ್ಯತೆ ಇಲ್ಲ. ಆದರೆ, ಗೂಗಲ್‌ ಪ್ಲೇಬುಕ್ಸ್‌ನಲ್ಲಿ ಕನ್ನಡ ಪುಸ್ತಕಗಳ ಲಭ್ಯತೆ ಹೆಚ್ಚುತ್ತಿದೆ. ಇದು ಯೂನಿಕೋಡ್‌ನಲ್ಲಿರುವ ಕನ್ನಡ ಪುಸ್ತಕಗಳನ್ನು ಬೆಂಬಲಿಸುವ ವ್ಯವಸ್ಥೆ ಹೊಂದಿದೆ.

ಪ್ರಕಾಶಕರಿಗೆ ಹಣ ಸಂದಾಯ ಮಾಡುವ ವ್ಯವಸ್ಥೆ ಕೂಡ ಪ್ಲೇಬುಕ್ಸ್‌ನಲ್ಲಿ ಚೆನ್ನಾಗಿದೆ ಎಂದು ಪ್ರಕಾಶಕರು ಹೇಳುತ್ತಾರೆ. ಪ್ಲೇಬುಕ್ಸ್‌ನಲ್ಲಿ ಮಾರಾಟಕ್ಕೆ ಇಡುವ ಯಾವುದೇ ಕನ್ನಡ ಪುಸ್ತಕದ ಆರಂಭಿಕ ಶೇಕಡ 20ರಷ್ಟು ಭಾಗವನ್ನು ಉಚಿತವಾಗಿ ಕೊಡಬೇಕಿರುವುದು ಕಡ್ಡಾಯ. ಉಚಿತವಾಗಿ ಲಭ್ಯವಿರುವ ಪುಟಗಳನ್ನು ಓದಿದವರಿಗೆ, ಇಡೀ ಪುಸ್ತಕವನ್ನು ಓದುವ ಆಸೆಯಾಗುವುದು ಸಹಜ. ‘ಇದು ಕನ್ನಡದ ಇ–ಪುಸ್ತಕಗಳ ಮಾರುಕಟ್ಟೆ ವಿಸ್ತರಣೆಗೆ ಸಹಾಯ ಮಾಡುತ್ತಿದೆ’ ಎಂಬುದು ವಸುಧೇಂದ್ರ ಅವರ ಅಭಿಪ್ರಾಯ.

ಪ್ರಜಾವಾಣಿಯು ಪ‍್ರಾತಿನಿಧಿಕವಾಗಿ ಕೆಲವರಿಂದ ಪ್ರತಿಕ್ರಿಯೆ ಕೋರಿದಾಗ: ‘ಓದುಗನಾಗಿ ನನಗೆ ಪ್ಲೇಬುಕ್ಸ್‌ ಮೂಲಕ ಇ–ಪುಸ್ತಕ ಓದುವುದು ಖುಷಿಕೊಡುತ್ತಿದೆ’ ಎಂದವರೂ ಇದ್ದರು. ‘ಮುದ್ರಿತ ಪುಸ್ತಕಕ್ಕೆ ಯಾವುದೂ ಪರ್ಯಾಯವಲ್ಲ. ಅದು ಕೊಡುವ ಖುಷಿಗೆ ಸಾಟಿಯೇ ಇಲ್ಲ’ ಎಂದವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು