ಶುಕ್ರವಾರ, ಡಿಸೆಂಬರ್ 4, 2020
24 °C
ಹುಯಿಲಗೋಳ ನಾರಾಯಣರಾವ್‌ ಹೆಸರು ಚಿರಸ್ಥಾಯಿಯಾಗಿಸಲು ಮುಂದಾದ ಮರಿಮೊಮ್ಮಗ

PV Web Exclusive: ಹುಂಡಿ ಹಣದಲ್ಲಿ ಮುತ್ತಜ್ಜನ ಹೆಸರುಳಿಸಲು ಪ್ರಯತ್ನ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ನಾಡಿನ ಮೇರು ಸಾಹಿತಿಗಳಲ್ಲಿ ಗುರುತಿಸಿಕೊಂಡು, ನಿರ್ಲಕ್ಷ್ಯಕ್ಕೊಳಗಾಗಿರುವ ಹುಯಿಲಗೋಳ ನಾರಾಯಣರಾವ್‌ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರ ಮರಿ ಮೊಮ್ಮಗ ಶ್ರೀನಿಧಿ ಹುಯಿಲಗೋಳ ಅಡಿಯಿಟ್ಟಿದ್ದಾರೆ. ಅದಕ್ಕಾಗಿ ಅವರು ತಾವು ಕೂಡಿಟ್ಟ ಹುಂಡಿ ಹಣ ಹಾಗೂ ಪಾಕೀಟ್‌ಮನಿಯನ್ನು ಬಳಸುತ್ತಿದ್ದಾರೆ.

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು.. ಹುಯಿಲಗೋಳ ನಾರಾಯಣರಾವ್‌ ರಚಿಸಿದ ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದೇ ಖ್ಯಾತಿ ಪಡೆದಿತ್ತು. ಕರ್ನಾಟಕ ಏಕೀಕರಣಕ್ಕಾಗಿ ದುಡಿದಿದ್ದ ನಾರಾಯಣರಾವ್‌ ಅವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬ ವಿಷಾದ ಅವರ ಧಾರವಾಡದ ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರಲ್ಲಿದೆ.

ನಾಡಗೀತೆಯಾಗಿ ಜನಮಾನಸದಲ್ಲಿ ಉಳಿದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು..1970ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದುಹಾಕಲಾಯಿತು. ಈ ಹಾಡು ಗೊತ್ತಿದ್ದವರಿಗೆಲ್ಲ ಅದನ್ನು ಬರೆದವರು ಹುಯಿಲಗೋಳ ನಾರಾಯಣರಾವ್‌ ಎಂಬುದು ಗೊತ್ತಿರಲಿಕ್ಕಿಲ್ಲ. ಏಕೆಂದರೆ  ನಾರಾಯಣರಾವ್‌ ಅವರ ಹೆಸರು ಉಳಿಸುವಂಥ ಯಾವ ಕೆಲಸವೂ ಸರ್ಕಾರದಿಂದ ನಡೆದಿಲ್ಲ ಎನ್ನುತ್ತಾರೆ ಶ್ರೀನಿಧಿ ಹುಯಿಲಗೋಳ.

ನಾರಾಯಣರಾವ್‌ ಅವರ ಮೂರನೇ ಪುತ್ರ ಶ್ಯಾಮರಾವ್‌ ಅವರ ಮಗ ಶ್ರೀಧರ ಹುಯಿಲಗೋಳ. ಅವರ ಮಗ ಶ್ರೀನಿಧಿ. ಈಗ ತಾನೇ ಎಂಬಿಎ ಮುಗಿಸಿದ್ದಾರೆ. ಮುತ್ತಜ್ಜನ ಹೆಸರನ್ನು ಕನ್ನಡ ನೆಲದಲ್ಲಿ ಗಟ್ಟಿಯಾಗುಳಿಸಬೇಕು, ಇನ್ನೂ ಹಸ್ತಪ್ರತಿಯಾಗಿಯೇ ಉಳಿದಿರುವ ಅದೆಷ್ಟೋ ದಾಸ ಸಾಹಿತ್ಯ, ಕಾದಂಬರಿ, ನಾಟಕಗಳನ್ನು ಜನರಿಗೆ ತಲುಪಿಸಬೇಕು ಎಂಬ ಮಹದಾಸೆ ಹೊತ್ತಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಐದು ವರ್ಷಗಳ ಹಿಂದೆ ಹುಯಿಲಗೋಳ ನಾರಾಯಣರಾವ್‌ ವೇದಿಕೆಯಡಿ ಧಾರವಾಡದಲ್ಲಿ ಅವರ ಜನ್ಮದಿನೋತ್ಸವ ಆಚರಿಸಿ ಪ್ರತಿವರ್ಷ ಮೂರು ಮಂದಿ ಸಾಧಕರಿಗೆ ಸನ್ಮಾನ  ನಡೆಸಿಕೊಂಡು ಬಂದಿದ್ದಾರೆ. ಸ್ಥಿತಿವಂತರಲ್ಲದ ಕಾರಣ ತಾವು ಕೂಡಿಟ್ಟ ಹುಂಡಿಹಣವನ್ನು, ಪಾಕೀಟ್‌ಮನಿಯನ್ನು ಈ ಕಾರ್ಯಕ್ರಮಕ್ಕಾಗಿ ಬಳಸಿದ್ದಾಗಿ ಶ್ರೀನಿಧಿ ಹೇಳಿದರು. 


ಹುಯಿಲಗೋಳ ನಾರಾಯಣರಾವ್ ವೇದಿಕೆಯಡಿ ನಡೆದ ನಾರಾಯಣರಾವ್ ಜನ್ಮೋತ್ಸವ  ಸಮಾರಂಭದಲ್ಲಿ (2018) ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ನಡೆದಾಡುವ ಕಂಪ್ಯೂಟರ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಆರಂಭಿಸಿದ ನಂತರದ ಎರಡು ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿತು. ಆದರೆ ಎರಡು ವರ್ಷಗಳಿಂದ ಇಲಾಖೆ ಸಹಯೋಗ ನೀಡುವುದನ್ನು ನಿಲ್ಲಿಸಿತು ಆನಂತರ ಎರಡು ವರ್ಷ ಹುಯಿಲಗೋಳ ನಾರಾಯಣರಾವ್‌ ಅವರ ಸಂಬಂಧಿಯೂ ಆಗಿರುವ, ಮುಂಬೈನಲ್ಲಿ ಅಂಕಾಲೋಜಿಸ್ಟ್‌ ಆಗಿರುವ ಡಾ.ನಾಗರಾಜ ಹುಯಿಲಗೋಳ ಸಹಾಯ ನೀಡಿದರು ಎಂದು ಹೇಳಿದ ಶ್ರೀನಿಧಿ ಅವರಿಗೆ ತಮ್ಮ ಮುತ್ತಜ್ಜ ದೊಡ್ಡ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ ಎಲ್ಲ ಅರ್ಹತೆ ಹೊಂದಿದ್ದರೂ ಈವರೆಗೆ ಸರ್ಕಾರದಿಂದ ಯಾವುದೇ ಘನ ಪ್ರಶಸ್ತಿ ಬಂದಿಲ್ಲ ಎಂಬ ಕೊರಗಿದೆ.

‘ನಮ್ಮ ಮುತ್ತಜ್ಜ ಸಾಮಾಜಿಕ ಕಳಕಳಿಯನ್ನೊಳಗೊಂಡ 15ಕ್ಕೂ ಹೆಚ್ಚು ನಾಟಕಗಳನ್ನು ಬರೆದವರು. ದಾಸರ ಸಾಹಿತ್ಯ ಬರೆದವರು. ದಾಸ ಸಾಹಿತ್ಯದ ಕೊನೆಯ ಕೊಂಡಿ ಎಂದೇ ಹೇಳಬಹುದು. ನಾಟಕಗಳನ್ನು ಆಡಿ ಅದರಿಂದ ಬಂದ ಹಣದಿಂದ ಗದುಗಿನಲ್ಲಿ ವಿದ್ಯಾ ದಾನ ಸಮಿತಿ ಪ್ರೌಢಶಾಲೆ ಕಟ್ಟಿಸಿದರು. ಆ ಶಾಲೆ ಕಳೆದ ಜುಲೈನಲ್ಲಿ ನೂರು ವರ್ಷ ಪೂರೈಸಿದೆ. ಹೆಣ್ಮಕ್ಕಳಿಗೂ ಆ ಶಾಲೆಯಲ್ಲಿ ಪ್ರವೇಶ ನೀಡಿ, ಅವರಿಗೂ ಶಿಕ್ಷಣ ಹಕ್ಕು ಕಲ್ಪಿಸಿದವರು. ಕರ್ನಾಟಕ ಏಕೀಕರಣಕ್ಕಾಗಿ ದುಡಿದವರು. ಮುಂಬೈನಲ್ಲಿ ಕನ್ನಡ ಶಾಲೆ ಆರಂಭಿಸುವಲ್ಲಿ ಶ್ರಮಿಸಿದರು. ದ.ರಾ.ಬೇಂದ್ರೆ ಅವರೇ ತಮ್ಮ ಕೃತಿಗಳಲ್ಲಿ ನಾರಾಯಣರಾವ್‌ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಅಂಥ ವ್ಯಕ್ತಿತ್ವವನ್ನು ಇಂದು ಯಾರೂ ನೆನಪಿಸುತ್ತಿಲ್ಲ. ಅವರ ಬಗ್ಗೆ, ಅವರ ನಾಟಕಗಳ ಬಗ್ಗೆ ಹಾಗೂ ಕಾವ್ಯ–ಗದ್ಯದ ಬಗ್ಗೆ ಮೂರು ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಕಟಿಸಿದ್ದು ಬಿಟ್ಟರೆ ಅಂಥ ಮೇರು ವ್ಯಕ್ತಿತ್ವದ ವ್ಯಕ್ತಿಯ ಹೆಸರು ಉಳಿಸಲು ಅಂಥ ಯಾವ ಕೆಲಸವೂ ಸರ್ಕಾರದ ಮಟ್ಟದಲ್ಲಿ ಆಗಿಲ್ಲ.  ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಾಗಲಿ, ಸೆಂಟ್ರಲ್‌ ಲೈಬ್ರರಿಯಲ್ಲಾಗಲಿ ಅವರು ಬರೆದ ಒಂದೇ ಒಂದು ಪುಸ್ತಕ ಓದಲು ಸಿಗದು’ ಎಂಬುದು ಶ್ರೀನಿಧಿ ಅವರ ನೋವಿನ ನುಡಿ.

ಅವರು ಬರೆದಿದ್ದ ನಾಟಕಗಳು, ಕಾದಂಬರಿಗಳು, ಭಕ್ತಿಗೀತೆಗಳು ಎಲ್ಲವೂ ಇನ್ನೂ ಹಸ್ತಪ್ರತಿಯಲ್ಲೇ ಇದ್ದು ಪುಸ್ತಕ ರೂಪದಲ್ಲಿ ಬರಬೇಕು. ಅದಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಬೇಕು ಎನ್ನುವ ಶ್ರೀನಿಧಿ, ಮುತ್ತಜ್ಜನ ಬರಹಗಳಿಗೆ ಇ–ಬುಕ್ ರೂಪ ಕೊಡುವ ಸಿದ್ಧತೆಯಲ್ಲಿದ್ದಾರೆ.

ನಾಡಗೀತೆಯಾದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು..’:

ಹುಯಿಲಗೋಳ ನಾರಾಯಣರಾವ್‌ ಬರೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡ ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಮಹಾತ್ಮ ಗಾಂಧಿಯವರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಹಾಡಿದ್ದರು. 1970ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದು ಹಾಕಲಾಯಿತಾದರೂ ಆ ಹಾಡಿನ್ನೂ ಜನಮಾನಸದಲ್ಲಿ ಉಳಿದುಕೊಂಡಿರುವುದು ಸಮಾಧಾನದ ಸಂಗತಿ. ಆದರೆ ನಾರಾಯಣರಾವ್‌ ಅವರು ಜನರ ಮನಸ್ಸಿಂದ ದೂರವಾಗುತ್ತಿರುವುದು ವಿಷಾದ ಎನ್ನುತ್ತಾರೆ ಅವರ ಅಭಿಮಾನಿಗಳು.

ಹುಯಿಲಗೋಳ ನಾರಾಯಣರಾವ್‌ ಬಗ್ಗೆ ಒಂದಿಷ್ಟು..

ಹುಯಿಲಗೋಳ ನಾರಾಯಣರಾವ್‌ (1884–1971) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.

ಬಳ್ಳಾರಿಯಲ್ಲಿ 1884ರ ಅಕ್ಟೋಬರ್‌ 4ರಲ್ಲಿ ಜನಿಸಿದ ಹುಯಿಲಗೋಳ ನಾರಾಯಣರಾಯರು, ಗದಗ, ಧಾರವಾಡ, ಗೋಕಾಕದಲ್ಲಿ ಶಿಕ್ಷಣ ಪೂರೈಸಿದರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ (ಮುಂಬೈ ವಿಶ್ವವಿದ್ಯಾಲಯ) ಉಚ್ಚ ಶಿಕ್ಷಣ ಪಡೆದರು. ಸೇರಿದರು. 1907ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು.

ಮೂಲತಃ ನಾಟಕಕಾರಾಗಿರುವ ನಾರಾಯಣರಾಯರು ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. 

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣ ರಾಯರು ಮೂಡಲು ಹರಿಯಿತು ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ಹೇಳಲಾಗುತ್ತಿದ್ದರೂ ಅದರ ಹಸ್ತಪ್ರತಿ ಅವರ ಮನೆಯಲ್ಲೂ ಲಭ್ಯವಿಲ್ಲ.

ಹುಯಿಲಗೋಳ ನಾರಾಯಣರಾವ್‌ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. 

ಕಾಲ್ಪನಿಕ ನಾಟಕ: ವಜ್ರಮುಕುಟ (1910); ಕನಕವಿಲಾಸ (1913)
ಐತಿಹಾಸಿಕ ನಾಟಕ: ಪ್ರೇಮಾರ್ಜುನ(1912), ಮೋಹಹರಿ(1914), ಅಜ್ಞಾತವಾಸ(1915), ಪ್ರೇಮವಿಜಯ(1916), ಸಂಗೀತ ಕುಮಾರರಾಮ ಚರಿತ(1917), ವಿದ್ಯಾರಣ್ಯ(1921).
ಪೌರಾಣಿಕ ನಾಟಕ: ಭಾರತ ಸಂಧಾನ(1918), ಉತ್ತರ ಗೋಗ್ರಹಣ(1922).
ಸಾಮಾಜಿಕ ನಾಟಕ: ಸ್ತ್ರೀ ಧರ್ಮ ರಹಸ್ಯ(1919), ಶಿಕ್ಷಣಸಂಭ್ರಮ(1920), ಪತಿತೋದ್ಧಾರ(1952), ಸಂಗೀತ ಪುನರಾಗಮನ (1924–56).

ಪ್ರಶಸ್ತಿ, ಗೌರವಗಳು: ಕರ್ನಾಟಕ ಸರ್ಕಾರದಿಂದ ಪ್ರಥಮ ರಾಜ್ಯೋತ್ಸವ ಪ್ರಶಸ್ತಿ (1956)
ಮುಂಬೈ ಸರ್ಕಾರದಿಂದ ಪತಿತೋದ್ಧಾರ ನಾಟಕಕ್ಕೆ  ಬಹುಮಾನ (1954)
ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ (1961)

********


ಶ್ರೀನಿಧಿ ಹುಯಿಲಗೋಳ

ಹುಯಿಲಗೋಳ ನಾರಾಯಣರಾಯರ ಹೆಸರಲ್ಲಿ ಟ್ರಸ್ಟ್‌ ರೂಪಿಸಿ, ಪ್ರತಿ ವರ್ಷ ಕಾರ್ಯಕ್ರಮ ನಡೆಸುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿಸಲು ಸರ್ಕಾರ ಮುಂದಾಗಲಿ
ಶ್ರೀನಿಧಿ ಹುಯಿಲಗೋಳ
ಹುಯಿಲಗೋಳ ನಾರಾಯಣ ರಾಯರ ಮರಿಮೊಮ್ಮಗ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು