ಸೋಮವಾರ, ಏಪ್ರಿಲ್ 19, 2021
33 °C

ಭಾವದಂತೆ ಪೂಜೆ...

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಮನುಷ್ಯ ಉತ್ಸವಪ್ರಿಯ. ಯಾಂತ್ರಿಕ, ಜಂಜಾಟದ ನೀರಸ ಬದುಕಿಗೆ ಬಣ್ಣ ತುಂಬಲು, ಏಕತಾನತೆಯ ರಾಗ ಬದಲಿಸಲು ಅವನು ಕಂಡುಕೊಂಡ ಅನ್ವೇಷಣೆಯೇ ಹಬ್ಬಗಳೆನ್ನುವ ರಾಗಮಾಲಿಕೆ. ಭೂಮಿಯ ತಪನೆಗೆ ವರ್ಷಧಾರೆ ಸುರಿದು ತೊಯ್ಯಿಸಿ ಅವಳನ್ನು ಹಸಿರಾಗಿಸುತ್ತಿದ್ದಂತೇ ಬಂದ ಆಷಾಢ, ಜಗನ್ನಿಯಾಮಕ ಹರಿಯನ್ನು ಶಯನಕ್ಕೆ ಕಳಿಸಿ ಮತ್ತೆ ಅವನು ಕಣ್ತೆರೆಯುವುದರೊಳಗೆ ಸಾಲು ಹಬ್ಬಗಳನ್ನು ಆಚರಿಸಿ ಧರ್ಮಶ್ರದ್ಧೆಯ ಚೈತನ್ಯವನ್ನು ಮನ ತುಂಬಿಕೊಳ್ಳುವುದೇ ಹಬ್ಬಗಳ ಪರಿಕಲ್ಪನೆಗೆ ಮೂಲ.

ನಮ್ಮ ನೆಲದಲ್ಲಿ ದೇವರನ್ನು ‘ಸರ್ವಭೂತಾಂತರಾತ್ಮಾ’ ಎಂದು ಕಂಡುಕೊಂಡಿದ್ದಾರೆ. ಅವನು ಸರ್ವಗತ, ಸರ್ವಾಂತರ್ಯಾಮಿ. ಆದ್ದರಿಂದ ವೃಕ್ಷ, ಪ್ರಾಣಿ, ಕಲ್ಲು, ಮಣ್ಣು – ಎಲ್ಲವೂ ಪೂಜನೀಯ. ಹೀಗೆ ಅಲೌಕಿಕ ದೇವರೊಂದಿಗೆ ಲೌಕಿಕದ ಧನಧಾನ್ಯಗಳನ್ನೂ ಪೂಜಿಸುವ ನಮಗೆ ಹಬ್ಬಗಳು ಒಂದರ್ಥದಲ್ಲಿ ಲೌಕಿಕ ಮತ್ತು ಅಲೌಕಿಕವನ್ನು ಬೆಸೆಯುವ ಸೇತುವೆ. ನಾಗರಪಂಚಮಿ, ವರಲಕ್ಷ್ಮೀಯಲ್ಲದೇ ಧ್ಯಾನ, ಉಪವಾಸದ ಶ್ರಾವಣದ ಸೋಮವಾರ, ಬದುಕಿಗೆ ಮಂಗಳ ಬೇಡುವ ಮಂಗಳಗೌರೀವ್ರತ, ಶುಭ ಮತ್ತು ಶಕ್ತಿಯ ಆರಾಧನೆಯ ಶ್ರಾವಣದ ಶುಕ್ರವಾರ, ದಾನ ಉಪದಾನಗಳ ಶ್ರಾವಣ ಶನಿವಾರ, ಭಾದ್ರಪದದ ಸ್ವರ್ಣಗೌರಿ ಮತ್ತು ಅವಳೊಂದಿಗೇ ಬರುವ ಮೋದಕದ ಗಣಪ, ಪ್ರಕೃತಿಯ ಮಾತೃಶಕ್ತಿಯ ಆರಾಧನೆಯ ನವರಾತ್ರಿ – ಹೀಗೆ ಸಾಲು ಸಾಲು ಹಬ್ಬಗಳು ಮನೆಯೊಡತಿಗೆ ಸಂಭ್ರಮದೊಂದಿಗೆ ಹೆಚ್ಚಿನ ಹೊಣೆಗಾರಿಕೆಯನ್ನೂ ಹೇರುತ್ತದೆ. ಒಂದಷ್ಟು ಪೂರ್ವತಯಾರಿಯೊಂದಿಗೆ ಹಬ್ಬಗಳ ಆಗಮನವನ್ನು ಸ್ವಾಗತಿಸಿದರೆ ಹಬ್ಬದ ಆನಂದವನ್ನು ಸಂಭ್ರಮಿಸಬಹುದು.

ಪ್ರತಿ ಹಬ್ಬಕ್ಕೂ ಮುನ್ನ ಮನೆ, ದೇವರಮನೆ ಮಂಟಪಗಳನ್ನು ಶುಚಿಗೊಳಿಸುವ ಕೆಲಸದಿಂದ, ಬೇಕಾಗುವ ಪೂಜಾ ಸಾಮಾಗ್ರಿಗಳನ್ನೂ ತರುವ ಕೆಲಸವನ್ನೂ ರಜಾದಿನಗಳಲ್ಲಿಯೇ ಪೂರೈಸಿದರೆ ಕೊನೆಗಳಿಗೆಯ ಆತಂಕದಿಂದ ಪಾರಾಗಬಹುದು. ಮಾರುಕಟ್ಟೆಯಲ್ಲಿ ಈಗ ಆಯಾಯ ಹಬ್ಬಗಳಿಗೆಂದೇ ಪೂಜಾ ಸಾಮಾಗ್ರಿಗಳು ಸಿಗುತ್ತಿರುವುದು ಮಹಿಳೆಯರ ಕೆಲಸವನ್ನು ಕಡಿಮೆಗೊಳಿಸಿದೆ. ಹೂಹಣ್ಣುಗಳನ್ನಷ್ಟೇ ಆಯಾ ಹಬ್ಬಗಳಂದು ಖರೀದಿಸಿದರೆ ಒಳಿತು. ಮಹಿಳೆ ಸಾಮಾನ್ಯವಾಗಿ ವೃತ್ತಿಯ ಜೊತೆಗೆ ಕುಟುಂಬದ ನಿರ್ವಹಣೆಯಲ್ಲೂ ಸಮತೋಲನ ತೋರುವ ಜಾಣ್ಮೆಯುಳ್ಳವಳು. ಹೀಗಾಗಿ ಸಾಲು ಹಬ್ಬಗಳು ಅವಳ ನಡೆಯ ಗತಿಯನ್ನು ಬದಲಿಸವು. ಅದೇ ಸೂರ್ಯ, ಅದೇ ಚಂದ್ರ, ಅದೇ ಮಳೆ, ಬಿಸಿಲು, ಬೆಳದಿಂಗಳಿನಲ್ಲಿ ಗತಿಶೀಲರಾಗುವಾಗ ಹಬ್ಬಗಳ ನೈಜ ದರ್ಶನವಾದ ಜೀವನ್ಮುಖಿ ಚೈತನ್ಯವನ್ನು ತುಂಬಿಕೊಳ್ಳುತ್ತಾ ಸಾಗುವುದೇ ಗುರಿಯಾಗಲಿ. ಏಕೆಂದರೆ ಭಾವದಂತೆ ಪೂಜೆ, ಪೂಜೆಯಂತೇ ಫಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು