ಬುಧವಾರ, ಸೆಪ್ಟೆಂಬರ್ 29, 2021
19 °C

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ

ಎಸ್.ಆರ್. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಪ್ರಖರ ವೈಚಾರಿಕ ಚಿಂತನೆ ಹಾಗೂ ಅಷ್ಟೇ ತೀಕ್ಷ್ಣ ಸಾಹಿತ್ಯ ವಿಮರ್ಶೆಗೆ ಹೆಸರಾದ ಜಿ.ರಾಜಶೇಖರ ಅವರನ್ನು ಎರಡೇ ಪದಗಳಲ್ಲಿ ಪರಿಚಯಿಸುವುದಾದರೆ ಲೋಕ ನಿಷ್ಠುರಿ ಎನ್ನಬಹುದೇನೋ. ನಾಡಿನ ನೈತಿಕ ಪ್ರಶ್ನೆಗಳನ್ನು ವೈಯಕ್ತಿಕ ತುರ್ತಿನಂತೆ ಪರಿಭಾವಿಸುತ್ತಾ, ಮನಸ್ಸುಗಳನ್ನು ಜಾಗೃತಗೊಳಿಸುತ್ತಾ ಹೊರಟ ಈ ಸಾಧಕನಿಗೀಗ 75ರ ಹರೆಯ. ಆ ನೆಪದಲ್ಲಿ ಅವರ ಬದುಕಿನ ಯಾನದ ಮೇಲೆ ಒಂದು ಹಿನ್ನೋಟ...

**

ವಿಚಾರವಾದ, ಸಂಸ್ಕೃತಿ ಚಿಂತನೆ, ಸಾಹಿತ್ಯ ವಿಮರ್ಶೆ - ಈ ಮೂರೂ ಗೆಳೆಯ ಜಿ.ರಾಜಶೇಖರ ಅವರ ಬರಹ, ಮಾತುಗಳ ಮುಖ್ಯ ಲಕ್ಷಣಗಳು. ಅವರ ರಾಜಕೀಯ ಚಿಂತನೆ ವಿಚಾರವಾದದಲ್ಲಿ ಸೇರಿರುವಂತೆ, ವೈಚಾರಿಕತೆಯು ಸಂಸ್ಕೃತಿ ಚಿಂತನೆಯ ಭಾಗವಾಗಿದೆ. ಅವರ ಸಾಹಿತ್ಯ ವಿಮರ್ಶೆ ಇವೆರಡನ್ನೂ ಪಠ್ಯಕ್ಕೆ ಪೂರಕವಾಗಿ ದುಡಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆಗಳಾಗಿ ಅವರ ಹಲವು ಲೇಖನಗಳಿದ್ದರೂ ‘ಅಡಿಗರ ರಾಮ’ ಎಂಬ ‘ಶ್ರೀರಾಮನವಮಿಯ ದಿವಸ’ ಕವನದ ಬಗ್ಗೆ ಬರೆದ ವಿಮರ್ಶಾ ಬರಹವೊಂದನ್ನು ಸಾಂದರ್ಭಿಕವಾಗಿ ಗಮನಿಸಬಹುದು. ಆ ಲೇಖನ ಕವಿ ಗೋಪಾಲಕೃಷ್ಣ ಅಡಿಗರ ಬಗೆಗಿನ ‘ಪ್ರತಿಮಾ ಲೋಕ’ ಎಂಬ ಲೇಖನಗಳ ಸಂಗ್ರಹದಲ್ಲಿದೆ. ರಾಮ ಏಕಕಾಲಕ್ಕೆ ದೇವರು ಮತ್ತು ಭಕ್ತರ ಮನಸ್ಸಿನ ಸೃಷ್ಟಿ ಹಾಗೂ ಸಾಹಿತ್ಯದ ಪಾತ್ರ ಆಗಿರುತ್ತಾನೆ ಎಂಬುದನ್ನವರು ಕವನದ ಒಡಲಿನಿಂದಲೇ ಕಾಣಿಸುತ್ತಾರೆ.

ರಾಮ ಹಾಗೂ ಕೃಷ್ಣರ ಬಗ್ಗೆ ನಮ್ಮ ನಡುವಿರುವ ಹಲವು ಕಥಾ ವೈವಿಧ್ಯಗಳಲ್ಲಿ ಮತ್ತು ಸ್ಥಳಪುರಾಣಗಳಲ್ಲಿ, ಭಕ್ತರ ಮನಸ್ಸಿನ ಸೃಷ್ಟಿಯೇ ದೇವರು ಎಂಬುದು ಹಲವು ದೃಷ್ಟಾಂತಗಳಲ್ಲಿ ಸಾಬೀತಾಗುತ್ತಿರುವುದು ನಮ್ಮ ನಿತ್ಯಜೀವನದ ಸಹಜ ವಿಚಾರ. ಅದು ತಾನು ನಂಬಿರುವ ದೈವ ಈ ಲೋಕದ ಎಲ್ಲವನ್ನೂ ಮೀರಿದ್ದು, ಅನನ್ಯವಾದದ್ದು ಮತ್ತು ಇರುವುದು ಅದೊಂದೇ ಎಂಬ ಏಕದೇವೋಪಾಸನೆಯ ಉಗ್ರಹಟಕ್ಕೆ ತದ್ವಿರುದ್ಧವಾಗಿರುವಂತಹುದು ಎಂಬುದನ್ನು ರಾಜಶೇಖರ –ಹಿಂದುತ್ವದ ಏಕಮುಖಿ ಚಿಂತನೆಯ ವಿರುದ್ಧ– ಎತ್ತಿ ತೋರುತ್ತಾರೆ. ಅಡಿಗರ ‘ಶ್ರೀರಾಮನವಮಿಯ ದಿವಸ’ ಕವನದಲ್ಲಿ ಭಾರತದ ಈ ಪರಂಪರಾಗತ ಅರಿವು ಸ್ಪಷ್ಟವಾಗಿದೆ. ಹಾಗಾಗಿ ಇಂದಿನ ರಾಜಕೀಯ ರಾಮನ ಎದುರು ಕವಿ ಅಡಿಗರ ರಾಮ ನಿಲ್ಲುತ್ತಾನೆ. ಅಡಿಗರ ಕವನದ ರಾಮ ದೇವರೂ ಹೌದು. ಹಾಗಾಗಿ ಅದು ಅವನ ಬರವಿಗೆ ಶಬರಿಯ ಭಕ್ತಿಯಲ್ಲಿ ಕಾದು ಕುಳಿತಿದೆ. ಅದರ ಜೊತೆಗೆ ಅವನು ಕವನದಲ್ಲಿ ಮನುಷ್ಯ ಮಾತ್ರನೂ ಮನುಷ್ಯರಲ್ಲಿ ಉತ್ತಮನೂ ಆಗಿದ್ದಾನೆ.

ರಾಮನು ಹುಟ್ಟಿದ್ದೆಲ್ಲಿ ಎಂಬುದನ್ನೂ ಕವನ ಚಾರಿತ್ರಿಕ ಅಯೋಧ್ಯೆಯ ಮಣ್ಣಿನಲ್ಲಿ ಹುಡುಕದೆ, ಪುರುಷೋತ್ತಮನ ಆ ಅಂಥ ರೂಪರೇಖೆಯನ್ನು ಹುತ್ತಗಟ್ಟಬಲ್ಲ ಚಿತ್ತದಲ್ಲಿ ಹುಡುಕುತ್ತದೆ. ಅಂದರೆ ಹುತ್ತವಾಗಿ ಬೆಳೆದ ವಾಲ್ಮೀಕಿಯ ಮೈಯ ಮಣ್ಣಿನ ಅರ್ಥಗರ್ಭದಲ್ಲಿ ಹುಡುಕುತ್ತದೆ. ಆದ್ದರಿಂದ ಅಡಿಗರ ಕವನದಲ್ಲಿ ಮತ್ತೆ ಮತ್ತೆ ಮರುಕಳಿಸುವ ಮಣ್ಣಿನ ಪ್ರತಿಮೆಗಳು - ಮಣ್ಣುಟ್ಟ ಬಿತ್ತ (ಬೀಜ), ರಾಕೆಟ್ಟು ಮರಳುವ ಮಣ್ಣು, ಮಣ್ಣಿನಣುಗಿ (ಸೀತೆ) ಮತ್ತು ಹುತ್ತ (ದ ಮಣ್ಣು) - ರಾಮನನ್ನು ಅರಸಬೇಕಾದ ಮಣ್ಣಿನ ಸೂಚನೆ ನೀಡುತ್ತವೆ ಎಂದು ರಾಜಶೇಖರ ಸೂಚಿಸುತ್ತಾರೆ. ರಾಮನು ಹುಟ್ಟುವ ಮಣ್ಣು ಅವನ ಜನ್ಮಭೂಮಿಗೆ ಸಮಾನ ಎಂಬುದನ್ನು ಪ್ರತ್ಯೇಕ ವಿವರಿಸಬೇಕಾಗಿಲ್ಲ. ಈ ಕಾರಣಗಳಿಂದ ಅಡಿಗರ ಕವನದಲ್ಲಿ ರಾಮ ಈಗಾಗಲೇ ಸಿದ್ಧಗೊಂಡ ದೇವತಾ ಪ್ರತಿಮೆಯಲ್ಲ. ಅದು ಸಂಕಲ್ಪಬಲದಿಂದ ಚಿತ್ತ ಹುತ್ತಗಟ್ಟಿ ಇನ್ನೂ ಆಗಬೇಕಾದ ಪ್ರತಿಮೆ. ಹೀಗೆ ವಿಚಾರವಾದ, ಸಂಸ್ಕೃತಿ ಚಿಂತನೆಗಳು ರಾಜಶೇಖರ ಅವರ ಸಾಹಿತ್ಯ ವಿಮರ್ಶೆಯಲ್ಲಿ ಮಿಳಿತವಾಗುವುದರಿಂದಲೇ ಅವರಿಗೆ ಇಂದು ಸಾಹಿತ್ಯ ವಿಮರ್ಶೆಗಳಲ್ಲಿ ಚರ್ಚಿಸುವಂತೆ ‘ಆಶಯ’ ಮತ್ತು ‘ಆಕೃತಿ’ಗಳು ಪ್ರತ್ಯೇಕವಾಗಿ ಚರ್ಚಿಸಬೇಕಾದ ವಿಚಾರಗಳಲ್ಲ. ಅವರ ಮೀಮಾಂಸೆಯಲ್ಲಿ ವಿಚಾರ, ವಿವೇಕಗಳು ಮಾನವತ್ವದ ಮೂಲಭಾವದಲ್ಲಿ ಸೇರಿದ ಜೀವಧಾತುವಾಗುತ್ತವೆ.

ರಾಜಶೇಖರ ಎಡಪಂಥೀಯ ಚಿಂತಕರಾದರೂ ಆ ತತ್ವದ ಒಡಲಲ್ಲೇ ಇರುವ ಸಮಸ್ಯೆಗಳ ಬಗ್ಗೆ ಸದಾ ಎಚ್ಚರದಿಂದಿರುವವರು. ಮಾರ್ಕ್ಸ್ ಅಥವಾ ಎಂಗೆಲ್ಸ್ ಹೇಳಿದರೆಂಬ ಕಾರಣದಿಂದ ವಿಚಾರಗಳನ್ನು ಕುರುಡಾಗಿ ಒಪ್ಪಿಕೊಳ್ಳುವವರಲ್ಲ. ರೇಮಂಡ್‌ ವಿಲಿಯಮ್ಸ್ ಅವರ ‘ಇಕಾಲಜಿ ಆ್ಯಂಡ್ ಸೋಶಿಯಲಿಸಂ’ ಲೇಖನದ ಬಗ್ಗೆ 40 ವರುಷಗಳ ಹಿಂದೆ ನನ್ನ ಗಮನವನ್ನು ಮೊದಲಿಗೆ ಸೆಳೆದವರು ರಾಜಶೇಖರ್. ಆ ಬಳಿಕ ಅವರು ಅದನ್ನು ‘ಪರಿಸರ ರಕ್ಷಣೆ ಮತ್ತು ಸಮಾಜವಾದ’ ಎಂದು ಕನ್ನಡಕ್ಕೆ ಅನುವಾದಿಸಿದರು (1985). ಆಗ ಅವರು ‘ಪ್ರಕೃತಿಯ ಮೇಲೆ ಜಯ ಸಾಧಿಸುವುದು’ ಎಂಬ ರೂಪಕ ಎಷ್ಟು ಅಸಂಬದ್ಧ ಎಂಬುದನ್ನು ರೇಮಂಡ್‌ ವಿಲಿಯಮ್ಸ್ ವಿವರಿಸಿದ್ದರ ಕಡೆಗೆ ನನ್ನ ಗಮನ ಸೆಳೆದಿದ್ದರು.

ಉಡುಪಿಯಲ್ಲಿ 1980ರಿಂದ 1988ರವರೆಗೆ ನಾನು ವಾಸವಿದ್ದೆ. ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದೆ. ಆ ವರುಷಗಳಲ್ಲಿ ಪ್ರತಿದಿನ ಸಂಜೆ ಬಡಗುಪೇಟೆಯಲ್ಲಿ ಗೆಳೆಯ ಜಯವಂತ ಅವರನ್ನು ಕಂಡು ರಥಬೀದಿಯಲ್ಲಿ ಇನ್ನಷ್ಟು ಸ್ನೇಹಿತರೊಡನೆ ಸಾಹಿತ್ಯದ ಬಗ್ಗೆ ಹರಟುತ್ತಾ ರಾಜಶೇಖರ ಅವರ ಬರುವಿಗಾಗಿ ಕಾಯುವುದು ನಿತ್ಯದ ಕೆಲಸವಾಗಿತ್ತು. ತೀರಾ ಕೃತಿನಿಷ್ಠ ವಿಮರ್ಶೆಯಲ್ಲಿ ತೊಡಗಿದ್ದ ನಾನು, ಸಾಂಸ್ಕೃತಿಕ ಚಿಂತನೆಗಳ ಸೂಕ್ಷ್ಮಗಳನ್ನು ಅವರ ಒಡನಾಟದಲ್ಲಿ ಸ್ಪಷ್ಟಪಡಿಸಿಕೊಳ್ಳುತ್ತಾ ಹೋದೆ. ಅಡಿಗ ಹಾಗೂ ಶಿವರಾಮ ಕಾರಂತರ ರಾಜಕೀಯ ಚಿಂತನೆಗಳನ್ನು ಸಂಪೂರ್ಣವಾಗಿ ನೇರಮಾತುಗಳಲ್ಲಿ ಆಗ ರಾಜಶೇಖರ ವಿರೋಧಿಸುತ್ತಿದ್ದರು. ಆದರೆ ಅವರ ಕೃತಿಗಳನ್ನು ಅತ್ಯಂತ ಆಸ್ಥೆಯಿಂದ ವಿವರಿಸುತ್ತಿದ್ದರು ಮತ್ತು ಅವರಿಬ್ಬರೂ ಯಾಕೆ ಮಹತ್ವದ ಲೇಖಕರೆಂದೂ ಹೇಳುತ್ತಿದ್ದರು.

‘ಕನ್ನಡದಲ್ಲಿ ದಲಿತ ಸಾಹಿತ್ಯ’ ಎಂಬ ನನ್ನ ಲೇಖನದಲ್ಲಿ ಕಾರಂತರ ‘ಚೋಮನ ದುಡಿ’ ಹಾಗೂ ದೇವನೂರ ಮಹಾದೇವರ ‘ಅಮಾಸ’ ಎರಡನ್ನೂ ಹೋಲಿಸಿ, ಕಾರಂತರದ್ದು ‘ಹೊರಗಿನ ಅನುಭವ’, ಅಮಾಸದಲ್ಲಿರುವುದು ‘ಒಳಗಿನ ಅನುಭವ’ ಎಂಬ ಪರಿಕಲ್ಪನೆಯಲ್ಲಿ ಬರೆದಿದ್ದೆ. ಆ ತಾತ್ವಿಕತೆಯನ್ನೇ ಸಂಪೂರ್ಣ ವಿರೋಧಿಸಿ ರಾಜಶೇಖರ ‘ಸಂಕ್ರಮಣ’ ಪತ್ರಿಕೆಯಲ್ಲಿ ಲೇಖನ ಬರೆದರು. ಅವರ ಪ್ರಕಾರ, ಸಾಹಿತ್ಯದ ಅನುಭವವನ್ನು ‘ಒಳಗಿನ’ ಹಾಗೂ ‘ಹೊರಗಿನ’ ಎಂದು ವಿಂಗಡಣೆ ಮಾಡುವುದು ತಪ್ಪು. ಯಾಕೆಂದರೆ ಸಾಹಿತ್ಯಾನುಭವದಲ್ಲಿ ಅಂತಹ ವಿಂಗಡಣೆ ಇಲ್ಲ. 1980ರ ದಶಕದ ಆ ಚರ್ಚೆ ದಲಿತ-ಬಂಡಾಯ ತಾತ್ವಿಕತೆಯ ಸ್ಪಷ್ಟತೆಗೆ ಸಹಾಯ ಮಾಡಿತ್ತು.

ಬರಹದ ಮೂಲಕ ನಮ್ಮ ನಡುವೆ ನಡೆದ ಭಿನ್ನಾಭಿಪ್ರಾಯಗಳ ಅಂತಹ ಚರ್ಚೆ, ನಮ್ಮ ನಡುವಿನ ಸ್ನೇಹಕ್ಕೆ ಏನೂ ತೊಂದರೆ ಮಾಡಲಿಲ್ಲ. ನನ್ನ ‘ನಿಧಾನಶ್ರುತಿ ಮತ್ತು ಇತರ ಲೇಖನಗಳು’ ಎಂಬ ಸಂಗ್ರಹವನ್ನು ರಾಜಶೇಖರ ಅವರಿಗೆ ಅರ್ಪಿಸಿದ್ದೇನೆ. ಆ ನನ್ನ ಕೃತಿಯ ಮೊದಲ ಮಾತುಗಳಲ್ಲಿ ಸಂಕ್ರಮಣದ ಮೇಲಿನ ಚರ್ಚೆಯನ್ನು ಪ್ರಸ್ತಾಪಿಸಿ ಪುಸ್ತಕ ಅರ್ಪಣೆಯ ಹಿಂದಿನ ನನ್ನ ಗೌರವವನ್ನು ಹೇಳುತ್ತಾ ನಾನು ಬರೆದ ಮಾತುಗಳು ನೆನಪಾಗುತ್ತಿವೆ: ‘ರಾಜಶೇಖರ ಆಪ್ತರಲ್ಲೂ ಅನಿಸಿದ್ದನ್ನು ಸ್ಪಷ್ಟವಾಗಿ ಹೇಳಿ ಚರ್ಚಿಸಬಲ್ಲರು. ಅವರು ವಿಚಾರ ನಿಷ್ಠುರಿ. ವ್ಯಕ್ತಿ ಸ್ನೇಹಿ. ಅವರ ಮಾನವ ಪ್ರೀತಿ ದೊಡ್ಡದು.’

ಅವರ ಮಾತು ಯಾವಾಗಲೂ ನೇರ. ಅದರೊಳಗೆ ಕೃತ್ರಿಮ ಇಲ್ಲ. ವಿಚಾರ, ತರ್ಕ ತೀಕ್ಷ್ಣತೆಯಲ್ಲಿ ಅವರು ಮಾನವ ಪ್ರೀತಿಯ ಸ್ನೇಹ, ಮುಗ್ಧಭಾವವನ್ನು ಕಳಕೊಂಡವರಲ್ಲ. ಅವರ ಮಗ ವಿಷ್ಣುವಿನ ಮದುವೆಗೆ ಬರಬೇಕೆಂದು ಆಹ್ವಾನಿಸಿ ಅವರ ಹೆಂಡತಿ ಫೋನು ಮಾಡಿದರು. ಆಗ ‘ನಾನು ಮಾತನಾಡುತ್ತೇನೆ’ ಎಂದು ಕೊನೆಯಲ್ಲಿ ರಾಜಶೇಖರ ಹೇಳಿದ್ದು: ‘ನೀನು ತೀರಾ ಕಷ್ಟಪಟ್ಟುಕೊಂಡು ಬೆಂಗಳೂರಿನಿಂದ ಉಡುಪಿಗೆ ಮದುವೆಗೋಸ್ಕರ ಬರಲೇಬೇಕೆಂದು ಒತ್ತಾಯವಿಲ್ಲ. ಅವಳು ಬರಲೇಬೇಕೆಂದು ಒತ್ತಾಯಿಸಿ ಹೇಳಿದಳೆಂದು ಸಂಕೋಚ ಬೇಡ. ನಿನ್ನ ಮಗಳ ಮದುವೆಗೆ ಬಂದಿದ್ದೇನೆಂಬ ದಾಕ್ಷಿಣ್ಯಕ್ಕಾಗಿ ಬರಬೇಕಾಗಿಯೂ ಇಲ್ಲ.’ ಇದು ರಾಜಶೇಖರ.

ನಾಡಿನ ಸಮಸ್ಯೆಗಳನ್ನು ನೈತಿಕ ಪ್ರಶ್ನೆಯೆಂಬಂತೆ ಅವರು ವೈಯಕ್ತಿಕ ತುರ್ತಿನಿಂದ ಪರಿಭಾವಿಸುತ್ತಾರೆ ಎಂಬುದೂ ಅಷ್ಟೇ ನಿಜ. ಅದಕ್ಕಾಗಿ, 1980ರಲ್ಲಿ ಪ್ರಕಟವಾದ ಅವರ ‘ಕಾಗೋಡು ಸತ್ಯಾಗ್ರಹ’ ಕೃತಿಯಿಂದ 2005ರಲ್ಲಿ ಪ್ರಕಟವಾದ ‘ಕೋಮುವಾದದ ಕರಾಳ ಮುಖಗಳು’ ಕೃತಿಯವರೆಗೆ ಮತ್ತು ನಂತರವೂ ಹಲವಾರು ಉದಾಹರಣೆಗಳನ್ನು ನೀಡಬಹುದು. ಕಾಗೋಡು ಸತ್ಯಾಗ್ರಹದಲ್ಲಿ ಕ್ಷೇತ್ರಕಾರ್ಯ ಮತ್ತು ಸಂಶೋಧನಾ ನೆಲೆಗಳ ಕಾಳಜಿ ನಾಡಿನ ಇಂದಿನ ಸಮಸ್ಯೆಗೆ ಉತ್ತರ ಹುಡುಕಲೇಬೇಕಾದ ಆಕರಗಳಲ್ಲಿ ಒಂದು. ಕೋಮುವಾದದ ಕರಾಳ ಮುಖಗಳಲ್ಲಿ ಅವರು ಎಸ್.ಆರ್.ಭಟ್ ಅವರು ಮಾಡಿದ ಹಿಂದೂ-ಮುಸ್ಲಿಂ ಘರ್ಷಣೆಗಳ ಸಮಸ್ಯೆಯ ವಿಶ್ಲೇಷಣೆಗಳಿಗೆ ಪೂರಕವಾಗಿ ಫಣಿರಾಜ್ ಅವರೊಡಗೂಡಿ ಕೋಮುವಾದದ ಭಾರತೀಯ ವಿವಿಧ ಮುಖಗಳನ್ನು ಕಾಣಿಸುತ್ತಾರೆ. ಧಾರ್ಮಿಕ ಹಿಂಸೆಯ ಕರಾಳ ಮುಖದೊಡನೆ ಅದನ್ನು ಎದುರಿಸಲು ಪ್ರಯತ್ನಿಸುವ ಸಾತ್ವಿಕ ಶಕ್ತಿಯ ಹೋರಾಟದ ಸ್ವರೂಪವನ್ನು ವಿವರಿಸುತ್ತಾರೆ.

‘ಹಿಂದುತ್ವದ ಪೌರುಷ ಪ್ರದರ್ಶನ’ ಎಂಬುದು ಅವರ ವರದಿ ರೂಪದ ಲೇಖನ. ಆದಿ ಉಡುಪಿಯಲ್ಲಿ ಹಾಜಬ್ಬ ಎಂಬ 60 ವರುಷ ಪ್ರಾಯದ ಗೃಹಸ್ಥರನ್ನೂ, ಅವರ 28 ವರುಷ ಪ್ರಾಯದ ಹಸನಬ್ಬ ಎಂಬ ಮಗನನ್ನೂ ಹಿಂದೂ ಯುವ ಸೇನೆಯ ಕೆಲವರು ಪೂರ್ತಿ ಬೆತ್ತಲು ಮಾಡಿ, ಮೂರು ಗಂಟೆಗಳ ಕಾಲ ನೂರಾರು ಜನರ ಎದುರು ಹೊಡೆದು ಬಡಿದು ಮಾಡಿದ ಘಟನೆಯ ಬಗೆಗಿನ ಬರಹ. ಅವರು ದನ ಕದ್ದು ಮಾರುವ ಕೆಲಸದಲ್ಲಿ ತೊಡಗಿದ್ದಾರೆಂಬ ಆರೋಪವನ್ನು ಹಿಂದೂ ಯುವಸೇನೆ ಮಾಡಿ, ಶಿಕ್ಷಿಸಲು ತೊಡಗಿದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

ಆ ಘಟನೆ ಬಳಿಕ ಗಾಯಾಳುಗಳನ್ನು ನೋಡಲು ರಾಜಶೇಖರ ಆಸ್ಪತ್ರೆಗೆ ಹೋದಾಗ ಹಸನಬ್ಬ ಅವರ ತಾಯಿ, ಅಂದರೆ ಹಾಜಬ್ಬನವರ ಪತ್ನಿ, ಬಂಧು-ಬಳಗ ಎಲ್ಲಾ ಇದ್ದರು. ಯಾರನ್ನು ಕಂಡರೂ ಅಳುವೇ ಅವರಿಗೆ ಒತ್ತರಿಸಿ ಬರುತ್ತಿತ್ತು. ನಾಡಿನ ಸಮಸ್ಯೆ ನೈತಿಕ ಪ್ರಶ್ನೆಯಾಗಿ ವೈಯಕ್ತಿಕ ತುರ್ತಿನಿಂದ ಆ ಸಂದರ್ಭದಲ್ಲಿ ಕುದಿಯುವ ಭಾವನೆಗಳನ್ನು ತಣ್ಣನೆಯ ವೈಚಾರಿಕ ಸತ್ಯವಾಗಿ ಅವರು ಹೇಳುವ ಮಾತುಗಳು: ‘ಹೌದು, ಈ ವಿಷಯವನ್ನು ಹೇಳಲೇಬೇಕು. ಮುಸಲ್ಮಾನರಿಗೂ ತಾಯಿ-ತಂದೆ, ಅಕ್ಕ-ತಂಗಿ, ಬಂಧು-ಬಳಗ ಎಲ್ಲಾ ಇರುತ್ತಾರೆ. ಅವರು ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಹಾಗೆಯೇ ಈ ದೇಶದ ಪ್ರಜೆಗಳು ಮತ್ತು ಸಂಸಾರವಂದಿಗರು. ಇವು ಬಹಳ ಸರಳವಾದ ಸತ್ಯಗಳು. ಆದರೆ ಉಡುಪಿಯಲ್ಲಂತೂ ಇದನ್ನು ಮತ್ತೆ ಮತ್ತೆ ಹೇಳಲೇಬೇಕಾದ ಅವಶ್ಯಕತೆ ಇದೆ.’

ಸತ್ಯವನ್ನು ಹೀಗೆ, ಮುಟ್ಟಿದರೆ ಕೈ ಕೊರೆಯುವ ತಣ್ಣನೆಯ ಮಂಜುಗಡ್ಡೆಯಂತೆ ಹೇಳಿದ ಇನ್ನೊಬ್ಬ ಲೇಖಕ ಸಾದತ್‌ ಹಸನ್‌ ಮಂಟೊ ಕೂಡ ರಾಜಶೇಖರ್ ಅವರಿಗೆ ಪ್ರಿಯವಾದ ಲೇಖಕರಲ್ಲೊಬ್ಬರು.

(ರಾಜಶೇಖರ ಅವರಿಗೆ 75 ತುಂಬಿದ ನೆನಪಿಗಾಗಿ ಪಟ್ಟಾಭಿರಾಮ ಸೋಮಯಾಜಿ ಅವರ ಸಂಪಾದಕತ್ವದಲ್ಲಿ ಅಭಿನಂದನಾ ಗ್ರಂಥವನ್ನು ಹೊರತರಲಾಗುತ್ತಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು