ಶುಕ್ರವಾರ, ಅಕ್ಟೋಬರ್ 22, 2021
29 °C

ಗಾಂಧಿ ಜಯಂತಿ: ‘ಮತ್ತೆ ಬಂತಾ ವರ್ಷಕ್ಕೊಮ್ಮೆ ನನ್ನ ನೆನೆವ ದಿನ?’

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಗಾಂಧಿ ಜಯಂತಿ ಸಂದರ್ಭದಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಂದ ವಿಡಂಬನಾತ್ಮಕ ಬರಹ

***

ನಮಸ್ಕಾರ ಎಲ್ಲರಿಗೂ.... ಹೇಗಿದ್ದೀರಾ?

ನಾನು.... ಬೇಡ ಬಿಡಿ, ನನ್ನ ಪರಿಚಯ ನಿಮಗಿಲ್ಲ.... ಬಹುಶಃ ನಾನಾಗಿ ಹೇಳಿಕೊಂಡರೂ ನಿಮಗೆ ನೆನಪಾಗಲಾರದೇನೋ...

ನಾನು ಅಂತಹ ಹೇಳಿಕೊಳ್ಳುವ ಸಾಧಕನೂ ಅಲ್ಲ, ಅನುಗಾಲ ಕುರ್ಚಿಗೆ ಅಂಟಿ ಕೂತವನೂ ಅಲ್ಲ. ಸದಾ ಈ ಜಗದ, ದೇಶದ, ನಮ್ಮ ಜನರ ನಾಡಿಮಿಡಿತದ ಬಗ್ಗೆ ಮಾತಾಡುತ್ತಾ ಬಂದವನಷ್ಟೆ!

ನಿಮಗೂ ಗೊತ್ತು... ಈಗ ನಿಮ್ಮ ಸುತ್ತಲ ಜಗತ್ತು ಎಷ್ಟು ಬದಲಾಗಿದೆ, ಬದಲಾಗುತ್ತಿದೆ ಅಂತ. ಸಂಬಳ ಪಡೆದು ಬದುಕುತ್ತಿರುವ ಎಷ್ಟು ಮಂದಿ ನೌಕರರು ಎದೆ ಮುಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಹೇಳಿ? ಸಂಬಳದಂತೆಯೇ ಬಹುಮಂದಿ ಎಂಜಲಿಗೆ ಕೈ ಚಾಚೋ ಚಾಳಿಯನ್ನೇ ತಮ್ಮ ಡ್ಯೂಟಿ ಅಂದುಕೊಂಡಿದ್ದಾರೆ. ನೀವೇನು ಮಾಡುತ್ತಿದ್ದೀರಿ? ಹೋಗಲಿ ನೀವು ಶುದ್ಧ ತಾನೇ?

ಕೆಲವು ಕಡೆ ಸಾಮಾನ್ಯ ಕರಣಿಕ ಕೂಡ ಇಡೀ ಡಿಪಾರ್ಟಮೆಂಟನ್ನೇ ಅಲ್ಲಾಡಿಸುವ ಮಟ್ಟಿಗೆ ಬೇರುಬಿಟ್ಟು ಜನಸಾಮಾನ್ಯರಿಗೆ ಎಟುಕದಷ್ಟು ಬೆಳೆದಿದ್ದಾನೆಂದರೆ ನೀವೇನು ಮಾಡಿ ದಬ್ಹಾಕುತ್ತಿದ್ದೀರಿ? ಚೂರು ಬಿಡಿಸಿ ಹೇಳಿ!

ಬಿಳಿ ಅಂಗಿ ಬಿಳಿ ಇಜಾರು ಮತ್ತು ತಲೆಯ ಮೇಲೆ ಹಾಕಿಕೊಂಡ ಆ ಕಾಲದ ಟೊಪ್ಪಿಗೆ ತನ್ನ ನಗ್ನಸತ್ಯ ಉಳಿಸಿಕೊಂಡಿಲ್ಲ ಅಲ್ವಾ? ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತೀರಿ, ಇಂಥಾ ಬಿಳಿಯಾನೆಯಂಥಾ ಟೋಪಿವಾಲಗಳ ನಡುವೆ ನೀವೇಕೆ ನರಸತ್ತವರಂತಿದ್ದೀರಿ?

ಶುದ್ಧಗಾಳಿ, ಸ್ವಚ್ಛ ನೀರು ಪುಷ್ಟಿದಾಯಕ ಊಟ ನಮ್ಮ ಬಡಜನರಿಗೆ ಸಿಕ್ಕುತ್ತಿದೆಯಾ? ಕಾಡುಪ್ರಾಣಿಗಳು ಕಾಡಲ್ಲಿರದೇ ನಾಡಿಗೆ ದಾಪುಗಾಲು ಹಾಕಿ ಬರುತ್ತಿರುವುದು ಏಕೆ ಎಂಬ ಕಾರಣಗಳು ಗೊತ್ತೇ? ಒಂದು, ನೀವು ಅವುಗಳ ಮೂಲ ಸ್ಥಾನವಾದ ಅರಣ್ಯವನ್ನೇ ನುಂಗಿ ನೀರು ಕುಡಿದು ತೇಗುತ್ತಿರುವುದು, ಮತ್ತೊಂದು ಅವುಗಳಿಗೆ ಗೊತ್ತು ನಮ್ಮ ಬಂಧುಗಳು ಇದೀಗ ಎರಡು ಕಾಲಿನಲ್ಲಿ ನೂರಾರು ಕೈಗಳಿಂದ ಕಾಡು ನಾಡೆನ್ನದೇ ‘ಸರ್ವಂ ಭಕ್ಷಮಯಂ’ಎಂದು ಕಬಳಿಸುತ್ತಿರುವ ಮತ್ತು ನಮ್ಮನ್ನು ನಾಚಿಸುತ್ತಿರುವ ಮೃಗಗಳಿವೆ ಎಂದು!

ಚುನಾವಣೆ ಬಂದ್ರೆ ಹಣ, ಹೆಂಡ, ಸೀರೆ, ಮಿಕ್ಸಿ, ಉಂಗುರ, ಬಿರಿಯಾನಿ ಪಾಕೀಟುಗಳ ಭಾರಕ್ಕೆ ಕುಸಿದು ಹೋಗುತ್ತೀರಲ್ಲವೇ? ಯಾವನು ಬಂದ್ರೇನು ನಮ್ಮ ಕಷ್ಟಕ್ಕೆ ಆಗ್ತಾನಾ ಅನ್ನುವ ನಿಮ್ಮ ಉಡಾಫೆ ಇಂದು ಬಿಳಿಯಾನೆಗಳ ಎದುರು ಕೈ ಕಟ್ಟಿ ನಿಲ್ಲುವಂತಾಗಿದೆ. ಯಾಕೀ ಅವಸ್ಥೆ?
ಉಳ್ಳವನು ಇಡೀ ಸಂಕೀರ್ಣ, ಎಸ್ಟೇಟು, ಹೊಲ ಗದ್ದೆ ತೋಟ ಕಬಳಿಸಿ ಬೆಳೆಯುತ್ತಲೇ ಹೋಗುತ್ತಿದ್ದಾನೆ. ಇಲ್ಲದವ ತಲೆ ಎತ್ತಲಾರದೇ ಅಳಿದು ಹೋಗುತ್ತಿದ್ದಾನೆ. ರಾಜಾರೋಷವಾಗಿ ಸ್ತ್ರೀ ಕುಲ ನಾಚುವಂತೆ ಕಂಡವರ ಹೆಣ್ಣುಮಕ್ಕಳ ಶೀಲದ ಜೊತೆ ಆಟವಾಡುತ್ತಾ, ಸೂಟ್‌ಕೇಸ್‌ಗಳನ್ನು ಸರಬರಾಜು ಮಾಡುತ್ತಾ ಇವೆಲ್ಲವೂ ಸಹಜ ಪ್ರಕ್ರಿಯೆ ಎಂಬಂತೆ ನಿಮ್ಮ ಟಿವಿಗಳಲ್ಲಿ ಠೀವಿಯಿಂದ ಬೀಗುತ್ತಿರುವ ಮಹೋದಯರಿಗೆ ನಿಮ್ಮ ಉತ್ತರ ಮೌನವಾ? ಅಥವಾ ಚಾನೆಲ್ ಬದಲಿಸಿ ಬಿಗ್ ಬಾಸೋ, ಕಾಮಿಡಿಯೋ, ಹಳೆಯ ಸಿನಿಮಾವೋ ನೋಡಿ ನಕ್ಕು ಉಂಡು ಮಲಗಿ ಕುಂಭಕರ್ಣ ನಿದ್ದೆಯಾ?

ಪ್ರತಿ ಊರಲ್ಲಿ, ಬೀದೀಲಿ, ಸರ್ಕಲ್ಲಿನ ತಿರುವುಗಳಲ್ಲಿ ಅದ್ಯಾರೋ ಮಹಾತ್ಮ ಅಂತ ಬೊಂಬೆ ಮಾಡಿ ನಿಲ್ಲಿಸಿದ್ದೀರಲ್ಲಾ.. ಅದೇ ಹಳೆಯ ಮುದುಕ ನಾನು! ...ನನ್ನ ಕನಸುಗಳು ಕನಸುಗಳಾಗಿಯೇ ಉಳಿದಿವೆ.

ಮಲಗಿದ್ದು ಸಾಕು ಎದ್ದು ಬಿಡಿ. ಇನ್ನೂ ಎಚ್ಚರ ಆಗದಿದ್ದರೆ.... ಕಷ್ಟ. ನಿಮ್ಮ ಮುಂದಿನ ಪೀಳಿಗೆಗಾದರೂ ಸಮಾಜ ಸ್ವಚ್ಛ ಮಾಡಿ ಏಳಿ... ನಿದ್ದೆ ಬಿಡಿ.. ಬೇರೆಯವರ ಕತೆ ಬೇಡ, ನೀವಾದರೂ ಬದಲಾಗಿ. ನಂತರ ನನ್ನ ಜಯಂತಿಗೊಂದು ಅರ್ಥ.
ಏನಂತಿರಾ?

– ಸಂತೆಬೆನ್ನೂರು ಫೈಜ್ನಟ್ರಾಜ್

(ಅತಿಥಿ ಬರಹ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು