ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲವಿನ ಉಡುಗೊರೆ ಕೊಡಲೇನು...

Last Updated 28 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಾಣಿಕೆಗಳನ್ನು ಸಾಂದರ್ಭಿಕವಾಗಿ ಕೊಡುವುದು, ತೆಗೆದುಕೊಳ್ಳುವುದು ನಮ್ಮ ಸಾಮಾಜಿಕ ಪದ್ಧತಿಯ ಒಂದು ಅಂಗವೇ ಆಗಿದೆ. ಮದುವೆ, ಜನ್ಮದಿನ, ವಾರ್ಷಿಕೋತ್ಸವ, ಹೊಸವರ್ಷದ ಆದಿಯಾಗಿ ನಾನಾ ಸಂದರ್ಭಗಳಲ್ಲಿ ಕಾಣಿಕೆಗಳನ್ನು ಸಲ್ಲಿಸುವುದು, ಪಡೆದುಕೊಳ್ಳುವುದು ನಡೆದೇ ಇರುತ್ತದೆ.

ಆದರೆ, ಇವತ್ತಿನ ವೇಗದ ಬದುಕಿನ ಸಂದರ್ಭದಲ್ಲಿ, ಅದೊಂದು ಕಟ್ಟುಪಾಡು ಅನ್ನುವಂತೆ ಕಾಟಾಚಾರಕ್ಕಾಗಿ ನಿಭಾಯಿಸಿ ಕೈತೊಳೆದುಕೊಳ್ಳುವ ಜನರೇ ಜಾಸ್ತಿ. ತುಂಬಾ ಜನರು ಮಾರುಕಟ್ಟೆಗೆ ಹೋಗಿ ಸಂದರ್ಭಕ್ಕೆ ತಕ್ಕಂತ ಕಾಣಿಕೆಯನ್ನು ಹುಡುಕಿ, ಕೊಂಡು ತರಲು ಬೇಸರಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅವರೇ (ಕಾಣಿಕೆ ಪಡೆಯುವವರು) ಬಯಸಿದ್ದನ್ನು ತೆಗೆದುಕೊಳ್ಳಲಿ ಎಂದು ಹಣವನ್ನೇ ಕೊಟ್ಟೆ ಎಂದು ಹೇಳಿ ತಮ್ಮ ನಿರಾಸಕ್ತಿ, ಸೊಂಬೇರಿತನಕ್ಕೆ ವೈಚಾರಿಕತೆಯ ಮೆರುಗನ್ನು ಕಲ್ಪಿಸಲು ಯತ್ನಿಸುತ್ತಾರೆ. ಹೀಗಾಗಿ ಕಾಣಿಕೆಗಳನ್ನು ಕೊಡುವುದು, ಪಡೆಯುವುದು ಒಂದು ಸಂಪ್ರದಾಯಕ್ಕೆ ಸೀಮಿತವಾಗಿ, ಪ್ರೀತ್ಯಾದರಗಳನ್ನು ವ್ಯಕ್ತಮಾಡುವ ತನ್ನ ಮೂಲ ಉದ್ದೇಶದಿಂದಲೇ ವಿಮುಖವಾಗುತ್ತಿದೆಯೇನೋ ಎಂದು ಒಮ್ಮೊಮ್ಮೆ ಭಾಸವಾಗುತ್ತದೆ.

ಕಾಣಿಕೆಗಳ ಕೊಡು, ಪಡೆಯುವಿಕೆಗೆ ಇತಿಹಾಸವೇ ಇದೆ. ಈ ಪದ್ಧತಿ ಇಂದು ವಿಶ್ವದಾದ್ಯಂತ ಪಸರಿಸಿ ಸ್ಥಳೀಯ ಆಚಾರ, ವಿಚಾರಗಳಿಗೆ ಅನುರೂಪವಾಗಿ ರೂಢಿಯಲ್ಲಿದೆ.ಆದರೆ, ಇದರ ಮೂಲ ಮಾತ್ರ ಅಲ್ ರೋಡ್ಸ್ ಲೀಡ್ ಟು ರೋಮ್ ಎನ್ನುವಂತೆ ರೋಮ್ ನಗರವೇ ಆಗಿದೆ.

ಕೃತಜ್ಞತೆಗಳನ್ನು ಸಲ್ಲಿಸುವ ಒಂದು ಪರಿಯಾಗಿ ಆರಂಭವಾದ ‘ಕಾಣಿಕೆ’ ಕೊಡುವ ಪದ್ಧತಿ ಕಾಲಕಾಲಕ್ಕೆ, ಪ್ರದೇಶ, ಪರಿಸರಕ್ಕೆ ತಕ್ಕಂತೆ ಬದಲಾಗುತ್ತ ಸಾಗಿದೆ. ಭಾರತದಲ್ಲಂತೂ ಅದೊಂದು ಸಾಮಾಜಿಕ ಕಟ್ಟುಪಾಡು ಎನ್ನುವಂತಹ ಸ್ವರೂಪವನ್ನೇ ಪಡೆದಿದೆ. ಕಾಣಿಕೆಗಳನ್ನು ಕೊಡುವಾಗ ಪ್ರೀತಿ, ಆದರಗಳಂತೂ ಸಹಜವಾಗಿಯೇ ವ್ಯಕ್ತವಾಗುತ್ತವೆ. ಅದರೊಟ್ಟಿಗೆ ಆ ‘ಕಾಣಿಕೆ’ ಪಡೆದವರಿಗೆ ಸ್ಮರಣಾರ್ಹವೂ ಆದಲ್ಲಿ ಅದಕ್ಕೆ ಬೆಲೆ ಕಟ್ಟಲಾದೀತೇ?

ಇತ್ತೀಚೆಗೆ ಬಾಲ್ಯಸ್ನೇಹಿತರೊಬ್ಬರು ನಮ್ಮ ಸ್ನೇಹದ ವಿಶೇಷ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರತಿದಿನದ ತಾರೀಖನ್ನು ಬದಲಾಯಿಸಿ ಇಡಬೇಕಾದಂಥ, ಕಟ್ಟಿಗೆಯಲ್ಲಿ ಸುಂದರವಾಗಿ ತಯಾರಿಸಿದಂತಹ ‘ಡೇಟರ್’ನಲ್ಲಿ ನಮ್ಮ ಗುಂಪಿನ ಸದಸ್ಯ, ಸದಸ್ಯೆಯರ ಫೋಟೊ ಹಾಕಿ ಕೊಟ್ಟಿದ್ದಾರೆ. ಇಂದಿನ ತಾಂತ್ರಿಕ ಯುಗದಲ್ಲಿ ಅಂದಿನ ದಿನಾಂಕ, ಗೋಡೆ ಗಡಿಯಾರ, ಮೊಬೈಲ್, ವಾಚ್ ಎಲ್ಲೆಂದರಲ್ಲಿ ಕಾಣಸಿಗುವಾಗಲೂ ಮಿತ್ರ ನೀಡಿದ ಈ ‘ಕಾಣಿಕೆ’ಯಲ್ಲಿ ಅಂದಿನ ದಿನಾಂಕವನ್ನು ಕೈಯಾರೆ ಬದಲಿಸಿ, ಬದಲಿಸುತ್ತ ಚಿತ್ರದಲ್ಲಿರುವ ಮಿತ್ರರನ್ನು ನೋಡಿದಾಗ ಸಿಕ್ಕುವ ಹಿತಾನುಭವ ನಿತ್ಯೋತ್ಸವವೇ ಸರಿ.

ಸಂಶೋಧಕ ಡಾ.ಚಿದಾನಂದಮೂರ್ತಿ ಅವರು ನನಗೊಮ್ಮೆ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಹೀಗೇ ರಸ್ತೆಯಲ್ಲಿ ಎದುರಾದರು. ಕೈಯಲ್ಲಿ ಅವರಿಗೆ ಭಾರವಾಗಿದೆ ಎಂದು ಭಾಸವಾಗುವಂತಹ ಪ್ಯಾಕೆಟ್ ಒಂದನ್ನು ಹಿಡಿದಿದ್ದರು. ಅದನ್ನು ಅವರ ಕೈಯಿಂದ ಕಿತ್ತುಕೊಂಡು ‘ನಡೀರಿ ಸರ್ ನಾನು ಇದನ್ನು ತಮ್ಮ ಮನೆಯವರೆಗೆ ತರುತ್ತೇನೆ’ ಎಂದು ಅವರೊಂದಿಗೆ ಹೊರಡುತ್ತಾ ‘ಸರ್ ಇದೇನು’ ಅಂದೆ. ‘ಬರೆಯೋ ಪೇಪರ್ ಬಿಟ್ಟು ಬೇರೆ ಇನ್ನೇನು ನಾನು ತಗೊಳ್ಳೆಪ್ಪಾ’ ಎಂದರು.

‘ಏನ್ ಸರ್, ಕಂಪ್ಯೂಟರ್‌ನಲ್ಲಿ ಬರೆಯೊಲ್ವಾ’ ಎಂದೆ. ‘ಅಯ್ಯೋ ಅದೆಲ್ಲಾ ನಂಗೆ ಸಾಧ್ಯವಾಗದ್ದಪ್ಪಾ’ ಎಂದರು. ಅವರನ್ನು ಮನೆಗೆ ಬಿಟ್ಟು ಬಂದ ಮರುದಿನವೇ ನಾನವರಿಗೆ ಪಾರ್ಕರ್ ಪೆನ್‌ ಅನ್ನು ತೆಗೆದುಕೊಂಡು ಹೋದೆ. ‘ಅಯ್ಯೋ ಇದನ್ನೇಕೆ ತಂದೆ, ಎಷ್ಟಿದರ ಬೆಲೆ. ತೊಗೊ’ ಎನ್ನುತ್ತಾ ಅದೆಷ್ಟೋ ಹಣ ಕೊಡಲು ಬಂದರು. ‘ಸರ್‌ ದಯವಿಟ್ಟು ಇದು ನನ್ನ ಪುಟ್ಟ ಕಾಣಿಕೆ’ ಎಂದು ಇಟ್ಟುಕೊಳ್ಳಿ ಎಂದು ಕೈಮುಗಿದೆ. ಒಲ್ಲದ ಮನಸ್ಸಿನಿಂದ ಅದನ್ನು ತೆಗೆದುಕೊಳ್ಳುತ್ತಾ ‘ಆಯಿತು ಬಿಡಪ್ಪ. ಇದೊಂದು ನಂಗೆ ನಿನ್ನ ಜ್ಞಾಪನ ಆಯ್ತು’ ಎಂದರು. ಮೊನ್ನೆ ಅವರಿಗೆ ಮಣ್ಣು ಕೊಡುವಾಗ ಇದೆಲ್ಲ ನೆನಪಾಗಿ ನನಗರಿವಿಲ್ಲದಂತೆಯೇ ನನ್ನ ಕಣ್ಣುಗಳು ಒದ್ದೆಯಾಗಿದ್ದವು.

ನನ್ನ ಮಗನ ಗೆಳೆಯನೊಬ್ಬ ರೇಡಿಯೊ ಪ್ರೇಮಿ. ಅವನು ಸ್ವತಃ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೂಲಕ ಸಂಗೀತ ಕೇಳುವುದು ಅವನಿಗೆ ಇಷ್ಟವಿರಲಿಲ್ಲ. ಇದನ್ನರಿತ ನನ್ನ ಮಗ ಅವನಿಗೆ ಜನ್ಮದಿನದಂದು ಗಿಫ್ಟ್‌ ಆಗಿ ರೇಡಿಯೊ ಕೊಟ್ಟ. ಈಗ ಅವನ ಸಹೊದ್ಯೋಗಿಗಳು ಹೇಳುವ ಒಂದು ಮಾತೆಂದರೆ, ಅವನು ಆಫೀಸಿಗೆ ಮೊಬೈಲ್, ಲ್ಯಾಪ್‌ಟಾಪ್ ಮರೆತು ಬರಬಹುದು ಆದರೆ ರೇಡಿಯೊನ್ನಲ್ಲ.

ಹೀಗೆ ಕಾಣಿಕೆಗಳು ಕೇವಲ ಕಾಣಿಕೆಗಳಾಗದೇ ಪಡೆಯುವವರಿಗೆ ಸ್ಮರಣಿಕೆಗಳೂ ಆದರೆ ಅದರ ಮಾತೇ ಬೇರೆ. ಕಾಣಿಕೆ ಕೊಡುವವರು ಪಡೆಯುವವರನ್ನು ಅಕ್ಷರಶಃ ಅರ್ಥೈಸಿಕೊಂಡು, ಅವರ ಸದಭಿರುಚಿಗಳನ್ನು ಗುರುತಿಸಿ ಅದಕ್ಕನುಗುಣವಾಗಿ ಕಾಣಿಕೆಯನ್ನು ಕೊಟ್ಟಾಗ, ಅದನ್ನು ಸ್ವೀಕರಿಸುವವರಿಗೆ ಆಗುವ ಸಂತೋಷ ಆ ಕಾಣಿಕೆಯ ಬೆಲೆಯನ್ನು ಅಗಣಿತ ಪಟ್ಟು ಹೆಚ್ಚಿಸುತ್ತದೆ. ಕುಟುಂಬದಲ್ಲೇ ಇರುವ ನಿಮಗಿಂತ ಚಿಕ್ಕವರಿಗೆ ಅವರು ಏನಾಗಬೇಕೆಂದು ನೀವು ಬಯಸುತ್ತೀರೋ ಅದಕ್ಕೆ ಪೂರಕವೆನ್ನುವಂಥ ಕೊಡುಗೆಗಳನ್ನೂ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT