ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾಯುಷ್ಯದ ಗುಟ್ಟಿನ ಬಗ್ಗೆ ಪ್ರೊ.ಜಿ ವೆಂಕಟಸುಬ್ಬಯ್ಯ ಹೇಳಿದ್ದು...

Last Updated 19 ಏಪ್ರಿಲ್ 2021, 7:36 IST
ಅಕ್ಷರ ಗಾತ್ರ

ಕನ್ನಡದ ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿರುವ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ (108) ನಿಧನರಾಗಿದ್ದಾರೆ. ತುಂಬುಜೀವನ, ಆರೋಗ್ಯ, ದೀರ್ಘಾಯುಷ್ಯದ ಗುಟ್ಟಿನ ಬಗ್ಗೆ ಅವರು ಹಲವು ಕಾರ್ಯಕ್ರಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟು.

ಜೀವಿತಾವಧಿಯ ಕೊನೆಯವರೆಗೂ ಸದಾ ಚಟುವಟಿಕೆಯಿಂದ ಇದ್ದವರು ವೆಂಕಟಸುಬ್ಬಯ್ಯ. ಒಂದು ವಾರದ ಹಿಂದೆ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದು ಬಿಟ್ಟರೆ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಇರಲಿಲ್ಲ. ಇದರ ಗುಟ್ಟೇನು? ಅವರೇ ಹಲವು ಕಡೆ ಹೇಳಿಕೊಂಡಿರುವ ಕೆಲವು ಅಂಶಗಳು ಇಲ್ಲಿವೆ.

ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು. ಜತೆಗೆ ಜೀವನದಲ್ಲಿ ಉದಾತ್ತ ಚಿಂತನೆಗಳನ್ನು ಅಳವಡಿಸಿ­ಕೊಳ್ಳುವುದರ ಬಗ್ಗೆ ಒತ್ತು ನೀಡಬೇಕು. ಇದರಿಂದ ಆರೋಗ್ಯಯುತ ಜೀವನ ನಡೆಸಬಹುದು ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

‘ಸಾಮಾನ್ಯವಾಗಿ ವಯಸ್ಸಾದಂತೆ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ, ತುಂಬಾ ವರ್ಷಗಳ ಹಿಂದೆ ಅಪಘಾತದಲ್ಲಿ ಭುಜದ ಮೂಳೆಗೆ ಸ್ವಲ್ಪ ಪೆಟ್ಟಾಗಿದ್ದು ಬಿಟ್ಟರೆ, ಅದೃಷ್ಟಕ್ಕೆ ಈವರೆಗೂ ಮೂಳೆ ನೋವು ಕಾಣಿಸಿಕೊಂಡಿಲ್ಲ’ ಎಂದು 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನ್ಮಾನ ಸ್ವೀಕರಿಸಿ ಅವರು ಹೇಳಿದ್ದರು.

ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯೂ ಮಾರಕ: ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವುದೂ ಕೂಡ ಕೆಲವೊಮ್ಮೆ ಮಾರಕವಾಗಿ ಪರಿಣಮಿಸಬಲ್ಲದು. ಇದು ಚಿಂತೆಗೆ ಕಾರಣವಾಗುತ್ತದೆ ಎಂದು ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟಿದ್ದರು. ಸತ್ವಯುತ ಆಹಾರ, ನಿರಂತರ ಯೋಗಾಭ್ಯಾಸ ಹಾಗೂ ದೃಢವಾದ ಚಿತ್ತಾರೋಗ್ಯವನ್ನು ಕಾಯ್ದುಕೊಳ್ಳು­ವುದ­ರಿಂದ ಉತ್ತಮ ಜೀವನ ನಡೆಸ­ಬಹುದು. ಹೊಸ ಕಾಯಿಲೆಗಳು, ಸವಾಲುಗಳಿಗೆ ವೈದ್ಯ ಲೋಕ ಉತ್ತರ ಕಂಡುಕೊಳ್ಳುತ್ತಿರು­ವುದರಿಂದ ವಿಪರೀತ ಚಿಂತೆ ಮಾಡು­ವುದು ತರವಲ್ಲ ಎಂಬುದು ಅವರ ಅಭಿಮತವಾಗಿತ್ತು.

‘ಅತಿಬೇಡವೆಲ್ಲಿಯೂ...’: ಅತಿಯಾದ ನಿದ್ದೆ, ಆಹಾರ ಸೇವನೆ ಒಳ್ಳೆಯದಲ್ಲ. ಧೂಮಪಾನ, ಮದ್ಯಪಾನಗಳಿಗೆ ದಾಸರಾಗದೇ ಇತರರಿಗೆ ತೊಂದರೆಯಾಗದಂತೆ ಜೀವನ ನಡೆಸಬೇಕು ಎಂದೂ ಅವರು ಮಾರ್ಗದರ್ಶನ ಮಾಡಿದ್ದರು. ತಾವೂ ಈ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವುದಾಗಿ ಹೇಳಿದ್ದರು.

ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಚೈತನ್ಯ ದೊರಕುತ್ತದೆ. ನಿರಂತರ ಯೋಗದಿಂದ ಏಕಾಗ್ರತೆ ಸಾಧಿಸಲು ಸಾಧ್ಯ ಎಂದೂ ಅವರು ಪ್ರತಿಪಾದಿಸಿದ್ದರು.

‘ಕುಟುಂಬದ ಪಾತ್ರ ಮಹತ್ತರ’: ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿವಹಿಸುವಲ್ಲಿ ಕುಟುಂಬದ ಪಾತ್ರ ಮಹತ್ತರ ಎಂದಿದ್ದರು ವೆಂಕಟಸುಬ್ಬಯ್ಯ. ತಮ್ಮ ಆರೋಗ್ಯ, ಯಶಸ್ವಿ ಜೀವನದ ಗುಟ್ಟಿಗೆ ಇದೂ ಒಂದು ಕಾರಣ ಎಂಬುದನ್ನು ವೆಂಕಟಸುಬ್ಬಯ್ಯ ನೆನಪಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT