ಭಾನುವಾರ, ಏಪ್ರಿಲ್ 2, 2023
23 °C

ಚಿತ್ರಸಂಪುಟ | ಕ್ಯಾಮರಾ v/s ಕುವೆಂಪು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಮಗುವೊಂದನ್ನು ಆಡಲು ಬಿಟ್ಟು ಅದರ ಛಾಯಾಚಿತ್ರಗಳನ್ನು ಮತ್ತೊಂದು ಮಗು ಚಿತ್ರಿಸಿದರೆ ಹೇಗಿರುತ್ತದೆ? ಅದಕ್ಕೆ ಉದಾಹರಣೆ ರೂಪದಲ್ಲಿ ನೋಡಬಹುದಾದ ಕೃತಿ – ‘ಕ್ಯಾಮರಾ v/s ಕುವೆಂಪು’.

‘ಸಾವಿರ ವರ್ಷಗಳ ಮಗು’ ಎನ್ನುವುದು ಗೊಮ್ಮಟನ ಕುರಿತು ಕವಿಬಣ್ಣನೆ. ಇಲ್ಲಿರುವುದು ಗೊಮ್ಮಟನಷ್ಟೇ ಉನ್ನತ ವ್ಯಕ್ತಿತ್ವದ ತೊಂಬತ್ತು ದಾಟಿದ ಮಗು. ಪಟ ತೆಗೆದವರೂ ಸಾಮಾನ್ಯರಲ್ಲ. ನಾಡಿಗಿಂತಲೂ ಕಾಡಿನ ಬಗ್ಗೆಯೇ ಹೆಚ್ಚು ಸೆಳೆತವುಳ್ಳವರು, ಅಂತರರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರು, ನಡವಳಿಕೆಯಲ್ಲಿ ‘ಮಗುತನ’ ಉಳಿಸಿಕೊಂಡವರು.

ಕುವೆಂಪು ಅವರ ಕುರಿತ ಚಿತ್ರಸಂಪುಟ ಮಾಡುವ ಕನಸಿನ ಬೆನ್ನತ್ತಿದ ಕೃಪಾಕರ–ಸೇನಾನಿ ಅವರ ಪ್ರಯತ್ನದ ಫಲ, ‘ಕ್ಯಾಮರಾ v/s ಕುವೆಂಪು’ ಚಿತ್ರಪಟ ಸಂಪುಟ. 1989ರಲ್ಲಿ ನಡೆದ ನೆರಳುಬೆಳಕಿನ ಅನುಸಂಧಾನ, ಮೂರು ದಶಕಗಳ ನಂತರ ಕೃತಿರೂಪದಲ್ಲಿ ಬೆಳಕುಕಂಡಿದೆ. ಆಧುನಿಕ ಕರ್ನಾಟಕದ ಮಹಾನ್‌ ದಾರ್ಶನಿಕ ಪ್ರತಿಭೆಯೊಂದರ ದೈನಿಕ ಚಿತ್ರಗಳನ್ನು ದಾಖಲಿಸುವ ಪ್ರಾಂಜಲ ಪ್ರಯತ್ನದಂತೆ ಈ ಕೃತಿ ಗಮನಸೆಳೆಯುತ್ತದೆ.

ಕ್ಯಾಮರಾ v/s ಕುವೆಂಪು
ಕೃಪಾಕರ– ಸೇನಾನಿ
ಪುಸ್ತಕ ಪ್ರಕಾಶನ
94482 03730

 

 

 

ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿ ಅವರಿಗೆ ಕುವೆಂಪು ಪೂಜಾಗೃಹದಲ್ಲಿ ಎದುರಾಗಿದ್ದಾರೆ. ನಮಗೆ ಬೇಕಾದ ಭಕ್ತಿ ಮತ್ತು ವೈಚಾರಿಕತೆಯನ್ನು ಆ ಚಿತ್ರಪಟ ಸೂಚಿಸುವಂತಿದೆ.

ಕೃಪಾಕರ–ಸೇನಾನಿ ಅವರ ಚಿತ್ರಪಟ ಸಂಪುಟದ ಉದ್ದಕ್ಕೂ ಕೆಲಸ ಮಾಡಿರುವುದು, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ’ ಎನ್ನುವ ಅರಿವು. ಬುಟ್ಟಿಯಲ್ಲಿ ಹಣ್ಣು ತರುವ ಹಣ್ಣಮ್ಮ, ಹೇರ್‌ ಕಟಿಂಗ್‌ ಕಲಾವಿದ ಅಶ್ವಥ್ ಇಲ್ಲಿದ್ದಾರೆ. ಇಲ್ಲಿನ ಚಿತ್ರಪಟಗಳಲ್ಲಿ ಕುವೆಂಪು ನೆರಳಿನಂತೆ, ಬೆಳಕಿನಕೋಲಿನಂತೆ, ನಡಿಗೆ ಕಲಿತ ಮಗುವೊಂದರ ಎಚ್ಚರದ ಚಲನೆಯಂತೆ, ಪ್ರಕೃತಿಯ ಚಲನೆ–ನಿಶ್ಚಲದಂತೆ ಕಾಣಿಸುತ್ತಾರೆ. ಕವಿಯ ಕುರ್ಚಿ, ಊರುಗೋಲು, ಪತ್ರಿಕೆಗೂ ಇಲ್ಲಿ ಜೀವವಿದೆ. ಮೇಜಿನ ಹಿಂದೆ ಇಣುಕುವ ಪಿಳಿಪಿಳಿ ಕಣ್ಣುಗಳ ಕವಿ, ಕ್ಷೌರಕ್ಕೆ ಒಪ್ಪಿಸಿಕೊಂಡ ಕವಿ ಎದೆಗಿಳಿಯುತ್ತಾರೆ. ‘ಉದಯರವಿ’ಯ ಅಂಗಳದ ಮರಗಳು ಪಿಸುನುಡಿಯುತ್ತವೆ.

ಮಹಾಕಾವ್ಯದಂಥ ವ್ಯಕ್ತಿತ್ವವನ್ನು ಕಾವ್ಯದ ಭಾಷೆಯಲ್ಲಿ ಚಿತ್ರಿಸುವ ಪ್ರಯತ್ನಕ್ಕೆ ದೃಶ್ಯಭಾಷೆಯ ವ್ಯಾಕರಣ ಇಲ್ಲಿ ಕೈಜೋಡಿಸಿದೆ. ಮಹಾಕವಿಯನ್ನು ಅಬ್ಬರವಿಲ್ಲದೆ ಸಹೃದಯರಿಗೆ ಆಪ್ತವಾಗಿಸುವ ಹಂಬಲದ ಅರ್ಥಪೂರ್ಣ ಪ್ರಯತ್ನ, ‘ಕ್ಯಾಮರಾ v/s ಕುವೆಂಪು’. ಮೂರು ದಶಕಗಳ ನಂತರ ಈ ಫೋಟೊಗಳು ಸಂಕಲನದ ರೂಪು ಪಡೆದಿರುವುದು, ‘ಅವಸರವೂ ಸಾವಧಾನದ ಬೆನ್ನೇರಿದೆ’ ಮಾತನ್ನು ನಿಜಗೊಳಿಸುವ ಪ್ರಯತ್ನದಂತಿದೆ.

ಚಿತ್ರಪಟಗಳಿಗೆ ಕೃಪಾಕರ– ಸೇನಾನಿ ಅವರೇ ಬರೆದ ಟಿಪ್ಪಣಿಗಳು ಇಲ್ಲಿವೆ...

_____________________***_____________________

ಒಮ್ಮೆ ಕುವೆಂಪು ಮನೆಯಂಗಳದ ತೋಟದಲ್ಲಿ ವಿಶ್ರಮಿಸಿದ್ದರು. ಇನ್ಸೂರ ಗಿಡಗಳಲ್ಲಿ ತೂಗುತ್ತಿದ್ದ ಕಡುಗೆಂಪು ಹೂವುಗಳನ್ನು, ಗಿಡವನ್ನು ಏರಿ ಇಳಿ ಬಿದ್ದಿದ್ದ ಬಳ್ಳಿಗಳಲ್ಲಿ ತುಂಬಿದ್ದ ಮಲ್ಲಿಗೆ ಹೂವುಗಳನ್ನು, ಬಣ್ಣದ ಓಕುಳಿಯಲ್ಲಿ ಮಿಂದಂತಿದ್ದ ಕೋಟಿನ್ ಎಲೆಗಳನ್ನು ನೋಡಿ, ಆನಂದಿಸುತ್ತಿದ್ದರು. ನಾವು ಅಲ್ಲೇ ಓಡಾಡುತ್ತಾ ಅವರ ಚಿತ್ರಗಳನ್ನು ತೆಗೆಯುತ್ತಿದ್ದೆವು. ಇದ್ದಕ್ಕಿದ್ದಂತೆ ‘‘ಅಣ್ಣಾ ಈಗ ಹಾರಿ ಹೋಯ್ತಲ್ಲ, ಆ ಹಕ್ಕಿಯನ್ನು ಏನೆಂದು ಕರೆಯುತ್ತೀ’’ ಎಂದು ವಿಚಾರಿಸಿದರು.

ಅದು ‘Tickell's flowerpecker’ ಎಂಬ ಪುಟಾಣಿ ಹಕ್ಕಿಯಾಗಿತ್ತು. ಒಂದೆರಡು ನಿಮಿಷಗಳ ಬಳಿಕ ಕುವೆಂಪು ‘ನಾನು ಆ ಹಕ್ಕಿಗೆ ‘ಬಂದಳಿಕೆ ಹಕ್ಕಿ’ ಎಂದು ಕರೆಯುತ್ತೇನೆ’ ಎಂದರು. ಗುಬ್ಬಿಗಿಂತಲೂ ಸಣ್ಣದಾದ, ಶರವೇಗದಲ್ಲಿ ಹಾರುವ ಅಷ್ಟು ಚಿಕ್ಕ ಹಕ್ಕಿಯನ್ನು ಕುವೆಂಪು ಕಂಡಿದ್ದಾದರೂ ಹೇಗೆಂದು ಆ ಕ್ಷಣ ನಮಗೆ ಅಚ್ಚರಿಯಾಯಿತು. ಅದೇ ರೀತಿ ಅವರು ಸೂಚಿಸಿದ ಹಕ್ಕಿಯ ಹೆಸರು ಸಹ ನಮಗೆ ರೋಮಾಂಚನವನ್ನು ಉಂಟುಮಾಡಿತ್ತು.

_____________________***_____________________

ಅರವತ್ತು ಎಪ್ಪತ್ತು ವರ್ಷಗಳ ಹಿಂದೆ, ಗಡಿಯಾರ ಸ್ವಲ್ಪ ಸ್ಥಿತಿವಂತರ ಮನೆಗಳಲ್ಲಿ ಮಾತ್ರ ಇರುತ್ತಿತ್ತು. ಉಳಿದವರಿಗೆ ಅದು ಕೈಗೆಟುಕದ ವಸ್ತುವಾಗಿತ್ತು. ಹಾಗಾಗಿ ಹೆಚ್ಚಿನವರಿಗೆ ಸೂರ್ಯನೇ ಗಡಿಯಾರದ ಕೆಲಸ ಕೂಡ ನಿರ್ವಹಿಸುತ್ತಿದ್ದ.

ಆ ದಿನಗಳಲ್ಲಿ ಇಂಗ್ಲೆಂಡಿನ ಸರಕು ಸಾಗಣೆಯ ಹಡಗುಗಳು ಬಗೆಬಗೆಯ ವಸ್ತುಗಳನ್ನು ಹೊತ್ತು ಭಾರತಕ್ಕೆ ತರುತ್ತಿದ್ದವು. ಗಡಿಯಾರವೂ ಹಾಗೆಯೇ ಬಂದು ಬಟವಾಡೆ ಆಗುತ್ತಿತ್ತು.

ಕುವೆಂಪು ಸಹ, ಹಡಗೊಂದರಲ್ಲಿ ಬಂದಿದ್ದ ಗಡಿಯಾರವನ್ನು ಐದು ರೂಪಾಯಿಗಳಿಗೆ ಖರೀದಿಸಿದ್ದರಂತೆ. ಅದು ಉದಯರವಿಯ ಊಟದ ಮನೆಯಲ್ಲಿತ್ತು. ಈ ಗಡಿಯಾರದ ಬಗೆಗೆ ಕುವೆಂಪು ಅವರಿಗೆ ವಿಶೇಷ ಮಮತೆ, ಕೀ ಕೊಡುವ ಕೆಲಸವನ್ನು ಅವರೇ ಎಚ್ಚರಿಕೆಯಿಂದ ಗಮನಕೊಟ್ಟು ನಿರ್ವಹಿಸುತ್ತಿದ್ದುದರಿಂದ, ಈ ಗಡಿಯಾರಕ್ಕೆ ರಿಪೇರಿ ಅಂಗಡಿಯ ಪರಿಚಯವಿರಲಿಲ್ಲ. ನಂತರದ ದಿನಗಳಲ್ಲಿ ಕುವೆಂಪು ಅವರಿಗೆ ವಯಸ್ಸಾಗಿದ್ದರಿಂದ ಕುರ್ಚಿಯ ಮೇಲೇರಿ ಕೀ ಕೊಡುವುದು ಕಷ್ಟವಾಗಿ ಗಡಿಯಾರವನ್ನು ಎರಡು ಅಡಿ ಕೆಳಗಿಳಿಸಿದ್ದರು.

_____________________***_____________________

ಮಂಗಳವಾರ. ಅದು ಮಂಗಳಕರ ದಿನವಲ್ಲ. ಆ ದಿನ ಏನೆಲ್ಲಾ ಮಾಡಬಾರದೆಂಬುದನ್ನು ತಿಳಿದುಕೊಳ್ಳುವ ವೇಳೆಗೆ ಬುಧವಾರ ಆಗಮಿಸಿರುತ್ತದೆ.

ಕುವೆಂಪು ಅವರ ಹೇರ್ ಕಟಿಂಗ್, ಶೇವಿಂಗ್ ಕಾರ್ಯಕ್ರಮಗಳು ಜರುಗುತ್ತಿದ್ದುದೇ ಮಂಗಳವಾರಗಳಂದು, ಆದರೆ, ಅದು ಮೂಢನಂಬಿಕೆಗಳನ್ನು ಧಿಕ್ಕರಿಸಿ ಪ್ರಗತಿಪರ ಧೋರಣೆಯನ್ನು ಅನುಸರಿಸಲೇಬೇಕೆಂಬ ಉದ್ದೇಶದಿಂದೇನಲ್ಲ. ‘ಮಂಗಳವಾರ’ದ ಇಕ್ಕಟ್ಟಿನಿಂದಾಗಿ, ವ್ಯಾಪಾರವಿಲ್ಲದೆ ಅನಿವಾರ್ಯವಾಗಿ ಅಂಗಡಿ ಮುಚ್ಚಲೇಬೇಕಿದ್ದ ಅಶ್ವಥ್‌ಗೂ ಸಹ ಬಿಡುವಿರುತ್ತದೆ ಎಂಬ ಕಾರಣದಿಂದಷ್ಟೆ.

ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಉದಯರವಿಯಲ್ಲಿ ಅಶ್ವಥ್ ಹಾಜರಿರುತ್ತಿದ್ದರು. ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಂತೆ, ಬಿಳಿಬಟ್ಟೆ ಧರಿಸಿ, ಮೂಗುಬಾಯಿಯನ್ನು ಬಿಳಿಯ ಶುಭ್ರವಸ್ತ್ರದಿಂದ ಬಿಗಿಯಾಗಿ ಕಟ್ಟಿಕೊಂಡು ಹೇರ್‌ಕಟಿಂಗ್ ಆರಂಭಿಸುತ್ತಿದ್ದರು (ಫೋಟೊ ಸೆಷನ್‌ಗಾಗಿ ಆ ಶಿಷ್ಟಾಚಾರಕ್ಕೆ ಒಮ್ಮೆ ಬಿಡುವು ಕೊಡಲಾಗಿತ್ತು!). ಕುವೆಂಪು ಸಹ ತಮ್ಮ ಎಂದಿನ ಬಿಳಿ ಸಮವಸ್ತ್ರದ ಮೇಲೊಂದು ಬಿಳಿಯ ಹೊದಿಕೆಯನ್ನು ಹೊದ್ದು ಕುಳಿತಿರುತ್ತಿದ್ದರು.

'ಕುವೆಂಪು ಜೊತೆಗೆ ಒಂದು ಒಳ್ಳೆ ಫೋಟೊ ತೆಗೆದು ಕೊಡಬೇಕು' ಎಂದು ಅಶ್ವಥ್ ವಿನಂತಿಸಿದ್ದರು. ಅದಕ್ಕೇನಂತೆ ಪುಸ್ತಕ ಮಾಡುತ್ತಿದ್ದೇವೆ. ಅದರ ಪ್ರತಿಯನ್ನೇ ನಿಮಗೆ ನೀಡುತ್ತೇವೆ ಎಂದು ಹೇಳಿದಾಗ ಅವರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ನಾವು ಫೋಟೊ ಕೊಡುವುದನ್ನು, ಪುಸ್ತಕ ಮಾಡುವುದನ್ನು ಮರೆತೇ ಬಿಟ್ಟಿದ್ದೆವು. ಈಗ ಪುಸ್ತಕ ಸಿದ್ಧವಾಗಿದೆ. ಆದರೆ ಅಶ್ವಥ್‌ ಇಲ್ಲ. ಪುಸ್ತಕದಲ್ಲಿ ಮಾತ್ರ ಇದ್ದಾರೆ.

_____________________***_____________________

ಕೊಠಡಿಯೊಳಗಿನ ಕುರ್ಚಿಯಲ್ಲೇ ತುಂಬಾ ಹೊತ್ತು ಕುಳಿತಿದ್ದ ಕುವೆಂಪು ಅವರಿಗೆ ಏನೆಲ್ಲ ನೆನಪುಗಳು ಆವರಿಸಿರಬಹುದು. ಅಡವಿಯಲ್ಲಿ ಕಳೆದು ಹೋಗಿ, ಮಳೆಯಲ್ಲಿ ಮಿಂದು, ಮಲೆನಾಡಿನೊಡನೆ ಅನುಸಂಧಾನ ನಡೆಸುತ್ತಿದ್ದರೋ ಏನೋ ಎಂಬಂತಿತ್ತು ಅವರ ಮುಖದ ಮೇಲಿದ್ದ ಸ್ನಿಗ್ಧ ಮಂದಹಾಸ.

*

ಜನ ಕೆಲಸ ಮಾಡುವ ಕಾರ್ಪೋರೇಟ್‌ ಆಫೀಸ್‌ಗಳಿಗೆ ಬರುವಂತೆ, ‘ಉದಯರವಿ’ಗೆ ಪ್ರತಿದಿನ ಲೆಕ್ಕವಿಲ್ಲದಷ್ಟು ಅಂಚೆಪತ್ರಗಳು, ಪಾರ್ಸೆಲ್‌ಗಳು ಬರುತ್ತಿದ್ದವು. ಇವುಗಳಲ್ಲಿ ಅನೇಕ ಪತ್ರಗಳ ವಿಳಾಸ ಕೇವಲ ‘ಕುವೆಂಪು, ಮೈಸೂರು’ ಎಂದಷ್ಟೇ ಇರುತ್ತಿತ್ತು. ಆದರೆ ಅವು ಎಂದೂ ದಾರಿ ತಪ್ಪುತ್ತಿರಲಿಲ್ಲ.

ಪತ್ರಗಳನ್ನು ಎಚ್ಚರಿಕೆಯಿಂದ ಓದಿ, ವಿಂಗಡಿಸಿ, ಸೂಕ್ತವೆನಿಸಿದ ಪತ್ರಗಳನ್ನು ಆಯ್ದು, ಆಪ್ತ ಕಾರ್ಯದರ್ಶಿಯಂತೆ ಕುವೆಂಪು ಅವರಿಗೆ ಓದಿ ಹೇಳುವುದು ತಾರಿಣಿಯವರ ದಿನ ನಿತ್ಯದ ಕೆಲಸಗಳಲ್ಲಿ ಒಂದು. ಜಾತಕ, ನಕ್ಷತ್ರಗಳಿಗೆ ಅನ್ವಯವಾಗುವಂತೆ, ಹೆಸರು ಯಾವ ಅಕ್ಷರದಿಂದ ಆರಂಭವಾಗಬೇಕೆಂಬುದನ್ನು ಕೂಡಾ ತಿಳಿಸಿ, ತನ್ನ ಮುದ್ದು ಮೊಮ್ಮಗಳಿಗೆ ಅಥವಾ ಮೊಮ್ಮಗನಿಗೆ ಸುಂದರವಾದ ಹೆಸರೊಂದನ್ನು ಸೂಚಿಸಬೇಕೆಂದು ಕುವೆಂಪು ಅವರಿಗೆ ಮನವಿ ಮಾಡಿರುವಂತಹ ಪತ್ರಗಳೂ ಅದರಲ್ಲಿರುತ್ತಿದ್ದವು. ಇಂತಹ ಗಂಭೀರ ವಿಷಯಗಳನ್ನು ಕುವೆಂಪು ಅವರ ಗಮನಕ್ಕೆ ತರುತ್ತಿಲ್ಲವೆಂಬ ಗುರುತರವಾದ ಆಪಾದನೆಗಳಿಗೆ ತಾರಿಣಿ ಆಗಾಗ್ಗೆ ಈಡಾಗುತ್ತಿದ್ದರು.

_____________________***_____________________

ಕುವೆಂಪು ಅವರ ಛಾಯಾಚಿತ್ರಗಳನ್ನು ನಾವು ತೆಗೆಯುತ್ತಿದ್ದ ಸಮಯದಲ್ಲಿ, ಸಣ್ಣ ಸಣ್ಣ ಅಕ್ಷರಗಳನ್ನು ಓದಲು ಅವರ ಕನ್ನಡಕ ನಿರಾಕರಿಸುತ್ತಿತ್ತು. ಆದರೆ ಅವರ ಓದುವ ಉತ್ಸಾಹವನ್ನು ಕಸಿದುಕೊಳ್ಳಲು ಅದಕ್ಕೆ ಸಾಧ್ಯವಾಗಿರಲಿಲ್ಲ.

ಬದಲಾಗಿ ಕನ್ನಡಕವೇ ತನ್ನ ಉದ್ಯೋಗವನ್ನು ಕಳೆದುಕೊಂಡಿತ್ತು.

_____________________***_____________________

ಉದಯರವಿಯಲ್ಲಿ ಯಾವಾಗಲೂ ಕಿಟಕಿ, ಬಾಗಿಲುಗಳೆಲ್ಲಾ ಮುಚ್ಚಿದ್ದ ಕೊಠಡಿಯೊಂದಿತ್ತು. ಹಿಂದೊಮ್ಮೆ ಕುವೆಂಪು ಅವರು ಓದುತ್ತಾ, ಬರೆಯುತ್ತಾ, ಸಾವಿರಾರು ಗಂಟೆಗಳನ್ನು ಕಳೆದಿದ್ದ ಕೊಠಡಿಯದು. ಅವರ ಬರಹಗಳು ಜಿನುಗಿ, ಹೊಳೆಯಾಗಿ, ಭೋರ್ಗರೆದು ಮಹಾಕಾವ್ಯ, ಕಾದಂಬರಿಗಳ ರೂಪ ಪಡೆದಿದ್ದು ಈ ಕೊಠಡಿಯಲ್ಲೆ...

ಅಂದು ವರಾಂಡದಲ್ಲಿ ವಿಶ್ರಮಿಸಿದ್ದ ಕುವೆಂಪು ಅವರನ್ನು ಆ ಕೊಠಡಿಗೆ ಕರೆದುಕೊಂಡು ಹೋಗಬಹುದೆ ಎಂದು ತಾರಿಣಿಯವರನ್ನು ಸ್ವಲ್ಪ ಹಿಂಜರಿಕೆಯಿಂದಲೇ ಕೇಳಿದೆವು. ಕೆಲವೇ ಕ್ಷಣಗಳಲ್ಲಿ ಕುವೆಂಪು ಅವರ ಒಪ್ಪಿಗೆ ಕೂಡ ಸಿಕ್ಕಿತು.

ಅಂದಹಾಗೆ, ಪ್ರಜಾವಾಣಿ ಪತ್ರಿಕೆಯನ್ನು ಗಹನವಾಗಿ ತಿರುವಿ ಹಾಕುವುದು ಅವರ ನಿತ್ಯದ ರೂಢಿಯಾಗಿತ್ತು.

_____________________***_____________________

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು