ಮಂಗಳವಾರ, ಸೆಪ್ಟೆಂಬರ್ 28, 2021
24 °C

ಹಂಪಿಯನ್ನು ಹೀಗೆ ನೋಡಿ!

ಚಿತ್ರ–ಮಾಹಿತಿ: ತಾಜುದ್ದೀನ್‌ ಆಜಾದ್‌ Updated:

ಅಕ್ಷರ ಗಾತ್ರ : | |

ಚರಿತ್ರೆಯ ಜೀವಂತ ಪುಟ ಎನಿಸಿದ ಹಂಪಿಯನ್ನು ನೀವು ಹೀಗೆ ನೋಡಿರುವುದು ಸಾಧ್ಯವೇ ಇಲ್ಲಬಿಡಿ. ಮುಂಗಾರಿನ ಮೊದಲ ಮಳೆ ಸುರಿದ ಕೆಲವು ದಿನಗಳ ಬಳಿಕ ಸೆರೆಸಿಕ್ಕ ಚಿತ್ರಗಳಿವು. ಆಗತಾನೆ ತಲೆಸ್ನಾನ ಮಾಡಿ, ಎಳೆ ಬಿಸಿಲಿಗೆ ಮೈಯೊಡ್ಡಿದ ಯುವತಿಯಂತೆ ಸ್ಮಾರಕಗಳೆಲ್ಲ ಫಳ ಫಳ ಹೊಳೆಯುತ್ತಿದ್ದವು. ಅವುಗಳ ಆವರಣದಲ್ಲಿ ಬೆಳೆಸಲಾದ ಗಿಡ–ಬಳ್ಳಿಗಳು ಗಾಢ ಹಸಿರುಬಣ್ಣದ ಎಲೆಗಳನ್ನು ತೊಟ್ಟು, ಮೊಗ್ಗುಗಳನ್ನು ಮೈತುಂಬಾ ಧರಿಸಿಕೊಂಡು ನಿಂತಿದ್ದವು. ಸ್ಮಾರಕಗಳ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು, ಆ ಸ್ಮಾರಕಗಳ ಜತೆಯಲ್ಲೇ ಬಾಳಿ ಬದುಕುವ ಗಿಡ–ಮರಗಳನ್ನೂ ಸೇರಿಸಿಕೊಂಡು ತೆಗೆದರೆ ಹೇಗಿರುತ್ತದೆ? ಈ ಯೋಚನೆಯಲ್ಲೇ ಹಂಪಿಯಲ್ಲಿ ಸುತ್ತಾಡಿದಾಗ ಕ್ಯಾಮೆರಾ ಎಡೆಬಿಡದೆ ಆ ಸ್ಮಾರಕಗಳತ್ತ ಕಣ್ಣು ಹೊಡೆಯತೊಡಗಿತು; ಹಾಗೆ ಕಣ್ಣು ಹೊಡೆದಿದ್ದು ಕೆಲವೊಮ್ಮೆ ಮಲಗಿ, ಕೆಲವೊಮ್ಮೆ ಮಂಡಿಯೂರಿ ಕುಳಿತು, ಇನ್ನು ಕೆಲವೊಮ್ಮೆ ಬಾಗಿ! ನೇರವಾಗಿ ನಿಂತು ಕ್ಲಿಕ್ಕಿಸಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ವಿಜಯವಿಠಲ ದೇವಸ್ಥಾನದ ಆವರಣದಲ್ಲಿ ಕಲ್ಲಿನ ರಥದ ಅನತಿ ದೂರದಲ್ಲಿ ಗಿಡಗಳು ಮೊಗ್ಗು ತೊಟ್ಟುಕೊಂಡು ನಿಂತಿದ್ದವು. ರಥದ ಹಾದಿಯಲ್ಲಿ ಹಸಿರು ಹಾಸಿದಂತೆ ಚಿತ್ರ ತೆಗೆಯುವ ಮನಸ್ಸಾಯಿತು. ಸಪ್ತಸ್ವರ ಹೊರಡಿಸುವ ವಿಜಯವಿಠಲ ದೇವಸ್ಥಾನವೂ ಫ್ರೇಮ್‌ನಲ್ಲಿ ಇರಬೇಕು ಎನ್ನುವ ಉಮೇದಿಯೂ ಇತ್ತು. ಅದೇ ಕೋನದಲ್ಲಿ ನಿಂತುಕೊಂಡು ಬೆನ್ನುಬಾಗಿಸಿ, ಕ್ಲಿಕ್ಕಿಸಿ ಸೆರೆಹಿಡಿದ ಚಿತ್ರಗಳನ್ನು ನೋಡಿದಾಗ ಖುಷಿಗೆ ಪಾರವೇ ಇರಲಿಲ್ಲ. ಹಾಗೆಯೇ ಸವಾರಿ ಉಳಿದ ಸ್ಮಾರಕಗಳ ಕಡೆಗೂ ಹೊರಟಿತು.

ಕಮಲ ಮಹಲ್‌ ಸುತ್ತಲೂ ಹಸಿರು ಹಾಸಿ ಮಲಗಿದೆ. ಹತ್ತಿರದಲ್ಲಿಯೇ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳೂ ಇವೆ. ಮರವೊಂದು ಜೀರ್ಣವಾಗಿದ್ದರೂ ಈಗ ಹಸಿರು ಮುಕ್ಕಳಿಸುತ್ತಿದೆ. ಕಮಲ ಮಹಲ್‌ ಜತೆ ಆ ಮರ ನೂರಾರು ವರ್ಷಗಳ ನೆನಪುಗಳನ್ನು ಮೆಲುಕು ಹಾಕುತ್ತಿರುವಂತೆ ಭಾಸವಾಗುತ್ತದೆ. ಆನೆಸಾಲಿಗೆ (ಗಜಶಾಲೆ) ಹೋದಾಗಲೂ ಹಸಿರೇ ಹಸಿರು. ಅದೇ ಮಹಾನವಮಿ ದಿಬ್ಬವನ್ನು ಸುತ್ತಲೂ ಬೆಳೆದ ಗರಿಕೆ, ಹೂವಿನ ಗಿಡಗಳೇ ಎತ್ತಿ ಹಿಡಿದಿವೆಯೇನೋ ಎನ್ನುವಂತೆ ಕಾಣುತ್ತದೆ. ಕೆಲವೆಡೆ ಸ್ಮಾರಕಗಳಿಗೆ ಕೆಂಪು ಹೂವುಗಳ ಫ್ರೇಮ್‌ ಬೇರೆ.

ಶತಮಾನಗಳಿಂದ ಮಳೆ, ಬಿಸಿಲಿನ ಹೊಡೆತಕ್ಕೆ ಸಿಕ್ಕ ಸ್ಮಾರಕಗಳ ಕಪ್ಪುಬಣ್ಣಕ್ಕೂ ನೆಲದ ಮೇಲೆ ಹರಡಿರುವ ಹಸಿರಿಗೂ ಅದೆಂತಹ ಅದ್ಭುತ ಕಾಂಬಿನೇಷನ್‌! ಅವೇ ಅವೇ ಸ್ಮಾರಕಗಳಾದರೂ ಕಲಾವಿದನ ಕೈಚಳಕದಲ್ಲಿ ಅರಳುವ ಕಲಾಕೃತಿಗಳಂತೆ ಹಂಪಿಯ ಬಯಲು ಕ್ಯಾನ್ವಾಸ್‌ನಲ್ಲಿ ನಡೆಯುವ ಬದಲಾವಣೆಗಳು ನಯನಮನೋಹರ. ಮೊನ್ನೆಯಷ್ಟೇ ಹಂಪಿ, ಪ್ರವಾಸಿಗರಿಗೆ ಮತ್ತೆ ಬಾಗಿಲು ತೆರೆದಿದೆ. ಈ ಮಳೆಗಾಲದಲ್ಲಿ ನೀವೂ ಒಮ್ಮೆ ಹಂಪಿಗೆ ಬನ್ನಿ. ಬಂದಾಗ ಸ್ಮಾರಕಗಳನ್ನು ಈ ರೀತಿಯೇ ನೋಡಿ! ಇಂತಹ ಫ್ರೇಮ್‌ಗಳಲ್ಲಿ ದೃಶ್ಯ ಕಣ್ತುಂಬಿಕೊಳ್ಳಲು ನೀವು ಒಂದಿಷ್ಟು ಕಸರತ್ತನ್ನು ಮಾಡಬೇಕಾದುದಂತೂ ದಿಟ.

ಚಿತ್ರ ಮಾಹಿತಿ: ತಾಜುದ್ದೀನ್‌ ಆಜಾದ್‌

ನಿರೂಪಣೆ: ಪಿನಾಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು