ಗುರುವಾರ , ಆಗಸ್ಟ್ 18, 2022
26 °C

ಹಾಯಿದೋಣಿ| ದೇವರು ಬರೆದ ‘ಯಕ್ಷಿಣಿಯ ಕತೆ’

ಶಾಂತಿ ಎಲ್‌. ಕಿಂಬಾಲ್‌ Updated:

ಅಕ್ಷರ ಗಾತ್ರ : | |

Prajavani

‘ಕೋಲ್ಕತ್ತದಲ್ಲಿ ಹುಟ್ಟಿದ ನಾನು, ಸ್ಫುರದ್ರೂಪಿ ಯುವಕನನ್ನು ಮದುವೆಯಾಗಿದ್ದೇನೆ, ನಾಲ್ವರು ಮಕ್ಕಳೂ ಇದ್ದಾರೆ’ ಎಂದರೆ, ನನ್ನ ಬದುಕು ತುಂಬಾ ಸುಂದರ ಎಂದು ನೀವು ಭಾವಿಸಬಹುದು. ಆದರೆ, ಎರಡು ತಿಂಗಳ ಮಗುವಾಗಿದ್ದ ನನ್ನನ್ನು ಹಿಡಿದುಕೊಂಡು 10–11 ವರ್ಷ ವಯಸ್ಸಿನ ನನ್ನ ಅಮ್ಮ, ಧಾವಿಸಿ ಬರುತ್ತಿದ್ದ ರೈಲಿನ ಮುಂದಕ್ಕೆ ಹಾರಿದ್ದಳು ಎಂದರೆ? 

ಇತರರಿಗಿಂತ ಭಿನ್ನವಾದ, ಬಹಳ ಸುಂದರವಾದ ಮತ್ತು ಯಕ್ಷಿಣಿಯಂತಹ ಬದುಕು ನನ್ನದು. 

ಕೈಗಳೆರಡೂ ತುಂಡರಿಸಿದ್ದ ಸ್ಥಿತಿಯಲ್ಲಿ ರೈಲು ಹಳಿಯ ಮೇಲೆ ಬಿದ್ದಿದ್ದ ನನ್ನನ್ನು ಗಮನಿಸಿದ ಯಾರೋ ಒಬ್ಬರು, ಕೋಲ್ಕತ್ತದ ಕೊಳೆಗೇರಿಯಲ್ಲಿದ್ದ ಅನಾಥಾಶ್ರಮಕ್ಕೆ ಒಪ್ಪಿಸಿದ್ದರು. ಅಲ್ಲಿ ನನ್ನ ಕೈಗಳಿಗೆ ಬ್ಯಾಂಡೇಜ್‌ ಕಟ್ಟಿದರು. ಆದರೆ, ದೇವರ ಎಣಿಕೆ ಬೇರೆಯೇ ಇತ್ತು ಎನಿಸುತ್ತದೆ. ಅಲಾಸ್ಕಾದಲ್ಲಿ ನೆಲೆಸಿದ್ದ ಕ್ರೈಸ್ತ ಧರ್ಮದ ಮಾರ್ಮನ್‌ ಪಂಗಡಕ್ಕೆ ಸೇರಿದ ಕುಟುಂಬವೊಂದು ನನ್ನನ್ನು ದತ್ತು ಪಡೆಯಿತು. ನಾನು 8 ಮಕ್ಕಳಿರುವ ಕುಟುಂಬವೊಂದರ ಭಾಗವಾದೆ. ಅವರಲ್ಲಿ ಆರು ಮಂದಿ ದತ್ತು ಮಕ್ಕಳೇ ಆಗಿದ್ದರು.

ಊಟ, ಡ್ರೈವಿಂಗ್‌, ಕಂಪ್ಯೂಟರ್‌ ಬಳಕೆಯಂತಹ ಕೆಲಸಗಳನ್ನು ಕಾಲುಗಳಿಂದಲೇ ಮಾಡುವುದನ್ನು ಕಲಿಯುತ್ತಾ ನಾನು ಬೆಳೆದೆ. ಸ್ವಲ್ಪ ಕಾಲ ಕೃತಕ ಕೈಗಳನ್ನು ಬಳಸಿದ್ದೆ. ಆದರೆ, ಕಾಲಿನಿಂದ ಸುಲಭ ಮತ್ತು ವೇಗವಾಗಿ ಕೆಲಸ ಮಾಡಲು ಸಾಧ್ಯ ಎಂಬ ಕಾರಣಕ್ಕೆ ಅವುಗಳನ್ನು ಬಿಟ್ಟುಬಿಟ್ಟೆ. ಮಗುವಾಗಿದ್ದಾಗ ಒಂಟಿ ಕಾಲಿನ ಮೇಲೆ ನಿಲ್ಲಲಾಗದೆ ನಾನು ಅನೇಕ ಬಾರಿ ಬೀಳುತ್ತಿದ್ದೆ ಎಂದು ನನ್ನ ಸಹೋದರಿ ಹೇಳುತ್ತಿದ್ದಳು. ಈಗ ನಾನು ಅಸಾಮಾನ್ಯವಾದ ಸಮತೋಲನವನ್ನು ಹೊಂದಿದ್ದೇನೆ. ಒಂಟಿಕಾಲಿನ ಮೇಲೆ ನಿಂತೇ ಅನೇಕ ಕೆಲಸಗಳನ್ನು ಮಾಡುತ್ತೇನೆ. ಒಂದೇ ಕಾಲಿನಿಂದ ಬೈಕ್‌ ಓಡಿಸುವುದನ್ನು ಕಲಿಯಬೇಕಿದೆ ಅಷ್ಟೆ.

ಕಾನ್ರಾಡ್‌ ಕಿಂಬಲ್‌ ಅವರನ್ನು ನಾನು ಮೊದಲು ಭೇಟಿಯಾಗಿದ್ದು, ಮಾರ್ಮನ್‌ ಪಂಗಡದ ಧಾರ್ಮಿಕ ಸಭೆಯಲ್ಲಿ. ಆತನ ದೃಢ ಮನೋಭಾವ ನನ್ನನ್ನು ಆಕರ್ಷಿಸಿತು. ಆತ ಈಗ ನನ್ನ ರಾಜಕುಮಾರ. ನಾವು ಮದುವೆಯಾಗಿ ಈಗ ಒಂಬತ್ತು ವರ್ಷಗಳಾದವು. ಮೊದಲ ಮಗುವಾದಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗುವನ್ನು ಎತ್ತಿಕೊಳ್ಳುವುದು ಹೇಗೆಂದೇ ನನಗೆ ತಿಳಿದಿರಲಿಲ್ಲ. ಆದರೆ, ಮಕ್ಕಳ ಆರೈಕೆ ಹೇಗೆ ಎಂಬುದನ್ನು ಕಲಿಯುತ್ತಾ ಹೋದೆ. ನನ್ನ ನಾಲ್ಕನೇ ಮಗುವಿಗೆ (ಎರಡನೇ ಮಗಳು) ಈಗ ಏಳು ವಾರ. 

ಭಾರತಕ್ಕೆ ಭೇಟಿಕೊಡಬೇಕು, ನನ್ನ ಹೆತ್ತವರ ಕುಟುಂಬವನ್ನು ಹುಡುಕಬೇಕು ಎಂಬ ತುಡಿತ ಇದೆ. ಆದರೆ, ನನ್ನಲ್ಲಿರುವ ಅತ್ಯಲ್ಪ ಮಾಹಿತಿ ಹಿಡಿದುಕೊಂಡು ಹೆತ್ತವರನ್ನು ಹುಡುಕುವುದು ಸುಲಭದ ಕೆಲಸವಲ್ಲ ಎಂಬುದೂ ಗೊತ್ತಿದೆ. ಮೇ 16ರಂದು ನಾನು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತೇನೆ. ನಾನು ಹುಟ್ಟಿದ ದಿನ ಅದುವೇ ಹೌದೇ ಎಂಬುದೂ ನನಗೆ ಖಚಿತವಿಲ್ಲ. 

ತಾಯಿಯಾಗಿರುವುದಕ್ಕೆ, ಕುಟುಂಬ ಜೀವನದ ಸಂತಸಕ್ಕೆ ನಾನು ಆಭಾರಿ. ಆ ದಿನ ನನ್ನ ತಾಯಿ ಮಾಡಿದ್ದಕ್ಕೆ ನನ್ನಲ್ಲಿ ಯಾವ ಕಹಿಯೂ ಇಲ್ಲ. ಆ ನಿರ್ಧಾರಕ್ಕೆ ಅವಳು ಯಾಕೆ ಬರಬೇಕಾಯಿತು ಎಂಬುದನ್ನು ಈ ಬದುಕು ಮುಗಿದ ಬಳಿಕ ಅವಳು ನನಗೆ ತಿಳಿಸಬಹುದು ಎಂಬ ಭಾವನೆ ನನ್ನಲ್ಲಿದೆ. ಆಕೆಯ ಅಲ್ಪಕಾಲದ ಬದುಕು ನನಗೆ ಸುಂದರ, ಸುಖಿ, ಯಕ್ಷಿಣಿಯಂತಹ ಜೀವನವನ್ನು ಕೊಟ್ಟಿತು.

***

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌beingyou17@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.