ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ಆಟೊ ರಾಜನ ತಾಯಿ ಪ್ರೀತಿ

Last Updated 7 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಅದು 1996ರ ಮಾತು. ನಟೋರಿಯಸ್ ಆಗಿದ್ದ ನಾನು ಸಂಪೂರ್ಣ ಬದಲಾದ ಕಾಲವದು. ಸಮಾಜ ಸೇವೆಯತ್ತ ನನ್ನ ಚಿತ್ತ ಹೊರಳುವಂತೆ ಮಾಡಿದ್ದು ಹಾಲುಗಲ್ಲದ ಆ ಒಂದು ನಿಷ್ಕಲ್ಮಶ ನಗು. ಅದೊಂದು ದಿನ, ಅನಾಥ ಮಗುವೊಂದು ರಸ್ತೆಬದಿಯ ಚರಂಡಿಯಲ್ಲಿ ಬಿದ್ದಿದೆ ಎಂಬ ಸುದ್ದಿ ನನ್ನ ಪೇಜರ್‌ಗೆ ಬಂತು. ಅವಸರದಿಂದ ಬೈಕ್ ಏರಿ ಹೊರಟೇಬಿಟ್ಟೆ. ಅಲ್ಲಿ ಕಣ್ಣಿಗೆ ಬಿದ್ದದ್ದು ಒಂದು ಅನಾಥ ಹೆಣ್ಣುಮಗು. ಮಾಸಿದ, ಹರಿದ ಬಟ್ಟೆ ಅದರ ಮೇಲಿತ್ತು. ಅವಳ ಎಡಗಣ್ಣು ಎಷ್ಟರಮಟ್ಟಿಗೆ ಊದಿಕೊಂಡಿತ್ತೆಂದರೆ ರೆಪ್ಪೆಯನ್ನು ಮುಚ್ಚಲೂ ಆಗುತ್ತಿರಲಿಲ್ಲ. ಅವಳ ಚರ್ಮಕ್ಕೆಲ್ಲ ಸೋಂಕು ತಗುಲಿತ್ತು. ನೋವಿನಿಂದ ಮಗು ನರಳುತ್ತಿತ್ತು. ಅಲ್ಲಿ ಸೇರಿದ್ದ ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಹಳೆಯದೊಂದು ಸೀರೆಯಲ್ಲಿ ಅವಳನ್ನು ಸುತ್ತಿ ಎದೆಗೆ ಕಟ್ಟಿಕೊಂಡು ಬೈಕ್ ಏರಿ ಹೊರಟೆ.

ಸ್ವಲ್ಪ ಸಮಯದ ನಂತರ ಅವಳಿಂದ ಯಾವುದೇ ಧ್ವನಿ ಬಾರದಿದ್ದಾಗ ಗಾಡಿ ನಿಲ್ಲಿಸಿ ಸೀರೆಯ ಜೋಳಿಗೆಯೊಳಗೆ ಇಣುಕಿ ನೋಡಿದಾಗ ನನಗೆ ಅಚ್ಚರಿ ಕಾದಿತ್ತು. ಅವಳ ಬೊಚ್ಚು ಬಾಯಿಯಲ್ಲಿ ನಿಷ್ಕಲ್ಮಶ ನಗು. ಅದನ್ನು ಕಂಡಾಗ ನನಗೂ ಈ ಹಸುಳೆಗೂ ಯಾವಜನ್ಮದ ನಂಟೋ ಎಂದೆನಿಸದೇ ಇರಲಿಲ್ಲ. ಅವಳಿಗೆ ನಾನು ‘ಗ್ರೇಸಿ’ ಎಂದು ಹೆಸರಿಟ್ಟೆ. ಮನೆಗೆ ಕರೆತಂದವನೇ ಸ್ನಾನಮಾಡಿಸಿದೆ. ಅಂದಿನಿಂದ ಅವಳನ್ನು ನನ್ನೊಂದಿಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದೆ. ತಾಯಿಯ ಹಾಗೆ ಜೋಪಾನ ಮಾಡಿದೆ. ದುರದೃಷ್ಟವಶಾತ್ ಅವಳ ಎಡಗಣ್ಣಿನ ಊತ ಉಲ್ಬಣಿಸಿ ಆ ಗಡ್ಡೆಯನ್ನು ತೆಗೆಯದೆ ಬೇರೆ ವಿಧಿಯೇ ಇರಲಿಲ್ಲ. ಮತ್ತೊಂದು ಕಣ್ಣಿನ ದೃಷ್ಟಿಯೂ ಅರ್ಧಕ್ಕೆ ಸೀಮಿತಗೊಂಡಿತು. ಅವಳ ಕುಟುಂಬವನ್ನು ಪತ್ತೆಹಚ್ಚಲು ಮಾಡಿದ ಯತ್ನಗಳೂ ಫಲ ನೀಡಲಿಲ್ಲ. ಆ ಸಮಯದಲ್ಲಿ ನನ್ನಲ್ಲಿ ಹಣದ ಕೊರತೆ ಇತ್ತಾದರೂ, ಆಕೆಯನ್ನು ಬಿಟ್ಟುಕೊಡಲು ನಾನು ಸಿದ್ಧನಿರಲಿಲ್ಲ.

ನನಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ನನ್ನ ಹೆಂಡತಿ ಗ್ರೇಸಿಯ ಸನಿಹಕ್ಕೂ ಹೋಗುತ್ತಿರಲಿಲ್ಲ. ಮೇಲಾಗಿ ಗಂಭೀರ ಆರೋಪವೊಂದನ್ನೂ ಹೊರಿಸಿದ್ದಳು. ನನ್ನ ಅಕ್ರಮ ಸಂಬಂಧದಿಂದ ಆ ಮಗು ಹುಟ್ಟಿದೆ ಎಂಬುದು ಆಕೆಯ ದೂರು. ಈ ಕಾರಣವಾಗಿ ಮನೆಯಲ್ಲಿ ರಂಪಾಟವೇ ನಡೆದರೂ, ನಾನು ಗ್ರೇಸಿಯನ್ನು ತ್ಯಜಿಸಲಿಲ್ಲ. ದಿನಗಳೆದಂತೆ ಗ್ರೇಸಿ ಮೋಡಿಗೆ ಆಕೆ ಒಳಗಾದಳು. ಈಗ, ಇಬ್ಬರೂ ಒಳ್ಳೆಯ ಗೆಳತಿಯರಾಗಿದ್ದಾರೆ. ಎಲ್ಲ ಮಕ್ಕಳಂತೆ ಆಕೆಯ ಮೊದಲ ನುಡಿ ‘ಅಮ್ಮ’ ಆಗಿರಲಿಲ್ಲ. ಆಕೆ ಹೇಳಿದ್ದೇ ‘ದಾದಾ’ ಎಂದು.

ತಮಗಿಂತ ಗ್ರೇಸಿ ಬಗೆಗೇ ಹೆಚ್ಚು ಪ್ರೀತಿ ಎಂಬುದು ನನ್ನ ಮಕ್ಕಳ ಆರೋಪ. ನನ್ನ ಮಕ್ಕಳಿಗೆ ಅಮ್ಮ ಇದ್ದಳು. ಆದರೆ ಗ್ರೇಸಿಗೆ ಇದ್ದಿದ್ದು ನಾನು ಮಾತ್ರ. ಎಲ್ಲ ತಂದೆಯರಂತೆ ಆಕೆಯ ಭವಿಷ್ಯದ ಬಗ್ಗೆ ನನಗೆ ಚಿಂತೆಯಿತ್ತು. ಕನ್ನಡ ಮಾಧ್ಯಮದಲ್ಲಿ 9ನೇ ತರಗತಿವರೆಗೆ ಓದಿದ ಆಕೆ ಈಗ ನನ್ನದೇ ಎನ್‌ಜಿಒನಲ್ಲಿ 60 ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾಳೆ. ತುಂಟ ಹುಡುಗಿಯಾದರೂ ಸೂಕ್ಷ್ಮ ಮನಸ್ಸಿನವಳು. ಈ ಹಂತಕ್ಕೆ ಬೆಳೆದಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ಆಕೆ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ನನಗೆ ಕಷ್ಟ.

ಕಾನೂನು ರೀತಿ ಆಕೆಯನ್ನು ನಾನು ದತ್ತು ಪಡೆದಿಲ್ಲ. ಆದರೆ ಪ್ರೀತಿಗೆ ಕಾಗಗದ ಪುರಾವೆ ಅಗತ್ಯವಿಲ್ಲ, ಡಿಎನ್‌ಎಯ ನಂಟೂ ಬೇಕಿಲ್ಲ. ಅಲ್ಲವೇ...

**

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ಜೀವನದ ನೈಜಕಥೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಭಾವ ಮೂಡಿಸಿ, ಪ್ರೇರಣೆ ತುಂಬುವ ಕೆಲಸದಲ್ಲಿ ತೊಡಗಿಸಿ ಕೊಂಡಿದೆ. ‘ಪ್ರಜಾವಾಣಿ’ಗಾಗಿ ‘ಬೀಯಿಂಗ್ ಯು’ ಈ ಹಾಯಿದೋಣಿಯ ಈ ಕಥೆಗಳನ್ನು ಕಟ್ಟಿಕೊಡುತ್ತಿದೆ...

ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT