ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕ್ಷಮಾಪಣೆಗೆಷ್ಟು ಧೈರ್ಯ ಬೇಕು

Sorry ಕೇಳುವುದು ಎಂಥ ಕಷ್ಟ?
Last Updated 10 ಡಿಸೆಂಬರ್ 2020, 6:56 IST
ಅಕ್ಷರ ಗಾತ್ರ
ADVERTISEMENT
""

ಕ್ಷಮಾಪಣೆಗೆಷ್ಟು ಧೈರ್ಯ ಬೇಕು?

ಊಹೂಂ.. ಸಾಧ್ಯನೆ ಇಲ್ಲ... ತುಟಿ ಬಿಚ್ಚಿದ್ರ ಕೇಳ್ರಿ... ಹಣಿಗಂಟು ಸಡಿಲಾದ್ರ ಹೇಳ್ರಿ. ನಮಗ ಗೊತ್ತದ ನಾವು ತಪ್ಪು ಮಾಡೇವಿ ಅಂತ. ಆದರೂ ಮನಸು ಒಪ್ಪೂದಿಲ್ಲ. ಅದರ ಸುತ್ತ ಸಮರ್ಥನೆಗಳ ಕೋಟೆಗೋಡೆ ಕಟ್ತೀವಿ. ಮ್ಯಾಲೊಂದು ಆ ಕ್ಷಣಕ್ಕ ನಾ ಮಾಡಿದ್ದು ಸರಿ ಇತ್ತು ಅನ್ನುವ ಪತಾಕೆಯನ್ನೂ ಹಾರಿಸಿಕೊಂಡು ಕುಂತಿರ್ತೀವಿ.

ಹಿಂಗಿರುವಾಗ ಸಹಜವಾಗಿ, ಸರಳವಾಗಿ sorry ಅಂತ ಐದು ಅಕ್ಷರಗಳ ಸರಳ ಪದ ಅದೆಷ್ಟು ಭಾರವಾಗಿ ಕಾಣ್ತದಂದ್ರ, ನಮ್ಮ ದೇಹ ಅದನ್ನು ಹೊರಲಾರದು. ನಮ್ಮ ನಾಲಗೆಗೆ ಅದು ಮಣಭಾರ. ಯಾಕಂದ್ರ ತಪ್ಪು ತಪ್ಪಂತ ನಮಗಲ್ಲ, ಇನ್ನೊಬ್ಬರಿಗೆ ಗೊತ್ತಾಗಿರ್ತದ. ನಮಗೂ ಆಮೇಲೆ ಹಳಹಳಿಕಿ ಆಗಿರ್ತದ. ಆದ್ರ ಅದನ್ನ ಅವರ ಮುಂದ ಒಪ್ಕೊಳ್ಳೂದು ಕಷ್ಟ.

ನಿಮಗೊಂದು ಮಾತು ಗೊತ್ತೈತೊ ಇಲ್ಲೋ.. ದಿನಾಲೂ ನಾವು ಸರಾಸರಿ 8 ಸಲ Sorry ಹೇಳ್ತೀವಂತ. ಈಗ ಆ ಎಂಟು ಸಲ ಯಾವವು ಅನ್ನೂವು ಒಮ್ಮೆ ನೆನಪು ಮಾಡ್ಕೊರಿ... ಯಾರಿಗೋ ಒಮ್ಮೆ ಕೈ ತಾಕಿರ್ತದ, ತಡವಾಗಿ ಹೋಗಿರ್ತೀರಿ, ಅಗ್ದಿ ಸಹಜಗೆ ಔಪಚಾರಿಕವಾಗಿ ಕೇಳಬೇಕಾಗಿರ್ತದ.. ಕೇಳಿರ್ತೀರಿ. ಆ ಎಲ್ಲ ಕ್ಷಮೆಗಳೂ ನಮ್ಮ ಮನಸಿನ ಮಾತಲ್ಲ. ಆದರ ಸೌಜನ್ಯಕ್ಕಾಗಿ, ಸಭ್ಯಸ್ಥರಾಗಿರೂದ್ರಿಂದ, ಔ‍ಪಚಾರಿಕವಾಗಿ ಕೇಳಬೇಕು, ಕೇಳಿರ್ತೇವಿ. ಈ ಕ್ಷಮೆಗಳ ಬಗ್ಗೆ ನಾವು ಇವೊತ್ತು ಮಾತಾಡೂದು ಬ್ಯಾಡ.

ಅಗ್ದಿ ಖರೇಖರೇ ತಪ್ಪು ಮಾಡಿರ್ತೇವಿ. ಒಪ್ಕೊಳ್ಳಾಕ ನಮ್ಮ ಮನಸು, ಅಹಂಕಾರ ಅಡ್ಡ ಬರ್ತಿರ್ತದ. ಅವಾಗ ಕ್ಷಮೆ ಕೇಳೂದು ಎಷ್ಟು ತ್ರಾಸಿನ ಕೆಲಸ ಅನಸ್ತದಲ್ಲ? ಕ್ಷಮೆ ಕೇಳುವಾಗ ನಮ್ಮ ತಪ್ಪನ್ನು ಉಲ್ಲೇಖಿಸುವುದು ಅಷ್ಟೇ ಮುಖ್ಯ ಆಗ್ತದ. ನಾ ನಿನ್ನ ಮ್ಯಾಲೆ ವಿನಾಕಾರಣ ಜೋರು ಮಾಡಿದೆ.. I am sorry' ಹಿಂಗ ಮಾಡಿದ ತಪ್ಪಿನ ಜೊತಿಗೆ ಕ್ಷಮೆ ಕೇಳೂದು ಭಾಳ ಮುಖ್ಯ ಆಗ್ತದ.

ಆದ್ರ ನಮ್ಮಿಂದ ಇದು ಸಾಧ್ಯ ಅದ ಏನು? ಅದೆಷ್ಟು ಸಲೆ ನಾವು ಹಿಂಗ ಕೇಳೇವಿ.. ಕೇಳಾಕ ಆಗೇದ? ನಮ್ಮ ಪ್ರತಿಯೊಂದು ಕ್ಷಮೆಗಳೂ ಕೆಲವೊಮ್ಮೆ ಈ ಕ್ಷಣಕ್ಕ ಈ ವಾದ ಮುಗದ್ರ ಸಾಕು ಅನ್ನೂಹಂಗ ಇರ್ತಾವ. ಇನ್ನೂ ಕೆಲವೊಮ್ಮೆ, ನಮ್ಮ ಕ್ಷಮಾಪಣೆನೂ ಒಂದು ಸಮಜಾಯಿಷಿಯ ಧಾಟಿಯೊಳಗ ಇರ್ತದ. ‘ Sorry.. ಆದ್ರ ಅದೇನಾಯ್ತಂದ್ರ... ಅವಾಗ..’ ಹಿಂಗ ಒಂದು ಸಮಜಾಯಿಷಿಯ ಜೊತಿಗೆ ಕ್ಷಮೆ ಇದ್ದರ, ನೀವು ನಿಮ್ಮನ್ನು ಸಮರ್ಥನೆಯ ಧಾಟಿಯೊಳಗ ಕ್ಷಮಾಪಣೆ ಕೇಳ್ತೀರಿ ಅಂತಾಯ್ತು. ಅಲ್ಲಿಗೆ, ತಪ್ಪಿಗಾಗಿ ಪರಿತಪಿಸಿ, ಅದನ್ನು ಒಪ್ಕೊಂಡು, ನೋವು ನೀಡಿದ್ದಕ್ಕ ಖರೇನೆ ನಮಗೂ ಬ್ಯಾಸರಾಗೇದ ಅಂತ್ಹೇಳುವಕ್ಷಮಾಪಣೆಯ ಮೂಲ ಉದ್ದೇಶ ತಪ್ಪುದಾರಿ ಹಿಡೀತದ.

ಸಿಟ್ಟನ್ನಿಳಿಸಿ, ನಗುಮೂಡಿಸುವುದು ಒಂದೇ ಒಂದು Sorry

ಇನ್ನೊಮ್ಮೆ ನಾವು ಕೇಳುವ ಕ್ಷಮಾಪಣೆಗಳು ಹೆಂಗಿರ್ತಾವಂದ್ರ.. ನಾನಿಂಗSorry ಕೇಳ್ತೇನಿ. ಆದ್ರ ಅದಕ್ಕ ನನ್ನಷ್ಟೇ ನೀನೂ ಕಾರಣ. ನೀನೂ ಕೇಳು ಅನ್ನುವಹಂಗ ಇರ್ತದ. ಇಲ್ಲಿ, ತಪ್ಪೊಪ್ಪಿಗೆ ಅಥವಾ ಇದು ಇನ್ನೊಮ್ಮೆ ಮರುಕಳಿಸದು ಅನ್ನುವ ಯಾವ ಗ್ಯಾರಂಟಿನೂ ಇರೂದಿಲ್ಲ. ನೀ ಹಿಂಗಂದ್ರ, ನಾ ಮತ್ತ ಹಂಗ ಮಾಡಿ ತೀರೂದೆ ಅನ್ನುವ ಪ್ರತೀಕಾರ ಈ ಬಗೆಯSorry ಧ್ವನಿಸ್ತದ.

ಇನ್ನೂ ಕೆಲವು ಇರ್ತಾವ. ‘ನನ್ನಿಂದ ತಪ್ಪಾಯ್ತು. ಆದ್ರ ಪ್ರಸಂಗ ಹಂಗಿತ್ತು. ನಾ ಹಂಗ ವರ್ತಿಸೂದು ಸಹಜವಾಗಿತ್ತು. ಸಂದರ್ಭ ಹಂಗಿರಲಿಲ್ಲಂದ್ರ ನಾನೂ ಹಂಗ ವರ್ತಿಸ್ತಿರಲಿಲ್ಲ’ ಇಲ್ಲಿ ಇಡೀ ತಪ್ಪನ್ನು ಸಂದರ್ಭಕ್ಕೆ ಜಾರಿಸಿಬಿಡ್ತೀವಿ.

‘ನಾ ಹಂಗ ಮಾಡ್ತಿರಲಿಲ್ಲ.. ಅದೇನಾಯ್ತಂದ್ರ...’ ಅಂತ ಶುರು ಮಾಡಿದ್ರ ಮತ್ತ ನೀವು ನಿಮ್ಮ ವರ್ತನೆಗೆ ಸಮಜಾಯಿಷಿ ಕೊಡಾಕ ಶುರು ಮಾಡೀರಿ ಅಂತಲೇ ಅರ್ಥ. ಅಥವಾ ನಿಮ್ಮ ವರ್ತನೆಗೆ ಸಮರ್ಥನೆ ಹುಡುಕಾಕ್ಹತ್ತೀರಿ ಅಂತಲೇ ಅರ್ಥ.

ಕ್ಷಮೆ ಕೇಳುವುದು, ನನ್ನಿಂದಾದ ಈ ತಪ್ಪು ಮತ್ತ ಹೊಳ್ಳಾಮಳ್ಳಾ ಮಾಡೂದಿಲ್ಲ. ಇದೇ ಕಾರಣಕ್ಕ ಮತ್ತ ನಿಂಗ ತ್ರಾಸ ಕೊಡೂದಿಲ್ಲ. ನೋವಾಗುಹಂಗ ನಡಕೊಳ್ಳೂದಿಲ್ಲ ಅನ್ನುವ ಭರವಸೆ ನೀಡುವ ಧಾಟಿಯೊಳಗಿದ್ದರ ಅದು ಖರೇನೆ ಕ್ಷಮೆ ಕೇಳಿದ್ಹಂಗಾಗ್ತದ. ಇಲ್ಲಾಂದ್ರ ಇವೆಲ್ಲಾನೂ ಬರೆಯ ಆ ಕ್ಷಣಕ್ಕ.. ಆಗಿನ ಅಗತ್ಯಕ್ಕೆ ತುರ್ತಾಗಿ ಸ್ಪಂದಿಸೂದಷ್ಟೆ ಆಗಿರ್ತದ.

ಕ್ಷಮೆ ಕೇಳುಮುಂದಾಗ ಆ ಮನುಷ್ಯಾ ಒಳಗಿನಿಂದ ಕುಗ್ಗಿ ಹೋಗಿರ್ತಾನ. ಒಳ ವರ್ಚಸ್ಸು ಬಾಗಿರ್ತದ. ತನ್ನ ಅಹಂಕಾರವನ್ನು ಧಿಕ್ಕರಿಸಿ ಅಂವಾ ಆ ನಿಲುವಿಗೆ ಬಂದಿರ್ತಾನ. ಆಗ ಅಂಥ ಸಂದರ್ಭದೊಳಗ ಕೇಳುವವರು, ಸಮಾಧಾನದಿಂದ ಕೇಳಬೇಕು. ಅದನ್ನ ಬಿಟ್ಟು, ಯಾಚನಾ ಧ್ವನಿಯನ್ನು ಧಿಕ್ಕರಿಸುವ ದಾರ್ಷ್ಟ್ಯ ಇನ್ನೊಬ್ಬರಿಗೆ ಇರಕೂಡದು. ಇಲ್ಲಾಂದ್ರ, ಇವರಿಗ್ಯಾಕ ಹೇಳಬೇಕೋ ಮಾರಾಯ, Sorry ಕೇಳಲು ಇವರು ಅಪಾತ್ರರು ಅನ್ನುವ ನಿರ್ಧಾರಕ್ಕ ಬಂದ್ರ ಮುಗೀತು, ಮತ್ತಲ್ಲಿ ಯಾವತ್ತೂ ತೇಪೆ ಹಾಕದಷ್ಟು ಸಂಬಂಧ ಹರಿದು ಹೋಗುತ್ತದೆ.

ಕ್ಷಮೆ ಕೇಳಿದರೆ ಅದು ಎದುರಾಳಿಯ ಸೋಲು ಎಂದರ್ಥವಲ್ಲ. ನಿಮ್ಮ ಗೆಲುವಂತೂ ಅಲ್ಲವೇ ಅಲ್ಲ. ಹಾಗೆ ಕ್ಷಮೆ ಕೇಳಿದಾತ ಆ ಕ್ಷಣದಿಂದ ಹಗುರನಾಗ್ತಾನೆ. ಯಾವ ಭಾವನಾತ್ಮಕ ಭಾರಗಳೂ ಆ ವ್ಯಕ್ತಿಗಿರುವುದಿಲ್ಲ. ಮಾತಿಗೊಂದು ಪ್ರತಿಮಾತು ಇರಲೇಬೇಕೆಂದೇನೂ ಇಲ್ಲ. ಕೇಳೋರಿಗೆ ಮಾತು ಬಂಗಾರ ಆದ್ರ, ಕೇಳಸ್ಕೊಳ್ಳೋರಿಗೆ ಮೌನ ಬಂಗಾರ ಆಗಬೇಕು. ಆಗ ನಮ್ಮ ಬಾಂಧವ್ಯನೂ ಬಂಗಾರದ್ಹಂಗ ಹೊಳೀತದ.

ಒಂದು ಸಣ್ಣ ಪದ, ಬಾಂಧವ್ಯವನ್ನು ಹಿಂಗ ಬಲಪಡಸ್ತದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT