ಶನಿವಾರ, ಜೂಲೈ 11, 2020
23 °C

ಪ್ರತಿಭಾ ವೃಂದ ಮಂದಾರ– ವೃಂದಾ ಕೊನ್ನಾರ್

ಸಂದೀಪ್‌ ಕೆ. Updated:

ಅಕ್ಷರ ಗಾತ್ರ : | |

ಹಿಂದೊಂದು ಕಾಲದಲ್ಲಿ ಯಕ್ಷಗಾನವನ್ನು ‘ಗಂಡು ಕಲೆ’ ಎನ್ನುತ್ತಾ ಗಂಡಿನ ಪಾರಮ್ಯವನ್ನೇ ಪ್ರಧಾನವಾಗಿಸಿ ಅದನ್ನೇ ಆಸ್ವಾದಿಸುತ್ತಾ ಬರುತ್ತಿತ್ತು ಪ್ರೇಕ್ಷಕ ವರ್ಗ. ಕ್ರಮೇಣ ಯಕ್ಷರಂಗದಲ್ಲಿ ಪುರುಷ ಕಲಾವಿದರಿಗೆ ಸೈ ಎನಿಸುವಂತೆ ಪಾತ್ರ ನಿಭಾಯಿಸುವ ಹೆಂಗಳೆಯರ ದಂಡು ರೂಪುಗೊಂಡಿತು. ಬೈಕಂಪಾಡಿಯ ವೃಂದಾ ಕೊನ್ನಾರ್ ತಮ್ಮ ಪಾತ್ರ ಚಿತ್ರಣಗಳಲ್ಲಿ ತಮ್ಮದೇ ಆದ ಕಲಾಭಿವ್ಯಕ್ತಿಯಿಂದಲೂ, ಕಲಾತ್ಮಕತೆಯಿಂದಲೂ ಭಿನ್ನವಾಗಿ ನಿಲ್ಲುತ್ತಾರೆ.

ಬಿ. ಸುಬ್ಬರಾವ್ ಮತ್ತು ವಿದ್ಯಾ ಎಸ್.ರಾವ್ ದಂಪತಿಯ ಮಗಳಾಗಿರುವ ವೃಂದಾ, ಪಣಂಬೂರಿನ ಎನ್ಎಂಪಿಟಿ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ಸುರತ್ಕಲ್ ಗೋವಿಂದ ದಾಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದು, ಈಗ ಸಿ.ಎ ಆರ್ಟಿಕಲ್ಶಿಪ್ ಮಾಡುತ್ತಿದ್ದಾರೆ. ತಮ್ಮ ಮನೆ ಸುತ್ತಮುತ್ತ ಇದ್ದ ಯಕ್ಷಗಾನ ಪರಿಸರದಲ್ಲಿ ಬೆಳೆದು ಬಂದ ವೃಂದಾರಿಗೆ ತಂದೆ ಹವ್ಯಾಸಿ ಕಲಾವಿದರಾಗಿದ್ದುದೇ ಯಕ್ಷರಂಗಕ್ಕೆ ಕಾಲಿಡಲು ಸ್ಫೂರ್ತಿಯಾಯಿತು. ಪ್ರಾಥಮಿಕ ತರಗತಿಯಲ್ಲಿಯೇ ಗೆಜ್ಜೆ ಕಟ್ಟಿದ ಇವರು ಆಗಲೇ ಸೈ ಎನಿಸಿಕೊಂಡವರು. ಶಂಕರ ನಾರಾಯಣ ಮೈರ್ಪಾಡಿ, ಶಿವರಾಂ ಪಣಂಬೂರು, ರಾಕೇಶ್ ರೈ ಅಡ್ಕ ಅವರಲ್ಲಿ ಯಕ್ಷಗಾನ ಅಧ್ಯಯನವನ್ನು ಮಾಡಿದರು. ಕನ್ನಡ, ಇಂಗ್ಲಿಷ್, ತುಳು, ಸಂಸ್ಕೃತ ಭಾಷೆಗಳಲ್ಲಿ ಪಾತ್ರ ನಿರ್ವಹಣೆ ಮಾಡಬಲ್ಲ ವೃಂದಾ, ದೇಶದ ನಾನಾ ಕಡೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಾಳಮದ್ದಲೆಯ ಅರ್ಥದಾರಿಕೆಯಲ್ಲೂ ಅವರಿಗೆ ಪರಿಣತಿ ಇದೆ.

ಶೈಕ್ಷಣಿಕ ಪ್ರತಿಭೆಗೆ ಯಕ್ಷಗಾನ ಪೂರಕ ಎನ್ನುವುದು ವೃಂದಾ ಅವರ ನಂಬಿಕೆ. ‘ಈ ಕಲೆಯಿಂದ ತಾಳ್ಮೆ, ಶಿಸ್ತು ಇತ್ಯಾದಿಗಳನ್ನು ಪಡೆಯಲು ಸಾಧ್ಯವಾಯಿತು. ಶೈಕ್ಷಣಿಕ ಉನ್ನತಿಗೆ ಬೇಕಾದ ಏಕಾಗ್ರತೆ, ನಿರಂತರ ಓದು ಮತ್ತು ಪೂರಕ ಮಾಹಿತಿಗಳೆಲ್ಲಾ ಯಕ್ಷಗಾನದ ಮೂಲಕ ದೊರಕುತ್ತದೆ’ ಎನ್ನುತ್ತಾರೆ ಅವರು. ಅದಕ್ಕೆ ದೃಷ್ಟಾಂತವೆಂಬಂತೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದರೆ, ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದರು. ಬಿ.ಕಾಂ.ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಬಂಗಾರದ ಪದಕ ಮತ್ತು 2ನೇ ರ‍್ಯಾಂಕ್ ಗಳಿಸಿದ್ದಾರೆ.

‘ಕಲೆ ಸಮಾಜದ ‘ಸ್ಟ್ರೆಸ್ ಬಸ್ಟರ್’ ಎನ್ನುತ್ತಾರೆ ವೃಂದಾ. ಅವರಿಗೆ ಸಮಾಜ ಸೇವೆಯೂ ಆಸಕ್ತಿಯ ವಿಷಯ. ‘ದಿವ್ಯಾಸ್’ನಂತಹ ಸಮಾಜಮುಖಿ ಎನ್.ಜಿ.ಒ.ಗಳಲ್ಲಿ ಸಕ್ರಿಯ ಸದಸ್ಯೆಯಾಗಿದ್ದು ತಮ್ಮ ಒತ್ತಡದ ಸಮಯದಲ್ಲೂ ಅದರ ಕಾರ್ಯಕಾರಿ ಹೊಣೆಯನ್ನು ನಿರ್ವಹಿಸುತ್ತಾರೆ. ರೋಟರಾಕ್ಟ್‌ನ ಸದಸ್ಯೆಯೂ ಆಗಿರುವ ವೃಂದಾ, ‘ವಿದ್ಯಾರ್ಥಿಯಾಗಿದ್ದಾಗ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್)ಯಿಂದ ಸಮಾಜ ಸೇವೆಯ ಗುಣ ಮೈಗೂಡಿತು’ ಎಂದು ಸ್ಮರಿಸುತ್ತಾರೆ.

ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಕ್ರೀಡಾ ಕ್ಷೇತ್ರದಲ್ಲೂ ಇವರ ಸಾಧನೆ ಬಹಳಷ್ಟಿದೆ. ಉಮೇಶ್ ಎಸ್. ಜೆ. ಅವರಿಂದ ಪೇಂಟಿಂಗ್, ವೆಂಕಿ ಪಲಿಮಾರು ಅವರಿಂದ ಕ್ಲೇ ಮಾಡೆಲಿಂಗ್ ಮತ್ತು ವಿನೋದ್ ಕೃಷ್ಣಾಪುರ ಅವರಿಂದ ನಾಟಕವನ್ನೂ ಅಧ್ಯಯನ ಮಾಡಿದ್ದಾರೆ. ‘ಯಕ್ಷಗಾನ ಕಲಿತ ನಂತರವೇ ನಾನು ನಾಟಕ ರಂಗ ಪ್ರವೇಶಿಸಿದ್ದು. ಹಾಗಾಗಿ ಆರಂಭದಲ್ಲಿ ಕಲಾಂತರದ ಕಷ್ಟಗಳು ಬಂದವಾದರೂ, ಯಕ್ಷಗಾನದ ಅಭಿನಯ ತಂತ್ರಗಾರಿಕೆ ಮತ್ತು ತಲ್ಲೀನತೆ ಇಲ್ಲಿ ಸಹಾಯಕವಾಯಿತು’ ಎಂದು ತಮ್ಮ ನಾಟಕದ ಅನುಭವವನ್ನು ಬಿಚ್ಚಿಡುತ್ತಾರೆ.

ವೃಂದಾ ಅವರ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ–ಸಂಸ್ಥೆಗಳು ಸನ್ಮಾನಿಸಿವೆ. ಸುಮಾರು 520ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ, ’ಕರ್ನಾಟಕ ಚೇತನ’, ’ಕಲಾ ಸಂಗಮ ಪುರಸ್ಕಾರ’, ’ದಿವ್ಯಾಸ್ ಬೆಸ್ಟ್ ಸ್ಟೂಡೆಂಟ್ ಅವಾರ್ಡ್’, ’ಮಡಿಲು ಸನ್ಮಾನ ಪುರಸ್ಕಾರ 2018’, ’ಯಕ್ಷಧ್ರುವ ಪಟ್ಲ ಫೌಂಡೇಷನ್ ನ ಬಂಗಾರದ ಪದಕ’ ಇಂತಹ ಎಪ್ಪತ್ತಕ್ಕೂ ಹೆಚ್ಚು ಗಣನೀಯ ಪುರಸ್ಕಾರಗಳು ವಿವಿಧ ಸಂಘ ಸಂಸ್ಥೆಗಳಿಂದ ಸಂದಿವೆ. ಅಷ್ಟಿದ್ದರೂ ತಾನು ಕಲಿಯಬೇಕಿರುವುದು ಇನ್ನೂ ಇದೆ ಎಂದು ನಮ್ರರಾಗುತ್ತಾರೆ ವೃಂದಾ.

ಕ್ಯಾನ್ವಾಸ್ ಮೋಹ

ಯಕ್ಷಗಾನವನ್ನು ತಮ್ಮ ಆಸಕ್ತಿಯ ಕೇಂದ್ರದಲ್ಲಿಟ್ಟರೂ, ಚಿತ್ರಕಲೆಯಲ್ಲಿ ಇವರ ಸಾಧನೆ ಕಡಿಮೆಯದ್ದಲ್ಲ. ಪೆನ್ಸಿಲ್ ಶೇಡಿಂಗ್, ಚಾರ್ ಕೋಲ್, ವಾಟರ್ ಕಲರ್, ಆಯಿಲ್ ಪೇಂಟಿಂಗ್, ಆಕ್ರಿಲಿಕ್, ಗ್ಲೋ ಆರ್ಟ್, ರಂಗೋಲಿ, ಕ್ಲೇ ಮಾಡೆಲಿಂಗ್, ವರ್ಲಿ, ಫೇಸ್ ಪೇಂಟಿಂಗ್, ಪೋರ್ಟ್ರೇಟ್, ಸ್ಪೀಡ್ ಪೇಂಟಿಂಗ್‌ನಲ್ಲಿ ವೃಂದಾ ಎತ್ತಿದ ಕೈ. ತಮ್ಮ ಹೆಚ್ಚಿನ ಚಿತ್ರಗಳಲ್ಲಿ ಯಕ್ಷಗಾನದ ಅಭಿವ್ಯಕ್ತಿ ಇರುವುದನ್ನು ಕಂಡುಕೊಂಡಿದ್ದು, ವರ್ಣಮಯ ಲೋಕದ ಸುಂದರ ಕ್ಷಣಗಳನ್ನು ಅನುಭವಿಸಿ ಅದನ್ನು ತಮ್ಮ ಕ್ಯಾನ್ವಾಸ್‌ನಲ್ಲಿ ದಾಖಲಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು