ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಯ್ಯನ ಗೆಳೆಯರನು ಹುಡುಕಿ...

Last Updated 10 ಮೇ 2020, 3:08 IST
ಅಕ್ಷರ ಗಾತ್ರ

ಯು.ಆರ್. ಅನಂತಮೂರ್ತಿ ಅವರ ‘ಕ್ಲಿಪ್‍ಜಾಯಿಂಟ್‌’ನ ಕೇಶವ, ‘ಕ್ಷಿತಿಜ’ದ ಮಂದಾಕಿನಿ, ‘ಮುಕ್ತಿ’ ಕಾದಂಬರಿಯ ಗೌರೀಶ, ‘ಶಿಕಾರಿ’ಯ ನಾಗಪ್ಪರ ಪಾತ್ರಗಳ ‘ಅತಿ’ ಆತ್ಮಾವಲೋಕನ ಹಲವೊಮ್ಮೆ ಸ್ವಯಂ ಮತ್ತು ಸಾಮುದಾಯಿಕ ಹಿಂಸೆ ಸೃಷ್ಟಿಸುತ್ತಿರುವಂತೆ ಕಂಡರೆ ಅಚ್ಚರಿಯೇನಿಲ್ಲ. ಅದು ಆ ಯುಗಧರ್ಮದ ಸಿದ್ಧಾಂತಗಳ ಫಲ.

ಕನ್ನಡದ ಕ್ಲಾಸಿಕ್ ಕೃತಿಯಾದ ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ (ಮೊದಲ ಪ್ರಕಟಣೆ: 1936-37)ಯನ್ನು ನೀವು ಓದಿದ್ದರೆ ಹೂವಯ್ಯ ಮತ್ತು ಸೀತೆಯ ಪಾತ್ರಗಳು ನಿಮ್ಮ ಜೀವಹಿಂಡಿ ಕಾಡಿರುತ್ತವೆ. ಆದರ್ಶಗಳ ಪ್ರತಿರೂಪವಾದ ಹೂವಯ್ಯ, ‘ಸುಶಿಕ್ಷಿತತೆ, ಆಧ್ಯಾತ್ಮಿಕತೆ, ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು’ ಪ್ರಯತ್ನಿಸುವವನು. ಇನ್ನು ‘ಸುಸಂಸ್ಕೃತೆ, ರೂಪವತಿ ಹಾಗೂ ಭಾವಜೀವಿ’ಯಾದ ಸೀತೆಗೆ ಹೂವಯ್ಯ ಭಾವನೆಂದರೆ ಪ್ರಾಣ. ತನ್ನ ಪ್ರೇಮದ ಸುಗಂಧವನು ಹೊರಸೂಸುವ ಬಗೆಯನು ಅರಿಯದ ಕಾನನ ಸುಮ.

ಆಕೆ ಮಾಡಬಹುದಾದುದೆಲ್ಲ ‘ನಾನು ಹೂವಯ್ಯ ಭಾವನನ್ನೇ ಮದುವೆಯಾಗುತ್ತೇನೆ’ ಎಂದು ಸೀಸದ ಕಡ್ಡಿಯಿಂದ ಗೋಡೆಯ ಮೇಲೆ ಬರೆಯುವುದಷ್ಟೇ. ಆದರೆ, ಹೂವಯ್ಯನ ವಿಚಾರಗಳು ಬೇರೆಯೇ ಇವೆ. ವಿದ್ಯೆ, ಕೀರ್ತಿ, ಪ್ರತಿಭೆಗಳನ್ನು ಹುಡುಕುತ್ತ, ತ್ಯಾಗಮಯ ಬದುಕಿನಿಂದ ಮಹಾಪುರುಷನಾಗಲು, ಪರಮ ಸಾರ್ಥಕತೆ ಸಾಧಿಸಲು, ಅಗತ್ಯವಿದ್ದರೆ ಬಲಿದಾನವನ್ನೂ ನೀಡಲು ಸಿದ್ಧವಿರುವ ಹೆಗ್ಗನಸಿನ ತರುಣನಾತ.

ಸ್ವಾತಂತ್ರ್ಯಪೂರ್ವ ಭಾರತದ ಎರಡು ಭಾವಲೋಕಗಳಲ್ಲಿ ಬದುಕುವಾಗಿನ ಸಂಕಟಗಳನ್ನು ಸೀತೆ-ಹೂವಯ್ಯ ಪಾತ್ರಗಳು ಬಹು ಚೆನ್ನಾಗಿ ಪ್ರತಿನಿಧಿಸುತ್ತವೆ. ಅದಮ್ಯ ತುಡಿತದ ಪ್ರೇಮ–ಕಾಮಗಳ, ಭಾವಜೀವಿಗಳ ಜಗತ್ತು ಒಂದೆಡೆ ಇದ್ದರೆ, ಪ್ರತಿ ಹೆಜ್ಜೆಯಲ್ಲಿಯೂ ಅಂಥ ಕನಸನ್ನು ವಿಫಲಗೊಳಿಸಲು ಸನ್ನದ್ಧವಾಗಿರುವ ನಿರ್ದಯ ದುಷ್ಟ ಜಗತ್ತು ಮತ್ತೊಂದೆಡೆ. ಮೌಢ್ಯ-ಹಿಂಸೆ- ಕ್ರೌರ್ಯ ಪ್ರಧಾನವಾದ ಸಮಾಜಗಳಲ್ಲಿ ನಲಗುವ ಹೆಣ್ಣಿನ ಕನಸು-ಆಶೋತ್ತರಗಳು; ಶೂದ್ರ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ಹಾಗೂ ಸ್ಥಿತ್ಯಂತರಗಳು ಇವು ಮತ್ತು ಇಂಥವೇ ಅನೇಕ ಪ್ರಮುಖ ಅಂಶಗಳನ್ನು ಕಾದಂಬರಿಯು ತನ್ನ ಕಥಾ ಪರಿಸರ ಮತ್ತು ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ.

ಹೂವಯ್ಯ, ಒಂದು ಅಭೂತಪೂರ್ವ ಕನಸಿಗೆ ತೆರೆದುಕೊಳ್ಳಲು ಕಾತರದಲಿ ಕಾದು ನಿಂತಿರುವ ಸಮಾಜದ ಜೀವಿ. ಮಲೆನಾಡಿನ ಕಾನನದಾಚೆಗೆ ಬೇರೆ ಹೊಸಲೋಕ ಒಡಮೂಡಲಿರುವುದನ್ನು ಬಲ್ಲವನು. ‘ಪೆದೆ ಕ್ರಾಪು’, ತೊಟ್ಟಿರುವ ‘ಖಾದಿ’ ಆತನ ವ್ಯಕ್ತಿತ್ವದ ಒಳಹೊರ ಹೂರಣವನ್ನು ತೆರೆದಿಡಬಲ್ಲವು. ಇಂಥ ಕನಸುಗಳಿಗೆ ಕಾರಣವಾಗಿ ಅರಿವಿನ ದೀಪವನು ಹೊತ್ತಿಸುತ್ತಿರುವುದು ಪುಸ್ತಕಗಳು. ಕಾದಂಬರಿಯ ಇಪ್ಪತ್ತನೆಯ ಅಧ್ಯಾಯದಲ್ಲಿ, ಹೂವಯ್ಯನ ಕೋರಿಕೆಯಂತೆ ಸೀತೆ ಆತನ ಟ್ರಂಕಿನಿಂದ ಭಾರವಾದ ಬಣ್ಣ ಬಣ್ಣದ ಹೊದಿಕೆಗಳಿರುವ ಇಂಗ್ಲಿಷ್‌ ಪುಸ್ತಕಗಳನ್ನು ಹೊತ್ತು ತಂದು ಹೆತ್ತ ತಾಯಿ ತನ್ನ ಮಗುವನ್ನು ಗಂಡನಿಗೆ ನೀಡುವಂತೆ ಒಂದು ವಿಧದ ಧನ್ಯತೆ ಮತ್ತು ಅರ್ಪಣಾಭಾವದಿಂದ ನೀಡುತ್ತಾಳೆ. ಹೂವಯ್ಯ ಸೀತೆಗೆ ಚರಿತ್ರೆಯ ಪುಸ್ತಕ ಕೈಗೆ ಕೊಟ್ಟು ಚಿತ್ರಗಳನ್ನು ನೋಡುತ್ತಿರು... ಎಂದು ಹೇಳಿ, ತಾನು ಕವಿತೆಗಳ ಪುಸ್ತಕ ಓದುವುದರಲ್ಲಿ ಲೀನವಾಗುತ್ತಾನೆ.

ಸ್ವಾತಂತ್ರ್ಯಪೂರ್ವದ ಹೂವಯ್ಯನ ತಲೆಮಾರಿಗೆ ಎಲ್ಲವನೂ ರಾಷ್ಟ್ರೀಯತೆಯ ಪ್ರಕಾಶದಲಿ ನೋಡುವ ಬಯಕೆ. ಒಂದೆಡೆ, ದೇಶ ಬಿಡುಗಡೆಯ ಭಾವುಕ ಪರಿಸರ, ಶಿಕ್ಷಣ, ಓದುಗಳಿದ್ದರೆ ಇನ್ನೊಂದೆಡೆ, ಆತ ಹುಟ್ಟಿ ಬೆಳೆದ ಪರಿಸರ ಮತ್ತು ಆತನ ಜನವಿದ್ದಾರೆ. ಹೂವಯ್ಯ ಒಳಹೊರಗಿನ ಸಂಕಟಗಳಲ್ಲಿ ಸಿಲುಕಿರುವಾಗಲೇ ಇನ್ನೊಂದು ಮೂಲೆಯಲಿ ‘ಧನಿಯರ ಸತ್ಯನಾರಾಯಣ’ ಕಥೆಯ ದೂಮ, ಬೂದ ಮತ್ತು ತುಕ್ರಿಯರು, ‘ಚೋಮನ ದುಡಿ’ಯ ಚೋಮ ಮತ್ತು ಅವನ ಸಂತಾನ; ‘ಮೋಚಿ’ ಕಥೆಯ ಮುಖ್ಯಪಾತ್ರ ತಮ್ಮ ಬಿಡುಗಡೆಗಾಗಿ ಹತಾಶೆಯಲಿ ಹೊತೊರೆಯುತ್ತಿದ್ದರು. ಆದರೆ, ಅವರ ಸಂತಾಪದ ಪರಿ ಮಾತ್ರ ಬೇರೆ. ರಾಷ್ಟ್ರೀಯ ನೆಲೆಯಲ್ಲಿ ಈ ಬಗೆಯ ಹೊಸ ಸಮಾಜದ ಕನಸು ಕಂಡವರು ಸಾವಿರ ಲಕ್ಷ ಸಂಖ್ಯೆಯ ಜನರು. ಕಾನೂರಿನ ಹೂವಯ್ಯನ ಪಾತ್ರವನು ಸೃಷ್ಟಿಸಿದ್ದ ತರುಣ ಲೇಖಕ ಕೂಡ ಈ ಮಹಾಕನಸಿನ ಪಾಲುದಾರನೇ. ವೈಯಕ್ತಿಕ ಆಧ್ಯಾತ್ಮ ಉನ್ನತಿ ಮತ್ತು ಸರ್ವರಿಗೂ ಸಮಪಾಲಿನ ಬಾಳನ್ನು ಏಕಕಾಲಕ್ಕೆ ಕನಸಿದವನು.

ನವೋದಯದ ಮುಂಬೆಳಗಿನಲಿ ದಿವ್ಯ ಬೆಳಕನು ಚೆಲ್ಲಿದ ‘ಅಪೌರುಷೇಯ’ರಂತೆ ನಾವೂ ಅಭಿಜಾತ ಮತ್ತಿತರ ಪರಂಪರೆಗಳನ್ನು ಹಸ್ತಾಂತರಿಸಬಲ್ಲ ಶಿಕ್ಷಣಕ್ಕೆ ಮತ್ತು ಓದಿಗೆ ಏಕೆ ತೆರೆದುಕೊಳ್ಳಬೇಕು? ಉತ್ತರ ಸರಳವಾಗಿದೆ: ಇಂಥ ಅಭಿಜಾತ ಕೃತಿಗಳು ಎಲ್ಲಾ ಕಾಲದಲ್ಲೂ ಒಳಿತು-ಕೆಡಕುಗಳನ್ನು ತಿಳಿಸಿ ಎಚ್ಚರಿಸುವ ಗುಣಗಳಿಂದ ತುಳುಕುತ್ತಿವೆ. ಇವು ಮುದುರಿ ಕಮಟುಗಟ್ಟಿದ ಹಳೆಯ ಚೀಲದಂತಾದ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ ಒಳಗಡಗಿದ ವಿನಾಕಾರಣ ದ್ವೇಷಾಸೂಯೆ, ಸೇಡಿನ ಮನೋಭಾವ, ಉನ್ಮಾದದ ಕಸಕಡ್ಡಿಯನ್ನು ಕರಗಿಸಿ ನಮ್ಮನ್ನು ನಮ್ಯರನ್ನಾಗಿಸಬಲ್ಲವು. ‘ಪರಪುಟ್ಟ’ರಂತೆ ಜೀವಿಸುವ ನಮ್ಮನ್ನು ಹಕ್ಕಿಗಳಂತೆ ಸ್ವತಂತ್ರಗೊಳಿಸಿ ಮುಕ್ತತೆಯ ಬಗೆ ಬಾನಿಗೆ ಹಾರಿಬಿಡಬಲ್ಲವು.

ಹೊರಗಿನ ಭಾವುಕ ಪರಿಸರದಿಂದ ಪ್ರಭಾವಿತರಾದ ಸಾಮಾನ್ಯ ಅಕ್ಷರಸ್ಥರು ರಾಷ್ಟ್ರೀಯ ಆಂದೋಲನದ ಭಾಗವೆಂಬಂತೆ ವೃತ್ತಪತ್ರಿಕೆ ಓದು, ರಾಜಕೀಯ ಕರಪತ್ರಗಳ ಚರ್ಚೆ, ಬಂಧು-ಬಳಗದೊಂದಿಗೆ ಪತ್ರ ವಿನಿಮಯದಂತಹ ಅಕ್ಷರಲೋಕದ ವಿಸ್ಮಯದ ಸುಳಿಗೆ ಸಿಲುಕಿ ಹೊಸ ಜಾಗ್ರತ ಸಮಾಜದ ಸೃಷ್ಟಿಸಿದ್ದು ಕೂಡ ಈ ಕಾಲದಲ್ಲಿಯೇ. ಈ ಮೊದಲ ತಲೆಮಾರಿನ ಓದು ಸಮಾಜವನ್ನೇ ಪ್ರಜಾಸತ್ತಾತ್ಮಕಗೊಳಿಸತೊಡಗಿತ್ತು. ಸ್ವಾತಂತ್ರ್ಯದ ನಂತರ ಹೂವಯ್ಯ ತನ್ನ ಹೊಣೆಗಾರಿಕೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿದ. ವಾರಸುದಾರಿಕೆ ಪಡೆದ ಕಥಾ ಪಾತ್ರಗಳಾದರೂ ಆಧುನಿಕ ಶಿಕ್ಷಣ, ವಿದೇಶ ವ್ಯಾಸಂಗ, ಹೊಸ ಯುಗಧರ್ಮದ ಧ್ಯೇಯವಾಗಿದ್ದ ಜ್ಞಾನದ ಪ್ರತಿರೂಪವೇ ಆಗಿದ್ದ ಪುಸ್ತಕಗಳ ಓದಿನಲ್ಲಿ ಕಳೆದುಹೋದವರೇ.

ಆದರೆ, ಇವರ ಬಿಡುಗಡೆಯ ಅಗತ್ಯತೆ, ಮುಕ್ತಿಮಾರ್ಗಗಳು ಸಂಪೂರ್ಣ ಬೇರೆಯಾಗಿದ್ದವು. ಉತ್ಕಟ ಭಾವುಕತೆ, ಕನಸು, ಪ್ರೇಮಮಯ ಜೀವನ, ಆದರ್ಶ, ಪರಹಿತ, ಐಬುಗಳಿಲ್ಲದ ಸುಂದರ ಸಮಾಜಗಳ ಸೃಷ್ಟಿ ಮುಕ್ತಿಯನು ನೀಡಬಲ್ಲವು ಎಂಬುದು ಮೊದಲ ತಲೆಮಾರಿನ ಕನಸಿಗರ ನಂಬಿಕೆಯಾಗಿದ್ದರೆ, ಎರಡನೆಯ ತಲೆಮಾರಿನ ವಾರಸುದಾರರಿಗೆ ಹೊರಲೋಕಕ್ಕಿಂತ ಒಳಲೋಕವೇ ಮುಖ್ಯವಾಗಿತ್ತು. ಭಾವಕ್ಕಿಂತ ಬುದ್ಧಿ, ಪ್ರಜ್ಞೆಗೇ ಇಲ್ಲಿ ಮಹತ್ವ.

ಯು.ಆರ್. ಅನಂತಮೂರ್ತಿ ಅವರ ‘ಕ್ಲಿಪ್‍ಜಾಯಿಂಟ್‌’ ನ ಕೇಶವ, ‘ಕ್ಷಿತಿಜ’ದ ಮಂದಾಕಿನಿ, ‘ಮುಕ್ತಿ’ ಕಾದಂಬರಿಯ ಗೌರೀಶ, ‘ಶಿಕಾರಿ’ಯ ನಾಗಪ್ಪರ ಪಾತ್ರಗಳ ‘ಅತಿ’ ಆತ್ಮಾವಲೋಕನ ಹಲವೊಮ್ಮೆ ಸ್ವಯಂ ಮತ್ತು ಸಾಮುದಾಯಿಕ ಹಿಂಸೆ ಸೃಷ್ಟಿಸುತ್ತಿರುವಂತೆ ಕಂಡರೆ ಅಚ್ಚರಿಯೇನಿಲ್ಲ. ಅದು ಆ ಯುಗಧರ್ಮದ ಸಿದ್ಧಾಂತಗಳ ಫಲ. ಬದುಕಿನ ನಿರರ್ಥಕತೆಯನ್ನು ಸಿಗಿದು ನೋಡುವುದೇ ಅವರಿಗೆ ಮೆಚ್ಚಾಗಿತ್ತು. ಆದಾಗ್ಯೂ, ಇವರನ್ನು ರೂಪಿಸಿದ್ದು ಕೂಡ ಆಧುನಿಕ ಶಿಕ್ಷಣ ಮತ್ತು ಅಪಾರವಾದ ಓದು ಎಂಬುದನ್ನು ಮರೆಯುವಂತಿಲ್ಲ.

ಗಮನಿಸಬೇಕಾದುದೆಂದರೆ ಮೌಲ್ಯಗಳ ಆಯ್ಕೆಯಲ್ಲಿ ಆಗಿರುವ ಪಲ್ಲಟ. ಕಾನೂರಿನ ಹೂವಯ್ಯನ ವಿನಯ, ಉದಾರವಾದಿ ಆದರ್ಶಗಳು ಮುಂದಿನ ತಲೆಮಾರಿಗೆ ಖಾಸಗಿ-ವ್ಯಕ್ತಿಗತ ನೆಲೆಯ ಆದರ್ಶಗಳಾಗಿ ಬದಲಾಗಿದ್ದವು. ಇಲ್ಲಿ ಯಾರೂ ಅಮುಖ್ಯರಲ್ಲ ಎಂಬುದಕ್ಕಿಂತ, ಇಲ್ಲಿ ನಾನೇ ಮುಖ್ಯ ಎಂಬುದು ಇವುಗಳ ಮಂತ್ರತಂತ್ರ, ಭುಕ್ತಭೋಕ್ತ. ಕಾನೂರಿನ ಸೀತೆಗೆ ಹೂವಯ್ಯ ಭಾವನ ಮೇಲೆ ಅಕಳಂಕ ಪ್ರೇಮ, ಆಕೆಯದು ಪರಮನಿಷ್ಠೆ. ಆದರೆ, ‘ಮುಕ್ತಿ’ ಕಾದಂಬರಿಯ ಕಾಮಿನಿಗೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಕೆ ಸ್ವೇಚ್ಛಾಜೀವಿ, ತಾರುಣ್ಯದಲಿ ಸೊಕ್ಕಿದ ದೈಹಿಕ ಕಾಮನೆಗಳ ಪೂರೈಸಿಕೊಳ್ಳಲು ಆಕೆಗೆ ಸಾಂಪ್ರದಾಯಿಕ ನೈತಿಕ ನೆಲೆಗಟ್ಟುಗಳ ಹಂಗಿಲ್ಲ. ತನ್ನ ಚಂಚಲತೆಯ ಮುಂದೆ ಗೌರೀಶನ ಮುಗ್ಧ ಪ್ರೀತಿಯನ್ನು ನಿವಾಳಿಸಿ ಒಗೆಯುವಂಥವಳು.

ಸ್ವಾತಂತ್ರ್ಯಪೂರ್ವದ ತಲೆಮಾರು ವಿದೇಶಿ ವಿದ್ಯೆ ಪಡೆದು ಸ್ವದೇಶವನ್ನು ಕಟ್ಟಲು ಮರಳಿ ಬಂದರೆ, ಮುಂದಿನ ತಲೆಮಾರು ತಮ್ಮ ಪಿತೃಹತ್ಯೆಯ ಪಾಪಪ್ರಜ್ಞೆಯಿಂದ ಹೊರಬಂದು, ಜಂಜಾಟಗಳಿಂದ ಮುಕ್ತಿ ಪಡೆಯಲು ವಿದೇಶಿ ಪಲಾಯನದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹಾತೊರೆದವರು. ಸಮಾನತೆಯ ಬದಲಿಗೆ ವ್ಯಕ್ತಿ ಸ್ವಾತಂತ್ರ್ಯ, ಕೂಡುಬಾಳ್ವೆಯ ಬದಲಿಗೆ ಒಂಟಿಬಾಳ್ವೆಯೇ ಸುಖ ಎಂಬ ಪಲ್ಲಟಗೊಂಡ ತತ್ತ್ವದಲಿ ನಂಬಿಕೆಯಿದ್ದವರು.

ಬಹುಪಾಲು ಮೇಲ್ವರ್ಗದ ಲೇಖಕರು ಸೃಷ್ಟಿಸಿದ ಈ ಕಥಾ ಪಾತ್ರಗಳಿಗೆ ‘ಮನುಷ್ಯ ತನ್ನ ಅಸ್ತಿತ್ವಕ್ಕೆ ತಾನೇ ಜವಾಬ್ದಾರ’ ಎಂಬುದೇ ಘೋಷ ವಾಕ್ಯ. ಆ ಕಾರಣವಾಗಿಯೇ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಪಾರಂಪರಿಕ ಮೌಲ್ಯಗಳೇನೂ ಈ ಕಥಾಪಾತ್ರಗಳಲ್ಲಿ ಇದ್ದಂತಿರಲಿಲ್ಲ. ಬರಿಗೈಯಲಿ ನಿಂತಿದ್ದ ಹೊಸ ತರುಣ ತಲೆಮಾರಿನ ಸ್ಥಿತಿ ತಮ್ಮ ದೊಂದಿಯನು ತಾವೇ ಹೊತ್ತಿಸಿಕೊಂಡು, ಆ ಬೆಳಕಿನಲ್ಲಿ ಮುಂದೆ ಚಲಿಸುವಂತಿತ್ತು. ಇದೊಂದು ಐತಿಹಾಸಿಕ ಚಲನೆ. ಏಕಮುಖ, ಏಕರೇಖೆಯ ಗತಿಯಲ್ಲ, ಬದಲಿಗೆ ಸುರುಳಿ ಸುತ್ತಿದ ಸಿಂಬಿಯಂತ ಸ್ವರೂಪದ್ದು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಾದ ಪಲ್ಲಟಗಳು ಕೂಡ ಇವು ಮುಂಚೂಣಿಗೆ ಬರಲು ಅನುವು ಮಾಡಿಕೊಟ್ಟವು.

ಹೂವಯ್ಯ ಇದೀಗ ಅಮಾಸ, ಚೆಲುವ, ಚೆನ್ನ, ಕಪ್ಪುಚಿರತೆ, ಕರಿ ತೆಲಿ ಮಾನವ, ತ್ರಿಶೂಲ, ಸಾಕವ್ವ ಹೀಗೆ ನಾನಾ ಹೊಸ ರೂಪಗಳನ್ನು ತೊಟ್ಟುಕೊಳ್ಳಬೇಕಾಯಿತು. ಈವರೆಗೆ, ಅನುಕಂಪ ಮತ್ತು ಕರುಣೆಯಿಂದ ಸೃಷ್ಟಿಯಾಗಿದ್ದ ಚೋಮ, ತುಕ್ರಿ, ದೂಮ, ಮೋಚಿಯಂಥ ಪಾತ್ರಗಳು ತಾವೇ ತಮ್ಮ ಕಥೆಯನ್ನು ಹೇಳತೊಡಗಿದರು. ಈ ವಿಶಾಲ ಭಿತ್ತಿಯನ್ನು ಹಿನ್ನೆಲೆಯಾಗಿ ಹೊಂದಿದ ಆಧುನಿಕ ಭಾರತೀಯ ಶಿಕ್ಷಣ- ಓದು ಪರಂಪರೆಯು ಅಂದಿನ ಅರ್ಥದಲ್ಲಿ ಕುಲಮತ ನಿರಪೇಕ್ಷಿತ ಶಿಕ್ಷಣವನ್ನು ಒದಗಿಸಿಲು ಬದ್ಧವಾಯಿತು. ಆ ಪ್ರಕ್ರಿಯೆಯ ಅಂಗವಾಗಿಯೇ ಮೊದಲೊಮ್ಮೆ ಹೆಸರಿಸಿದ ಮೊದಲ ತಲೆಮಾರಿನ ಆಧುನಿಕ ಶಿಕ್ಷಿತರು ಹೊರ ಹೊಮ್ಮಿದರು.

ಸ್ವಾತಂತ್ರ್ಯಪೂರ್ವದಿಂದ ಆಧುನಿಕ ಶಿಕ್ಷಣ, ಹೊಸ ಯುಗಧರ್ಮದ ಓದುಗಳನ್ನು ಪರಿಶೀಲಿಸಿದಾಗ ಕಾಣುವ ಅಂಶಗಳು:

* ಮೊದಲ ತಲೆಮಾರಿಗೆ ಶಿಕ್ಷಣ ಮತ್ತು ಓದು, ಬಿಡುಗಡೆ- ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕಿನ ದ್ಯೋತಕವಾಗಿದ್ದವು. ಉದಾರವಾದಿ ಜೀವನ ಸಿದ್ಧಾಂತವನ್ನು ಸ್ಪಷ್ಟವಾಗಿ ಒಡಮೂಡಿಸಿ, ಕಲೆಯ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಸಲು ಪ್ರಯತ್ನಿಸಿದವು.

* ಮುಂದಿನ ತಲೆಮಾರಿಗೆ ಅವು ಸಾಂಸ್ಕೃತಿಕ ಬಂಡವಾಳವಾಗಿ ವೈಯಕ್ತಿಕ ಪ್ರತಿಷ್ಠೆ ಮತ್ತು ಖಾಸಗಿ ಸಂಪತ್ತನ್ನು ಕ್ರೋಡೀಕರಿಸುವ, ಅಸ್ತಿತ್ವ ಪ್ರತಿಷ್ಠಾಪನೆಯ ಸಾಧನವಾದವು.

* ಆಧುನಿಕ ಶಿಕ್ಷಣ ಮತ್ತು ಯುಗಧರ್ಮದ ಓದು ಮೂರನೆಯ ತಲೆಮಾರಿಗೆ ನೇರ ಅಭಿವ್ಯಕ್ತಿ, ಸಾಮಾಜಿಕ ಚಲನಶೀಲತೆ, ಸ್ವಾಭಿಮಾನದ ಪ್ರತೀಕವಾದಂತೆಯೇ, ಪ್ರಭುತ್ವದ ಅನುಗ್ರಹ ಪಡೆಯುವ ಪರಿಕರಗಳಾದವು. ಒಂದು ಸಮಾಜ ಸಾಧಿಸಬೇಕಾದ ಸಾಂಸ್ಕೃತಿಕ ಆಶೋತ್ತರಗಳನ್ನು ರಾಜಕೀಯ ಸಂಕಥನದ ಮುನ್ನೆಲೆಗೆ ತಂದು ಅವನ್ನು ‘ಸಾಂಕೇತಿಕ’ವಾಗಿ ಸಾಧಿಸಿದ ಭಾವನೆ ಮೂಡಿಸುತ್ತ, ವಾಸ್ತವಿಕ ನೆಲೆಯಲ್ಲಿ ರಾಜಕೀಯ ಸಿದ್ಧಾಂತಗಳು ಪೂರ್ಣಗೊಳಿಸಬೇಕಾದ ಕಾರ್ಯಸೂಚಿಯನ್ನು ಹಿನ್ನೆಲೆಗೆ ಸರಿಸಿದವು.

ಕಾದಂಬರಿಯಲ್ಲಿ ಇಪ್ಪತ್ತರ ಆಸುಪಾಸಿನ ಯುವಕ ಕಾನೂರಿನ ಹೂವಯ್ಯನಿಗೀಗ ನೂರರ ಮೇಲಿನ ಪ್ರಾಯ. ಹೂವಯ್ಯ ಬಣ್ಣದ ಹೊದಿಕೆಯ ಪುಸ್ತಕಗಳನ್ನು ಎರಡೂ ಕೈಗಳಲ್ಲಿ ಹಿಡಿದು ಓದುತ್ತಿದ್ದವ. ಜ್ಞಾನದ ವ್ಯಾಖ್ಯಾನ ಬದಲಾದಂತೆ ರಟ್ಟು, ತೆಳು ರಟ್ಟಿನ ಪುಸ್ತಕಗಳು ಮರೆಯಾಗಿ, ಮನರಂಜನೆಯೂ ಜ್ಞಾನವೇ ಎಂಬ ವಿಶ್ಲೇಷಣೆಯಿಂದ ಹಿರಿ ತೆರೆ, ಕಿರು ತೆರೆ, ಕರಸ್ಥಲದಲ್ಲಿ ಕೂತಿರುವ ಅಂಗೈ ತೆರೆಗಳು ಮನುಷ್ಯನ ಸಾಂಸ್ಕೃತಿಕ ಅಭಿರುಚಿಗಳನ್ನು ನಿಯಂತ್ರಿಸುತ್ತಿವೆ. ಹೂವಯ್ಯನ ನಾಲ್ಕನೆಯ ತಲೆಮಾರು ಈ ಕರಸ್ಥಲ ಜ್ಞಾನಮೀಮಾಂಸೆಯ ಕಾಲದವರು. ಆದರೇನು? ಹೂವಯ್ಯನಂತೆಯೇ ತಾರುಣ್ಯ ತುಳುಕಿಸಿಕೊಂಡು ತೊನೆದಾಡುತ್ತಿರುವಂಥವರು. ಹೂವಯ್ಯನಂತೆಯೇ ‘ಪೌರುಷ, (ವಿಶಾಲಾರ್ಥದ) ಆಧ್ಯಾತ್ಮಿಕತೆ, ಅಂತರ್ಮುಖತೆ, ರಸಿಕತೆ, ಮೇಧಾಶಕ್ತಿ, ಹಠಭಾವಗಳ ಭವ್ಯವ್ಯಕ್ತಿತ್ವ’ವನ್ನು ಹೊಂದಿದವರು.

ಆದರಿಷ್ಟೇ: ಮೊದಲ ತಲೆಮಾರಿನ ಭಾವುಕತೆಯಿಂದ ಉಕ್ಕುತ್ತಿದ್ದ ಅಸೀಮ ಆದರ್ಶ, ಎಲ್ಲಾ ಒಳಿತು- ಕೆಡಕುಗಳ ಬಳಿಕವೂ ಮನುಷ್ಯ, ಮನುಷ್ಯನಾಗಿಯೇ ಇರುತ್ತಾನೆ ಎಂಬ ನಂಬಿಕೆ ಪಡೆಯಬೇಕು. ಸ್ವಾತಂತ್ರ್ಯ ನಂತರದ ತಲೆಮಾರಿನ ಸ್ವಾರ್ಥಸೆಲೆಯ ಆತ್ಮಾವಲೋಕನದ ಬದಲು ಸಾಮುದಾಯಿಕ ಅವಲೋಕನ ಹಾಗೂ ಸಾಮುದಾಯಿಕ ಹಿತದಲ್ಲಿಯೇ ನನ್ನ ಮತ್ತು ಕುಟುಂಬದ ಸುಖವಡಗಿದೆ ಎಂಬ ಕಠಿಣ ನಿಲುವು ತಾಳಬೇಕು. ಅಸ್ತಿತ್ವ ರೂಪಿಸಲು, ಸ್ವಾಭಿಮಾನವನ್ನು ಮೆರೆಯಲಷ್ಟೇ ನಮ್ಮ ವ್ಯಕ್ತಿ ವಿಶಿಷ್ಟ ದನಿಯೇ ಹೊರತು ಪ್ರಾಮಾಣಿಕತೆ- ನಿಷ್ಠೆಗಳ ಅಡವಿಟ್ಟು ಪಡೆವ ಅಧಿಕಾರ ಗಳಿಸಲು ಅಲ್ಲ ಎಂಬ ಖಚಿತ ನಿಲುವು ಹೊಸ ತಲೆಮಾರಿನ ಓದುಗರ ಮುಂದೆ ತೆರೆದು ನಿಂತಿವೆ. ಅವರ ಆಯ್ಕೆಯ ಮೇಲೆ ಮೊದಲ ತಲೆಮಾರಿನ ಪೂರ್ವಿಕರು ಓದಿನಿಂದ ನಿಜಕ್ಕೂ ಪಡೆದ ‘ಸುಖ’ ಮತ್ತು ‘ಕಾಣ್ಕೆ’ ಏನು ಎನ್ನುವ ಅನುಭಾವಿ ಒಳನೋಟವನ್ನು ಅವರು ಪಡೆಯಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT