ಶನಿವಾರ, ಮಾರ್ಚ್ 6, 2021
31 °C

ಕುಂದಗನ್ನಡಕ್ಕೆ ದಕ್ಕಿದ ನಿಘಂಟು

ಪಂಜು ಗಂಗೊಳ್ಳಿ Updated:

ಅಕ್ಷರ ಗಾತ್ರ : | |

ಕುಂದಾಪ್ರ ಕನ್ನಡ - ಉಡುಪಿಯ ಕಲ್ಯಾಣಪುರ ಹೊಳೆಯಿಂದೀಚೆ ಶಿರೂರು ತನಕ ಕೇಳಿ ಬರುವ ಒಂದು ವಿಶಿಷ್ಟ ಉಪಭಾಷೆ. ಇದು ಕುಂದಾಪುರ ಪರಿಸರದ ವ್ಯಾಪ್ತಿಗಷ್ಟೇ ಸೀಮಿತವಾದುದಾದರೂ ಇದರ ಆಳ, ವಿಸ್ತಾರ ಅಗಾಧ. ಊರಿಂದ ಊರಿಗೆ, ಸಮುದಾಯದಿಂದ ಸಮುದಾಯಕ್ಕೆ ಶಬ್ದಗಳ ಬಳಕೆಯಲ್ಲಿನ ವೈವಿಧ್ಯ ಆಶ್ಚರ್ಯ ಹುಟ್ಟಿಸುತ್ತದೆ. ಕುಂದಾಪುರದ ಹೊರಗೆ, ಹೆಚ್ಚಾಗಿ ಬೆಂಗಳೂರು, ಮೈಸೂರು ಮೊದಲಾದೆಡೆ, ಇದು ‘ಕೋಟಾ ಕನ್ನಡ’ ಎಂದು ಪರಿಚಿತ. ಕೆಲವರು ಇದನ್ನು ಕುಂದಗನ್ನಡ ಎಂದು ಕರೆಯವುದೂ ಇದೆ. ಆದರೆ, ಸ್ಥಳೀಯ ಬಹು ಸಂಖ್ಯಾಕ ಶ್ರೀಸಾಮಾನ್ಯರ ಬಾಯಲ್ಲಿ ಇದು ‘ಕುಂದಾಪ್ರ ಕನ್ನಡ’ ಎಂದೇ ಕರೆಯಲ್ಪಡುತ್ತದೆ.

ಕುಂದಾಪ್ರ ಕನ್ನಡವು ಯಕ್ಷಗಾನ, ತಾಳಮದ್ದಳೆ, ಹೂವಿನಕೋಲು, ನಾಗಮಂಡಲ, ಪಾಣಾರಾಟ, ಕಾಡ್ಯನಾಟ, ಹೌದೇರಾಯನ ಓಲಗ, ಧಿಮ್ಸಾಲ್ ಹಾಡು, ಕೇಳ್ ಕೇಳ್ ಕನ್ನಡಿ, ಕೋಲಾಟ, ಹುಲಿಹಾಡು, ಶೋಭಾನೆ ಹಾಡು, ಭತ್ತ ಕುಟ್ಟವ ಹಾಡು ಮೊದಲಾದವುಗಳಿಂದ ಶ್ರೀಮಂತವಾದ ಭಾಷೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಎಷ್ಟೋ ಪದ ಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇಂದಿಗೂ ಜೀವಂತವಾಗಿವೆ. ವರ್ಷದ ಹನ್ನೆರಡು ತಿಂಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರುಗಳನ್ನೂ ಹೊಂದಿದೆ. ಆದರೂ, ಸೂಕ್ಷ್ಮವಾಗಿ ನೋಡಿದರೆ ಕುಂದಾಪ್ರ ಕನ್ನಡ ಅನ್ನುವುದು ಕುಂದಾಪುರ ಪ್ರಾದೇಶಿಕ ರೂಪ ಪಡೆದ ಹಳಗನ್ನಡವೇ ಹೊರತು ಬೇರೇನಲ್ಲ ಅನ್ನುವುದು ತಿಳಿಯುತ್ತದೆ.

ವಿಶ್ವದ ಯಾವುದೇ ಭಾಷೆಯನ್ನು ನೋಡಿದರೂ ಅವುಗಳಲ್ಲಿ ಲಕ್ಷಾಂತರ ಶಬ್ದಗಳಿರುತ್ತವೆ. ಆದರೆ, ದಿನಬಳಕೆಯಲ್ಲಿರುವ ಶಬ್ದಗಳು ಕೆಲವೇ ಕೆಲವು ನೂರು ಅಥವಾ ಸಾವಿರಗಳಷ್ಟೆ. ಉಳಿದ ಒಂದಷ್ಟು ಶಬ್ದಗಳು ಆಯಾ ಭಾಷೆಯ ಸಾಹಿತ್ಯದಲ್ಲಿರುತ್ತವೆ. ಮತ್ತುಳಿದ ಬಹುತೇಕ ಶಬ್ದಗಳು ಆಯಾ ಭಾಷೆಗಳ ನಿಘಂಟುಗಳಲ್ಲಿ ಜೀವ ಹಿಡಿದುಕೊಂಡಿರುತ್ತವೆ. ಆದರೆ, ನಿಘಂಟುಗಳಿಲ್ಲದ ಭಾಷೆಗಳಲ್ಲಿ ಬಳಕೆಯಲ್ಲಿರದ ಶಬ್ದಗಳು ಬಹುಬೇಗನೇ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಜನರ ಸ್ಮೃತಿಪಟಲದಿಂದ ಮರೆಯಾಗುತ್ತವೆ. ‘ಕುಂದಾಪ್ರ ಕನ್ನಡ ನಿಘಂಟು’ ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಒಂದು ಸಾಂದರ್ಭಿಕ ಅಗತ್ಯ.

2001ರ ಜುಲೈ ತಿಂಗಳಲ್ಲಿ ಮರಾಠಿ ನೆಲವಾದ ಮುಂಬೈಯಲ್ಲಿ ಶುರುವಾದ ನಮ್ಮ ಪ್ರಯತ್ನ ಮುಂದಿನ 20 ವರ್ಷಗಳ ಕಾಲ ನಡೆದು, 10 ಸಾವಿರಕ್ಕೂ ಹೆಚ್ಚು ಶಬ್ದಗಳು, 1700ಕ್ಕೂ ಮಿಕ್ಕಿ ನುಡಿಗಟ್ಟುಗಳು ಮತ್ತು ಸಾವಿರಾರು ಕುಂದಾಪ್ರ ಕನ್ನಡದ ಹಾಡುಗಳನ್ನು ಸಂಗ್ರಹಿಸುವಲ್ಲಿ ಸಫಲರಾದೆವು. ಈ ಸಂಗ್ರಹ ಕಾರ್ಯದಲ್ಲಿ ನೂರಾರು ಜನ ಒತ್ತಾಸೆಯಾಗಿದ್ದರು. ಅವರಲ್ಲಿ ಮುಂಬೈಯ ಸಂಶೋಧಕ ಮಿತ್ರರಾದ ಬಾಬು ಶಿವ ಪೂಜಾರಿ, ಸಿ.ಎ. ಪೂಜಾರಿ ಮತ್ತು ರಾಮಚಂದ್ರ ಉಪ್ಪುಂದ  ಮುಖ್ಯರಾದವರು.

ಈ ನಿಘಂಟು ರಚನೆಯಲ್ಲಿ ನಾವೇ ಹಾಕಿಕೊಂಡ ಕೆಲವು ಸೂತ್ರಗಳನ್ನು ಅನುಸರಿಸಿದ್ದೇವೆ. ಶಿಷ್ಟ ಕನ್ನಡದಲ್ಲಿ ಇಲ್ಲದೆ ಕುಂದಾಪ್ರ ಕನ್ನಡದಲ್ಲಿ ಮಾತ್ರವೇ ಬಳಕೆಯಲ್ಲಿರುವ (ಉದಾ: ಹಿಟ್ಳರಿ-ಒರೆಸಲು  ಹಾಗೂ ಬಿಸಿಪಾತ್ರೆಗಳನ್ನು ಒಲೆಯಿಂದ ಇಳಿಸಲು ಬಳಸುವ ಬಟ್ಟೆ; ಮಳಿ-ಕಪ್ಪೆಚಿಪ್ಪು; ಚಪ್ಪಿ-ಸಪ್ಪೆ), ಶಿಷ್ಟ ಕನ್ನಡ ಹಾಗೂ ಕುಂದಾಪ್ರ ಕನ್ನಡಗಳೆರಡರಲ್ಲೂ ಬಳಕೆಯಲ್ಲಿದ್ದು ಕುಂದಾಪ್ರ ಕನ್ನಡದಲ್ಲಿ (ಸಾಮಾನ್ಯ ಅರ್ಥದೊಂದಿಗೆ) ಬೇರೆಯೇ ಅರ್ಥವನ್ನು ಪಡೆದಿರುವ (ಉದಾ: ಅನುಮಾನ್ಸ್-ಗೌರವಿಸು; ಉಪಾದ್ರ-ದೈವಭೂತಗಳ ಪೀಡೆ) ಪದಗಳು ಇಲ್ಲಿವೆ. ಹಾಗೆಯೇ ಶಿಷ್ಟ ಕನ್ನಡ ಹಾಗೂ ಕುಂದಾಪ್ರ ಕನ್ನಡ ಎರಡರಲ್ಲೂ ಬಳಕೆಯಲ್ಲಿದ್ದು, ಆದರೆ ರೂಪಭಿನ್ನತೆಯಿಂದ ಕುಂದಾಪ್ರ ಕನ್ನಡದಲ್ಲಿ ಬೇರೆಯೇ ಶಬ್ದದಂತೆ ಕಾಣುವ (ಉದಾ: ಕುಟ್ಟಿನಿ-ಕುಟ್ನಿ, ನಿರ್ವಾಹ-ನಿರಾವ್, ಪರಿಸೆ-ಪರ್ಸಿ ಇತ್ಯಾದಿ) ಶಬ್ದಗಳನ್ನೂ ಆಯ್ಕೆ ಮಾಡಿಕೊಂಡಿದ್ದೇವೆ.


ಕುಂದಗನ್ನಡಕ್ಕೊಂದು ಪದಕೋಶ  

ಕುಂದಾಪ್ರ ಕನ್ನಡದಲ್ಲಿ ಹಿಂದೆಂದೂ ಇಂತಹ ಒಂದು ಪ್ರಯತ್ನ ನಡೆಯದೇ ಇದ್ದ ಕಾರಣ ಸಹಜವಾಗಿಯೇ ಆಕರ ಗ್ರಂಥಗಳು ಲಭ್ಯವಿಲ್ಲದೆ, ನೇರವಾಗಿ ಜೀವಂತ ಪರಿಸರದಿಂದ ಶಬ್ದಗಳನ್ನು  ಹೆಕ್ಕಿದ್ದೇವೆ. ಊರುಕೇರಿಗಳನ್ನು ಸುತ್ತಾಡಿ, ವಿವಿಧ ಜನಾಂಗಗಳ ಕಸುಬು, ರೀತಿ-ರಿವಾಜು, ಬದುಕಿನ ಕ್ರಮವನ್ನು ಹತ್ತಿರದಿಂದ ನೋಡಿದ್ದೇವೆ. ಮೀನುಗಾರಿಕೆ, ಬೇಸಾಯ, ಮೂರ್ತೆ, ವಾದ್ಯ, ಗಾಣ, ಬುಟ್ಟಿ ತಯಾರಿಸುವುದು, ಕುಂಬಾರಿಕೆ, ಬೆಲ್ಲ ತಯಾರಿ ಹಾಗೂ ಇನ್ನಿತರ ವೃತ್ತಿ, ಕಸುಬುಗಳಲ್ಲಿ ಬಳಕೆಯಲ್ಲಿರುವ ರೂಢಿಗತ ಹಾಗೂ ತಾಂತ್ರಿಕ ಪದಗಳು, ನಾಗಮಂಡಲ, ಢಕ್ಕೆಬಲಿ, ಗಡಿಪೂಜೆ, ಅಜ್ಜಿ, ಸೋಣೆ ಆರತಿ, ತುಳಸಿ ಪೂಜೆ, ವಸಂತ, ಪಾಣಾರಾಟ, ಹರಕೆ ತೀರಿಸುವುದು, ತನು ಹಾಕುವುದು, ದೈವ-ಭೂತ-ನಾಗ ದರ್ಶನ, ನಿವಾರಕವಿಧಿ ಮೊದಲಾದ ವಿಧಿಗಳಲ್ಲಿ ಬಳಸಲ್ಪಡುವ ಶಬ್ದಗಳು, ಯಕ್ಷಗಾನ, ಕಂಬಳ, ಕೋಳಿಪಡೆ, ಬೇಟೆ ಮೊದಲಾದ ಸಾಂಸ್ಕೃತಿಕ, ವಿನೋದಾತ್ಮಕ ಚಟುವಟಿಕೆಗಳಲ್ಲಿ ಬಳಕೆಯಾಗುವ ಶಬ್ದ ಸಂಪತ್ತುನ್ನು ಸಂಗ್ರಹಿಸಿದ್ದೇವೆ.

ವಿವಿಧ ಜನಾಂಗಗಳ ಬಳಿ, ಗೋತ್ರ, ಕುಲನಾಮಗಳು, ಸಂಬಂಧಗಳ ಹೆಸರು, ಮನುಷ್ಯ, ಪ್ರಾಣಿ, ಮೀನು, ಪಕ್ಷಿ ಶರೀರದ ವಿವಿಧ ಭಾಗಗಳ ಹೆಸರುಗಳು, ಮರ, ಗಿಡ, ಹುಲ್ಲು, ಹುಳಹಪ್ಪಟೆಗಳ ಹೆಸರುಗಳು ಮೊದಲಾದವುಗಳನ್ನು ಇಲ್ಲಿ ಕಾಣಿಸಿದ್ದೇವೆ.

ಹಾಡುವವರ ಮನೆಗಳಿಗೆ ಹೋಗಿ ಹಾಡುಗಳನ್ನು ಧ್ವನಿಮುದ್ರಣ ಮಾಡಿಕೊಂಡು ಅವುಗಳಿಗೆ ಅಕ್ಷರ ರೂಪ ಕೊಟ್ಟಿದ್ದೇವೆ. ಬಾಲ್ಯದಲ್ಲಿ ಆಡಿದ ಚನ್ನೆಮಣೆ, ಗುಡ್ಣ, ಎಂಜ್ಲ್ ಗಿಳಿ ಆಟ, ಬೋಯಾ, ಚಿನ್ನಿಕೋಲು, ಗೋಲಿಯಾಟ ಮೊದಲಾದ ಸ್ಥಳೀಯ ಕ್ರೀಡೆಗಳನ್ನು ಮೆಲುಕು ಹಾಕಿ ಮತ್ತು ತಿಳಿದವರನ್ನು ಭೇಟಿಯಾಗಿ ಆಟಗಳೊಂದಿಗೆ ಕಣ್ಮರೆಯಾಗಿರುವ ಆಯಾ ಆಟದ ಶಬ್ದಗಳನ್ನು ಇಲ್ಲಿ ತಂದಿದ್ದೇವೆ.

ರೋಗ ರುಜಿನ ಹಾಗೂ ಅವುಗಳ ಆರೈಕೆ ವಿಧಾನಗಳ ಹೆಸರುಗಳು, ಅಶ್ಲೀಲ ಪದ, ತಿರಸ್ಕಾರ ಸೂಚಕ ಪದ, ಬೈಗುಳ, ಶಾಪ, ಹೊಗಳಿಕೆ, ಬಾಲಭಾಷೆ ಶಬ್ದಗಳನ್ನು ಆದಷ್ಟು ಸಂಗ್ರಹಿಸಿದ್ದೇವೆ. ವಿವಿಧ ಜನಾಂಗಗಳಲ್ಲಿ ಮದುವೆ, ಮೈ ನೆರೆಯುವುದು, ಬೊಜ್ಜ ಮೊದಲಾದ ಆಚರಣೆಗಳಲ್ಲಿ ಬಳಕೆಯಾಗುವ ಪದಗಳನ್ನು ದಾಖಲಿಸಿದ್ದೇವೆ.

ಶಬ್ದವನ್ನು ಸಂಕ್ಷಿಪ್ತಗೊಳಿಸುವುದು ಕುಂದಾಪ್ರ ಕನ್ನಡದ ಎದ್ದು ಕಾಣುವ ಲಕ್ಷಣ. ಉದಾ: ಹೋಗುತ್ತೇನೆ-ಹೋತೆ; ಉಣ್ಣುತ್ತೇನೆ-ಉಂತೆ; ಮಾಡುತ್ತೇನೆ-ಮಾಡ್ತೆ. ಆದರೆ, ಸಂಕ್ಷಿಪ್ತ ಪದವನ್ನು ದೀರ್ಘಗೊಳಿಸುವ ವಿರುದ್ಧ ಲಕ್ಷಣವೂ ಇಲ್ಲಿದೆ. ಉದಾ: ರವಿಕೆ- ರವ್ಕಿಗಿ; ಇಡ್ಳಿ-ಇಡ್ಳಿಗಿ. ಕೊನೆಯ ಅಕ್ಷರ ಲೋಪವಾಗಿ ಪದಗಳು ಸಂಕ್ಷಿಪ್ತಗೊಳ್ಳುವುದು ಇನ್ನೊಂದು ವಿಶೇಷ. ಉದಾ: ‘ಗೆಲುವು’ ‘ಗೆಲು’ ಆಗುತ್ತದೆ; ‘ಕಳುವು’ ‘ಕಳು’ ಆಗುತ್ತದೆ.

ಜನಸಾಮಾನ್ಯರ ಆಡು ಭಾಷೆಯಾಗಿರುವ ಕಾರಣ ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣದ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಹಳಗನ್ನಡದ ಬಿಂದು ಸಹಿತ ಶಬ್ದಗಳು ಇಂದಿಗೂ ಇದರಲ್ಲಿರುವುದು ಸ್ವಾರಸ್ಯಕರ ಅಂಶ. ಉದಾ: ದಾಟು-ದಾಂಟ್; ಬೇಟೆ-ಬೇಂಟೆ; ಹುತ್ತ-ಹುಂತ;  ಹೀಗೆ-ಹೀಂಗೆ. ಇಷ್ಟೇ ಸ್ವಾರಸ್ಯಕರವಾದುದೆಂದರೆ ಶಿಷ್ಟ ಕನ್ನಡದ ಬಿಂದು ಸಹಿತ ಪದಗಳು ಇಲ್ಲಿ ಬಿಂದು ರಹಿತವಾಗಿ ಹೊಸ ರೂಪ ಪಡೆದಿರುವುದು. ಉದಾ: ಮೆಂತೆ-ಮೆತ್ತಿ; ಬೆಳಂತಿಗೆ-ಬೆಳ್ತಿಗಿ.

ಭಾಷೆಯ ಮೂಲಭೂತ ಘಟಕವಾದ ಶಬ್ದಗಳಿಗೆ ಅಕ್ಷರರೂಪದಲ್ಲಿ ಎಲ್ಲಾ ರೀತಿಯಲ್ಲೂ ಸಮಂಜಸ ಅರ್ಥ ನೀಡುವುದು ಬಹಳ ಕಷ್ಟ. ಆಡುಭಾಷೆಯಲ್ಲಂತೂ ಇದು ಇನ್ನಷ್ಟು ಕಷ್ಟ. ಇದರಲ್ಲಿನ ಪದ ಪ್ರಯೋಗಗಳು ಎಂತಹ ಘಟಾನುಘಟಿ ವ್ಯಾಕರಣಕಾರನಿಗೂ ಸವಾಲಾಗಬಲ್ಲವು. ಅದರಲ್ಲೂ, ನಾನಾಗಲೀ ನನ್ನ ಜೊತೆಗಾರರಾಗಲೀ ಭಾಷಾ ಪಂಡಿತರಲ್ಲ. ಸಿಕ್ಕಷ್ಟು ಶಬ್ದಗಳನ್ನು ದಾಖಲಿಸಿಡುವುದು ನಮ್ಮ ಮುಖ್ಯ ಉದ್ದೇಶ.

ಕುಂದಾಪುರ ಪ್ರದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ‘ಹರ್ಮಾಯ್ಕು’, ‘ಜ್ವಾಗಳಿ’, ‘ಲಗಾಡಿ’ ಮೊದಲಾದವು ಅಂತಹ ಕೆಲವು ಶಬ್ದಗಳು. ಇವುಗಳಿಗೆಲ್ಲ ಅರ್ಥಗಳೊಂದಿಗೆ ಬಳಕೆಯ ಉದಾಹರಣೆಯನ್ನೂ ನೀಡಿ ಸ್ಪಷ್ಟಗೊಳಿಸಲು ಪ್ರಯತ್ನಿಸಿದ್ದೇವೆ. ಶಬ್ದಕೋಶದಲ್ಲಿ ಪದಗಳು ಮಾತ್ರ ಇರಬೇಕು, ವಾಕ್ಯ ಅಥವಾ ಪದಪುಂಜಗಳಲ್ಲ ಎಂಬುದು ಸಾಮಾನ್ಯ ನಿಯಮ. ಆದರೆ, ಇಲ್ಲಿ ಹಲವು ಸಂದರ್ಭಗಳಲ್ಲಿ ಈ ನಿಯಮವನ್ನು ಮೀರಬೇಕಾಯಿತು. ಏಕೆಂದರೆ, ಕುಂದಾಪ್ರ ಕನ್ನಡದ ಎಷ್ಟೋ ಶಬ್ದಗಳು ನುಡಿಗಟ್ಟುಗಳಲ್ಲಿ ತಮ್ಮ ಅಸ್ತಿತ್ವವನ್ನು ಪಡೆದಿವೆ.

ಹಿಂದಿ, ಮರಾಠಿ, ಉರ್ದು, ಅರೇಬಿಕ್ ಮೂಲದ ಹಲವಾರು ಪದಗಳು ಕುಂದಾಪ್ರ ಕನ್ನಡದಲ್ಲಿ ಬಳಕೆಯಲ್ಲಿವೆ. ಉದಾ: ಕಲಾಸಿ, ನಸೀಪ್, ಹರ್ಕತ್, ಚಪ್ಪನ್ನ್ ಚೂರ್, ಪಾಯ್ದಿ ಇತ್ಯಾದಿ. ಇವುಗಳನ್ನು ಇಲ್ಲಿಗೆ ತಂದವರು ಹಿಂದೆ ಇಲ್ಲಿಂದ ಹೆಂಚುಗಳನ್ನು ಮುಂಬೈ, ಗುಜರಾತ್‍ಗಳಿಗೆ ಕೊಂಡೊಯ್ಯುತ್ತಿದ್ದ ಮಚುವಿಗಳ (ಹಾಯಿಹಡಗು) ನವಾಯತಿ ಮುಸ್ಲಿಂ ಕೆಲಸಗಾರರು. ಹಾಗೆಯೇ, ಪೋರ್ಚುಗೀಸರ ಕಾಲದಲ್ಲಿ ಗೋವಾ-ಮುಂಬೈ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದ ಕೊಂಕಣಿ ಹಾಗೂ ಖಾರ್ವಿ ಜನಾಂಗಗಳು, ಆಗಾಗ್ಗೆ ದಾಳಿ ಮಾಡುತ್ತಿದ್ದ ಮರಾಠರೂ ಕುಂದಾಪ್ರ ಕನ್ನಡಕ್ಕೆ ತಮ್ಮದೇ ಆದ ಬಳುವಳಿ ನೀಡಿದ್ದಾರೆ.

ಹಾಗೆಂದು, ಕುಂದಾಪ್ರ ಕನ್ನಡ ನಿಘಂಟು ಕೇವಲ ಶಬ್ದಗಳ ಅರ್ಥ ಕೊಡುವ ಒಂದು ಶಬ್ದಕೋಶ ಮಾತ್ರವಲ್ಲ. ಸಾಧ್ಯವಾದೆಡೆಯಲ್ಲೆಲ್ಲ ಶಬ್ದಗಳ ಅರ್ಥದ ಜೊತೆ ಅವುಗಳ ವ್ಯುತ್ಪತ್ತಿ, ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ, ಕುಂದಾಪುರ ಪ್ರದೇಶದ ಕಟ್ಟುಪಾಡು, ಆಚಾರ-ವಿಚಾರ ಮೊದಲಾದವುಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಶಬ್ದಗಳನ್ನು ಬಳಸುವ ಕ್ರಮವನ್ನು ಉದಾಹರಣೆ ಸಹಿತ ತೋರಿಸಲಾಗಿದೆ. ಹಾಗಾಗಿ ಇದು ಕುಂದಾಪ್ರಕನ್ನಡಿಗರಿಗೆ ಅತ್ಯಗತ್ಯ ಶಬ್ದಕೋಶವಾದರೆ, ಇತರ ಕನ್ನಡಿಗರಿಗೆ ಉಪಯುಕ್ತ ಆಕರಗ್ರಂಥವಾಗಬಹುದು.

ಸಂಗ್ರಹಕಾರ್ಯವೆಲ್ಲ ಮುಗಿದು, ಪುಸ್ತಕವೂ ಹೆಚ್ಚೂಕಡಿಮೆ ಪೂರ್ಣಗೊಂಡ ನಂತರ ನಾಲ್ಕೈದು ವರ್ಷಗಳು ಸೂಕ್ತ ಪ್ರಕಾಶಕರ ಹುಡುಕಾಟದಲ್ಲಿ ಹೋಯಿತು. ನಾವು ಪ್ರಕಾಶಕರ ಹುಡುಕಾಟದಲ್ಲಿರುವುದು ಕುಂದಾಪ್ರಕನ್ನಡದವರೇ ಆದ ಹಿರಿಯ ಸ್ನೇಹಿತ ಸದಾನಂದ ತಲ್ಲೂರರಿಗೆ ತಿಳಿದು, ಅವರು ತಮ್ಮ ‘ತಲ್ಲೂರು ಫ್ಯಾಮಿಲಿ ಟ್ರಸ್ಟ್’ನ ‘ಹಿಗ್ಗು ಅರಿವಿನ ಮಾಲೆ’ಯ ದತ್ತಿನಿಧಿಗೆ ಕುಂದಾಪ್ರಕನ್ನಡ ನಿಘಂಟನ್ನು ಆಯ್ಕೆ ಮಾಡಿದರು. ಮತ್ತು, ಇನ್ನೊಬ್ಬ ಸ್ನೇಹಿತರಾದ ರಾಜಾರಾಮ್ ತಲ್ಲೂರರು ತಮ್ಮ ‘ಪ್ರೊಡಿಜಿ’ ಸಂಸ್ಥೆಯ ಮೂಲಕ ಇದನ್ನು ಪ್ರಕಟಿಸುವ ಸಾಹಸಕ್ಕೆ ಕೈಹಾಕಿದ ಕಾರಣ, 700ಕ್ಕೂ ಮಿಕ್ಕಿ ಪುಟಗಳ ಈ ನಿಘಂಟು ಜನರ ಕೈಗೆ ತಲುಪಲು ಸಾಧ್ಯವಾಗಿದೆ.

ರಾಜಾರಾಮ್ ತಲ್ಲೂರರು ಪ್ರಕಟಣೆ ಮಾತ್ರವಲ್ಲದೆ, 700 ಪುಟಗಳಲ್ಲಿನ ಒಂದೂ ಶಬ್ದವನ್ನು ಬಿಡದೆ ಕಾಗುಣಿತ ದೋಷಗಳನ್ನು ಸರಿಪಡಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ. ಅಂತರರಾಷ್ಟ್ರೀಯ ಕಲಾವಿದರಾದ ಎಲ್.ಎನ್. ತಲ್ಲೂರರು ಮುಖಪುಟ ರಚಿಸಿರುವುದು ಈ ನಿಘಂಟಿನ ಇನ್ನೊಂದು ಹೆಗ್ಗಳಿಕೆ.

ಕುಂದಾಪ್ರ ಕನ್ನಡದಂತಹ ಚಿಕ್ಕಪುಟ್ಟ ಪ್ರಾದೇಶಿಕ ಉಪಭಾಷೆಗಳಂತೂ ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ. ಕುಂದಾಪುರದ ಕುಗ್ರಾಮಗಳಲ್ಲೂ ಹೆತ್ತವರು ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮದ ಶಾಲೆಗೆ ಕಳುಹಿಸುವುದು ಸಾಮಾನ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಎಷ್ಟು ಕಾಲ ಉಸಿರಾಡಬಹುದು? ಕುಂದಾಪ್ರ ಕನ್ನಡದ ಒಂದಷ್ಟು ಶಬ್ದಗಳು ದಿನಬಳಕೆಯಲ್ಲಲ್ಲದಿದ್ದರೆ ನಿಘಂಟಿನಲ್ಲಾದರೂ ಜೀವಂತವಿರಲಿ ಎಂಬ ಕಾಳಜಿಯೇ ಈ ಕುಂದಾಪ್ರ ಕನ್ನಡ ನಿಘಂಟಿನ ಹಿಂದಿನ ಪ್ರೇರಕಶಕ್ತಿ.

ಅತ್ತಿಗಿಯಕ್ಕ ಮೈದಿನಿಯಕ್ಕ ಸೊಪ್ಪಿಗ್ ಹೋಪಲೇ.
ಸೊಪ್ಪಿಗ್ ಹೋಪು ದಾರಿ ಮ್ಯಾಲೆ ಕುಪ್ಳ ಕೂತಿತಲೇ.‌
ಕುಪ್ಳ ಕೂತ್ರೆ ಮ್ಯಾಳಿ ತಿಪ್ಪಿ ಪದಾರ್ಥ ಮಾಡ್ವಾಲೇ.
ಪದಾರ್ಥ ಮಾಡೂಕೆ ಮನ್ಯಾಗೆ ಸಾಮಾನ್ ಇಲ್ಯಾಲೇ.
ಸಾಮಾನ್ ಇಲ್ದೀರೆ ಮೂಗ್ತಿ ಮಾರಿ ಸಾಮಾನ್ ತಪ್ಯಾಲೇ.
ಮೂಗ್ತಿ ಮಾರಿ ಸಾಮಾನ್ ತಂದ್ರೆ ಗಂಡ ಬೈತ್ನಲೇ.
ಗಂಡ ಬೈದ್ರೆ ಗುಂಡಿಗ್ ಹಾರಿ ಜೀವ್ ಬಿಡ್ವಲೇ.
ಗುಂಡಿಗ್‌ ಹಾರಿ ಜೀವ ಬಿಟ್ರೆ ಮಕ್ಳ್‌ ಮರ‍್ಕ್‌ತ್ವಲೇ
ಮಕ್ಳ್‌ ಮರ‍್ಕ್ರೆ ಮಕ್ಳ್‌ ಕಟ್ಕಂಡ್‌ ಗುಂಡಿಗ್‌ ಹಾರ‍್ವಲೇ

ಮೇಲಿನದು ಕುಂದಾಪ್ರ ಕನ್ನಡದ ಎಲ್ಲಾ ತಲೆಮಾರುಗಳಿಗೆ ಪರಿಚಿತವಾದ ಒಂದು ಜನಪ್ರಿಯ ಹಾಡು. ಪರೋಕ್ಷವಾಗಿ ಈ ಹಾಡು ಎಲ್ಲಾ ದೇಶೀಭಾಷೆಗಳ ಈಗಿನ ಪಾಡನ್ನು ಬಿಂಬಿಸುವಂತಿದೆ. ಸಂಪರ್ಕಕ್ಕೆ: 8495024253

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು