ಗುರುವಾರ , ಸೆಪ್ಟೆಂಬರ್ 24, 2020
24 °C

ಪ್ರಶಾಂತ ಕಣವಿ, ಶಾಂತ ನೆನಪು: ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ...

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

prajavani

ಚೆಂಬೆಳಕಿನ ಕವಿ, ಸಮನ್ವಯ ಕವಿ ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಚೆನ್ನವೀರ ಕಣವಿಯವರು ಇಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. (ಜನನ: 28 ಜೂನ್‌, 1928). ಜೂನ್‌ ಎರಡನೇ ವಾರದ ಆರಂಭದಲ್ಲಿ ಅವರ ಸಂದರ್ಶನಕ್ಕೆ ಹೋದಾಗ, 68 ವರ್ಷಗಳ ದಾಂಪತ್ಯದ ಸಂಗಾತಿ ಶಾಂತಾದೇವಿ ಕಣವಿಯವರು ಇನ್ನಿಲ್ಲವಾಗಿ ಎರಡು ವಾರಗಳಷ್ಟೇ ಕಳೆದಿದ್ದವು. ಹಾಗಾಗಿ ಅವರ ಮಾತಿನ ತುಂಬ ಶಾಂತಕ್ಕನದೇ ನೆನಪು.

‘ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ

ಪಾರಿಜಾತವು ಹೂವು ಸುರಿಸಿದಂತೆ,

ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ

ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ;’

-ಧಾರವಾಡದಲ್ಲಿ ರಾತ್ರಿ ಇಡೀ ಮಳೆ ಸುರಿದು, ಬೆಳಗಿನ ಬೆಳಕಿಗೆ ಒಂದು ಸೊಬಗಿತ್ತು. ಅವೊತ್ತು ‘ಚೆಂಬೆಳಕು’ ಮನೆಯಂಗಳದಲ್ಲಿ ನಿಂತಾಗ ಈ ಕವಿತೆಯ ಸಾಲುಗಳು ನೆನಪಾಗಿದ್ದವು. ರಸ್ತೆಯಂಚಿನಲಿ ಬೆಳೆದ ಗರಿಕೆಯ ಮೇಲೆ ಇಬ್ಬನಿಯು ಹೊಳೆಯುತ್ತಿತ್ತು. 

‘ಅಜ್ಜಾ... ಪ್ರಜಾವಾಣಿಯವರು ಬಂದಾರ..’ ಅಂತ ಮೊಮ್ಮಕ್ಕಳು ಕರೆದಾಗ, ತೊಳೆದಿಟ್ಟ ಬೆಳಗಿನಂತೆಯೇ ಕಣವಿಯವರು ಮೆಲುನಗುತ್ತ ಬಂದರು, ನಿಧಾನಕ್ಕೆ. ಅವರನ್ನು ನೋಡುವಾಗ ಎಷ್ಟೆಲ್ಲ ಕವಿತೆಯ ಸಾಲುಗಳು ಹಾದುಹೋದವು! ಆ ಪದಗಳೆಲ್ಲವೂ ಈ ಅಂಗಳದಲ್ಲಿಯೇ ಬೆಳೆದವು. ಆಡಿ, ಹರಡಿ, ಮಾಲೆಯಾಗಿ ಕವಿತೆಯಾದವು. ಪದಗಳ ಹಿಂದಿನ ಬದುಕಿನ ಹದ ಕಳೆದುಕೊಂಡ ವಿಷಾದದಲ್ಲಿ ಕಣವಿ ಇದ್ದರು. 

ಹೆಂಗಿದೀರಿ... ಪ್ರಶ್ನೆಗೆ ಎರಡೂ ಕೈ ಎತ್ತಿ, ‘ಅರಾಮದೇನಿ..’ ಎಂದು ಸುಮ್ಮನಾದರು. ಮಾತು ಆರಂಭವಾದದ್ದೇ ಶಾಂತಕ್ಕನ ನೆನಪಿನೊಂದಿಗೆ. ಕಣ್ಣೊಳಗೊಂದು ಸಣ್ಣ ಪಸೆ. ‘ಇಲ್ಲೀ ಕೂಡ್ತಿದ್ಲರಿ ಸದಾ.. ನಾನೂ ಇಲ್ಲೇ ಕೂಡ್ತಿದ್ದೆ. ಅವರಿಲ್ಲಂತ ಅನಿಸವಲ್ದು. 68 ವರ್ಷ ಕೂಡಿ ಬದುಕಿದ್ವಿ. ನನ್ನ ಬಿಟ್ಟು, ಅವರು; ಅವರನ್ನು ಬಿಟ್ಟು ನಾನು ಬದುಕಬಹುದು ಅನ್ನುವ ಕಲ್ಪನಾನೆ ಇರಲಿಲ್ಲ’ ಅಂಗೈ ನಡುಗುತ್ತಿದ್ವು. ಕಂಗಳೊಳಗೆ ಮತ್ತದೇ ಸಣ್ಣಪಸೆ.

ಒಳಿತೆಲ್ಲವೂ ಬೆಳಕಾಯಿತು ಬಾನ್ ಕರೆಯಿತು ಜೇನು

ಆನಂದದ ಕಡಲಾಳದಿ ನಾವಾದೆವೇ ಮೀನು

ಎವೆಯಿಕ್ಕದೆ ಮಿನುಗುತ್ತಿದೆ ಚಿಕ್ಕೆಯ ಹನಿ ದೀಪ

ತಮ್ಮಷ್ಟಕೆ ಧ್ಯಾನಿಸುತಿವೆ ಯಾವುದೋ ಸವಿನೆನಪ!

ಅವರ ಕವಿತೆಯ ಸಾಲುಗಳು ನೆನಪಾಗುವಂತೆ ಒಂದು ಸಣ್ಣ ಮೌನ ಮಡುಗಟ್ಟಿತು. ಎಲ್ಲ ಸವಿನೆನಪುಗಳ ಹೆಕ್ಕುತ್ತಿದ್ದರು ಅವರು. 

‘ಭಾಳ ಶಿಸ್ತು. ಅಂತಃಕರುಣೆಯ ನಿಧಿ. ನಮ್ಮ ಬಳಗದ ಎಲ್ಲ ಹೆಣ್ಣುಮಕ್ಕಳಿಗೂ ಬೇಕಾದ ಜೀವ ಅದು. ಅತಿಥಿಗಳು ಬಂದ್ರ ಸಡಗರ, ಸಂಭ್ರಮ ಪಡ್ತಿದ್ಲು. ನಾ ಯಾವಾಗಲೂ ಇಲ್ಲೇ ಕೂರ್ತಿದ್ದೆ. ಅವರು ಯಾವಾಗಲೂ ಈ ಕುರ್ಚಿ ಮೇಲೆ ಕೂರ್ತಿದ್ದರು. ಮೆಲು ಮಾತಿನವಳು. ಧ್ವನಿಯೊಳಗ ಮಾಧುರ್ಯ ತುಂಬಿರ್ತಿತ್ತು. ಸದಾ ಹೆಣೀತಿದ್ರು. ಇಲ್ಲಾ ಓದ್ತಿದ್ರು. ಓದುವುದು, ಹೆಣಿಯೂದು ಎರಡೂ ಇಲ್ಲಂದ್ರ ಬರೀತಿದ್ರು. ಸದಾ ಮನಸಿನಾಗ ಏನರೆ ಹೆಣೀತಿದ್ರು. ಕಸೂತಿ ಇಲ್ಲಾಂದ್ರ ಬೆಚ್ಚನೆಯ ಉಣ್ಣೆಯ ಬಟ್ಟೆ ಹೆಣಿಯೂದು, ಆಪ್ತರ ಮಕ್ಕಳಿಗೆ ಉಡುಗೊರೆಯಾಗಿ ಕೊಡೂದು ಅವರಿಷ್ಟದ ಕೆಲಸ.‘

ಹಿತವಾಗಿದೆ ಮೆಲ್ಲಲರುಲಿ ಮಿತವಾಗಿದೆ ಮೌನ/ ಜೊತೆಗೂಡುತ ಮಾತಾಡಿವೆ ಅರೆನಿದ್ದೆಯೊಳೇನ?

–‘ಉಷೆಯ ಗೆಳತಿ’ ಕವಿತೆಯ ಸಾಲುಗಳ ಸುಳಿ ನನ್ನ ಮುಂದೆ ಗಿರಕಿ ಹೊಡೆಯುತ್ತಿದ್ದವು.

ನಿಧಾನಕ್ಕೆ ಮೌನದ ಗೋಡೆ ಒಡೆಯುತ್ತಿತ್ತು. ‘ಮಕ್ಕಳಿಗೆ ಅಕ್ಷರ, ಅಂತಃಕರುಣೆ ಕಲಿಸಿದ್ರು. ನಮ್ಮ ಸುದೈವ.. ಮಕ್ಕಳು ನಮ್ಮನ್ನೂ ಮಕ್ಕಳ್ಹಂಗ ಕಾಳಜಿ ಮಾಡ್ತಾರ. ಬೆಳಗಾವಿಗೆ ಇದ್ವಿ.. ಮಗಳು, ಅಳಿಯ ಅತಿ ಪ್ರೀತಿಯಿಂದ ಕಾಳಜಿ ಮಾಡಿದ್ರು. ನ್ಯುಮೋನಿಯಾ ಆಗಲಿಕ್ರ ಬದುಕ್ತಿದ್ರು ಅವರು... ಪುಸ್ತಕವೊಂದು ಓದೂದು ಅರ್ಧ ಆಗೇದ. ಹಂಗೆಲ್ಲ ಅರ್ಧ ಕೆಲಸ ಉಳಿಸುತ್ತಲೇ ಇರಲಿಲ್ಲ.’

‘ಅವರಿಗೆ ನಮ್ಹಂಗ ಏಕಾಂತ ಬೇಕು, ಕುರ್ಚಿ, ಮೇಜು ಬೇಕು ಅಂತೇನೂ ಇರಲಿಲ್ಲ. ಅಡಗಿ ಮಾಡ್ಕೊಂತ ಬರೀತಿದ್ರು. ಅವರ ಸಾಹಿತ್ಯ ಚೊಲೊ ಇದ್ದಷ್ಟೇ, ಅಕ್ಷರ ಚಂದ ಇದ್ವು. ಒಂದು ಕಾಟಿಲ್ಲ, ಗೀಟಿಲ್ಲ. ಚಂದಗೆ ಕಥಿ ಬರದು ಓದಾಕ ಕೊಡೋರು. ಶೀರ್ಷಿಕೆ ಬರೋಬ್ಬರಿ ಐತೇನು ಅಂತ ಕೇಳೋರು. ಕೆಲವೊಮ್ಮೆ ಬದಲಿ ಮಾಡಾಕ ಹೇಳ್ತಿದ್ದೆ. ಅಗ್ದಿ ಸಂತೋಷದಿಂದ ಬದಲಿ ಮಾಡೋರು. ಭಾಳ ಸಂಕೋಚ ಸ್ವಭಾವದವರು. ಯಾವತ್ತೂ ಪುಸ್ತಕ ಬಿಡುಗಡೆಗೆ ಒಪ್ಪಲಿಲ್ಲ. ಅವರ ಯಾವ ಪುಸ್ತಕಗಳೂ ಬಿಡುಗಡೆಯಾಗಲಿಲ್ಲ. ಪ್ರಕಟವಾದವು ಅಷ್ಟೆ.’ 

‘ಅವರ ಸಾಹಿತ್ಯನೂ ಅಷ್ಟೆ.. ಜೀವನಪ್ರೀತಿಯನ್ನೇ ಹೇಳಿಕೊಡ್ತಿತ್ತು. ಈಗ ನಾಜೂಕಿನ ಓದಿನೊಳಗ ಸ್ತ್ರೀಪರ ಅಂದ್ರು. ಆದರ ಅವು ಜೀವಪರ ಅದಾವ. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿತಾವ. ಸರ್ವರ ಹಿತ ಎದರೊಳಗದ ಅನ್ನೂದು ಚರ್ಚಿಸ್ತಾವ. ಅವರಿಗೆ ಏಕಾಂತ ಬೇಕಾಗಿರಲಿಲ್ಲ. ಆದರೆ ಲೋಕಾಂತದೊಳಗ ಎಲ್ಲಾರ ಬಗ್ಗೆನೂ ಕಾಳಜಿ ಮಾಡ್ತಿದ್ರು.

ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು

ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು

ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ

ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ

–ಕವಿತೆಯ ಸಾಲುಗಳನ್ನು ಬದುಕಿದ ಬೆಳಗು ಆ ಮಾತುಗಳಲ್ಲಿ, ಆ ನೆನಪುಗಳಲ್ಲಿ.

‘ನಾ ಭೇಟಿಯಾದ ಮೇಲಲ್ಲ, ಅವರು ಮೊದಲೇ ಬರೀತಿದ್ರು. ಅಮಲ್ದಾರರ ಮಗಳು. ಆ ಕಾಲಕ್ಕೆ ಅವರ ಮನ್ಯಾಗ ಲೈಫ್‌, ನ್ಯಾಷನಲ್‌ ಜಿಯಾಗ್ರಫಿಕ್‌ ಪತ್ರಿಕೆಗಳೆಲ್ಲ ಬರ್ತಿದ್ವು. ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಗೋಕಾಕ್, ರಂ.ಶ್ರೀ.ಮುಗಳಿ, ಶಿ.ಶಿ.ಬಸವನಾಳ, ಹರ್ಡೇಕರ್ ಮಂಜಪ್ಪ, ಫ.ಗು. ಹಳಕಟ್ಟಿ, ಸಿಂಪಿ ಲಿಂಗಣ್ಣ, ಸ.ಸ. ಮಾಳವಾಡ ಅವರೆಲ್ಲ ಅವರ ಮನಿಗೆ ಬಂದುಹೋಗೋರು.’

ಅಷ್ಟು ಮಾತನಾಡುತ್ತಲೇ ಒಂದು ಪತ್ರಿಕೆ ತೆರೆದು ತೋರಿಸಿದರು ಕಣವಿ. ‘ನೋಡ್ರಿ.. ಇದು 1944ರಲ್ಲಿ ಪ್ರಕಟವಾದ ಕೈಬರಹದ ಮಾಸಿಕ, ಮನೆಬೆಳಕು ಅಂತ. ಇದರೊಳಗ ಅವರದ್ದೊಂದು ಕತಿ ಅದ. ‘ಮೋಹನನ ಕಾಲ್ಗುಣ’ ಅಂತ. ಅವಾಗ ಶಾಂತಾ ಗಿಡ್ನವರ್‌ ಅಂತಿತ್ತು ಅವರ ಹೆಸರು. ಸಾಹಿತ್ಯದ ಒಲವು ಮೊದಲಿನಿಂದಲೂ ಇತ್ತು. ಅಗ್ದಿ ಜೀವನಪ್ರೀತಿ ಅವರಿಗೆ.’ ‘ಅವರ ಜೀವನಪ್ರೀತಿ ಭಾಳಿತ್ತು. ಪ್ರೀತಿ ಹಂಚುವುದರೊಳಗ, ಬರಿಯೂದ್ರೊಳಗ, ಓದೂದ್ರೊಳಗ.. ಆಕಾಶವಾಣಿಗೆ ನಿರಂತರ ಹೋಗ್ತಿದ್ರು. ಎಳೆಯರ ಬಳಗ, ಗೃಹಲಕ್ಷ್ಮಿ ಮುಂತಾದೆಡೆ ಕಾರ್ಯಕ್ರಮ ನೀಡೋರು. ಅಡಗಿಯಂತೂ ಭಾಳ ರುಚಿ.’

ಸಣ್ಣದೊಂದು ಬ್ರೇಕು.

ಕಣವಿ ಸರ್‌ ಸವಿನೆನಪುಗಳ ಸುವಿಹಾರಿಯಂತಾಗಿದ್ದರು. ಮತ್ತೆ ಮಾತು ಮುಂದುವರಿಸಿದರು. ‘ಈ ಮನಿ ಪೂರಾ ಅಕಿದ ಜವಾಬ್ದಾರಿ ನೋಡ್ರಿ. ಹಿಂಗಿರಬೇಕು, ಹಂಗಿರಬೇಕು, ಹೆಂಗಿರಬೇಕು.. ಏನೇನು ನನಗ ಗೊತ್ತಿರಲಿಲ್ಲ. ಆದ್ರ ಒಂದೊಂದು ಪೈಸೆಯ ಲೆಕ್ಕಾನೂ ಬರದಿಡ್ತಿದ್ರು. 28,600 ರೂಪಾಯಿಯೊಳಗ ಈ ಮನಿ ಕಟ್ಟಿಸಿದ್ವಿ. ರೊಕ್ಕ, ಲೆಕ್ಕ, ಭೂಗೋಳ ಇವೆಲ್ಲ ಮಕ್ಕಳಿಗೆ ಅವರೇ ಹೇಳಿಕೊಡ್ತಿದ್ರು. ನನ್ನ ಪಿಂಚಣಿ ಎಷ್ಟು ಬರ್ತದ ಅನ್ನೂದು ನಂಗೊತ್ತಿಲ್ರಿ. ಎಲ್ಲ ಅವರದ್ದೇ ವ್ಯವಹಾರ. ನಾನಾಯ್ತು, ನನ್ನ ಕಚೇರಿ, ಪ್ರಸಾರಂಗ, ವಾಕಿಂಗು, ಮಳಿ, ಕವಿತೆ ಅಷ್ಟ.. ಉಳದದ್ದೆಲ್ಲ ಅವರದೇ ಜವಾಬ್ದಾರಿ. ಒಂದಿನ ವಸ್ತ್ರ, ಒಡವಿ ಕೇಳಲಿಲ್ಲ. ಅದು ಬೇಕು, ಇದು ಬೇಕು ಅನ್ನಲಿಲ್ಲ. ಸದಾ ಜೊತಿಗಿರೋರು.’ ಅಡಗಿ ಭಾಳ ಚೊಲೊ ಮಾಡೋರು. ಈಗಂತೂ ಹೋಳಗಿ ಶೀಕರಣಿ... ನನಗ ಅಗ್ದಿ ಪ್ರೀತಿಯ ಊಟ. ನಮ್ಮನ್ಯಾಗ ಸಂಭ್ರಮ ಇರ್ತಿತ್ತು. ಹೋಳಗಿ ಕಮರು, ಮನಿತುಂಬಾ ಇದ್ದಾಗಿನ ಬ್ಯಾಸಗಿ ಕತಿನೆ ಬ್ಯಾರೆ. ಹಪ್ಪಳಾ. ಶಂಡಗಿ, ಕುರುಡಗಿ, ಶಾವಗಿ, ಮಸಾಲಿಖಾರ ಎಲ್ಲ ಮಾಡೋರು. ಮನಿಗೆ ಬೇಕಾದಷ್ಟು ಅಷ್ಟೆ ಅಲ್ಲ, ಬಂದವರಿಗೆ ಕಟ್ಟಿಕೊಡಾಕು ಮಾಡ್ತಿದ್ರು. ಬ್ಯಾಸಗಿನೆ ಬ್ಯಾರೆ. 
ಇನ್ನ ಧಾರವಾಡದ ಮಳಿಗಾಲಂತೂ ಭಾಳ ಚಂದ. ‘ಒಂದು ಮುಂಜಾವಿನಲಿ ಸೋನೆಮಳೆ..’ ಪದಗಳು ಇಣುಕಿ ಹಾದು ಹೋದವು. ಕೊಡಿ ತೊಗೊಂಡು ವಾಕಿಂಗ್‌ ಹೋಗ್ತಿದ್ದೆ. ಒಂದೊಂದು ಕಾಲಕ್ಕೂ ಒಂದೊಂದು ಅಡಗಿ. ಯಾರರೆ ಬಂದ್ರ ಸಂಭ್ರಮ...

ಬೇಸಗೆ ಬಣಬಣ, ಚಳಿಗೋ ಒಣ ಒಣ
ಶ್ರಾವಣ ತಣ್ಣಗೆ ನಡುವೆ;
ಎಲ್ಲಿದೆ ಬೆಂಕಿ? ಎಲ್ಲಿದೆ ಬೆಳಕು?
ಬೀಸುವ ಗಾಳಿಗೆ ಬಿಡುವೆ?


ಇದೇ ಅವರ ಜಾಗ.. ಯಾವಾಗಲೂ ಇಲ್ಲೇ ಕೂರ್ತಿದ್ರು.. ನನ್ನ ಜೊತಿಗೆ.

‘ಪ್ರತಿವರ್ಷ ನನ್ನ ಹುಟ್ಟುಹಬ್ಬಕ್ಕ ಎಲ್ಲ ಬಂಧುಬಳಗದವರು ಬರೋರು. ನಾ ಒಂದು ಕವಿತಾ ಓದ್ತಿದ್ದೆ. ಹೊರಗ ಜಿಟಿಜಿಟಿ ಮಳಿ ಇರ್ತಿತ್ತು. ಚಂದನಸ್ತಿತ್ತು. ನಮ್ಮ ಅರವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಬಂದು ಸಂಭ್ರಮದಿಂದ ಆಚರಿಸಿದರು...’ ಮತ್ತದೇ ಬೇಸರ– ‘ನ್ಯುಮೋನಿಯಾ ಆಗಲಿಕ್ರ ಇರ್ತಿದ್ಲು...’

‘ಈ ವರ್ಷ ಮೊದಲಿನ್ಹಂಗ ಮಳಿನೂ ಇಲ್ಲ. ನಮ್ಮನಿಯವರು... ಇಲ್ಲಿದ್ರು. ಇಲ್ಲೇ ಇದ್ರು.. ಈಗ... ಎಲ್ಲಾ ಕಡೆ ಅದಾರ..ಇದ್ದಾಗ ಇರುವು ಇಲ್ಲಷ್ಟೆ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್‌ ಚೆಂಬೆಳಕಿನ್ಹಂಗ..’ ಇಷ್ಟು ಹೇಳಿದ ಕಣವಿ ಸುಮ್ಮನಾದರು.

ಅಲ್ಲಿ ತಿಳಿಬೆಳಗಿತ್ತು. ಮನದೊಳಗಿನ ಮೌನ, ಬೆಳಕಿನ ಕೋಲಿನಂತೆ ಮಾತಾಗಿದ್ದವು. 68 ವರ್ಷಗಳ ಸಾಂಗತ್ಯ, ಸ್ನೇಹದ ಸಾಹಚರ್ಯ, ಪರಸ್ಪರ ಗೌರವ, ಪ್ರೀತಿಯ ಆ ದಾಂಪತ್ಯ ನೋಡಿದಾಗ.. ಈ ಅಗಲುವಿಕೆ ತರವಲ್ಲ ಅಂತನಿಸತೊಡಗಿತ್ತು. ಅದೂ ಇದೂ ಅಂತ ಮಾತಿನಲ್ಲಿ ಎರಡೂವರೆ ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಮಾತಿನ ಮಧ್ಯೆ ಮಗ ಪ್ರಿಯದರ್ಶಿನಿಯೂ ಅಮ್ಮನನ್ನು ನೆನಪಿಸಿಕೊಂಡರು.

‘ಅಪ್ಪನಂಥ ಅಮ್ಮ, ಅಮ್ಮನಂಥ ಅಪ್ಪ. ನಮ್ಮನೆಯಲ್ಲಿ ಅಮ್ಮ ಶಿಸ್ತಿನ ಸಿಪಾಯಿ. ಅಪ್ಪ ವಾತ್ಸಲ್ಯಮಯಿ. ಬ್ಯಾಟು ಬೇಕೆಂದು ಅಮ್ಮನನ್ನು ಕೇಳಿದರೆ, ಪರೀಕ್ಷೆ ಮುಗಿಯಲಿ ಎನ್ನುತ್ತಿದ್ದರು. ಅಪ್ಪನಿಗೆ ಕೇಳಿದರೆ ಸಿಗ್ತಿತ್ತು. ಕ್ರಿಕೆಟ್‌ ಆಡಿ ಬರ್ತೀವಿ ಅಂದರೂ ಅಮ್ಮ ನಿರಾಕರಿಸುವುದಿತ್ತು. ಆದರೆ ಅಪ್ಪನ ಅನುಮತಿ ಪಡೆದರೆ ಮಾತ್ರ ಅವರ ಉತ್ತರ ಮುಗುಳ್ನಗೆಯಾಗಿರುತ್ತಿತ್ತು. ಚಂದದ ಬರಹ ಅಷ್ಟೇ ಅಲ್ಲ, ಶುದ್ಧಬರಹಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಿದ್ದರು..’

ಹೊರಟು ನಿಂತಾಗ ಕಣವಿಯವರು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ಬಾಗಿಲವರೆಗೂ ಬೀಳ್ಕೊಡಲು ಬಂದರು.

ಸಡಗರ, ಸಮಾಧಾನ, ವಿಷಾದ, ವಿದಾಯ ನೆನಪಿನಂಗಳದಿಂದ ಬದುಕಿನೆಲ್ಲ ಭಾವಗಳಲ್ಲೂ ಮಿಂದಾಗಿತ್ತು. ಆಚೆ ಬರುವಾಗ..
ಒಂದೊಂದು ಹೂವುಗಳ ಆಯುವುದು ಹೇಗೆ?

ಆ ಬಣ್ಣ, ಆ ನವುರು ಅದಕದರ ಸೋಗೆ.

ಸೃಷ್ಟಿಯಲಿ, ದೃಷ್ಟಿಯಲಿ ನಡೆದಿಹುದು ಪೂಜೆ

ಕಷ್ಟ-ಸುಖ-ಸಂಭ್ರಮದ ಸಂತೋಷದಾಚೆ.

ಅವರದೇ ಕವಿತೆಯ ಪದಗಳು ಮನದ ಭಿತ್ತಿಯೊಳು ಛಾಪೊತ್ತಿದ್ದವು.

ಶಾಂತಾದೇವಿ ಕಣವಿ

ಹುಟ್ಟಿದ್ದು ವಿಜಯಪುರದಲ್ಲಿ. ಬೆಳೆದಿದ್ದು, ಗದಗ, ಬೆಳಗಾವಿಗಳಲ್ಲಿ. ಮೂಲ ಬೆಳಗಾವಿ ಜಿಲ್ಲೆಯ ಯಮಕನಮರಡಿಯವರು. ತಾಯಿ ಭಾಗೀರಥಿದೇವಿ. ತಂದೆ ಸಿದ್ದಪ್ಪ, ಕಂದಾಯ ಇಲಾಖೆಯಲ್ಲಿ ಮಾಮಲೆದಾರರಾಗಿದ್ದರು. ಮುಂಬೈ ಕರ್ನಾಟಕದ ಅಸಿಸ್ಟೆಂಟ್ ಕಮೀಷನರಾಗಿ ನಿವೃತ್ತರು. ಅಪಾರವಾದ ಸಾಹಿತ್ಯದ ಒಲವು. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರ. ಸಾಹಿತ್ಯ, ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ. ಸಣ್ಣಕಥೆ, ರೇಡಿಯೊ ನಾಟಕ, ಲಲಿತಪ್ರಬಂಧ, ಮಕ್ಕಳ ಸಾಹಿತ್ಯದಲ್ಲಿ ಶಾಂತಾದೇವಿ ಅವರ ಸಾಹಿತ್ಯಕೃಷಿ ಇತ್ತು.

(ಚಿತ್ರಗಳು: ಬಿ.ಎಂ. ಕೇದಾರನಾಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು