ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪು | ಅಸಮಾನತೆ ಸಹಿಸದ ಅಣ್ಣ

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ಅಣ್ಣ(ಜೆ.ಆರ್.ಲಕ್ಷ್ಮಣರಾವ್) ಎಂದಾಕ್ಷಣ ಮೊತ್ತ ಮೊದಲಿಗೆ ಕಣ್ಣಿಗೆ ಕಾಣುವ ಚಿತ್ರವೆಂದರೆ, ವರಾಂಡದ ಬೆಳಕಿನಲ್ಲಿ ಕುಳಿತು ಸುತ್ತಮುತ್ತಲಿನ ಗದ್ದಲಗಳ ಪರಿವೆಯೇ ಇಲ್ಲದೆ ಮಗ್ನರಾಗಿ ಏನನ್ನೋ ಬರೆಯುತ್ತಿರುವುದು. ಅವರ ಅಸಂಖ್ಯಾತ ಸ್ನೇಹಿತರ ಪೈಕಿ ಯಾರೇ ಬರಲಿ, ಬರಹವನ್ನು ಪಕ್ಕಕ್ಕಿಟ್ಟು ಅವರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ, ಗಹನ ವಿಷಯಗಳನ್ನು ಚರ್ಚಿಸುತ್ತಿದ್ದುದು ಅಥವಾ ಲಘು ಹರಟೆ ಹೊಡೆಯುತ್ತ ನಗುತ್ತಿದ್ದುದು.

ನಾನು ಕಂಡಂತೆ ಅಣ್ಣ ಮೊದಲಿನಿಂದಲೂ ಬಹಳ ಶಿಸ್ತಿನ, ಅಚ್ಚುಕಟ್ಟಿನ, ಸುವ್ಯವಸ್ಥಿತ ಹಾಗೂ ಸ್ಪಷ್ಟ ಚಿಂತನೆಯುಳ್ಳ ವ್ಯಕ್ತಿ.

ಅಣ್ಣನಿಗೆ ಎಷ್ಟೇ ಕೆಲಸ ಇರುತ್ತಿದ್ದರೂ ನಮ್ಮೊಡನೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ಮನೆಯಲ್ಲಿ ಯಾರೊಡನೆಯೂ ಕಟ್ಟುನಿಟ್ಟಾಗಿದ್ದದ್ದೇ ಇಲ್ಲ. ಅವರನ್ನು ಕಂಡರೆ ತಂದೆಯೆಂಬ ಗೌರವ ಆದರಗಳಿತ್ತೇ ಹೊರತು ಭಯವಿರಲಿಲ್ಲ. ಸ್ನೇಹಿತರೊಡನೆ ಇದ್ದಂತೆ ಸಲಿಗೆ ಅವರೊಡನೆ ಇತ್ತು. ಅವರನ್ನು ಹಾಸ್ಯ ಮಾಡುತ್ತಿದ್ದೆವು, ರೇಗಿಸುತ್ತಿದ್ದೆವು. ಹಾಸ್ಯಪ್ರಿಯರಾದ ಅಣ್ಣ ಎಲ್ಲವನ್ನೂ ಸಂತೋಷದಿಂದಲೇ ಸ್ವೀಕರಿಸುತ್ತಿದ್ದರು. ಹೆಮ್ಮೆ ಪಡುತ್ತಿದ್ದರು.

ಪ್ರತಿದಿನ ರಾತ್ರಿ ಎಲ್ಲರೂ ಒಟ್ಟಿಗೇ ಊಟಕ್ಕೆ ಕುಳಿತಾಗ ಹಲವಾರು ವಿಷಯಗಳ ಪರಿಚಯವಾಗುತ್ತಿತ್ತು, ಚರ್ಚೆ ನಡೆಯುತ್ತಿತ್ತು. ನಮಗೆ ಅನಿಸಿದ್ದನ್ನು ಮುಕ್ತವಾಗಿ ಚರ್ಚಿಸುವ ಸ್ವಾತಂತ್ರ್ಯ ನಮಗಿತ್ತು. ಯಾವ ವಿಷಯ ಮಾತನಾಡಲೂ ಹಿಂಜರಿಕೆ ಇರಲಿಲ್ಲ.

ಮೂಢಾಚರಣೆ, ಕಂದಾಚಾರಗಳು ಮುಗ್ಧ ಜನರನ್ನು ಕಷ್ಟಕ್ಕೀಡುಮಾಡುತ್ತವೆಂದೂ ಇದನ್ನು ಹೋಗಲಾಡಿಸಬೇಕಾದರೆ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುವಂತೆ ಮಾಡುವುದು ಬಹಳ ಮುಖ್ಯ ಎಂದೂ ಅದಕ್ಕಾಗಿ ಬಹಳ ಶ್ರಮಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾಗಿ, ಆ ಸಂಸ್ಥೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದರು. ‘ಬಾಲ ವಿಜ್ಞಾನ’ ಮಾಸ ಪತ್ರಿಕೆ ಅವರ ಮಿದುಳಿನ ಕೂಸು. ಮೈಸೂರಿನ ಸಂಗೀತ ಸಂಸ್ಥೆ ‘ಗಾನಭಾರತೀ’ಯ ಸಂಸ್ಥಾಪಕರಲ್ಲೊಬ್ಬರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು.

ಮಾರ್ಕ್ಸ್‌ವಾದ ಹಾಗೂ ಎಡಪಂಥೀಯ ಕಲ್ಪನೆಗಳತ್ತ ಒಲವಿದ್ದ ಅಣ್ಣನಿಗೆ ಸಮಾಜದಲ್ಲಿನ ಯಾವುದೇ ರೀತಿಯ ಅಸಮಾನತೆ ಸರಿಕಾಣುತ್ತಿರಲಿಲ್ಲ. ಜಾತಿ-ಮತ ಭೇದ, ಆರ್ಥಿಕ ಅಸಮಾನತೆ, ಮೂಢನಂಬಿಕೆಗಳು, ಹಣದ ದುರಾಸೆ, ವರದಕ್ಷಿಣೆ ಎಲ್ಲವೂ ಸಾಮಾಜಿಕ ಪಿಡುಗುಗಳು ಎನ್ನುತ್ತಿದ್ದರು. ಸಮಾಜದಿಂದ ನಾವು ಲೆಕ್ಕವಿಲ್ಲದಷ್ಟನ್ನು ಪಡೆದಿದ್ದೇವೆ, ಇದಕ್ಕೆ ಪ್ರತಿಫಲವಾಗಿ ನಾವು ಸಮಾಜಕ್ಕೆ ಸ್ವಲ್ಪ ಮಟ್ಟಿಗಾದರೂ ಋಣ ತೀರಿಸಬೇಕಾದ್ದು ನಮ್ಮ ಮುಖ್ಯ ಕರ್ತವ್ಯ ಎಂಬುದು ಅವರ ನಿಲುವಾಗಿತ್ತು.

ಹೀಗಾಗಿ ಅಣ್ಣನಿಂದ ನಮಗೆ ದೊರೆತ ಅತ್ಯಮೂಲ್ಯ ಉಡುಗೊರೆ ಎಂದರೆ ಹಲವಾರು ಸಾಮಾಜಿಕ ಮೌಲ್ಯಗಳು.

ಪ್ರಗತಿಪರ ಚಿಂತನೆ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ, ಮಹಿಳಾಪರ ಚಿಂತನೆ, ದೂರ ದೃಷ್ಟಿ, ವ್ಯಾಪಕ ಓದು, ಸ್ಪಷ್ಟ ಚಿಂತನೆ, ವೈಚಾರಿಕತೆ, ವಿಶ್ಲೇಷಣಾ ಚಾತುರ್ಯ, ವಿವಿಧ ವಿಷಯಗಳಲ್ಲಿ ಆಸಕ್ತಿ, ಸಂಸ್ಥಾಪನಾ ಶಕ್ತಿ, ವೈಜ್ಞಾನಿಕ ದೃಷ್ಟಿಕೋನ ಇತ್ಯಾದಿಗಳು ಏಕೈಕ ವ್ಯಕ್ತಿಯಲ್ಲಿ ಇರಲು ಸಾಧ್ಯವೇ? ಇವೆಲ್ಲವೂ ಅಣ್ಣನಲ್ಲಿ ಕಂಡುಬಂದ ಗುಣಗಳೆಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆ ಎನಿಸುತ್ತದೆ. ಅಣ್ಣನಿಂದ ಕಲಿತದ್ದು, ಕಲಿಯ ಬೇಕಾದ್ದು, ಕಲಿಯಲು ಸಾಧ್ಯವೇ ಇಲ್ಲದ್ದು ಎಲ್ಲವೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT