ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ತಾ–ಪ್ಯಾಂಟ್‌ ಉದ್ದನೆಯ ಶೂ

Last Updated 7 ಡಿಸೆಂಬರ್ 2019, 2:04 IST
ಅಕ್ಷರ ಗಾತ್ರ

ಫ್ಯಾಷನ್ ಎಂಬುದು ಎಂದಿಗೂ ಸ್ಥಿರವಾಗಿರುವುದಿಲ್ಲ. ಋತುಮಾನಕ್ಕೆ ತಕ್ಕ ಹಾಗೆ ಫ್ಯಾಷನ್ ಬದಲಾಗುತ್ತದೆ. ದೀಪಾವಳಿ ಬಂದಾಗ ಸಾಂಪ್ರದಾಯಕ ಉಡುಪಿನತ್ತ ಜನರು ಆಕರ್ಷಿತರಾದರೆ, ಕ್ರಿಸ್‌ಮಸ್‌ ಬಂದಾಗ ಪಾರ್ಟಿ ಉಡುಪುಗಳತ್ತ ಮನಸ್ಸು ವಾಲುತ್ತದೆ. ಒಟ್ಟಾರೆ ಫ್ಯಾಷನ್ ಕ್ಷೇತ್ರವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂಬುದು ಫ್ಯಾಬ್ ಇಂಡಿಯಾದ ಅಧ್ಯಕ್ಷ (ರೀಟೆಲ್) ಅಜಯ್ ಕಪೂರ್‌ ಅಭಿಪ್ರಾಯ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಫ್ಯಾಬ್ ಇಂಡಿಯಾದ ಅನುಭವ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಾಗ ಅವರು ಫ್ಯಾಷನ್ ಲೋಕ ಹಾಗೂ ಇಂದಿನ ಟ್ರೆಂಡ್‌ಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಯುವತಿಯರ ಇಂದಿನ ಫ್ಯಾಷನ್ ಟ್ರೆಂಡ್‌

ಒಂದು ಕಾಲದಲ್ಲಿ ಮಹಿಳೆಯರು ಬಹಳ ಇಷ್ಟಪಟ್ಟು ಧರಿಸುತ್ತಿದ್ದ ಸಲ್ವಾರ್ ಕಮೀಜ್ ಈಗ ಟ್ರೆಂಡ್‌ನಲ್ಲಿಲ್ಲ. ಇಂದಿನ ಮಿಲೇನಿಯಲ್ ವರ್ಗದ ಹೆಣ್ಣುಮಕ್ಕಳು ಕಚೇರಿಗೆ ತೆರಳುವಾಗ ಕುರ್ತಾವನ್ನು ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಇದರೊಂದಿಗೆ ಸಿಗರೇಟ್‌ ಪ್ಯಾಂಟ್, ಸ್ಟ್ರೆಚ್ಡ್ ಪ್ಯಾಂಟ್‌ ಹಾಗೂ ಪಲಾಜೋ ಪ್ಯಾಂಟ್‌ಗಳು ಅವರ ಆಯ್ಕೆ. ಕುರ್ತಾ ಜೊತೆ ದುಪಟ್ಟಾ ಧರಿಸುವುದು ಕೊಂಚ ಹಳೇ ಫ್ಯಾಷನ್. ಆದರೆ ಈಗಿನ ಯುವತಿಯರು ಕುರ್ತಾದ ಜೊತೆ ಸ್ಟೋಲ್ ಧರಿಸುತ್ತಾರೆ. ಜೊತೆಗೆ ಮಿಕ್ಸ್ ಅಂಡ್ ಮ್ಯಾಚ್ ಕೂಡ ಇಂದಿನ ಹೆಣ್ಣುಮಕ್ಕಳ ಫ್ಯಾಷನ್ ಟ್ರೆಂಡ್‌.

ಚಳಿಗಾಲಕ್ಕೆ ಹೊಂದುವ ಬಟ್ಟೆಗಳು...

ಚಳಿಗಾಲ ಎಂಬುದು ಋತುಮಾನಗಳಲ್ಲೇ ಒಂದು ಸುಂದರ ಕಾಲ. ಇದು ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವೆ ಭಿನ್ನವಾಗಿರುತ್ತದೆ. ಆ ಕಾರಣಕ್ಕೆ ಫ್ಯಾಷನ್‌ಪ್ರಿಯರು ತಾವಿರುವ ಜಾಗಕ್ಕೆ ಹೊಂದುವಂತಹ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚಳಿಗಾಲಕ್ಕೆ ಜಾಕೆಟ್‌ಗಳು ಹೆಚ್ಚು ಸೂಕ್ತ. ಇವು ಎಲ್ಲಾ ರೀತಿಯ ಉಡುಪುಗಳ ಮೇಲೂ ಹೊಂದಿಕೊಳ್ಳುತ್ತವೆ. ಲಾಂಗ್ ಶರ್ಟ್, ಉದ್ದನೆಯ ಕುರ್ತಾ ರೂಪದ ಉಣ್ಣೆಯ ಜಾಕೆಟ್‌ಗಳು ಇಂದಿನ ಟ್ರೆಂಡ್. ಇದರೊಂದಿಗೆ ಕಾಶ್ಮೀರಿ, ಉಣ್ಣೆ ಹಾಗೂ ಹತ್ತಿಯ ಶಾಲ್‌ಗಳು ಹೊಂದುತ್ತವೆ. ಸೆಮಿ ಫಾರ್ಮಲ್ ಬಟ್ಟೆಯ ಜೊತೆಗೂ ಇವನ್ನು ಧರಿಸಬಹುದು. ಇಂದಿನ ಮಿಲೇನಿಯಲ್ ಮಂದಿ ಜಿಪ್ಡ್ ಜಾಕೆಟ್ (ಮುಂದೆ ಜಿಪ್‌ ಇರುವ ಜಾಕೆಟ್‌) ಅನ್ನು ಹೆಚ್ಚು ಇಷ್ಟಪಡುತ್ತಾರೆ.

ಮಿಲೇನಿಯಲ್ ಯುವತಿಯರ ಒಲವು

ಎಲ್ಲಾ ಫ್ಯಾಷನ್ ಬ್ರಾಂಡ್‌ಗಳು ಮಿಲೇನಿಯಲ್ ತಲೆಮಾರಿನವರನ್ನು ಗಮನದಲ್ಲಿಟ್ಟುಕೊಂಡು ಉಡುಪುಗಳನ್ನು ತಯಾರಿಸುತ್ತವೆ. ಹೊಸತನಕ್ಕೆ ತೆರೆದುಕೊಳ್ಳುವ ಮಿಲೇನಿಯಲ್ ಮಂದಿ ಫ್ಯೂಷನ್ ಉಡುಪುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಫ್ಯಾಬ್ ಇಂಡಿಯಾದಲ್ಲಿ ಭಾರತದ ಸಾಂಪ್ರದಾಯಕ ಉಡುಪಿಗೆ ಫ್ಯೂಷನ್ ಸ್ವರ್ಶ ನೀಡುವ ಮೂಲಕ ಹೊಸತನದ ನೋಟ ನೀಡಲಾಗುತ್ತಿದೆ. ಇಂದಿನ ಟ್ರೆಂಡ್‌ಗೆ ತಕ್ಕ ಹಾಗೆ ಸ್ಟೈಲಿಶ್ ಉಡುಪುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಉದ್ಯೋಗಸ್ಥೆಯರ ನೆಚ್ಚಿನ ಉಡುಪುಗಳು

ಉದ್ಯೋಗಕ್ಕೆ ತೆರಳುವ ಹೆಣ್ಣುಮಕ್ಕಳು ಜೀನ್ಸ್ ಮೇಲೆ ಹೆಚ್ಚು ಒಲವು ಹೊಂದಿರುತ್ತಾರೆ. ಜೀನ್ಸ್ ಮೇಲೆ ವಿಭಿನ್ನ ವಿನ್ಯಾಸದ ಟಾಪ್‌ ಧರಿಸುವ ಮೂಲಕ ಸ್ಟೈಲಿಶ್ ಆಗಿ ಕಾಣ ಬಯಸುತ್ತಾರೆ. ಆದರೆ ಇನ್ನೊಂದು ವರ್ಗ ಲಾಂಗ್ ಸ್ಟ್ರೇಟ್ ಕುರ್ತಾಗಳನ್ನು ಧರಿಸಲು ಇಷ್ಟ ಪಡುತ್ತದೆ. ಇದು ಧರಿಸಲು ಸುಲಭ ಜೊತೆಗೆ ಲಾವಣ್ಯಮಯ ಲುಕ್ ಕೂಡ ಸಿಗುತ್ತದೆ. ಇದರೊಂದಿಗೆ ಮ್ಯಾಚಿಂಗ್ ಸಿಲ್ವರ್ ಆಭರಣಗಳನ್ನು ಧರಿಸಿದರೆ ನೋಟವೇ ಬದಲಾಗುತ್ತದೆ. ಸೈಡ್ ಕಟ್ ಇರುವ ಉದ್ದನೆಯ ತೋಳಿನ ಹತ್ತಿಯ ಕುರ್ತಾಗಳು ಕೂಡ ಇಂದಿನ ಟ್ರೆಂಡ್‌.ಪ್ಯಾಂಟ್‌ಗಳ ಮೇಲೆ ಶಾರ್ಟ್‌ ಟಾಪ್‌(ಟ್ಯೂನಿಕ್‌) ಗಳು ಕಚೇರಿಗೆ ಸೂಕ್ತ ಎನ್ನಿಸುತ್ತವೆ. ಜೊತೆಗೆ ಹತ್ತಿ ಬಟ್ಟೆಗಳು ಚಳಿಗಾಲ ಹಾಗೂ ಬೇಸಿಗೆ ಈ ಎರಡೂ ಕಾಲಕ್ಕೆ ಸೂಕ್ತ ಎನ್ನಿಸುತ್ತವೆ.

ಮ್ಯಾಚಿಂಗ್ ಬ್ಯಾಗ್, ಶೂ

ಇಂದಿನ ತಲೆಮಾರಿನವರು ಉಡುಪುಗಳಿಗೆ ಪ್ರಾಮುಖ್ಯ ನೀಡಿದಷ್ಟೇ ಚಪ್ಪಲಿ, ಬ್ಯಾಗ್‌ಗಳಿಗೂ ಮಹತ್ವ ನೀಡುತ್ತಾರೆ. ಕುರ್ತಾ ಟಾಪ್ ಧರಿಸಿದರೆ ಅದಕ್ಕೆ ಹೊಂದುವಂತಹ ಚಪ್ಪಟೆ ಚಪ್ಪಲಿ ಧರಿಸುತ್ತಾರೆ. ಜೊತೆಗೆ ಸ್ಲಿಂಗ್ ಬ್ಯಾಗ್‌ಗಳು ಇದಕ್ಕೆ ಹೆಚ್ಚು ಹೊಂದುತ್ತವೆ. ಜೀನ್ಸ್‌ನೊಂದಿಗೆ ಉದ್ದನೆಯ ಶೂಗಳು ಚೆನ್ನಾಗಿ ಕಾಣುತ್ತವೆ. ಅದರಲ್ಲೂ ಈಗಿನ ಟ್ರೆಂಡ್ ಲೇಸ್‌ ಇಲ್ಲದ ಪೂರ್ತಿ ಪಾದಗಳನ್ನು ಮುಚ್ಚುವ ಫ್ಯಾನ್ಸಿ ಶೂಗಳು. ಇವು ಕಾಲಿನ ಅಂದವನ್ನು ಹೆಚ್ಚಿಸುವ ಜೊತೆಗೆ ಟ್ರೆಂಡಿ ನೋಟ ನೀಡುತ್ತವೆ.

ಹಬ್ಬ, ಮದುವೆಗೆ ರಜ್‌ವಾಡ

ಹಬ್ಬ ಹಾಗೂ ಮದುವೆಯ ಸಂಭ್ರಮಕ್ಕಾಗಿ ಕಳೆದ ದೀಪಾವಳಿ ಸಮಯದಲ್ಲಿ ಫ್ಯಾಬ್ ಇಂಡಿಯಾದ ಕಡೆಯಿಂದ ರಜ್‌ವಾಡ ಉಡುಪುಗಳ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಇದರಲ್ಲಿ ಕೆಂಪು ಹಾಗೂ ಕಪ್ಪು ಬಣ್ಣದ ಉಡುಪುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.

ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಚಿಕನ್‌ ಕಾರಿ ಸಂಗ್ರಹ’ ಮಾರುಕಟ್ಟೆಗೆ ಬರಲಿದೆ. ಚಿಕನ್ ಕಾರಿ ಎಂದರೆ ಲಕ್ನೋ ಮೂಲದ ಒಂದು ಕಲಾಪ್ರಕಾರ. ಇದನ್ನು ಕುರ್ತಾ, ಸೀರೆಗಳಂತಹ ಉಡುಪುಗಳ ಮೇಲೆ ಚಿತ್ರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT