ಶುಕ್ರವಾರ, ಮೇ 29, 2020
27 °C

ನಾಳೆ ತಾಯಂದಿರ ದಿನ | ಅಮ್ಮನೆಂದರೆ ಬರಿ ಮಾತಲ್ಲ...

ಕೆ.ವಿ. ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಅಮ್ಮನ ಇನ್ನೊಂದು ಹೆಸರೇ ಧೃತಿ. ಕೊರೊನಾ ಸೋಂಕು ತಂದಿರುವ ಸಂಕಟಕ್ಕೆ ಧೃತಿಗೆಡದೆ, ತಮ್ಮ ವೈಯಕ್ತಿಕ, ಕೌಟುಂಬಿಕ ಜೀವನವನ್ನೂ ಬದಿಗಿಟ್ಟು, ಸೇವೆಗೆ ನಿಂತಿರುವ ಎಲ್ಲಾ ಅಮ್ಮಂದಿರನ್ನು (ನಾಳೆ ಅಮ್ಮಂದಿರ ದಿನ) ನೆನೆಯುವ ಸಮಯವಿದು!

–––

ಆಕೆ ಬೆಳಗಾವಿ ಬಿಮ್ಸ್‌ ಆಸ್ಪತ್ರೆಯ ನರ್ಸ್‌ ಸುನಂದಾ ಕೋರೆಪುರ್‌. ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಆಕೆ ನಂತರ ಕ್ವಾರೆಂಟೈನ್‌ಗೂ ಒಳಗಾದರು. ಮೂರು ವರ್ಷಗಳ ಕಂದಮ್ಮನನ್ನು ಪತಿಯ ಬಳಿ ಬಿಟ್ಟು ಸೇವಾನಿರತರಾಗಿದ್ದ ಸುನಂದಾ ಮಗಳ ಮುಖ ಮತ್ತೆ ನೋಡಿದ್ದು ಎಷ್ಟೋ ದಿನಗಳ ನಂತರ. ಕುಟುಂಬ ಮತ್ತು ಕರ್ತವ್ಯದ ನಡುವೆ ಆಕೆ ಆಯ್ದುಕೊಂಡಿದ್ದು ಕರ್ತವ್ಯವನ್ನು.

ಇದು ಒಬ್ಬಳು ತಾಯಿಯ ಕರ್ತವ್ಯನಿಷ್ಠೆಯ ಕಥೆಯಲ್ಲ, ಎಷ್ಟೋ ಮಂದಿ ತಾಯಂದಿರು ಈ ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ದುಡಿಯುತ್ತಿದ್ದಾರೆ. ನರ್ಸ್‌, ವೈದ್ಯೆ, ಆಶಾ ಕಾರ್ಯಕರ್ತೆ, ಸಫಾಯಿ ಕರ್ಮಚಾರಿ, ಪೊಲೀಸ್‌..  ಪುಟ್ಟ ಮಕ್ಕಳನ್ನು ಕುಟುಂಬದವರ ಕೈಗೊಪ್ಪಿಸಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ತಾವೂ ಸೋಂಕಿಗೊಳಗಾಗಿ ಪ್ರಾಣ ತೆತ್ತ ಹಲವು ಪ್ರಕರಣಗಳು ನಮ್ಮ ಮುಂದಿವೆ.

ಮಾತೆಯರ ನಿಸ್ವಾರ್ಥ ಸೇವೆ

ನಮ್ಮ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದರೆ ತಿಳಿದೀತು. ದೈನಂದಿನ ಕಸ ಅಂದಿಗಂದಿಗೇ ವಿಲೇವಾರಿಯಾಗುತ್ತಿದೆ. ಮುಖಗವಸು, ಕೈಗವಸು ಧರಿಸಿ ಕಾಯಕದಲ್ಲಿ ದೇವರನ್ನು ಕಾಣುವ ಮಹಿಳಾ ಪೌರಕಾರ್ಮಿಕರನ್ನು ನೋಡುವಾಗ ಹೆಮ್ಮೆ ಎನಿಸದಿರದು. ಅಂತೆಯೇ ಹಗಲಿರುಳು ರೋಗಿಗಳನ್ನು ಗುಣಮುಖರನ್ನಾಗಿಸುವ ಧ್ಯೇಯದಿಂದ ದುಡಿಯುತ್ತಿರುವ ವೈದ್ಯೆಯರು ಮತ್ತು ನರ್ಸ್‌, ಲಾಕ್‌ಡೌನ್‌ ಯಶಸ್ವಿಗೆ ಶ್ರಮಿಸುತ್ತಿರುವ ಮಹಿಳಾ ಪೊಲೀಸರೂ ಅಮ್ಮಂದಿರೇ! ‘ಸರ್ವೇ ಜನಾಃ ಸುಖಿನೋ ಭವಂತು, ಸರ್ವೇ ಭವಂತು ಸುಖಿನಃ’ ಎಂದು ಆಶಿಸುವ ತಾಯಂದಿರೇ!

ತರಕಾರಿ ಮಾರಿ ಹೊಟ್ಟೆ ಹೊರೆಯುವ ಗೌರಮ್ಮನ ವಿಷಯ ಕೇಳಿದರೆ ಯಾರಿಗಾದರೂ ದುಡಿದು ಬದುಕುವ ಕೆಚ್ಚು ಹೆಚ್ಚುತ್ತದೆ. ಸಾರಿಗೆ ಸಂಚಾರ ಇಲ್ಲದ ಈ ಲಾಕ್‌ಡೌನ್‌ ಸಮಯದಲ್ಲಿ ನಾಲ್ಕಾರು ಕಿ.ಮೀ. ನಡೆದು ಒಂದಿಷ್ಟು ತರಕಾರಿ, ಸೊಪ್ಪು ಖರೀದಿಸಿ ಮನೆಯಿಂದ ಮನೆಗೆ, ಓಣಿಯಿಂದ ಓಣಿಗೆ ಸಾಗುತ್ತ ಮಾರಾಟ ಮಾಡಿ ನಾಲ್ಕು ಕಾಸು ಸಂಪಾದಿಸುವ ಹೋರಾಟದ ಬದುಕು ಆಕೆಯದು. ಮನೆಯಲ್ಲಿ ಕಾಯುತ್ತಿರುವ ಎರಡು ಮಕ್ಕಳ ತುತ್ತಿನ ಚೀಲ ತುಂಬಿಸುವ ಸವಾಲನ್ನು ನಗುನಗುತ್ತಲೇ ಸ್ವೀಕರಿಸಿ ಗೆದ್ದಳು! ಇನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಮೂರು ಮಕ್ಕಳ ತಾಯಿ ಸಾರ್ವಜನಿಕ ಸಾರಿಗೆ ಇಲ್ಲದಿದ್ದಾಗಲೂ, 10– 12 ಕಿ.ಮೀ. ದೂರವನ್ನು ನಡೆದು ಸೇವೆ ಸಲ್ಲಿಸಿದ್ದು ಸ್ವಯಂ ಪ್ರೇರಣೆಯಿಂದ. 

ದ್ವಿಪಾತ್ರ

ಇಂತಹ ನಿಸ್ವಾರ್ಥ ಸೇವೆಯನ್ನು ಸಾವಿರಾರು ಪುರುಷರೂ ಸಲ್ಲಿಸುತ್ತಿದ್ದಾರೆ. ನಿಜ. ಆದರೆ ಮಹಿಳೆಗೆ ಮನೆಯಲ್ಲೇ ಇರುವ ಪುಟ್ಟ ಮಕ್ಕಳನ್ನು ನೋಡಿಕೊಂಡು, ಅವರ ಸುರಕ್ಷತೆಗೆ ಭಂಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಸಾರ್ವಜನಿಕ ಸೇವೆಯನ್ನೂ ನಿರ್ವಹಿಸುವ ದ್ವಿಪಾತ್ರ. ಎರಡೂ ಕರ್ತವ್ಯವೇ. ಯಾವುದರಲ್ಲಿ ಚ್ಯುತಿ ಬಂದರೂ ಕಷ್ಟವೇ.

ಸಾಮಾನ್ಯ ಸ್ಥಿತಿಯಿಂದ ಇದ್ದಕ್ಕಿದ್ದಂತೆ ಅಸಾಮಾನ್ಯ, ಅನಿರೀಕ್ಷಿತ ಕಷ್ಟ ಕೋಟಲೆಗಳು ಎದುರಾದಾಗ ಅವುಗಳನ್ನೂ ಈ ಅಮ್ಮನೇ ನಿಭಾಯಿಸಿ ಜೀವನವೆಂಬ ದೋಣಿಯನ್ನು ನಿರಾತಂಕವಾಗಿ ನಡೆಸುತ್ತಿದ್ದಾಳೆ. ಗೃಹಬಂಧನ ಅನಿವಾರ್ಯವಾದಾಗ ಅದನ್ನೇ ಸವಾಲಾಗಿ ಸ್ವೀಕರಿಸಿ ಕೆಲವು ಲಾಭದಾಯಕ ರಾಜಿ ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಲೇ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ ಆಧುನಿಕ ಅಮ್ಮ. ಆಕೆಯ ಹಾದಿಯನ್ನು ಗಮನಿಸುವಾಗ ಕಾಣಸಿಗುವ ಅನುಕರಣೀಯ ಹೆಜ್ಜೆಗಳು ಹಲವಾರು... 

ಛಲದ ಬದುಕು

ಸಮಾಜದ ಕಟ್ಟಕಡೆಯಲ್ಲಿರುವ ಅಮ್ಮಂದಿರ ಛಲದ ಬದುಕು ಒಂದು ಕಡೆಯಾದರೆ, ಉತ್ತಮ ಉದ್ಯೋಗದಲ್ಲಿರುವವರ ಜೀವನ ಕೂಡ ಈ ಕೊರೊನಾ ಸೋಂಕಿನ ಸಂದರ್ಭದಲ್ಲಿ ಹೋರಾಟಮಯವೇ. ಇದಕ್ಕೆ ಉದಾಹರಣೆ ಆಂಧ್ರಪ್ರದೇಶದ ವಿಶಾಖಪಟ್ಟಣ ನಗರಪಾಲಿಕೆ ಆಯುಕ್ತೆ  ಸೃಜನಾ ಗುಮ್ಮಳ್ಳ. ಹೆರಿಗೆ ರಜೆಯನ್ನು 22 ದಿನಗಳಿಗೇ ಮೊಟಕುಗೊಳಿಸಿ ಸಂಕಟದ ಸಂದರ್ಭದಲ್ಲಿ ಕಚೇರಿಗೆ ಬರುತ್ತಿರುವ ಈ ಐಎಎಸ್‌ ಅಧಿಕಾರಿ ಇತರರಿಗೆ ಮಾದರಿ.

ಸದ್ಯಕ್ಕಂತೂ ಮನೆಯಿಂದಲೇ ಕಚೇರಿ ಕೆಲಸವನ್ನು ಮಾಡುತ್ತಿರುವ ಸಾವಿರಾರು ಅಮ್ಮಂದಿರು ಒತ್ತಡದ ಮಧ್ಯೆಯೂ ಮನೆಯ, ಮಕ್ಕಳ ಕೆಲಸವನ್ನು ತೂಗಿಸಿಕೊಂಡು ಹೋಗುತ್ತಿದ್ದಾರೆ. ನಿಗದಿತ ಸಮಯದೊಳಗೆ ಕಚೇರಿ ಕೆಲಸ ಮುಗಿಸಬೇಕು, ಮಕ್ಕಳ ಓದಿಗೂ ಗಮನ ನೀಡಬೇಕು, ಅವರ ಮನರಂಜನೆ, ಆರ್ಟ್‌– ಕ್ರಾಫ್ಟ್‌ ಎಂದು ತೊಡಗಿಸಿಕೊಳ್ಳಬೇಕು. ಬಹು ವಿಧದ ಕಾರ್ಯ ನಿರ್ವಹಿಸುವಾಗ ಇದು ಸುಲಭದ ಮಾತಲ್ಲ.

ಇವು ಕೆಲವು ಉದಾಹರಣೆಗಳಷ್ಟೆ. ದೈನಂದಿನ ಕಾಯಕಗಳಿಗೆ ತೊಡಕಾಗದಂತೆ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಾಗಿ ದುಡಿಯುತ್ತಿರುವ ಅಮ್ಮಂದಿರು, ಮಾಡುತ್ತಿದ್ದ ಕೆಲಸಕ್ಕೆ ಕತ್ತರಿ ಬಿದ್ದಾಗ ಪರ್ಯಾಯ ಮಾರ್ಗಗಳತ್ತ ಕಣ್ಣು ಹಾಯಿಸಿ, ದುಡಿದು ಗಳಿಸಿ ಕುಟುಂಬ ಪೋಷಿಸುತ್ತಿರುವ ತಾಯಂದಿರು ಎಷ್ಟೋ ಮಂದಿ. ಅಂಥವರಿಗೆ ಅನುದಿನವೂ ‘ಅಮ್ಮಂದಿರ ದಿನ’ವೇ!

ಈ ಲಾಕ್‌ಡೌನ್‌ ಸಂದರ್ಭದಲ್ಲಿ ತಾಯಂದಿರು ಹಲವು ಪಾತ್ರಗಳನ್ನು ನಿರ್ವಹಿಸಬೇಕಾಗಿದೆ.

ಹೋಂಸ್ಕೂಲ್‌ ಅಮ್ಮ: ಶಾಲೆಗೆ ಹೋಗುವಂತಹ ಮಕ್ಕಳಿರುವ ಅಮ್ಮಂದಿರು ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳುತ್ತಿದ್ದಾರೆ. ಶಾಲೆಯ ಪಠ್ಯವನ್ನು ಇಟ್ಟುಕೊಂಡು ಈ ಸುದೀರ್ಘ ರಜೆಯಲ್ಲಿ ಅವರು ನಿರಂತರ ಕಲಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ತರಗತಿಗಳನ್ನು ಕೂಡ ಮಕ್ಕಳ ಜೊತೆ ಕೂತು ವೀಕ್ಷಿಸಿ ಅವರಿಗೆ ಮಾರ್ಗದರ್ಶನ ನೀಡುವಂತಹ ಕೆಲಸವನ್ನೂ ಮಾಡುತ್ತಿದ್ದಾರೆ.

ಕಲೆ, ಕೌಶಲ ಕಲಿಸುವ ಅಮ್ಮ: ಮಕ್ಕಳದ್ದು ಮೊದಲೇ ಚಂಚಲ ಮನಸ್ಸು. ಅವರನ್ನು ಇಡೀ ದಿನ ಚಟುವಟಿಕೆಯಲ್ಲಿ ಇರುವಂತೆ ಮಾಡಲು ಕಲೆ ಹಾಗೂ ವಿವಿಧ ಕೌಶಲಗಳನ್ನು ಮಕ್ಕಳಿಗೆ ಕಲಿಸುತ್ತಿರುವ ಸಾಕಷ್ಟು ಅಮ್ಮಂದಿರಿದ್ದಾರೆ. ಯುಟ್ಯೂಬ್‌ನಲ್ಲಿ ನೋಡಿಕೊಂಡು ಸ್ವತಃ ತಾವೂ ಕಲಿಯುತ್ತಿದ್ದಾರೆ.

ಬಾಣಸಿಗ ಅಮ್ಮ: ಮಕ್ಕಳಿಗೆ ಊಟ, ವೈವಿಧ್ಯಮಯ ತಿನಿಸು ಮಾಡಿಕೊಡಲು ತಾಯಂದಿರು ಹೊಸ ಹೊಸ ಬಗೆಯ ನಳಪಾಕದಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ತಾವು ಕಲಿತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಖುಷಿಪಡುತ್ತಿರುವ ಬಹಳಷ್ಟು ಅಮ್ಮಂದಿರು ಮಕ್ಕಳಿಂದಲೂ ಅಡುಗೆ ಕೆಲಸದಲ್ಲಿ ನೆರವು ಪಡೆಯುತ್ತಿದ್ದಾರೆ.

ವರ್ಕ್‌ ಫ್ರಂ ಹೋಂ ಅಮ್ಮ: ಮನೆಯಿಂದಲೇ ಕಚೇರಿ ಕೆಲಸ ಮಾಡುವ ತಾಯಂದಿರು ಮನೆಗೆಲಸ, ಮಕ್ಕಳನ್ನು ನೋಡಿಕೊಂಡು ಬಹುಪಾತ್ರ ನಿರ್ವಹಿಸುತ್ತಿದ್ದಾರೆ.

ಕೆಲಸಕ್ಕೆ ಹೋಗುವ ಅಮ್ಮಂದಿರು: ವೈದ್ಯರು, ನರ್ಸ್‌, ಬ್ಯಾಂಕರ್‌, ಸಫಾಯಿ ಕರ್ಮಚಾರಿಗಳು, ಸ್ವಯಂ ಸೇವಕರು ಈಗಲೂ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು