ಸೋಮವಾರ, ಜುಲೈ 26, 2021
23 °C

ನೆಲ್ಸನ್‌ ಮಂಡೇಲಾ ಸ್ಕ್ವೇರ್‌ನಲ್ಲಿ...

ಸಲೀಂ ನದಾಫ್ Updated:

ಅಕ್ಷರ ಗಾತ್ರ : | |

ಜೋಹನ್ಸ್‌ಬರ್ಗ್‌ನಲ್ಲಿ ತುಂಬಾ ಶೆಕೆ ಇರಬಹುದು ಎಂದುಕೊಂಡಿದ್ದ ನಾನು ವಿಮಾನದಿಂದ ಇಳಿದಾಗ ಚಳಿಗೆ ನಡುಗಲಾರಂಭಿಸಿದೆ. ಸುಮಾರು ಹತ್ತು ಡಿಗ್ರಿ ತಾಪಮಾನವಿರಬಹುದು. ಕಳ್ಳಕಾಕರು, ರಸ್ತೆ ಡಕಾಯಿತರು ಪಿಸ್ತೂಲು, ಚಾಕುಗಳಿಂದ ಬೆದರಿಸಿ ಲೂಟಿ ಮಾಡುತ್ತಾರೆಂದು ಕೇಳಿದ್ದೆ. ಒಬ್ಬಂಟಿ ಪ್ರವಾಸಿಗನನ್ನು ಕೆಲವು ಸಾರಿ ಬಂದೂಕುಧಾರಿ ಲೂಟಿಕೋರರು ಸಾಯಿಸಿಬಿಡುತ್ತಾರೆ ಎಂಬ ಭಯದಿಂದ ನನ್ನನ್ನು ಹೋಟೆಲ್‌ಗೆ ಒಯ್ಯಲು ಬಂದಿದ್ದ ಟ್ಯಾಕ್ಸಿ ಚಾಲಕ ಇಮ್ರಾನ್‌ಗೆ ಕೇಳಿದಾಗ, ‘ನಿಮ್ಮ ಹೋಟೆಲ್ ತುಂಬ ಪ್ರತಿಷ್ಠಿತ ಸ್ಥಳದಲ್ಲಿದೆ. ಅಲ್ಲಿ ದಿನದ 24 ಗಂಟೆಯೂ ಪೊಲೀಸ್‌ ಹಾಗೂ ಸೆಕ್ಯುರಿಟಿ ಸಿಬ್ಬಂದಿ ಕಾವಲು ಕಾಯುತ್ತಿರುತ್ತಾರೆ. ಯಾವ ಭಯವಿಲ್ಲದೆ ಸುತ್ತಾಡಿ’ ಎಂದ. ಆಗ ಕೊಂಚ ನಿರುಮ್ಮಳನಾದೆ.

ಇಮ್ರಾನ್‌ನ ಮುತ್ತಾತ ದಕ್ಷಿಣ ಆಫ್ರಿಕಕ್ಕೆ ವಲಸೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಇಮ್ರಾನ್ ಮೂರನೆ ತಲೆಮಾರಿನ ದಕ್ಷಿಣ ಆಫ್ರಿಕನ್. ಹಿಂದಿ ಮಾತನಾಡಲು  ಬರದಿದ್ದರೂ ವಾಹನದಲ್ಲಿ ಬಾಲಿವುಡ್‌ ಸಿನಿಮಾಗಳ ಹಾಡುಗಳನ್ನು ಹಾಕಿದ್ದ. ಸ್ಯಾಂಡ್ಟನ್ ಸ್ಕ್ವೇರ್‌ನಲ್ಲಿ ಇಳಿಸಿ, ‘ಹತ್ತಿರ ಒಂದು ಶಾಪಿಂಗ್ ಮಾಲ್ ಇದೆ. ಅದರಲ್ಲಿ ನಿಮಗೆ ಬೇಕಾದಂತಹ ಖಾರದ ಟರ್ಕಿಷ್ ಅಥವಾ ಲೆಬನಿಸ್ ಭೋಜನ ಸಿಗಬಹುದು’ ಎಂದ. ಹೋಟೆಲ್ ಸೇರಿ ಸ್ನಾನ ಮಾಡಿ ಪಕ್ಕದ ಶಾಪಿಂಗ್ ಮಾಲ್‌ನ ‘ಅನಾಟ್’ ಟರ್ಕಿಷ್ ರೆಸ್ಟುರಾ ಸೇರಿ ಡೋನರ್ ಲ್ಯಾಂಬ್ ಕಬಾಬ್‌ ತಿಂದೆ.

ಬೆಳಿಗ್ಗೆ ಎದ್ದಾಗ ಬೆಳಕು ಹರಿದಿತ್ತು. ಸ್ನಾನ ಮಾಡಿ ತಿಂಡಿಗೆ ಕೆಳಗಿಳಿದೆ. ಊಟಕ್ಕಿಂತ ಗಡದ್ದಾದ ತಿಂಡಿ ತಿನ್ನಲು ಮೈಭಾರ ಎನಿಸಲಾರಂಭಿಸಿತು. ಹೋಟೆಲ್‌ನಿಂದ ಹೊರಬಂದಾಗ ಕಂಡದ್ದು ನೆಲ್ಸನ್ ಮಂಡೇಲಾ ಸ್ಕ್ವೇರ್ ಎಂಬ ಫಲಕ. ಮೈಭಾರವೆಲ್ಲ ಹೋಗಿ ನನಗರಿವಿಲ್ಲದೆ ಆ ಫಲಕದತ್ತ ಓಡಿದೆ. ನೇರವಾಗಿ ನೆಲ್ಸನ್ ಮಂಡೇಲಾ ಸ್ಕ್ವೇರ್‌ನತ್ತ ಮುಂದುವರಿದಿದ್ದೆ. ಹಾಗೆ ನಡೆಯುತ್ತಾ ಮಂಡೇಲಾರ ಬೃಹತ್ ಮೂರ್ತಿಯ ಮುಂದೆ ನಿಂತಿದ್ದೆ. ಅದು ಆರು ಮೀಟರ್ ಎತ್ತರದ ಮಂಡೇಲಾರ ಕಂಚಿನ ಪ್ರತಿಮೆ. 

ಕ್ವಾಜುಲುನಟಲ್ ಪ್ರ್ಯಾಂತದ ತೆಂಬುರಾಜ ಮನೆತನದಲ್ಲಿ ಜನಿಸಿದ ಅವರ ನಿಜನಾಮ ಖೋಲಿಲಾಲಾ. ಇದನ್ನು ಖೋಲಿಲಾಲಾ ಅಥವಾ ಖ್ಚೋಲಿಲಾಲಾ ಎಂದು ಉಚ್ಚರಿಸಬೇಕು. ಇಲ್ಲಿನ ಜನ ‘ಕ’ ಅಕ್ಷರವನ್ನು ಬಾಯಿಯ ಮೇಲಂಗಳಕ್ಕೆ ನಿರ್ವಾತಗೊಳಿಸಿ ಅಂಟಿಸಿ ಜೋರಾಗಿ ಕೆಳಗೆಳೆದು ಟಕ್ ಎಂದಂತೆ ಸದ್ದು ಮಾಡಿ ಉಚ್ಚರಿಸುತ್ತಾರೆ. ನನಗೆ ಆಗ ‘ಗಾಡ್ಸ್‌ ಮಸ್ಟ್‌ ಬಿ ಕ್ರೇಜಿ’ ಎಂಬ ತಮಾಷೆಯ ಇಂಗ್ಲಿಷ್‌ ಚಲನಚಿತ್ರ ನೆನಪಾಯಿತು.

ಖೋಲಿಲಾಲಾ ಮಂಡೇಲಾ ಎಂಬ ಹೆಸರನ್ನು ಅವರ ಶಾಲಾ ಶಿಕ್ಷಕಿ ಅಕ್ಕರೆಯಿಂದ ‘ನೆಲ್ಸನ್’ ಎಂದು ಕರೆದರು. ಅವರ ಪೂರ್ತಿ ಹೆಸರು ನೆಲ್ಸನ್ ರೋಲಿಹ್ಲಾಹ್ಲಾ ಮಂಡೇಲಾ ಎಂದಾಗುತ್ತದೆ. ಆದರೆ, ಇಡೀ ಆಫ್ರಿಕಕ್ಕೆ ಅವರು ‘ಮದಿಬಾ’. ‘ಮದಿಬಾ’ ಎಂಬುದು ಅವರ ಮನೆತನದ ಗೌರವಯುತ ಪದವಿ. ಅದು ಕೊನೆ ಕೊನೆಗೆ ಮಂಡೇಲಾರನ್ನು ಗೌರವಯುತವಾಗಿ ಸಂಭೋದಿಸಲು ಉಪಯೋಗಿಸುವ ನಾಮಧೇಯವಾಗಿಬಿಟ್ಟಿತು. ನಮ್ಮ ದೇಶದಲ್ಲಿ ಮಹಾತ್ಮ ಎಂದಂತೆ ಅಲ್ಲವೆ? ಮಹಾತ್ಮ ಗಾಂಧಿ, ಮದಿಬಾ ಮಂಡೇಲಾ ಇಬ್ಬರೂ ತಮ್ಮ ದೇಶಗಳ ರಾಷ್ಟ್ರಪಿತರು.

ಬಿಳಿಯರ ಅಪಾರ್ಥೆಡ್ ಕಾನೂನು ಅಂದರೆ ಕಪ್ಪುವರ್ಣದವರನ್ನು ಎರಡನೆ ದರ್ಜೆಯ ನಾಗರಿಕರನ್ನಾಗಿ ಕಾಣುವ ವಿರುದ್ಧ ದಂಗೆ ಎದ್ದ ಕಾರಣ ಅವರನ್ನು ಆಂಗ್ಲರು ಬಂಧಿಸುತ್ತಾರೆ. ನ್ಯಾಯಾಧೀಶರು ಆಜೀವ ಕಾರಾಗೃಹವಾಸದ ಶಿಕ್ಷೆ ವಿಧಿಸುತ್ತಾರೆ. ಅವರನ್ನು ಕೇಪ್‌ಟೌನ್‌ ಹತ್ತಿರದ ರಾಬೆನ್ ದ್ವೀಪದಲ್ಲಿ 7* 8 ಅಡಿಯ ಕೋಣೆಯಲ್ಲಿ ಅತ್ಯಂತ ಕೆಳದರ್ಜೆಯ ಕೈದಿಯಾಗಿ ಇಡಲಾಗುತ್ತದೆ. ಕಾರಾಗೃಹ ಶಿಕ್ಷೆಯಲ್ಲಿ ಕಲ್ಲು ಒಡೆಯುವ ಕೆಲಸ ಕೊಡುತ್ತಾರೆ. ಬೆಳಿಗ್ಗೆಯೇ ಸೀಮೆಸುಣ್ಣದ ಕಲ್ಲುಗಳನ್ನು ಒಡೆಯುವಾಗ ಮಂಡೇಲಾರಿಗೆ ತಂಪು ಕನ್ನಡ ಕೊಡಲು ನಿರಾಕರಿಸುತ್ತಾರೆ. ಬೆಳಕಿನ ಪ್ರತಿಫಲನದಿಂದ ಅವರ ಕಣ್ಣುಗಳಿಗೆ ಹಾನಿಯುಂಟಾಗುತ್ತದೆ.

ಜೈಲಿನಲ್ಲಿದ್ದಾಗ ಅವರ ಹಿರಿಯ ಮಗ ರಸ್ತೆ ಅಪಘಾತದಲ್ಲಿ ತೀರಿಕೊಳ್ಳುತ್ತಾನೆ. ಅವರ ತಾಯಿಯೂ ಕೆಲದಿನಗಳಲ್ಲಿ ಕಾಯಿಲೆಯಿಂದ ವಿಧಿವಶರಾಗುತ್ತಾರೆ. ಮಂಡೇಲಾರಿಗೆ ಮಗ ಮತ್ತು ತಾಯಿಯ ಅಂತಿಮ ಸಂಸ್ಕಾರಗಳಿಗೂ ಅನುಮತಿ ದೊರೆಯುವುದಿಲ್ಲ. ನಂತರ ಮೂರು ಕಾರಾಗೃಹಗಳಲ್ಲಿ ಸುದೀರ್ಘ ಇಪ್ಪತ್ತೇಳು (1964 -1990) ವರ್ಷಗಳ ಶಿಕ್ಷೆ ಅನುಭವಿಸುತ್ತಾರೆ. ಕೊನೆಗೆ 1990ರಲ್ಲಿ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಆಂಗ್ಲರು ಮಂಡೇಲಾರನ್ನು ಬಿಡುಗಡೆಗೊಳಿಸುತ್ತಾರೆ. ಅವರಿಗೆ 1993ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ದೊರೆಯುತ್ತದೆ.

ಜೈಲಿನಿಂದ ಹೊರಬಂದ ಅವರು ತಮ್ಮ ಎರಡನೆಯ ಪತ್ನಿ ವಿನ್ನಿ ಮಂಡೇಲಾ ಅವರಿಗೆ ವಿಚ್ಛೇದನ ನೀಡಿ ಒಂಟಿಜೀವನ ಸಾಗಿಸುತ್ತಾರೆ. ಎಂಬತ್ತನೆ ವಯಸ್ಸಿನಲ್ಲಿ ಮೊಜಾಂಬಿಕ ದೇಶದ ರಾಷ್ಟ್ರಪತಿಯ ಪತ್ನಿ, ವಿಧವೆಯಾದ ಗ್ರಾಸಿ ಮೇ ಅವರನ್ನು ವಿವಾಹವಾಗುತ್ತಾರೆ. ಗ್ರಾಸಿ ಮೇ ಮಂಡೇಲಾರ ಕೊನೆಗಾಲದಲ್ಲಿ ಅವರ ಆರೈಕೆ ಮಾಡುತ್ತಾರೆ. ಕೊನೆಗೆ ಕ್ಯಾನ್ಸರ್ ತುತ್ತಾದ ಮಂಡೇಲಾ 2013ರ ಡಿಸೆಂಬರ್ 5ರಂದು ಜೋಹನ್ಸ್‌ಬರ್ಗ್‌ನಲ್ಲಿ ಕೊನೆಯುಸಿರೆಳೆಯುತ್ತಾರೆ.

ಜೋಹನ್ಸ್‌ಬರ್ಗ್‌ ಅಂಟೆ ಅಪಾರ್ಥೆಡ್ ಮ್ಯೂಸಿಯಂನಲ್ಲಿ ಬಿಳಿಯರ ದೌರ್ಜನ್ಯದ ಕಥೆಗಳ ಸಾಕ್ಷ್ಯಗಳು ಎಂತಹ ಕಲ್ಲು ಹೃದಯದವರನ್ನೂ ನಡುಗಿಸುತ್ತವೆ. ನನಗಂತೂ ಮ್ಯೂಸಿಯಂನಿಂದ ಆಚೆ ಬಂದು ಸುಮಾರು ಮೂರು ಗಂಟೆಗಳವರೆಗೂ ಸರಿಯಾಗಿ ಮಾತನಾಡಲಾಗಲಿಲ್ಲ.

‘ಎ ಲಾಂಗ್ ವಾಕ್ ಟು ಫ್ರೀಡಂ’ (ಸ್ವಾತಂತ್ರ್ಯಕ್ಕಾಗಿ ಸುದೀರ್ಘ ನಡಿಗೆ) ಎಂಬ ಪುಸ್ತಕದಲ್ಲಿ ಮಂಡೇಲಾರು ತಮ್ಮ ಹೋರಾಟದ ಪರಿಯನ್ನು ಬರೆಯುತ್ತಾರೆ. ಆ ಪುಸ್ತಕ ಅವರ ಜೀವನಚರಿತ್ರೆಯಾಗಿದ್ದು, ಚಲನಚಿತ್ರವೂ ಆಗಿದೆ. ಅವರು ದಕ್ಷಿಣ ಆಫ್ರಿಕಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವತಂತ್ರ ದಕ್ಷಿಣ ಆಫ್ರಿಕದ ಸಾರ್ವತ್ರಿಕ ಚುನಾವಣೆಯಲ್ಲಿ ಕಪ್ಪುಜನರೂ ಮೊದಲ ಬಾರಿಗೆ ಮತ ಚಲಾಯಸುವಂತಾಗುತ್ತದೆ. ಅವರೇ ದಕ್ಷಿಣ ಆಫ್ರಿಕದ ಮೊದಲ ಕಪ್ಪು ಜನಾಂಗ ಪ್ರತಿನಿಧಿಸುವ ರಾಷ್ಟ್ರಪತಿಯಾಗುತ್ತಾರೆ.

ದಕ್ಷಿಣ ಆಫ್ರಿಕ 1910ರ ಮೇ 31ರಂದು ಸ್ವತಂತ್ರವಾದರೂ ಅಪಾರ್ಥೆಡ್ ಕೊನೆಯಾದ 1994ರ ಏಪ್ರಿಲ್ 27ರಂದು ನಡೆದ ಸಾರ್ವತ್ರಿಕ ಚುನಾವಣೆಯ ದಿನವನ್ನು ಸ್ವಾತಂತ್ರ್ಯ ದಿನವೆಂದು ಆಚರಿಸಲಾಗುತ್ತದೆ. ಇದೇ ದಿನದ ದಶಮಾನೋತ್ಸವದ ನೆನಪಿಗಾಗಿ ಸ್ಯಾಂಡ್ಟನ್ ಸ್ಕ್ವೇರ್‌ನಲ್ಲಿ ಇಬ್ಬರು ಶಿಲ್ಪಿಗಳು ಸತತ ಎರಡು ವರ್ಷಗಳ ಕಾಲ ಮಂಡೇಲಾರ ಮೂರ್ತಿ ನಿರ್ಮಿಸುತ್ತಾರೆ.

ಎರಡೂವರೆ ಟನ್ ತೂಕ, ಆರು ಮೀಟರ್ ಎತ್ತರದ ಮದಿಬಾರ ಪ್ರಸನ್ನವದನದ ಮೂರ್ತಿ ಅವರ ನೆಚ್ಚಿನ ದೊಗಲೆ ಅಂಗಿಧಾರಿಯಲ್ಲೆ ನಿರ್ಮಿಸಲಾಗಿದೆ. ಆಪ್ತಮಿತ್ರ ಇಂಡೋನೇಷ್ಯಾದ ನಾಯಕ ಸುಹಾರ್ತೋ ಅವರು ಧರಿಸುತ್ತಿದ್ದ ಅಂಗಿಗಳನ್ನು ತಮ್ಮ ಕೊನೆಗಾಲದವರೆಗೂ ಧರಿಸಿದರು. ಸೂಟುಗಳನ್ನು ತ್ಯಜಿಸಿ ಆಡಂಬರದ ಬಟ್ಟೆ ಬಿಟ್ಟು ಸಾದಾ ಬಟ್ಟೆ ಧರಿಸಲಾರಂಭಿಸಿದ್ದರು. ಅದೇ ತರಹದ ದೊಗಲೆ ಇಜಾರು, ಸಾಮಾನ್ಯವಾದ ತೊಗಲಿನ ಬೂಟುಗಳನ್ನು ಧರಿಸಿದ ಮಂಡೇಲಾರ ಹಸನ್ಮುಖಿ ಮೂರ್ತಿ ಆಫ್ರಿಕದ ಬುಡಕಟ್ಟು ನೃತ್ಯ ಭಂಗಿಯಲ್ಲಿದ್ದಂತಿದೆ.

ಮೂರ್ತಿಯ ಹಿಂದೆ ಫಲಕದಲ್ಲಿ ‘ಅಂಧ ವ್ಯಕ್ತಿಗಳಿಗೆ’ ಎಂದು ಬರೆಯಲಾಗಿದ್ದು, ಮೂರ್ತಿಯ ಕಾಲುಗಳ ಹತ್ತಿರ ಬ್ರೈಲ್ ಲಿಪಿಯ ಬರಹಗಳೂ ಇವೆ. ದೃಷ್ಟಿ ಇಲ್ಲದವರು ಅಕ್ಕರೆಯಿಂದ ಮದಿಬಾರ ಮುಖದ ಮೇಲೆ ಕೈಯಾಡಿಸಿದಾಗ ಅವರ ಮುಖ ಬೆಳ್ಳಿಯಂತೆ ಹೊಳೆಯುತ್ತಿತ್ತು. ನಾನೂ ಮದಿಬಾರ ಮುಖದ ಮೇಲೆ ಕೈಯಾಡಿಸಿ ರೋಮಾಂಚಿತನಾದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು